top of page

ಇಸಂ | a note on ism

  • Writer: sushrutha d
    sushrutha d
  • Aug 18, 2024
  • 3 min read

Updated: Jun 9, 2025

ಕಲೆಗೊಂದು ಭೂಮಿಕೆ 23 : ಇವತ್ತು ಏನು ಬೇಕಿದ್ದರೂ ಹೇಳಬಹುದು, ನಾಳೆಗೆ ಹೇಗಿದ್ದರೂ ಮರೆತು ಹೋಗಿರುತ್ತದೆ ಎಂಬ ಧೈರ್ಯದಲ್ಲಿ ಯಾವ ಅಧ್ಯಯನವೂ ಇಲ್ಲದೆಯೇ ಬೇಕಾಬಿಟ್ಟಿ ಮಾತಾಡಲು ಎಲ್ಲರಿಗೂ ಮುಕ್ತ ಅವಕಾಶ ಸಿಕ್ಕಿದ ನಂತರ ಈ 'ಇಸಂ' ಎಂಬುದನ್ನು ಎಲ್ಲಸೇರಿ ರಾಡಿಮಾಡಿಟ್ಟದ್ದೇ ಹೆಚ್ಚು. ನಮ್ಮಲ್ಲಿನ ರಸಂ, ಪಾಯಸಂ ಎಂಬಂತೆ ಕೇಳುವ ಈ ಇಸಂ ಇರುವ ಪದಗಳ ಮೇಲಿನ ಮೋಹ ಕೆಲವರಿಗೆ ಅವರವರ ಹೆಸರಿನ ಮುಂದಿಡುವಷ್ಟರ ಮಟ್ಟಿಗಿದೆ. 'ಇಸಂ' ಈಸ್ ಗ್ರೇಟಿಸಂ ಎಂದು ಇಂತಹ ಒಂದಷ್ಟು ಜನರಿಗನಿಸಿದರೆ 'ಇಸಂ'ಗಳು ಬ್ಯಾಡಿಸಂ ಎಂಬ ಭಾವವೂ ಇನ್ನೊಂದಷ್ಟು ಜನರಿಗಿದೆ. ಒಟ್ಟಿನಲ್ಲಿ ಅದೇನೆಂಬುದು ಹೆಚ್ಚಿನವರಿಗೂ ಗೊತ್ತಿದ್ದಂತಿಲ್ಲ.


ವಿಷಯ ಇಷ್ಟೇ. ಒಂದು ಬಗೆಯ ಚಿಂತನಾ ಸಮೂಹವನ್ನು ಒಟ್ಟಾಗಿಯೇ ಗುರುತಿಸಲು ಒಂದು ಪದದ ಮುಂದೆ ಇಸಂ ಸೇರಿಸುವುದು ವಾಡಿಕೆ. ಅದಕ್ಕಿರುವುದು ಗ್ರೀಕ್ ಪದದ ಮೂಲ, ಇಸ್ಮಾ ಅಂತೇನೋ. ಆಗಿ ಹೋದದ್ದು ಅಥವಾ ಮುಗಿದು ಹೋದದ್ದು ಎಂಬರ್ಥ ಅದಕ್ಕೆ. ಆದರೆ ಇಂದು ನಾವು ಆದದ್ದಷ್ಟೇ ಅಲ್ಲದೆ, ಆಗುತ್ತಿರುವಂತಹ, ಅಗಬಹುದೆನ್ನುವ ಒಂದಷ್ಟು ಕವಲುಗಳುಳ್ಳ ಚಿಂತನಾ ಸಮೂಹಕ್ಕೂ 'ಇಸಂ' ಉಪಯೋಗಿಸುತ್ತೇವೆ.


