top of page

ಸತ್ಯವೋ - ಸುಳ್ಳೋ? ಸರಿಯೋ - ತಪ್ಪೋ? ಚೆನ್ನಾಗಿದ್ಯೋ - ಇಲ್ವೋ?

  • Writer: sushrutha d
    sushrutha d
  • Sep 23, 2023
  • 4 min read

Updated: Jun 9, 2025

ಕಲೆಗೊಂದು ಭೂಮಿಕೆ 16 : ಹಳೆಯ ಕಾಲಕ್ಕೆ ಹೋದಂತೆಲ್ಲ ಸತ್ಯದ ಹುಡುಕಾಟ ಜೋರಾಗಿಯೇ ಇತ್ತೆಂದು ನಮಗೆ ಲಭ್ಯವಿರುವ ಮೂಲಗಳಿಂದ ತಿಳಿಯುತ್ತದೆ. ಈ ಸತ್ಯವನ್ನು ಅರಿಯಲು ಹೊರಟ ದೊಡ್ಡ ದೊಡ್ಡವರೆನಿಸಿಕೊಂಡ ಎಲ್ಲರೂ, ಅವರು ಪ್ರಪಂಚದ ಯಾವ ಮೂಲೆಯವರಾಗಿದ್ದರೂ, ಹೇಳಿದ್ದು ಹೆಚ್ಚು ಕಡಿಮೆ ಒಂದನ್ನೇ. ಅದದನ್ನೇ ಕೇಳಿ ಕೇಳಿ, ಒಂದು ಮಟ್ಟಕ್ಕೆ ಗೊತ್ತಾದ ಮೇಲೂ, ನಾವೂ ಅದದನ್ನೇ ಕಂಡುಹಿಡಿಯತೊಡಗುವುದರಲ್ಲಿ ಅರ್ಥವಿಲ್ಲವೆಂದೆನಿಸುತ್ತದೆ.


ಹಾಗೆಯೇ ಗಮನಿಸಿದರೆ, ಕಳೆದ ಶತಮಾನದಿಂದ ಸತ್ಯದ ಗೋಜಿಗೆ ಜಾಸ್ತಿ ಜನ ಹೋದಂತಿಲ್ಲ. ಅದರಲ್ಲೂ ಮಹಾಯುದ್ಧದ ನಂತರ ಯಾರೂ ಇಲ್ವೇನೋ! ಇಂದಿಗೆ ಪ್ರಶ್ನೆ ಬದಲಾಗಿದೆ. ಸತ್ಯ ಗೊತ್ತಿದೆ, ಅದರ ಹಿಂದಿನ ಆಸಕ್ತಿ ಸತ್ತಿದೆ. ನಮಗೆ ಸದ್ಯಕ್ಕೆ "ಸರಿ ಯಾವುದು?" ಎಂಬುದರಲ್ಲಿ ಕುತೂಹಲ ಜಾಸ್ತಿ. ಇಂದಿನ ಚರ್ಚೆಗಳು ಬಹುವಾಗಿ 'ಸರಿ'ಯ ಕಂಡುಕೊಳ್ಳುವತ್ತ ಇದೆ. ಯಾಕೆ ಈ ಬದಲಾವಣೆ? ಮುಂದೆಲ್ಲಿಗೆ?


ಸತ್ಯ-ಸರಿ ಎಲ್ಲ ತಕ್ಕಮಟ್ಟಿಗೆ ಒಂದೇ ಅಲ್ಲವೇ ಎಂದನ್ನಿಸಿದರೂ, ನಾ ಹೇಳುತ್ತಿರುವ ಅರ್ಥದ ಪ್ರಕಾರ ಅವು ಬೇರೆಯೇ. ಸತ್ಯ ಒಂದೇ. ಸರಿ ಹಲವಿರಬಹುದು. ಸ್ವಲ್ಪ ವಿಜ್ಞಾನ ಮತ್ತು ಕಲೆಯ ನಡುವಿನ ವ್ಯತ್ಯಾಸದ ಹಾಗೆ.


