top of page

ಕಾಡುವ ಕಂಟೆಂಪರರಿ

  • Writer: sushrutha d
    sushrutha d
  • Jun 6, 2023
  • 4 min read

Updated: Jun 9, 2025

ಕಲೆಗೊಂದು ಭೂಮಿಕೆ 14 : ಕಂಟೆಂಪರರಿ ಎಂದರೆ ಈ ಕಾಲದ್ದು ಎಂಬುದಾಗಿ ಸಾಮಾನ್ಯ ಅರ್ಥವಾದರೂ ಹಲವರು ಹಲವಾರು ರೀತಿ ಇದನ್ನು ಡಿಫೈನ್ ಮಾಡಿರುವದರಿಂದ ಅರ್ಥ ಮಾಡಿಕೊಳ್ಳ ಹೊರಟಾಗ ಸ್ವಲ್ಪ ತಲೆಕೆಡುವಂತಹ ವಿಚಾರವೆನಿಸುತ್ತದೆ. ಜಾಸ್ತಿ ಈ ಕಂಟೆಂಪರರಿ ಪದದ ಅರ್ಥದ ಹಿಂದೆ ಹೋದರೆ ಈ ಸೆಕೆಂಡು, ಈಗಿದ್ದು, ಅದು ಹಳೇದಾಯ್ತು, ಇದು, ಈಗ, ಈ ಮಿಲಿಸೆಕೆಂಡು ಎಂದೆಲ್ಲ ತಲೆ ಹಾಳಾಗಿ ಯಾವುದೂ ಕಂಟೆಂಪರರಿ ಆಗಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಬೇಕಾಗುತ್ತದೆ. ಅದಕ್ಕೇ ಕೆಲವೊಮ್ಮೆ ಕಂ'ಟೆಂಪರರಿ' ಎಂದು ತಮಾಷೆ ಮಾಡುವುದೂ ಇದೆ. ಈ ಮೂಲಕ ಸಂಪ್ರದಾಯಸ್ಥ ಪ್ರಿಯರು ಅದರ ಬಾಳಿಕೆಯೂ ಅಷ್ಟೇ ಎಂಬುದಾಗಿ ಸಮಕಾಲವನ್ನು ಸೂಚ್ಯವಾಗಿ ಕಾಲಸಮ ಮಾಡುತ್ತಿರುತ್ತಾರೆ.

ಅದರ ಜೊತೆ, ಈ ಕಾಲದಲ್ಲಿ ಮಾಡಿದ್ದೆಲ್ಲವನ್ನೂ ಕಂಟೆಂಪರರಿ ಮಂಚದಡಿ ತುರುಕಿಸುವವರು ಒಂದೆಡೆಯಾದರೆ, ಹಳೇಯದನ್ನೂ ನಾವು 'ಇಂದು' ಅನುಭವಿಸುವುದರಿಂದ ಅದೂ ಕೂಡ ಕಂಟೆಂಪರರಿ ಮಂಚದಡಿಯೇ ಇರಬೇಕಾದ್ದು ಎನ್ನುವವರು ಇನ್ನೊಂದೆಡೆ. ನಮ್ಮ ಅನುಭವ ಈ ಕಾಲದ ಅನುಭವದೊಂದಿಗೆ ಹೊಂದಿಕೊಂಡಿರುವುದರಿಂದ ಹಳೆಯ ಕೃತಿಗಳೂ ಇಂದಿನ ಕೃತಿಗಳಾಗುತ್ತವೆ ಎಂಬ ವಾದ ಅದು. ಇರಲಿ, ಎಲ್ಲವೂ ಒಂದು ಲೆಕ್ಕದಲ್ಲಿ ಸರಿಯೇ. ರಚಿಸುವುದರ ಆಧಾರದಲ್ಲಿ ಕಂಟೆಂಪರರಿ ಎನ್ನಬೇಕೋ ಅನುಭವಿಸುವ ಆಧಾರದಲ್ಲಿಯೋ ಎನ್ನುವುದಿಲ್ಲಿನ ಪ್ರಶ್ನೆ. ಮಾಡುಗನೋ ನೋಡುಗನೋ?! ಉತ್ತರ ಇಲ್ಲ.