ನಮ್ಮ ಭಾರತೀಯರಿಗೆ ಇದೊಂತರ ವಿಚಿತ್ರವಾಗಿ ಅನಿಸುವುದು ಯಾಕಂದ್ರೆ, ನಾವುಗಳು ಇಲ್ಲಿನ ಇತಿಹಾಸವನ್ನು ಚಿಂತನೆಯ ಆಧಾರದಲ್ಲಿ ವಿಂಗಡಿಸದೇ, ರಾಜಕೀಯವಾಗಿ ಗುರುತಿಸಿದ್ದು. ಗುಪ್ತರ ಕಾಲದಲ್ಲಿ, ರಾಷ್ಟ್ರಕೂಟರ ಕಾಲದಲ್ಲಿ, ಹೊಯ್ಸಳರ ಕಾಲದಲ್ಲಿ, ಮೊಘಲರ ಕಾಲದಲ್ಲಿ ಹೀಗೆ. ಅಲ್ಲಿಯೂ ಅಂದಿನ ಚಿಂತನೆಗಳೇನಿತ್ತು ಎಂದು ನೋಡದೆ, ಯಾರೊಂದಿಗೆ ಯಾರು ಮದುವೆ ಆದರು, ಯುದ್ಧ ಮಾಡಿದ್ರು ಅಂತ ನೋಡ್ತಾ ಕೂತದ್ದು. ನಮ್ಮ ಇಂದಿನ ಚಿಂತನೆಗಳೂ ಅಷ್ಟಕ್ಕೇ ಸೀಮಿತವಾಗಲು ಇದೂ ಒಂದು ಕಾರಣವಿರಲಿಕ್ಕೂ ಸಾಕು.


ಬರೀ ಭಾರತ ಅಂತಲ್ಲ, ಚೀನಾ ಜಪಾನ್‌ಗಳಲ್ಲಿನ ಸಂಸ್ಕೃತಿಗಳನ್ನೂ ಡೈನಸ್ಟಿಗಳಾಗಿಯೇ ವಿಂಗಡಿಸಿದ್ದು. ಆಯಾ ಡೈನಸ್ಟಿಗಳ ಕಾಲದಲ್ಲಿ ಕಲೆ ಹೇಗಿತ್ತು, ಅದರ ಗುಣಲಕ್ಷಣಗಳೇನು ಎಂದು ನೋಡಿದ್ದು, ದಾಖಲಿಸಿದ್ದು ಎಲ್ಲಾ. ಅಂದರೆ, ಅದೆಲ್ಲ ರೆಪ್ರೆಸೆಂಟ್ ಮಾಡುವುದು ಆಯಾ ರಾಜಮನೆತನದ ಹೆಸರನ್ನು. ಅದೇ ಯೂರೋಪ್, ಅಮೇರಿಕಾಗಳಲ್ಲಿ ಗುಣಲಕ್ಷಣಗಳನ್ನು ಚಿಂತನಾಧಾರಿತವಾಗಿ ವಿಂಗಡಿಸಿದ್ದು. ಅಲ್ಲಿ ರಾಜಮನೆತನಗಳ ಬದಲಿಗೆ 'ಇಸಂ' ಹೆಸರುಗಳು ಬಳಕೆಗೆ ಬಂತು. ಅದರ ಜೊತೆಗೆ, ಅದು ಪ್ರತಿನಿಧಿಸುವ ಚಿಂತನೆಗಳೂ ದಾಖಲಾಗುತ್ತಾ ಬಂತು. ಆ ಗುಣಲಕ್ಷಣಗಳು ನೆನಪಿಸುತ್ತಿದ್ದದ್ದು ಚಿಂತನಾಕ್ರಮವನ್ನು. ನಮ್ಮಲ್ಲಿ ಚಿಂತನೆಗಳೆಲ್ಲ ಮೂಲೆಗೋಗಿ ರಾಜಮನೆತನದ ಹೆಸರುಗಳು ಮಾತ್ರ ನೆನಪಲ್ಲುಳಿಯುವಂತಾಯ್ತು.


