ಭಾರತೀಯ ಕಲಾಸಂಸ್ಕೃತಿ, ಕಲಾತತ್ವ ಮತ್ತು ಸತ್ವ
- sushrutha d
- Jun 23, 2021
- 3 min read
Updated: Feb 9, 2025
ಕಲೆಗೊಂದು ಭೂಮಿಕೆ - 2 : ಇತ್ತ ಭಾರತದ ಕಲಾಸಂಸ್ಕೃತಿ ಪಾಶ್ಚಾತ್ಯರ ತೆರನಾದುದಲ್ಲ. ಕರ್ನಾಟಕದ ಜನಕ್ಕೆ ಗೊತ್ತಿರುವ ಒಂದೇ ಒಂದು ಹೆಸರಾದ ರಾಜಾ ರವಿವರ್ಮನ ಮೊದಲು, ಭಾರತದ ಕಲೆಗಳು ಬಹಳ ಸಮೃದ್ಧವಾಗಿದ್ದವು. ಬ್ರಿಟಿಷರ ಬಳಿ ಕಲಿತ 'ಅಕಡಮಿಕ್ ಸ್ಟೈಲ್'ನಿಂದ ಭಾರತದ ಚಿತ್ರಕಲೆಯಲ್ಲಿ ಹೊಸಕ್ರಾಂತಿಯೇ ಮೂಡಿತು. ನೋಡಲು ನೈಜವಾಗಿ ಕಾಣುವಂತೆ ಚಿತ್ರಿಸುವ ಪರಿಪಾಠ ಬೆಳೆಯಿತು. ಎಲ್ಲರೂ ಇದರ ಮೋಹಕ್ಕೆ ಬಿದ್ದುದರಿಂದ, ಭಾರತೀಯ ಚಿತ್ರಕಲೆಯ ಸತ್ವ ಹೆಚ್ಚುಕಡಿಮೆ ನಶಿಸಿ ಹೋಯಿತು.
ಮೊದಲಿನ ಭಾರತೀಯ ಚಿತ್ರಕಲೆಯನ್ನು ಗಮನಿಸಿದರೆ, ಅದನ್ನು ಒಂದು ಧ್ಯಾನಸ್ಥ ಮನಸ್ಥಿತಿಯಲ್ಲಿ ರಚಿಸುವುದು ಕಂಡುಬರುತ್ತದೆ. ಅತಿಯಾದ ತಾಳ್ಮೆ, ಸಂಯಮ ಪ್ರತಿಯೊಂದು ಭಾರತೀಯ ಕಲಾರಚನೆಯ ಜೀವಾಳ. ಆ ನಿಟ್ಟಿನಲ್ಲಿ ಪಾಶ್ಚಾತ್ಯರ ಎಕ್ಸ್‌ಪ್ರೆಶನಿಸಂಗೆ ಸಂಪೂರ್ಣ ವಿರುದ್ಧವಾದದ್ದು ಎನ್ನಬಹುದು. ಎಂತಹ ಸಿಟ್ಟಿನಲ್ಲಿದ್ದರೂ, ಆವೇಶದಲ್ಲಿದ್ದರೂ, ಬೇಸರದಲ್ಲಿದ್ದರೂ, ಅದು ಚಿತ್ರಗಳಲ್ಲಿ ಯಾವ ರೇಖೆಗಳಲ್ಲಿಯೂ ಮೂಡುವಂತಿರಲಿಲ್ಲ. ವಿಷಯ ಯಾವುದೇ ಇದ್ದರೂ ರಚನಾ ಸಮಯದಲ್ಲಿ ಒಂದು ತೆರನಾದ ಧ್ಯಾನಸ್ಥ ಮನಸ್ಥಿತಿ ಹೊಂದಿರುವುದು ಅವಶ್ಯವಾಗಿತ್ತೆಂದು ಕಾಣುತ್ತದೆ. ನಮ್ಮ ಕಲಾತತ್ವಗಳನ್ನು ಗಮನಿಸಿದರೂ, ಜೀವನ ಧ್ಯೇಯಗಳನ್ನು ಗಮನಿಸಿದರೂ, ಹಳೆಯ ಚಿತ್ರಗಳನ್ನು ಕಣ್ಣುಬಿಟ್ಟು ಗಮನಿಸಿದರೂ ಅದರ ನಡುವಿನ ಹೊಂದಾಣಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಒಂದು ಸಮಸ್ಯೆ ಎಂದರೆ, ಹೆಚ್ಚು ಕಡಿಮೆ ಎಲ್ಲವೂ ಒಂದೇ ತೆರನಾಗಿ ಕಾಣುವುದು. ಮೊದಲಾದರೆ ಈ ಸಮಸ್ಯೆ ಇರಲಿಲ್ಲವೆನ್ನಬಹುದು. ಚಿತ್ರಗಳು ಕಾಣಿಸುವುದೇ ಅಪರೂಪ. ಕಂಡಾಗ ಅವು ಮನಸ್ಸಿಗೆ ಖುಷಿ ಕೊಡುವಂತಿತ್ತು. ಈಗ ಹಾಗಲ್ಲ. ನೋಡಿ ಮುಗಿಯದಷ್ಟನ್ನು ಒಂದರ ನಂತರ ಒಂದರಂತೆ ನೋಡಬಹುದು. ಅಷ್ಟೊಂದು ಖುಷಿ ನಮಗೆ ಅಗತ್ಯವಿಲ್ಲವೇನೋ!
ನಾವು ಭಾರತೀಯರು ಎಷ್ಟು ಸಂಪ್ರದಾಯನಿಷ್ಠರು ಎನ್ನುವದನ್ನು ನಾನು ಹೇಳಬೇಕಿಲ್ಲ. ಇಲ್ಲದ ಬೆಕ್ಕನ್ನು ತಂದು ಕಟ್ಟಿ ಪೂಜೆ ಮಾಡುತ್ತೇವೆಯೇ ಹೊರತು, ಬೆಕ್ಕಿನ ಬದಲಿಗೆ ನಾಯಿಯನ್ನು ಕಟ್ಟಿದರೆ ಆದೀತೋ ಎಂದೂ ಯೋಚಿಸುವುದಿಲ್ಲ. ಹಾಗಾಗಿಯೇ ಏನೋ, ತಲೆಮಾರುಗಳಿಂದಲೂ ಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳು ಆಗಿಯೇ ಇಲ್ಲದ್ದು.
ಜಾಗಕ್ಕೆ ತಕ್ಕಂತೆ ಭಿನ್ನ ಶೈಲಿಗಳಿದ್ದುವಾದರೂ, ಬಳಸುವ ಬಣ್ಣಗಳು ಆ ಆ ಜಾಗಕ್ಕೆ ಹೊಂದಿಕೊಳ್ಳುವುದಾದರೂ, ಅದನ್ನು ಗುರುತಿಸಲು ಬಹಳ ಸೂಕ್ಷ್ಮ ಕಣ್ಣುಗಳು ಬೇಕು. ಆಯಾ ಜಾಗಗಳ ಭೌಗೋಳಿಕ ಅರಿವೂ ಬೇಕು. ಅದರಗತ್ಯ ಎಲ್ಲರಿಗಂತೂ ಇರುವುದಿಲ್ಲ. ವಿಷಯ ವಸ್ತುಗಳೂ ಒಂದೇ ತೆರನಾಗಿ ಕಾಣಿಸುವಂತವು. ರಾಮಾಯಣ, ಮಹಾಭಾರತ, ರಾಜರ ದರ್ಬಾರು, ಸಂಭ್ರಮ, ಹಬ್ಬದ ದಿನಗಳು ಇತ್ಯಾದಿ. ಪುರಾಣಕತೆಗಳ ಮೌಲ್ಯಗಳನ್ನು ಪ್ರತಿನಿಧಿಸುವ ಚಿತ್ರಗಳೇ ಅಧಿಕ. ಆನೆಯ ರೂಪದಲ್ಲಿದ್ದ ರಾಕ್ಷಸನ ಹೊಟ್ಟೆಯ ಒಳಗಡೆಯಿಂದ ಸೀಳಿ, ರಾಕ್ಷಸನ ಸಂಹರಿಸಿ, ಹೀರೋ ಆಗಿ ಹೊರಬರುವುದನ್ನು ಕಲ್ಪಿಸಿಕೊಳ್ಳಲು ಈ ಚಿತ್ರಗಳು ಸಹಾಯ ಮಾಡುತ್ತಿದ್ದವೇನೋ. ಭಾರತದೆಲ್ಲೆಡೆ ಇವನ್ನು ಜನರು ನೋಡಬೇಕೆನ್ನುವ ಆಶಯದಿಂದಲೇ, ಎಲ್ಲರೂ ಹೋಗುವ ದೇವಸ್ಥಾನಗಳನ್ನು ಶಿಲ್ಪಗಳಿಂದಲೇ ಕಟ್ಟಿದ್ದು.

