top of page

ಮಹಾಯುದ್ಧದ ನೆರಳಿನಲ್ಲಿ ಕಲಾ ಮಾರ್ಕೆಟ್ ಎಂಬ ಹೀರೋ ಎಂಟ್ರಿ

  • Writer: sushrutha d
    sushrutha d
  • Jun 26, 2021
  • 4 min read

Updated: Sep 22, 2024

ಕಲೆಗೊಂದು ಭೂಮಿಕೆ - 4 : ಮಹಾಯುದ್ಧದ ಸಮಯದಲ್ಲಿ ಜರ್ಮನ್ನರು ಯುರೋಪಿನ ವಸ್ತುಸಂಗ್ರಹಾಲಯಗಳಲ್ಲಿದ್ದ ಎಷ್ಟೆಷ್ಟೋ ಕಲಾಕೃತಿಗಳನ್ನು ದೋಚಿ, ತಮ್ಮ ಉಪ್ಪಿನ ಗಣಿಗಳ ನಡುವಲ್ಲೆಲ್ಲಾ ಅಡಗಿಸಿಡುತ್ತಾರೆ. ಜರ್ಮನ್ ಕೊನೆಗೂ ಯುದ್ಧದಲ್ಲಿ ಶರಣಾದಾಗ, ಅವುಗಳನ್ನೆಲ್ಲ ಸಂರಕ್ಷಿಸಲು ಅಮೇರಿಕಕ್ಕೆ ಸಾಗಿಸಲಾಗುತ್ತದೆ. ಪ್ರಸಿದ್ಧ ಮೊನಾಲೀಸಾ ಕೂಡ ಅದರಲ್ಲೊಂದು. ರೆಂಬ್ರಾಟ್‌, ಡಾವಿಂಚಿ‌, ರಾಫೆಲ್, ವರ್ಮೀರ್ ಮುಂತಾದ ಪ್ರಮುಖರ ಕೃತಿಗಳು ಅಮೇರಿಕದಲ್ಲಿವೆ ಎಂದು ತಿಳಿದ ಅಲ್ಲಿನ ಜನರು, ಅವನ್ನು ನೋಡಲು ಅವಕಾಶಬೇಕೆಂಬ ಬೇಡಿಕೆ ಇಡುತ್ತಾರೆ. ಸಂರಕ್ಷಿಸಿ ಪುನಃ ಯುರೋಪ್ ರಾಷ್ಟ್ರಗಳಿಗೆ ಕಳುಹಿಸಿದರೆ, ನೋಡುವ ಅವಕಾಶ ತಪ್ಪಿದಂತೆ ಎಂದು ಬೇಡಿಕೆ ವಿಪರೀತವಾಗುತ್ತದೆ. ಕೊನೆಗೂ ಅಮೇರಿಕಾ ಆಯಾ ರಾಷ್ಟ್ರಗಳ ಸಮ್ಮತಿ ಪಡೆದು, ಅತಿಯಾದ ಭದ್ರತೆಯೊಂದಿಗೆ, ಸೈನ್ಯದ ಬೆಟಾಲಿಯನ್‌ಗಳ ಸಮ್ಮುಖದಲ್ಲಿ, ಪ್ರದರ್ಶನ ಏರ್ಪಡಿಸುತ್ತದೆ.

ಸಾವಿರಗಟ್ಟಲೆ ಜನ ಧುಮುಕುತ್ತಾರೆ. ಸುದ್ದಿಯಾಗುತ್ತದೆ. ಇಷ್ಟು ಜನರ ಉಸಿರಾಟದಿಂದ ಕೃತಿಗಳು ಹಾಳಾಗಬಹುದೋ ಎಂದು ಮ್ಯೂಸಿಯಂ ಅವರು ಚಿಂತಿಸುವಂತಾಗುತ್ತದೆ! ಅಮೇರಿಕಾದ ಅಧ್ಯಕ್ಷನೂ ತನಗೆ ಇಷ್ಟವಾದ ಕೃತಿಗಳನ್ನು ಹೆಸರಿಸಿ ಪತ್ರಿಕಾ ಹೇಳಿಕೆ ಕೊಡುತ್ತಾನೆ. ಇಷ್ಟೆಲ್ಲ ಆದಮೇಲೆ, ತಾನು ನೋಡದೆ ಉಳಿದರೆ ತನ್ನ ಪ್ರತಿಷ್ಠೆಗೆ ಕಮ್ಮಿ ಎಂದು ಕಲಾಸಕ್ತರಲ್ಲದ ಜನರೂ ದೌಡಾಯಿಸುತ್ತಾರೆ. ಒಂದೇ ದಿನದಲ್ಲಿ ಅರವತ್ತೇಳು ಸಾವಿರ ಜನ ಒಂದು ಮ್ಯೂಸಿಯಂಗೆ! ಅದೇನು ನೋಡಿದರೋ ಏನೋ!

