ಈ ಇನ್ಸ್ಟಾಲೇಷನ್ ಅಲ್ಲದ್ದು ಯಾವುದು?!
- sushrutha d
- Jul 12, 2021
- 3 min read
Updated: Jun 9, 2025
ಕಲೆಗೊಂದು ಭೂಮಿಕೆ - 10 : ಪ್ರತಿಷ್ಠಾಪನ ಕಲೆ ಅಥವಾ ಇನ್ಸ್ಟಾಲೇಷನ್ನಿನ ವ್ಯಾಪಕತೆಯನ್ನು ಪದಗಳಲ್ಲಿ ಹಿಡಿವುದು ಕಷ್ಟ. ಇದರ ಮೊದಲು ನಡೆದ ಕಸರತ್ತುಗಳೆಲ್ಲ ಆಯಾ ಪ್ರಕಾರಗಳಲ್ಲೇ ಸ್ವಲ್ಪ ಆಚೀಚೆ ಮಾಡಿದಂತವು. ಪೇಯಿಂಟಿಂಗ್ ಅಂತ ಬಂದ್ರೆ, ಬಣ್ಣವನ್ನು ಯಾವುದೋ ಒಂದು ಮೇಲ್ಮೈ ಮೇಲೆ ಬಳಿಯುವುದೇ. ಹೀಗೆ ಬಳಿಯಬೇಕೋ, ಹಾಗೆ ಬಳಿಯಬೇಕೋ ಎಂಬಂತಹ ಪ್ರಶ್ನೆಗಳಿಂದ ಒಂದು ನೂರೈವತ್ತು ಇಸಂಗಳು ಹುಟ್ಟಿಕೊಂಡವು ಅಷ್ಟೆ. ಇನ್ಸ್ಟಾಲೇಷನ್ ಎಂಬುದು ಹೊಸ ಪ್ರಕಾರವಾಗಿಯೇ ಶುರುವಾದದ್ದರಿಂದ ಅದೆಲ್ಲವನ್ನೂ ಒಳಗೊಳ್ಳಬೇಕಾಯಿತು. ಒಳಗೊಳ್ಳುತ್ತಾನೇ ಬೆಳೆಯಬೇಕಾಯಿತು.
ಸಾಧಾರಣವಾಗಿ ನಾವು ಕಲೆಯೆಂಬುದು ದೇಶಕಾಲಾತೀತವಾಗಿರಬೇಕೆಂದು ಬಯಸಿದರೆ ಇದು ಆಯಾ ದೇಶಕಾಲಕ್ಕೆ ಹೊಂದಿಕೊಳ್ಳಬೇಕೆಂದು ಹೇಳುತ್ತದೆ. ಇದೊಂದು ರೀತಿಯಲ್ಲಿ ಶಿಲ್ಪವೂ ಹೌದು, ವಾಸ್ತುಶಿಲ್ಪವೂ ಹೌದು. ದೊಡ್ಡ ಮನಸ್ಸಿಗೆ ಚಿತ್ರವೂ. ಒಂದು ಪರಿಸರದಿಂದ ದಕ್ಕುವ ಅನುಭವವನ್ನು ಬದಲಾವಣೆ ಮಾಡಬೇಕೆಂಬುದು ಇಲ್ಲಿನ ಉದ್ದೇಶ. ಅಂದರೆ, ಒಂದು ಸೀಮಿತ ಜಾಗದಲ್ಲಿಯ ಪರಿಸರವನ್ನೇ ಬದಲಿಸಿ, ಆ ಮೂಲಕ ಅಲ್ಲಿ ನೆರೆದವರಿಗೆ ಇನ್ನೊಂದು ರೀತಿಯ ಅನುಭವವನ್ನೊದಗಿಸುವುದು. ಸಿನೆಮಾ ಥಿಯೇಟರ್ ತರಹ ಅಂದುಕೊಳ್ಳೋಣ.