ಒಟ್ಟು ಈ ಕಸವನ್ನೆಲ್ಲ ಗುಡಿಸಲು ಸಮಕಾಲೀನ ಕಲೆ ಎಂಬುದಕ್ಕೆ ಸುಮಾರು ಐವತ್ತು ವರ್ಷಗಳ ವಿಂಡೋ ಇದೆ ಎಂಬುದು ಗೊತ್ತಿರಬೇಕಾಗುತ್ತದೆ. ಅಂದರೆ, 1970ರ ಆಸುಪಾಸಿಂದ ಇಂದಿನವರೆಗಿದನ್ನು ಒಟ್ಟಾಗಿ ಕಂಟೆಂಪರರಿ ಎಂದು ಗುರುತಿಸಬಹುದು ಅಥವಾ ಭಯಂಕರ ಬದಲಾವಣೆಯ ಕಾಲವಾದ 2000ದ ನಂತರದ್ದನ್ನು ಸುಮಾರು 2040-50ರ ಆಸುಪಾಸಿನ ತನಕದ್ದನ್ನೂ ಗುರುತಿಸಬಹುದು. ಇದಕ್ಕೆಲ್ಲ ತುಂಬ ನಿರ್ದಿಷ್ಟತೆ ಇಲ್ಲ. ಒಂದು ದೃಷ್ಟಿಕೋನದಲ್ಲಿ ಒಂದಷ್ಟು ಕಾಲಘಟ್ಟವನ್ನು ಹಿಡಿಯಲು ಸಾಧ್ಯವಾಗದ್ದಕ್ಕೆ ಸದ್ಯದ ಮಟ್ಟಿಗೆ ಅದನ್ನು ಕಂಟೆಂಪರರಿ ಎಂದು ಕರೆಯುವುದು. ಮುಂದಿನ ತಲೆಮಾರು ಇದಕ್ಕೊಂದು ಹೆಸರು ಕೊಡುತ್ತದೆ. ಆಗ ಅವರದ್ದು ಕಂಟೆಂಪರರಿ ಆಗಿರುತ್ತದೆ. ನಮ್ಮ ಕಂಟೆಂಪರರಿಗೆ ಎಂತದೋ ಇಸಂ ಎಂದು ಹೆಸರು ಬಿದ್ದಿರುತ್ತದೆ.


Relativity, MC Escher, 1953
Relativity, MC Escher, 1953

ಹಿಸ್ಟರಿ ಮೂಲಕ ಇದನ್ನೆಲ್ಲ ನೋಡುವುದಾದರೆ, ಮಾಡರ್ನಿಸಮ್ ಕೂಡ ಒಂದೊಮ್ಮೆ ಕಂಟೆಂಪರರಿಯೇ, ಸುಮಾರು ನೂರು ವರ್ಷದ ಹಿಂದೆ. ನಂತರದ ತಲೆಮಾರು ಅದಕ್ಕೊಂದು ಚಂದದ ಹೆಸರಿಟ್ಟು ತಾವು ಗೊಂದಲಕ್ಕೆ ಬಿದ್ರು. ಅವರ ನಂತರದವ್ರು ಈ ಗೊಂದಲದವರಿಗೆ ಪೋಸ್ಟ್ ಮಾಡರ್ನಿಸ್ಟ್ಸ್ ಎಂದು ಹೆಸರಿಟ್ಟು ತಮ್ಮದೆಂತಪ್ಪ ಗೊತ್ತಾಗದೆ ಅಂತಹುದೇ ಇನ್ನೊಂದು ಗೊಂದಲಕ್ಕೆ ಬಿದ್ರು. ಈಗಿನವರು ಅದನ್ನು ಪೋಸ್ಟ್ ಪೋಸ್ಟ್ ಮಾಡರ್ನಿಸಮ್ ಎಂದೆಲ್ಲ ಹೇಳ್ತಾ ಇದ್ರೂ ಅದು ಹೆಸರು ಚಂದ ಇಲ್ಲ ಅಂತ ಬೇರೆ ಹೆಸ್ರಿಗೆ ಎಲ್ರೂ ಕಾಯ್ತಾ ಇದ್ದಾರೆ. ಇದು ಹೀಗೇ ಸೈಕಲ್. ಈ ಸೈಕಲ್ನಲ್ಲಿ ಕಾಯುವ ಸ್ಥಿತಿಯಲ್ಲಿರುವವರದ್ದು ಯಾವಾಗಲೂ ಕಂಟೆಂಪರರಿ ಮನಸ್ಥಿತಿ. ಅದು ಬದಲಾಗ್ತಾ ಇರ್ತದೆ. ಒಟ್ಟಿನಲ್ಲಿ ಇನ್ನೂ ಸರಿಯಾಗಿ ಡಿಫೈನ್ ಆಗದ್ದು/ಮಾಡಲಾಗದ್ದು, ಆದರೂ ಏನೋ ಭಯಂಕರದ್ದು ನಡೀತಾ ಇದೆ ಅನ್ನಿಸುವಂತದ್ದು ಸದ್ಯಕ್ಕೆ ಕಂಟೆಂಪರರಿ ಮಂಚದಡಿ ಇಡಬಹುದಾದ್ದು.