ಈ ಹುಚ್ಚಿಗೆ ಎಲ್ಲರೂ ದಂಗು. ಯಾರ ಊಹೆಗೂ ನಿಲುಕದ ಪ್ರತಿಕ್ರಿಯೆಯ ನಡುವಲ್ಲಿ ಕೆಲವರು ಅವಕಾಶ ಕಂಡುಕೊಂಡರು. ಕಲಾಮಾರ್ಕೆಟ್ ಹುಟ್ಟಿಕೊಂಡು ಬ್ಯುಸಿನೆಸ್ ಆಗಿದ್ದು ಇಲ್ಲಿಂದ‌. ನಕಲಿ ಪ್ರತಿಗಳೇ ಅಸಲಿ ಪ್ರತಿಗಳಾಗಿ ಮಾರಾಟಗೊಂಡವು. ಮಹಾಯುದ್ಧದ ಗಲಭೆಗಳ ಮಧ್ಯ ಕಳೆದು ಹೋದ ಪ್ರತಿಗಳೆಂದೋ ಮತ್ತೊಂದೋ ಹೇಳಿ, ಹಣ ಮಾಡತೊಡಗಿದರು. ಬರಿಯ ಪ್ರತಿಷ್ಠೆಗಾಗಿ ಜನ ಕೊಳ್ಳುವುದು ತಿಳಿಯುತ್ತಿದ್ದಂತೆ ನ್ಯಾಯಮಾರ್ಗದಲ್ಲೇ ಬ್ಯುಸಿನೆಸ್ ಶುರುವಾಯಿತು. ಕೃತಿಗಳ ಮೇಲೆ ಇನ್ವೆಸ್ಟ್‌ಮೆಂಟ್ ಮಾಡುವ ಪ್ರಕ್ರಿಯೆ ಶುರುವಾಯಿತು. ನಮ್ಮೂರಿನಲ್ಲಿ ಹೇಗೆ ಒಂದು ಸೈಟ್ ಕೊಂಡು, ಒಂದಷ್ಟು ಸಮಯದ ನಂತರ ಮಾರಿದಾಗ ದುಪ್ಪಟ್ಟು ಲಾಭ ಮಾಡಬಹುದೋ, ಹಾಗೆಯೇ ಕೃತಿಗಳೂ ಪ್ರಾಪರ್ಟಿಯಾಗತೊಡಗಿದವು.


ಯಾವ ಕೃತಿಗೆ ಸಾರ್ವಕಾಲಿಕವಾಗಿ ಬೆಲೆ ಇರುತ್ತವೋ, ಸಮಯ ಕಳೆದಂತೆ ಏರುತ್ತವೋ ಅವನ್ನು ಖರೀದಿಸಲು ಪೈಪೋಟಿ ಶುರುವಾಯಿತು. ಬೆಲೆ ಏರುತ್ತಾ ಹೋಯಿತು. ಹೊಸ ಕಲಾವಿದರ, ಹೊಸ ರೀತಿಯ ಚಿತ್ರಗಳಿಗೆ ಮುಂದೊಮ್ಮೆ ಬೆಲೆ ಬರಬಹುದೆಂಬಂತಹ ಊಹೆಗಳೊಂದಿಗೆ ಕೃತಿಗಳ ಕೊಂಡುಕೊಳ್ಳುವಿಕೆಗಳೂ ನಡೆಯಿತು. ಮುಂದೊಮ್ಮೆ ಬೆಲೆಬರಲು, ಕೊಂಡಾತ ಬಾಯಿಗೆ ಬಂದಂತೆ ಹೊಗಳುವ ಪರಿಪಾಠವೂ ಬೆಳೆಯಿತು. ಹೇಳುವುದೇನೆಂದು ತಿಳಿಯದಿದ್ದಾಗ ಅರ್ಥವಾಗದಂತಹ ದೊಡ್ಡ ದೊಡ್ಡ ಪದ ಬಳಸಿ ಏನನ್ನೋ ಹೇಳತೊಡಗಿದರು. ಇದನ್ನೆಲ್ಲ ಗಮನಿಸಿದ ಗ್ಯಾಲರಿಗಳು, ಕಲಾವಿದರ ಕಲಾಸೃಷ್ಟಿ ಆಗುವ ಮೊದಲೇ ಅವರ ವರ್ಚಸ್ಸಿನ, ಕೃತಿಗಳ ಮೇಲಿನ ನಂಬಿಕೆಯ ಆಧಾರದಲ್ಲಿ, ಕೃತಿಗಳ ಖರ್ಚನ್ನು ತಾನು ನೋಡಿಕೊಳ್ಳುವುದಾಗಿಯೂ, ಅದು ಮುಂದೆ ತಮ್ಮ ಗ್ಯಾಲರಿ ಮುಖಾಂತರ ಪ್ರದರ್ಶನವಾಗಬೇಕೆಂಬ ಶರತ್ತುಗಳೊಂದಿಗೆ ಬೇಡಿಕೆ ಮುಂದಿಟ್ಟವು.


