"ಇದನ್ನು ಕಾನ್ಸೆಪ್ಚುವಲ್ ಆರ್ಟ್ ಎನ್ನುತ್ತಾರೆ"
- sushrutha d
- Jan 2, 2023
- 4 min read
Updated: Sep 22, 2024
ಕಲೆಗೊಂದು ಭೂಮಿಕೆ 12 : ಒಂದಷ್ಟು ವರ್ಷಗಳ ಹಿಂದೆ, ಜೋಸೆಫ್ ಕೊಸುತ್'ರ 'one and three chairs' ಮೊದಲ ಬಾರಿಗೆ ಕಲೆಯ ಶಕ್ತಿಯನ್ನು ನನಗೆ ಪರಿಚಯಿಸಿತೆಂದರೆ ತಪ್ಪಾಗದು. ಕಲೆಯೆಂದರೆ ಅತ್ತ ಇತ್ತ ನೋಡಿ ಚಿತ್ರ ಬರೆಯುವುದು ಅಂದುಕೊಂಡಿದ್ದ ನನಗೆ ಬ್ರಶ್ ಅನ್ನು ಒಮ್ಮೆಯೂ ನೀರಲ್ಲಿ ಅದ್ದದೆ ಅಥವಾ ಪೆನ್ಸಿಲ್ ಅನ್ನು ಒಮ್ಮೆಯೂ ಚೂಪು ಮಾಡದೆ ಮಾಡಿರುವ ಈ ಕೃತಿಯನ್ನು ಕಲೆಯೆಂದು ಒಪ್ಪಿಕೊಳ್ಳುವುದೇ ತ್ರಾಸದಾಯಕವಾಗಿತ್ತು. ಅದರ ಮೇಲಿಂದ ಇದನ್ನು ಯಾರು ಬೇಕಿದ್ರೂ ಮಾಡಬಹುದು. ಒಂದು ಕುರ್ಚಿ, ಪಕ್ಕದಲ್ಲಿ ಅದರ ಫೋಟೋಗ್ರಾಫ್ ಮತ್ತು ಯಾವುದೋ ಡಿಕ್ಷನರಿಯಲ್ಲಿನ ಕುರ್ಚಿಯ ಕುರಿತಾದ ವ್ಯಾಖ್ಯೆ ನೇತುಹಾಕಲು ಗೋಡೆಗೆ ಮೊಳೆ ಹೊಡೆಯಲು ಗೊತ್ತಿದ್ದವರು ಸಾಕೆಂದು ಮೇಲ್ನೋಟಕ್ಕೆ ಅನ್ನಿಸಿದರೂ, ಮನಸ್ಸಿನ ಒಳಗೆ ಯಾಕೆ ಇದು ಕಲೆ, ಹೇಗೆ ಇದು ಕಲೆ ಎಂಬಂತಹ ಪ್ರಶ್ನೆಗಳು ಬೆನ್ನುಹತ್ತಿತ್ತು.
ಕುರ್ಚಿಯೆಂದರೆ ಏನು? ಕುಳಿತುಕೊಳ್ಳಲು ಬಳಸುವ ಒಂದು ಸಾಧನ ಎಂದು ಸಾಧಾರಣವಾಗಿ ನಾವೆಲ್ಲ ಅರ್ಥ ಮಾಡಿಕೊಳ್ಳಬಹುದು. ಹಾಗೆಂದು ಯಾರೋ ಒಬ್ಬ ಬಂದು ಫೋಟೋ ತೋರಿಸಿ ಇದೇನೆಂದು ಕೇಳಿದರೆ, ಖಂಡಿತವಾಗಿಯೂ ಎರಡು ಸೆಕೆಂಡೂ ಯೋಚನೆ ಮಾಡದೆ ಕುರ್ಚಿ ಎಂದುಬಿಡುತ್ತೇವೆ. ಅದರಲ್ಲಿ ಕೂರಲು ಸಾಧ್ಯವಾ ಎಂದಲ್ಲ. ಅಕಸ್ಮಾತ್ ಕೂರಲು ಸಾಧ್ಯವಾಗುವ ಸಾಧನವೇ ಕುರ್ಚಿ ಎನ್ನುವುದಾದರೆ, ಅದರ ಪಟವನ್ನು ಕುರ್ಚಿಯೆನ್ನುವುದು ಎಷ್ಟು ಸರಿ?!
ಹಾಗಾದರೆ ಮತ್ತೊಮ್ಮೆ, ಕುರ್ಚಿ ಎಂದರೇನು?! ಕುಳಿತುಕೊಳ್ಳಬಹುದಾದ ಸಾಧನದಂತೆ ಕಾಣುವ ವಸ್ತು ಎಂದುಕೊಳ್ಳುವ. ನಿಮಗೂ ಒಪ್ಪಿಗೆಯಾದಲ್ಲಿ ಮುಂದೆ ಹೋಗುವ.
ನನಗೆ Sesquipedalian ಅಂದರೆ ಏನೆಂದು ಗೊತ್ತಿಲ್ಲ. ನೀವೂ ಇಂಗ್ಲಿಷ್ ಅರಿದು ಕುಡಿದವರಲ್ಲದಿದ್ದರೆ ಗೊತ್ತಿರುವುದಿಲ್ಲ. ಅಂತಹ ಪದದ ಅರ್ಥ ಬೇಕಾದಾಗ ನಾವು ಡಿಕ್ಷನರಿಯನ್ನೋ ಗೂಗಲನ್ನೋ ಕೇಳಿ "ಉದ್ದ" ಎಂದು ತಿಳಿದುಕೊಳ್ಳಬೇಕಾಗುತ್ತದೆ. ಹಾಗೆಯೇ 'ಕುರ್ಚಿ' ಎಂದರೆ ಗೊತ್ತಿಲ್ಲದಾತ ಡಿಕ್ಷನರಿಯಲ್ಲಿ ಬರೆದದ್ದನ್ನು ಕುರ್ಚಿ ಎಂದುಕೊಳ್ಳುತ್ತಾನೆ. ಅಲ್ಲಿ ಸಾಲಾಗಿ ಬರೆದಿರುವ ಪದಗಳು ಕುಳಿತುಕೊಳ್ಳಲು ಬಳಸುವ ಯಾವ ಸಾಧನದಂತೆಯೂ ಕಾಣುತ್ತಿಲ್ಲ. ಮತ್ತೊಮ್ಮೆ ತಪ್ಪಾ! ಎಲಾ ಇದ್ರ! ನಾವು ಹುಟ್ಟಿದಾಗಿಂದ ನೋಡ್ತಿರೋ, ಹಾರಿ ಬಿದ್ದಿರೋ ಕುರ್ಚಿ ಅಂದ್ರೆ ಏನು ಅಂತನೇ ಗೊತ್ತಿಲ್ಲದಂತೆ ಆಯ್ತಾ ಹೇಗೆ!
ಕುರ್ಚಿ ಎಂದರೆ ಏನೆಂದು ಹೇಳಲಾಗದ ನಾವು ಇನ್ನೆಷ್ಟು ತಿಳಿದಿರಬಹುದು? ಮೇಜು ಎಂದರೇನು? ನೀರು ಎಂದರೆ? ನಾವು ತಿಳಿದುಕೊಂಡದ್ದಾದರೂ ಏನು!? ಇದು ಆಗುವ ಹೋಗುವ ಕೆಲಸ ಅಲ್ವಾಂತ. ಮೂರನ್ನೂ ಕುರ್ಚಿ ಎನ್ನಬಹುದೋ? ಅದು ಸರಿಯಾಗ್ಲಿಕ್ಕಿಲ್ಲ. ಕುಳಿತುಕೊಳ್ಳಲು ಸಾಧ್ಯವಾಗದ್ದನ್ನೂ ಕುರ್ಚಿ ಎಂದೊಪ್ಪಿಕೊಳ್ಳುವುದು ಹೇಗೆ!? ಥೋ ನಮ್ಮ ಹಣೆಬರಹವೇ!
