top of page

ದುಷಂಪನ ಕೀಟಲೆಯಿಂದ ಕಾನ್ಸೆಪ್ಚುವಲ್ ಆರ್ಟ್‌ನ ಉಗಮ

  • Writer: sushrutha d
    sushrutha d
  • Jun 25, 2021
  • 2 min read

Updated: Feb 9, 2025

ಕಲೆಗೊಂದು ಭೂಮಿಕೆ - 3 : ಮಾರ್ಸೆಲ್ ದುಷಂಪ್ ಎಂಬ ಒಬ್ಬ ಧೀರ ಮನುಷ್ಯ ಒಂದು ಮೂತ್ರಿ (urinary commode) ಮೇಲೆ R.Mutt ಎಂದು ಸಹಿ ಬರೆದು ಒಂದು ಕಲಾಪ್ರದರ್ಶನದಲ್ಲಿ ತನ್ನ ಕಲಾಕೃತಿಯೆಂದು ಇಟ್ಟ. ಹೆಸರು, 'ಫೌಂಟೇನ್'. ಇದರಿಂದ ಕಲಾಪ್ರಪಂಚದಲ್ಲಿ ದೊಡ್ಡ ಮಟ್ಟಿನ ತಾರ್ಕಿಕ ಯುದ್ಧ ಶುರುವಾಯಿತು. "ಇದೂ ಕಲೆಯೇ?" ಎಂಬ ನಿಮ್ಮ ತಲೆಯಲ್ಲೂ ಮೂಡಿದ ಪ್ರಶ್ನೆಯೇ ಈ ಯುದ್ಧಕ್ಕೆ ಕಾರಣ. ಬಹಳಷ್ಟು ವಾದವಿವಾದಗಳು ನಡೆಯಿತು. ಹೊಸ ದಾರಿಗಳಿಗೆ ನಾಂದಿಯೂ ಆಯಿತು.

ಹಲವು ಆಯಾಮಗಳಲ್ಲಿ ಈ ಕೃತಿಯ ಪ್ರಾಮುಖ್ಯತೆಯನ್ನು ಗಮನಿಸಬಹುದು. ಮುಂದಿನಬಾರಿ ಮೂತ್ರ ಮಾಡುವಾಗ ಫೌಂಟೇನ್ ಹೆಸರು ಯಾಕಿರಬಹುದೆಂದು ಯೋಚಿಸಿದರೆ, ಅವನ ಬುದ್ಧಿವಂತಿಕೆಯ ಅರಿವಾಗಬಹುದು. ನಗು ಬಂದು ಮೆಚ್ಚಲೂಬಹುದು.

ಮೊದಲನೆಯದಾಗಿ, ಈ ಸಹಿ ಹಾಕಿದ್ದು ಯಾಕಿರಬಹುದೆಂದು ನನ್ನನ್ನು ಬಹಳಷ್ಟು ಕಾಡಿದೆ. ಕೊನೆಗೆ ಕಂಡುಕೊಂಡ ಉತ್ತರ, ಅದು ಕಲಾಭ್ಯಾಸವನ್ನು ಕುರಿತಾದದ್ದು. ಎಲ್ಲರೂ ತಮ್ಮ ತಮ್ಮ ಚಿತ್ರಗಳಿಗೆ ಸಹಿ ಹಾಕುವಂತೆಯೇ ಈತನೂ ಹಾಕಿದ್ದು. ಚಿತ್ರ ಮಾಡಿದಾತ ಸಹಿ ಹಾಕುವುದು ಕ್ರಮ. ಆದರೆ, ಈತ ಯಾವದೋ ಒಂದು ಹೆಸರಿನ ಸಹಿ ಹಾಕಿ, ತಾನು ಮಾಡಿದ್ದಲ್ಲವೆಂದು ಬಹಿರಂಗವಾಗಿಯೇ ಒಪ್ಪಿಕೊಂಡ. ಆ ಹೆಸರಿನಾತ ರಚಿಸಿದ ಕಮೋಡ್ ಇದೆಂದು ಈತನೇ ಸೂಚಿಸಿಬಿಟ್ಟ. ಸತ್ಯವೋ ಸುಳ್ಳೋ ಇಲ್ಲಿ ಅಮುಖ್ಯ. ಕದ್ದು ತಂದನೋ, ಹೊತ್ತು ತಂದನೋ, ಕೊಂಡು ತಂದನೋ ಗೊತ್ತಿಲ್ಲ. ಈತ ಹಾಕಿದ್ದು ಸಹಿ ಮಾತ್ರ. ಆದರೂ, ಅದು ಇವನ ಕಲಾಕೃತಿ!

