ಕನ್ನಡದ ವಾದವು ಇಂದು ಜಾಗತಿಕವಾಗಿ ಪ್ರಭಾವಿಸಬಲ್ಲುದೇ?
- sushrutha d
- Aug 4, 2024
- 10 min read
Updated: Jun 9, 2025
ಕಲೆಗೊಂದು ಭೂಮಿಕೆ 22 : "ತೊಂಬತ್ತರ ದಶಕ ಮತ್ತು ಆ ನಂತರದ ಕನ್ನಡದ ಚಿಂತನೆಗಳ ಚಹರೆಗಳು" ಎಂಬ ರಂಗನಾಥ ಕಂಟನಕುಂಟೆಯವರ ಮೂಲಬರಹದಿಂದ ಆಯ್ದ (ಹೆಚ್ಚು ಕಡಿಮೆ ಅದನ್ನೇ ಭಟ್ಟಿ ಇಳಿಸಿದ) ಮತ್ತು ಒಂದಷ್ಟು ಸೇರಿಸಿ ಬರೆದ ಬರಹ ಇದಾಗಿದೆ. ಮೂಲಬರಹವು ಒಳನೋಟಗಳನ್ನು ಹೊಂದಿದ್ದರೂ, ಅದರಲ್ಲಿ 'ಎಡ'ವೆಂದು ಪರಿಗಣಿತವಾಗಿರುವ ಚಿಂತನೆಗಳನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಾ ಅದನ್ನೇ ಕನ್ನಡಪರ ಚಿಂತನೆಯಾಗಿಟ್ಟದ್ದಲ್ಲದೆ ಉಳಿದ ಬಗೆಯ ಸಮಕಾಲೀನ ಚಿಂತನೆಗಳನ್ನು ಕೀಳಾಗಿ ಕಾಣಿಸುವ ಪ್ರಯತ್ನವಿರುವುದರಿಂದ, ಮತ್ತು ಅದು ನನಗೆ ಒಪ್ಪಿತವಲ್ಲದಿರುವುದರಿಂದ ಅಲ್ಲಲ್ಲಿ ಬದಲಿಸಬೇಕಾಯ್ತು. ಅವರು ಉಲ್ಲೇಖಿಸಿದ ಹೆಸರುಗಳು ಮತ್ತವರ ಕಾರ್ಯಗಳು ನನಗೆ ಪರಿಚಿತವಿಲ್ಲದಿದ್ದರೂ ಅದು ಸತ್ಯವೆಂದು ನಂಬಿ ಹಾಗೆಯೇ ಉಳಿಸಿಕೊಂಡು ಮುಂದುವರಿಯುತ್ತಿದ್ದೇನೆ.
ಮುಖ್ಯವಾಗಿ ಕನ್ನಡಕ್ಕೊಂದು ಅದರದ್ದೇ ಆದ ವಾದ ಬೇಕು ಮತ್ತು ಆ ನಿಟ್ಟಿನಲ್ಲಿ ಇವಾಗ ಯಾವೆಲ್ಲ ಪ್ರಯತ್ನಗಳಾಗುತ್ತಿವೆ, ಆಗಬೇಕು ಎಂಬುದನ್ನು ಮುಂದಿಡಲು ಹೊರಟ ಆಶಯ ಮೂಲಬರಹದ್ದು. ಇನ್ನಷ್ಟು ಹೆಚ್ಚಿನ ಕೆಲಸ ಅದೇ ನಿಟ್ಟಿನಲ್ಲಿ ಆಗಬೇಕು ಎಂಬ ಧ್ವನಿ ಲೇಖಕರದ್ದು. ನನ್ನದಿಲ್ಲಿ ಸ್ವಲ್ಪ ಉಲ್ಟಾ. ಕನ್ನಡದ ಬಗೆಗಿರುವ ಈ ಬರಹ ನನಗೊಂದು ಉದಾಹರಣೆಯಷ್ಟೆ. ಕಾಲಕ್ಕೆ ತಕ್ಕ ಹಾಗೆ ಚಿಂತನೆಗಳ ಹರಿವು ಹೇಗೆ ರೂಪುಗೊಳ್ಳುತ್ತಿದೆ ಎನ್ನುವುದನ್ನು ಹಿಡಿಯುವ ಆಶಯವೇ ನನ್ನದಿದ್ದರೂ ಅದು ಕನ್ನಡಕ್ಕೆ, ಕನ್ನಡ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಲ್ಲ. ಮೂಲಬರಹ, ಕನ್ನಡಕ್ಕೆ ಸೀಮಿತವಾಗಿ ಅದೇ ವಿಷಯವನ್ನು ವಿಸ್ತಾರವಾಗಿ ವಿವರಿಸುತ್ತಿದೆ ಎಂದನಿಸಿದ್ದರಿಂದ ಅದನ್ನು ಇಲ್ಲಿ ಅಲ್ಪಸ್ವಲ್ಪ ಬದಲಿಸಿ ಬಳಸಿಕೊಂಡಿದ್ದೇನೆ.
ಅವರ ಉದ್ದ ಲೇಖನದ ಎಡಿಟೆಡ್ ವರ್ಷನ್ ಕೆಳಗಿದೆ. ಒಂದು ಕಾಂಪಾಕ್ಟ್ ಲೇಖನದ ಮಧ್ಯಮಧ್ಯ ನಾ ಮೂಗುತೂರಿಸುವುದು ಸರಿಯಾಗುವುದಿಲ್ಲವಾದ ಕಾರಣ ಕೊನೇಯಲ್ಲಿ, ಅಂದರೆ ಫುಲ್ ಕೆಳಗಿನ ಭಾಗದಲ್ಲಿ ನನಗೆ ಹೇಳಬೇಕೆನಿಸಿದ್ದನ್ನು ಒಟ್ಟಿಗೆ ಬರೆದಿಟ್ಟಿದ್ದೇನೆ.
ಕನ್ನಡ ಜಗತ್ತು ಹೊರಗಿನ ಚಿಂತನೆಗಳಿಂದ ಹೆಚ್ಚು ಪ್ರಭಾವಿತಗೊಂಡಿದ್ದು, ತನ್ನದೇ ಚಿಂತನೆಗಳನ್ನು ರೂಪಿಸಿಕೊಳ್ಳುವಲ್ಲಿ ಅದು ಹಿಂದೆ ಬಿದ್ದಿದೆ. ಅದರಲ್ಲಿಯೂ ಆಧುನಿಕ ಸಂದರ್ಭದಲ್ಲಿ ಪಶ್ಚಿಮದ ಚಿಂತನೆಗಳ ಮೇಲೆ ಅವಲಂಬನೆ ಹೆಚ್ಚು. ಅದಕ್ಕೆ ಬದಲಿಯಾಗಿ ಕನ್ನಡದ್ದೇ ಆದ ಚಿಂತನೆಯನ್ನು ರೂಪಿಸಿಕೊಳ್ಳಬೇಕು.
ಕೆ. ವಿ. ನಾರಾಯಣರ ನೇತೃತ್ವದಲ್ಲಿ 'ಕರ್ನಾಟಕ ಓದು', ಡಿ. ಎನ್. ಶಂಕರ ಬಟ್ ಅವರ 'ಎಲ್ಲರ ಕನ್ನಡ', ಶ. ಶೆಟ್ಟರ್ ಅವರು ಪ್ಯಾನ್ ಇಂಡಿಯ ಚರಿತ್ರೆಯ ಬದಲಿಗೆ ರೂಪಿಸಿದ ಕನ್ನಡದ ಮತ್ತು ದ್ರಾವಿಡ ಮೂಲದ ಚರಿತ್ರೆ ಮುಂತಾದವು ಕನ್ನಡದ್ದೇ ಚಿಂತನೆಯನ್ನು ಕಟ್ಟಿಕೊಳ್ಳುವ ಇಂಗಿತವನ್ನು ಕನ್ನಡ ಮನಸ್ಸು ಹೊಂದಿರುವುದಕ್ಕೆ ಸ್ಪಶ್ಟ ಉದಾಹರಣೆಗಳು.
ಕೆಲವರನ್ನು ಹೊರತುಪಡಿಸಿದರೆ ಇಂದು ಕನ್ನಡದ ಬೌದ್ಧಿಕ ಜಗತ್ತಿನಲ್ಲಿ ಗುರುತಿಸಿಕೊಂಡು ಕೆಲಸ ಮಾಡುವವರಿಗೆ ದೊಡ್ಡ ಕನಸುಗಳು ಮತ್ತು ಮಹತ್ವಾಕಾಂಕ್ಶೆಗಳು ಇದ್ದಂತೆ ಕಾಣುವುದಿಲ್ಲ. ಗೋವಿಂದ ಪೈ, ಬಿ.ಎಂ.ಶ್ರೀ., ಶಂ. ಬಾ. ಜೋಶಿ, ಶ. ಶೆಟ್ಟರ್ ಮುಂತಾದವರಿಗೆ ದೊಡ್ಡ ಕನಸುಗಳಿದ್ದವು. ‘ಕನ್ನಡ ಮಾತು ತಲೆಯೆತ್ತುವ ಬಗೆ’ಗೆ ಧ್ಯಾನಿಸಿ ದುಡಿದವರು. ನಂತರದಲ್ಲಿ ಯು. ಆರ್. ಅನಂತಮೂರ‍್ತಿ, ಡಿ.ಆರ್. ನಾಗರಾಜ್ ಅವರಿಗೆ ಆ ಬಗೆಯ ಮಹತ್ವಾಕಾಂಕ್ಶೆಗಳಿದ್ದವು. ಕಿರಂ ನಾಗರಾಜ್ ಅವರು ಗೆದ್ದಲು ಹುತ್ತಗಟ್ಟಿದಂತೆ ಚಿಂತನೆಗಳನ್ನು ಕಟ್ಟುತ್ತಾ, ಜ್ಞಾನ ರೂಪಿಸುವ ಬಯಕೆ ಹೊಂದಿದ್ದರು. ಸದ್ಯ ಕನ್ನಡ ನುಡಿಯರಿಮೆ ವಿಚಾರದಲ್ಲಿ ಡಿ.ಎನ್. ಶಂಕರ ಬಟ್ ಅವರಿಗೆ ಅಂತಹ ಗುರಿಗಳಿವೆ. ಹಾಗೆಯೇ ಎಚ್. ಎಸ್. ಶ್ರೀಮತಿ ಅವರು ಅನುವಾದಗಳ ಮೂಲಕ ಕನ್ನಡದಲ್ಲಿ ಸ್ತ್ರೀವಾದಕ್ಕೆ ಬೇಕಾದ ಗಟ್ಟಿಯಾದ ತಳಹದಿ ರೂಪಿಸುತ್ತಿದ್ದಾರೆ. ಆದರೆ ಇಂತಹವರ ಸಂಖ್ಯೆ ಬೆರಳೆಣಿಕೆಯಶ್ಟು ಮಾತ್ರ. ಕಿರಿಯ ತಲೆಮಾರಿನಲ್ಲಿ ಹೊಸ ಚಿಂತನೆಗಳನ್ನು, ಆಕರಗಳನ್ನು ಸೃಶ್ಟಿಸುವಂತಹ ಮಹತ್ವದ ಸಂಶೋಧನೆ ಹೆಚ್ಚು ಇದ್ದಂತಿಲ್ಲ.
