top of page

ಡಿಕನ್‌ಸ್ಟ್ರಕ್ಷನಿಸಂ ಎಂದರೆ..? ಮತ್ತು ಕೆಲವು ಪೋಸ್ಟ್‌ಮಾಡರ್ನ್ ವಿಚಾರಗಳು

  • Writer: sushrutha d
    sushrutha d
  • Jul 1, 2021
  • 3 min read

Updated: Jun 10, 2025

ಕಲೆಗೊಂದು ಭೂಮಿಕೆ 7 : ಭಾಷೆ ಹುಟ್ಟಿಕೊಂಡದ್ದೇ ಸಂವಹನಕ್ಕಾಗಿ. ಒಬ್ಬರ ವಿಚಾರ ಇನ್ನೊಬ್ಬರಿಗೆ ಹೇಳಲು, ತಿಳಿಸಲು. ಆದರದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆಯಿಂದ ಮೊದಲ್ಗೂಡಿ, ಲುಡ್ವಿಗ್ ವಿಟ್ಗೆನ್‌ಸ್ಟೈನನು ಭಾಷೆಯ ಮುಖಾಂತರ ಸಂವಹನ ನಾವೆಣಿಸಿದಂತೆಯೇ ಆಗದು ಎಂಬುದನ್ನು ಸಾಬೀತುಪಡಿಸುತ್ತಾನೆ. ವ್ಯಕ್ತಿಗಿಂತ ವ್ಯಕ್ತಿಗಾಗುವ ಭಿನ್ನ ಅನುಭವಗಳ ನೆಲೆಯಲ್ಲಿ ಅವನ ತತ್ವವನ್ನು ಮಂಡಿಸುತ್ತಾನೆ.

ನಮ್ಮ ಭಾರತೀಯ ಆದರ್ಶ ತತ್ವದ ಪ್ರಕಾರ ರಸಾನುಭವ, ಒಂದು ಭಾವವನ್ನು ತಾನು ಅನುಭವಿಸಿ ಇನ್ನೊಬ್ಬನಲ್ಲಿ ಅನುಭಾವವನ್ನಾಗಿಸುವ ಪ್ರಕ್ರಿಯೆ. ಇದು ಎಷ್ಟರ ಮಟ್ಟಿಗೆ ಸಾಧ್ಯ? ಆದರ್ಶವಾಗಿ ಸರಿ, ಉನ್ನತವಾದದ್ದು. ನಮಗೆ ಈ ಆದರ್ಶಗಳನ್ನು ಪಾಲಿಸಲಾಗುತ್ತದೆಯೇ ಎಂಬುದು ಪ್ರಶ್ನೆ. ಸಾಧಿಸಬೇಕೆಂಬುದು ಆದರ್ಶ. ಸಾಧಿಸಲಾಗದ್ದು ಮಿತಿ, ಅರಿವು.

ಒಂದೈವತ್ತು ವರ್ಷ ಮೇಲ್ಪಟ್ಟವರಿಗಾದರೂ ಒಂದು ಸಂತೃಪ್ತ ಜೀವನ ನಡೆಸಲು ಸಾಧ್ಯವಿರಬಹುದು. ಇನ್ನೇನು ಸನ್ಯಾಸತ್ವದ ಹಂತದಲ್ಲಿರುವವರು, ಸರಿಯಾಗಿ ಬಾಳಿದ್ದರೆ. ಆದರೆ ನಮಗೆ? ತನ್ನ ಆಸೆ, ಆಕಾಂಕ್ಷೆ, ಕುತೂಹಲಗಳನ್ನೆಲ್ಲ ತೊರೆದ ನಂತರ ಕಲಾರಚನೆಯಲ್ಲಿ ತೊಡಗುವುದೆಂದು ಕಾಯುತ್ತಾ ಕೂತವನಿಗೆ ಅದೂ ಆಸೆಯಾಗಿಯೇ ಉಳಿದೀತು ಎನಿಸುತ್ತದೆ. ಅಂದರೆ, ನಮ್ಮ ಮಿತಿಯಲ್ಲಿಯೇ ನಾವು ಕಲಾರಚನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು. ಆಯಾ ಕೃತಿಗೂ ಮಿತಿಯಿದ್ದೇ ಇರುತ್ತದೆ. ಸಹೃದಯರಿಗೂ ಅವರದ್ದೇ ಆದ ಅನುಭವಗಳಿಂದ ಕೂಡಿದ ಮಿತಿಯಿರುತ್ತದೆ.