ಎರಡನೇ ಮಹಾಯುದ್ಧದ ಬಳಿಕ ನಕಲಿ ಪ್ರತಿಗಳನ್ನು ರಚಿಸಿ ಮಾರಿದಂತೆಯೇ ಇದು? ಹೆಸರುಳ್ಳ ಕಲಾವಿದರ ಕಲಾಕೃತಿ ಎಂದಾಗಲು ಅವರ ಸಹಿ ಹಾಕಿ ತನ್ನ ಕೃತಿಯನ್ನು ಮಾರಿದಂತೆಯೇ? ಅಥವಾ ಆ ತರದ್ದನ್ನೆಲ್ಲ ಬರಿಯ ಒಂದು ಸಹಿಯಲ್ಲಿ ಧ್ವನಿಸಿದನೇ? R. Mutt ಎಂಬುದು ಯಾವ ಶ್ರೇಷ್ಠ ಕಲಾವಿದನ ಹೆಸರೂ ಅಲ್ಲವೆಂದ ಮೇಲೆ ಈತ ಮೋಸ ಮಾಡಲು ಹೊರಟದ್ದಲ್ಲವೆಂಬುದು ಸ್ಪಷ್ಟ. ಈ ಕೃತಿಯ ಮುಖಾಂತರ "ಒಂದು ವಸ್ತುವನ್ನು ಕಲಾಗ್ಯಾಲರಿಯಲ್ಲಿಟ್ಟ ಮಾತ್ರಕ್ಕೆ ಅದು ಕಲೆಯೇ?" ಎಂದು ಪ್ರಶ್ನೆ ಕೇಳಿದನೋ ಅಥವಾ "ಇದೂ ಕೂಡ ಕಲೆಯೇ ಆಗಬಲ್ಲದು" ಎಂದು ಸೂಚಿಸಹೊರಟನೋ?

ಆತ ಮಾಡಿದ್ದೇನೂ ಇರಬಹುದು. ಎರಡೂ ಕಡೆಯಿಂದ ಒಳ್ಳೆಯ ವಾದವಿವಾದಗಳು ನಡೆದಿವೆ. ಕೆಲವರು ಆತ ಕಲೆಯನ್ನು ಹಂಗಿಸಿದ್ದೆಂದು ಹೇಳುತ್ತಾರೆ. ಈ ಹಂಗಿಸಿದುದನ್ನೇ ಒಂದು ಶ್ರೇಷ್ಠ ಕಲೆಯನ್ನಾಗಿ ಪರಿಗಣಿಸಿ, ಕಲೆಯನ್ನೆಲ್ಲ ಹಾಳು ಮಾಡಿದರು ಎನ್ನುವುದು ಅಂತಹ ಒಂದಷ್ಟು ಜನರ ಅಳಲು.

ನನಗಂತೂ ಹಾಗನ್ನಿಸುವುದಿಲ್ಲ. ಆತನ ಇತರ ಕೃತಿಗಳೂ, ಆತನ ಜೀವನಶೈಲಿಯೂ ಆತನು ಕಲೆಯ ಬಗ್ಗೆ ಬಹಳ ಸೀರಿಯಸ್ಸಾಗಿದ್ದುದನ್ನು ತೋರಿಸುತ್ತವೆ. ಒಂದು ರಿವೊಲ್ಯೂಷನ್ ಎಂದಮೇಲೆ ಅಂತಹ ಮಾತುಗಳನ್ನೆಲ್ಲ ಕೇಳಲೇಬೇಕಾಗುತ್ತದೆ. ಆತ ನಿಜವಾಗಿಯೂ ಎಷ್ಟೆಲ್ಲ ಯೋಚಿಸಿ ಈ ಕೃತಿ ಮಾಡಿದ್ದನೋ ಏನೋ! ಅದರಿಂದುಟಾದ ಚರ್ಚೆಗಳಿಂದ ಹಲವು ವಿಷಯಗಳ ಮೇಲೆ ಬೆಳಕು ಬಿದ್ದುದಂತೂ ಸತ್ಯ. ಹೇಗೂ, ಕೊನೆಗೆ ಸಾರ್ವತ್ರಿಕವಾಗಿ ಅದು ಕಲೆಯೇ ಎಂದು ಪ್ರಮುಖರೆಲ್ಲರೂ ಒಪ್ಪಿಕೊಳ್ಳುವಂತಾಯಿತು.

