top of page

ಮಾಡರ್ನಿಸಮ್ : ಇಂದಿನ ಕಲಾಜಗತ್ತಿನ ಮೊದಲ ಅಧ್ಯಾಯ

  • Writer: sushrutha d
    sushrutha d
  • Jun 22, 2021
  • 3 min read

Updated: Feb 9, 2025

ಕಲೆಗೊಂದು ಭೂಮಿಕೆ - 1 : ಮಾಡರ್ನಿಸಮ್ಮಿನ ಪಿತಾಮಹ ಎಂದು ಕರೆಯುವುದು ಪೌಲ್ ಸಿಜಾನ್ ಎಂಬ ಒಬ್ಬ ವ್ಯಕ್ತಿಯನ್ನು. ಅದರ ಮೊದಲಿನ ಕಲೆಗಳು ಹೆಚ್ಚಿನವೂ ರಿಯಲಿಸ್ಟಿಕ್ ಮಾದರಿಯವು. ರಿನೈಸೆನ್ಸ್ ನಂತರದ ಮ್ಯಾನರಿಸಂ, ರೊಮಾಂಟಿಸಿಸಂ, ರಿಯಲಿಸಂ ಎಲ್ಲದರಲ್ಲೂ ಕಾಣುವ ಮುಖ್ಯ ಅಂಶ ಅವು ನೈಜವಾಗಿದ್ದಂತೆ ಕಾಣಬೇಕೆನ್ನೆವುದು. ಅದನ್ನು ನಮ್ಮ ಸಾಮಾನ್ಯ ಜನರೂ ಮೆಚ್ಚುತ್ತಾರೆ. ಪಟ ಪಟ ತೆಗ್ದಂಗೆ ಬರ್ದಾವ್ನೆ ಅಂತಿರ್ತಾರಲ್ಲ, ಅಂತವಿವು. ಸಮಸ್ಯೆ, ಮೆಚ್ಚುವುದು ಅದನ್ನು ಮಾತ್ರವಾದ ಕಾರಣ.

Paul Cezanne moving beyond realistic expressions, A modern olympia, 1970
Paul Cezanne moving beyond realistic expressions, A modern olympia, 1970

ಆಗ ಕ್ಯಾಮರಾ ಬಂತು. ಪಟ ಪಟ ಅಂತ ಚಿತ್ರ ಬರುವಾಗ, ಗಂಟೆಗಟ್ಟಲೆ ಕುಳಿತು ಚಿತ್ರ ಬಿಡಿಸುವುದು/ಬಿಡಿಸಿಕೊಳ್ಳುವುದರಲ್ಲಿ ಆಸಕ್ತಿ ಕಡಿಮೆಯಾಯಿತು. ಆಗಿನವರಿಗೆ ಇದೊಂದು ಎಕ್ಸಿಸ್ಟೆನ್ಶಿಯಲ್ ಕ್ರೈಸಿಸ್ ಸಮಯ. ರಿಯಲಿಸ್ಟಿಕ್ ಆಗಿ ಚಿತ್ರ ರಚಿಸಬೇಕಾದ ಅನಿವಾರ್ಯತೆ ಹೋದಂತೆ, ಜನರು ಹೊಸ ದಾರಿಗೆ ಹೊರಳುವ ರೀತಿಯನ್ನು ಇಲ್ಲಿ ನಾವು ಗಮನಿಸಬೇಕು. ಬರಿಯ ನೆನಪಿಟ್ಟುಕೊಳ್ಳಲಲ್ಲ, ನಮ್ಮ ಕಾಲದಲ್ಲಿ ನಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು.

 

