ನಾನು ನಾನು ನಾನು ಅಂದ್ರೆ ಅಂದ್ರೆ ಅಂದ್ರೆ...
- sushrutha d
- Apr 19, 2025
- 3 min read
Updated: Jun 9, 2025
ಕಲೆಗೊಂದು ಭೂಮಿಕೆ : ಬುಕ್ ಬ್ರಹ್ಮದ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಕವಿತೆ ವಾಚಿಸಿದ ವಿಡಿಯೋಗಳು ಟ್ರೋಲ್ ಆಗಿ ವೈರಲ್ ಆಗಿ, ಫೇಸ್ಬುಕ್ ತುಂಬಾ ಪಂಥ ಕಟ್ಟಿಕೊಂಡು ವಿರೋಧ/ಸಮರ್ಥನೆಗೆ ಕಾರಣವಾಗಿರುವ ಈ ನಾನು ನಾನು ನಾನು ಅಂದ್ರೆ...

ನಾನು ನಾನು ನಾನೂ ಕವಿತೆ
ಕೇಳ್ದಾಗಿಂದ...ಗಿಂದ..ಗಿಂದಾss...
ಭಾರೀ ಈ ಈ
ವಿಷ್ಯ ಯ ಯ ಯಾ
ಕಡೆಯಿಂದ್ಲೂ ಲೂ ಲೂ ಲೂss
ಬರ್ತಿದೆ.
ಒಂದ್ನಿಮಿಶ. ಅರ್ಜೆಂಟು. ಹುಯ್ದುಬುಟ್ಟು ಬಂದೆ.
ವರ್ಷಗಳಿಂದ ವರ್ಷಕ್ಕೆ ಆರೇಳು ಬಾರಿ ಭಯಂಕರ ಫೆಮಿನಿಸ್ಟ್‌ಗಳಿಗೆಂದೇ ಇರುವ ನ್ಯಾಶನಲ್ ಲೆವೆಲ್ ಇಂಟರ್ನಾಶನಲ್ ಲೆವೆಲಿನ ಕಾಂಪಿಟೀಶನ್‌ಗಳಾದ ವುಮೆನ್ಸ್ ಡೇ, ಮದರ್ಸ್ ಡೇ, ಸಿಸ್ಟರ್ಸ್ ಡೇ, ಡಾಟರ್ಸ್ ಡೇ ಅಂತೆಲ್ಲ ಏನೋ ಒಂದು ಹೆಸರಿಟ್ಟು ಬರುವ ಡೇ ಡೇ ಡೇ ಡೇಯಂದು ಕೇಳಿದುದನ್ನೇ ಕೇಳಿ ಬೇಸತ್ತು ತೂ ತೂ ಹೋಗಿರುವಾಗ ಮತ್ತೊಮ್ಮೆ ಅದೇ ವಿಷಯ-ಆಶಯವನ್ನು ಕವಿತೆಯಾಗಿಸಿ ವಾಚಿಸಿ ಜನರನ್ನು ಬೆಚ್ಚಿಬೀಳಿಸಿ ಫೇಸುಬುಕ್ಕಿನಲ್ಲಿ ಕ್ರಾಂತಿ ತಂದುದಕ್ಕೆ ಈ ಎರಡು ದಿನಗಳೇ ಸಾಕ್ಷಿ ಈ ಈ ಈ ಹಿ ಹಿ ಹಿ.
ಪದಬಳಕೆ ಸರಿಯಿಲ್ಲ, ಕವಿತೆಯಾಗಲು ಲಾಯಕ್ಕಿಲ್ಲ ಎಂಬಂತಹ ಬಲವಾದ ದೊಣ್ಣೆ ಏಟಿಗೆ ಅದೇ ಪದಬಳಕೆಯ ಹಿಂದಿರುವ ಆಶಯ ಎಡರುತ್ತಾ ತೊಡರುತ್ತಾ ಕವಚ ಹೊತ್ತು ನಿಲ್ಲುತ್ತದೆ. ಇಗೋ ಪರ್ ಆಗಯಾ ಬಾತ್ ಅಭೀ.
