top of page

ಕಲೆಗೆ ಅವಕಾಶವೇ ಇಲ್ಲದಷ್ಟು ಸಿದ್ಧಜ್ಞಾನ ಒದಗಿಸಿದುದರ ಪರಿಣಾಮ

  • Writer: sushrutha d
    sushrutha d
  • Jul 3, 2021
  • 3 min read

Updated: Jun 10, 2025

ಕಲೆಗೊಂದು ಭೂಮಿಕೆ 9 : ಮಾಡರ್ನಿಸಮ್‌ನಲ್ಲೇ 'ಸಿಂಬಾಲಿಸಂ' ಮತ್ತು 'ಮಿನಿಮಲಿಸಂ' ಎಂಬ ಎರಡು ಪ್ರಕಾರಗಳು ಶುರುವಾಗಿದ್ದರೂ ಅವು ಮುಖ್ಯವಾಗಿ ಬಳಕೆಗೆ ಬರುವುದು ಪಾಪ್ ಆರ್ಟ್ ಮೂವ್‌ಮೆಂಟ್ ಸಮಯದಲ್ಲಿ. ಈ ಪಾಪ್ ಆರ್ಟ್ ಎಂಬುದಕ್ಕೆ ತಂತ್ರಜ್ಞಾನದ ಆವಿಷ್ಕಾರಗಳು ಕಾರಣವಾಯಿತೆನ್ನಬಹುದು. ಪಾಪ್ಯುಲರ್ ಕಲ್ಚರ್ ಅನ್ನು ಕಲೆಯಲ್ಲಿ ಬಳಸಲು ಶುರುವಾಗಿದ್ದು ಇಲ್ಲಿಂದ.

ಮೊದಲೆಲ್ಲ ಒಂದೆಡೆಯಲ್ಲಿ ಮೂಲಕೃತಿಯಷ್ಟೇ ಇದ್ದುದುದಾರೂ ಫೋಟೋಗ್ರಫಿ ಬಳಕೆಗೆ ಬಂದಮೇಲೆ, ಒಂದು ಚಿತ್ರವನ್ನು ಒಂದೇ ಸಮಯಕ್ಕೆ ಹಲವು ಜಾಗಗಳಲ್ಲಿ ಕಾಣುವಂತಾಗುತ್ತದೆ. ಜಾಗ ಬದಲಿದ ತಕ್ಷಣ ಅದರ ಅರ್ಥಗಳೂ ಬದಲಾಗುತ್ತದೆ. ಇದನ್ನು ಜಾನ್ ಬರ್ಜರ್ ತನ್ನ ಶೋ 'ways of seeing'ನಲ್ಲಿ ಬಹಳ ಚೆನ್ನಾಗಿ ವಿವರಿಸುತ್ತಾನೆ. ಪ್ರಿಂಟ್ಸ್ ಎಂದೇನು ಕರೆಯುತ್ತೇವೆಯೋ ಅದನ್ನಿಟ್ಟುಕೊಂಡು ಏನೇನು ಮಾಡಬಹುದೆಂದು ಆ್ಯಂಡಿ ವ್ಹಾರೋಲ್‌ನಂತವರು ಹುಡುಕುತ್ತಾರೆ. ಕಲೆಗಳ ಬ್ಯುಸಿನೆಸ್ ಆ ಸಮಯಕ್ಕಾಗಲೇ ಶುರುವಾಗಿ ಆಗಿದ್ದರಿಂದ, ಆ ಆಯಾಮವೂ ಪಾಪ್ ಆರ್ಟ್‌‌ನ ಮುಖ್ಯ ಉದ್ದೇಶಗಳಲ್ಲೊಂದು.


