ಇಂದಿಗೂ ಯಾಕೆ ರಿಯಲಿಸ್ಟಿಕ್ ಮತ್ತು ರಿಯಲಿಸಂ ಮಾನದಂಡ!?
- sushrutha d
- Mar 8, 2025
- 3 min read
Updated: Jun 9, 2025
ಕಲೆಗೊಂದು ಭೂಮಿಕೆ : ನಮಗೊಂದು ದುರಭ್ಯಾಸ. ಎಲ್ಲವನ್ನೂ ಅಥೆಂಟಿಕ್ಕಾಗಿಸಬೇಕೆಂಬುದು. ಅದಕ್ಕಿರುವ ಸುಲಭೋಪಾಯ ನೈಜವೆಂಬಂತೆ ಬಿಂಬಿಸುವುದು.
ಭೈರಪ್ಪರ ಸತ್ಯ ಮತ್ತು ಸೌಂದರ್ಯದಲ್ಲಿ ಒಂದು ಚಂದದ ಉದಾಹರಣೆಯಿದೆ. ನಾಯಿ ಒಂದು ಸೇಬಿನ ಯಥಾವತ್ತಾದ ಚಿತ್ರ ನೋಡಿ ಜೊಲ್ಲು ಸುರಿಸಿದರೆ, ಅದು ಕಲೆಯ ಸೋಲು ಅಂತೇನೋ. ಸುಲಭವಾಗಿ ಅರ್ಥವಾಗಬೇಕಾದರೆ ನಾಟಕದೊಂದಿಗೋ ಪುರಾಣದೊಂದಿಗೋ ಕಂಪೇರ್ ಮಾಡಬೇಕು. ಈಗ ರಾಮನನ್ನು ಕಾಡಿಗಟ್ಟುವ ಸೀನೆಲ್ಲ ಇದೆ ಅಂತ ಇಟ್ಟುಕೊಳ್ಳುವ. ನಾಟಕದ ರಂಗದ ಮೇಲೆ ಕಾರ್ಡ್‌ಬೋರ್ಡಿನ ತುಂಡೆರಡಿಟ್ಟು ಹಸಿರು ಕಲರ್ ಲೈಟ್ ಬಿಟ್ಟು ದಟ್ಟಕಾಡು ಎಂದರೆ ನಾವು ಆ ಅಭಿವ್ಯಕ್ತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದರೆ ನಾವು ಅಯ್ಯೋ ಕಾಡು ಎಂದು ಹೆದರಹೊರಡುವುದಿಲ್ಲ. ಅದು ನೈಜವಲ್ಲವೆಂದು ತಿಳಿಯುತ್ತಾನೇ (ಪ್ರೆಸೆಂಟ್ ಕಂಟಿನ್ಯೂಸ್), ಒಂದು ಮಾನಸಿಕ ದೂರವನ್ನು ಕಾಪಿಟ್ಟುಕೊಂಡು ಆ ಪರಿಸ್ಥಿತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದರೆ, ಸೇಬಿನ ಉದಾಹರಣೆಯಲ್ಲಿ ಹಾಗಲ್ಲ. ನಾಯಿ ಅದು ನಿಜವಾಗ್ಲೂ ಸೇಬು ಅಂದುಕೊಂಡು ಜೊಲ್ಲು ಸುರಿಸುವುದು! ನಾಯಿಯ ಉದಾಹರಣೆ ಮನುಷ್ಯರಿಗೆ ಬೇಜಾರಾಗ್ಬಾರ್ದು ಅಂತಷ್ಟೆ. ಮನುಷ್ಯರೇನು ಕಡಿಮೆಯಿಲ್ಲ ಮತ್ತೆ.