ನನಗೀಗಲೂ ನಮ್ಮ ಇತಿಹಾಸವನ್ನು ಚಿಂತನಾಕ್ರಮಗಳ ಆಧಾರದಲ್ಲಿ ವಿಂಗಡಿಸಬಹುದಲ್ಲಾ ಅನಿಸುವುದಿದೆ. ಅವ್ರು ರಾಷ್ಟಕೂಟರಾ, ಮೊಘಲರಾ ಮುಖ್ಯವಲ್ಲ. ಈತರ ನೋಡಿದ್ದರಿಂದ ಆ ಕಾಲದ ಒಟ್ಟು ಚಿಂತನಾಕ್ರಮ ತಿಳಿಯುವುದೂ ಇಲ್ಲ. ಈಗ ವಿಜಯನಗರ, ಚೋಳ, ಚಾಲುಕ್ಯ, ಹೊಯ್ಸಳರ ಸಂಸ್ಕೃತಿಯಲ್ಲೆಲ್ಲ ದೊಡ್ಡ ವ್ಯತ್ಯಾಸ ಏನಿರಲಿಕ್ಕಿಲ್ಲ. ಎಲ್ರೂ ಬೇಕಾದಷ್ಟು ಕೆತ್ತನೆಗಳುಳ್ಳ ದೇವಸ್ಥಾನ ಕಟ್ಸಿದ್ರು. ಆ ಸಮಯದ ಜನರಿಗೆ ದೇವರ ಮೇಲೆ ಭಕ್ತಿ ಉಕ್ಕಿಬಂದಿರಲು ಏನೋ ಕಾರಣವಿರಬಹುದು. ಇಂತಹ ಒಂದಷ್ಟು ಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಇತಿಹಾಸ ಕೆದಕಿದರೆ, ಅಂತಹ ಒಂದಷ್ಟು ಗುಂಪು ಚಿಂತನೆಗಳನ್ನು ಒಂದೊಂದು 'ಇಸಂ' ಎಂದು ಕರೆದರೆ, ಅದು ರೆಪ್ರೆಸೆಂಟ್ ಮಾಡುತ್ತಿರುವುದು ಆಯಾ ಚಿಂತನೆಯನ್ನಾಗಿರುತ್ತದೆ ಹೊರತು ಯಾವುದೋ ಮನೆತನದ ಹೆಸರಲ್ಲ.


ಈಗ ವಿಜಯನಗರ ಎಂದ ತಕ್ಷಣ ನಾವು‌ಕೇಳಿದ ದಾರಿಬದಿಯಲ್ಲಿ ಚಿನ್ನ ಮಾರುತ್ತಿದ್ದ ವೈಭವದ ಕತೆಗಳು ನೆನಪಿಗೆ ಬಂದಾವು. ಇವೂ ಯಾವುದೇ ಚಿಂತನಾಕ್ರಮವನ್ನು ಸೂಚಿಸುತ್ತಲಿಲ್ಲ. ಅದೇ 'ರೊಮ್ಯಾಂಟಿಸಿಸಂ' ಎಂದರೆ, ಅದರೊಂದಿಗೆ ತಳುಕುಹಾಕಿಕೊಂಡ ಚಿಂತನಾಕ್ರಮವಾಗಿ, ಜಗತ್ತನ್ನು ಪರಿಭಾವಿಸುವ ರೀತಿ, ಅದರ ಒಳಿತುಕೆಡುಕುಗಳೆಲ್ಲ ನೆನಪಾಗುತ್ತವೆ. 'ರಿಯಲಿಸಂ' ಎಂದರೆ ಮತ್ತೊಂದು. ಒಂದಿಡೀ school of thought on the way of understanding the world around us! ಈತರದ ಇಸಂಗಳು ಅದೆಷ್ಟಿಲ್ಲ! ಈ ರೀತಿಯ ವಿಂಗಡಣೆಯನ್ನು ಅನುಸರಿಸಿದರೆ ಬರಿಯ ಹೆಸರಿನ ಮೂಲಕ ಮುಂದಿನ ತಲೆಮಾರಿಗೂ ಈ ಚಿಂತನಾಕ್ರಮವು ದಾಟುವಂತಾಗುವುದಿಲ್ಲವೇ? 'ಚಾಲುಕ್ಯ'ರನ್ನು ದಾಟಿಸಿ ಏನು ಮಾಡಲಿಕ್ಕಿದೆ?