ಹೀಗೆ ಹೆಚ್ಚುಕಡಿಮೆ ಕಲಾಸೃಷ್ಟಿಯ ಕಂಟ್ರೋಲ್ ಕಲಾಮಾರ್ಕೆಟ್‌ಗೆ ಹಸ್ತಾಂತರವಾಯಿತು. ಕಂಟ್ರೋಲ್ ಸಿಕ್ಕಿದ ಮೇಲೆ ರಾಜಕೀಯ ಶುರುವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಎಡ-ಬಲಗಳೂ ಇಲಿಗಳಂತೆ ಮೆಲ್ಲನೆ ತುರುಕಿಕೊಂಡವು.

ಪರಿಣಾಮ? ನಿಜವಾಗಿಯೂ ಕಲಾಸಕ್ತ ಜನರ ಕೈಗೆಟುಕುತ್ತಿದ್ದ ಚಿತ್ರಗಳು ಕಲಾಸಕ್ತರಿಂದ ದೂರವಾಯಿತು. ಆದರೆ, ಎಲ್ಲರಿಗೂ ನೋಡುವ ಅವಕಾಶ ಒದಗಿತು. ಗ್ಯಾಲರಿಗಳು ಕಲಾವಿದರ ಹುಡುಕುವ ಬದಲು, ಕಲಾವಿದರು ಗ್ಯಾಲರಿಯನ್ನು ಅರಸಬೇಕಾಯಿತು. ಗ್ಯಾಲರಿಗಳ ಧೋರಣೆಗಳಿಗೆ ತಕ್ಕಂತೆ ತನ್ನ ಕೃತಿಗಳನ್ನು ಮಾರ್ಪಾಡಿಸಲೂ ಬೇಕಾಯಿತು (ಇದು ಹೆಚ್ಚಿನೆಲ್ಲರಿಗೂ ತಿಳಿದ ವಿಷಯವಾದರೂ, ಎಲ್ಲಿಯೂ ಸಾಕ್ಷಿ ಸಿಗುವುದಿಲ್ಲ. ಯಾರೂ ಬಾಯಿಬಿಡುವುದಿಲ್ಲವಾದ ಕಾರಣ ಸತ್ಯಾಸತ್ಯತೆಗಳ ಬಗ್ಗೆ ನನಗೆ ತಿಳಿದಿಲ್ಲ).