Ways of Seeing, John Berger
Ways of Seeing, John Berger

ಸಿನಿಮಾ, ಮಾರ್ಕೆಟಿಂಗ್, ಕಂಪೆನಿ, ಬ್ರಾಂಡ್‌ಗಳು, ಐಕಾನ್‌ಗಳಿಗೆ ಸಂಬಂಧಿಸಿದಂತಹ ವಸ್ತುವಿಷಯಗಳು ಇದರದ್ದು. ಪ್ಯಾಕೇಜಿಂಗ್ ಬಾಕ್ಸ್ ಅನ್ನು ಕೂಡ ಅದರ ಬ್ರಾಂಡ್‌ಗಾಗಿ ಇಲ್ಲಿ ಕಲೆಯ ರೂಪದಲ್ಲಿ ಬಳಸಲಾಗುತ್ತದೆ. ಈಗಲೂ ಇದರ ಮಕ್ಕಳು ಮರಿಗಳು ಪ್ರಚಲಿತದಲ್ಲಿವೆ. ಪ್ರತಿದಿನವೂ ರಾಜಕೀಯ ವಿಷಯ ಹೊತ್ತ ಕಾರ್ಟೂನ್‌ಗಳು, ಪ್ರತಿಯೊಂದರ ಮಾರ್ಕೆಟಿಂಗ್‌ಗೆ ಬಳಸಲ್ಪಡುವ ಪೋಸ್ಟರ್‌ಗಳು, ಕಂಪೆನಿಗಳ ಲೋಗೋಗಳು, ನಾವೀಗ ಗ್ರಾಫಿಕ್ ಡಿಸೈನ್ ಎಂದು ಕರೆಯುವವೆಲ್ಲ ಇದೇ ಪಾಪ್ ಆರ್ಟ್‌ನ ವಂಶಸ್ಥರು. ಪಾಪ್ಯುಲರ್ ಕಲ್ಚರ್‌ನ ಅಂಗವಾದ ಸಿನಿಮಾ ನಟನಟಿಯರ ಚಿತ್ರ ಬರೆಯುವುದೂ ಇಲ್ಲಿಂದಲೇ ಪ್ರಭಾವಿತಗೊಂಡದ್ದು. ನಮಗೆ ತಿಳಿಯದೆಯೇ ನಾವು ಹೇಗೆ ಇವುಗಳಿಂದ ಪ್ರಭಾವಿತರಾಗಿರುತ್ತೇವೆ ಎನ್ನುವುದು ಒಮ್ಮೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತದೆ.

ವೈಯಕ್ತಿಕವಾಗಿ ಈಗ ನನಗಿಷ್ಟವಿಲ್ಲದ ಮೂವ್‌ಮೆಂಟ್ ಇದು. ಆಗಿನ ಕಾಲಕ್ಕೆ ಸರಿ. ಈಗ, ಇದರಿಂದ ಕಲೆಗುಂಟಾದ ತೊಂದರೆಯೇ ಹೆಚ್ಚೆಂದು ನನ್ನ ಭಾವನೆ. 'ಮಿನಿಮಲಿಸಂ' ಮತ್ತು 'ಸಿಂಬಾಲಿಸಂ'ನ ವ್ಯಾಪಕ ಬಳಕೆ ಅದೆಷ್ಟರ ಮಟ್ಟಿಗೆ ಸಾಗಿದೆ ಎಂದರೆ, ಅಲ್ಲಿ ಕಲೆಗೆ ಅವಕಾಶವೇ ಇಲ್ಲದಷ್ಟು. ಹೀಗಂದರೆ ಅದು, ಹಾಗೆ ಮಾಡಿದರೆ ಇದು ಎನ್ನುವ ರೀತಿಯಲ್ಲಿ ಎಲ್ಲವನ್ನೂ ಜ್ಞಾನವಾಗಿಸಲಾಗಿದೆ. ಕಲೆಯ ವ್ಯಾಪಕತೆಯು ಅರ್ಥವಾಗದವರಿಂದಾದ ಸಂಕುಚಿತತೆಯಿದು.