ಲುಡ್ವಿಗ್ ವಿಟ್ಗೆನ್‌ಸ್ಟೈನನು ಭಾಷೆಯನ್ನು ಹಿಂಜಿ ಹಿಂಜಿ ವರ್ಷಾನುಗಟ್ಟಲೆ ಬರೆದ ತತ್ವಗಳ ಸಾರ ಬರಿಯ ಒಂದೋ/ಮೂರೋ ಕುರ್ಚಿಯ ಮೂಲಕ ಮೂರು ಮತ್ತೊಂದು ನಿಮಿಷದಲ್ಲಿ ಧ್ವನಿಸುವಂತಾದರೆ...ಜನರು ತಿಳಿದಿದ್ದೇವೆ ಅಂದುಕೊಂಡ ವಿಷಯಗಳನ್ನು ಇನ್ನೊಮ್ಮೆ ನೋಡಪ್ಪಾ ಎಂದು ನಯವಾಗಿ ಹೇಳುವಂತಾದರೆ...ಅದು ತಲೆಯೊಳಗೆ ಹೋದವರು ತಮ್ಮ ಮತ್ತು ತಮ್ಮ ಯೋಚನೆಯ ಕುರಿತು ಹೊಸದೃಷ್ಟಿಕೋನ ಬೆಳೆಸಿಕೊಳ್ಳಲು ಸಾಧ್ಯವಾಗುವಂತಾದರೆ...ಅದು ನೋಡಲು ಚೆನ್ನಾಗಿದ್ದರೂ ಇಲ್ಲದಿದ್ದರೂ ಅದು ಕಲೆಯೇ ಅಲ್ಲವೇ?
ಅಯ್ಯೋ..ಅದಿನ್ನೂ ಕಷ್ಟದ ಪ್ರಶ್ನೆ. ಮೊದಲು ಕುರ್ಚಿ ಯಾವುದು ಹೇಳಿಯಪ್ಪಾ :)

Joseph Kosuth. One and three chairs. 1965 | MOMA
ಕಲೆಗೊಂದು ಭೂಮಿಕೆ 13 : ಯಾವುದನ್ನು "ಕುರ್ಚಿ" ಎನ್ನಬಹುದು ಎಂದು ಪ್ರಶ್ನೆ ಕೇಳಿದ್ದನ್ನು ಮುಂದುವರೆಸಬೇಕಾದ್ದು ನೋಡುಗನೊಬ್ಬನ ಜವಾಬ್ದಾರಿಯಾಗಿರುತ್ತದೆ. ಕಲೆ ಎಂದರೆ ನೋಡಿ ಉಂಡು ಮಲಗಿದರೆ ದಕ್ಕುವಂತದ್ದಲ್ಲ. ಕಲಾವಿದನೊಂದಿಗೆ ಕಲಾಕೃತಿಯೊಂದಿಗೆ ಪಾಲ್ಗೊಳ್ಳಬೇಕು. ಸಂಗೀತ ಕೇಳುವಾಗ ಕೈಯಲ್ಲಿ ಖಾಲಿ ದೋಸೆ ತಿರುವಿದಂತೆ, ಸಿನಿಮಾ ನೋಡುವಾಗ ಹೆಚ್ಚುಕಡಿಮೆಯಾಗುವ ಹೃದಯಬಡಿತದಂತೆ, ಧಾರವಾಹಿಗಳಲ್ಲಿ ಅವರಳುವಾಗ ನಾವು ನಗುವಂತೆ, ದೊಡ್ಡ ದೊಡ್ಡವರೆದುರಿದ್ದಾಗ ಗೊತ್ತಿಲ್ಲದೆ ಕೈಕಟ್ಟಿ ನಿಂತಂತೆ, ಹೇಗೋ ಒಂದು, ನಮ್ಮ ಮನಸ್ಸಿಗೆ ತಿಳಿದಿರುವ ನಮ್ಮನ್ನು ಕಲಾಕೃತಿಯೊಂದಿಗೆ ಮಾತಿಗಿಳಿಸಬೇಕು.