ಇಪ್ಪತ್ತೊಂದನೆಯ ಶತಮಾನವನ್ನು ಜ್ಞಾನದ ಶತಮಾನ ಎನ್ನಲಾಗುತ್ತದೆ. ಅಂತಹ ಶತಮಾನದಲ್ಲಿ ನಾವು ಕನ್ನಡದಲ್ಲಿ ಹೊಸ ಜ್ಞಾನವನ್ನು ಸೃಶ್ಟಿಸದಿದ್ದರೆ ಕನ್ನಡ ಈ ಕಾಲದಲ್ಲಿ ತಲೆಯೆತ್ತಿ ನಿಲ್ಲುವುದಾದರೂ ಹೇಗೆ? ಕನ್ನಡ ಸದಾ ಅನ್ಯ ಭಾಶೆಗಳಿಂದ ಅರಿವು ಪಡೆವ ಭಾಶೆಯಾಗಿಯೇ ಉಳಿಯಬೇಕೆ? ನೀಡುವ ನುಡಿಯಾಗಿ ಬೆಳೆಯಬಾರದೇ? ಅದನ್ನು ಈ ಕಾಲದಲ್ಲಿ ಬೆಳೆಸಬಾರದೇ? ಕನ್ನಡದಲ್ಲಿ ಒರಿಜಿನಲ್ ಆದ ಚಿಂತನೆಗಳು ಹುಟ್ಟಬಾರದೇ? ಈ ಬಿಕ್ಕಟ್ಟುಗಳನ್ನು ಮೀರುವ ಬಗೆಗೆ ಅಲ್ಲಲ್ಲಿ ಮಾತುಗಳು ಕೇಳಿ ಬಂದರೂ ಮೀರಿದ ಬಗೆಗೆ ದಾಖಲೆಗಳಿಲ್ಲ.
ಜಾಗತೀಕರಣದ ಕಾಲದಲ್ಲಿ ಕನ್ನಡದ್ದೇ ಜ್ಞಾನ ರೂಪಿಸುವ ಪ್ರಯತ್ನದ ಭಾಗವಾಗಿ ಕಟ್ಟಿದ್ದ ಕನ್ನಡ ವಿಶ್ವವಿದ್ಯಾಲಯ ಇಂದು ಒಂದು ಜಡ ಸಂಸ್ಥೆಯಾಗಿ ಬದಲಾಗಿದೆ. ಸಾವಿರಾರು ಜನರಿಗೆ ಪಿಎಚ್.ಡಿ. ಪದವಿ ನೀಡುತ್ತಿದ್ದರೂ ಕನ್ನಡ ಜ್ಞಾನದ ವಲಯಕ್ಕೆ ಹೊಸ ತಿಳುವಳಿಕೆಯನ್ನು ನೀಡುವ ಸಂಸ್ಥೆಯಾಗಿ ಅದು ಉಳಿದಿಲ್ಲ.
ಜೊತೆಗೆ ವಿಶ್ವವಿದ್ಯಾಲಯಗಳ ಮತ್ತು ಪದವಿ ಕಾಲೇಜುಗಳ ಅಧ್ಯಾಪಕರಲ್ಲಿ ಸಂಶೋಧನಾ ಬರೆಹಗಳನ್ನು ಹೆಚ್ಚೆಚ್ಚು ಮಾಡುವಂತೆ ಪ್ರೋತ್ಸಾಹಿಸಲು ಯುಜಿಸಿ ನಿಯಮಗಳನ್ನು ರೂಪಿಸಿದ್ದು ಕಳಪೆ ಬರೆಹಗಳು ಹೆಚ್ಚಲು ಕಾರಣವಾಗಿದೆ. ಇವೇ ಬರೆಹದ ಮಾದರಿಗಳೂ ಆಗಿ ಕನ್ನಡದ ವಿದ್ವತ್ ಜಗತ್ತನ್ನು ಮಲಿನಗೊಳಿಸಿವೆ. ಕನ್ನಡ ಜ್ಞಾನದ ಎಲ್ಲೆಗಳನ್ನು ಹಿಗ್ಗಿಸುವ ಸಂಶೋಧನೆ ಮತ್ತು ವಿಮರ್ಶೆಗಳಿಗಿಂತ ಶೈಕ್ಶಣಿಕ ‘ಲಾಭ’ದ ಗುಪ್ತ ಸಾಹಿತ್ಯದ ಹಾವಳಿ ಹೆಚ್ಚಿದೆ.
ಎಲ್ಲ ವಿಶಯಗಳ ಬೋಧಕರ ಹೊಣೆಗೇಡಿತನವು ಕನ್ನಡಕ್ಕೆ ಕಂಟಕವಾಗಿ ಪರಿಣಮಿಸಿದೆ. ಭಾಶೆ ಮತ್ತು ಸಾಹಿತ್ಯಗಳ ಬೋಧನೆಯನ್ನು ಒಂದು ರಿಚುವಲ್ ಆಗಿಸಿದ್ದು ಮತ್ತು ಅದನ್ನು ಕೇವಲ ಪರೀಕ್ಶೆಗೆ ಸಂಬಂಧಿಸಿದ ಒಂದು ವಿಶಯವಾಗಿ ಮಾತ್ರ ನೋಡಲಾಗಿದೆ. ಹೊಸತಲೆಮಾರಿನಲ್ಲಿ ಸಾಹಿತ್ಯದ ಬಗೆಗೆ ಕುತೂಹಲ ಮೂಡಿಸಲಾಗದ ಕಾರಣಕ್ಕೆ ಹೊಸ ಓದುಗರೇ ಸೃಶ್ಟಿಯಾಗದೆ ಸಾಹಿತ್ಯದ ಪ್ರಸಾರವೇ ಕುಂಟಿತವಾಗುವ ಹಂತಕ್ಕೆ ಬಂದು ನಿಂತಿದೆ. ಓದುಗರೇ ಇಲ್ಲದ ಕಾಲದಲ್ಲಿ ದೊಡ್ಡ ಸಾಹಿತ್ಯ ದೊಡ್ಡ ಲೇಖಕರಾದರೂ ಹುಟ್ಟಲು ಸಾಧ್ಯವೇ?
ಅಕ್ಶರಸ್ಥರ ಪ್ರಮಾಣ ಹೆಚ್ಚಿದಂತೆ ಓದುಗರ ಸಂಖ್ಯೆ ಹೆಚ್ಚಬೇಕಿತ್ತು. ಆದರೆ ಯಾವುದೇ ಬಗೆಯ ಬರೆಹಗಳ ಓದುಗರ ಸಂಖ್ಯೆ, ಓದಿನ ಆಸಕ್ತಿಗಳು ಈಚಿನ ದಶಕಗಳಲ್ಲಿ ಕಡಿಮೆಯಾಗಿವೆ. ಅದೇ ಹೊತ್ತಿನಲ್ಲಿ ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಸಂಖ್ಯೆ ಹೆಚ್ಚಿದೆ.
ಅಲ್ಲದೆ ಜಾಗತೀಕರಣದ ಕಾಲಘಟ್ಟದಲ್ಲಿ ರೂಪುಗೊಂಡ ಗ್ರಾಹಕ ಮನೋಭಾವದ ಮಧ್ಯಮ ವರ್ಗದ ಬೆಳವಣಿಗೆ ಸಾಹಿತ್ಯದ ಅವಗಣನೆಗೆ ಕಾರಣವಾಗಿದೆ. ಬ್ರಿಟಿಶ್ ಭಾರತ ಮತ್ತು ಆ ನಂತರದ ಕೆಲವು ದಶಕಗಳ ಭಾರತದಲ್ಲಿ ಮಧ್ಯಮ ವರ್ಗ ಜ್ಞಾನಕ್ಕೆ ಮತ್ತು ಸಾಹಿತ್ಯಕ್ಕೆ ತೆರೆದುಕೊಳ್ಳುತ್ತಿತ್ತು. ಈಚಿನ ವರ್ಶಗಳಲ್ಲಿ ಹುಟ್ಟಿಕೊಂಡ ಈ ವರ್ಗಕ್ಕೆ ಸಾಹಿತ್ಯ ಮತ್ತು ಜ್ಞಾನ ಮುಖ್ಯವಾಗಿ ಕಾಣುತ್ತಿಲ್ಲ. ಈ ವರ್ಗಕ್ಕೆ ತಮ್ಮ ಭಾಶೆಗಳಿಗಿಂತ ಮಾರುಕಟ್ಟೆಯ ಭಾಶೆಯಾದ ಇಂಗ್ಲಿಶ್ ಪ್ರತಿಶ್ಟೆಯ ಭಾಶೆಯಾಗಿದೆ.