ಒಂದಷ್ಟು ಮಹತ್ತರ ಕೃತಿಗಳಿಂದ ಅವುಗಳ ಬಣ್ಣವನ್ನೂ, ಅವುಗಳ ಸಂಯೋಜನಾ ಶೈಲಿಯನ್ನೂ ಮತ್ತು ಇತರ ಅಂಶಗಳನ್ನು ಬೇರ್ಪಡಿಸಿ, ಒಂದು ಉತ್ತಮ ಕೃತಿಯಾಗಲು ಇವಿವು ಅವಶ್ಯವೆಂದು ಕಂಡುಹಿಡಿಯಲಾಗಿದೆ. ಹಾಗೆ ಬೇರ್ಪಡಿಸಿ ನೋಡುವುದೇ ಸರಿಯಾದ ಕ್ರಮವಲ್ಲದಿದ್ದರೂ, ಅದಕ್ಕೆ ಮನೋವೈಜ್ಞಾನಿಕತೆಯ ಲೇಪ ಸವರಿ, ವೈಜ್ಞಾನಿಕ ಜ್ಞಾನವನ್ನಾಗಿಸಲಾಗಿದೆ. ವಿಜ್ಞಾನವೆಂದ ತಕ್ಷಣ ಕಿವಿ ನಿಮಿರುವ ಜನರಿಗೆ ಬಿಳಿ ಬಣ್ಣದಿಂದ ಶಾಂತಿಯುಂಟಾಗುವುದೆಂದೂ, ಕೆಂಪು ಉದ್ವೇಗಗೊಳಿಸುವುದೆಂದೂ, ಯಾವ ಸಂಯೋಜನಾಶೈಲಿಯಲ್ಲಿದ್ದರೆ ಮನಸ್ಸಿಗೆ ಹತ್ತಿರವಾಗುವುದೆಂದೂ ಕಲಾರಚನೆಯ ಯಾವತ್ತೂ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿದು ತಿಳಿಸಲಾಗಿದೆ‌. ಬಹುಜನರು ಬಯಸುವ ಸಿದ್ಧಜ್ಞಾನವನ್ನು ಇದು ಒದಗಿಸಿ, ಇನ್ನೊಬ್ಬರ ಮನಸ್ಸನ್ನು ಹೇಗೆ ಕುಣಿಸಬಹುದೆಂದು ತಿಳಿಸಿದುದರ ಪರಿಣಾಮ ನಾವೀಗ ಅನುಭವಿಸುತ್ತಿರುವುದು. ಅತಿಯಾಗಿ ಅದದನ್ನೇ ಬಳಸಿದುದರಿಂದ ಅದು ಕ್ಲೀಷೆಯಾಗಿಬಿಟ್ಟಿದೆ ಮಾತ್ರವಲ್ಲ, ಅದರಿಂದ ಕಲೆಯೇ ಸಂಕುಚಿತಗೊಂಡಿದೆ.


ವಿಜ್ಞಾನದ ತಿಳುವಳಿಕೆಗಳು ಸ್ವಾಗತಾರ್ಹ. ಅದನ್ನು ತಿರಸ್ಕರಿಸಬೇಕೆಂದಲ್ಲ. ಆದರೆ, ಅದಷ್ಟಕ್ಕೇ ಕಲೆಯನ್ನು ಸೀಮಿತಗೊಳಿಸಹೋಗಬಾರದಷ್ಟೆ. ವಿಜ್ಞಾನದ ಸ್ವರೂಪವನ್ನೂ ಕಲೆಯ ಸ್ವರೂಪವನ್ನೂ ಮೊದಲು ಅರ್ಥ ಮಾಡಿಕೊಳ್ಳಬೇಕು. ವಿಜ್ಞಾನಕ್ಕೆ ಒಂದು ಚೌಕಟ್ಟಿದೆ. ಸತ್ಯವಾಗಿರಬೇಕೆಂಬ ನಿಯಮವಿದೆ. ಆದರೆ ಕಲೆಗೆ ಕಲ್ಪನೆಯೂ ನಡೆಯುತ್ತದೆ. ಸುಳ್ಳು ಕೂಡ ನಡೆಯುತ್ತದೆ. ಇದರ ಚೌಕಟ್ಟು ನೈತಿಕ ನೆಲೆಯದ್ದು. ಹಾಗಿರುವಾಗ, ಇದರ ವ್ಯಾಪ್ತಿಗೆ ಅದರ ಚೌಕಟ್ಟು ಹೇರುವುದು ಎಷ್ಟು ಸರಿ?