"ಅಯ್ಯೋ ಲೇ, ಹಳದೀ ಬಣ್ಣ ಹಚ್ಚೀದೀಯಲ್ಲೇ" ಅನ್ನಬೇಡಿ ಮತ್ತೆ. ಹಾಗಲ್ಲ. ಅಂತ ಮಾತು ಬೇಕಿಲ್ಲ. ಎಂತದ್ದು ಬೇಕೆಂದು ಸಿದ್ಧ ಉತ್ತರ ಕೊಡೋದಕ್ಕೆ ಆಗೋದೂ ಇಲ್ಲ. ಹೇಗೇಗೋ ಉದಾಹರಣೆ ಕೊಡುತ್ತಾ ಸೂಚಿಸಲು ಆಗುತ್ತದೋ ಏನೋ!
ಕೃತಿಗಳಲ್ಲಿ ಮುಖ್ಯವಾಗಿ ಎರಡು ವಿಧ. ಒಂದು ಭಾವನೆದು ಮತ್ತೊಂದು ಯೋಚನೆದು. ಭಾವನೆದನ್ನು ಆ ಕ್ಷಣದಲ್ಲಿ ಅನುಭವಿಸಲಿಕ್ಕಷ್ಟೆ. ಅದು ಕಾಡುವುದಿಲ್ಲ. ಕಾಡದೆ ಇದ್ದದ್ದು ಬೆಳೆಯುವುದಿಲ್ಲ. ಈಗ ಸಿನಿಮಾ ನೋಡುವಾಗ ಧಗಧಗ ಮ್ಯೂಸಿಕ್ಕಿಗೆ ಸರಿಯಾಗಿ ಹೃದಯ ಬಡಿಯುದು ಜೋರಾಗಿ ಮೈಯಲ್ಲಿ ಏನೋ ಆಯಿತು ಎಂದೆಲ್ಲ ಆಗುವ ಹಾಗೆ. ಮತ್ತೆಗೂ ಉಳಿದುಕೊಳ್ಳುವ ಗುಣ ಅವಕ್ಕಿಲ್ಲ. ಈಗ ನಾವು ಉದ್ದಾಕೆ ರೀಲ್ಸ್ ನೋಡಿದ ಹಾಗೆ. ನೋಡ್ತಾ ಹೋಗುದು. ನಗ್ಬೋದು, ಇರಿಸುಮುರಿಸಾಗ್ಬೋದು, ಫುಲ್ ಮೋಟಿವೇಷನ್ ಆಗ್ಬೋದು, ಎಂತದೇ ಆದ್ರೂ ಮತ್ತೆಗೆ ನೆನಪಿರುದಿಲ್ಲ. ನಮ್ಮದೆಂತ ಕೆಲಸವೂ ಇಲ್ಲ. ಕೆಲವೊಮ್ಮೆ ಏನೋ ಆಗ್ತದೆ, ಕೆಲವೊಮ್ಮೆ ಆಗುದಿಲ್ಲ. ನೋಡುದು, ಆಗ್ತದೋ ಆಗ್ತದೋ ಅಂತ ಎರಡು ನಿಮಿಷ ಕಾಯುದು. ಎಂತ ಆಗುದಿಲ್ಲ ಅಂತಾದಾಗ ಮುಂದೆದಕ್ಕೆ ಹೋಗುದು.