ಈಗ ಒಂದು ಸಿನಿಮಾ. ನಮಗೆ ಸಿನಿಮಾದಲ್ಲಿರುವುದು ನಿಜವಲ್ಲ, ಅದು ಕೃತಕವಾಗಿ ಸೃಷ್ಟಿಸಿದ್ದೆಂದು ಮೊದಲೇ ಗೊತ್ತು. ಆದರೆ, ಅದನ್ನು ನೋಡುವ ಸಮಯದಲ್ಲಿ?! ಪ್ರೆಸೆಂಟ್ ಕಂಟಿನ್ಯೂಸ್ಸಾಗಿ ಸಿನಿಮಾದಲ್ಲಿ ತೋರಿಸಿದ್ದೆಲ್ಲ ಸತ್ಯವೆಂಬಂತೆ ನಮ್ಮನ್ನು ನಂಬಿಸಲಾಗುತ್ತದೆ ಮತ್ತದೇ ಇಂದಿಗೆ ಸ್ಟಾಂಡರ್ಡ್ ಆಫ್ ಗುಡ್ ಸಿನಿಮಾ ಕೂಡ! ಮುಂಬೈ ಪೇಟೆ ನಿಜವಾಗಿರುವ ರೀತಿಗೂ ಸಿನಿಮಾದಲ್ಲಿ ಮುಂಬೈಯನ್ನು ಬಿಂಬಿಸಿದ ರೀತಿಗೂ ವ್ಯತ್ಯಾಸ ಕಂಡರೆ, ಅದು ಅನ್‌ರಿಯಲಿಸ್ಟಿಕ್ಕೆನಿಸಿ, ಸಿನಿಮಾದ ಮಟ್ಟ ಕಳಪೆ ಸಾಲಿಗೆ ಸೇರುತ್ತದೆ! ಇನ್ನು ಸ್ವಲ್ಪ ಮುಂದುವರಿದು ನರ್ಸ್ ಪಾತ್ರ ಮಾಡಿದ ಆಕ್ಟ್ರು ನಿಜವಾದ ನರ್ಸಲ್ಲ ಎಂದೇನಾದ್ರೂ ಗೊತ್ತಾಗಿಬಿಟ್ರೆ!!?

ಸಿನಿಮಾಕ್ಕೇನು?! ಪಾತ್ರ, ಜಾಗ, ಕತೆ, ಕ್ಯಾಮರಾ ಇತ್ಯಾದಿ ಎಲ್ಲವೂ ಒಂದೊಂದು ಎಲಿಮೆಂಟ್‌ಗಳಷ್ಟೆ. ಹೇಗೆ ಈ ಎಲ್ಲ ಎಲಿಮೆಂಟನ್ನು ಒಟ್ಟುಸೇರಿಸಿ ಒಂದೊಳ್ಳೆಯ, ದೇಶಕಾಲಕ್ಕೆ ತಕ್ಕ ಅಭಿವ್ಯಕ್ತಿಯಾಗಿಸಬಹುದು ಎಂಬುದು ನಿರ್ದೇಶಕನ ಕೆಲಸ. ಯಾವ ಎಲಿಮೆಂಟಿನ ಮೂಲಸ್ವರೂಪಕ್ಕೂ ನಿರ್ದೇಶಕ ನಿಷ್ಠನಾಗಿರಬೇಕಿಲ್ಲ. ಹಾಗಿದ್ದೂ, ಆಗಬೇಕೆಂದು ಬಯಸುತ್ತಿದ್ದರೆ ಅದೊಂದು ಸೋಶಿಯಲ್ ಕನ್‌ಸ್ಟ್ರಕ್ಟ್ ಆಗಿರಬೇಕಷ್ಟೆ. ನೈಜತೆ ಎಂಬುದು ಇಂದಿಗೆ ಅಂತದ್ದೇ ಒಂದು ಕನ್‌ಸ್ಟ್ರಕ್ಟೆಡ್ ಎಕೊ ಚೇಂಬರ್.
ಹಾಗಾದರೆ ಈ 'ರಿಯಲ್' ಭೂತ ನಮ್ಮೊಳಗೆ ಹೊಕ್ಕಿದ್ದು ಯಾವಾಗ ಅಂತ! ರಪರಪ ಹಿಸ್ಟರಿ ಬುಕ್ ತೆಗೀರಿ. ಹೋಮ್‌ವರ್ಕ್ ಮಾಡ್ಕೊಂಡು ಬಂದಿದ್ದೀರಾ ಅಥವಾ ಶಾಲೆಲೇ ಬಿಟ್ಟು ಬಂದಿದ್ದೀರಾ?