ಇದಕ್ಕೆ ಕಲಾವಿದರ ಹೊರತು ಬೇರಾರೂ ಕಾರಣರಲ್ಲ. ಸುಲಭದಲ್ಲಿ ದಕ್ಕಿದ ಸಿದ್ಧ ಜ್ಞಾನಕ್ಕಷ್ಟೇ ತನ್ನ ತಿಳುವಳಿಕೆಯನ್ನು ಸೀಮಿತಗೊಳಿಸಿದ್ದರ ಪರಿಣಾಮವಿದು ಅಷ್ಟೆ. ವಿಪರ್ಯಾಸವೆಂದರೆ, ವಿಜ್ಞಾನಿಗಳು ಇನ್ನೂ ಬೇರೆ ಆಯಾಮಗಳಲ್ಲಿ ಹುಡುಕುತ್ತಿರಬಹುದು ಎನ್ನುವುದು.

ಸಿಂಬಾಲಿಸಂನದ್ದೂ ಇದೇ ಗೋಳು. ಪಾರಿವಾಳ ಶಾಂತಿಯ ಸಂಕೇತವಾಗಿ ಕಂಡಿದ್ದು ಪಿಕಾಸೋವಿಗೆ. ಉಳಿದವರಿಗೆ ಕಾಣದಿದ್ದರೂ ಅದು ಇದರ ಸಂಕೇತವೆನಿಸಿಕೊಂಡಿತು. ಈಗ, ಪಾರಿವಾಳವನ್ನು ಮಾತ್ರ ಬರೆಯುವಂತೆಯೇ ಇಲ್ಲ, ಶಾಂತಿಯನ್ನೂ ಹೊತ್ತ ಪಾರಿವಾಳವನ್ನೇ ಬರೆಯಬೇಕು.‌ ಅಂದರೆ, ಈ ಸಂಕೇತಗಳು ನಮ್ಮ ಕೈ ಮೀರಿ ಹೋಗಿವೆ. ಅಷ್ಟೂ ಸಮಯದಿಂದ ತನ್ನನ್ನೇ ಶಾಂತಿದೂತನನ್ನಾಗಿ ಕಂಡ ಪಾರಿವಾಳಕ್ಕೇ ಶಾಂತಿಯ ಕಟ್ಟಳೆ ಒಡಿದಿರಬಹುದೆನಿಸುತ್ತದೆ.


Dove of peace, Pablo Picasso, 1949
Dove of peace, Pablo Picasso, 1949

​ಒಬ್ಬ ಒಂದು ಚಿತ್ರ ಬಿಡಿಸಿದ್ದರೆ ಸಾಕು, ನಮ್ಮವರು "ರವಿವರ್ಮನ ತುಂಡು" ಎನ್ನುತ್ತಾರೆ. ಏನಿದು! ರವಿವರ್ಮ ಯಾರೆಂದು ಸಮರ್ಪಕವಾಗಿ ಹೇಳಿದಾತನಿಗೂ ಗೊತ್ತಿರುವುದಿಲ್ಲ. ಆದರದು ಒಂದು "ಸಿಂಬಲ್". 'ಮೊನಾಲಿಸಾ' ಕೂಡ ಒಂದು ಸಿಂಬಲ್. ಅದೇ ಶ್ರೇಷ್ಠಕಲೆ ಎಂದೇನೂ ಅಲ್ಲ. ಶ್ರೇಷ್ಠಕಲೆಯ ಒಂದು ಸಂಕೇತ ಅದು ಅಷ್ಟೆ. 'ಮರ್ಲಿನ್ ಮನ್ರೋ'ವನ್ನೂ ಒಂದು ಸಂಕೇತವನ್ನಾಗಿಸಿ ಮೊನಾಲಿಸಾದಷ್ಟೇ ಜನಪ್ರಿಯಗೊಳಿಸಿದ್ದು ಆ್ಯಂಡಿ ವ್ಹಾರೋಲ್. ಅಷ್ಟೇ ಯಾಕೆ! ನಮ್ಮ ನಡುವೆಯೇ ಈಗ 'ಗಾಂಧಿ' ಒಂದು ಸಿಂಬಲ್. 'ಅಂಬೇಡ್ಕರ್' ಒಂದು ಸಿಂಬಲ್. ಎಷ್ಟೂ ಹೇಳಬಹುದು‌. ಎಲ್ಲರೂ ಅವರವರ 'ಸಿಂಬಲ್'ಗಳನ್ನು ಪ್ರಚಲಿತಗೊಳಿಸಲು ಮಾಡುವ ಪ್ರಯತ್ನವನ್ನೂ ಕಾಣಬಹುದು.