ಕೆಲವೊಮ್ಮೆ ಇದೆಲ್ಲ ಶುಷ್ಕ ಚರ್ಚೆಯೆಂದೂ ಒಣ ವಾದಗಳೆಂದೂ ನನಗೇ ಅನ್ನಿಸುವುದಿದೆ. ನಿಮಗೂ ಅನ್ನಿಸಿರಬಹುದು. ಆದರೆ, ಹಾಗಿಲ್ಲ ಅದು. ಮೇಲ್ನೋಟಕ್ಕೆ ಕಾಣುವ ಒಂದು ಒಣತತ್ವ ಹೇಗೆ ಒಂದು ಕಂಟೆಂಪರರಿಯ ಎಲ್ಲವನ್ನೂ, ಎಲ್ಲ ಎಂದರೆ ಎಲ್ಲಾssವನ್ನು, ಡಿಸೈಡ್ ಮಾಡುತ್ತದೆ ಎಂದು ಆಶ್ಚರ್ಯವಾಗುತ್ತದೆ. ಅಂತದನ್ನು ಕಂಡುಕೊಳ್ಳುವುದು, ರೂಪಿಸುವುದು, ಮುಂದಿಡುವುದು ಬಹುಮುಖ್ಯ ಎಂದೇ ನನಗನಿಸುತ್ತದೆ. ಉದಾಹರಣೆಗೆ, ನಮ್ಮ ಹಳೇಯ ಡಿಕನ್ಸ್ಟ್ರಕ್ಷನ್. ನನ್ನ ಪ್ರಕಾರ ಸತ್ಯದಿಂದ ಸರಿಯ ಕಡೆ ನಾವೆಲ್ಲರೂ ಹೊರಳಿರುವುದು ಇದೇ ಡಿಕನ್ಸ್ಟ್ರಕ್ಷನ್ ಎಂಬ ಒಂದು ಒಣವಾದದ ಪ್ರಭಾವದಿಂದ.


ಸತ್ಯ ಒಂದೇ. ದೊಡ್ಡ ದೊಡ್ಡವರು ಏನೇನೋ ಕಸರತ್ತು ಮಾಡಿ ಆ ಒಂದು ಸತ್ಯವನ್ನು ಅರ್ಥೈಸಿಕೊಳ್ಳಲು ಹಲವು ದಾರಿ ಮಾಡಿಕೊಟ್ಟರು. ಈ ಡಿಕನ್ಸ್ಟ್ರಕ್ಷನ್ ಏನು ಮಾಡಿತು?! ಪ್ರತಿಯೊಂದನ್ನೂ ಇಂಡಿವಿಜುವಲ್ ಆಗಿ ಬಿಡಿಸಿ ಬಿಡಿಸಿ ನೋಡಿ ಪ್ರತಿಯೊಂದಕ್ಕೂ ಅದರದ್ದೇ ಆದ ವ್ಯಾಲ್ಯೂ ಇದೆ ಎಂದು ಪ್ರತಿಪಾದಿಸಿತು. (ಅದು ಮೊದಲೇ ಗೊತ್ತಿರಲಿಲ್ವಾ ಕೇಳಿದ್ರೆ ಗೊತ್ತಿತ್ತು. ಆದರೆ ಅದೊಂದು ಒಣವಾದವಾಗಿ ಬೆಳೆದದ್ದು, ಜ್ಞಾನಶಾಖೆಯಾಗಿ ಎಲ್ಲವನ್ನೂ ಪ್ರಭಾವಿಸಿದ್ದು ಕಳೆದ ಐವತ್ತು-ಅರವತ್ತು ವರ್ಷದಿಂದ). ಅದೀಗ ಮುಂದುವರಿದು, ನನ್ನಿಷ್ಟ, ನಾ ಹೇಳಿದ್ದೇ ಸರಿ, ನೀ ಯಾವನ್ ಕೇಳೋಕೆ, ತಿಕಾ ಮುಚ್ಕೊಂಡು ಹೋಯ್ತಿರು ಅನ್ನೋವಲ್ಲಿಗೆ ಬಂದು ಮುಟ್ಟಿದೆ. ಕನ್ನಡ ಪರ ಧ್ವನಿ, ದಲಿತರ ಪರ ಧ್ವನಿ,ಮಹಿಳೆಯರ ಪರ ಧ್ವನಿ, LGBTQIA+ ಧ್ವನಿ, ಮುಸ್ಲಿಂ ಧ್ವನಿ, ಹಿಂದೂ ಧ್ವನಿ ಎಲ್ಲ ಜಾಸ್ತಿ ಜಾಸ್ತಿ ಮುನ್ನೆಲೆಗೆ ಬರುತ್ತಿರುವುದನ್ನು ಈ ಹಿನ್ನೆಲೆಯಲ್ಲೇ ಗಮನಿಸಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನಗೂ ಒಂದು ಧ್ವನಿ ಇದೆ ಎಂಬಂತೆ ನಡೆದುಕೊಳ್ಳಲು ಸಹಾಯ ಮಾಡಿದ್ದೂ ಇದೇ ಡಿಕನ್ಸ್ಟ್ರಕ್ಷನ್ ಥಿಯರಿ.ಅಷ್ಟೇ ಯಾಕಪ್ಪಾ! ನಾವೂ ನೀವೂ ಫೇಸುಬುಕ್ಕಲ್ಲಾದರೂ ದೊಡ್ಡ ದೊಡ್ಡ ಪದ ಉಪಯೋಗಿಸಿ ಏನೋ ಬರೆಯೋ ಹಾಗಾಗಿದ್ದೂ ಇದರಿಂದಲೇ! ಏನಂತೀರಿ? ಹಹ್ಹಹ್ಹಾ, ದೊಡ್ಡ ಹಹ್ಹಾಹ್ಹಾ.