ಆದರೆ, ಕೆಲವೊಂದು ಇರ್ತದೆ ಅಲ್ಲಲ್ಲಿ. ಉದಾಹರಣೆಗೆ, Egon Schieleಯ ಚಿತ್ರಗಳನ್ನು ಒಮ್ಮೆ ನೋಡಿ. ಒಂದು ತರಾss ಇದೆ ಅದು. ನಮ್ಮ ಮೈಯಲ್ಲೆ ಏನೋss ಆಯ್ತು ಅನ್ಸ್ತದೆ. ನೇರ ಖುಷಿಯೂ ಅಲ್ಲ ಅದು. ಬೇರೆಯೇ ತರದ ಖುಷಿ. ಹೊಸ್ಸ ಅನುಭವ ಆದಾಗಿನ ಖುಷಿ. ಅಂತವು ನೆನಪುಳಿಯುವಂತದ್ದು. ಮತ್ತೆಗೂ ಕಾಡಬಲ್ಲ ಶಕ್ತಿ ಇರುವಂತವು. ಭಾವನೆಗಳನ್ನು ಅಲ್ಲಿ ಅವ ಹೇರ ಹೊರಡದೆ, ಅವನ್ನು ಚಿತ್ರದ ಮೂಲಕ ದಾಟಿಸಿದ ಕಾರಣ ಅದು ಸಾಧ್ಯವಾದ್ದು. ಫ್ರಾನ್ಸ್ ಕಾಫ್ಕಾ, ಕಮೂ ಎಲ್ಲ ಹೇಗೆ ತನ್ನ ಕೃತಿಗಳ ಮೂಲಕ ಅವರವರನ್ನು ಬಿಂಬಿಸಿದರೋ, ಹಾಗೆಯೇ ಇಗೋನ್ ಶೀಲೆಯ ಮೆಂಟಲ್ ಸ್ಟೇಟ್ ಅದು. ಅದರ ಇಂಪ್ಯಾಕ್ಟ್ ನಮಿಗೆ ಆಗುದು. ಚಿತ್ರ ಯಾವುದರದ್ದು ಎನ್ನುವುದು ಅಲ್ಲಿ ಮುಖ್ಯ ಅಲ್ಲವೇ ಅಲ್ಲ. ಅದರಲ್ಲೊಂದಿಷ್ಟು ರಾಜಕೀಯದ ಕತೆ ತುರುಕಬೇಕಾಗೂ ಇಲ್ಲ. ಒಟ್ಟಾದ ಅನುಭವ/ಇಂಪಾಕ್ಟ್ ಹೇಗೆ ಒಂದು ಸ್ವಲ್ಪವೂ ಸಂಬಂಧವೇ ಪಡದ ಚಿತ್ರದ ಮೂಲಕ ನೋಡುಗರಿಗೆ ದಾಟಿ 'ಆ ಒಂದು ತರಾss'ವನ್ನು ಅನುಭವಿಸುವಂತಾಯ್ತು ಎಂಬುದು ಮುಖ್ಯ.
ಇದನ್ನಿನ್ನೂ ವಿಶ್ಲೇಷಣೆ ಮಾಡಲು ಹೊರಡುವುದಾದರೆ, ಅವನ ಕೃತಿಗಳಿಗೆ ಅದೆಲ್ಲ ಸಾಧ್ಯವಾದರೂ ಕೂಡ ಅದು ಒಳ್ಳೆ ಕೃತಿ ಹೌದೋ ಅಲ್ಲವೋ ಎಂಬುದಾಗಿ ಜಿಜ್ಞಾಸೆ ಮಾಡಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ, ಭಾರತೀಯ ಸೌಂದರ್ಯ ಮೀಮಾಂಸೆಯ ಪ್ರಕಾರ ಅಲ್ಲ, ಪಾಶ್ಚಾತ್ಯ ಸೌಂದರ್ಯ ಮೀಮಾಂಸೆಯ ಪ್ರಕಾರ ಹೌದು. ಅದು ಹೇಗೆಂಬುದೇ ವಿಶೇಷ, ವಿಚಿತ್ರ, ಕುತೂಹಲ ಎಲ್ಲ. ಆದರೆ ಈಗಾಗಲೇ ಹೇಳಲು ಹೊರಟ ವಿಷಯ ಬಿಟ್ಟು ಎಲ್ಲೆಲ್ಲಿಗೋ ನಾವೀಗ ಬಂದುದರಿಂದ ಈ ವೈಚಿತ್ರ್ಯಗಳನ್ನು ಹೇಳುತ್ತಾ ಕುಳಿತರೆ ಪುನಃ ಹೋಗಲು ದಾರಿ ಸಿಗ್ಲಿಕ್ಕಿಲ್ಲ. ಹಾಗಾಗಿ...ಈಗಲೇ ಕುರ್ಚಿ ಇದ್ದಲ್ಲಿಗೆ ಹೋಗಿ ಸ್ವಲ್ಪ ಸುಧಾರಿಸಿಕೊಳ್ಳುವ.