ಹಾಗಾಗಿ ಭಾಷೆಯ ಬದಲಿಗೆ ಕೃತಿಗಳನ್ನು ವಿಟ್ಗೆನ್‌ಸ್ಟೈನನ ಫಿಲಾಸಫಿಯಲ್ಲಿಟ್ಟರೂ ಸರಿಯಾಗಿಯೇ ಹೊಂದುತ್ತದೆ. ಒಂದು ಕೃತಿಯು ಅದದೇ ಭಾವವನ್ನು, ಚಿಂತನೆಯನ್ನು ನೋಡುಗನಲ್ಲೂ ಸ್ಫುರಿಸುವುದೆಂದು ಹೇಳಲು ಸಾಧ್ಯವಿಲ್ಲ. ಎಲ್ಲವೂ ಅವರವರ ಮಿತಿಯ ವ್ಯಾಪಕತೆಗೆ ಸಿಕ್ಕಷ್ಟು. ಇದೇ ಆಧಾರದ ಮೇಲೆ ಡೆರಿಡಾನ ಡಿಕನ್‌ಸ್ಟ್ರಕ್ಷನ್ ಫಿಲಾಸಫಿ ಇರುವುದು. ಇಡೀ ಪೋಸ್ಟ್‌ಮಾಡರ್ನಿಸಮ್ ನಿಂತಿರುವುದು ಅದರ ತಳಹದಿಯಲ್ಲೇ.

ನಾನಿನ್ನೂ ಡೆರಿಡಾನ ಕೃತಿಯನ್ನು ಓದಿಲ್ಲವಾದ ಕಾರಣ ಹೆಚ್ಚು ವಿವರಿಸಲಾರೆ. ಓದಿದ್ದರೂ, ನಾನು ನನಗೆ ಬೇಕಾದಂತೆ ಅರ್ಥ ಮಾಡಿಕೊಳ್ಳುತ್ತೇನೆಂದು ಆತನೇ ಹೇಳಿ ಆಗಿದೆ. ಹಾಗಾಗಿ, ನಾ ಕೇಳಿದ ಒಂದೆರಡು ವಾಕ್ಯಗಳನ್ನು ವಿಸ್ತರಿಸಿ, ನನ್ನದೇ ಮಿತಿಯಲ್ಲಿ ಹೇಳುತ್ತೇನೆ, ನಿಮ್ಮ ಮಿತಿಗನುಗುಣವಾಗಿ ವಿಸ್ತರಿಸಿಕೊಳ್ಳಿ.

ನನಗನ್ನಿಸುವ ಮಟ್ಟಿಗೆ, ನಮ್ಮ ಯೋಚನೆ ನಡೆಯುವುದೇ ಈ ರೀತಿಯಲ್ಲಿ. ವಿಶ್ವದ ಹಲವು ಮಜಲುಗಳನ್ನು ನೋಡುತ್ತಾ ಅದರ ನಡುವಿನ ಸಂಬಂಧ ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೆ. ಎಂದೋ ನೋಡಿದ್ದಕ್ಕೂ, ಇಂದು ಕೇಳಿದ್ದಕ್ಕೂ ಸಂಬಂಧ ಬೆಸೆದು ಅರ್ಥೈಸಹೊರಡುತ್ತೇವೆ. ಅಂದರೆ, ವಿಶ್ವವನ್ನು ಪೂರ್ಣವಾಗಿ ಕಾಣಲು ಸಾಧ್ಯವಿಲ್ಲದಿರುವುದರಿಂದ, ಅದರ ತುಣುಕುಗಳನ್ನು ಕಂಡು, ಅವನ್ನೆಲ್ಲ ನಮಗೆ ಬೇಕಾದಂತೆ ಕೂಡಿಸಿ, ಪೂರ್ಣತೆಯನ್ನು ಅರಿಯುವ ಪ್ರಯತ್ನ ಮಾಡುತ್ತೇವೆ.