ರಿಯಲಿಸ್ಟಿಕ್ನಿಂದ ಬೇಸತ್ತು ಎದುರೇನಿದೆಯೋ ಅದರ ಇಂಪ್ರೆಷನ್ ಮೂಡಿಸಿದರೆ ಸಾಕಾಗುತ್ತದೆ ಮತ್ತು ಅದು ಹೆಚ್ಚು ಆಸಕ್ತಿದಾಯಕವೂ ಆಗಿ ಕಾಣಿಸುತ್ತದೆ ಎನ್ನುವ ಕಾಲ ಇಂಪ್ರೆಷನಿಸಮ್. ಈಗಿನ ಜನರು ಹುಚ್ಚೆದ್ದು ಆರಾಧಿಸುವ ವ್ಯಾನ್ಗೋ ಬರುವುದು ಇಲ್ಲೇ ಆಸುಪಾಸಿನಲ್ಲಿ. ನಾವು ನೂರೈವತ್ತು ವರ್ಷ ಹಿಂದೆಯೇ ಉಳಿದಿದ್ದೇವೆನ್ನಲು ಇದೊಂದು ಮಾಪಕ! ಬಿಡಿ, ಇಲ್ಲಿ ಆದದ್ದೇನು? ಫೋಟೋದಲ್ಲಿ ತೆಗೆಯಲಾಗದಂತಹ ಚಿತ್ರಗಳು ಶುರುವಾದ್ದು. ಒಂದು ರೀತಿಯಲ್ಲಿ ಮೊದಲಿನ ರೊಮ್ಯಾಂಟಿಸಿಸಂ ಅಲ್ಲೂ ಮೋಡಗಳ ಮೇಲೆ ಹಾರುವ ದೇವತೆಗಳು ಫೊಟೋಕ್ಕೆ ಸಿಗುವಂತವುಗಳಲ್ಲ. ಆದರೆ, ನೋಡಲು ಅವು ಫೊಟೋಕ್ಕೆ ಸಿಕ್ಕ ಹಾಗಿದ್ದವು. ಈಗಿನವು, ಅಂದರೆ ಇಂಪ್ರೆಷನಿಸಂ ಕಾಲದವು, ಫೋಟೋಕ್ಕೆ ಸಿಗದಂತವು, ಸಿಕ್ಕಿದಂತೆ ಕಾಣದಂತವು. ಮುಂದೆ ಹೋಗುವ.

 

Vincent VanGogh, Starry Night, 1889
Vincent VanGogh, Starry Night, 1889

ನಮ್ಮ ಮೆಚ್ಚಿನ ಪಿಕಾಸೋ ಮತ್ತು ಹೆನ್ರಿ ಮತಿಸ್ ಮಾಡರ್ನಿಸಮ್ ಅನ್ನು ನಿಜವಾಗಿ ಗಣನೆಗೆ ತೆಗೆದುಕೊಳ್ಳುವಂತೆ ಮಾಡಿದ್ದು. ಇವರು ಮಾಡರ್ನಿಸಮ್ ಯಾವ ದಾರಿಯಲ್ಲಿ ಮುಂದುವರಿಯಬಹುದೆಂದು ತೋರಿಸಿಕೊಟ್ಟವರು. ಈ ಕಾಲದಿಂದ ಚಿತ್ರಗಳು ನೋಡಲು ಅಂದವಾಗಿ ಕಾಣಿಸುವುದಿಲ್ಲ. ಆದರೆ, ಅವರ ತತ್ವಗಳು, ಪ್ರಯತ್ನಗಳು ನಿಜವಾಗಿಯೂ ಮೆಚ್ಚುವಂತದ್ದು. ಇನ್ನು ಮುಂದಿನ ಕಲೆಗಳನ್ನು ನಾವು 'ನೋಡುವ ದೃಷ್ಟಿಕೋನ'ಕ್ಕೆ ಮಾತ್ರ ಸೀಮಿತವಾಗಿಸದೆ ಇತರ ದೃಷ್ಟಿಕೋನಗಳಿಂದ ನೋಡಬೇಕಾಗುತ್ತದೆ. ಆಗಲೇ ಅದನ್ನು 'ನೋಡಿ' ಮೆಚ್ಚಲು ಸಾಧ್ಯ.

 

ಪಿಕಾಸೋ ಮಾಡಿದ್ದೇನೆಂದರೆ, ಒಂದು ವಸ್ತುವನ್ನು ಒಂದೇ ಸಮಯದಲ್ಲಿ ಎಲ್ಲಾ ದಿಕ್ಕಿನಿಂದಲೂ ನೋಡಿದರೆ ಹೇಗೆ ಕಾಣಿಸಬಹುದೆಂದು ಚಿತ್ರಿಸತೊಡಗಿದ್ದು. ಹಲವರು ಈ ಅಸಾಧಾರಣ ಪ್ರಯತ್ನ ಪಟ್ಟುದರಿಂದ ಆ ಸಮಯದ ಚಿತ್ರಗಳನ್ನು ಕ್ಯೂಬಿಸಮ್ ಎಂದು ಕರೆಯಲಾಯ್ತು. ಕ್ಯೂಬ್ಗೆ ಆರು ಬದಿ ಇರುತ್ತದೆ ಎಂಬುದು ಮುಖ್ಯ.