ಹ್ಞಾಂ, ಫೇಸ್ಬುಕ್ಕಲ್ಲಿನ ಆ ಕುರ್ಚಿಯ ಪೋಸ್ಟಿಗೆ ಚರಿತಾ ಅಕ್ಕ 'ಇದನ್ನು ಕಾನ್ಸೆಪ್ಚುವಲ್ ಆರ್ಟ್ ಎನ್ನುತ್ತಾರೆ' ಎಂದು ಕಮೆಂಟಿಸಿದ್ದರು. ಅದು ಕಾನ್ಸೆಪ್ಚುವಲ್ ಆರ್ಟ್ ಎನ್ನುವ ವಿಷಯ ಸರಿ. ಅಂದರೆ, ಅದು ಯೋಚನೆ ಕೆಟಗರಿದು. ಅದರಲ್ಲಿ ಭಾವನೆ ಕಾಣಹೊರಟರೆ ಎಂತದೂ ಸಿಗುದಿಲ್ಲ. ತಲೆಗೇ ಕೆಲಸ. ಹಾಗೆಂದು ಭಾವನೆಗಳಿಲ್ಲದೆ ಅದು ಹುಟ್ಟಿಕೊಂಡಿರುವುದೂ ಇಲ್ಲ. ಅವನ್ನು ಭಾವನೆಗಳಾಗಿಯೇ ದಾಟಿಸದೆ, ಯೋಚನೆಯಾಗಿ ಬೆಳೆಸಿ, ಅದನ್ನು ದಾಟಿಸಿದಂತಹ ಕೃತಿಗಳವು. ಕೃತಿಗಳಲ್ಲಿ ಭಾವನೆ ಬೇಕೇ ಬೇಕು ಎಂದು ಹಠ ಮಾಡುವವರಿಗೆ ಭಾವನೆಯಿಂದ ಪ್ರಚೋದಿತ ಇವು ಎಂದು ಸಮಾಧಾನಿಸಬಹುದೇನೋ!
ಇಲ್ಲಿ ವಿಷಯ ಇರುವುದು ವ್ಯಾಖ್ಯಾನಿಸುವುದರ ಬಗ್ಗೆ. ಆ ಕೃತಿಯನ್ನು ಜೋಸೆಫ್ ಕೊಸುತ್ ಮಾಡಿದ್ದು ಸುಮಾರು 1960ರ ಕಾಲದಲ್ಲಿ. ಅಂದರೆ, ಎಲ್ಲವನ್ನೂ ಡಿಫೈನ್ ಮಾಡುವ ಪ್ರವೃತ್ತಿ ವ್ಯಾಪಕವಾಗತೊಡಗಿದಾಗ. ಎಲ್ಲೆಲ್ಲೂ ವೈಜ್ಞಾನಿಕತೆ. ಆ ಸಮಯದಲ್ಲಿ ಯಾವುದು ಕುರ್ಚಿ ಎಂಬ ಸುಲಭದ ಪ್ರಶ್ನೆ ಎತ್ತಿದ್ದು ಎಷ್ಟು ಸಮಂಜಸ ನೋಡಿ. ಆ ಚಿತ್ರ ನೋಡಿದವನಿಗೆ ಉತ್ತರ ಕೊಡ್ಲಿಕ್ಕೆ ಸಾಧ್ಯ ಇಲ್ಲ. ಉಳಿದವರು ಕೊಟ್ಟಾರಷ್ಟೆ.