ಜಾಗದಿಂದ ಜಾಗಕ್ಕೆ, ಅಂದರೆ ದೇಶದಿಂದ ದೇಶಕ್ಕೆ ರಾಜ್ಯದಿಂದ ರಾಜ್ಯಕ್ಕೆ, ನಮ್ಮ ವ್ಯಾಲ್ಯೂ ಸಿಸ್ಟಮ್ಗಳು ಬದಲಾಗುವುದರಿಂದ, ಕಂಟೆಪರರಿಯಲ್ಲಿಯೇ ಹಲವಾರು ವಿಧಗಳಿರುತ್ತವೆ. ಒಂದರ ಪರಿಚಯ ಇನ್ನೊಂದಕ್ಕಿರುವುದಿಲ್ಲ. ಹಾಗಾಗಿ ನಮಗೆ, ಅಂದರೆ ಆ ಕಾಲದಲ್ಲಿ ಬದುಕುತ್ತಿರುವವರಿಗೆ ಎಲ್ಲವನ್ನು ಒಟ್ಟಾಗಿ ಹಿಡಿದಿಡಲು ಸಾಧ್ಯವಾಗುವುದೇ ಇಲ್ಲ. ನಾವೊಂದು ತರಹದ ತರ್ಕದ ಆಧಾರದಲ್ಲಿ ಅಷ್ಟಿಷ್ಟನ್ನು ಊಹಿಸಬಹುದಷ್ಟೆ. ಒಟ್ಟು ತೂಕ ಹಾಕಲು ಮುಂದಿನ ತಲೆಮಾರೇ ಬೇಕು. ಉದಾಹರಣೆಗೆ, ಅಜ್ಜಂದಿರು ನಮ್ಮ ಕಾಲದಲ್ಲಿ ಹೀಗೆಲ್ಲ ಇರಲಿಲ್ಲ ಎನ್ನುವುದು ಆ ಕಾಲ ಕಳೆದಾದ ಮೇಲೆಯೇ. ಮುಂದೆ ಸಾಗಿ ಪಕ್ಕದ ಮನೆಯ ಅಜ್ಜನೊಟ್ಟಿಗೆ ಎಲೆ ಅಡಿಕೆ ಹಾಕಿ ಕತ್ತೆತ್ತಿ ಮುಮ್ಮುಮ್ಮು ಎಂದು ಮಾತನಾಡುತ್ತಾ ತಿರುಗಿ ನೋಡುವಾಗಲೇ ಒಟ್ಟು ಹಿಡಿಯಲು ಸಾಧ್ಯವಾಗುವಂತಹದ್ದು ಅದು. ಬಿಡಿ, ಅಜ್ಜರ ಕತೆ ಆಗ್ಲಿಕ್ಕಿಲ್ಲ. ಈಗ 2020 ಅಂದ ತಕ್ಷಣ ಸಡನ್ನಾಗಿ ಕೆಮ್ಮು ಬಂದ ಹಾಗೆ ನಮಗೆ ಕೊರೋನ ನೆನಪಾಗುತ್ತದೆ. ಅದಲ್ಲದೆ ಇನ್ನೂ ಏನೇನೋ ಆಗಿದೆ ಅದೇ ಸಮಯದಲ್ಲಿ. ಆದರೆ, ಇಂದು ನಾವು ಆ ಕಾಲವನ್ನು ಒಟ್ಟುಹಿಡಿಯುವುದು ಕೊರೋನಾ ಮೂಲಕ. 1910-50 ಎಂದರೆ ಡಬಲ್ ಡಬಲ್ ಮಹಾಯುದ್ಧ. ಹೀಗೇ.. 1990ರಿಂದ ದಿಂದ 2040 ಏನು? ಸದ್ಯಕ್ಕೆ ಕಂಟೆಪರರಿ. ಮುಂದೆ?!