Pablo Picasso, Still life, 1918
Pablo Picasso, Still life, 1918

ಆದರೆ ಈಗ ಕ್ಯೂಬಿಸಮ್ ಹ್ಯಾಶ್ಟ್ಯಾಗ್ನಡಿ ಚಿತ್ರ ಬಿಡಿಸುವವರು, ಅದರ ತತ್ವಗಳನ್ನರಿಯದೇ ಕೇವಲ ನೋಟಕ್ಕೆ ಕಾಣುವ ಶೈಲಿಯ ಅನುಕರಣೆ ಮಾಡುವರಷ್ಟೆ. ನಿಜವಾಗಿಯೂ ಒಂದು ವಸ್ತುವನ್ನು ನೋಡುತ್ತಾ ಅದರ ಹಿಂಬದಿಯಿಂದ ಹೇಗೆ ಕಾಣಬಹುದು, ಒಟ್ಟಿಗೆ ಏಕಕಾಲಕ್ಕೆ ಎಡಬದಿ, ಬಲಬದಿಯಿಂದ ಹೇಗೆ ಕಾಣಬಹುದು ಎಂದು ಯೋಚಿಸುವವರೂ ಅಲ್ಲ. ಯಾವ ಭಾಗವನ್ನು ಯಾವ ಬದಿಯಿಂದ ಕಾಣುವಂತೆ ಮಾಡಬೇಕು ಎನ್ನುವುದೂ ಇಲ್ಲಿನ ಮುಖ್ಯ ಪ್ರಶ್ನೆಯೇ. ಅದನ್ನೆಲ್ಲ ಅರ್ಥ ಮಾಡಿಕೊಂಡರೆ, ನೋಡಲು ಚಿತ್ರ ವಕ್ರವಕ್ರವಾಗಿ ಕಂಡರೂ, ಹೆಚ್ಚು ಕಡಿಮೆ ಅಸಾಧ್ಯವಾದುದಕ್ಕೆ ಒಂದು ರೂಪ ಕೊಟ್ಟ ಪಿಕಾಸೋನ ಮಹತ್ವ ತಿಳಿಯುತ್ತದೆ. ಅದನ್ನು ಪಿಕಾಸೋ ನಿಭಾಯಿಸಿದಂತೆ ನಮಗೆ ನಿಭಾಯಿಸುವುದು ಇಂದಿಗೂ ಕಷ್ಟ.

 

ಇನ್ನೊಬ್ಬ ಹೆನ್ರಿ ಮತಿಸ್. ಇವನ ಪರಿಚಯವೇ ಕಲಾಪ್ರಪಂಚದ ಹೊರಗೆ ಯಾರಿಗೂ ಇಲ್ಲ. ಈತನನ್ನು ಹೊಗಳಲು ನನಗಂತೂ ಸಾಕಷ್ಟು ಕಾರಣಗಳಿವೆ. ಪಿಕಾಸೋವಿನ ಸಮಕಾಲೀನನಾದ ಈತ ಅವರ ತಾತ್ವಿಕ ವೈರತ್ವದ ಕಾರಣವಾಗಿಯೇ ಸ್ನೇಹಿತರಾದವರು.

 