ಒಂದು ಖಾಲಿ ಗೋಡೆಯನ್ನು ಒಂದರ್ಧ ಗಂಟೆ ಗಮನಿಸಿ ನೋಡಿದರೆ ಅದರಲ್ಲೂ ಏನೇನೋ ಇದೆ ಎಂದು ಯಾರಿಗಾದರೂ ಅನಿಸುತ್ತೆ. ಅರ್ಧ ನಿಮಿಷದಲ್ಲಲ್ಲ. ಗಂಟೆಯಲ್ಲಿ. ಇನ್ನು ಆ ಖಾಲಿ ಕವಿತೆ ಎನ್ನುವುದರಲ್ಲಿ ಏನೇನೋ ಅಡಗಿರಲು ಸಾಧ್ಯವಿಲ್ಲವೇ?! ಇರುತ್ತೆ. ಕತ್ತಲಕೋಶ ಎಂದರೇ...ಒಂದು ಗಂಟೆ ಪಾಠ ಮಾಡುವವರು ಇರ್ತಾರೆ. ನಾನು ಎಂಬುದಂತೂ ಉಪನಿಷತ್ತಿನ ಸಮಯದಿಂದ್ಲೇ ಎವರ್‌ಗ್ರೀನ್ ಟಾಪಿಕ್. ಏಳೆಂಟು ಬಾರಿ ನಾನು ನಾನು ನಾನು ಎಂದು ರಿಪೀಟ್ ಮಾಡಿದ್ದಕ್ಕೂ, ನಾನುವೊಂದಕ್ಕೆ ಒಂದರ್ಥ ನಾನುವೆರಡಕ್ಕೆ ಇನ್ನೊಂದರ್ಥ ಕೊಟ್ಟುಕೊಂಡು ಬೇಕಾದ ಹಾಗೆ ಅರ್ಥಗರ್ಭಿತ ಕವಿತೆಯಾಗಿಸಲು ಸಾಧ್ಯ. ಆದರೆ ಎರಡರಲ್ಲೂ ಕೇಳಿಕೊಳ್ಳಬೇಕಾದ ಪ್ರಶ್ನೆ ಇಸ್ ಇಟ್ ವರ್ತ್ ಇಟ್?! ಅಂದ್ರೆ ಇಟ್ ಇಟ್ ಇಟ್!
ಏನೋ ಹೊಸ ಚಿಂತನೆ ಇದ್ದರೆ, ಹೊಸ ಭಾವ ಇದ್ದರೆ, ಹೊಸ ತಂತ್ರ ಇದ್ದರೆ, ಒಟ್ಟಿನಲ್ಲಿ ಯಾವುದೋ ಒಂದು ರೀತಿಯಲ್ಲಾದರೂ ಹೊಸತನವುಳ್ಳ ಅಭಿವ್ಯಕ್ತಿಯಾದರೆ ಓಕೆ. ಯೋಚಿಸುವ. ಎರಡು ದಿನ ಅದನ್ನೇ ಗಮನಿಸಿದಾಗ ದಕ್ಕಿದಷ್ಟು ಒಳ್ಳೆಯದೇ. ಇದೆಂತ! ಧೂಮ್ರಪಾನ ಹಾನಿಕಾರಕ ಬೋರ್ಡಿದ್ದ ಹಾಗೆ. ಹೇಳಿದ್ದನ್ನೇ ಹೇಳುದು. ಮಹಿಳಾ ದಿನದಂದೂ ಜಿದ್ದಿಗೆ ಬಿದ್ದು ಹೇಳಿದ್ದು ಇದನ್ನೇ ತಾನೆ? ಕಳೆದ ವರ್ಷದ ಇನ್ನೊಂದು ದಿನವೂ ಇದೇ ತಾನೆ? ಅದರ ಮೊದಲಿನ ವರ್ಷವೂ ಇದ್ದದ್ದಿದೇ ತಾನೇ? ಅದ್ಯಾವ್ದೋ ಪಾಡ್‌ಕಾಸ್ಟಲ್ಲಿ ಫಾರಿನವ್ರು ಹೊಯ್ಕೊಂಡಿದ್ದೂ ಇದನ್ನೇ ತಾನೆ? ಅದೇ ಆ ರೀಲ್ಸು, ಅವ್ಳು ಅವ್ಳು ಅವ್ಳೂ ಅಂದ್ರೆ ಅವ್ಳು ಕೂದ್ಲು ಹಾರ್ಸಿ ಹಾರ್ಸಿ ಹಾರ್ಸಿ ಅಂದ್ರೆ ಹಾರ್ಸಿ ಹೇಳಿದ್ದೂ ಇದ್ನೇ ತಾನೆ ತಾನೆ ತಾನೆ ಅಂದ್ರೆ ತಾನೇss??? ತಂದಾನಿತಾನೋ ತಾನಿತಂದಾನೋ ತಾನೇ ತಾನೇ ನೋ...ನೋ?!