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಹಾಯ ಮಾಡುವಂತಹ ಕಲೆ ಕಂಟೆಂಪರರಿ ಆರ್ಟ್. ಅಂತಹ ಸಾಹಿತ್ಯ ಕಂಟೆಪರರಿ ಸಾಹಿತ್ಯ. ಅಂತಹ ಫಿಲಾಸಫಿ ಕಂಟೆಂಪರರಿ ಪಿಲಾಸಫಿ. ಸಿನಿಮಾ ಮ್ಯುಸಿಕ್ ಡ್ಯಾನ್ಸ್ ನಾಟಕ ಇತ್ಯಾದಿ ಇತ್ಯಾದಿ. ಇವೆಲ್ಲವೂ ಮುಖ್ಯವಾಗಿ ಕಂಟೆಂಪರರಿಯನ್ನು ಅಭ್ಯಸಿಸುತ್ತಿರಬೇಕು. ಕಂಟೆಂಪರರಿಗೆ ರಿಲವೆಂಟ್ ಆಗಿರಬೇಕು. ಎಲ್ಲಾ ಕ್ಷೇತ್ರದಲ್ಲೂ ಏನೇನಾಗುತ್ತಿದೆ ಎಂಬ ಒಂದು ಸ್ಥೂಲನೋಟವಾದರೂ ಇದ್ದಾಗ, ಫಿಲಾಸಫಿಯಿಂದ ಕಲೆಗೆ, ಕಲೆಯಿಂದ ಸಾಹಿತ್ಯಕ್ಕೆ, ಸಾಹಿತ್ಯದಿಂದ ಮ್ಯೂಸಿಕ್ಕಿಗೆ, ಮ್ಯೂಸಿಕ್ಕಿಂದ ವಿಜ್ಞಾನಕ್ಕೆ, ಸಿನಿಮಾದಿಂದ ಸೈಕಾಲಜಿಗೆ ಕೊಡುಕೊಂಡುಕೊಳ್ಳುವಿಕೆಗಳು ನಡೆಯುತ್ತದೆ. ಆಗಷ್ಟೇ ಈ ಕಾಲದ (ಮತ್ತು ದೇಶದ) ಯೋಚನೆಗಳನ್ನು ಮತ್ತು ಅನುಭವಗಳನ್ನು ರೂಪಿಸಲು ಮತ್ತು ಈಗಾಗಲೇ ಇರುವುದನ್ನು ಪ್ರತಿನಿಧಿಸಲು ಒಂದು ವಸ್ತು/ವ್ಯಕ್ತಿ/ಕ್ರಿಯೆಗೆ ಸಾಧ್ಯವಾಗುತ್ತದೆ. ಯಾವದೋ ಒಂದು ತತ್ವದ ಬ್ರಾಂಚ್ ಆಗಿ ಅಥವಾ ಒಂದು ಐಡಿಯಾದ ಅಭಿವ್ಯಕ್ತಿಗಳಾಗಿ ಒಂದು ಕಾಲಘಟ್ಟದ ಎಲ್ಲವನ್ನೂ ಒಟ್ಟು ಹಿಡಿಯಲು ಸಾಧ್ಯವಾಗುತ್ತದೆ. ಡಿಕನ್ಸ್ಟ್ರಕ್ಷನ್ ಎಂಬುದೆಲ್ಲ ಅಂತಹದ್ದೇ ಒಂದು ಕೊಬ್ಬಿದ ಐಡಿಯಾ ಈಗ. ಐವತ್ತು ವರ್ಷದ ಹಿಂದೆ ಅಗತ್ಯವಾಗಿ, ಚಂದ ಚಂದ ಕಂಡ ಡಿಕನ್ಸ್ಟ್ರಕ್ಷನ್ ಇಂದು ಎಕ್ಸ್ಟ್ರೀಮ್ ಹಂತಕ್ಕೆ ಹೋಗಿ ಉಪದ್ರ ಅನಿಸ್ತಾ ಇದೆ. ಜನರನ್ನು, ಸಮಾಜವನ್ನು ಆ ಮಟ್ಟಿಗೆ ಅದಿಂದು ಪ್ರಭಾವಿಸಿದೆ. ತಮ್ಮ ತಮ್ಮ ಪಂಥದವರು ಮಾತ್ರ, ಪಕ್ಕದ್ದು ಬೇಡ ಎನ್ನುವ ಮನಸ್ಥಿತಿಯೆಲ್ಲ ಡಿಕನ್ಸ್ಟ್ರಕ್ಷನ್ನಿದೇ ಕೊಡುಗೆ. ಇಂದಿನ ಕಂಟೆಂಪರರಿಗೆ ಹೊಸ ಅಗತ್ಯವಿದೆ, ಹೊಸ ಚಂದಕ್ಕೆ ಹೊರಳಬೇಕಿದೆ. ಅದಾವುದೆಂದು ಹೊಸ ಹೊಸ ಪ್ರಯತ್ನಗಳ ಮೂಲಕ ನಾವು ಕಂಡುಕೊಳ್ಳಬೇಕಿದೆ. ಸಾಧ್ಯತೆಗಳೂ ಬಹಳಷ್ಟಿವೆ. ಆದರೆ, ಆ ಜವಾಬ್ದಾರಿ ನಮಗಿಲ್ಲವಷ್ಟೆ!