ಈತನನ್ನು ಎಲ್ಲರೂ ಆತನ ಬಣ್ಣದ ಬಳಕೆಗಾಗಿ ಮೆಚ್ಚುತ್ತಾರಾದರೂ ನನಗೆ ಆತ ತನ್ನ ಕುತೂಹಲವನ್ನು ಕೊನೆಯ ತನಕವೂ ಬಿಡದ್ದಕ್ಕೆ ಮೆಚ್ಚುಗೆಯಾಗುತ್ತಾನೆ. ಸ್ವಚ್ಛ ಬಣ್ಣ ಯಾವುದು ಎಂಬುದು ಇವನನ್ನು ತಲೆಕೆಳಗು ಮಾಡಿದ ಪ್ರಶ್ನೆ. ಇಡೀ ಜೀವಮಾನದುದ್ದಕ್ಕೂ ಈತ ಬೇರೆ ಬೇರೆ ರೀತಿಯಲ್ಲಿ ತನ್ನ ಕೃತಿಗಳ ಮೂಲಕ ಉತ್ತರ ಕಂಡುಕೊಳ್ಳಲು ಹೊರಡುತ್ತಾನೆ. ಸಾಮಾನ್ಯ ವಸ್ತುಗಳನ್ನೇ ಮತ್ತೆ ಮತ್ತೆ ಚಿತ್ರಿಸುತ್ತಾ, ಬೇರೆ ಬೇರೆ ಬಣ್ಣಗಳಲ್ಲಿ ಅದದನ್ನೇ ಮಾಡುತ್ತಾ, ಆ ಮೂಲಕ ಏನೇನು ಸಾಧ್ಯವೆಂದು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾ ಹೋಗುತ್ತಾನೆ. ಬೇರೆ ಯಾವುದನ್ನೂ ಲೆಕ್ಕಿಸದೆ, ತನ್ನ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಭರದಲ್ಲಿ ಈತ ಮಾಡಿದ ಅಸಂಖ್ಯಾತ ಪ್ರಯತ್ನಗಳು ಇಂದಿಗೂ ಆಸಕ್ತಿ ಹುಟ್ಟಿಸುತ್ತವೆ. ನಾಲ್ಕೈದು ತಲೆಮಾರು ಕಳೆದ ಮೇಲೂ ಅವನ ಪ್ರಭಾವ ಇಂದಿನ ಹಲವರ ಕೃತಿಗಳಲ್ಲಿಯೂ ಕಾಣಿಸುತ್ತದೆ. ಅಂದರೆ, ಅವನು ತನ್ನ ಕೃತಿಗಳ ಮೂಲಕ ಹಾಕಿಕೊಟ್ಟ ದಾರಿಗಳಲ್ಲಿ ಪಯಣಿಸಿ ಇನ್ನೂ ಮುಗಿಲಿಲ್ಲ ಅಂತ.


Henri Matisse, Harmony in Red, 1908
Henri Matisse, Harmony in Red, 1908

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು, ಒಂದು ಕೃತಿಯನ್ನು ಚಂದ ಕಾಣಬೇಕೆಂದು ಮಾಡುವುದು ಬಿಟ್ಟು, ಒಂದು ಜೀವನದಲ್ಲಿ ಗುರಿ ಸಾಧಿಸುವ ಸಲುವಾಗಿ ಕೃತಿಗಳನ್ನು ಮಾಡುತ್ತಾ ಹೋದದ್ದು. ಆ ರೀತಿಯಲ್ಲಿ ಕಲಾರಚನೆಯ ಉದ್ದೇಶವೇ ಬದಲಾದದ್ದು. ಇಂತಹ ನಡವಳಿಕೆಗಳಿಂದ ನಿಜವಾಗಿಯೂ 'ಚಂದ'ಕ್ಕೆ ಕಾರಣವಾಗುವುದು ಯಾವುದು ಎಂಬ ಪ್ರಶ್ನೆಗಳೂ, ಅದಕ್ಕೆ ತಕ್ಕಂತೆ ಹಲವಾರು ಉತ್ತರಗಳೂ, ಅದಕ್ಕೆ ಬೇಕಾದಷ್ಟು 'ಇಸಂ'ಗಳೂ ಹುಟ್ಟಿಕೊಂಡವು.

 

ಮುಖ್ಯವಾದವು ಅಬ್ಸ್ಟ್ರಾಕ್ಷನ್, ಎಕ್ಸ್ಪ್ರೆಷನಿಸಮ್ ಮತ್ತು ಸರಿಯಲಿಸಂ.

 

ಯಾವ ವಿಷಯವಸ್ತುವೂ ಇಲ್ಲದೆ ಬರಿಯ ಮುಲಭೂತ ಪ್ರಮಾಣಗಳಾದ ಗೆರೆ, ಆಕಾರ, ಬಣ್ಣ, ಟೆಕ್ಸ್ಚರ್ ಇತ್ಯಾದಿಗಳ ಸಂಯೋಜನೆಯಲ್ಲೇ ನಿಜವಾದ ಸೌಂದರ್ಯವಿದೆ ಎನ್ನುವ ವಾದದಿಂದ ಅಬ್ಸ್ಟ್ರಾಕ್ಷನ್ ಹುಟ್ಟಿಕೊಂಡದ್ದು. ಇದರೊಳಗೇ ಹಲವಾರು ಕವಲುಗಳು ಇವೆಯಾದರೂ, ಇಲ್ಲಿ ಸುಲಭವಾಗಿ ಹೇಳಬೇಕಿರುವುದರಿಂದ ಹೆಚ್ಚು ಬೇಡ.