ಮುಖ್ಯವಾಗಿ, ಜಾಗವು ಹೇಗೆ ಒಂದು ಕೃತಿಯ ಅರ್ಥವನ್ನು ಬದಲಿಸಬಲ್ಲದು ಎಂಬುದನ್ನು ತೋರಿಸಿಕೊಟ್ಟದ್ದಂತೂ ಈತನ ಈ ಕೃತಿ. ಮೂತ್ರ ಮಾಡುವ ಕಮೋಡನ್ನು ಗ್ಯಾಲರಿಯಲ್ಲಿಟ್ಟಾಗ ಅದನ್ನು ಯಾರೂ ಮೂತ್ರ ಮಾಡಲು ಬಳಸಲೇ ಇಲ್ಲ! ಆತ ಬದಲಿಸಿದ್ದು ಜಾಗ ಮಾತ್ರ. ಅದೇ ವಸ್ತು, ಜಾಗದ ದೆಸೆಯಿಂದ ಬೇರೆ ಅರ್ಥ ಪಡೆದುಕೊಂಡಿತು. ಈ ತತ್ವದ ಆಧಾರದಲ್ಲಿ ನಡೆದ ಹುಡುಕಾಟವೇ ಇನ್ಸ್ಟಾಲೇಷನ್ ಅಥವಾ ಪ್ರತಿಷ್ಠಾಪನ ಕಲೆ‌. ಇದು ಹುಟ್ಟಿಸಿದ ಗೊಂದಲಗಳು ಅಷ್ಟಿಷ್ಟಲ್ಲ.

ಈ ಮೊದಲಿನ, ಹೆಚ್ಚಿನ ಎಲ್ಲ ಕೃತಿಗಳೂ ಭಾವನಾತ್ಮಕ ನೆಲೆಯವು. ಆದರೆ, ಇಲ್ಲಿರುವುದು ಬರಿಯ ಯೋಚನೆಯೆನ್ನುವುದನ್ನು ಗಮನಿಸಬೇಕು. ಪ್ರತಿಯೊಂದು 'ಇಸಂ'ಗಳ ಮೂಲದಲ್ಲಿರುವುದು ಯೋಚನೆ ಮತ್ತು ಆ ಯೋಚನೆಗಳಿಂದ ಉಂಟಾದ ತತ್ವ, ಅದರ ಆಧಾರದಲ್ಲಿ, ಕಲಾರಚನೆ. ಆದರೂ, ಅಲ್ಲೆಲ್ಲಾ ಕೃತಿರಚನೆಯ ಡ್ರೈವಿಂಗ್ ಫೋರ್ಸ್ ಭಾವನೆಗಳೇ. ಪಿಕಾಸೋವಿನ ಆರೂ ಬದಿಯನ್ನು ಒಮ್ಮೆಗೇ ಕಾಣುವಂತೆ ಮಾಡಬೇಕೆನ್ನುವುದು ಯೋಚನೆಯೇ ಆಗಿದ್ದರೂ, ಅದು ಒಂದು ಕೃತಿಗೆ ಸಂಬಂಧಪಟ್ಟದ್ದಲ್ಲ. ಆತನ ಚಿತ್ರಗಳು ಭಾವನಾತ್ಮಕವಾದುವೇ ಆಗಿದೆ.