ಕಂಟೆಂಪರರಿ ಡ್ಯಾನ್ಸ್ ಎನ್ನುವುದು ಒಂದು ಸ್ಟೈಲ್ ಅಲ್ಲ. ಸಮಕಾಲೀನ ಕಲೆಯೆಂಬುದು ಒಂದು ಶೈಲಿಯಲ್ಲ. ಅದೊಂದು...ಮೇಲೆ ಹೇಳಿದ್ದು. ಸುಲಭಕ್ಕೆ ವಿವರಿಸಬಹುದಾದ್ದಲ್ಲ. ಅದನ್ನೊಂದು ಶೈಲಿಯೆಂದು ಅನರ್ಥ ಮಾಡಿಕೊಂಡು ಏನೇನೋ ಮಾಡುತ್ತಿರುವವರು ಬಹಳಷ್ಟು ಮಂದಿ. ಹಿಂದಿನ ತಲೆಮಾರಿನವರು ಒಂದಷ್ಟು ಜನ ಸಿಂಪಲ್ ಫಾರ್ಮ್ಸ್ ಎನ್ನುವಲ್ಲಿಗೆ ಕಂಟೆಂಪರರಿಯನ್ನು ಸೀಮಿತಗೊಳಿಸಿಟ್ಟಿದ್ದಾರೆ. ಸಣ್ಣ ಸಣ್ಣವರಲ್ಲ. ಅಕಾಡೆಮಿ ಅದು ಇದು ಎಂದೆಲ್ಲ ಅದರದರದ್ದೇ ಹತ್ತಿರತ್ತಿರ ಸುತ್ತಾಡುವ ದೊಡ್ಡ ದೊಡ್ಡವರೇ ಈ ಅನರ್ಥ ಮಾಡಿಕೊಂಡದ್ದು. ಇನ್ನೂ ಹಾಗೇ ಇರುವುದು ಮಾತ್ರವಲ್ಲ ಅವರ ಬಹುಪರಾಗ್ ಶಿಷ್ಯವರ್ಗಕ್ಕೂ ಹಾಗೆಯೇ ಹೇಳಿಕೊಟ್ಟು ಬೆಳೆಸುತ್ತಿರುವುದು ದುರಂತ!!