ಒಂದು ಕಟ್ಟಡದೊಳಗೆ ಒಂದು ಕೋಣೆ ಪೂರ್ತಿ ಕಾಡು ಇದ್ದರೆ ಹೇಗಿದ್ದೀತು? ಅದರೊಳಗೆ, ಸುತ್ತಮುತ್ತಲೆಲ್ಲ ಒಂದು ಕಾಡಿನಲ್ಲಿದ್ದ ಅನುಭವ. ಇತ್ತ ಸ್ವಲ್ಪ ದೂರ ಬಂದರೆ ಬರೀ ಕಟ್ಟಡ. ಒಂದಷ್ಟು ದಿನಗಳ ನಂತರ ಅದೇ ಜಾಗಕ್ಕೆ ಹೋದರೆ ಕಾಡಿನ ಕುರುಹೂ ಇಲ್ಲ. ಇಲ್ಲಿ ಕಾಡಿನ ಅನುಭವ ಉಂಟುಮಾಡಲು ಯಾವ ತಂತ್ರವನ್ನೂ ಉಪಯೋಗಿಸಬಹುದೆಂಬುದು ಗಮನಾರ್ಹ. ಕಾಡಿನ ಶಬ್ದ ಕೇಳುವಂತೆ, ವಾಸನೆ ಬರುವಂತೆ ಎಲ್ಲಾ ಹೇಗೇಗೋ ಮಾಡಿ, ಅದನ್ನೂ ಅದೇ ಕೋಣೆಯಲ್ಲಿ ಪ್ರತಿಷ್ಠಾಪಿಸಿ, ದೃಶ್ಯ ಶ್ರವಣ ನಾಸಿಕಗಳೆಲ್ಲವನ್ನೂ ಒಟ್ಟಿಗೇ ಪ್ರಚೋದಿಸಬಹುದು.

ಹೀಗೆ ಹೇಳಿದರೆ, ಇದೊಂದು ಜಾಗದಲ್ಲಿ ಇನ್ನೊಂದು ಜಾಗದ ಅನುಕರಣೆಯಾಗಿ ಕಂಡೀತು. ಆದರಿದು ಯೋಚನೆಯ ಕಾಲ. ಹೇಳಿದ್ದಕ್ಕೆಲ್ಲ ಹೌದೌದೆಂದು ತಲೆಯಾಡಿಸಲು, ಅದನ್ನಷ್ಟೇ ಅನುಕರಿಸಲು ಯಾರೂ ತಯಾರಿರಲಿಲ್ಲ. ಒಂದು ಬಿಳಿಯ ಮೇಲ್ಮೈ ಮೇಲೆ ಒಂದು ಕಪ್ಪು ಚುಕ್ಕಿ ಇಟ್ಟರೂ ಅದು ಬೇರೆಯೇ ಆಗುವುದಾದರೆ ಇಲ್ಲೂ ಎಷ್ಟೆಲ್ಲ ಸಾಧ್ಯತೆಗಳಿಲ್ಲ! ಅಂತೆಯೇ ಹೊರಟು ಒಂದು ಕೋಣೆಯ ಗೋಡೆಯನ್ನೇ ಕೊರೆದುದೂ ಇದೆ, ಕಟ್ಟಿದುದೂ ಇದೆ. ಕೋಣೆಯ ಹೊರಗೆ ಕಲೆಯನ್ನು ಎಳೆದು ತಂದುದೂ ಇದೆ. ಒಟ್ಟಿನಲ್ಲಿ ಆಯಾ ಜಾಗದಲ್ಲಿ ದಕ್ಕುವ ಅನುಭವವನ್ನು ನಾವು ಇಲ್ಲಿ ಕೂತು ಅನುಭವಿಸಲಂತೂ ಸಾಧ್ಯವಿಲ್ಲ.
ನಮ್ಮ ಓಡನಾಟಕ್ಕೆ ಸಿಗುವಂತವುಗಳನ್ನು ಗಮನಿಸೋಣ. ಒಂದು ಮದುವೆ ಸಮಾರಂಭದ ದಿನ, ಚಪ್ಪರ ಶಾಮಿಯಾನ ಎಲ್ಲ ಹಾಕಿ ಆ ಜಾಗವನ್ನೇ ಬದಲಿಸುವುದರಿಂದ ಅಲ್ಲಿನ ವಾತಾವರಣವೂ, ನಮ್ಮ ಭಾವವೂ ಅಂದಿನ ಮಟ್ಟಿಗೆ ಬದಲಾಗುವುದಿಲ್ಲವೇ? ಶವಸಂಸ್ಕಾರದ ದಿನ ಮಾಮೂಲಿ ದಿನದಂತೆ ಮನೆಯ ವಾತಾವರಣವಿರುತ್ತದೆಯೇ? ಜಾತ್ರೆ ದಿನ ದೇವಸ್ಥಾನದಲ್ಲಿ ಭಕ್ತಿ ಭಾವ ಮೂಡೀತೇ!? ನಮ್ಮ ಆಚರಣೆಗಳಲ್ಲಿ ಹಾಸುಹೊಕ್ಕಾಗಿರುವ ಇವೆಲ್ಲವೂ ಆಯಾ ದೇಶಕಾಲಕ್ಕೆ ಹೊಂದಿಕೊಂಡವೇ ಅಲ್ಲವೇ!