ನಾವು ಭಾರತೀಯರಾದರೂ ಭಾರತೀಯ ಕಲೆಗಳ ಬಗೆಗೆ ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಸಿಕ್ಕರೂ, ಅದು ತಿಳಿಯುವಷ್ಟು ಆಸಕ್ತಿದಾಯಕವಾಗಿರುವುದಿಲ್ಲ. ಕಾರಣ, ಬರಿಯ ಇತಿಹಾಸದ ಆಧಾರದ ಮೇಲೆಯೇ ಕಲೆಯನ್ನು ವಿವರಿಸಲ್ಪಡುವುದು. ಎಲ್ಲವನ್ನೂ "ವಿಷಯ"ವಾಗಿ ಮಾಡಿ ಕಲೆಗೆ ವಿಷವಾಗುವುದು. ಯಾವ ರಾಜ ಮಾಡಿಸಿದ್ದು, ಯಾರಿಗೆ ಉಡುಗುರೆಯಾಗಿ ಕೊಟ್ಟ, ಯಾರ ಮಗಳನ್ನು ಮದುವೆಯಾಗಿ ಹೆಂಡತಿಯನ್ನಾಗಿ ಮಾಡಿಕೊಂಡ ಇಂತವುಗಳ ಮುಖಾಂತರ ಕಲೆಯನ್ನು ವಿವರಿಸುವುದು..ಅದೂ ಮ್ಯೂಸಿಯಂಗಳಲ್ಲಿ!
ಆದರೆ, ಭಾರತೀಯ ಕಲಾತತ್ವಗಳು ಅದ್ಭುತವಾಗಿವೆ. ಇದೇ ನೆಲದಲ್ಲಿ ಬೆಳೆದ ಕಾರಣ, ನಮ್ಮ ಆಚರಣೆಗಳಲ್ಲೂ ಹಾಸುಹೊಕ್ಕಾಗಿರುವುದರಿಂದ ಹತ್ತಿರವೂ ಆಗುತ್ತದೆ. ಅಲ್ಲೂ ಒಂದು ಸಮಸ್ಯೆ ಎಂದರೆ, ಅದನ್ನು ಕಲೆಯ ಆಧಾರದಲ್ಲಿ ವಿವರಿಸಿದವರಿಲ್ಲವೆನ್ನುವಷ್ಟು ಕಡಿಮೆ. ಕಾವ್ಯಕ್ಕನುಗುಣವಾಗಿಯೇ ಎಲ್ಲಾ ಶಾಸ್ತ್ರಗಳೂ ವಿವರಿಸಲ್ಪಟ್ಟಿದೆ. ಕಾವ್ಯವೂ ಕಲೆಯೂ ಅಥವಾ ಇನ್ನಾವುದೋ ಒಂದು ಮಾಧ್ಯಮವೂ ಒಂದೇ ಆಗುತ್ತವೆ ಎನ್ನುವ ಅದ್ವೈತ ತತ್ವದ ಅರಿವಾಗದೇ ಇದ್ದಲ್ಲಿ (ಅನುಭವದಿಂದಲ್ಲದಿದ್ದರೂ ಒಂದು ವಿಷಯವಾಗಿ) ಅದರ ಮೂಲಕ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