ಈ ಎಲ್ಲಾ ಪರ ಧ್ವನಿಗಳು ಪರ ಧ್ವನಿಗಳಾಗೇ ಉಳಿದಿದ್ದರೆ ಸಮಸ್ಯೆ ಇರಲಿಲ್ಲ. ಪರಪರ ಧ್ವನಿಗಳಾಗಿರುವುದು ಸಮಸ್ಯೆ. ಅದೇ ಧ್ವನಿಗಳು ಇಂದು ಮುಸ್ಲಿಂ ವಿರೋಧ ಧ್ವನಿ, ಹಿಂದೂ ವಿರೋಧ ಧ್ವನಿ, ಹಿಂದಿ ವಿರೋಧ ಧ್ವನಿ, ಬ್ರಾಹ್ಮಣ ವಿರೋಧ ಧ್ವನಿ, LQBTQIA+ ವಿರೋಧ ಧ್ವನಿ, LGBTQIA+ ಅಲ್ಲದವರ ವಿರೋಧ ಧ್ವನಿ ಮುಂತಾದವುಗಳಾಗಿ ಮಾರ್ಪಾಡಾಗಿರುವುದಕ್ಕೂ ಇದೇ ಡಿಕನ್ಸ್ಟ್ರಕ್ಷನ್ ಅಲ್ವೇ ಕಾರಣ! ಬಯಸದೇ ಬಂದ ಪಂಚಾಮೃತವೋ ಎಂತದೋ ಗಾದೆ ಇದ್ಯಲ್ಲಾ ಅದು, ಹಂಗೇನೇ.


ಅಂದ್ರೇsss, ಡಿಕನ್ಸ್ಟ್ರಕ್ಷನ್ನಿನ ಉದ್ದೇಶ ಅಂದಿಗೆ ಒಳ್ಳೆಯದೇ ಇದ್ದರೂ ಇಂದಿಗೆ ಅದರ ಹಳಿ ತಪ್ಪಿದೆ ಎನ್ನುವುದು. ಅದನ್ನು ಸರಿ ಮಾಡೋಕೆ ಸಾಧ್ಯವಿಲ್ಲದಷ್ಟು ಜನರನ್ನದು ಪ್ರಭಾವಿಸಿಯೂ ಆಗಿದೆ. ಪರಿಣಾಮವಾಗಿ, ಇಂದಿನ ಒಟ್ಟೂ ಬೊಬ್ಬೆಗಳಲ್ಲಿ ಸರಿಯಾದದ್ದು ಯಾವುದೂ ಕೇಳಿಸುತ್ತಾನೂ ಇಲ್ಲ. ಎಲ್ಲದನ್ನೂ ಎಲ್ಲರೂ ಎಂತೆಂತದಕ್ಕೋ ಖಂಡಿಸುತ್ತಿದ್ದಾರಷ್ಟೆ. ಖಂಡಿಸಿ ಏನು ಮಾಡಬೇಕೆಂದು ಇನ್ನೂ ಖಚಿತವಾದಂತಿಲ್ಲ. ನಾವಾದರೂ ಈ ಎಲ್ಲಿಗೂ ಸಾಗದ ದೇಹದ ಕೈ ಕಾಲುಗಳನ್ನು ಅತ್ಲಾಗೊಮ್ಮೆ ಇತ್ಲಾಗೊಮ್ಮೆ ಜಗ್ಗುವುದು ಬಿಟ್ಟು ಹೊಸತಾದ ಒಂದು ಒಣವಾದ ರೂಪಿಸಬಹುದಲ್ಲಾ?! ಇಂದಿನ ಪರಿಸ್ಥಿತಿಯ ಪ್ರತಿನಿಧಿಸುವಂತಹ ಒಂದು ಕನ್ನಡಿಯಾಗಿ, ಅವಸ್ಥೆಗೆ ಒಂದು ಸೊಲ್ಯೂಷನ್ ಆಗಿ, ಎಲ್ಲಾ ಆಗುಹೋಗುಗಳನ್ನೂ ಪ್ರಭಾವಿಸುವಷ್ಟು ತಾಕತ್ತಿರುವ ವಾದವನ್ನು...ಹೇಗೆ?!