ಸಂಗೀತ ಕಛೇರಿಯಿರಬಹುದು, ರಂಗಭೂಮಿ ಮೇಲಿನ ನಾಟಕಗಳಿರಬಹುದು ಆಯಾ ಸಮಯಕ್ಕೆ ನಮ್ಮ ಭಾವಗಳನ್ನು ಬದಲಿಸುವುದೇ ಆಗಿದೆ. ಕತೆಯೋ ಕವನವೋ ಕಾದಂಬರಿಯೋ ಇರುವಂತಹ ಪುಸ್ತಕವೊಂದನ್ನು ತೆರೆದು ಓದುವಾಗಿನ ಅನುಭವ ಮುಚ್ಚಿಟ್ಟ ಮೇಲೆ ಇರದು. ಅದು ಮತ್ತೆಯೂ ಕಾಡಬಹುದು, ಆ ಮೂಲಕ ಏನೇನನ್ನೋ ಧ್ವನಿಸಬಹುದು. ಆದರೆ ನೇರ ಅನುಭವಕ್ಕೆ ದಕ್ಕುವುದು ಆಯಾ ನಿರ್ದಿಷ್ಟ ಸಮಯದಲ್ಲಿ ಮಾತ್ರ. ಹಾಗೆಯೇ, ನಾನಿದನ್ನು ಬರೆದು ಇಲ್ಲಿ ಪ್ರತಿಷ್ಠಾಪಿಸದಿದ್ದರೆ ನಿಮಗೆ ಇಂತಹ ಅನುಭವವಾಗುತ್ತಿತ್ತೇ? ನಿಮ್ಮ ವಾಲಿನ ನಿರ್ದಿಷ್ಟ ಜಾಗವನ್ನು ಬಳಸಿಕೊಂಡ ಬರಹವಲ್ಲವೇ ಇದೂ! ಪಕ್ಕದ ಬರಹದಲ್ಲಿ ಈ ಸಮಸ್ಯೆಗಳೇ ಇಲ್ಲ. ಅಲ್ಲಿ ದಕ್ಕುವ ಅನುಭವವೇ ಬೇರೆ. ಹಾಗಾದರೆ ವೀಡಿಯೋಗಳು? ಸಾವಿರಾರು ಫೊಟೋಗಳು! ಎಲ್ಲವೂ ಆಯಾ ದೇಶಕಾಲಕ್ಕೆ ತಕ್ಕಂತೆ ಬೇರೆ ಬೇರೆ ಅನುಭವ ಕೊಡುವಂತಹವೇ ಆಗಿದೆ.
ಅಯ್ಯೋ! ಹಾಗಾದರೆ ಈ ಇನ್ಸ್ಟಾಲೇಷನ್ ಅಲ್ಲದ್ದು ಯಾವುದು?!