Wassily Kandinsky, abstraction
Wassily Kandinsky, abstraction

ತನ್ನ ಭಾವನೆಗಳನ್ನು ಯಾವ ಯೋಚನೆಯೂ ಇಲ್ಲದೆ ಹೊರಹಾಕುವುದರಲ್ಲಿ ಸೌಂದರ್ಯವಿದೆ ಎನ್ನುವ ವಾದದಿಂದ ಎಕ್ಸ್ಪ್ರೆಷನಿಸಂ ಹುಟ್ಟಿಕೊಂಡಿತು. ತಾನು ಯಾವ ಭಾವನೆಯಲ್ಲಿದ್ದೇನೆಯೋ ಅದನ್ನು ನೋಡುಗರಲ್ಲೂ ಮೂಡಿಸಲಾಗುತ್ತದೋ ಎನ್ನುವ ಪ್ರಯತ್ನ ನಡೆಯಿತೆನ್ನಬಹುದು. ಇಂತಹ ಕೃತಿಯನ್ನು ನೋಡುತ್ತಾ ಅದನ್ನು ರಚಿಸಲು ಏನೇನು ಮಾಡಿರಬಹುದು ಎಂದು ನಿಧಾನವಾಗಿ ಗುರುತಿಸುವುದರಲ್ಲಿ ಸೌಂದರ್ಯ ಅಡಗಿದೆ. ಬರಿಯ ಕಣ್ಣಿಗೆ ಅಸಹ್ಯವೆನಿಸುವಷ್ಟು ಎರಚಾಟಗಳೂ ಇಲ್ಲಿ ನಡೆದಿದೆ.

Ernst Ludwig Kirchner, Berlin Street Scene, 1913
Ernst Ludwig Kirchner, Berlin Street Scene, 1913

ಸ'ರ್ರಿಯಲಿಸಂ' ಪ್ರಕಾರದಲ್ಲಿ ನೈಜವಲ್ಲದನ್ನು ನೈಜವಾಗಿ ಕಾಣುವಂತೆ ಚಿತ್ರಿಸುವ ಪ್ರಯತ್ನ ನಡೆಯಿತು. ಕಲೆಯ ಸತ್ಯಕ್ಕೂ ನಿಜ ಜೀವನದ ಸತ್ಯಕ್ಕೂ ವ್ಯತ್ಯಾಸವಿದೆ ಎಂಬ ಆಧಾರದಲ್ಲಿ ನಡೆದ ಕಲೆಗಳು ಇವು. ಉದಾಹರಣೆಗೆ, ಜಿಂಕೆ ಸಸ್ಯಾಹಾರಿ ಎನ್ನುವುದು ನಮಗೆಲ್ಲರಿಗೂ ಗೊತ್ತಿದ್ದರೂ ಕಲೆಯೊಳಗೆ ಜಿಂಕೆ ಹುಲಿಯನ್ನು ತಿನ್ನುತ್ತಿರಬಹುದು. ನಮ್ಮ ಕನಸುಗಳಂತೆ ನಿಜವಾಗಿ ಸಾಧ್ಯವಿಲ್ಲದವುಗಳಲ್ಲಿ ಸುಖವಿದೆ ಎನ್ನುವ ವಾದ ಇದರದ್ದು. 'ಮೀಸೆ ಮನುಷ್ಯ' ಸಲ್ವಾದೋರ್ ದಾಲಿ, ರೆನೆ ಮಗ್ರಿಟೆ ಮುಂತಾದ ಪ್ರಮುಖರ ಕೋಟೆ ಇದು.