ಸಾಧ್ಯವಿಲ್ಲದ್ದೇನಲ್ಲ. ಈಗ ಕುಂತಕನ ಕಾಲದಲ್ಲಿ ಅವ್ನದ್ದೊಂದು 'ವ್ಯಂಗ್ಯ'ದ ಕುರಿತಾದ ವಾದ ಇತ್ತು. ವಕ್ರೋಕ್ತಿ. ವಾಮನನಿಗೆ ರೀತಿ. ದಂಡಿಯ ಕಾಲಕ್ಕೆ ಅಲಂಕಾರ ಮುಖ್ಯವೆನಿಸಿತು. ಹೀಗೆ ಆಯಾ ಕಾಲದ ಹೆಚ್ಚಿನವರೂ ಇಂತಹ ಚಿಂತನೆಗಳಿಂದ ಪ್ರಭಾವಿತರಾಗಿರುವ ಸಾಧ್ಯತೆ ಹೆಚ್ಚು. ರಾಜರ ಹೆಸರನ್ನೆಲ್ಲ ಬಿಟ್ಟು ಇಂತಹ ಒಂದೊಂದು ಚಿಂತನಾಕ್ರಮದಿಂದ ಹುಟ್ಟಿದ, ಅದನ್ನು ಮುಂದುವರೆಸಿದ, ಅಷ್ಟೂ ಕಾಲಾವಧಿಯ ಚಿಂತನೆಗಳನ್ನು, ಅಭಿವ್ಯಕ್ತಿಗಳನ್ನು ಒಂದೊಂದು ಹೆಸರಿನಿಂದ ಕರೆಯುವಂತಾದರೆ?! 'ಇಸಂ' ಅಲ್ಲದಿದ್ದರೆ ಮತ್ತೇನೋ ಒಂದು ಹೆಸರಿನಿಂದಾದರೂ ಗುರುತಿಸಬಹುದಲ್ಲಾ!


ನಮ್ಮ ದೇಶದಲ್ಲೂ ಕಾಲಕಾಲಕ್ಕೆ ತಕ್ಕಂತಹ ಚಿಂತನೆಗಳಿತ್ತು. ಅದನ್ನು ನಾವು ಹಾಗೆ ದಾಖಲಿಸಿಲ್ಲ ಅಷ್ಟೆ. ಅದಕ್ಕೇ ಇಸಂ ಎಂದರೇ ಏನೋ ಕೆಟ್ಟದ್ದೆಂಬಂತೆ ಕಾಣುತ್ತದೆ ನಮಗೆ. Each ism represents a school of thought. How can a school of thought be bad?!


ಇತ್ತೀಚೆಗೆ ಇದರೆಲ್ಲದರ ಜೊತೆಜೊತೆಗೇ ಒಂದು ಮಾತು ಬರುವುದಿದೆ. ನೋಡುಗರು 'ಇಸಂ'ಗಳಿಗೆ ಒಳಪಡದೆ ಮುಕ್ತವಾಗಿರುತ್ತಾರೆ ಅಂತೆಲ್ಲ. ಅದು ಹೇಗೋ ಹೆಮ್ಮೆಯ ವಿಷಯವೆಂದು ಲೆಕ್ಕ! ಜನರಿಗೆ ಇಷ್ಟವಾಗಬೇಕಾದ್ದು ಮುಖ್ಯ, ಅಭಿಮಾನಿಗಳೇ ದೇವ್ರು, ಓದುಗರು ಬುದ್ಧಿವಂತರು, ಪ್ರೇಕ್ಷಕರು ಗೆಲ್ಲಿಸುತ್ತಾರೆ ಮುಂತಾದ ಮಾತುಗಳೆಲ್ಲ ಒಂಥರಾ ರಿಸೀವಿಂಗ್ ಎಂಡ್‌ನಲ್ಲಿರುವವರನ್ನು ಮುಖ್ಯರನ್ನಾಗಿಸುವಂತಹ ಪ್ರಯತ್ನಗಳು. ಇವೆಲ್ಲ ಕ್ಯಾಪಿಟಲಿಸಂ ನಂತರದ ಮಾತುಗಳು. ಟೇಯ್ಲರ್ ಸ್ವಿಫ್ಟ್ ಕೂಡ ತನ್ನ ಮ್ಯೂಸಿಕ್ ಕನ್ಸರ್ಟ್‌ಗಳಲ್ಲಿ, 'ಐ ಲವ್ ಯೂ ಆಲ್ ಸೋ ಮಚ್' ಎನ್ನುವುದೂ ಅದಕ್ಕೇನೇ. ಟಿಕೆಟ್ ಮಾರಲಿರುವ ಮಾರ್ಕೆಟಿಂಗ್ ಸ್ಟ್ರಾಟಜಿ ಇದೆಲ್ಲ ಎಂದು ತಿಳಿಯದವರು ಅದನ್ನೇ ನಂಬಿಕೊಂಡು ತಾವೇನೋ ಭಯಂಕರ ಅಂದುಕೊಂಡು ಕೂತಿದ್ದಾರೆ ಅಷ್ಟೆ. ಹಾಗಿರುವವರು ಯಾವುದೇ 'ಇಸಂ'ಗೆ ಒಳಪಡದೆ ಇರುವುದು, ಬರೆದದ್ದು ಎನ್ನುವುದನ್ನೆಲ್ಲ ಏನೋ ಮಹತ್ತರವಾದಂತೆ ಬಿಂಬಿಸುತ್ತಿರುತ್ತಾರೆ. ತನ್ನ ಅಧ್ಯಯನದ ಕೊರತೆಯದು ಎನ್ನುವುದನ್ನು ಒಪ್ಪುತ್ತಿರುವುದಿಲ್ಲ.