ಯಸ್. ಇನ್ನೂ ಸಮಾಜದಲ್ಲಿದೆ. ದೇಹವಷ್ಟೇ ನೋಡುವುದು, ಸೀಮಿತ, ಸಂಕುಚಿತ, ಮನಸ್ಸು, ದೊಡ್ಡದು. ಎಲ್ಲ ಕೇಳಿಯಾಗಿದೆ. ಟೆನ್ಶನ್ ಬೇಡ. ಇನ್ಸ್ಟಾಗ್ರಾಮಲ್ಲಿ ಎಕ್ಸ್‌ಪ್ಲೋರ್ ಟ್ಯಾಬಿಗೆ ಹೋದ್ರೆ ನಾವು ಕೇಳದ್ದೂ ಕಾಣುತ್ತೆ ಈಗ.
ಇನ್ನೊಂದೇ ತರದ್ದಿದೆ, ಪ್ರಕಾರಕ್ಕೆ ಜೋತಾಡುವವರದ್ದು. ಇದು ಕವಿತೆಯಾಗಲು ಲಾಯಕ್ಕಿಲ್ವಂತೆ. ಕಾದಂಬರಿಯೋ ಕತೆಯೋ ಅದೀತಂತೆ! ಇದ್ಯಾವ ತರ ಹುಚ್ವಾದನೋ! ಪ್ರಾಸ ಛಂದಸ್ಸು ರಾಗ ಅಲಂಕಾರ ಮತ್ತೊಂದು ಇಲ್ಲಾಂತ ಇರಬಹುದೇನೋ. ಆದರದು ಬೇಕಾದ್ದು ಯಾಕೆ ಎಂಬ ಪ್ರಶ್ನೆಯೂ ಇದೆ. ಹಳೇ ಕಾಲದಲ್ಲಿ ಆಸ್ಥಾನದಲ್ಲಿ ಕವಿಗಳು ವಾಚನ ಮಾಡುತ್ತಿದ್ದದ್ದು. ಆಗ ಎರಡೆರಡು ಲೈನಿಗೂ ಆಹಾ ಓಹೋ ಅನ್ನಿಸಲು ಪ್ರಾಸ ಎಲ್ಲ ಇದ್ರೆ ಚನಾಗಿರ್ತಿತ್ತು. ಅಂದ್ರೆ ಬೇಸಿಕಲ್ಲಿ ಕೇಳಲಿಕ್ಕೆ ಖುಷಿಯಾಗುವ ಹಾಗೆ ಪದಗಳನ್ನು ಜೋಡಿಸುತ್ತಿದ್ದುದು. ಛಂದಸ್ಸೆಲ್ಲ ಇರುವುದು ಅದಕ್ಕೇ ತಾನೇ?!