ಇದನ್ನೇ ಒಂದು ಕೃತಿಗೂ ಅನ್ವಯಿಸಬಹುದು. ಒಂದು ವಿಷಯವನ್ನು ಹಲವು ತುಣುಕುಗಳ ಹಿನ್ನೆಲೆಯಲ್ಲಿ ನೋಡಿ, ಅರ್ಥೈಸಿಕೊಳ್ಳುವ ರೀತಿಯನ್ನು ಇವುಗಳು ಬಿಚ್ಚಿಡುತ್ತವೆ. ಉದಾಹರಣೆಗೆ ಇದೇ ಬರಹವನ್ನು ತೆಗೆದುಕೊಂಡರೆ, ಇದು ಎಲ್ಲಿಂದಲೋ ಎತ್ತಿ ಇತ್ಲಾಗಿ ಬಿಸಾಡುತ್ತಿರುವ ಬಗೆಯದಲ್ಲ. ಒಮ್ಮೆಗೇ ಕೂತು ಎಲ್ಲೆಲ್ಲಿಂದಲೋ ಕಲೆಹಾಕಿದ ಮಾಹಿತಿಗಳ ರಾಶಿಯೂ ಅಲ್ಲ. ಕೇಳಿದ್ದು, ನೋಡಿದ್ದು, ಯೋಚಿಸಿದ್ದು, ಹೊಳೆದದ್ದು ಮತ್ತಿನ್ನೇನೇನೆಲ್ಲವನ್ನೂ ನನಗೆ ಸರಿಯೆನ್ನಿಸಿದ ರೀತಿಯಲ್ಲಿ ವ್ಯವಸ್ಥಿತವಾಗಿ ಜೋಡಿಸಿದಾಗ ಉಂಟಾದ್ದಿದು. ಇನ್ನೀಗ ಮೂಲ ಹುಡುಕುತ್ತೇನೆಂದರೆ ನಿಮಗೆ ಬಿಡಿ ನನಗೇ ಸಾಧ್ಯವಿಲ್ಲ. ಅಷ್ಟೆಲ್ಲ ಯಾಕಪ್ಪ! ಮೇಲಿಂದ ಮೇಲೆ ಓದಿ ಅರ್ಥವಾದಷ್ಟು ಸಾಕೆಂದುಕೊಳ್ಳುವುದು ಒಂದು ಬಗೆ. ಸಮಸ್ಯೆ ಇಲ್ಲ. ಸಾಮಾನ್ಯ ಜೀವನದಲ್ಲಿ ಇಷ್ಟು ಸಾಕು. ಇನ್ನೂ ಆಳಕ್ಕಿಳಿಯಬೇಕೆಂದಾದಾಗ ಇರುವುದು ಸಮಸ್ಯೆ!


'ಹೇಗೆ ಓದಿದರೆ ಇದನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ?' ಎಂಬುದಕ್ಕೆ ಡಿಕನ್‌ಸ್ಟ್ರಕ್ಷನ್ ಇತ್ತೀಚಿನ ದಿನಗಳಲ್ಲಿ ಮುಂಚೂಣಿಗೆ ಬಂದ ಉತ್ತರ. ಅದರ ಪ್ರಕಾರ, ಈ ಒಂದು ಬರಹವನ್ನು ಎಷ್ಟು ವಿಧವಾಗಿ ಕತ್ತರಿಸಲು ಸಾಧ್ಯವೋ, ಅಷ್ಟೂ ರೀತಿಯಲ್ಲಿ ಕತ್ತರಿಸಿ, ಮತ್ತೊಂದರ ಹಂಗಿಲ್ಲದಂತೆ ಅರ್ಥೈಸಿಕೊಳ್ಳಹೊರಟರೆ, ಒಟ್ಟಾಗಿ ಈ ಬರಹ ಅರ್ಥವಾಗುತ್ತದೆ ಎಂದು! ಅರ್ಥವಾಯಿತೆಂದುಕೊಳ್ಳುವ?