ಬ್ಯುಸಿನೆಸ್‌ಮೆನ್‌ಗಳ ಕೈಸೇರಿದ ಮೇಲೆ ಔತಣಕೂಟವೆಲ್ಲ ಇಲ್ಲದಿದ್ದರೆ ಹೇಗಾದೀತು! ಯಾವುದೇ ಕಲಾಪ್ರದರ್ಶನದ ಮೊದಲದಿನ ತಮ್ಮಂತೆಯೇ ಪ್ರತಿಷ್ಠಿತರೆನಿಸಿಕೊಂಡವರನ್ನು, ತಮ್ಮ ಗಿರಾಕಿಗಳನ್ನು, ಗಿರಾಕಿ ಆಗಬಹುದೆನಿಸುವವರೆನ್ನಲ್ಲ ಆಹ್ವಾನಿಸಿ ಒಂದು ಪಾರ್ಟಿ ಮಾಡುವ ಅಭ್ಯಾಸ ಬೆಳೆಯಿತು. ಇಲ್ಲಿ ಸೇರುವುದು 'ಕಲೆಗಾಗಿ' ಎಂದೇನೂ ಹೇಳುವಂತಿಲ್ಲ. ಸೇರಿದ ಮಿತ್ರರಿಗೆ ಸಂತೃಪ್ತಿಯಾಗುವಂತೆ ಮಾಡಿದರೆ ಅದು ಅದ್ಭುತ ಕಲಾಪ್ರದರ್ಶನ, ಇಲ್ಲದಿದ್ದರೆ ನೀರವ. ಒಟ್ಟಿನಲ್ಲಿ, ಇತ್ತ ಸ್ವಲ್ಪ ಖರ್ಚು ಮಾಡಿ, ಅತ್ತಲಿಂದ ಹಣ ಮಾಡುವ ಬ್ಯುಸಿನೆಸ್‌ ತಂತ್ರಗಳು ಫಲಿಸಿದವು. ಹಣ ಕಂಡರೆ ಹೆಣವೂ ಬಾಯಿಬಿಡುವಂತೆ, ನಮ್ಮ ಜನರೂ ಕಲೆಯ ಗಂಧಗಾಳಿ ಇಲ್ಲದೆ ಅಷ್ಟು ಲಕ್ಷ, ಇಷ್ಟು ಕೋಟಿ ಎಂದು ಬಾಯಿತೆರೆಯತೊಡಗಿದರು. ಜನರ ಬಾಯ ನಡುವೆ ಕಲೆ ಸತ್ತೇ ಹೋಯಿತಾದರೂ ನಿಜವಾಗಿ ಹಾಗೇನಾಗಲಿಲ್ಲ.

ದಿನದಿಂದ ದಿನಕ್ಕೆ ಪ್ರಯತ್ನಗಳೂ ಹೆಚ್ಚಾಗಿ, ಹೊಸ ಹೊಸ ಪ್ರಕಾರಗಳಾಗಿ, ತನ್ನ ಕಾರ್ಯವ್ಯಾಪ್ತಿಯನ್ನೂ ಮಹತ್ವವನ್ನೂ ಹೆಚ್ಚಿಸಿಕೊಂಡ ಕಲೆ ವಿಸ್ತರಿಸುತ್ತಾನೆ ಮುಂದುವರಿದಿದೆ. ಎಲ್ಲೂ ನಿಂತ ನೀರಾಗದೆ, ನವನವೀನ ಪ್ರಯತ್ನಗಳ ನಡುವೆ ಹೊಸಚೈತನ್ಯ ಕಂಡುಕೊಂಡಿದೆ. ಸತ್ಯ ಹೇಳಬೇಕೆಂದರೆ, ಇತರೆಲ್ಲ ಕಲಾಪ್ರಕಾರಗಳಿಂದ ಹೆಚ್ಚೇ ಆವಿಷ್ಕಾರಗಳು ನಡೆದಿವೆ. ಎಷ್ಟೆಂದರೆ, ಇತರ ಕಲಾಪ್ರಕಾರಗಳ ಕಟ್ಟಳಲೆಗಳನ್ನು ಒಡೆಯುವುದೂ ಈ ಕಲಾವಿದರ ಕೆಲಸವೇ ಆಗಿದೆ. ತತ್ವಶಾಸ್ತ್ರ ಮನಶ್ಶಾಸ್ತ್ರವೆಲ್ಲ ಅಧ್ಯಯನ ಮಾಡುವಂತಹ ವಸ್ತುಗಳನ್ನೊದಿಸಿವೆ. ಹಾಗೆಯೇ, ಸಾಮಾನ್ಯ ಜನರಿಂದ ಬಹುದೂರ ಸಾಗಿದೆ.

ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತದೆ. "ಜನರಿಂದ ದೂರವಾದ ಕೃತಿಗಳು ಇದ್ದರೆಷ್ಟು ಬಿಟ್ಟರೆಷ್ಟು! ಅದರ ಮೂಲೋದ್ದೇಶವೇ ಹಾಳಾಯಿತಲ್ಲ" ಎಂದು. ಆವಿಷ್ಕಾರವನ್ನು ಅಷ್ಟು ಸುಲಭವಾಗಿ ಅಲ್ಲಗಳೆಯುವಂತಿಲ್ಲ. ಅಲ್ಲಗಳೆಯಲೂಬಾರದು. ಅದು, ಕ್ಷೇತ್ರದ ಸಾಧ್ಯತೆಗಳನ್ನು ಬಯಲುಮಾಡುತ್ತಾ ಹೋಗುತ್ತದೆ. ಇತರರ ಕೆಲಸಗಳಿಗೂ ಹೆಚ್ಚಿನ ಕಾರ್ಯಕ್ಷೇತ್ರ ಲಭಿಸುತ್ತದೆ. ಐಡಿಯಲ್ ಆಗಿ, ಈ ಇತರರು ಜವಾಬ್ದಾರಿಯುತವಾಗಿ ವರ್ತಿಸುತ್ತಾ ಜನರಿಗೆ ನಿಧಾನವಾಗಿಯಾದರೂ ಪರಿಚಯಿಸುವ ಕೆಲಸ ಮಾಡಬೇಕಿತ್ತು. ಆದರೆ, ಅದೇಕೋ ಹಾಗೆ ನಡಿಯಲೇ ಇಲ್ಲ. ಎಲ್ಲವೂ ಒಬ್ಬನ ತಲೆಮೇಲೆ ಬಿದ್ದಾಗ ಉಸಿರು ಕಟ್ಟಿದಂತಾಗುತ್ತದೆ ಎಂದೇ ಮತ್ತಿನವರು ಜನರಿಂದ ದೂರವುಳಿದರೋ ಏನೋ!

ಉದಾಹರಣೆಗೆ, ಐನ್‍ಸ್ಟೈನೇ ಅವನ ಸಿದ್ಧಾಂತವನ್ನು ಎಲ್ಲರಿಗೂ ಪರಿಚಯಿಸಬೇಕಿತ್ತೆಂದರೆ ಆಗುತ್ತಿತ್ತೇ? ಆತನೋ ಏನನ್ನೂ ತಯಾರು ಮಾಡಿಯೂ ಇಲ್ಲ. ಅವನ ಸಿದ್ಧಾಂತವನ್ನು ಕಾರ್ಯರೂಪಕ್ಕೆ ಅಳವಡಿಸಿದವರೇ ಬೇರೆ, ಅದನ್ನು ವಿವರಿಸಿದವರೇ ಬೇರೆ. ನಮ್ಮ ಎಸ್.ಎಲ್.ಭೈರಪ್ಪನವರೂ ಒಂದು ಭಾಷಣದಲ್ಲಿ ಹೇಳುತ್ತಾರೆ. ನಾನು ಇನ್ನೂ ಕಾದಂಬರಿ ಬರೆಯಬೇಕೋ ಬೇಡವೋ? ಬೇಕು. ಹಾಗಿದ್ದರೆ ನನ್ನನ್ನು ಯಾವ ಸಮಾರಂಭಕ್ಕೂ ಭಾಷಣ ಮಾಡಲು ಕರೆಯಬೇಡಿ ಎಂದು. ಹೀಗೆಯೇ ಅಲ್ಲವೇ ಕಲಾವಿದರೂ! ಅಕಸ್ಮಾತ್, ಇದನ್ನೆಲ್ಲ ಮನಗಂಡು ಒಬ್ಬ ತನ್ನ ಕೃತಿಯನ್ನು ತಾನೇ ವಿವರಿಸ ಹೊರಟನೆನ್ನಿ. ಸ್ವ ಹೊಗಳುಭಟ್ಟನೆಂದೋ, ಅಹಂಕಾರಿಯೆಂದೋ, ಆತ ತನ್ನ ಕೃತಿಯನ್ನು ಹೊಗಳುವ ರೇಂಜಿಗೆ ಆ ಕೃತಿ ಇಲ್ಲವೆಂದೋ ನೂರೈವತ್ತು ಮಾತುಗಳು ಕೇಳಬೇಕು. ಆತನಿಗೆ ಅಷ್ಟು ಇಷ್ಟವಾಗಿದ್ದಕ್ಕಲ್ಲವೇ ಆತ ರಚಿಸಿದ್ದು! ಆತ ಹೊಗಳಿಕೊಳ್ಳುವುದು ಸಹಜ. ಅಪರೂಪಕ್ಕಾದರೂ ತನ್ನ ಕೃತಿಯನ್ನು ಅದರಲ್ಲೇನಿಲ್ಲ ಮಹಾ ಎಂದೊಪ್ಪಿಕೊಂಡರೆ ಅದು ಅವನ ಅರಿವು ಮೂಡಿಸಿದ ದೊಡ್ಡಗುಣ. ಅದುಬಿಟ್ಟು, ಅದನ್ನೂ ಬೈಯಬೇಕು, ಇದನ್ನೂ ಬೈಯಬೇಕೆಂದರೆ! ಇದೆಂತಹ 'ದಾದಾಯಿಸಂ'?!