Giorgio de Chirico, The Song of Love, 1914
Giorgio de Chirico, The Song of Love, 1914

ಈ ಸಮಯಕ್ಕಾಗಲೇ ಸಿಗ್ಮಂಡ್ ಫ್ರಾಯ್ಡ್ ಎಲ್ಲ ಬಂದು ಮನಶ್ಶಾಸ್ತ್ರದಲ್ಲಿ ಹಾಹಾಕಾರ ಎಬ್ಬಿಸಿದ್ದರು. ಕನಸು, ಯೋಚನೆಯ ರೀತಿ ಮುಂತಾದವು ಬಯಲಾಗತೊಡಗಿದವು. ವಿಜ್ಞಾನದ ಪ್ರಗತಿಯೂ ಮುಂದುವರಿದು, ಬಣ್ಣ, ತರಂಗ, ವೇವ್ಲೆಂತ್ ಮುಂತಾದವನ್ನು ವಿವರಿಸಲಾಯ್ತು. ಇವುಗಳೆಲ್ಲ ಒಂದಕ್ಕೊಂದು ಬೆರೆತು, ಒಂದರಿಂದ ಒಂದು ಸ್ಫೂರ್ತಿ ಪಡೆದು, ಒಂದೊಂದು 'ಇಸಂ'ಗಳೂ ಒಂದನ್ನೊಂದು ಪ್ರಚೋದಿಸುತ್ತಾ ಕಲೆಯ ಸಾಧ್ಯತೆಗಳನ್ನು ಬಿಚ್ಚಿಡುತ್ತಾ ಹೋದವು.

 

ವಾಸಿಲಿ ಕಂಡಿನ್ಸ್ಕಿ ಎಂಬಾತ ಮ್ಯೂಸಿಕ್ ಅನ್ನು ಕಲೆಗೆ ಅಳವಡಿಸಲಾಗುತ್ತಾ ಪ್ರಯತ್ನಿಸಿದ. ಜಾಕ್ಸನ್ ಪೊಲಾಕ್ ಎನ್ನುವಾತ ಕ್ಯಾನ್ವಾಸ್ನ ಮೇಲೆಯೇ ಓಡಾಡುತ್ತಾ ಬ್ರಶ್ಗಳಿಂದ ಮುಟ್ಟದೆಯೇ, ಬಣ್ಣಗಳನ್ನು ಇಳಿಯಬಿಡುತ್ತಾ ಆ್ಯಕ್ಷನ್ ಪೇಯಿಂಟಿಂಗ್ ಎನ್ನುವ ಒಂದು ಪ್ರಭೇದವನ್ನೇ ಹುಟ್ಟುಹಾಕಿದ. ಪಿಯೆಟ್ ಮಾಂಡ್ರಿಯಾನ್ ಬರಿಯ ಚೌಕಗಳನ್ನು ಅದರ ಗಾತ್ರಗಳನ್ನು ಹಿರಿದು ಕಿರಿದು ಮಾಡುತ್ತಾ ಅದಕ್ಕೆ ಡೈರೆಕ್ಟ್ ಬಣ್ಣಗಳನ್ನು ತುಂಬುತ್ತಾ ಬ್ಯಾಲೆನ್ಸ್ ಮಾಡುವ ಪ್ರಯತ್ನದಲ್ಲಿ ತೊಡಗಿದ. ಮಾರ್ಕ್ ರುಥರ್ಫೋರ್ಡ್ ರೋತ್ಕೋ ತನ್ನ ಬೇಸರವನ್ನೇ ಬರಿಯ ಬಣ್ಣಗಳಿಂದ ಅಭಿವ್ಯಕ್ತಿಸಹೊರಟ. ಇಂತಹ ಸಮಯದಲ್ಲಿಯೇ ಮಹಾಯುದ್ಧ ನಡೆದದ್ದು. ನಂತರದಲ್ಲಿ, ಜನರ ಮನಸ್ಥಿತಿಯಲ್ಲಿ ಒಂದು ರೀತಿಯ ರೆಬೆಲಿಸಂ ಶುರುವಾಯ್ತು.


Wassily Kandinsky's music
Wassily Kandinsky's music
Jackson Pollock's drip paintings, action painting
Jackson Pollock's drip paintings, action painting
Piet Mondrian's squares
Piet Mondrian's squares
Mark Rothko's feeling
Mark Rothko's feeling

ಇಲ್ಲಿಂದ ನಂತರವಂತೂ ಭಯಂಕರ ಬದಲಾವಣೆ. ನಾವೀಗ ನಿಂತಿರುವುದು ಅರ್ಥವಾಗದ ಕಲೆಗಳ ಉಗಮಸ್ಥಾನದಲ್ಲಿ.

bottom of page