Henry Moore's simple forms, reclining figure, 1951
Henry Moore's simple forms, reclining figure, 1951

​ಆ ತಲೆಮಾರಿನವರು ಹಾಗಾಗಿದ್ದಕ್ಕೂ ಒಂದು ಕಾರಣ ಇದೆ ಎನ್ನುವ. ಈಗಿನ ಹಾಗೆ ಕೈಯಲ್ಲಿ ಇನ್ಫಾರ್ಮೇಷನ್ ಆಗ ಇರ್ಲಿಲ್ಲ. ಒಂದಷ್ಟು ವರ್ಷ ಮೊದಲಿನ ಶಿಲ್ಪವೋ ಚಿತ್ರವೋ ವಿದೇಶದಿಂದ ಮುದ್ರಣಗೊಂಡು ಇಲ್ಲಿಯ ತನಕ ತಲುಪಿದ್ದರಲ್ಲಿ ಇವರಿಗೆ ನಾಲ್ಕೈದು ಕಪ್ಪು ಬಿಳುಪಿನ ಫೋಟೋ ನೋಡಲು ಸಿಕ್ಕಿರಬಹುದು. ಹೊಯ್ಸಳ ಶೈಲಿ, ಚಾಲುಕ್ಯ ಶೈಲಿ ಎಂದು ಶೈಲಿ ಆಧಾರಿತವಾಗಿ ಕಲಿತ ಇಲ್ಲಿನ ಶಿಲ್ಪಿಗಳು ಅಂದಿನ ಕಂಟೆಂಪರರಿ ಆಗಿದ್ದ ಹೆನ್ರಿ ಮೂರ್'ನ ಶಿಲ್ಪಗಳ ಫೊಟೋ ನೋಡಿ ಅದನ್ನೊಂದು ಶೈಲಿಯಾಗಿಯೇ ಪರಿಗಣಿಸಿರಬಹುದು. ಹಾಗೆ ಸಿಂಪಲ್ ಫಾರ್ಮ್ಸ್ ಎಂಬುದು ಇಲ್ಲಿನ ಕಂಟೆಂಪರರಿ ಶೈಲಿಯಾಗಿ ಸೀಮಿತ ಆಯ್ತಾದರೂ ಅಲ್ಲಿ ಆ ಹೊತ್ತಿಗೆ ಕಂಟೆಂಪರರಿಯೇ ಬದಲಾಗಿದ್ದೀತು. ಇಲ್ಲಿ ಕಂಟೆಂಪರರಿ ಎಂಬುದು ಶೈಲಿಯನ್ನು ಮೀರಿ ಯಾರಿಗೂ ಅರ್ಥವೇ ಆಗಿರಲಿಲ್ಲ. ವಯಾಸ್ಸಾದಂತೆ ತನಗೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಲು ಇವರಿಗೆಲ್ಲ ಕಷ್ಟವೂ ಆಯಿತೇನೋ! ಇರಲಿ, ಅವರವರಿಗೆ ತಿಳಿದಷ್ಟು ಏನೋ ಮಾಡಿದ್ದಾರೆ. ಆದರೆ, ಈಗಿನವರು ಗಿಡ ಪಡ ಬರ್ಕೊಂಡು ಕಂಟೆಂಪರರಿ ಎಂದು ಪೋಸ್ ಕೊಡುವಾಗ ಕೈ ತುರಿಸುತ್ತದೆ.

ಕಲೆಗೆ ಸಮಾಜದಲ್ಲಿ ಬೆಲೆ ಇಲ್ಲದಂತಾಗಿದ್ದೇ ಇಂತವರಿಂದ ಮತ್ತು ಅದದನ್ನೇ ಮಿತಿ ಮೀರಿ ಹೊಗಳುವವರಿಂದ. ದೊಡ್ಡಾ ಮಾಫಿಯಾ ಇದು. ಭಾವನೆ ಅದು ಇದು ಎಂದು ಕತೆ ಹೊಡ್ದು, ಚಂದಕೆ ನೆಗೆ ಮಾಡಿ, ಅತಿಯಾಗಿ ಇಂಕ್ಲೂಸಿವ್ ಎಂದು ಪೋಸ್ ಕೊಟ್ಟುಕೊಂಡು, ಕಲೆಯನ್ನು ಒಂದು ಕಮೋಡಿಟಿಯಾಗಿ ಬಿಂಬಿಸುತ್ತಾ...ಹೇಳಿ ಸುಖ ಇಲ್ಲ. ಇನ್ನೊಂದಷ್ಟಿದೆ ಹೀಗೆಯೇ, ಕಂಟೆಂಪರರಿ ಎಂದರೇ ಜಾತಿ, ಮತ, ಲಿಂಗ, ಧರ್ಮ, ಸಮಾನತೆ ಎಂದು ನಾಲ್ಕೈದು ರಾಜಕೀಯ ಪ್ರೇರಿತ ಸಿದ್ಧ ವಾದಗಳನ್ನು ಮುಂದಿಟ್ಟು ತಮ್ಮ ಕೆಲಸ ಸುಲಭ ಮಾಡಿಕೊಳ್ಳುವವರು. ಯಾರಿಗೆ ಬೇಕು ಹೊಸ ಯೋಚನೆಗಳೆಲ್ಲ ಅಂತ ಅಷ್ಟರಲ್ಲೇ ಗಿರಕಿ ಹೊಡಿತಾ ಇರುದು. ಇನ್ನು ಬಹುಪಾಲು ಕ್ಷೇತ್ರವನ್ನು ಆವರಿಸಿದ ಹವ್ಯಾಸಿ ತಂಡ ಇದಾವುದರ ಗೋಜಲ್ಲೇ ಇಲ್ಲ. ಕಂಟೆಂಪರರಿಯೋ ಮಣ್ಣಂಗಟ್ಟಿಯೋ ಅವರದ್ದು ಬೇರೆಯೇ. ಅವ್ರವ್ರ ಕೌಶಲ ಅಷ್ಟೇ ಮುಖ್ಯ ಅವ್ರಿಗೆ. ಇದನ್ನೆಲ್ಲ ಎಂತ ಮಾಡುದು ಗೊತ್ತಿಲ್ಲ.