ಸತ್ಯವಂತೂ ಬೋರೋ ಬೋರು. ಸರಿಯ ಕಂಡುಕೊಳ್ಳುವ ಬೊಬ್ಬೆ ರೇಜಿಗೆಯುಂಟು ಮಾಡುತ್ತಿದೆ. ಮುಂದಿನ ಒಣವಾದವು ಇದನ್ನೇ ಆಧಾರವಾಗಿಟ್ಟು ರೂಪುಗೊಂಡರೆ ಅಷ್ಟೆ ನಮ್ಮ ಕತೆ. ಹಾಗಾದರೆ ಉಳಿದಿರುವ ಹೋಪ್ ಏನು? ಸೌಂದರ್ಯ!


ಆದರೆ, ಈ ಸೌಂದರ್ಯವನ್ನು ಡಿಫೈನ್ ಮಾಡುವ ಕ್ಷೇತ್ರದಲ್ಲಿರುವವರ ಮೇಲೆ ಒಮ್ಮೆ ಕಣ್ಣು ಹಾಯಿಸಿ ನೋಡಿ. ಏನಾದರೂ ಹೊಸ ಯೋಚನೆ ಹುಟ್ಟುತ್ತಿದೆಯಾ ಅಲ್ಲಿ?! ಹೊಸ ಸೌಂದರ್ಯದ ವ್ಯಾಖ್ಯೆಗಳನ್ನು ಹುಟ್ಟುಹಾಕಬಲ್ಲಷ್ಟು ಸಶಕ್ತ ಸಿನಿಮಾ, ಸಂಗೀತ, ನಾಟಕ, ಕಲೆ, ಕತೆ, ಕವಿತೆ ಯಾವುದಿದೆ?! ಕರ್ನಾಟಕದ ಮಟ್ಟಿಗೆ ನನಗೆ ತಿಳಿದಿರುವ ಎಲ್ಲವೂ ಸಿದ್ಧ ಮಾದರಿಗಳ ಹಿಂದೆಯೇ ಓಡಿಕೊಂಡಿರುವಂತಹವು ಮತ್ತು ಅದದನ್ನೇ ಹೊಗಳಿಕೊಂಡಿರುವಂತಹವು! ಎದೆಗೆ ಇಳಿಯಬೇಕು ಹೃದಯ ತಟ್ಟಬೇಕು ಹೊಟ್ಟೆ ತುಂಬಬೇಕು ಇಂತವು. ಇವೆಲ್ಲ ಮೊದಲೇ ಆಗಿದೆ. ಅದದನ್ನೇ ಹೇಳುವ ಬದಲು ತನ್ನದೇ ಆದ ಒಂದು ಆರ್ಗ್ಯುಮೆಂಟ್ ಅನ್ನು ತನ್ನ ಕೃತಿಗಳ ಮೂಲಕ ಮುಂದಿಡುತ್ತಿದ್ದರೆ ಸ್ವಲ್ಪವಾದ್ರೂ ಉಪಯೋಗಕ್ಕೆ ಬಂದೀತೇನೋ. ಆ ಆರ್ಗ್ಯುಮೆಂಟ್ ಸಶಕ್ತವಾಗಿದ್ದರೆ, ಅದನ್ನೊಂದಷ್ಟು ಜನ ಗುರುತಿಸಿದರೆ, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪ್ರಭಾವಿಸುವಷ್ಟು ಹೊಸ ರೀತಿಯ ಯೋಚನೆಗೆ ಅದೊಂದು ಭೂಮಿಕೆಯಾದೀತೇನೋ.