ಪುಟಸಂಖ್ಯೆ ಸ್ವಾತಂತ್ರಾಪೂರ್ವದ್ದು. ಅಲ್ಲಿ ನೋಡಿದರೆ, ಯಾವುದೇ ಘಟನೆಯಿದ್ದರೂ ಅದನ್ನೊಂದ್ಸ್ವಲ್ಪ ಎಕ್ಸಾಜರೇಟ್ ಮಾಡಿ ಬಿಂಬಿಸುವ ಪ್ರವೃತ್ತಿ ನಮ್ಮದಾಗಿತ್ತು. ಹಳೆಯ ಚಿತ್ರ, ಶಿಲ್ಪ, ಕವಿತೆ, ನಾಟಕ, ಪುರಾಣ ಎಲ್ಲಕಡೆಯೂ ಈ ಕ್ವಾಲಿಟಿಯನ್ನು ಗುರುತಿಸಬಹುದು. ನಮ್ಮ ಎಲ್ಲಾ ರಾಜರೂ ಒಂದಲ್ಲಾ ಒಂದು ನರೇಟಿವ್‌ನಲ್ಲಿ ಅತಿರಥ ಮಹಾರಥ ಶೂರರೇ ನೋಡಿ. ಎಲ್ಲಾ ದೇವರೂ ಸಿಕ್ಕಾಪಟ್ಟೆ ಪವರ್‌ಫುಲ್. ತಪಸ್ವಿಗಳಂತೂ ಕೇಳುದೇ ಬೇಡ. ಕಾಡಲ್ಲಿ ಕುಳಿತವನಿಗೆ ಮೈತುಂಬ ಹುತ್ತಗಟ್ಟಿದ್ರೂ ಊಹೂಂ ಗೊತ್ತಾಗುದಿಲ್ಲ.
ವೆಸ್ಟರ್ನ್ ಅಥವಾ ಯೂರೋಪ್ ಸೆಂಟ್ರಿಕ್ ಯೋಚನೆಗಳಲ್ಲೂ ಸುಮಾರು ಹದಿನೆಂಟನೇ ಶತಮಾನದಲ್ಲಿ ರೊಮ್ಯಾಂಟಿಸಿಸಂ ಪ್ರಚಲಿತ. ಒಂದು ವಸ್ತುವನ್ನು ಇದಕ್ಕಿಂತ ಹೆಚ್ಚು ವರ್ಣಿಸಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಅತಿರಂಜಿತ! ಇದನ್ನೇ ವರ್ಷಗಟ್ಟಲೆ ನೋಡಿ ನೋಡಿ ಬೋರು ಬಂದ ಫ್ರೆಂಚಿನವನೊಬ್ಬ, 'ಅಲಾ ಸಾಮಿ, ನಮ್ಮೂರಲ್ಲಿ ಬೆಳಗಾದ್ರೆ ಜನ ಊಟಕ್ಕೆ ಕಷ್ಟಬತ್ತಾವ್ರೆ, ಹೊಟ್ಟೆಗ್ ಅನ್ನ ಇಲ್ದೇ ಆಲೂಗಡ್ಡೆ ತಿಂತಾವ್ರೆ, ನೀವು ನೋಡಿದ್ರೆ ಎಲ್ಲಾದನ್ನೂ ಚನ್ನಾಗಿ ಹೊಗಳ್ತಾನೇ ಇದೀರಲ್ಲ' ಅಂತ ಕ್ಯಾತೆ ಶುರುಮಾಡ್ದ. ಅದರಿಂದ ರಿಯಲಿಸಂ ಶುರುವಾಯ್ತು. ಕಷ್ಟಗಳೋ ಕಷ್ಟ. ಹೇಳಿ ಸುಖ ಇಲ್ಲ.