ರಸಾನುಭವವೇ ಕಲೆಯ ಮೂಲ ಉದ್ದೇಶ. ಅಂದರೆ, 'ಆನಂದ'ವನ್ನುಂಟು ಮಾಡುವುದು. ಈ ರಸಭಾವ ಉಂಟಾಗುವುದು ಸಹೃದಯನಲ್ಲಿ. ಅದು ಉಂಟಾಗಲು, ಸಹೃದಯನು ತನ್ನ ವ್ಯಕ್ತಿತ್ವದ ಹೊರಗೆ ಬಂದು ನಿಲ್ಲಬೇಕು. ಇತ್ತ ರಚಿಸುವವನೂ ತನ್ನ ವ್ಯಕ್ತಿತ್ವ ಕಲಾರಚನೆಗೆ ಅಡ್ಡಿ ಆಗದಂತೆ ನೋಡಿಕೊಳ್ಳಬೇಕು. ಇದು ಭಾರತೀಯ ಕಲಾರಚನೆಯ ಆದರ್ಶತತ್ವಗಳು. ತಾನು ಅನುಭವಿಸಿದ ಭಾವವನ್ನೇ ನೋಡುಗನೂ ಅನುಭವಿಸುವಂತಾಗಬೇಕು ಎನ್ನುವುದೇ ಆದರ್ಶ. ಅದಕ್ಕಾಗಿ ಕಲಾರಚನೆಯಲ್ಲಿ ತೊಡಗಿದಾತ ಅನುಭವಿಸಬೇಕಾದುದೂ ಸಂಪೂರ್ಣವಾಗಿ 'ಆನಂದ'ವನ್ನು.
ಈ ಆದರ್ಶಗಳೆಲ್ಲ ರವಿವರ್ಮನ ಎಂಟ್ರಿ ಇಂದ ಮೂಲೆಗುಂಪಾದವು. ಅಕಡಮಿಕ್ ಸ್ಟೈಲ್ ಅನ್ನುವುದಕ್ಕೇ, ಅದರ ಸ್ವರೂಪಕ್ಕೇ ಈ ಆದರ್ಶಗಳ ಅಗತ್ಯವಿಲ್ಲ. ತನ್ನ ಕೌಶಲದಿಂದ ತದ್ರೂಪವನ್ನು ರಚಿಸುವುದಷ್ಟೇ ಮುಖ್ಯವಾಯಿತು. ಇದು ಒಂದು ತೆರದಲ್ಲಿ ಯಾಂತ್ರಿಕವಾಗಿ ಚಿತ್ರ ರಚಿಸುವ ಕೌಶಲ. ತನ್ನ ವ್ಯಕ್ತಿತ್ವವಾಗಲೀ, ಭಾವನೆಗಳಾಗಲೀ ಇಲ್ಲಿ ಇಣುಕುವುದೂ ಇಲ್ಲ. ಸಾಧಾರಣವಾಗಿ ನಮ್ಮ ನಡುವೆ ಕಾಣಿಸುವ ಚಿತ್ರಗಳು ಈ ಬಗೆಯವು. ನಾನೂ ಮೊದಲು ರಚಿಸಿದವು ಇಂಥವೇ. ಮನೆಯ ಗೋಡೆಗೆ ಬಿಳಿಬಣ್ಣ ಬಳಿದಷ್ಟೇ ಈ 'ಕಲೆ'ಗೆ ಬೆಲೆ. ಆದರೆ, ಕೌಶಲದ ಆಧಾರದಲ್ಲಿ ಹೆಚ್ಚು ಮೆಚ್ಚಬಹುದು.