ಸುಲಭವಾಗಿ ಇನ್ನೊಂದು ಉದಾಹರಣೆ. ಒಂದು ದೇಶವನ್ನು ಒಟ್ಟಾಗಿ ನೋಡದೆ, ಪ್ರಾದೇಶಿಕವಾಗಿ ವಿಭಜಿಸಿ, ಪ್ರತಿಯೊಂದು ರಾಜ್ಯವನ್ನೂ ಇನ್ನೊಂದರ ಹಂಗಿಲ್ಲದಂತೆ ಅರಿತುಕೊಂಡರೆ, ಅದನ್ನು ಒಟ್ಟುಮಾಡಿದಾಗ ದೇಶ ಅರ್ಥವಾಗುತ್ತದೆ ಎನ್ನುವುದು.


ಒಟ್ಟಿನಲ್ಲಿ ಏನನ್ನೇ ಅರ್ಥ ಮಾಡಿಕೊಳ್ಳಬೇಕೆಂದರೂ ಮೊದ್ಲು ಅದನ್ನು ಮುರಿಯಬೇಕು ಎಂದು ಎಲ್ರೂ ಅರ್ಥ ಮಾಡಿಕೊಂಡ್ರು. ನಮ್ಮ ದೇಶದಲ್ಲಿ ಹೆಚ್ಚಾಗಿರುವ ಪ್ರಾದೇಶಿಕ ವಾದಗಳಿಗೆ, ಭಾಷಾ ಜಗಳಗಳಿಗೆ, ಜಾತಿವಾರು ಸಂಘಟನೆಗಳಿಗೆ, ಹೆಚ್ಚುತ್ತಿರುವ ಇಂಡಿವಿಜುವಲಿಸಂಗೆ, ಎಲ್ಲವಕ್ಕೂ ಈ ಡಿಕನ್‌ಸ್ಟ್ರಕ್ಷನ್ ವಾದ ಸುಮಾರು ಅರವತ್ತು ವರ್ಷದ ಹಿಂದೆಯೇ ಅಡಿಪಾಯ ಹಾಕಿದೆ. ಅಂದರೆ, ಡೆರ್ರಿಡನಿಗೆ ಅಂದೇ ಸಮಾಜ ಈ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಅನಿಸಿದ್ದರ ಪ್ರಭಾವ ಇದೆಲ್ಲ. ಅದು ಅಂದಿಗೆ ಸರಿಯಾಗಿದ್ದುದರಿಂದ ಪ್ರಚಲಿತಗೊಂಡಿತು. ಅಂದಿನ ಕಲೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿತು ಅಥವಾ ಈ ಯೋಚನೆಗಳನ್ನೆಲ್ಲಾ ಪ್ರಭಾವಿಸಿದ್ದೀತು.


ಒಂದು ಉದಾಹರಣೆ ಹೇಳುವುದಿದ್ದರೆ, ಯಾವನೋ ಒಬ್ಬ (ಹೆಸರು ಮರೆತಿದೆ) ಒಂದು 'ಕಾರ್' ಅನ್ನು ಪ್ರದರ್ಶಿಸುತ್ತಾನೆ. ಆದ್ರೆ, ಆತ ಕಾರ್ ಎಂದುದು ಕಾರಿಗೇ ಅಲ್ಲ. ಕಾರ್ ಮಾಡಲು ಬಳಸುವ ಎಲ್ಲಾ ವಸ್ತುಗಳನ್ನು ಅವುಗಳ ತೂಕಕ್ಕೆ ಅನುಗುಣವಾಗಿ ಜೋಡಿಸಿರುವುದಕ್ಕೆ. ಅಂದರೆ, 30 kg aluminium, 54 kg rubber, 5 kg zinc...ಹೀಗೆ. ಒಂದು ಕಾರ್ ನಿರ್ಮಾಣಕ್ಕೆ ಬಳಸುವ ಎಲ್ಲಾ ವಸ್ತುಗಳನ್ನು, ಬಳಸುವ ಪ್ರಮಾಣಕ್ಕನುಗುಣವಾಗಿ ಜೋಡಿಸಿಟ್ಟದ್ದು ಕಾರ್ ಅಂತ.