ಭಾರತದ್ದು ಮೂಲತಃ ಮ್ಯಾಕ್ರೋ ಲೆನ್ಸ್. ಯುಧ್ಧದ ಸೀನ್ ಚಿತ್ರ ಬಿಡಿಸುದಿದ್ದರೆ, ಅದೇ ಚಿತ್ರದಲ್ಲಿ ಕುದುರೆ ಮೇಲೆ ರಾಜ, ಹಿಂಬಾಲಿಸುತ್ತಿರುವ ಸೈನಿಕರು, ಸತ್ತು ಬಿದ್ದ ಕುದುರೆ, ದೂರದಲ್ಲಿನ ಅರಮನೆಯ ಮಹಡಿಯಲ್ಲಿ ಕಿಟಕಿ ನೋಡುತ್ತಾ ಕುಳಿತ ರಾಣಿ, ಕಾಲೊತ್ತುತ್ತಿರುವ ದಾಸಿಯರು, ಬದಿಯಲ್ಲಿನ ಕಾಡಿನಲ್ಲಿ ಪ್ರಾಣಿಪಕ್ಷಿಗಳು ಎಲ್ಲಾ ಇರ್ತಿತ್ತು. ಈ ಸಮಯದಲ್ಲಿ ಇಲ್ಲಿ ಹೀಗಾಗ್ತಿದ್ದಾಗ ಅಲ್ಲಿ ಹಾಗಾಗ್ತಿತ್ತು ಅನ್ನೋ ಟೈಪ್. ರಿಯಲಿಸ್ಟಿಕ್ಕಿದು ಮೈಕ್ರೋ. ರಾಜನ ಎಡ ಮೊಣಕೈ ಹತ್ತಿರದ ಒಂದು ಕೂದಲು ಕತ್ತಿಯ ಅಲುಗಿಗೆ ಸಿಕ್ಕಿ ಕಟ್ಟಾಗಿತ್ತು ಟೈಪ್. 'ಡೀಟೈಲ್ ಮ್ಯಾಟರ್ಸ್' ಎಂಬ ಸ್ಲೋಗನ್‌ಗಳಿಗೆ ಮೂಲ.

ಸ್ವಾತಂತ್ರ್ಯಕ್ಕೆ ಮೊದಲೇ ರವಿವರ್ಮನ ಮುಖಾಂತರ ರಿಯಲಿಸ್ಟಿಕ್ ಶೈಲಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದರೂ, ಅದೊಂದು ವ್ಯಾಲ್ಯೂ ಆಗಿ ಆಗ ಸ್ವೀಕೃತವಾಗಿಲ್ಲ. ವ್ಯಾಲ್ಯೂ ಆದದ್ದು ರಿಯಲಿಸಂ. ಇಂದಿಗೆ ಇವೆರಡೂ ಕನ್‌ಫ್ಯೂಶನ್ ಆಗಲು ಲಾಯಕ್ಕಷ್ಟೇ.

ಸ್ವಾತಂತ್ರ್ಯಾ ನಂತರ ಸಂಪೂರ್ಣವಾಗಿ ಸ್ವದೇಶದಿಂದ ಮುಕ್ತಗೊಂಡು, ಗ್ಲೋಬಲ್ ಆಗಿ ತೆರಕೊಂಡ ಭಾರತಕ್ಕೆ ನಮಿಗೂ ಕಷ್ಟಗಳಿದೆ ಅಂತ ಗೊತ್ತಾಗಲು ಶುರುವಾಯ್ತು. ರೈತ ದೇಶದ ಬೆನ್ನೆಲುಬು, ಕಷ್ಟ ಕಷ್ಟ. ಎದ್ದೇಳ್ರಿ, ಗುಂಡಿಕ್ರಿ, ಹೊಡೀರಿ, ಬಡೀರಿ, ಕಷ್ಟ ಕಷ್ಟ. ಮಹಿಳಾ ಸ್ವಾತಂತ್ರ್ಯ, ಪುರುಷ ಪ್ರಾಧಾನ್ಯ, ಕಷ್ಟ ಕಷ್ಟ. 1950ರ ಆಸುಪಾಸಿನ ಎಲ್ಲರೂ ಈ ಫ್ರೆಂಚ್ ರಿಯಲಿಸಂ ವಾದಗಳಿಂದ ಇನ್ಸ್ಪೈರ್ ಆದವ್ರೇ. ನಮ್ಮ ಕಷ್ಟಗಳನ್ನು ಪ್ರತಿನಿಧಿಸುವುದು, ಸಮಾಜಕ್ಕೆ ಹಿಡಿದ ಕನ್ನಡಿಯಾಗುವುದು ಎಟ್ಸೆಟ್ರಾ. ಈಗ ಹಿರಿತಲೆಗಳಾಗಿ ತಮ್ಮ ಅನುಭವಫೂರಿತ ಮಾರ್ಗದರ್ಶನ ಮಾಡುವವರೂ ಇಂತಹ ಅಭಿವ್ಯಕ್ತಿಗಳನ್ನೇ ಅಭ್ಯಸಿಸಿ ತಮ್ಮ ಅಭಿಪ್ರಾಯ ರೂಪಿಸಿಕೊಂಡವರು. ಅವರ ಕಷ್ಟದ ಅನುಭವದ ಮಾತು ಕೇಳಿ, ಮನಸೋತು, ಅದನ್ನೇ ರಿಪೀಟ್ ಟೆಲಿಕಾಸ್ಟ್ ಮಾಡುತ್ತಿರುವ ನಾವುಗಳು ಈಗ. ಫುಲ್ಲು ರಿಯಲಿಸ್ಟಿಕ್ ಸಿಚುವೇಶನ್.