ಜಸ್ಟ್ ಇಮ್ಯಾಜಿನಿಂಗ್, 'ಸರಿ'ಯ ಬೊಬ್ಬೆಯಲ್ಲೂ ಸೌಂದರ್ಯ ಕಾಣುವಂತಾದರೆ, ಅದು ಸಾಕಷ್ಟು ಜನರನ್ನು ಪ್ರಭಾವಿಸಿದರೆ, ಚರ್ಚೆಗಳ ಹಿಂದಿನ ಮೂಲಪ್ರಶ್ನೆಯೇ ಬದಲಾಗಿ "ಇಂದಿಗೆ ಯಾವುದು ಸೌಂದರ್ಯ?" ಎಂಬತ್ತ ಹೊರಳಿದರೆ, ಅದು ಎಷ್ಟು ಎಕ್ಸ್ಟ್ರೀಮಿಗೆ ಹೋದರೂ ಚಂದ ಚಂದವೇ ಇರ್ಲಿಕ್ಕಿಲ್ವೇ?!



ಕಲೆಗೊಂದು ಭೂಮಿಕೆ - 17 : ಈಗ ನಾವು ಹೇಗೆ 'ಸತ್ಯ'ವ ಸರಿಸಿ, 'ಸರಿ'ಯ ಮೊರೆ ಹೋಗುತ್ತಿದ್ದೇವೆ ಎಂದು ಆಯ್ತು. ಇನ್ನು ನಾವು ಈ 'ಸರಿ'ಯನ್ನು ಯಾಕೆ ತೊರೆಯಬೇಕಾಗುತ್ತದೆ ಎಂದು ನೋಡುವ. ಆಗ್ಲಿಕ್ಕಿಲ್ವಾ?


ಶ್ರೀರಾಮನ ಗೌಜಿಯ ಸಮಯ.

ಭಜರಂಗಿ ಭಜರಂಗಿ ಡಿಚ್ಚಿಕ್ ಡಿಚ್ಚಿಕ್ ಡಿಚ್ಚಿಕ್ ಜೈ ಶ್ರೀರಾಮ್ ಅಂತ ದೊಡ್ಡಕೆ ಒಂದು ಡಿಜೆ ಸಾಂಗ್.

ಅದರ ಮಧ್ಯದಲ್ಲಿ ಅಪೂರ್ಣ ದೇವಸ್ಥಾನದಲ್ಲಿ ರಾಮನ ಪ್ರತಿಷ್ಠಾಪನೆ 'ಸರಿ'ಯೇ ಎಂಬ ಪ್ರಶ್ನೆ.


ಸರಿಯೆಂದು ಒಂದು ವಾದ. ಸರಿಯಲ್ಲವೆಂದು ಇನ್ನೊಂದು ವಾದ. ಒಟ್ಟಿನಲ್ಲಿ ಟೆನ್ಷನ್ ಪೂರ್ತಿ 'ಸರಿ'ಯ ಸುತ್ತಮುತ್ತ. ನಮ್ಮ ಪರಮಸತ್ಯದ ಕುರಿತು ಯಾರಿಗೂ ಈಗ ಟೆನ್ಷನ್ ಇಲ್ಲ. ಅದು ಗ್ರಾಂಟೆಡ್ ಆಗಿದೆ. ಬೋರ್ ಆಗಿಯೂ ಆಗಿದೆ. 'ಸರಿ'ಯಾ ಅಲ್ವಾ ಅನ್ನೋದ್ರಲ್ಲಷ್ಟೇ ನಮ್ಗೆ ಇಂಟ್ರೆಸ್ಟು. "ಗುರೂ, ಇದ್ ಸರಿನಾ ಹೇಳು ಗುರು ನೀನೇ" ಅಂತ ಬೇಸಿಕಲಿ. ನಿನ್ ಪ್ರಕಾರ? ನಿನ್ನಕ್ಕನ್ ಪ್ರಕಾರ? ನಿನ್ನಪ್ಪನ್ ಪ್ರಕಾರ? ಅಂತ ಮತ್ತೆ.