ಇಪ್ಪತ್ತನೆಯ ಶತಮಾನದಲ್ಲಿ ಮುಂಚೂಣಿಗೆ ಬಂದಿದ್ದ ನವೋದಯ ಮತ್ತು ನವ್ಯ ಸಾಹಿತ್ಯಗಳ ಸಂದರ್ಭದಲ್ಲಿ ಪಶ್ಚಿಮದ ಸಾಹಿತ್ಯ ಚಿಂತನೆಗಳ ಪ್ರಭಾವ ಹೆಚ್ಚಿತ್ತು. ಇಂದು ಅಂತಹ ಚಿಂತನೆಗಳ ಪ್ರಭಾವ ಇಲ್ಲ. ಅನುವಾದಗಳ ಪ್ರಮಾಣ ಹೆಚ್ಚಿದ್ದರು ಹೊರಗಿನ ಚಿಂತನೆಗಳನ್ನು ಹೆಚ್ಚಾಗಿ ಆವಾಹಿಸಿಕೊಳ್ಳುವ ಅವುಗಳ ಭಾರ ಹೊರುವ ಉಮೇದು ಕಾಣುತ್ತಿಲ್ಲ. ಬದಲಿಗೆ ಬುದ್ಧ, ಅಂಬೇಡ್ಕರ್, ಬಸವಣ್ಣ, ಕುವೆಂಪು ಮುಂತಾದ ದೇಸೀ ಮೂಲಗಳ ಚಿಂತನೆಗಳಿಂದ ಪ್ರಭಾವಗೊಳ್ಳುತ್ತಿದೆ. ಕತೆ, ಕಾವ್ಯ, ವಿಮರ್ಶೆ, ಸಂಶೋಧನೆ ಎಲ್ಲ ಪ್ರಕಾರಗಳಲ್ಲಿಯೂ ಇದು ಕಾಣಿಸುತ್ತಿದೆ.
ಡಿ. ಆರ್. ನಾಗರಾಜ್ ಪಶ್ಚಿಮದ ಚಿಂತನೆಗಳನ್ನು ಎದುರುಗೊಂಡು ದೇಸಿ ಚಿಂತನೆಗಳನ್ನು ಮಂಡಿಸುತ್ತಿದ್ದರು. ಈಗ ಕನ್ನಡ ವಿಮರ್ಶೆಯಲ್ಲಿ ಹಾಗೆ ಪಶ್ಚಿಮದ ಚಿಂತನೆಗಳನ್ನು ಮುಖಾಮುಖಿಗೊಳ್ಳುವ ಸಂದರ್ಭಗಳು ಬಹಳ ಕಡಿಮೆ. ಕನ್ನಡ ಮತ್ತು ಇಂಗ್ಲಿಶ್ ಸಾಹಿತ್ಯಗಳೆರಡೂ ಇಂದು ಪ್ರತ್ಯೇಕ ದ್ವೀಪಗಳಾಗಿದೆ. ಈ ನಡುವೆ ಗಾಂಧಿ, ಲೋಹಿಯಾ ಮತ್ತು ಕಾರ್ಲ್ ಮಾರ್ಕ್ಸ್ ಅವರ ಪ್ರಭಾವಗಳು ಕಡಿಮೆಯಾಗಿವೆ. ಜನಚಳವಳಿಗಳ ಕಾವು ತಗ್ಗಿ ಸೈದ್ಧಾಂತಿಕ ಚರ್ಚೆಗಳು ಕ್ಶೀಣವಾದ ಪರಿಣಾಮ ಇವರ ವಿಚಾರಗಳು ಹಿಂದೆ ಸರಿದಂತೆ ಕಾಣುತ್ತಿವೆ.
ವಿವಿಧ ಜಾತಿ ಸಮುದಾಯಗಳ ನೆಲೆಗಳಿಂದ ಬಂದಿರುವ ಲೇಖಕರು ತಮಗೆ ಹೊಂದಿಕೆಯಾಗುವ ಚಿಂತನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂದಿನ ಚಿಂತನೆಗಳಲ್ಲಿ ಏಕರೂಪಿತನವಿಲ್ಲ. ಬಹುತ್ವವಿದೆ. ಆದರೆ ಈ ಬಹುತ್ವದ ನಡುವೆ ಸಹಯಾನವಿರದೆ ಸಂಘರ್ಶದ ಗುಣವಿದೆ. ಈ ಸಂಘರ್ಶ ಸಮುದಾಯಗಳ ಅಸ್ಮಿತೆಯ ಹುಡುಕಾಟದ ಭಾಗವೇ ಆಗಿದೆ.
ಸದ್ಯ ಕನ್ನಡದಲ್ಲಿ ವ್ಯಕ್ತಿ ಇಲ್ಲವೇ ಕರ್ತೃಕೇಂದ್ರಿತ ಓದು ವಿಮರ್ಶೆಗಳು ಮಾತ್ರ ನಡೆದಿವೆ. ಉದಾಹರಣೆಗೆ ಕುವೆಂಪು, ಲಂಕೇಶ್, ತೇಜಸ್ವಿ, ದೇವನೂರು ಮಹಾದೇವ ಮುಂತಾದವರ ಬರೆಹಗಳ ಓದು. ಇವರ ಸುತ್ತಲೇ ಹೆಚ್ಚು ಚರ್ಚೆಗಳು ಕೇಂದ್ರೀಕೃತವಾಗಿರುತ್ತವೆ. ಹಾಗೆಯೇ ಹೊಸದಾಗಿ ಬರೆಯುತ್ತಿರುವ ಕೆಲವೇ ಲೇಖಕರನ್ನು ಮೆಚ್ಚುವ ಹೊಗಳುವ ಪ್ರಶಸ್ತಿ ಪುರಸ್ಕೃತರನ್ನಾಗಿ ಮಾಡಿ ಅವರಶ್ಟನ್ನೇ ಮುಂದುಮಾಡುವ ಪ್ರಯತ್ನ ನಡೆದಿದೆ.
ಅಂದರೆ ಈ ಕಾಲದ ಧರ್ಮದಂತೆ ವ್ಯಕ್ತಿ ಪ್ರಧಾನವಾದ ಸಾಹಿತ್ಯವನ್ನು ಮುಂದೆ ತರುವುದು ಎದ್ದು ಕಾಣಿಸುತ್ತದೆ. ಇದು ಲೇಖಕರಲ್ಲಿಯೂ ಎದ್ದು ಕಾಣಿಸುವ ಸೆಲ್ಫ್ ಪ್ರೊಜೆಕ್ಶನ್ನಿನ ಪರಿಣಾಮ ಕೂಡ ಹೌದು. ಅಂದರೆ ಸಮುದಾಯ ಕೇಂದ್ರಿತ ಕಾಳಜಿಯುಳ್ಳ ಸಾಹಿತ್ಯ ಸೃಶ್ಟಿಗಿಂತ ವ್ಯಕ್ತಿನಿಶ್ಟ ಸಾಹಿತ್ಯ ಸೃಶ್ಟಿಯೇ ಪ್ರಧಾನವಾಗಿದೆ. ‘ಪ್ರಶಸ್ತಿ ಸಾಹಿತ್ಯ’ ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಂಡಿದೆ. ಲೇಖಕರ ಐಡೆಂಟಿಟಿಯೇ ಇಲ್ಲಿ ಪ್ರಧಾನವಾಗಿ, ಹುಟ್ಟುತ್ತಿರುವ ಸಾಹಿತ್ಯದಲ್ಲಿ ಹೆಚ್ಚಿನದು ‘ಬೂಸಾ ಸಾಹಿತ್ಯ’ ಆಗಿರಲು ಸಾಧ್ಯವಿದೆ.
ಗೋಳೀಕರಣಕ್ಕೆ ತೆರೆದುಕೊಂಡ ನಂತರ ನಮ್ಮ ಸಮಾಜದಲ್ಲಿ ಇಲ್ಲವೇ ಮನುಶ್ಯರ ಆಲೋಚನೆ ಮತ್ತು ವರ್ತನೆಯಲ್ಲಿ ಸಂಭವಿಸುತ್ತಿರುವ ತೀವ್ರ ಪಲ್ಲಟಗಳನ್ನು ಸೃಜನಶೀಲವಾಗಿ ಗುರುತಿಸಿ ಅವನ್ನು ದಾಖಲಿಸಲು ಬೇಕಾದ ಬೌದ್ಧಿಕ ಸಿದ್ದತೆ ನಡೆಸಿದಂತೆ ಕಾಣುತ್ತಿಲ್ಲ. ಬದಲಾಗಿ ಮೇಲುಸ್ತರದ ಇಲ್ಲವೇ ತೋರಿಕೆಯ ಸಂಗತಿಗಳನ್ನು ಮಾತ್ರ ಸಾಹಿತ್ಯದಲ್ಲಿ ದಾಖಲಿಸಲಾಗುತ್ತಿದೆ. ಈಗಾಗಲೇ ಜನಪ್ರಿಯವಾಗಿರುವ ಎಲ್ಲರಿಗೂ ಗೊತ್ತಿರುವ ವಿಚಾರಗಳನ್ನೇ ಮತ್ತೊಂದು ರೂಪದಲ್ಲಿ ಮಂಡಿಸಲಾಗುತ್ತಿದೆ. ಇಂತಹ ಸಾಹಿತ್ಯದಲ್ಲಿ ಹೊಸ ಒಳನೋಟಗಳೇ ಇಲ್ಲವಾಗಿದೆ. ವರ‍್ತಮಾನದಿಂದ ದೂರವಿರುವ ಸಾಹಿತ್ಯದಂತೆ ಕಂಡರೂ ಅಚ್ಚರಿಯಿಲ್ಲ.
ಈ ಕಾಲವನ್ನು ಸರಿಯಾಗಿ ಎದುರುಗೊಳ್ಳಲಾಗದ ಸಾಹಿತ್ಯವು ಸಮಾಜದ ಅರಿವಿನ ಎಲ್ಲೆಯನ್ನು ವಿಸ್ತರಿಸಲಾಗದೆ ದುರ್ಬಲವಾದಂತೆ ಕಾಣುತ್ತದೆ. ಸಾಹಿತ್ಯಕ್ಕೆ ಸಮಾಜದ ಪರಿವರ‍್ತನೆಯನ್ನು ಗ್ರಹಿಸಿ ಅದನ್ನು ಸಮಾಜದ ಅರಿವನ್ನಾಗಿಸಲು ಸಾಧ್ಯವಾಗುತ್ತಿಲ್ಲ. ಸಮಾಜ ವೈಚಾರಿಕವಾಗಿ ಉನ್ನತಿ ಸಾಧಿಸಲು ನೆರವಾಗದ ಯಾವುದೇ ಸಾಹಿತ್ಯ ಬೂಸಾ ಸಾಹಿತ್ಯವಲ್ಲವೇ? ಇಂತಹ ಸಾಹಿತ್ಯದ ಸೃಶ್ಟಿ ಹೇರಳವಾಗಿಯೇ ಉತ್ಪಾದನೆಗೊಳ್ಳುತ್ತಿದೆ.