Marilyn Monroe screen prints, Andy Warhol, 1967
Marilyn Monroe screen prints, Andy Warhol, 1967

ನಮ್ಮ ಭಾರತೀಯ ಸಾಂಪ್ರದಾಯಿಕ ಕಲೆಗಳಲ್ಲೂ ಈ ರೀತಿಯ ಸಂಜ್ಞೆ, ಸಂಕೇತಗಳನ್ನು ವ್ಯಾಪಕವಾಗಿ ಬಳಸುತ್ತಿದ್ದರು. ಆದರೆ, ಅದನ್ನೆಂದೂ ಸಿದ್ಧ ಜ್ಞಾನವಾಗಿಸಿರಲಿಲ್ಲ. ಒಬ್ಬನಿಗೆ ಮಾವು ಸಿಹಿಯಾಗಿ ಕಂಡರೆ ಮತ್ತೊಬ್ಬನಿಗೆ ಕಬ್ಬು ಕಾಣಬಹುದಿತ್ತು. ಈ ತರಹ ಭಿನ್ನ ಭಿನ್ನವಾದ ಸಂಕೇತಗಳನ್ನು ಬಳಸುವಲ್ಲಿ ನಿಜವಾಗಿಯೂ ಸಿಹಿಯಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಹಸಿರು ಸಮೃದ್ಧಿಯ ಸೂಚಕವೆಂದೂ, ಹಳದಿ ಖುಷಿಯ ಸಂಕೇತವೆಂದೂ, ಎಲ್ಲಾ ಬಣ್ಣಗಳಿಗೂ ಒಂದೊಂದರ ಭಾರ ಹೊರಿಸಿ ಆಗಿದೆ. ತನಗೆ ಆಕಾಶದ ನೀಲಿ ಕಂಡಾಗ ಖುಷಿಯಾಗುವಂತಿಲ್ಲ ಯಾಕೆಂದರೆ ನೀಲಿ ಬೇಸರದ ಸಂಕೇತ! ಎಂತಹ ದುರದೃಷ್ಟ.

ಇದನ್ನು ಸಿನಿಮಾದಲ್ಲೂ ಕಾಣಬಹುದು. ಕ್ಯಾಮರಾವನ್ನು ಹಾಗೆ ತಿರುಗಿಸಿದರೆ ಈ ಅರ್ಥ, ಹೀಗೆ ಚಲಿಸಿದರೆ ಆ ಅರ್ಥ ಎನ್ನುವಂತಹವು ಸಿದ್ಧಜ್ಞಾನವನ್ನು ರೂಪಿಸುತ್ತಿರುವುದೇ ಆಗಿದೆ. ಒಂದು ಒಳ್ಳೆಯ ಸಿನಿಮಾದಿಂದ ಇವುಗಳ ನೇರ ಅನುಕರಣೆಯಾಗುತ್ತಿರುವುದನ್ನು ಕಾಣಬಹುದು. ಅದರಿಂದೆಲ್ಲ ಕಳಚಿಕೊಂಡು, ತನಗೇನು ಅರ್ಥವೆಂದು ತಾನೇ ಕಂಡುಕೊಳ್ಳದ ಹೊರತು ನಿಜವಾದ ಕಲಾಕೃತಿಗಳು ಹುಟ್ಟಿಕೊಳ್ಳದೆಂದು ನನ್ನನಿಸಿಕೆ.