ಇಲ್ಲಿರುವುದು ಒಂದು ವಸ್ತುವನ್ನು ಈ ರೀತಿಯಾಗಿಯೂ ನೋಡಿ ಅರ್ಥ ಮಾಡಿಕೊಳ್ಳಬಹುದು ಎಂದು. ಇದು ಕಾರ್ ಕುರಿತಾದ ಮಾಹಿತಿಯೂ ಹೌದು, ಡಿಕನ್‌ಸ್ಟ್ರಕ್ಷನ್ ಎಂಬ ಕಷ್ಟಕರ ತತ್ವವನ್ನು ವಿವರಿಸುವ ಬಗೆಯೂ ಹೌದು, ಸಿದ್ಧ ಯೋಚನೆಗಳ ದಾಸರಾದ ನಮ್ಮ ಕೆನ್ನೆಗೆ ಏಟೂ ಹೌದು, ಎಚ್ಚರಿಕೆಯೂ ಹೌದು.

ಎಷ್ಟು ಮಜಾ ಇದೆಲ್ಲ! ನಿಜವಾಗಿಯೂ ಹೀಗೂ ಉಂಟೇ ಸೀನ್ಸ್.

ಈ ನಿಟ್ಟಿನಲ್ಲಿ, ಕೃತಿಗಳಿಗೆ ಹೆಸರಿಡುವುದೇ ಮಿತಿಯಾಗಬಲ್ಲದೆಂದು, ಅದರಿಂದ ನೋಡುಗನ ದೃಷ್ಟಿಕೋನವನ್ನು ಸಂಕುಚಿಸಿದಂತೆ ಆದೀತೆಂದು ಭಾವಿಸಲಾಗುತ್ತದೆ. ಈ ಕಾಲದ ಹೆಚ್ಚಿನ ಕೃತಿಗಳೂ "untitled" ಹೆಸರನ್ನು ಹೊತ್ತು ತಿರುಗುವುದನ್ನು ಕಾಣಬಹುದು, ನೋಡುಗನಿಗೂ ಸಂಪೂರ್ಣ ಸ್ವಾತಂತ್ರ್ಯ ಒದಗಿಸುವ ದೃಷ್ಟಿಯಿಂದ. ಇದು ನೋಡುಗನನ್ನೂ ಕಲೆಗಾರನಂತೆಯೇ ಪೇಚಿಗೆ ಸಿಲುಕಿಸಿತಷ್ಟೇ ಅಲ್ಲದೆ, ಆ ಸ್ವಾತಂತ್ರ್ಯವನ್ನು ಬಳಸಿಕೊಂಡವರು ಕಡಿಮೆ. ಇದನ್ನೆಲ್ಲ ತಿಳಿಯದೇ, ಸುಮ್ಮನೇ ಅನುಕರಣೆ ಮಾಡಿದವರೂ, ಇನ್ನೂ ಮಾಡುತ್ತಿರುವವರೂ ಇದ್ದಾರೆ. ಹೆಸರಿಡುವುದೇನೆಂದು ಗೊತ್ತಾಗದೆ ಇದ್ದದ್ದೂ ಒಂದು ಕಾರಣ.