ವ್ಯಾಖ್ಯಾನಿಸುವುದೆಂದು ಬಂದಾಗ, ಭಯಂಕರ ಥಿಯರಿ, ಪ್ರಾಕ್ಟಿಕಲ್ ಎಲ್ಲ ಮಾಡಿ ಹೇಳುವುದು ಅಂತೇನಲ್ಲ. ಅದನ್ನೊಂದು ಸಾಮಾಜಿಕ ಪ್ರವೃತ್ತಿಯಾಗಿ ಪರಿಗಣಿಸಬಹುದಾದ್ದು. ಇಂದಿಗೆ ಆ ಪ್ರವೃತ್ತಿ ನಮ್ಮಲ್ಲಿ ಮಿತಿಮೀರಿ ಬೆಳೆದು, ಪ್ರತಿಯೊಂದನ್ನೂ ಒಂದು ಚೌಕಟ್ಟಿಗೆ ತೂರಿಸದಿದ್ದರೆ ಕೈ ತುರಿಸುವಂತಾಗಿದೆ. ಒಂದು ನಾಟಕವನ್ನೋ ಸಿನಿಮಾವನ್ನೋ ನೋಡಿದ ತಕ್ಷಣ ಸಿಕ್ಕಿದ ಫುಟ್ಬಾಲಿನಂತೆ ಎಡಕ್ಕೋ ಬಲಕ್ಕೋ ಒದೆಯದಿದ್ದರೆ ನೋಡಿದ ಹಾಗೇ ಆಗುದಿಲ್ಲ ನೋಡಿ. ಒಬ್ಬ ವ್ಯಕ್ತಿಯ ಹೆಸರು, ಜಾತಿ, ಬಣ್ಣ, ಊರು ಎಂತ ಸಿಕ್ಕಿದ್ರೂ ಸಾಕು, ಅವನಿಗೊಂದು ಚೌಕಟ್ಟು ಮನಸ್ಸಲ್ಲೇ ಸಿದ್ಧವಾಗುತ್ತದೆ. ಅವ ಸ್ವಲ್ಪ ಆಚೀಚೆ ಆಗುವ ಹಾಗಿಲ್ಲ ಮತ್ತೆ. ಅಯ್ಯೋ! ಚೌಕಟ್ಟು ಅಂದ್ರೇ ಪಕ್ಕಾ ಮೂಲೆಮಟ್ಟ ಹಿಡ್ದು ಮಾಡಿದ್ದು. ಆಚೀಚೆಯ ಪ್ರಶ್ನೆಯೇ ಇಲ್ಲ. ಎಷ್ಟಿದೆಯೋ ಅಷ್ಟರಲ್ಲೇ ಹಾರಾಡಿಕೊಂಡು ಇರ್ಬೇಕು ಅವ ಮತ್ತೆ. ಹೀಗಿರುದೂ ಕೂಡ ಡಿಫೈನ್ ಪ್ರವೃತ್ತಿಯ ಒಂದು ರೂಪವೇ. ಎಲ್ಲವೂ ನಿಖರ ನಿರ್ದಿಷ್ಟ ಪಕ್ಷನಿಷ್ಟ ಇರಬೇಕು ಎಂಬ ಸಾಮೂಹಿಕ ಬಯಕೆ! ಈ ಪೋಸ್ಟ್ ಕೂಡ ತಾನು ಮೆಸ್ಸಿ ಅಂದುಕೊಂಡವನ ಕಾಲಿಗೆ ಸಿಕ್ಕಿದರೆ, ಅವನ ಟೀಮ್ ಎತ್ಲಾಗಿ ಇದೆಯೋ ಅಲ್ಲಿಗೆ ಒದ್ದು ಹೋದೀತು! ಸ್ವಲ್ಪ ಹೊತ್ತಾದರೂ ಎತ್ತಿ ಹಾರಿಸಿ, ಹಿಡಿದು ತಿರುಗಿಸಿ, ಹೊಡೆದು ಎಲ್ಲ ನೋಡುವ ಅಂತನೇ ಇಲ್ಲ. ಸೀದ ಕಳಿಸುದೇ.