ಮಾರ್ಸೆಲ್ ದುಷಂಪೇ ಹೇಳುವಂತೆ, ಆತ 'ರೆಡಿಮೇಡ್ ಆಬ್ಜೆಕ್ಟ್' ಅನ್ನು ಕಲೆಯಾಗಿ ಪರಿವರ್ತಿಸಿದ್ದು. ಯಾರೂ ಊಹಿಸಿಯೂ ಇರದ ಸಾಧ್ಯತೆಯೊಂದನ್ನು ಈತ ಕಲಾಪ್ರಪಂಚಕ್ಕೆ ಕೊಟ್ಟ. ರೆಡಿಮೇಡ್ ಆಬ್ಜೆಕ್ಟ್ಸ್! ಕಲಾಪ್ರಪಂಚದ ವಿಸ್ತಾರಕ್ಕೆ ಅವಕಾಶ ಸಿಕ್ಕಿತು. ಇದೇ ಕಾನ್ಸೆಪ್ಚುವಲ್ ಆರ್ಟ್‌ನ ಉಗಮ. ಭಾವನೆಗಳ ಬದಲಿಗೆ ಯೋಚನೆಗಳು ಶುರುವಾದವು.

ಈ ಸಮಯಕ್ಕಾದಾಗಲೇ ವಿಜ್ಞಾನವೂ ಮುಂದುವರಿದಿತ್ತು. ಯೋಚನಾಪ್ರವೃತ್ತಿ ಬೆಳೆದಿತ್ತು. ಅತ್ತ ಅನಾಲಿಟಿಕ್ ಫಿಲಾಸಫಿ, ಲಾಜಿಕ್‌ನ ಆಧಾರದ ಮೇಲೆಯೇ ಎಲ್ಲವ ವಿವರಿಸಹೊರಟಿತ್ತು. ಬರ್ಟ್ರಾಂಡ್ ರಸಲ್, ಲುಡ್ವಿಗ್ ವಿಟ್ಗೆಂನ್‌ಸ್ಟೈನ್‌ರಂತಹ ಪ್ರಮುಖರು. ಮಹಾಯುದ್ಧದ ಪರಿಣಾಮ. ರೆಬೆಲಿಸಂ ಪ್ರವೃತ್ತಿ. ಇವೆಲ್ಲವೂ ಈ ಕೃತಿಗೆ ಪೂರಕವಾದ ಅಂಶವೇ. ಇದೇ ಪ್ರವೃತ್ತಿಯಲ್ಲಿ 'ದಾದಾಯಿಸಂ' ಶುರುವಾಗುತ್ತದೆ.

ಮಾಡರ್ನಿಸಮ್‌ ಅನ್ನು ಪೂರ್ಣವಾಗಿ ಗಮನಿಸಿದರೆ, ಕಲೆಯಲ್ಲಿ ಏನೇನು ಸಾಧ್ಯ ಎನ್ನುವುದರ ಕುರಿತು ಹುಡುಕಾಟ ನಡೆಯಿತೆನ್ನಬಹುದು. ಹಲವಾರು ತತ್ವಗಳ ಮುಖಾಂತರ ಸೌಂದರ್ಯದ ವ್ಯಾಖ್ಯೆಗಳನ್ನು ರಚಿಸಿದ್ದಾಯಿತು.


'ದಾದಾಯಿಸಂ' ಆ ನಂಬಿಕೆಗಳೆಲ್ಲವನ್ನೂ ತಲೆಕೆಳಗು ಮಾಡಿಹಾಕುತ್ತವೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಹುಟ್ಟುಹಾಕುತ್ತದೆ. ವ್ಯಂಗ್ಯ, ಕುಹಕಗಳೊಂದಿಗೆ ಲಾಜಿಕ್ ಸೇರಿಕೊಂಡು ಮಾಡಿದ ದಾಳಿಗೆ ಮಾಡರ್ನಿಸಮ್ ಹೆಚ್ಚುಕಡಿಮೆ ತತ್ತರಿಸಿತೆನ್ನಬೇಕು. ಹೊಸ ಉತ್ತರಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಉಂಟಾಗುತ್ತದೆ. ಅದಕ್ಕಾಗಿಯೇ ಹುಟ್ಟಿದ ಹೊಸ ಅವತಾರ ಪೋಸ್ಟ್‌ಮಾಡರ್ನಿಸಮ್. ಇದರ ಮೂಲಭೂತ ಧೋರಣೆಗಳು ಈ ದುಷಂಪನ ಕೀಟಲೆಯಿಂದಲೇ ಹುಟ್ಟಿಕೊಂಡುದೇನೋ!

bottom of page