ಈಗ ಹಾಗಿಲ್ಲ. ಹೆಸರಿಡುವುದೇ ಸಾಧ್ಯತೆಯಾಗಿ ಕಾಣುತ್ತಿದೆ. ಒಂದು ವೃತ್ತ ಬರೆದು, ಬಾವಿಯೆಂದರೆ ಬಾವಿ, ಚೆಂಡೆಂದರೆ ಚೆಂಡು, ವೃತ್ತವೆಂದರೆ ವೃತ್ತ, ಜೀವನವೆಂದರೆ ಒಂದು ದೊಡ್ಡ ತತ್ವ, ಬಿಂದು ಎಂದರೆ ಇನ್ನೇನೋ ಹೀಗೇ ಭಿನ್ನ ಭಿನ್ನ ಅರ್ಥಗಳನ್ನು ಒಂದೇ ವಸ್ತುವಿನಲ್ಲಿ ಧ್ವನಿಸಬಹುದೆಂದು ಕಾಣುತ್ತಿದೆ. ಆ ನಿಟ್ಟಿನಲ್ಲಿ, ಹೆಸರಿಡುವುದೂ ಕಲೆಯ ಕುರಿತಾಗಿ ಅಲ್ಲ, ಕಲೆಯ ಭಾಗವಾಗಿ ಬದಲಾವಣೆಗೊಂಡಂತಿದೆ.

ರೆಡಿಮೇಡ್ ಆಬ್ಜೆಕ್ಸ್ ಇಂದ, 'ಫೌಂಡ್ ಆಬ್ಜೆಕ್ಸ್'ಗೆ ಕಲೆ ವಿಸ್ತಾರವಾಗುತ್ತದೆ. ನಿಸರ್ಗದಲ್ಲಿ ಸಿಗುವ ವಸ್ತು ಯಾರ ರಚನೆಯೂ ಅಲ್ಲದ ಕಾರಣ ಅದಕ್ಕೆ ಸಹಿ ಹಾಕುವ ಪ್ರಮೇಯವೂ ಇಲ್ಲ. ಹುಡುಕಿ, ಸರಿಯಾದ ಜಾಗದಲ್ಲಿಟ್ಟು, ತಕ್ಕ ಹೆಸರಿಡುವುದರಿಂದ ಆ ವಸ್ತುವನ್ನು ಕಲೆಯಾಗಿಸಬಹುದೆಂದು ಕಂಡುಕೊಳ್ಳಲಾಗುತ್ತದೆ. ಸಾಮಾನ್ಯ ವಸ್ತುವೂ ಕಲೆಯಾಗ ಹೊರಟದ್ದು ಹೀಗೆ. ಇದು ಕೇಳಲು ಸುಲಭವಾಗಿ ತೋಚಿದರೂ, ಅದು ಸ್ಫುರಿಸಬೇಕಾದ ಅರ್ಥ ಹೆಚ್ಚು. ಇರಬೇಕಾದ ತಿಳುವಳಿಕೆಯೂ ಹೆಚ್ಚು. (ಇದರ, ಅಂದ್ರೆ ಈ ಇನ್ಸ್ಟಾಲೇಷನ್ಗಳ ಕುರಿತು ಮುಂದೊಮ್ಮೆ ವಿಸ್ತಾರವಾಗಿ ಬರೆಯುವುದೇ ಕ್ಷೇಮ).