ಹಾಗೆಂದು ರವಿವರ್ಮನನ್ನು ದೂರಬೇಕಾಗಿಲ್ಲ. ಫೋಟೋದಂತೆ ಫೋಟೋಕ್ಕಿಂತಲೂ ಮೊದಲೇ ತಮ್ಮ ತಮ್ಮ ಚಿತ್ರ ಕಂಡ ರಾಜರಾಣಿಯರು, ಜನರು ಅದಕ್ಕೆ ಮಾರುಹೋದದ್ದು ವಿಶೇಷವಲ್ಲ. ಆ ಕಾಲಕ್ಕೆ ಅಗತ್ಯವಿತ್ತೇನೋ. ಅದರ ಪರಿಣಾಮದಿಂದ ಭಾರತ ಸುಧಾರಿಸಿಕೊಂಡಿಲ್ಲದಿರುವುದೇ ಬೇಸರದ ಸಂಗತಿ. ಕರ್ನಾಟಕವಂತೂ ಹೊಗಳಿಕೊಂಡೇ ಬಾಕಿ!
ಆ ಸಮಯದಲ್ಲಿ ಪಾಶ್ಚಾತ್ಯರಲ್ಲೂ ರಿಯಲಿಸಂ, ರೊಮ್ಯಾಂಟಿಸಿಸಂ, ಇಂಪ್ರೆಷನಿಸಂಗಳೇ ಪ್ರಚಲಿತದಲ್ಲಿದ್ದದ್ದು. ಇವು 'ರಿಯಲಿಸ್ಟಿಕ್'ನಿಂದ ಬೇರೆಯಾದವು. ಅದನ್ನು ವಿವರಿಸತೊಡಗಿದರೆ ಗೊಂದಲವಾದೀತಷ್ಟೆ. ನಮ್ಮ ಕತೆಗೆ ಮುಖ್ಯವಾದ ಅಂಶ ಅವರು ಚೇತರಿಸಿಕೊಂಡರು ಎನ್ನುವುದು. (ಅಲ್ಲೇನೇನಾಯಿತು ಎನ್ನುವುದನ್ನು ಸ್ಥೂಲವಾಗಿ ಕಲೆಗೊಂದು ಭೂಮಿಕೆ - 1ರಲ್ಲಿ ಹೇಳಿ ಆಗಿದೆ). ನಾವು ಇದ್ದ ಸತ್ವವನ್ನು ಮೂಲೆಗೆ ತಳ್ಳಿ ಆಗಿತ್ತು. ಅವರುಗಳ ಜೊತೆಜೊತೆಯಲ್ಲೇ ಚೇತರಿಸಿಕೊಳ್ಳಲೂ ಇಲ್ಲ. ಹೊಸ ದಾರಿಗಳ ಆವಿಷ್ಕಾರ ನಡೆಯಲೂ ಇಲ್ಲ.
ಸ್ವಾತಂತ್ರ್ಯಕ್ಕಾಗಿ ಸ್ವದೇಶಿ ಮೂವ್‌ಮೆಂಟ್ ಶುರುವಾಯ್ತು. ಒಂದು ಅಮೋಘ ಧ್ಯೇಯಕ್ಕಾಗಿ ಚಿತ್ರರಚನೆಗಳೂ ನಡೆದವು. ಆ ಕಾಲದ ಅನಿವಾರ್ಯತೆ ಅದು. ಸೌಂದರ್ಯದ ಗೊಡವೆಗೆ ಹೋಗದೆ ಸ್ವಾತಂತ್ರ್ಯಕ್ಕಾಗಿ ಪರಿತಪಿಸಿದ ಕಾಲ. ಈ ಸಮಯದಲ್ಲೇ ರವೀಂದ್ರನಾಥ ಟಾಗೋರ್ ಹುಟ್ಟಿಕೊಂಡದ್ದು. ಭಾರತವು ನಿಜವಾಗಿಯೂ ಸ್ಮರಿಸಬೇಕಾದ ವ್ಯಕ್ತಿ ಈ ಟಾಗೋರ್. ನಶಿಸಿ ಹೋದ ಭಾರತೀಯ ಕಲಾಸತ್ವಗಳ ಪುನರುಜ್ಜೀವನಕ್ಕಾಗಿ ಹೊರಟವರಿವರು.