ಮಹಾಯುದ್ಧದ ಬಳಿಕ ರಾಷ್ಟ್ರಗಳಿಗೆ ತಮ್ಮ ಪ್ರತಿಷ್ಠೆ ಸ್ಥಾಪನೆಯಾಗಬೇಕಾಯಿತು. ಒಂದು ತೆರದಲ್ಲಿ, ಯುದ್ಧ ನಡೆದದ್ದೇ ಅದಕ್ಕೆನ್ನಬಹುದು. ಇಡೀ ಜಗತ್ತಿಗೇ ನಷ್ಟವಾದ ಈ ಸಮಯದಲ್ಲಿ ತನ್ನ ದೇಶದಲ್ಲಿ ಎಂತಹ ಪ್ರಗತಿಯಾಗುತ್ತಿದೆ ಎಂದು ತೋರಿಸಲು ಕಲೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತದೆ. ಹೇಳಹೆಸರಿಲ್ಲದಂತಿದ್ದ ಜಾಕ್ಸನ್ ಪೊಲಾಕ್‌ರಂತವರು ಏಕಾಏಕಿ ಕಲಾಜಗತ್ತಿನ ಮುಂಚೂಣಿಗೆ ಬಂದದ್ದರಲ್ಲಿ ಅಮೇರಿಕ ಸರ್ಕಾರದ ಕೈವಾಡವಿತ್ತು. ಆದರೆ ಇದೆಲ್ಲ ಒಳಗುಟ್ಟುಗಳು. ಕದ್ದುಮುಚ್ಚಿಯೇ, ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಮಟ್ಟದಲ್ಲಿ ನಡೆದಂತಹ ಕಾರ್ಯತಂತ್ರಗಳು. ಪರಿಣಾಮ? ಜಗತ್ತಿನ ಕಲಾಕೇಂದ್ರವಾಗಿ ಪ್ಯಾರಿಸ್ಸಿನಿಂದ ನ್ಯೂಯಾರ್ಕ್‌ಗೆ ಬದಲಾವಣೆಯಾದದ್ದು.