ಇದೆಲ್ಲ ಕಲೆ ಎಂದಾಗುವುದಾದರೆ ಆ ಇನ್ಸ್ಟಾಲೇಷನ್ನೇ ಸರಿಯಿಲ್ಲವೆಂದು ವಾದ ಮಂಡಿಸಬಹುದು. ಅದರಲ್ಲಿ ಸತ್ಯವೂ ಇದೆ, ಕುರುಡುತನವೂ ಇದೆ. ಇವೆಲ್ಲವನ್ನೂ ಕಲೆ ಒಳಗೊಳ್ಳುತ್ತದೆ, ಆದರೆ ಅದೇ ಕಲೆಯಾಗುವುದಿಲ್ಲ. ಇದರ ವ್ಯಾಪಕತೆಯೇ ಇದರ ಪರಿಮಿತಿಯೂ. ಹೇಳುವುದೇ ಕಷ್ಟ. ಕಲಾರಚನೆಯ ಸಂಕಷ್ಟಗಳಂತೂ ಇನ್ನೊಂದು ತೆರನಾದವು. ಹೀಗೆ ಎಲ್ಲವೂ ಕಲೆಯೆಂದಾದ ಮೇಲೆ ಏನನ್ನು ರಚಿಸುವುದು ಬೇಕಲ್ಲ! ಈ ಕಾಲದ ಸಮಸ್ಯೆಯಿದು. ಹಿಂದೆ, ಕಲೆಯ ಕುರಿತಂತೆ ಗೊಂದಲವುಂಟು ಮಾಡುವಷ್ಟು ಅತಿಯಾದ ಸ್ವಾತಂತ್ರ್ಯ ಇದ್ದುದು ಶಿಲಾಯುಗದ ಕಾಲದ ಜನರಿಗೆ ಮಾತ್ರವೇನೋ. ಈಗಂತೂ ಎಲ್ಲವನ್ನೂ ಒಳಗೊಳ್ಳಬಲ್ಲ ಈ ನಿರ್ಗುಣ ಬ್ರಹ್ಮದ ಸ್ತರದಿಂದ ಸಗುಣ ಬ್ರಹ್ಮದ ಸ್ತರಕ್ಕೆ ಇಳಿಯಬೇಕಾದ ಅನಿವಾರ್ಯತೆಯಿದೆ. ಇಲ್ಲದಿದ್ದಲ್ಲಿ ಕಲೆಯೊಂದು ಪ್ರಕಾರವಾಗಿ ಮುಂದುವರಿಯಲು ಸಾಧ್ಯವಿಲ್ಲವೇನೋ. ನಾನು ಹೇಳಿದ ಈ ಮಾತಿಗೆ ತೂಕ ಕಡಿಮೆಯಿದ್ದೀತು. ಅದೇ ಮಾತುಗಳನ್ನು ಶತಾವಧಾನಿ ಡಾ. ರಾ. ಗಣೇಶರೂ ಪ್ರತಿಷ್ಠಾಪನ ಕಲೆಯ ಕುರಿತೇ ಹೇಳಿದ್ದಾರೆಂದು ತಿಳಿದಾಗ ತೂಕ ಹೆಚ್ಚಾದೀತು. ಇಲ್ಲೂ ಬಾಯಿಯಷ್ಟೇ ಬದಲಿದ್ದು.
ಈ ಇನ್ಸ್ಟಾಲೇಷನ್ನನ್ನು ಸ್ವಲ್ಪ ಬೇರೆ ರೀತಿಯಲ್ಲಿ ನೋಡುವ. ಒಂದು ವಸ್ತುವಿನ ಜಾಗ ಬದಲಿಸಿದಾಗ ಅದು ಧ್ವನಿಸುವ ಅರ್ಥ ಬದಲಾಗುತ್ತದೆ ಎಂದು ಮೊದಲೇ ಹೇಳಿ ಆಗಿದೆ. 'ಭೋಜನಪ್ರಿಯ'ಕ್ಕೂ 'ಪ್ರಿಯಭೋಜನ'ಕ್ಕೂ ವ್ಯತ್ಯಾಸವಿದೆ. ಅದೇ ಪದ, ಜಾಗ ಬದಲಿಸಿದ್ದಷ್ಟೆ. ಮನೆಯ ಮುಂದಿನ ತುಳಸಿಗಿಡಕ್ಕೂ ಮನೆಮೂಲೆಯ ತುಳಸಿಗಿಡಕ್ಕೂ ದಕ್ಕುವ ಬೆಲೆ ಬೇರೆಯೇ. ಒಬ್ಬ ವ್ಯಕ್ತಿಯ ಹುದ್ದೆ ಬದಲಾದರೆ ಅದೇ ವ್ಯಕ್ತಿಗೆ ದಕ್ಕುವ ಗೌರವವೂ ಬದಲಾಗುತ್ತದೆ. ಅಂದರೆ, ಆಯಾ ಜಾಗದ ಮಹತ್ವದ ಆಧಾರದಲ್ಲಿ ಅಲ್ಲಿರುವ ವಸ್ತು ಹೊಮ್ಮಿಸುವ ಧ್ವನಿ ಬೇರೆಯಾಗುತ್ತದೆ ಎಂದಾಯ್ತು.