ನವ್ಯಕಾಲದ ನಂತರದ ಕವನಗಳ ಸ್ವರೂಪವೇ ಇರುವುದು ಬರೆದುದನ್ನು ಓದಲು. ಅವು ವಾಚನಯೋಗ್ಯವೇ ಅಲ್ಲ. ಮೊದಲಿನ ಪಾರಾದಲ್ಲಿ ಬಂದ ರೂಪಕ ರಿವೀಲ್ ಆಗುವುದು ಲಾಸ್ಟ್ ಪಾರಾದಲ್ಲಿ. ಅಷ್ಟೊತ್ತು ಮೊದಲನೇ ಪಾರಾ ಓದುವಾಗ ಕೇಳಿದ್ದೇನು ಅಂತ ಯಾವನು ನೆನಪಿಟ್ಕೊತಾನೆ?! ಈ ಕವನಗಳಿಗೆ ಪ್ರಾಸ ಲಯ ಕ್ವಾಲಿಟಿಗಳೆಲ್ಲ ಕಡಿಮೆ. ಓದೋವಾಗ ಸಮಸ್ಯೆ ಇಲ್ಲ, ಹಿಂದೆ ಮುಂದೆ ಹಿಂದೆ ಮುಂದೆ ಹೊಗ್ತಾ ಪಜಲ್ ಸಾಲ್ವ್ ಮಾಡಿದ ಹಾಗೆ ಓದಲಾಗುತ್ತದೆ ಇಂದಿನ ಕವಿತೆಗಳ ಗ್ರಹಿಸಲಿಕ್ಕೆ. ಅದನ್ನೂ ಉದ್ದಾಕೆ ವಾಚಿಸ ಹೊರಟ್ರೆ! ಅದೂ ಕವಿಗಳೇ!! ಅದದೇ ಪದ ಮೂರುನಾಲ್ಕು ಬಾರಿ ರಿಪೀಟ್ ಬೇರೆ ಮಾಡಿದಾಗ ನೆನಪಿದ್ದ ಮೊದಲ ಸಾಲೂ ಮರ್ತೇ ಹೋಗಿರುತ್ತೆ ಅತ್ಲಾಗಿ. ಕೊನೇಗೆ ಇದೇನ್ ಕವಿತೆನೋ ಅನ್ಕೊಂಡು ಬರೋದು!
ವಾಚಿಸುವದಾದರೆ, ವಾಚಿಸುವ ರೀತಿಯಿಂದಾಗಿ ಕವಿತೆಯ ವಿಷಯ-ಆಶಯಕ್ಕೆ ಇನ್ನೊಂದು ಲೇಯರ್ ಸೇರಿಸಲು ಸಾಧ್ಯವಾಗಬೇಕು. ಈ ಕವಿತೆಗೆ ಇನ್ನೊಂದು ಲೇಯರ್ ಸೇರಿಸಲು ಮ್ಯೂಸಿಕ್ಕಿನವರಿಗೆ ಒಂದು ರೀತಿಯಲ್ಲಿ, ಟಿಕ್‌ಟಾಕಿನವರಿಗೆ ಇನ್ನೊಂದು ರೀತಿಯಲ್ಲಿ ಸಾಧ್ಯವಾದೀತೇನೋ!
ಇನ್ನೂ ಗಮ್ಮತ್ತಿದಂದ್ರೆ 14ನೇ ಶತಮಾನದ ಆಸುಪಾಸಿನಲ್ಲಿ ಬರೆದ ನಗ್ನ ಚಿತ್ರಗಳನ್ನು ಈ ನಾನು ಕವನದ ಸಮರ್ಥನೆಗೆ ಬಳಸುತ್ತಿರುವುದು! ಇಲ್ಲಿ ನೋಡಿದ್ರೆ ಸಮಕಾಲೀನತೆ ಅಂತ. ಸಮರ್ಥನೆಯ ಚಿತ್ರ ನೋಡಿದ್ರೆ ಹದಿನಾಲ್ಕನೇ ಶತಮಾನದ್ದು!