ಎಲ್ಲವೂ ಎಲ್ಲರಿಗೂ ಅರ್ಥವಾಗುತ್ತದೆಂದಲ್ಲ. ಅನುಭವಿಸಲಾಗುತ್ತದೆ ಎಂದೂ ಅಲ್ಲ. ಒಂದು ನಿರಂತರ ಪ್ರಯತ್ನ ಆ ನಿಟ್ಟಿನಲ್ಲಿ ಮಾಡಬಹುದಾದ್ದು. ಒಮ್ಮೆ ಅದರ ಹೂರಣ ತಿಳಿಯಿತೆಂದರೆ ಹೆಚ್ಚು ಕಡಿಮೆ ಎಲ್ಲವನ್ನೂ ಅನುಭವಿಸಲು ಸಾಧ್ಯವಾಗುತ್ತದೆ. ಅನುಭವಿಸುವ ಪ್ರಕ್ರಿಯೆಯ ತಾತ್ಪರ್ಯವನ್ನು ಲಘುವಾಗಿ ಹೀಗೆ ಹೇಳಬಹುದೇನೋ. ಅಡುಗೆಯ ರುಚಿ ನಮಗೆ ಸಮಾಧಾನ ತಂದಿಲ್ಲದ ದಿನ ನಾವು ಉಪ್ಪೋ ಉಪ್ಪಿನಕಾಯಿಯೋ ಬೆರೆಸಿ, ನಮ್ಮ ರುಚಿಗೆ ತಕ್ಕಂತೆ ಹದ ಮಾಡಿಕೊಳ್ಳುವ ಹಾಗೆಯೇ, ಒಂದು ಕೃತಿ ಚೆನ್ನಾಗಿಲ್ಲವೆಂದೋ ಅರ್ಥವಾಗಿಲ್ಲವೆಂದೋ ಕಂಡರೆ, ಅದಕ್ಕೊಂದಿಷ್ಟು ಸ್ವಂತ ಅನುಭವದ ಉಪ್ಪು ಬೆರೆಸಿಕೊಂಡರೆ ಹದವಾಗಿ ಅನುಭವಿಸಲಾಗುತ್ತದೆ. ಕೆಲವೊಮ್ಮೆ, ನಮ್ಮಲ್ಲಿ ಬೇಕಾದ ಸರಕಿರುವುದಿಲ್ಲ. ಉದಾಹರಣೆಗೆ, ಮಂಗಳೂರಿಗರಿಗೆ ಮಂಡ್ಯದ ಚಹಾದಲ್ಲಿ ಸಕ್ಕರೆ ಜಾಸ್ತಿ ಎನಿಸುವುದುಂಟು. ನಾವು ಹಾಲನ್ನು ಹೊತ್ತುಕೊಂಡು ತಿರುಗಾಡುವುದಿಲ್ಲವಾದ ಕಾರಣ ನಮ್ಮ ರುಚಿಗೆ ತಕ್ಕಂತೆ ಮಾರ್ಪಾಡಿಸಿಕೊಳ್ಳಲು ಆಗಲೇ ಸಾಧ್ಯವಾಗಲಿಕ್ಕಿಲ್ಲ. ಆಗ ಆ ಕೃತಿಗಳನ್ನು ಚೆಲ್ಲದೆ ಹೇಗೋ ಕುಡಿದು ಮುಗಿಸಿದರಾಯ್ತು. ಒಮ್ಮೆ ತಲೆಯೊಳಕ್ಕೆ ಹೊಕ್ಕಮೇಲೆ ಕಾಡತೊಡಗಬಹುದು. ಬೇಕಾದ ಅನುಭವದ ಸರಕು ನಮ್ಮನ್ನು ಸೇರಿಕೊಂಡಾಗ ಅದನ್ನು ನಮ್ಮ ಪರಿಮಿತಿಗೆ ತಕ್ಕಂತೆ ಅನುಭವಿಸಲು ಸಾಧ್ಯವಾದೀತು.

ಇದು ಕಾನ್ಸೆಪ್ಚುವಲ್ ಆರ್ಟ್‌ಗೆ ಸಂಬಂಧಿಸಿದಂತೆ. ಅವನ್ನು ಯೋಚಿಸಿದರಷ್ಟೇ ಅನುಭವಕ್ಕೆ ಸಿಕ್ಕೀತು. ಭಾವನೆಯಿಂದ ಕೂಡಿದವು, ಸಂಗೀತದಂತೆ ಅಲ್ಲಲ್ಲೇ ಅನುಭವಿಸಿ, ಕರಗಿ ಹೋಗುವಂತವು. ಇವೆರಡರ ಮೇಳವಿದ್ದರೆ, ಆಹಾ! ಸ್ವರ್ಗಕ್ಕೆ ಮೂರೇ ಗೇಣು!

bottom of page