ಪೂಜೆ ಮಾಡಿದ ಕಿರಿಯನ ಕಾಲನ್ನು ಹಿರಿಯರು ಹಿಡಿಯುತ್ತಾರೆ. ಬದಲಾದದ್ದು ಕುಳಿತ ಮಣೆ ಮಾತ್ರ. ಅಡುಗೆ ಮನೆಯಲ್ಲಿಟ್ಟರೆ ಅನ್ನ, ದೇವರ ಮುಂದಿಟ್ಟರೆ ನೈವೇದ್ಯ. ಬದಲಿಸಿದ್ದು ಜಾಗ ಮಾತ್ರ. ನೀರಿಗೆ ತುಳಸಿ ಎಲೆ ಹಾಕಿದರೆ, ಅದು ತೀರ್ಥವಾಗಬಲ್ಲದು. ಶಂಖವನ್ನೋ, ಗರಿಕೆಯಿಂದ ಮಾಡಿದ ಪವಿತ್ರವನ್ನೋ ನೆಲದ ಮೇಲೆ ಇಡುವ ಮೊದಲು, ನೆಲಕ್ಕೆ ನೀರು ತಳೆದು ಒಂದು ಚೌಕ ರಚಿಸಿ, ಆ ಕಲ್ಪನೆಯ ಪೀಠದ ಮೇಲೆ ಅದನ್ನಿಟ್ಟಾಗ ಆ ವಸ್ತುಗಳೂ ದೇವರೇ ಆಗಿ ಬದಲಾಗುತ್ತವೆ. ಎಷ್ಟು ಚೆನ್ನಾಗಿದೆ ಇದನ್ನೆಲ್ಲ ಗಮನಿಸಹೊರಟರೆ! ಪ್ರತಿ ಹೆಜ್ಜೆಗೂ ಕಲೆ ಕಲೆ ಕಲೆ, ಗುರುತಿಸುವ ಕಣ್ಣಿದ್ದರೆ, ಅನುಭವಿಸುವ ಮನಸ್ಸಿದ್ದರೆ.
ಯಾವ ಮಾಧ್ಯಮದಲ್ಲಿ ಕೃತಿರಚನೆಯಾಗಿದೆ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಬಾತ್‌ರೂಮ್ ಸುತ್ತಲಿನ ಗೋಡೆಯನ್ನು ಕಲ್ಲಿನಿಂದ ಕಟ್ಟುವುದರ ಬದಲು ಗಾಜಿನಿಂದ ಕಟ್ಟಿದರೆ ಏನಾದೀತು? ಹಾಗೆಯೇ ಇನ್ಸ್ಟಾಲೇಷನ್‌ಗಳಲ್ಲಿ ಬಳಸುವ ವಸ್ತುಗಳೂ. ಅದೊಂದು ವಿಶುವಲ್ ಮೆಟಾಫರ್ ಕೂಡ. ಕವಿತೆ ಬರೆಯುವಾಗ ಕನ್ನಡಿ ಎಂಬ ಪದ ಪ್ರತಿಬಿಂಬವನ್ನು ಹೇಗೆ ಧ್ವನಿಸಬಲ್ಲದೋ, ಹಾಗೆಯೇ ಇಲ್ಲಿ ಕನ್ನಡಿಯೇ ಬಳಕೆಯಾಗಬಹುದು. ನೇರವಾಗಿ ಅದೇ ವಸ್ತುವನ್ನು ಬಳಸಲ್ಪಟ್ಟಾಗ ಅದು ತನ್ನ ಚರಿತ್ರೆಯನ್ನೂ ಜೊತೆಗೇ ಬಿಚ್ಚಿಡುತ್ತದೆ. ಒಂದು ಮ್ಯೂಸಿಯಂ ಅಲ್ಲಿಟ್ಟ ಮಡಕೆ ಚೂರು ಮೊಹೆಂಜದಾರೋ ಕುರಿತು ಹೇಳಬಲ್ಲುದಾದರೆ, ಇಲ್ಲೂ ಆ ಸಾಧ್ಯತೆಯಿಲ್ಲವೇ! ಪ್ರತಿಯೊಂದು ಕೃತಿಯೂ ಯಾವ ವಸ್ತುವಿನಿಂದ ಮಾಡಲ್ಪಟ್ಟಿದೆ, ಅದೆಲ್ಲಿಂದ ಬಂತು, ಹೇಗೆ ತಯಾರಾಯಿತು, ಅದರಲ್ಲಿರುವ ರಾಸಾಯನಿಕಗಳೇನು, ವಸ್ತುವಿನ ಬಳಕೆ, ಅದರೊಂದಿಗಿನ ನಂಬಿಕೆ, ವಸ್ತುವಿನ ಅರ್ಥ, ತತ್ವ ಇತ್ಯಾದಿ ಇತ್ಯಾದಿಗಳೆಲ್ಲ ಒಂದೊಂದಾಗಿ ಅಥವಾ ಒಟ್ಟಿಗೇ, ನೋಡುವ ಕಣ್ಣಿನ ಮಿತಿಗೆ ತಕ್ಕಂತೆ ಅರ್ಥ ಹೊಮ್ಮಿಸಬಲ್ಲದು.