ಪ್ರತಿಯೊಂದು ವಸ್ತುವೂ ಅದರ ಮೂಲದಲ್ಲಿ ಅಮೂರ್ತತೆಯನ್ನು ಹೊಂದಿದೆ. ಆ ಅಮೂರ್ತತೆಯೇ ಅದರ ಶಕ್ತಿ. ಅದು ಯಾವ ರೂಪವನ್ನೂ ಪಡೆದುಕೊಳ್ಳಬಹುದು. ಯಾವ ಅರ್ಥವನ್ನೂ ಕೊಡಬಲ್ಲದು. ಆ ಅಮೂರ್ತತೆಯನ್ನು ಅರಿಯುವ ಸಲುವಾಗಿ ಅದನ್ನು ಮೂರ್ತವಾಗಿಸುವ ಪ್ರಯತ್ನವೇ ಕಲೆ. ಆದರೆ, ಅದು ಮತ್ತೂ ಕೂಡ ಅಮೂರ್ತವೇ ಆಗಿರುತ್ತದೆ. ಇದನ್ನು ನಮ್ಮ ದೇವರ ತನಕವೂ ವಿಸ್ತರಿಸಿಕೊಳ್ಳಬಹುದು. ಯೋಚನಾ ಸ್ವರೂಪದಿಂದ ಭಾವ ಪ್ರಪಂಚದವರೆಗೂ ಇವನ್ನು ಗುರುತಿಸಬಹುದು‌. ಪ್ರಕೃತಿಯ ಚಲನೆಯಲ್ಲೂ ಕಾಣಬಹುದು.

ಈ ಪ್ರಕ್ರಿಯೆಯಲ್ಲಿ ಬಳಸುವ ಬಣ್ಣಗಳಿರಲಿ, ಶಬ್ದಗಳಿರಲಿ ಸ್ವರಗಳಿರಲಿ, ಅಂಕೆಗಳಿರಲಿ ಅಥವಾ ಇನ್ಯಾವುದೋ ಇರಲಿ, ಎಲ್ಲವೂ ಮೂಲದಲ್ಲಿ ಅಮೂರ್ತವೇ. ಶಬ್ದಕ್ಕೆ ಅರ್ಥಗಳನ್ನು ಹೊರಿಸಿದ್ದರೂ, ಒಂದೇ ಶಬ್ದ ಬೇರೆ ಬೇರೆ ಅರ್ಥಗಳನ್ನು ಧ್ವನಿಸಬಲ್ಲದು - ಬೇರೆ ಬೇರೆ ಸಮಯದಲ್ಲಿ, ಬೇರೆ ಬೇರೆ ಸಂಯೋಜನೆಯಲ್ಲಿ ಬಳಸಲ್ಪಟ್ಟಾಗ. ಅಂದರೆ, ಅಲ್ಲಿಯೂ ಅಮೂರ್ತತೆಯನ್ನು ಉಳಿಸಿಕೊಳ್ಳಲಾಗಿದೆ. ಇವಾವುವೂ ಏನನ್ನೂ ಹೊತ್ತು ತಿರುಗುವುದಿಲ್ಲ. ಅಷ್ಟಕ್ಕೇ ಸೀಮಿತವಾಗಿಲ್ಲ. ಹಾಗೆಂದು, ಅಮೂರ್ತವಾಗಿಯೇ ಉಳಿಸಿ ಬಿಟ್ಟರೆ ಖಂಡಿತಾ ಉಪಯೋಗವಿಲ್ಲ. ಯಾವ ಯಾವ ಉದ್ದೇಶಗಳಿಗೋ ಅವನ್ನು ಮೂರ್ತವನ್ನಾಗಿಸಿದಾಗಲೇ ಅದಕ್ಕೆ ಸಾರ್ಥಕತೆ ಇರುವುದು. ಗಣಿತದ 'x' ಹೇಗೋ ಹಾಗೇ. ಅದಕ್ಕೆಷ್ಟು ಶಕ್ತಿಯಿದೆ! ಅದು ಏನು ಬೇಕಾದರೂ ಆಗಿರಬಲ್ಲದು, ಜೊತೆಗೆ 'x' ಆಗಿಯಷ್ಟೇ ಉಳಿಯುವುದಾದರೆ ಯಾವ ಬೆಲೆಯೂ ಅದಕ್ಕಿಲ್ಲ‌.



bottom of page