ನನ್ ಪ್ರಕಾರ...ಸತ್ಯ ಹೇಳ್ಬೇಕಂದ್ರೆ, ಇಲ್ಲಿ ನಿಜವಾದ ಪ್ರಶ್ನೆ ಅಪೂರ್ಣ ದೇವಸ್ಥಾನದ್ದೂ ಅಲ್ಲ, ರಾಮ ಪ್ರತಿಷ್ಠಾಪನೆಯೂ ಅಲ್ಲ. ಬಿಜೆಪಿ ಪಕ್ಷ ಹಿಂದೂ ಧರ್ಮವನ್ನು ಗುತ್ತಿಗೆ ತೆಗೆದುಕೊಂಡ ಹಾಗೆ ಅದರ ಆಗುಹೋಗುಗಳನ್ನು ನಿರ್ಧರಿಸುವುದು 'ಸರಿ'ಯೇ ಎಂಬುದು. ಪ್ರಶ್ನೆ 'ಸರಿ'ಯೇ. ಹೇಗಿದ್ರೂ, ರಾಜಕೀಯೋಮಯ ಕಾಲದಲ್ಲಿ ಬದುಕುತ್ತಿದ್ದೇವೆ. ಇಲ್ಲ ಇಲ್ಲ, ಇಷ್ಟು ಗೌಜಿ ಸಮಯದಲ್ಲಿ, ಅಷ್ಟು ದೊಡ್ಡ ಡಿಜೆ ಸಾಂಗ್ ಮಧ್ಯ ಮಾತಾಡಿದ್ರೇ ಸರಿ ಕೇಳುದಿಲ್ಲ. ಇನ್ನು ಈ ಪ್ರಶ್ನೆ ಎಲ್ಲ ಈಗ ಬೇಡ ಇತ್ತು. ಟೈಮ್ ಸರಿ ಇಲ್ಲ ಇದ್ಕೆಲ್ಲ ಅನ್ನೋದೂ 'ಸರಿ'ಯೇ.


ಅದೆಲ್ಲ ಬಿಡಿ, "ನನ್ನಿಷ್ಟ, ನೀನ್ಯಾವನ್ ಕೇಳೋಕೆ?" ಅನ್ನೋದೂ ಈ ಕಾಲದಲ್ಲಿ 'ಸರಿ'ಯೇ. ಅಂದ್ಮೇಲೆ... ಈ 'ಸರಿ' ಪ್ರಶ್ನೆಗಳಿಗೆ ಎಷ್ಟು ಮಹತ್ವ ಇದೆ ಅಂತಾಯ್ತು?! "ಬಿಡು ಗುರು, ನಡಿ ಗುರು" ಅನ್ನೋವಷ್ಟು.


ಈಗ ನಾನು ನನ್ನನ್ನು he/him ಎಂದೋ, she/her ಎಂದೋ, they/them ಎಂದೋ, ಅಥವಾ soap/water ಎಂದೋ ಹೇಗೆ ಬೇಕೋ ಹಾಗೆ ಗುರುತಿಸಿಕೊಳ್ಳುವುದೇ 'ಸರಿ'ಯೆಂದಾದಮೇಲೆ ಇವರ ಈ ಸರಿ/ತಪ್ಪು ಕಟ್ಟಿಕೊಂಡು ಯಾರಿಗಾಗ್ಬೋದು ಬೇಕಲ್ಲ. 'ಸರಿ'ಯ ಎಕ್ಸಿಸ್ಟೆನ್ಶಿಯಲ್ ಕ್ರೈಸಿಸ್ ಟೈಮ್ ಇದು. ಸಾಮಾಜಿಕ ಸರಿ, ವೈಯಕ್ತಿಕ ಸರಿ, ಕರೆಂಟ್ ಕಂಬದ ಮೇಲಿನ ಸರಿ ಎಂದೆಲ್ಲ ವಿಧವಿಧವಾದ ಶಾಶ್ವತ ಸರಿಗಳಿವೆ ಎಂದೆಲ್ಲ ಆಲೋಚಿಸುವ ಮೊದಲೇ "ಗೊತ್ತು ಸರ್/ಮೇಡಮ್/ಪೀಪಲ್/ಬೀಯಿಂಗ್, ಎಲ್ಲ ಗೊತ್ತು. ಹೇಗೆ ಸತ್ಯದ ಅತಿ ಅಮಲು ಎಲ್ಲರಿಗೂ ಬೋರ್ ಹಿಡಿಸಿತೋ ಹಾಗೆಯೇ ಈ ಸರಿಯ ಅತಿ 'ಸರಿ'ಯದ್ದಾಗಿದೆ" ಎಂದು ಹೇಳಿಬಿಡುವುದೊಳ್ಳೆದು.