ಇಷ್ಟೆಲ್ಲ ಆದಮೇಲೆ, ಒಂದು ಕೃತಿಯನ್ನು ಎಲ್ಲಿಟ್ಟು ಪ್ರದರ್ಶಿಸುವುದು ಎಂಬುದೂ ಮುಖ್ಯವೇ ಆಗುತ್ತದೆ. ಕೃತಿಯೊಳಗೆ ಎಂತಹ ಕತೆಯೇ ಇದ್ದರೂ ಹೊರಗಿನ ಪರಿಸರದಿಂದ ಆ ಕೃತಿಯ ಅರ್ಥವೇ ಬದಲಾಗಿಬಿಡಬಹುದು. ಪ್ರತಿ ಕೃತಿಯೂ ಒಂದು ಭೌತಿಕ ವಸ್ತುವೇ. ವಸ್ತುವಾಗಿ ಒಂದರ್ಥ, ಮಾಧ್ಯಮವಾಗಿ ಒಂದರ್ಥ, ಜಾಗದ ದೆಸೆಯಿಂದ ಒಂದರ್ಥ ಹೊಮ್ಮಿಸುವ ಶಕ್ತಿ ಅದಕ್ಕೂ ಇದೆ. ಹಾಗಾದರೆ, ಒಂದು ಕೃತಿರಚನೆ ಮುಗಿಯುವುದು ಯಾವಾಗ? ಮುಗಿಯಿತೆಂದು ಬೇರೆ ಜಾಗದಲ್ಲಿಟ್ಟರೆ, ಬೇರೆ ಕೃತಿಯ ಪಕ್ಕದಲ್ಲಿಟ್ಟರೆ ಅದು ಬೇರೆಯೇ ಆಗಬಲ್ಲದು. ಈ ಆಧಾರದಲ್ಲಿ ಕ್ಯೂರೇಷನ್ ಎಂಬ ಹೊಸ ಅವಕಾಶ ಸೃಷ್ಟಿಯಾಗುತ್ತದೆ. ಸಂಪಾದಕರ ಕೆಲಸವೇ. ಆದರೂ ಆತನೂ ಒಂದು ಕೃತಿಯನ್ನೇ ರಚಿಸಬೇಕು. ಒಟ್ಟಿನಲ್ಲಿ, ಹೀಗೆ ಎಲ್ಲವೂ ಮತ್ತೆ ಮತ್ತೆ ಇನ್ನೊಂದು ರೂಪದ ಕೃತಿಯಾಗುತ್ತಾನೇ ಇರುತ್ತದೆ. ಇನ್ನೊಂದು ಕೃತಿಯ ಭಾಗವಾಗುತ್ತಾನೇ ಇರುತ್ತದೆ. ಅವನ್ನು ಗಮನಿಸಬೇಕಾದ್ದಷ್ಟೆ ನಮ್ಮ ಕೆಲಸ. ನಾವೂ ಕೃತಿಯೊಳಗೇ ಸೇರಿ, ಎಲ್ಲವೂ ಕೃತಿಯೇ ಆಗಿ, ನಾವೇ ಕೃತಿಯೆಂಬುದು ಅರ್ಥವಾದಾಗ ಅದ್ವೈತಕ್ಕೊಂದು ಪ್ರದಕ್ಷಿಣೆ ಹಾಕಿದ ಹಾಗಾದೀತು.
ಈ ಪ್ರತಿಷ್ಠಾಪನ ಕಲೆಯ ವ್ಯಾಪಕತೆಯನ್ನು ಪದಗಳಲ್ಲಿ ಹಿಡಿವುದು ಕಷ್ಟ. ಯಾಕೆಂದರೆ, ಈ ಪದಗಳೂ ಇನ್ಸ್ಟಾಲೇಷನ್ನೇ.