ಇಂದು ಸಾಹಿತ್ಯ ಸಿದ್ಧಾಂತಗಳ ಚರ್ಚೆ ನಡೆಯುತ್ತಿಲ್ಲ. ಹೊಸ ಚಿಂತನೆಗಳನ್ನು ಕಟ್ಟಿಕೊಳ್ಳುವ ಉಮೇದು ನಿಚ್ಚಳವಾಗಿ ಕಾಣಿಸುತ್ತಿಲ್ಲ. ಮೇಲೆ ತಿಳಿಸಿದಂತೆ ಕನ್ನಡ ಸಾಹಿತ್ಯ ಮೀಮಾಂಸೆಯ ಮತ್ತು ಅವೈದಿಕ ಚಿಂತನೆಗಳನ್ನು ಕಟ್ಟಿಕೊಳ್ಳುವ ಪ್ರಯತ್ನಗಳು ಅಲ್ಲಲ್ಲಿ ಕಾಣಿಸಿದರೂ ಯಾರೂ ಮುಂದುವರಿಸುತ್ತಿಲ್ಲ. ಎಲ್ಲಾ ಚರ್ಚೆಗಳಿಗೂ ರಾಜಕೀಯವಾಗಷ್ಟೇ ಪ್ರತಿಕ್ರಯಿಸುವಂತಾಗಿದೆ. ಇಂತಹದ್ದರಲ್ಲಿ ಬೌದ್ಧಿಕ ವಾಗ್ವಾದಗಳು ನಡೆಯದೆ ಪರಸ್ಪರ ದೂಶಣೆಗಳೇ ಹೆಚ್ಚಿರುತ್ತವೆ. ಕುವೆಂಪು ಮಾಸ್ತಿಯವರ ನಡುವೆ ನಡೆದಂತಹ ಆರೋಗ್ಯಕರ ವಾಗ್ವಾದಗಳು ಇಂದು ನಡೆಯುವುದಿಲ್ಲ.
ನವೋದಯದ ಸಂದರ್ಭದಲ್ಲಿ ಗಾಂಧಿ, ನವ್ಯದ ಸಂದರ್ಭದಲ್ಲಿ ರಾಮಮನೋಹರ್ ಲೋಹಿಯಾ, ದಲಿತ ಬಂಡಾಯ ಸಾಹಿತ್ಯ ಚಳವಳಿಯ ಕಾಲಘಟ್ಟದಲ್ಲಿ ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ರ ಪ್ರಭಾವ ನಿಚ್ಚಳವಾಗಿ ಎದ್ದು ಕಾಣಿಸುತ್ತಿದ್ದಂತೆ ಇಂದು ಯಾರೇ ಒಬ್ಬರ ಚಿಂತನೆಯನ್ನು ಸಾಹಿತ್ಯದ ದರ್ಶನವಾಗಿಸಿಕೊಳ್ಳುತ್ತಿರುವುದು ಕಾಣುತ್ತಿಲ್ಲ. ಅಲ್ಲದೆ ತಮ್ಮದೇ ಆದ ಒಂದು ದರ್ಶನವನ್ನು ತಾತ್ವಿಕತೆಯನ್ನು ಕನ್ನಡದ ಲೇಖಕರು ನಿಚ್ಚಳವಾಗಿ ಮಂಡಿಸುತ್ತಲೂ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಮನೋನಿಶ್ಟವಾದ ವ್ಯಕ್ತಿಕೇಂದ್ರಿತವಾದ ಚಿಂತನೆಗಳೇ ಪ್ರಧಾನವಾಗಿವೆ.
ಯಾವುದೇ ಹೊರ ವಿಚಾರ ಸೃಶ್ಟಿಗೆ ವಾಗ್ವಾದಗಳು ಅಗತ್ಯ. ವೈಚಾರಿಕ ಚಕಮಕಿ ನಡೆಸಿ ಹೊಸ ಚಿಂತನೆಗಳನ್ನು ಕಟ್ಟಿಕೊಳ್ಳಲು ಸಾಧ್ಯ. ಅಲ್ಲದೆ ಬೌದ್ಧಿಕ ವಾಗ್ವಾದಕ್ಕೆ ಬೇಕಾದ ದಿಟ್ಟತೆ ಮತ್ತು ಧೀಮಂತಿಕೆಗಳನ್ನು ತೋರಿಸುತ್ತಿಲ್ಲ. ಕಂಫರ್ಟ್ ಜೋನಿನ ಒಳಗೆ ಜೀವಿಸುತ್ತ ಅನುಕೂಲಕರ ಚಿಂತನೆಗಳನ್ನು ಮಂಡಿಸುವುದೇ ಹೆಚ್ಚು ನಡೆದಿದೆ.
ಇದರ ಇನ್ನೊಂದು ತುದಿಯಲ್ಲಿ ಅಂಬೇಡ್ಕರ್‌ವಾದಿಗಳು ಗಾಂಧಿಯನ್ನು ನಿಂದಿಸುವ, ಲೋಹಿಯಾವಾದಿಗಳು ಮಾರ್ಕ್ಸ್ವಾದಿಗಳನ್ನು ಟೀಕಿಸುವ, ಮಾರ್ಕ್ಸ್ವಾದಿಗಳು ಎಲ್ಲರನ್ನೂ ನಿರಾಕರಿಸುವ ಮೂಲಕ ಚರ್ಚೆಗಳು ನಂದಿ ಹೋಗುತ್ತಿವೆ. ಸೈದ್ಧಾಂತಿಕ ದ್ವೇಶ ಎದ್ದು ಕಾಣುತ್ತದೆಯೇ ಹೊರತು ಸೈದ್ಧಾಂತಿಕ ಮಂಥನ ಮತ್ತು ಒಳಗೊಳ್ಳುವಿಕೆ ಹಾಗೂ ತಮ್ಮ ಚಿಂತನೆಗಳನ್ನು ಸರಿದಾರಿಯಲ್ಲಿ ಬದಲಿಸಿಕೊಳ್ಳುವ ಬಗೆ ಎದ್ದು ಕಾಣಿಸುತ್ತಿಲ್ಲ.
ಶರಣರು ನಡೆಸಿದ ಹಾಗೆ ಹೊಸ ವಿಚಾರಗಳನ್ನು ಕಟ್ಟಿಕೊಳ್ಳುವಲ್ಲಿ ಸಾಂಘಿಕ ಪ್ರಯತ್ನಗಳಿಲ್ಲ. ವೈಯಕ್ತಿಕವಾಗಿ ಕಾಣಿಸಿಕೊಳ್ಳುವ ಆಶಯಗಳು ಅಲ್ಲಲ್ಲಿಯೇ ಬತ್ತಿ ಹೋಗುತ್ತಿವೆ. ಸಾಹಿತ್ಯ ಚಿಂತನೆಗಳೇ ಸಮಾಜದ ಬಹುದೊಡ್ಡ ವೈಚಾರಿಕ ಸಂಗತಿಗಳಾಗಿವೆ. ಸಮಾಜವಿಜ್ಞಾನಗಳನ್ನು ಕಡೆಗಣಿಸಿರುವ ಪರಿಣಾಮವಾಗಿ ಆ ಜ್ಞಾನಶಾಖೆಗಳ ಅರಿವು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುತ್ತಿಲ್ಲ. ಇದರಿಂದ ಸಾಹಿತ್ಯ ಚಿಂತನೆಗಳ ಮಿತಿಗಳೂ ಗೊತ್ತಾಗುತ್ತಿಲ್ಲ.
ಇಂದು ಕನ್ನಡದಲ್ಲಿ ‘ದೀಪ’ ಸಾಹಿತ್ಯವಿಲ್ಲ. ದ್ವೀಪ ಸಾಹಿತ್ಯವೇ ಹೆಚ್ಚು ಪ್ರಧಾನವಾಗಿದೆ. ಅಂದರೆ ಕನ್ನಡದಲ್ಲಿ ಇಂದು ಕೆಲವು ಪ್ರಕಾರಗಳಲ್ಲಿ ಸಾಕಶ್ಟು ಸಾಹಿತ್ಯ ಸೃಶ್ಟಿಯಾಗುತ್ತಿದ್ದರೂ ಅದು ಕನ್ನಡದ ಎಲ್ಲ ಓದುಗರನ್ನು ತಲುಪುವುದಿಲ್ಲ. ಅಲ್ಲಿ ಗಡಿಗಳಿವೆ. ತಮ್ಮ ಜಾತಿ, ಪ್ರದೇಶ, ಧರ್ಮ, ಸಿದ್ಧಾಂತ, ಎಡ-ಬಲ ಮುಂತಾದ ಅಸ್ಮಿತೆಗಳ ಜೊತೆಗೆ ತಮ್ಮ ಸ್ನೇಹದ ಗುಂಪಿನ ಗಡಿಗಳಲ್ಲಿ ಇರುವವರಿಗೆ ಮಾತ್ರ ತಲುಪುತ್ತದೆ ಮತ್ತು ಗಡಿಗಳ ಒಳಗಿರುವವರನ್ನು ಮಾತ್ರ ಓದಲಾಗುತ್ತದೆ. ತಮ್ಮ ದ್ವೀಪದ ಆಚೆಗೆ ಇರುವವರನ್ನು ಓದುವ ಇಚ್ಚೆಯೇ ಹುಟ್ಟುವುದಿಲ್ಲ ಮತ್ತು ಅವುಗಳನ್ನು ಚರ್ಚಿಸುವುದಿಲ್ಲ. ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲು ಬಯಸದ ಮನೋವೃತ್ತಿಯೊಂದು ಢಾಳಾಗಿ ಕಾಣಿಸುತ್ತಿದೆ.
ಕನ್ನಡ ಸಾಹಿತ್ಯವಾಗಿ ಇಂದು ಚರ್ಚೆ ಓದುಗಳು ನಡೆಯದೇ ವ್ಯಕ್ತಿಕೇಂದ್ರಿತವಾದ ಇಲ್ಲವೇ ಗುಂಪುಕೇಂದ್ರಿತವಾದ ಓದುಗಳು ಮಾತ್ರ ನಡೆಯುತ್ತಿವೆ. ಇದರಿಂದ ಕನ್ನಡದಲ್ಲಿ ಒಡಕಲು ಬಿಂಬಗಳ ರೂಪಗಳೇ ಎದ್ದು ಕಾಣಿಸುತ್ತಿವೆ. ಇಲ್ಲಿ ಒಳಗೊಳ್ಳುವುದಕ್ಕಿಂತ ಆಚೆಗಿಡುವ ಪ್ರಯತ್ನಗಳೇ ಹೆಚ್ಚು. ಇದು ಕನ್ನಡ ಪ್ರಜ್ಞೆ ಒಂದು ಸಾಮುದಾಯಿಕ ಪ್ರಜ್ಞೆಯಾಗಿ ರೂಪುಗೊಳ್ಳುವುದನ್ನು ತಡೆದು ವ್ಯಕ್ತಿವಾದ ಮತ್ತು ಗುಂಪುವಾದಗಳನ್ನೇ ಬೆಳೆಸುತ್ತ ಕನ್ನಡದ ಅಸ್ಮಿತೆಯನ್ನು ಟೊಳ್ಳಾಗಿಸುತ್ತದೆ. ವಿಭಜಕ ಮನೋವೃತ್ತಿ ಸಾಹಿತ್ಯ ವಲಯದಲ್ಲಿಯೂ ಆಳವಾಗಿ ನೆಲೆಯೂರುತ್ತಿದೆ.