ಏನು ಹೇಳೋಕೆ ಬಂದೆ ಅಂದ್ರೆ, ನಾವು ಈ ಸರಿ/ತಪ್ಪಿನ ನಂತರದ ಗೋಜಿಗೆ ಹೋಗುತ್ತಿದ್ದೇವೆ ಅಂತ. ಅಂದ್ರೇssss....ಇಷ್ಟ/ಚಂದದ ಮೋಜಿಗೆ. ನಮ್ಮ ಜುಕರ್ಬರ್ಗನ್ನೇ ನೋಡಿಯಪ್ಪ. "ಲೈಕ್" ಆಪ್ಷನ್ ಕೊಟ್ಟದ್ದವ. Right/Wrong ಒತ್ಲಿಕ್ಕಿಲ್ಲ. True/False ಕೂಡ ಇಲ್ಲ. ಅದೆಲ್ಲ ಟೆಕ್ಸ್ಟ್ ಬುಕ್ಕಿಗೆ ಆದೀತು. ಫೇಸುಬುಕ್ಕಲ್ಲಿ ಏನಿದ್ರೂ "Like" ಬೇಕಾದ್ದು.


ಸರಿಯೋ ತಪ್ಪೋ?! ನೀವೇ ಹೇಳಿಬಿಡಿ ಅತ್ಲಾಗಿ

ಹಿಂಗೇನಾದ್ರೂ ಹೇಳ್ಕೊಂಡು ಸರಿ-ತಪ್ಪು ಕೇಳ್ತಿದ್ರೆ "ಸಖತ್ ಗುರು ನೀನು" ಅಂದ್ರಾಯ್ತು. 'ಸರಿ'ನಾ ಕೇಳಿದ್ರೆ 'ಸಖತ್' ಉತ್ತರ. ಹೆಂಗೆ?! ಆದ್ರೂ ಈ 'ಸರಿ'ಯಾದ ವಾದಗಳನ್ನೆಲ್ಲ ಸಮರ್ಥಿಸಲು ಪಡುವ ಕಷ್ಟವ ಗಮನಿಸಿದ್ರೆ ಅದ್ರಲ್ಲೊಂದು ಚಂದ ಇದೆ. ಇದೀಗ 'ಸರಿ'ಯ ಪೀಕ್ ಟೈಮ್. ಹೇಳಿಲ್ಲದ ಕೇಳಿಲ್ಲದ ಲಾಜಿಕ್ ತುರುಕಿಸಿ, ಎಲ್ಲಿಂದೆಲ್ಲಿಗೋ ಹೋಗಿ ಹುಡುಕಿ ಹುಡುಕಿ ಎಳೆದುಹಾಕಿದ ವಿವರ ಸಹಿತ ರಿಡೈರೆಕ್ಟಿಂಗ್ ಲಿಂಕ್ಗಳೊಂದಿಗೆ, ಅತ್ತೆ ಮನೆ ಕತೆ ಎಲ್ಲ ಒಟ್ಟು ಸೇರಿದಾಗ ಒಂದು ಗೌಜಿ ಆಗ್ತದಲ್ಲ ಅದು. ಆ 'ಚಂದ' ಇದ್ಯಲ್ವಾ ಅಂಥದ್ದೇ ಇದೊಂದು...ಡಿಚ್ಚಕ್ ಡಿಚ್ಚಕ್ ಗೌ...ಜಿ..ಐ ಶ್ರೀರಾಮ್.

bottom of page