ಪ್ರತಿಯೊಬ್ಬ ಕೃತಿ ರಚಿಸುವವನ ಹಿನ್ನೆಲೆಯಲ್ಲೂ ಇರುವುದು ಒಂದು ಹೊಸಮಾದರಿಯ ಚಿಂತನಾಶೈಲಿಯನ್ನು ಹುಟ್ಟುಹಾಕುವ ಜವಾಬ್ದಾರಿಯೇ. ಮುಂದೊಂದು ದಿನವಾದರೂ ಇಸಂ ಆಗಲು ಲಾಯಕ್ಕಿರುವಂತಹ ಚಿಂತನೆಗಳನ್ನು ತನ್ನ ಅಧ್ಯಯನದಿಂದ, ಅನುಭವಗಳಿಂದ ರೂಪಿಸಿಕೊಂಡು ತಾನು ತನ್ನ ಕೃತಿಗಳ ಮೂಲಕ ಸಾಧ್ಯವಿರುವ ರೀತಿಯಲ್ಲಿ ಅಭಿವ್ಯಕ್ತಿಸಬೇಕಾದ್ದು. ಅದು ಇನ್ನಷ್ಟು ಸಶಕ್ತವಾಗಿ ರೂಪುಗೊಳ್ಳಲು ಸಮಕಾಲೀನರ ನಡುವೆ ಕೊಡುಕೊಂಡುಕೊಳ್ಳುವಿಕೆಗಳು ಇರಬೇಕಾದ್ದು. ಒಂದು ತೆರನಾದ ಇಸಮ್ಮೇ ಇದೂ. ಇಂತದ್ದೆಲ್ಲ ಬಿಟ್ಟು, ಓದುಗರಿಗೆ ತಿಳಿಯುತ್ತದೆ ಎನ್ನುವುದೆಲ್ಲ ನಮ್ಮನಿಮ್ಮನ್ನು ಹೇಗೋ ಖುಷಿಪಡಿಸಲಿರುವ ಹೇಳಿಕೆಗಳಷ್ಟೆ. ಇತ್ತ ಏನೇನಾಗಿದೆ ಎಂಬ ಪರಿವೆಯೂ ಇಲ್ಲದೆ ತನಗೆ ತಿಳಿಯುತ್ತದೆ ಎಂದು ನಾವು ಅಂದುಕೊಳ್ಳುವುದು ಅಥವಾ ಅಂದುಕೊಳ್ಳುವಂತಾಗಿದ್ದು ನಮ್ಮ ಮೌಢ್ಯದ ಪರಾಕಾಷ್ಠೆಯನ್ನಷ್ಟೆ ಸೂಚಿಸುತ್ತದೆ.

Recent Posts

See All
bottom of page