ಎಡಪಂಥೀಯ ವಿಚಾರಗಳು ಹೆಚ್ಚಾಗಿ ಅಕಡೆಮಿಕ್ ಸಾಹಿತ್ಯವನ್ನು ನಿರ್ಧರಿಸುತ್ತಾ ಬಂದಿದೆ. ಮಾನವೀಯತೆ, ಸಾಮಾಜಿಕ ಮುಂತಾದ ಹೆಸರಲ್ಲಿ ರಾಜಕೀಯ ಉದ್ದೇಶವನ್ನೇ ಪ್ರಧಾನವಾಗಿಟ್ಟುಕೊಂಡು ಸಾಹಿತ್ಯ ಸೃಷ್ಟಿಯಾಗುತ್ತಿದೆ. ಎಡಪಂಥೀಯ ಲೇಖಕರೆಲ್ಲ ಯಾವುದಾದರೊಂದು ರೂಪದ ಐಡೆಂಟಿಟಿ ಹೊತ್ತು ಅಥವಾ ಸಿಂಬಲ್‌ಗಳನ್ನು ಮೆರೆಸುತ್ತಾ ಹೇಳಿದ್ದನ್ನೇ ಹೇಳುವ ತಂಡವಾಗಿ ಬದಲಾಗುತ್ತಿದ್ದಾರೆ. ಹಿಂದೂ ಧರ್ಮ, ವೈದಿಕ ಪರಂಪರೆಗಳನ್ನು ನಾಶಮಾಡುವ ಉಮೇದಿನಲ್ಲಿ ನಿಜವಾದ ಎಡಪಂಥೀಯ ಧೋರಣೆಗಳು ಸಾಹಿತ್ಯದಿಂದ ಮಾಯವಾದಂತೆ ಭಾಸವಾಗುತ್ತಿದೆ.
ಬಲಪಂಥೀಯ ವಿಚಾರಗಳ ಪ್ರಭಾವ ಈ ಹಿಂದಿಗಿಂತ ಹೆಚ್ಚು ಬಲಗೊಂಡಿದೆ. ಇದರ ಪರಿಣಾಮವಾಗಿ ಕನ್ನಡದಲ್ಲಿ ಬಲಪಂಥೀಯ ವಿಚಾರಧಾರೆಗಳ ಸಾಹಿತ್ಯ ಸೃಶ್ಟಿಯಾಗುತ್ತಿದೆ. ಈ ಸಾಹಿತ್ಯ ಪ್ರಭುತ್ವವನ್ನು ಸಮರ್ಥಿಸುವ, ಚರಿತ್ರೆಯನ್ನು ಹೊಸ ಆಯಾಮದಲ್ಲಿ ಬರೆಯುವ ಹಾಗೂ ವೈದಿಕ ಪರಂಪರೆಯೇ ಶ್ರೇಶ್ಟವಾದುದು ಎಂದು ಬಿಂಬಿಸುವ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಕನ್ನಡದ ಮುಖ್ಯವಾಹಿನಿಯಾಗಿದ್ದ ಎಡ ವಿಚಾರಧಾರೆಯ ಸಾಹಿತ್ಯದ ಜೊತೆಗೆ ಇದು ಸ್ಪರ್ಧೆಗೆ ಇಳಿದಿರುವುದೂ ಇದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಪಲ್ಲಟ ಉಂಟು ಮಾಡುವ ಸಾಧ್ಯತೆಯಿದೆ.
ಎಡವೂ ಅಲ್ಲದ ಬಲವೂ ಅಲ್ಲದ ನಡುಪಂಥೀಯ ಎಂದುಕೊಳ್ಳುವ ‘ಸಾಹಿತ್ಯ ಪಂಥೀಯ’ರ ಸಾಹಿತ್ಯ ಪಂಥವೊಂದು ಕನ್ನಡದಲ್ಲಿ ಹುಟ್ಟಿಕೊಂಡಿದೆ. ಇಂದು ಇವರುಗಳ ಸಂಭ್ರಮದ ಕಾರ್ಯಕ್ರಮ ಪ್ರತ್ಯೇಕವಾಗಿ ನಡೆಯದಿದ್ದರೂ ನಾವು ನಡುಪಂಥೀಯರು ಎಂದು ಹೇಳಿಕೊಳ್ಳುವ ಜನರ ಸಂಖ್ಯೆ ದೊಡ್ಡದಿದೆ. ಇದಲ್ಲದೆ ಬೆಂಗಳೂರು ಸಾಹಿತ್ಯ ಹಬ್ಬ, ಮೈಸೂರು ಸಾಹಿತ್ಯ ಹಬ್ಬ ನಡೆಸುವವರು ನಡುಪಂಥದ ಬಗೆಗೆ ಮಾತನಾಡುತ್ತಾರೆ. ನಡುಪಂಥೀಯರಿಗೆ ಪ್ರಭುತ್ವದ ಹೊಲಸನ್ನು ಕುರಿತು ಮಾತಾಡುವುದು ರಾಜಕೀಯ ಚರ್ಚೆಯಾಗಿ ಕಾಣುತ್ತದೆ. ಅಂತಹ ಹೊತ್ತಿನಲ್ಲಿ ಇವರು ‘ಶುದ್ಧ ಸಾಹಿತ್ಯ’ದ ಚರ್ಚೆಯನ್ನು ಮುಂದು ಮಾಡುತ್ತಾರೆ.
ಅಂದರೆ ಕನ್ನಡ ಸಾಹಿತ್ಯದಲ್ಲಿ ಎಡಪಂಥ, ಬಲಪಂಥ ಮತ್ತು ನಡುಪಂಥಗಳೆಂಬ ಸೈದ್ದಾಂತಿಕ ವಿಭಜನೆಯಾಗಿರುವುದು ಈ ಕಾಲದಲ್ಲಿ ಎದ್ದು ಕಾಣಿಸುತ್ತದೆ.
ಸಮಾಜದಲ್ಲಿ ಸನಾತನ ವೈದಿಕ ವಿಚಾರಧಾರೆ ಮುಂಚೂಣಿಗೆ ಬಂದಿರುವ ಈ ಕಾಲಘಟ್ಟದಲ್ಲಿ ಅವೈದಿಕ ಮೂಲದ ತತ್ವಪದ ಸಾಹಿತ್ಯವನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಲಾಗುತ್ತಿದೆ. ಸ್ಥಳೀಯ, ನೆಲಮೂಲ ಇಲ್ಲವೇ ದೇಸೀ ಚಿಂತನೆಗಳನ್ನು ಕಟ್ಟಿಕೊಳ್ಳುವ ಮೂಲಕ ವೈದಿಕರ ಮತ್ತು ಜಾಗತೀಕರಣದ ಸಾಂಸ್ಕೃತಿಕ ದಾಳಿಗಳನ್ನು ಎದುರಿಸಲು ಯತ್ನಿಸಲಾಗಿದೆ. ಈ ದಿಸೆಯಲ್ಲಿ ನಟರಾಜ್ ಬೂದಾಳ್, ರಹಮತ್ ತರೀಕೆರೆ, ಮೀನಾಕ್ಶಿ ಬಾಳಿ, ಕೆ. ಮರುಳಸಿದ್ದಪ್ಪ, ಲಕ್ಷ್ಮೀಪತಿ ಕೋಲಾರ, ಪದ್ಮಾಲಯ ನಾಗರಾಜ್ ಮತ್ತು ಕಾ. ತ. ಚಿಕ್ಕಣ್ಣ ಮುಂತಾದವರು ಅವೈದಿಕ ಚಿಂತನೆಗಳಿಗೆ ಸೈದ್ದಾಂತಿಕ ತಳಹದಿ ರೂಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಚಿಂತನೆಗಳದ್ದು ನೆಲಮೂಲದಲ್ಲಿ ಬೇರುಬಿಟ್ಟ ವಿಕೇಂದ್ರೀಕೃತ ನೆಲೆ. ಇಂತಹ ನೆಲೆಗಳ ಕಡೆಗೆ ಕನ್ನಡ ಮನಸ್ಸು ಮುಖಮಾಡಿರುವುದು ಎದ್ದು ಕಾಣಿಸುತ್ತಿದೆ.
ವೈದಿಕ ತಾತ್ವಿಕತೆಗೆ ಬದಲಿಯಾಗಿ ಬೌದ್ಧ ತಾತ್ವಿಕತೆಯನ್ನು ಕಟ್ಟಲು ಯತ್ನಿಸಲಾಗುತ್ತಿದೆ. ದಲಿತ ಸಮುದಾಯ ‘ಬುದ್ಧಮಾರ್ಗ’ವನ್ನು ಸಂಸ್ಕೃತಿಯಾಗಿ ಸ್ವೀಕರಿಸುತ್ತಿದೆ. ಇದೆಲ್ಲ ಈ ಕಾಲದಲ್ಲಿ ಮುಂಚೂಣಿಗೆ ಬಂದಿರುವ ಹಿಂದುಳಿದ ವರ್ಗಗಳ ದಾರ್ಶನಿಕ ಚಿಂತನೆಗಳ ಅಗತ್ಯವನ್ನು ಈಡೇರಿಸುವ ಸಲುವಾಗಿದೆ. ಇದರಿಂದ ತಳಸಮುದಾಯಗಳ ಅಧ್ಯಾತ್ಮ ಸಾಹಿತ್ಯಕ್ಕೆ ಜೀವ ಬಂದಿದ್ದು ಇದು ವ್ಯಾಪಕವಾದ ಚರ್ಚೆಗೆ ಒಳಪಡಬೇಕಿದೆ.