ನಮ್ಮ ಪ್ರಶ್ನೆ, ನಮ್ಮ ಕಂಟೆಂಪರರಿಯನ್ನು ಹೇಗೆಲ್ಲ ಡಿಫೈನ್ ಮಾಡಬಹುದು ಎಂಬುದು! ಯಾವುದು ಮುಂದೊಮ್ಮೆ ನಾವು ಅಜ್ಜ ಆದಾಗ ಎಲೆ ಅಡಿಕೆ ತಿನ್ನುತ್ತಾ ತಿರುಗಿ ನೋಡಿದಾಗ ಕಾಣಬಹುದಾದ ನಮ್ಮ ಕಾಲ?! ಯಾವುದೆಲ್ಲ ಇಂದಿನ ಅನುಭವಗಳು, ಗೊಂದಲಗಳು? ಹೇಗೆಲ್ಲ ನಾವು ಇಂದಿನ ದಿನಗಳನ್ನು ಪ್ರತಿನಿಧಿಸಬಹುದು? ಇಂದಿನ ಸಮಸ್ಯೆಗಳು ಯಾವುವು? ಏನು ಬೇಕು ಇಲ್ಲಿಗೆ? ಅದನ್ನು ಇನ್ನಷ್ಟು ಅರ್ಥವತ್ತಾಗಿ, ಸುಂದರವಾಗಿ ಹೇಗೆ ಮಾಡಬಹುದು? ಇಂದು ಲಭ್ಯವಿರುವ ಟೂಲ್ಸ್ ಏನೇನು? ಅದನ್ನು ಇದಕ್ಕೆ ಹೇಗೆಲ್ಲ ಉಪಯೋಗಿಸಿಕೊಳ್ಳಬಹುದು? ಮುಂತಾದ ಚಿಂತನೆಗಳಿಗುತ್ತರ ನಿಜವಾದ ಕಂಟೆಂಪರರಿ ಆರ್ಟ್ನಲ್ಲಿರಬೇಕು. ತಮ್ಮನ್ನು, ತಮ್ಮ ಸುತ್ತಲಿನ ಸಮಾಜವನ್ನು, ನಿರ್ದಿಷ್ಟ ವಿಷಯವಸ್ತುವುಳ್ಳದ್ದಾದರೆ ಆ ವಿಷಯವನ್ನು ಹೀಗೂ ಒಂದು ದೃಷ್ಟಿಕೋನದಲ್ಲಿ ನೋಡಬಹುದಲ್ಲಾ ಅನ್ನಿಸುವಂತಿರಬೇಕು. ಅದು ಸಮಾಜಕ್ಕೆ ಹೊಸ ಹೊಳಹು ನೀಡಿ ಜನರನ್ನು ಹೊಸತನದೆಡೆಗೆ ಪ್ರೇರೇಪಿಸಬೇಕು. ಕಂಟೆಂಪರರಿ ಬದಲಾಗಬೇಕು. ಸಹಜವಾಗಿ ಕಲೆ ಒಂದೊಂದೇ ಮೆಟ್ಟಿಲೇರಬೇಕು. ಮತ್ತೆ ಸಮಾಜ ಏರುವಂತಾಗಬೇಕು..ಹೀಗೆ ಮುಂದೆ ಮುಂದೆ ಹೋಗ್ತಾ ಎಲ್ಲವೂ ಚಂದ ಚಂದ ಆಗಬೇಕು.