ನನಗೆ ಕಂಪೇರಿಶನ್ನಿಗೆ ಮರಿನಾ ಅಬ್ರಮೋವಿಚ್ ಮತ್ತೆ ಉಲಾಯ್ ಎಂಬಿಬ್ಬರೂ 1980ರ ಆಸುಪಾಸಿನಲ್ಲಿ ಸೇರಿ ಪ್ರದರ್ಶಿಸಿದ ಪರ್ಫಾರ್ಮೆನ್ಸ್ ಕಲೆಯೊಂದು ನೆನಪಾಗ್ತಿದೆ. ಇಬ್ಬರೂ ಬೆತ್ತಲೆಯಾಗಿ, ಒಂದು ಮ್ಯೂಸಿಯಂನ ಬಾಗಿಲಿನಲ್ಲಿ ಮುಖ ಮುಖ ನೋಡುತ್ತಾ ನಿಲ್ಲುತ್ತಾರೆ. ಗ್ಯಾಲರಿಯೊಳಗೆ ಹೋಗಬೇಕಾದವರು ಇವರ ಮಧ್ಯದಲ್ಲಿ ತೂರಿಕೊಂಡೇ ಹೋಗಬೇಕು. ನೇರವಾಗಿ ದಾಟುವಷ್ಟು ಜಾಗ ಇವರುಗಳ ಮಧ್ಯದಲ್ಲಿ ಇಲ್ಲ. ಒಂದು ಬದಿಗೆ ತಿರುಗಿಯೇ ಅವರುಗಳ ಮೈಗೆ ತಾಗುತ್ತಾನೇ ಅಡ್ಡಡ್ಡ ದಾಟಬೇಕು. ಒಂದು ಬದಿಗೆ ಪುರುಷನ ಬೆತ್ತಲೆ ದೇಹ. ಇನ್ನೊಂದು ಬದಿಗೆ ಮಹಿಳೆಯದ್ದು. ನೀವು ಅಲ್ಲಿದ್ದಿದ್ದರೆ ಯಾವ ಬದಿಗೆ ತಿರುಗಿ, ಯಾರಿಗೆ ಮುಖ ಮಾಡಿ ದಾಟುತ್ತಿದ್ದಿರಿ?
ಅಫ್ಕೋರ್ಸ್ ಪಬ್ಲಿಕ್ಕಲ್ಲಿ ಎಲ್ಲರ ಮುಂದೆ ನಾವು ಈ ಬೆತ್ತಲೆ ದೇಹಗಳ ಮಧ್ಯ ಸಾಗಬೇಕೆಂದಾದಾಗ ಮುಜುಗರ ಆಗಿಯೇ ಆಗುತ್ತೆ. ಆ ಕ್ಷಣದಲ್ಲಿ ಏನನ್ನೂ ಯೋಚಿಸಿ ಡಿಸೈಡ್ ಮಾಡಲು ಸಾಧ್ಯವಿಲ್ಲದಿದ್ರೂ, ಇದೆಲ್ಲ ಸಾಮಾಜಿಕ ಡೀಸೆನ್ಸಿ ಮೀರಿದ್ದೆಂದೂ ಅನಿಸಿದರೂ, ಏನೋ ವಿಷ್ಯ ಇಲ್ಲಿದೆ ಎಂದೂ ಒಟ್ಟಿಗೇ ಅನಿಸುತ್ತಲ್ವಾ? ನಾವಾಗಿದ್ರೆ ಏನು ಮಾಡ್ತಿದ್ವಿ, ಆ ಕ್ಷಣದ ರಿಯಾಕ್ಷನ್ ಏನಿರ್ತಿತ್ತು ಎಂಬುದು ಕಾಡುತ್ತಲ್ವಾ?! ಎಲ್ಲರೂ ಹೇಳಿಕೊಂಡು ಬಂದದ್ದರ ರಿಪಿಟೀಶನ್ ಅಂತೂ ಇದಲ್ಲ ಅಲ್ವಾ ಅಲ್ವಾ ಅಲ್ವಾsss??!