ಇದನ್ನೆಲ್ಲಾ ಗುರುತಿಸಿ, ಸಮಾಜದ ಒಟ್ಟು ಮನಸ್ಥಿತಿಯ/ಪ್ರವೃತ್ತಿಯ ಆಧಾರದಲ್ಲಿ, ಅದರ ಬೆಳವಣಿಗೆಗೆ ಪೂರಕವಾಗಿ ಇಂದಿರುವ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಕೃತಿಗಳು ರಚಿತವಾಗಬೇಕು. ಅದೆಲ್ಲಾ ಬಿಟ್ಟು ಹೂವು ಚಂದ, ಹಾಲು ರುಚಿ ಅನ್ನೋದೇ ಕವಿತೆ ಆಗ್ತಾ ಇದ್ರೆ ನಾವು ಮುಂದುವರಿಯುವುದು ಯಾವಾಗ!
ಒಂದು ಪುಸ್ತಕ ಓದಿ ನಿದ್ದೆ ತೂಗಿ ಎಚ್ಚರ ಆದಾಗ ಪ್ರಭಾವಿಸುವಷ್ಟು ವಿಷಯವನ್ನು "ಒಂದು ಮತ್ತು ಮೂರು ಕುರ್ಚಿ"ಯ ಮೂಲಕ ಜೋಸೆಫ್ ಕೊಸುತ್ರು ನಿಮಿಷಗಳಲ್ಲಿ ನೋಡುಗರಿಗೆ ದಾಟಿಸಿ, ಮತ್ತೆ ಮತ್ತೆ ಕಾಡಿಸಿ ಅವರವರದ್ದೇ ಆದ ಅನಿಸಿಕೆ ತಳೆಯುವಂತೆ ಮಾಡಿದ್ದು ಕಲಾಕೃತಿಯ ವಿಶೇಷ. ಅಲಾ, ಇದೆಂತದಿದು ಯಾರೂ ಮಾಡಬಹುದಾದ್ದು ಎನ್ನುವುದು ಮೊದಲ ನೋಟಕ್ಕೆ ದಕ್ಕುವಂತದ್ದು. ಕುರ್ಚಿ ಎನ್ನುವುದು ಅದಕ್ಕೋ ಇದಕ್ಕೋ ಎನ್ನುವುದು ಎರಡನೇದು. ಕುರ್ಚಿಯನ್ನು ಮೀರಿಯೂ ಅದು ಸೂಚಿಸುತ್ತಿರುವ ವ್ಯಾಖ್ಯಾನದ ಅಶಕ್ತತೆಯನ್ನು ಗುರುತಿಸುವುದು ಮೂರನೇದು. ಜಗತ್ತು ಎಷ್ಟು ವಿಷಯಗಳನ್ನು ಪ್ರತಿದಿನ ವ್ಯಾಖ್ಯಾನಿಸ ಹೊರಡುತ್ತಿರುತ್ತದೆ ಮತ್ತು ಅದು ಯಾವಾಗಿಂದ ಹಾಗೆ, ಯಾಕೆ ಹಾಗೆ ಎಂದು ಯೋಚಿಸಹೊರಡುವುದು ನಾಲ್ಕನೇದು. ಖಡಾಖಂಡಿತವಾಗಿ ಹೀಗಂದರೆ "ಇದು" ಎಂದು ವ್ಯಾಖ್ಯಾನಿಸುವುದು ಎಷ್ಟು ಅರ್ಥಹೀನ ಎಂದು ಮನದಟ್ಟು ಮಾಡಿಕೊಳ್ಳುವುದು ನಂತರದ್ದು. ಮುಂದುವರಿಯಬಹುದು..