ಕಣ್ಣಿಗೆ ಚಂದ ಕಾಣುವ ಭಾವಚಿತ್ರ, ನಿಸರ್ಗಚಿತ್ರ, ಗಿಡದ ಚಿತ್ರ, ಬಕೆಟ್ ಅಲ್ಲಿ ಬಣ್ಣ ತುಂಬಿ ಸುರಿದ ಚಿತ್ರ, ಇನ್ನೆಂತೆತದೋ ಹೆಸರಲ್ಲಿ ಕಲೆ ಎನಿಸಿಕೊಳ್ಳುವ ಯಾವುದಕ್ಕೂ ಒಂದು ಲೆಕ್ಕದಲ್ಲಿ ಬೆಲೆಯೇ ಇಲ್ಲ. ಇನ್ನೂ ಒಂದು ಹೆಜ್ಜೆ ಧೈರ್ಯಮಾಡಿ ಮುಂದೆ ಇಟ್ಟು ಹೇಳುವುದಾದರೆ, ಅದಾವುದೂ ನಮ್ಮ ಕಾಲವನ್ನು ಪರಿಗಣನೆಗೇ ತೆಗೆದುಕೊಳ್ಳುವುದಿಲ್ಲವಾದ್ದರಿಂದ ಅವೆಲ್ಲ ಇಂದಿಗೆ ಕಲೆಯೇ ಅಲ್ಲ. ಆದರೆ, ಅದನ್ನೇ ಕಲೆ ಎನ್ನುವವರು ಜಾಸ್ತಿ ಇರುವಾಗ ಉಳಿದವರು ಏನು ಮಾಡಲಿಕ್ಕೆ ಆಗುವುದೂ ಇಲ್ಲ. ಅವುಗಳು ಇರಬಾರದು, ಮಾಡಬಾರದು ಎಂದಲ್ಲ. ಆದರೆ, ಅವನ್ನೇ ಕಲೆ ಎನ್ನುವುದು, ಅದನ್ನು ನಂಬುವುದು, ಅದನ್ನೇ ಅತಿಯಾಗಿ ಮೆರೆಸುವುದು ಈ ಕಾಲಕ್ಕೆ ಉಪಯೋಗವಿಲ್ಲವೆಂದಷ್ಟೆ. ಒಂದು ಕಾಲದ ಕಂಟೆಂಪರರಿಯಲ್ಲಿ ಅದೂ ಕಲೆಯೇ ಆಗಿತ್ತು, ನಿಜ. ಆದರೆ, ಇಂದು ಅದು ಕಲೆ ಅಲ್ಲ. ಈ ಡಿಫರೆನ್ಸ್ ಹೆಚ್ಚೆಚ್ಚು ಜನರಿಗೆ ಅರ್ಥ ಆದ ಹಾಗೆ, ನಿಜವಾದ ಕಲೆಗಳು, ಅಂದರೆ ಇಂದಿನವು, ಹೆಚ್ಚೆಚ್ಚು ಚಂದ ಕಾಣ್ಲಿಕ್ಕೆ ಶುರುವಾಗುತ್ತವೆ. ಅದರಲ್ಲಿ ಸ್ವಲ್ಪ ಸ್ವಲ್ಪವೇ ವ್ಯಾಲ್ಯೂ ಕಾಣಲು ಶುರುವಾಗುತ್ತವೆ. ನೋಡುಗರಾದ ನಮ್ಮ ಒಳಹೊಕ್ಕು ನಿಧಾನಕ್ಕೆ ಕಾಡಲು ಶುರುವಾಗುತ್ತವೆ. ಶುರುವಾಗಿದ್ದು ಮುಂದುವರೆಯುತ್ತಾ ಹೋಗುತ್ತದೆ.

bottom of page