ಯಾವ ಮೂವ್‌ಮೆಂಟ್ ಅನ್ನು ಪ್ರಮೋಟ್ ಮಾಡಬೇಕು, ಯಾರ ಕೃತಿಗಳಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಶಕ್ತಿ ಇದೆ ಎಂಬುದನ್ನೆಲ್ಲ ಅರಿತು, ಅದಕ್ಕೆ ತಕ್ಕಂತೆ ಗುಟ್ಟಾಗಿ ಕಾರ್ಯತಂತ್ರ ರೂಪಿಸಿ, ಸರ್ಕಾರದ ಮಧ್ಯಸ್ಥಿಕೆಯ ಅನುಮಾನವೇ ಬಾರದಂತೆ ಭಾರತದ ಶ್ರೇಷ್ಠಕಲೆಗಳೂ ಗುರುತಿಸಲ್ಪಡುವಂತೆ ಮಾಡುವ ಯೋಜನೆಗಳೇ ನಮ್ಮ ದೇಶಕ್ಕೆ ಇಲ್ಲವೇನೋ! ಇನ್ನೂ ಈ ಸಾಧ್ಯತೆಗಳೆಲ್ಲ ಗೋಚರವೇ ಆಗಿಲ್ಲವೇ ಅಥವಾ ಅಷ್ಟೊಂದು ಅಸಡ್ಡೆಯೇ!? ಭಾರತದ ಮಿನಿಯೇಚರ್ ಪೇಯಿಂಟಿಂಗ್ಸ್‌ ಮಾತ್ರ ಜಾಗತಿಕವಾಗಿ ತಕ್ಕಮಟ್ಟಿಗಾದರೂ ಗುರುತಿಸಿಕೊಂಡದ್ದು. ಉಳಿದೆಲ್ಲ ಸಾಧ್ಯತೆಗಳು ಸರ್ಕಾರದ ಎಡಕಣ್ಣಿಗೋ ಬಲಕಣ್ಣಿಗೋ ಯಾವಾಗ ಕಾಣಿಸೀತೋ ಗೊತ್ತಿಲ್ಲ. ಮೂಗಿನ ನೇರಕ್ಕೆ ಮಾತ್ರವೇ ನೋಡುತ್ತಿದ್ದರೆ ಖಂಡಿತವಾಗಿಯೂ ಎರಡಕ್ಕೂ ಕಾಣುವುದಿಲ್ಲ. ರಾಜ್ಯದ ಸುದ್ದಿಯೇ ಪ್ರಸ್ತಾಪಿಸಬೇಕಿಲ್ಲ. ಕರ್ನಾಟಕದ ಕಲೆಗಾರರು ಮುಂಬೈನ ಆರ್ಟ್‌ಗ್ಯಾಲರಿಗಳಲ್ಲಿ ಪ್ರದರ್ಶಿಸುತ್ತಿದ್ದಾರೆ ಎಂದಷ್ಟೇ ಹೇಳಬಹುದು. ಇದು ಹೆಮ್ಮೆಯೋ, ಅವಮಾನವೋ ನಿಮಗೇ ಬಿಟ್ಟದ್ದು.

ಒಮ್ಮೆ ಚಿ.ಸೂ.ಕೃಷ್ಣಸೆಟ್ಟಿಯವರು ಕರ್ನಾಟಕ ಸರ್ಕಾರದ ಬಳಿ ಕಲೆಯ ಸಾಧ್ಯತೆಗಳನ್ನು ವಿವರಿಸಿ, ಬೆಂಗಳೂರಿನಲ್ಲಿ ಒಂದು ಪ್ರತಿಮೆ ನಿರ್ಮಿಸಲು ಹೇಗೋ ಒಪ್ಪಿಸಿದರಂತೆ. ಸಮಕಾಲೀನ ಕಲೆಯ ಕುರಿತು ಇವರು ಹೇಳಿದ್ದು. ಅವರಿಗೆ ಆಗಬೇಕಾದ್ದು ಕೆಂಪೇಗೌಡರ ಮೂರ್ತಿಯಂತೆ!

ಇತಿಹಾಸದಿಂದ ಪಾಠ ಕಲಿತು ಮುಂದೆ ಸಾಗುವುದು ಬಿಟ್ಟು, ಇತಿಹಾಸದ ಪುಟಗಳತ್ತನೇ ತಿರುಗಿ ನಿಂತಿದ್ದೇವೇನೋ ಅನ್ನಿಸುತ್ತದೆ ಒಮ್ಮೊಮ್ಮೆ. ಇನ್ನೆಷ್ಟು ಕೆಂಪೇಗೌಡರು ಬೇಕು ಸ್ವಲ್ಪ ಸಮಕಾಲೀನ ಸ್ಥಿತಿಯ ಅರಿವಾಗಲು! ಕೆಂಪೇಗೌಡರದ್ದಾಯಿತೆಂದು ಟಿಪ್ಪೂ ಸುಲ್ತಾನರದ್ದು ಆಗಬೇಕು. ಆಗ ಸಾವರ್ಕರ್‌ದು ಆಗಬೇಕು. ಗಾಂಧಿ, ಅಂಬೇಡ್ಕರಿದಾಗಬೇಕು. ಇನ್ನೊಂದಿಬ್ಬರದ್ದಾದಾಗ ಪುನಃ ಕೆಂಪೇಗೌಡರು. ಹೀಗೇ, ನಿಲ್ಲದ ಪಟ್ಟಿ.