ಇಂದಿಗೆ, ಒಬ್ಬ ಬಸ್ಸಲ್ಲಿ ಸೀಟ್ ಸಿಗಲಿಲ್ಲವೆಂದಾದ ಕೂಡಲೇ ರೀಲ್ಸ್ ಮಾಡಿ ಹರಿಯ ಬಿಡುವಾಗ, ಆಟೋದವ ಕೈಹಿಡಿದಲ್ಲಿ ನಿಲ್ಸದಿದ್ದರೆ ಫೇಸುಬುಕ್ ಪೋಸ್ಟಾಗುವ, ಕಮೆಂಟ್‌ಗಳಲ್ಲಿ ಎಲ್ಲರ ರಿಯಲಿಸ್ಟಿಕ್ ಅನುಭವವೂ ಪುನಃ ಪುನಃ ಹಂಚಿಕೆಯಾಗುವಾಗ, ಮತ್ತವೆಲ್ಲ ಆಯಾ ಕ್ಷಣದಲ್ಲೇ ಇಡೀ ಊರಿಗೇ ತಿಳಿಯುವಾಗ, ಇನ್ನಷ್ಟು ರಿಯಲಿಸಂ ಬೋರು ಬರದಿದ್ದೀತೇ? ಹೀಗಿರುವಾಗ್ಲೂ, ಅನ್‌ರಿಯಲಿಸ್ಟಿಕ್ಕೆನ್ನುವುದು ಸಮಸ್ಯೆ ಎಂದನಿಸಿಕೊಳ್ಳುವುದು ಯಾಕೆ? ನೈಜತೆಯೇ ಇಂದಿಗೂ ಸ್ಟಾಂಡರ್ಡ್ ಆಗಿ ಉಳಿದಿರುವುದು ಯಾಕೆ?!
ಕೆಲವರ್ಷಗಳ ಮೊದಲಿನವರೆಗೂ ನಾನೂ ಇದೇ ರಿಯಲಿಸ್ಟಿಕ್ ಭೂತ ಮೈತುಂಬ ಏರಿಸಿಕೊಂಡಿದ್ದವನು. ರಿಯಲಿಸ್ಟಾಕ್ಕಾಗಿಲ್ಲ ಎಂಬುದಾಗಿನ ಫೇವರೆಟ್ ಡೈಲಾಗ್. ಆ ಮನಸ್ಥಿತಿ ಹೇಗಿರುತ್ತೆಂದು ಚೆನ್ನಾಗಿ ಬಲ್ಲೆ. ಸ್ಕಿಲ್, ಕ್ರಾಫ್ಟ್, ಶೈಲಿ ಎಂಬ ಪದಗಳೆಲ್ಲ ನಾಲಿಗೆ ತುದಿಲಿ ಇರುತ್ವೆ. ಅದನ್ನೇ ಕಲೆಯೆಂದು ಭ್ರಮಿಸಿ ಅರ್ಥೈಸಿಕೊಂಡಿರುತ್ತೇವೆ. ಅದಕ್ಕೇ ರಿಯಲಿಸ್ಟಿಕ್ಕು, ಅನ್‌ರಿಯಲಿಸ್ಟಿಕ್ಕು ಎಂಬುದೆಲ್ಲ ಮುಖ್ಯ ಅನಿಸ್ತಾ ಇರ್ತದೆ.