ಇದರ ಮುಂದುವರಿಕೆಯಾಗಿ ಕನ್ನಡದ ಕವಿಗಳು ಮತ್ತು ಚಿಂತಕರು ತಮ್ಮ ಸಾಹಿತ್ಯ ದರ್ಶನದ ಭಾಗವಾಗಿ ಬುದ್ಧ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಮುಂದೆ ತರುತ್ತಿದ್ದಾರೆ. ಸದ್ಯ ಸಾಹಿತ್ಯದಲ್ಲಿ ಬುದ್ಧ, ಗಾಂಧಿ ಮತ್ತು ಅಂಬೇಡ್ಕರ್ ಸಾಂಕೇತಿಕವಾದ ಜಾಗವನ್ನಷ್ಟೇ ಪಡೆಯುತ್ತಿದ್ದಾರೆ. ಈ ಬಗ್ಗೆ ಅಧ್ಯಯನಗಳು ಹೆಚ್ಚಿ ದಾರ್ಶನಿಕರ ವಿಚಾರಗಳು ಲೇಖಕರ ಅಂತಸ್ಥ ದರ್ಶನ ಸಾಮರ್ಥ್ಯವಾದಾಗ ಅದು ಸಾವಯವ ಅಭಿವ್ಯಕ್ತಿಯ ರೂಪ ಪಡೆದುಕೊಳ್ಳಬಹುದಾಗಿದೆ.
ಇಂದು ಸಾಮಾಜಿಕವಾಗಿ ಅಂಬೇಡ್ಕರ್ ಓದು ಮತ್ತು ಅಭಿಯಾನಗಳು ನಡೆದರೂ ಅದರ ಪ್ರಭಾವಗಳು ದಲಿತ ಸಮುದಾಯಗಳಿಂದ ಬಂದ ಲೇಖಕರನ್ನು ಹೊರತುಪಡಿಸಿ ಉಳಿದವರನ್ನು ದಟ್ಟವಾಗಿ ಆವರಿಸಿರುವುದು ಬಹಳ ಕಡಿಮೆ. ಹಾಗಾಗಿ ಅಂಬೇಡ್ಕರ್ ಕೂಡ ಕನ್ನಡ ಸಾಹಿತ್ಯವನ್ನು ವ್ಯಾಪಕವಾಗಿ ಆವರಿಸಿಕೊಂಡಿರುವುದು ಕಡಿಮೆ. ಉಳಿದಂತೆ ನಿರ್ದಿಶ್ಟ ವೈಚಾರಿಕತೆ ಮತ್ತು ಸೈದ್ದಾಂತಿಕ ನೆಲೆಗಳನ್ನು ಮೀರಿ ಸಂಕರ ಮತ್ತು ಸಂಕೀರ್ಣವಾದ ಮನೋನಿಶ್ಟವಾದ ಚಿಂತನಾಕ್ರಮವು ಇಂದು ಕನ್ನಡದಲ್ಲಿ ಹರಿಯುತ್ತಿದೆ.
ಕಾವ್ಯ ಮತ್ತು ಸಣ್ಣ ಕತೆಗಳ ಪ್ರಕಾರಗಳಲ್ಲಿ ಹುಲುಸಾದ ಬೆಳೆ ಬರುತ್ತಿದೆ. ಕಾದಂಬರಿಗಳು, ಅಂಕಣ ಬರೆಹಗಳು ಸಾಕಶ್ಟು ಸೃಶ್ಟಿಯಾಗಿವೆ. ಮಾರುಕಟ್ಟೆಯ ಸರ್ವಾಧಿಕಾರಿ ಆಕ್ರಮಣ ಮತ್ತು ಮತೀಯವಾದಿ ಭಯೋತ್ಪಾದನೆ ಉಂಟು ಮಾಡುತ್ತಿರುವ ಹಿಂಸೆಯನ್ನು ಸಾಹಿತ್ಯದ ಹೂರಣವಾಗಿಸುವ ಪ್ರಯತ್ನ ನಡೆದಿದೆ. ಈಚಿನ ದಶಕಗಳಲ್ಲಿ ಅಂಕಣ ಸಾಹಿತ್ಯ ವಿಚಾರ ಸಾಹಿತ್ಯದ ಸ್ವರೂಪ ಪಡೆದು ಈ ಕಾಲದ ಸಂಕಟಗಳಿಗೆ ದನಿಯಾಗಿದೆ. ರಾಜಕೀಯಮಯವಾಗಿದೆ.
ಅಂದರೆ ತೊಂಬತ್ತರ ದಶಕದ ನಂತರದಲ್ಲಿ ಒಟ್ಟು ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಪರಿಸರಗಳೇ ಪಲ್ಲಟಿಸಿ ಹೋಗಿವೆ. ಲೋಕದ ಗ್ರಹಿಕೆಯ ಬಗೆಯಲ್ಲಿಯೇ ಮೂಲಭೂತ ದೋಶ ಇರುವುದರಿಂದ ತೊಂಬತ್ತರ ನಂತರದ ದಶಕಗಳ ಬದಲಾವಣೆಯ ದುರಂತವನ್ನು, ಸಂಕೀರ್ಣತೆಯನ್ನು ಇಡಿಯಾಗಿ ಸಾಹಿತ್ಯದ ಒಡಲೊಳಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಇಂದಿನ ಹೆಚ್ಚಿನ ಸಾಹಿತ್ಯ ದುರ್ಬಲ ಅಭಿವ್ಯಕ್ತಿಯಾಗಿ ಕಾಣಿಸುತ್ತದೆ. ವರ‍್ತಮಾನವನ್ನು ಅದು ಇರುವ ಸ್ವರೂಪದಲ್ಲಿಯೇ ಗ್ರಹಿಸಿ ನಿರೂಪಿಸಲು ಸಾಧ್ಯವಾಗದ ಕಾರಣ ಈ ಕಾಲದ ಸಾಹಿತ್ಯ ದರ್ಶನ ತಾಜಾತನದಿಂದ ಕೂಡಿದೆ ಎನ್ನಿಸುವುದಿಲ್ಲ. ಇಶ್ಟೆಲ್ಲ ಸಮಸ್ಯೆ ಇದ್ದಾಗಲೂ ಒಟ್ಟು ಕನ್ನಡ ಚಿಂತನೆಯನ್ನು ಅವೈದೀಕಿಕರಣಗೊಳಿಸುವ ಮತ್ತು ನಿರ್ವಸಾಹತೀಕರಣಗೊಳಿಸುವ ಪ್ರಯತ್ನವೊಂದು ಗುಪ್ತಗಾಮಿನಿಯಾಗಿ ನಡೆಯುತ್ತಿದೆ ಎಂದೆನಿಸುತ್ತದೆ.
ರಂಗನಾಥ ಕಂಟನಕುಂಟೆಯವರೇ ಬರೆದ ಲೇಖನವು ಅವರ ಫೇಸ್‌ಬುಕ್ ವಾಲಿನಿಲ್ಲಿದೆ. ಕೊಂಡಿ ಮುಂದಿದೆ >> https://www.facebook.com/ranganatha.kantanakunte.1/posts/pfbid031iFBf3dFqESU4wCseBDWAGFHH5KnLWouMxUoNucLwSRLPcr9LRhDcwcsZKZfpMtLl
ಹ್ಞಾಂ. ಈಗ ನಮ್ಮದು. ಮೇಲಿನ ಲೇಖನವು ಬಹಳಷ್ಟು ದೃಷ್ಟಿಕೋನದಲ್ಲಿ ಇಂದಿನ ಕನ್ನಡ ಸಾಹಿತ್ಯದ ಹರಿವನ್ನು ಕಂಡಿದೆ. ಅದರ ಬಗ್ಗೆ ನನಗೆ ಯಾವುದೇ ತಕರಾರೂ ಇಲ್ಲ. ಮೊದಲೇ ಹೇಳಿದ ಹಾಗೆ ಈ ಲೇಖನವು ನನಗೊಂದು ಉದಾಹರಣೆಯಷ್ಟೇ. ಯಾಕೆ? ಇಂದಿನ ಯೋಚನೆಗಳು ಯಾವ ದಿಕ್ಕಿನಲ್ಲಿವೆ ಎಂದು ಗ್ರಹಿಸಲು ಮತ್ತು ಆ ಮೂಲಕ ಸಾಧ್ಯವಾದರೆ ಮುಂದಿನದನ್ನು ರೂಪಿಸುವಲ್ಲಿ ಸಹಾಯವಾಗಲು.
ಮೇಲಿನ ಲೇಖನದಲ್ಲಿ ಏನೇನೋ ದೊಡ್ಡ ದೊಡ್ಡ ಆಶಯಗಳನ್ನಿಟ್ಟುಕೊಂಡು ದೊಡ್ಡ ದೊಡ್ಡ ಕನಸುಕಂಡು ಕನ್ನಡದ ಕೆಲಸ ಮಾಡಿದ್ದಾರೆಂದು ಉಲ್ಲೇಖಿಸಿರುವ ಹೆಸರುಗಳನ್ನೆಲ್ಲ ತೆಗೆದುಕೊಂಡರೆ, ಅವರುಗಳಿದ್ದ ಕಾಲವನ್ನು ಗಮನಿಸಿದರೆ ಅದೆಲ್ಲ ಸುಮಾರು ಐವತ್ತರವತ್ತು ವರ್ಷದ ಈಚಿನವೆಂದು ಗುರುತಿಸಬಹುದು. ಆದರೆ ಕನ್ನಡದ ಇತಿಹಾಸ ದೊಡ್ಡದು. ಆ ಕಾಲದಲ್ಲಿ, ಅಂದರೆ ಈ ಐವತ್ತು ವರ್ಷಗಳ ಮೊದಲು ಹೀಗೆಯೇ ಕನ್ನಡದ ಪ್ರತ್ಯೇಕ ಉನ್ನತಿಗೆ ಒತ್ತುನೀಡಿದವರು ಇದ್ದಾರೆಯೇ? ಪಂಪ ರನ್ನರು? ಕುಮಾರವ್ಯಾಸರು? ಅಥವಾ ಇನ್ನಾರಾದರೂ ದಿಗ್ಗಜರು?