ಇವನ್ನೆಲ್ಲ ಪ್ರತಿಷ್ಠಾಪಿಸಿದ ಮಾರನೇ ದಿನದಿಂದ ಯಾರೂ ತಲೆಯೆತ್ತಿ ನೋಡುವುದಿಲ್ಲ. ಯಾವ ಕೃತಿಯೊಂದಿಗೆ ನಿರಂತರ ಒಡನಾಟ ಇರುವುದಿಲ್ಲವೋ ಅದು ಈ ಕಾಲದಲ್ಲಿ ಶ್ರೇಷ್ಠವಾದದ್ದಾಗಲು ಸಾಧ್ಯವಿಲ್ಲ. ಅನೀಶ್ ಕಪೂರ್‌ನ cloud gate, ಯಾಯೋಯ್ ಕುಸಾಮಾನ infinity room ಎಲ್ಲ ಈ ಕಾಲದ ಜನರ ಫೋಟೋ ಹುಚ್ಚಿಗೆ ತಕ್ಕ ಹಾಗಿರುವುದರಿಂದ ಅದರೊಂದಿಗೆ ಒಡನಾಟ ಪ್ರತಿದಿನವೂ ಇದೆ. ದುಷಂಪನ 'ಫೌಂಟೇನ್' ಅನ್ನು ಮತ್ತೆ ಮತ್ತೆ ನೋಡಲಾಗಲೀ ಅದರ ಜೊತೆ ಫೋಟೋ ತೆಗೆದುಕೊಳ್ಳಲಾಗಲೀ ಯಾರೂ ಬಯಸದಿದ್ದರೂ, ಅದರೊಂದಿಗೆ ಚಿಂತನೆಯ ರೂಪದ ಒಡನಾಟ ಇಂದಿಗೂ ಮುಂದುವರಿದಿದೆ. ಅದೆಲ್ಲ ಯಾಕೆ, ದೇವಸ್ಥಾನಗಳೊಂದಿಗೆ ನಿರಂತರ ಒಡನಾಟವಿದ್ದರೆ ಮಾತ್ರ ಆಯಾ ದೇವರ ಮಹಿಮೆ ಹೆಚ್ಚಾಗುವುದು ಕಣ್ಣಿಗೇ ಕಾಣುವುದಿಲ್ಲವೇ!

ಬೆಂಗಳೂರಿನ ಪ್ರತಿಷ್ಠಿತ ವೆಂಕಟಪ್ಪ ಗ್ಯಾಲರಿಯಲ್ಲಿ ವೆಂಕಟಪ್ಪನವರ, ಕೆ.ಕೆ ಹೆಬ್ಬಾರರ ಕೃತಿಗಳ ಸಂಗ್ರಹವಿದೆ. ವೆಂಕಟಪ್ಪನವರ ಕೆಲವು ಕೃತಿಗಳು ಕಾಣದಂತೆ ದೊಡ್ಡ ಪಿಯಾನೋ ಒಂದನ್ನು ಅಡ್ಡ ಇಡಲಾಗಿದೆ. ಮತ್ತೊಂದು ಮಹಡಿಯಲ್ಲಿ ಸರ್ಕಾರ ಖರೀದಿ ಮಾಡಿದ ಇತರರ ಕೃತಿಗಳನ್ನು ಜೋಡಿಸಲಾಗಿದೆ. ತಮ್ಮ ರಾಜ್ಯದಲ್ಲಿ ಆದಂತಹ ಆವಿಷ್ಕಾರಗಳಿವು ಎಂದು ಹೆಮ್ಮೆಯಿಂದ ಪ್ರದರ್ಶಿಸಬೇಕಾದ ಜಾಗದಲ್ಲಿ ಎಂತೆಂತಹ ಕೃತಿಗಳು! ಅಬ್ಬಾ ಸರ್ಕಾರದ ಅಭಿರುಚಿಯೇ! ಒಂದೇ ಒಂದು ಪ್ರತಿಷ್ಠಿತ ವರ್ಕಿಂಗ್ ಕಲಾಗ್ಯಾಲರಿ ಇಲ್ಲದ 'ಕಲಾನಗರಿ'ಯೊಂದಿದೆ. ಹಳೆಯ ಕಾಲದಲ್ಲಿ ಹೇಗೇಗಿತ್ತೆನ್ನುವುದೇ ನಮ್ಮ ಶ್ರೇಷ್ಠತೆ. ಅಷ್ಟಕ್ಕೇ ಮೀಸಲು.

bottom of page