ಬಟ್, ಸ್ಕಿಲ್ ಇಸ್ ಜಸ್ಟ್ ಅ ಮೀಡಿಯಂ ಟು ಎಕ್ಸಿಬಿಟ್ ಆರ್ಟ್. ಮಗು ನಡಿಯೋಕೆ ಕಲ್ತಾಗ ಅದು ಸ್ಕಿಲ್, ಕಲೆಯಲ್ಲ. ಹಾಗೆ ಹೇಳಿ, ಬರೀ ನಡೆಯುವ ಮುಖಾಂತರ ಕಲೆ ಅಭಿವ್ಯಕ್ತಿಗೊಳ್ಳಲು ಸಾಧ್ಯವಿಲ್ಲವೇ? ಇದೆ. ಮೊದಲೊಮ್ಮೆ ಚೀನಾ ಮಹಾಗೋಡೆಯಲ್ಲಿ ಇಬ್ಬರು ನಡೆದು ಮಧ್ಯದಲ್ಲಿ ಸಂಧಿಸಿ, ಪರಸ್ಪರ ಅಪ್ಪಿಕೊಂಡು, ಮತ್ತೆ ಬೇರ್ಪಟ್ಟು ಅವರವರ ದಾರಿ ಹಿಡಿದ ಕುರಿತು ಹೇಳಿದ್ದು ನೆನಪಿದ್ದರೆ ಅದೊಂದು ಇದಕ್ಕೆ ಒಳ್ಳೆಯ ಉದಾಹರಣೆ.

ಕೇಳಿಕೊಳ್ಳಬೇಕಾದ್ದಿಷ್ಟೆ. ಯಾವ ಮೌಲ್ಯವು ಕಲೆಯಾಗಿ ಪರಿಗಣಿತಗೊಳ್ಳಬೇಕು? ಮಿಮಿಕ್ರಿ ಮಾಡುವುದೋ, ಸಂಗೀತ ಸೃಷ್ಟಿಸುವುದೋ?! ಈಗ ಸಂಗೀತವೂ ಅವರ ಹಾಗೆ ಹೇಳುವುದು ಇವರ ಹಾಗೇ ಹೇಳುವುದು ಎಂಬಲ್ಲಿಗೆ ಬಂದಿದೆ, ಅಂತದ್ದನ್ನು ಬಿಟ್ಟು ಕೇಳಿಕೊಳ್ಳಿ.
ಸಣ್ಣ ಸಣ್ಣ ವಿಷಯ. ಒಂದು ಸ್ವಲ್ಪ ಆಕಡೆ ಈಕಡೆ ಕ್ಷೇತ್ರಗಳನ್ನೂ ನೋಡುತ್ತಿದ್ದರೆ, ಒಂದಕ್ಕೊಂದರ ಮೌಲ್ಯಗಳ ಕಂಪೇರ್ ಮಾಡುತ್ತಾ ಕಲೆ ಎಂಬ ಒಟ್ಟಾರೆ ಕ್ವಾಲಿಟಿಯನ್ನು ಅರಿತುಕೊಳ್ಳುವ ಪ್ರಯತ್ನಪಟ್ಟರೆ ಸಾಕು. ಈ ರಿಯಲಸ್ಟಿಕ್ಕು ಎಲ್ಲ ಇಂದಿಗೆ ನಾವುಗಳೇ ಕಟ್ಟಿಕೊಂಡ ಅನಗತ್ಯ ಕನ್‌ಸ್ಟ್ರಕ್ಟ್ ಎಂದು ತಿಳಿಯುತ್ತದೆ. ಅದದನ್ನೇ ಒಂದಲ್ಲಾ ಒಂದು ನೆಪದಲ್ಲಿ ರಿಪೀಟ್ ಮಾಡುವುದು, ಸಮರ್ಥಿಸುವುದು ಕಲೆಯ ನಿಜವಾದ ಬೆಳವಣಿಗೆಯನ್ನು ಹತ್ತು ವರ್ಷವಾದರೂ ಹಿಂದಕ್ಕೆಳೆದಂತೆ. ಸಮಾಜದಲ್ಲಿ ಆಲ್ರೆಡಿ ಎಕ್ಸಿಸ್ಟಿಂಗ್ ಮತ್ತು ಹಬ್ಬಿದ ಯೋಚನೆಯಾದ ಕಾರಣ, ಜನರೆಲ್ಲರೂ ಡಿಫೆನ್ಸಿವ್ ಆಗಿಯೇ ಯೋಚಿಸುವುದರಿಂದ, ಇಟ್ಸ್ ವೇ ಟೂ ಈಸಿ ಟು ರಿ-ಇನ್‌ಫೋರ್ಸ್ ದ ಸೇಮ್ ಐಡಿಯಾ, ಬಟ್ ದ ಚೇಂಜ್ ರಿಕ್ವೈರ್ಡ್ ವಿತ್ ಅವರ್ ಥಾಟ್ಸ್, ವರ್ಡ್ಸ್ ಆಂಡ್ ಆಕ್ಷನ್ಸ್.