ಅಯ್ಯೋ. ತಲೆಬಿಸಿ ಏನ್ ಬೇಡ. ಇದೆಲ್ಲ ಇತ್ತೀಚೆಗಷ್ಟೇ ಹರಳುಗಟ್ಟುತ್ತಿರುವ ಚಿಂತನೆ ಅಂತ ಹೇಳಲಿಕ್ಕೆ ಪ್ರಶ್ನೆ ಕೇಳಿದ ಹಾಗೆ ಮಾಡಿದ್ದಷ್ಟೆ. ಮತ್ತೇನಿಲ್ಲ. ಹಾಗೆಯೇ ಕನ್ನಡಕ್ಕಾಗಿ ಎಂದು ನಡೆದ ಚಳುವಳಿ, ಅಭಿಯಾನ, ಹೋರಾಟ, ಬೊಬ್ಬೆ ಎಲ್ಲವೂ ಇತ್ತೀಚಿಗೆ ಶುರುವಾದವೇ. ನಮ್ಮ ಸುತ್ತಮುತ್ತಲಿನ ತುಳು, ತಮಿಳು, ಮಲಯಾಳ, ತೆಲುಗು ಅಥವಾ ಬ್ಯಾರಿ, ಅರೆಭಾಷೆ ಮುಂತಾದೆಲ್ಲಾ ಭಾಷೆಗಳೂ ತಮ್ಮ ತಮ್ಮ ಆಸ್ಮಿತೆ ಹೆಮ್ಮೆ ಎಂಬಂತಹ ದೊಡ್ಡದೊಡ್ಡ ಪದಗಳತ್ತ ತಿರುಗಿರುವುದೂ ಇತ್ತೀಚಿಗೆಂದು ಗಮನಿಸಬಹುದು. ಅಂದರೆ ಈ ತರಹದ ಯೋಚನೆಗಳು ರೂಪುಗೊಳ್ಳಲು ಈ ಸಮಯಕ್ಕೆ ತಕ್ಕ ಹಾಗೆ ಬೇರೇನೋ ಕಾರಣವಿರಬೇಕು.
ಇಂತಹ ಚಿಂತನೆಗಳು ಜಗತ್ತಿನ ಬೇರೆ ಭಾಷೆಗಳಲ್ಲೂ ರೂಪುಗೊಂಡಿದೆಯಾ/ಗೊಳ್ಳುತ್ತಿದೆಯಾ ಎನ್ನುವುದು ಇನ್ನೊಂದು ಕೇಳಿಕೊಳ್ಳಬಹುದಾದ ಪ್ರಶ್ನೆ. ನನ್ನ ಊಹೆಯ ಪ್ರಕಾರ ಖಂಡಿತವಾಗಿಯೂ ಇರುತ್ತವೆ. ಯಾಕೆಂದರೆ ನಮ್ಮನ್ನೆಲ್ಲ ಈ ಐವತ್ತು ವರ್ಷದಲ್ಲಿ ಪ್ರಭಾವಿಸಿರುವುದು ಯಾವುದೋ ಕಾಂಜಿಪೀಂಜಿ ವಾದವಲ್ಲ, ದ ಬಿಗ್ ಡಿಕನ್‌ಸ್ಟ್ರಕ್ಷನ್! ದ ಎಲಿಫೆಂಟ್ ಇನ್ ದ ರೂಮ್!
ಡಿಕನ್‌ಸ್ಟ್ರಕ್ಷನ್ ಬಗ್ಗೆ, ಅದರ ಪ್ರಭಾವ ನಮ್ಮ ಮೇಲೆ ಆಗಿರುವ ಬಗ್ಗೆ ಈ ಮೊದಲೇ ಅಲ್ಲಲ್ಲಿ ಹೇಳಿದ್ದರೂ, ಈ ಮೇಲಿನ ಲೇಖನವು ಅದನ್ನು ಕನ್ನಡದ ದೃಷ್ಟಿಕೋನದಲ್ಲಿ ನೋಡಲು ಸಹಾಯ ಮಾಡುತ್ತದೆ. ಎಷ್ಟು ಪ್ರಭಾವಿಸಿದೆ ಮತ್ತು ಹೇಗೆ ನಮ್ಮ ಚಿಂತನೆಗಳೆಲ್ಲ ಅದರಡಿಯಲ್ಲೇ ರೂಪುಗೊಳ್ಳುತ್ತಿವೆ ಎಂಬುದಕ್ಕೆ ಈ ಮೇಲಿನ ಲೇಖನವೇ ಒಳ್ಳೆಯ ಸಾಕ್ಷಿಯಾಗುತ್ತದೆ. ಈ ಚಿಂತನಾಕ್ರಮ ಇಂದಿಗೆ ಪ್ರಾಬ್ಲೆಮಾಟಿಕ್ ಅನಿಸುವುದು ಯಾಕೆಂದೂ ಆ ಲೇಖನವೇ ಎದೆತಟ್ಟಿ ಹೇಳಿಕೊಳ್ಳುತ್ತಲಿದೆ. ಲೇಖನದ ಆಶಯದಂತೆ ಹೊಸಚಿಂತನೆಗಳು ರೂಪುಗೊಳ್ಳಬೇಕಿರುವುದು ನಿಜವಾದರೂ ಅದು ಡಿಕನ್ಸ್‌ಟ್ರಕ್ಷನ್ ವಾದವನ್ನೇ ಮುಂದುವರಿಸುವಂತಿರದೆ ಹೊಸ ಹಾದಿಯನ್ನು ತುಳಿಯಬೇಕಿದೆ. ಆದರದನ್ನು ಗಮನಿಸುವುದಕ್ಕೆ ಲೇಖಕರು ಹೆಚ್ಚು 'ಎಡ'ವಿದ್ದಾರೆನಿಸುತ್ತದೆ.
ಕನ್ನಡದ್ದೇ ಆದ ವಾದಗಳು ರೂಪುಗೊಳ್ಳುತ್ತಿರುವ ಬಗ್ಗೆ ಲೇಖನವು ಕೊಟ್ಟ ಉದಾಹರಣೆಗಳನ್ನು ಗಮನಿಸೋಣ. ಒಬ್ಬರು ಕನ್ನಡದಲ್ಲಿ ಸ್ತ್ರೀವಾದವನ್ನು ಬೆಳೆಸುತ್ತಿದ್ದಾರೆ. ಮತ್ತೊಬ್ಬರು ಬುದ್ಧನನ್ನು ಕನ್ನಡಕ್ಕೆ ತಂದಿದ್ದಾರೆ. ಮತ್ತೊಬ್ಬರು ತತ್ವಪದ. ಇಂತವು. ಅಂದರೆ, ಆಲ್ರೆಡಿ ಎಕ್ಸಿಸ್ಟಿಂಗ್. ಆ ಎಕ್ಸಿಸ್ಟಿಂಗ್ ಚಿಂತನೆಗಳನ್ನು ಕನ್ನಡದಲ್ಲಿ ಬರೆಯುವುದು ಕನ್ನಡದ್ದೇ ಆದ ವಾದ ರೂಪುಗೊಳ್ಳುತ್ತಿರುವ ಬಗೆ?!
ಇನ್ನೊಂದು, ಶಂಕರ ಬಟ್ಟರ ಎಲ್ಲರ ಕನ್ನಡ. ಈ ವಾದವು ಬೆಳೆದು ಬಯಸಿದ್ದನ್ನು ಸಾಧಿಸಿತೆಂದೇ ಇಟ್ಟುಕೊಳ್ಳೋಣ. ಮಹಾಪ್ರಾಣವಿಲ್ಲದ ಕನ್ನಡದ್ದೇ ಪದಗಳು ಎಲ್ಲೆಲ್ಲೂ. ಇಡೀ ಜಗತ್ತನ್ನು ವ್ಯಾಪಿಸಿರುವ ಇಂಗ್ಲೀಷು ತಲೆಕೆಡಿಸಿಕೊಂಡೀತೋ? ಅಥವಾ ಕನ್ನಡದ ಹೊರಗಿನ ಪ್ರಪಂಚಕ್ಕೆ ಯಾವುದಾದರೂ ರೂಪದಲ್ಲಿ ಇದು ಪ್ರಭಾವಿಸೀತೋ? ಇಂಗ್ಲೀಷಿನವರು ಮಾತಾಡಿದಂತೆ ಬರೆಯಲು ಸ್ಪೆಲ್ಲಿಂಗ್ ಬದಲಿಸಿಯಾರೋ?! ಲ್ಯಾಟಿನ್ನವರು? ಫ್ರೆಂಚ್? ಚೀನೀ ಭಾಷೆಯವ್ರಾದ್ರೂ...ಪ್ಲೀಸ್ ಪ್ಲೀಸ್? ಕನ್ನಡವು "ನೀಡುವ" ನುಡಿಯಾಗುವುದು ಹೀಗೆಯೋ?!
ಇಲ್ಲಿ ನಾನು ಅವರುಗಳಾರ ಪ್ರಯತ್ನವನ್ನೂ ದೂಷಿಸುತ್ತಿಲ್ಲ. ಅವೆಲ್ಲವೂ ಮೆಚ್ಚುವಂತದ್ದೇ ಎರಡು ಮಾತಿಲ್ಲ. ಆದರಂತವನ್ನು ಕನ್ನಡದ್ದೇ ಆದ ವಾದಗಳಾಗಿ ಬೆಳೆಸುವಲ್ಲಿ ಮುಂದುವರೆಸಬೇಕು ಎಂದು ಬಿಂಬಿಸುವುದು ಯಾಕೋ ಸರಿಯಿಲ್ಲ. ಕನ್ನಡದಲ್ಲಿ ಗಾಂಧಿ, ಅಂಬೇಡ್ಕರ್, ಬುದ್ಧ ಅಥವಾ ಇನ್ನಾರದೋ ಚಿಂತನೆ ಬರಬೇಕು ಎಂಬಂತಹವೆಲ್ಲ ಕನ್ನಡದ ವಾದ ಹೇಗಾಗುತ್ತದೋ ಕಾಣೆ!
ಇದೆಲ್ಲ ಒಂದು ಬಕೆಟಲ್ಲಿ ನೀರು ತುಂಬಿಸಿಟ್ಟು, ಗಾಳ ಹಾಕಿ ಕಾದುಕೂತುಕೊಳ್ಳುವ ಹಾಗಿದು. ಮೊದಲಿಗೆ ಯಾರೋ ಇನ್ನೊಬ್ಬ ನದಿಯಿಂದಲೋ, ಕೆರೆಯಿಂದಲೋ ಮೀನು ಹಿಡಿದು ತಂದು ಈ ಬಕೆಟಲ್ಲಿ ಬಿಡಬೇಕು. ಮತ್ತದನ್ನು ಹಿಡಿದು ಕನ್ನಡದ ಮೀನು ಅಂದುಕೊಳ್ಳುವುದೇನೋ! ಮೊದ್ಲು ಯಾವುದೋ ಎಕ್ಸಿಸ್ಟಿಂಗ್ ಚಿಂತನೆಗಳನ್ನ ಕನ್ನಡದಲ್ಲಿ ಬರಿಯಲು ಪ್ರೋತ್ಸಾಹಿಸುವುದು. ಮತ್ತದನ್ನು ಕನ್ನಡದ ವಾದ ಕನಸು ಆಶಯ ಅಂತ ಕೊಂಡಾಡುದು!!