ಬ್ರಿಟಿಷರು ಭಾರತಕ್ಕೆ ಬಂದು, ಇಲ್ಲಿಯ ಕಲೆಗಳನ್ನು ಕಂಡು ಹಾಸ್ಯಾಸ್ಪದವಾಗಿ ಟೀಕಿಸಿದ್ದರು. ಮುಖ್ಯವಾಗಿ, ಪರ್ಸ್ಪೆಕ್ಟಿವ್ ಮತ್ತು ಅಂಗಾಂಗಗಳ ಪ್ರಮಾಣಗಳೇ ನಮಗೆ ಗೊತ್ತಿಲ್ಲವೆಂದು. ಬಾಲಕ ಕೃಷ್ಣನನ್ನು ದೊಡ್ಡದಾಗಿಯೂ, ಅವನ ಪಕ್ಕದಲ್ಲಿ ಆಟಿಕೆಗಳಂತೆ ನಿಂತ ಸಣ್ಣ ಗೋವುಗಳನ್ನು ಕಂಡು ಅವರು ಇನ್ನೇನಂದಾರು!
ಅವರು ನೋಡಿ ಬೆಳೆದ ಗ್ರೀಕ್ ಕಲೆಗಳು ಅತ್ಯಂತ ಕರಾರುವಕ್ಕಾಗಿ, ನರ ನರಗಳ ಸಮೇತ ದೇಹದ ಬಾಹ್ಯರೂಪವನ್ನು ಚಿತ್ರಿಸಿದ್ದವು. ಆಗಿನ ಕಲಾಕೇಂದ್ರವಾದ ಪ್ಯಾರಿಸ್‌ನಲ್ಲೂ ಬಾಹ್ಯರೂಪಗಳ ಪ್ರತಿರೂಪವನ್ನೇ ಮಾಡುತ್ತಿದ್ದುದು. ಇವರಿಗೆ ಭಾರತೀಯ ಚಿತ್ರಗಳು ಹಾಸ್ಯಾಸ್ಪದವಾಗಿ ಕಂಡಿದ್ದರೆ ಆಶ್ಚರ್ಯವೇನಲ್ಲ. ಭಾರತೀಯರು ಮೌಲ್ಯಕ್ಕೆ ಒತ್ತು ಕೊಡುತ್ತಿದ್ದರೇ ವಿನಃ ಬಾಹ್ಯರೂಪಕ್ಕಲ್ಲವೆನ್ನುವುದು ಇವರಿಗೆ ಹೇಗೆ ತಿಳಿಯಬೇಕು!
ಇದನ್ನೆಲ್ಲ ಗಮನಿಸಿದ ಯುರೋಪಿನವನೇ ಆದ ಕಲಾ ಇತಿಹಾಸಜ್ಞ ಇ.ಬಿ.ಹ್ಯಾವೆಲ್‌ರು, ಅಬನೀಂದ್ರನಾಥ ಟಾಗೋರರು, ರವೀಂದ್ರನಾಥ ಟಾಗೋರರು, ಆನಂದಕೂಮಾರಸ್ವಾಮಿಯಂತಹ ಸೌಂದರ್ಯಶಾಸ್ತ್ರಜ್ಞರೆಲ್ಲ ಸೇರಿದಾಗ 'ಬೆಂಗಾಲ್ ರಿವೈವಲಿಸಂ' ಶುರುವಾಯ್ತು. ಕಲ್ಕತ್ತಾ ಈಗ ಭಾರತೀಯ ಕಲಾಚಟುವಟಿಕೆಗಳ ಕೇಂದ್ರಬಿಂದು. ಅಲ್ಲೇ ಟಾಗೋರರ 'ಶಾಂತಿನಿಕೇತನ'.
ಭಾರತದ ಕಲೆ ಸಮೃದ್ಧವಾಗೇ ಇದೆ. ಅದು ಬಾಹ್ಯರೂಪವನ್ನು ಪ್ರತಿನಿಧಿಸುವುದಿಲ್ಲವೆಂದ ಮಾತ್ರಕ್ಕೆ ಅದು ಹಾಸ್ಯಾಸ್ಪದವಾಗಬೇಕಿಲ್ಲ. ಅದರ ಶಕ್ತಿ ಆಂತರಿಕವಾದದ್ದು. ಇಲ್ಲಿನ ಪರ್ಸ್ಪೆಕ್ಟಿವ್‌ನಲ್ಲಿಯೂ ಒಂದು ತೆರನಾದ ವಿಶೇಷ ಸೌಂದರ್ಯವಿದೆ. ಪ್ರಮಾಣಗಳು, ಪ್ರತಿನಿಧಿಸುವ ಮೌಲ್ಯಗಳಿಗನುಗುಣವಾದಂತವು. ಇತ್ಯಾದಿ ಧೋರಣೆಗಳ ಮೂಲಕ, ಬ್ರಿಟಿಷರ 'ಅಕಡಮಿಕ್ ಸ್ಟೈಲ್' ಅನ್ನು ತ್ಯಜಿಸಿ, ಸ್ವದೇಶಿ ಮೂವ್‌ಮೆಂಟ್‌ಗಳಲ್ಲಿ ಭಾಗಿ ಆದರು. ಸ್ವದೇಶಿ ತತ್ವಗಳನ್ನು ಪರಿಚಯಿಸಲಾಯಿತು. ಸ್ವದೇಶಿ ಮಹತ್ವವನ್ನು ಎತ್ತಿ ಹಿಡಿಯಲಾಯಿತು. ಇದಕ್ಕೆ ಸಹಕರಿಸಿದ, ತಳಹದಿಯನ್ನು ರೂಪಿಸಿಕೊಟ್ಟ ಇ.ಬಿ.ಹ್ಯಾವೆಲ್‌ರು ಸ್ಮರಣೀಯರು.
ಭಾರತಕ್ಕೆ ಸಮಕಾಲೀನ ಕಲಾಪರಿಚಯವಾಗಲು, ಕಲಾ ವಿಚಾರಗಳು ವಿನಿಮಯವಾಗಲು, ಕಲ್ಕತ್ತದಲ್ಲಿ ವಿದೇಶಿಯರ Bahaus movementಗೆ ಸಂಬಂಧಪಟ್ಟ ಕೃತಿಗಳನ್ನೂ ಭಾರತೀಯರ ಕೃತಿಗಳೊಂದಿಗೇ ಇಟ್ಟು ಪ್ರದರ್ಶಿಸಲಾಯ್ತು. ಇದು ಮೊತ್ತಮೊದಲ ಬಾರಿಗೆ ನಡೆದ ಕಲಾಪ್ರದರ್ಶನವೆನಿಸುತ್ತದೆ. ಇದರಲ್ಲೇ ಸುನಯನೀ ದೇವಿಯವರ ಕೃತಿಗಳೂ ಪ್ರದರ್ಶನಗೊಂಡಿದ್ದವು (ಇನ್ನು ಫೆಮಿನಿಸ್ಟ್‌ಗಳು ಬೇಸರಿಸಬೇಕಿಲ್ಲ). ಮಿನಿಮಲಿಸಂ ಧೋರಣೆಯ ವಿದೇಶೀ ಕೃತಿಗಳಲ್ಲಿ ಕಂಡುಬಂದ geometric ಆಕಾರಗಳಿಂದ ಪ್ರಭಾವಿತರಾಗಿ ಗಗನೇಂದ್ರನಾಥ ಟಾಗೋರರ ಚಿತ್ರಗಳಲ್ಲೂ ಅವೇ ಆಕಾರಗಳು ಮೂಡತೊಡಗಿದವು.
ಹೀಗೆ ನಿಧಾನಕ್ಕೆ ಭಾರತ ಭಾರತೀಯ ಮಾಡರ್ನಿಸಮ್‌ಗೆ ಕಾಲಿಟ್ಟಿತು. ಇನ್ನಿಲ್ಲಿ ಮುಂದುವರಿದಂತೆ, ತುಂಬಿರುವುದು ಕಲೆಗಿಂತ ಹೆಚ್ಚು ರಾಜಕೀಯವೇ. ಬೆಳಗಿಂದ ಕತ್ತಲವರೆಗೂ ಎಡ-ಬಲ ಹೊಡಚುವವರಿಗೆ ಆಸಕ್ತಿ ಬಂದೀತೇನೋ!