ಕನ್ನಡದಲ್ಲಿ ಹೆಚ್ಚು ಸಂಶೋಧನೆಗಳಾಗಬೇಕು ಎಂಬುದು ಇನ್ನೊಂದು ಬಯಕೆ. ಈ ಸಂಶೋಧನೆಯ ರೋಗ ಹೆಚ್ಚಾಗಿದ್ದೂ ಇದೇ ಡಿಕನ್‌ಸ್ಟ್ರಕ್ಷನಿಂದ. ಕನ್ನಡವೆಂದು ಪ್ರತ್ಯೇಕಗೊಳಿಸಿ ನೋಡಲು ಶುರುಮಾಡಿದ ಮೇಲೆ, ಕನ್ನಡವು ತಲೆಯೆತ್ತಿ ನಿಲ್ಲಲು, ಹೇಗಾದರೂ ತಮ್ಮದೇನೋ ಶ್ರೇಷ್ಠ ಎಂದು ಬಿಂಬಿಸಿಕೊಳ್ಳಬೇಕಲ್ಲ! ಇಲ್ಲದಿದ್ದರೆ ಸಪ್ಪೆ ಸಪ್ಪೆ ಆಗ್ತದೆ. ಸ್ವಲ್ಪ ಸಂಶೋಧನೆಯನ್ನು ಮಾಡಿದ್ದೇವಂತ ಒಗ್ಗರಣೆಗೆ ಹಾಕಿದ್ರೆ ಕನ್ನಡ ರುಚಿ ರುಚಿ ಆದೀತು ಅಂತ ಆಸೆ ಬೇರೆ. ಹೇಗೆ ಮಾಡುದು? ಇತಿಹಾಸ, ಸಮಾಜವಿಜ್ಞಾನ ಎಲ್ಲ ಇರುದ್ಯಾಕೆ ಅಂತ ಸಂಶೋಧನೆ ಮಾಡಿದ್ದೋ ಮಾಡಿದ್ದು! ಅಲ್ಲಿ ಅವ್ರಿದ್ರು ಇಲ್ಲಿ ಇವ್ರಿದ್ರು. ಅವ್ರ ಚಿಂತನೆ ಹಾಗಿತ್ತು ಇವ್ರದ್ದು ಹೀಗಿತ್ತು. "ನಿನ್ನದು?" ನನ್ನದೆಂತ ಇಲ್ಲ, ಎಲ್ಲಾ ಬೇರೆವ್ರದ್ದೇ. ಆದ್ರೆ ಅದೇ ಕನ್ನಡ ಕಟ್ಟುವ ಕಾರ್ಯ ನಮ್ಮ ಪ್ರಕಾರ.
ಈ ಸಂಶೋಧನೆಗಳನ್ನೆಲ್ಲ ಮೊದ್ಲು ನಿಲ್ಸಿ ಸೃಜನಶೀಲತೆಯನ್ನ ಪ್ರೋತ್ಸಾಹಿಸಲಿಕ್ಕೆ ಶುರುಮಾಡಿದ್ರೆ ಕನ್ನಡ ಒಂಚೂರು ಏನೋ ಕಟ್ಕೊಂಡಿತೇನೋ! ಕನ್ನಡವನ್ನು ಇಲ್ಲಿಯತನಕ ಕಟ್ಟಿದ್ದೂ ಕನ್ನಡ ಕವನಗಳು, ವಚನಗಳು, ಜಾನಪದ ಕತೆಗಳು, ಪುರಾಣ ಕೇಂದ್ರಿತ ಹರಿಕಥೆ, ದಾಸರ ಪದ ಮುಂತಾದ ಸೃಜನಶೀಲ ಅಭಿವ್ಯಕ್ತಿಗಳೇ ಹೊರತು, ಸಂಶೋಧನೆಗಳಲ್ಲ. ಅದು ಗೊತ್ತಾಗ್ಲಿಕ್ಕೆ ಇನ್ನೆಷ್ಟ್ ಸಂಶೋಧನೆ ಮಾಡ್ಬೇಕೋ ಕಾಣೆ! ಫರ್ಸ್ಟ್ ಆಫ್ ಆಲ್ ಅದ್ನೊಂದು ಪ್ರಕಾರ ಅಂತ ಮಾಡ್ಕೊಂಡಿದ್ ಯಾವನು! ಅವ್ನಿಗದೆಷ್ಟ್ ದರ್ದ್ ಇದ್ದಿರಬೇಡ!
ಮೊದ್ಲುನೂ ಆಯಾ ಕಾಲಕ್ಕೆ ತಕ್ಕಂಗೆ ಸಂಶೋಧನೆ ಎಲ್ಲಾ ಮಾಡಿರ್ತಾರೆ. ಎಂತಾ ಮಾಡಿದ್ರೂ ಅದನ್ನು ಅಭಿವ್ಯಕ್ತಿಸುತ್ತಿದ್ದದ್ದು ಮಾತ್ರ ಸೃಜನಶೀಲವಾಗಿನೇ ಇದ್ದಿರುತ್ತೆ. ಹೊಸ ವಾದಗಳು ಅಡಗಿರುವುದೂ ಈ ಸೃಜನಶೀಲ ಅಭಿವ್ಯಕ್ತಿಯಲ್ಲಿಯೇ. ಸೃಜನಶೀಲತೆ ಅಂದ್ರೇನೇ ವಾಟ್ಸ್ ನೆಕ್ಸ್ಟ್ ಎಂಬ ಹುಡುಕಾಟ. ಅದನ್ನು ಅಭಿವ್ಯಕ್ತಿಸುವ ರೀತಿ. ಎಲ್ಲೇ ಬೌಂಡರಿ ಹಾಕಿದ್ರೂ ಅದ್ರ ಆಚೆಗೆ ಹೋಗುವ, ಆಚೆ ನಿತ್ತು ನೋಡುವ ತುಡಿತ ಇರುತ್ತೆ ಅಲ್ಲಿ. ಆ ತುಡಿತಕ್ಕೆ ಇಂಪಾರ್ಟೆನ್ಸ್ ಕೊಡದೆ ಆದ್ಯಾವ್ದೋ ನಿದ್ದೆ ಬರೋ ಹಾಗೆ ಬರ್ದಿರೋ ಸಂಶೋಧನೆ ಗ್ರೇಟ್ ಅಂತಿದ್ರೆ!
ಈಗೀಗ ಒಂದೊಂದು ಮಾಧ್ಯಮವೇ ಇನ್ನೊಂದರ ಜೊತೆ ಸೇರಿ ಆ ಡಿವಿಶನ್‌ಗಳೇ ಮಾಯವಾಗತೊಡಗಿರುವಾಗ ನಾವಿನ್ನೂ ಸಂಶೋಧನೆಯೂ ಒಂದು ಪ್ರಕಾರ ವಿಮರ್ಶೆಯೂ ಒಂದು ಪ್ರಕಾರ ಎಂದು ವಿಭಜಿಸುತ್ತಾ ಕೂತರಾದೀತೋ!!? ಒಟ್ಟಾಗಿ ಬರಹ ಎಂಬುದು ಒಂದು ಮಾಧ್ಯಮ. ಅದರಲ್ಲಿ ಡಿಕನ್‌ಸ್ಟ್ರಕ್ಷನ್ ಅನ್ನು ಮೀರಿದ ಅಭಿವ್ಯಕ್ತಿಯನ್ನು ಗುರುತಿಸಬೇಕು. ಅದು ಸಂಶೋಧನೆ ಆದ್ರೂ ಇರ್ಲಿ ಕಾದಂಬರಿ ಕತೆ ಕವಿತೆ ಇಪ್ಪತ್ತೈದು ಪದಗಳೊಳಗಿನ ಪುಟ್ಕತೆಯಾದ್ರೂ ಆಗಿರ್ಲಿ. ಮೊದಲೇ ಭಾಷೆ ಎಂಬುದೊಂದು ಸೇರಿ ಬರಹ ಮಾಧ್ಯಮಕ್ಕೆ ಒಂದು ಎಕ್ಸ್ಟ್ರಾ ಗಡಿಯಿದೆ. ಇನ್ನೊಂದಿಪ್ಪತ್ತು ಪ್ರಕಾರ ಅದರೊಳಗೆ ಮಾಡುವ ಮೊದ್ಲು ಒಟ್ಟಾಗಿ ನೋಡಿ "ಹೊಸ" ಚಿಂತನೆಗಳ ಸಾಧ್ಯತೆಗಳನ್ನು ಗುರುತಿಸಬೇಕಿದೆ.
ನಾಚ್ಕೆ ಆಗ್ಬೇಕು ಕನ್ನಡ ಸಾಹಿತ್ಯಕ್ಕೆ ಒಂದ್ಲೆಕ್ಕದಲ್ಲಿ. ಡಿಗ್ರಿ ಬಿಟ್ಟಾಕಿ. ಹನ್ನೆರಡು ವರ್ಷ ಪ್ರತಿಯೊಬ್ಬರಿಗೂ ಕನ್ನಡ ಕಲ್ಸಿ, ಪದ್ಯ ಪ್ರಬಂಧ ಕತೆ ಕವಿತೆ ಎಲ್ಲಾದಕ್ಕೂ ಎಲ್ಲಾರ್ನೂ ಇಂಟ್ರಡ್ಯೂಸ್ ಮಾಡ್ಸಿದ ಮತ್ತೂ ಕೂಡ ಕನ್ನಡದಲ್ಲಿ ಇಷ್ಟ್ ವರ್ಷದಲ್ಲಿ ಒಂದು ಒರಿಜಿನಲ್ ವಾದ ಹುಟ್ಟಿಲ್ಲ! ಕನ್ನಡದ ಮಟ್ಟಿಗೆ ಭೈರಪ್ಪರ ಸತ್ಯ ಮತ್ತು ಸೌಂದರ್ಯವೇ ಕೊನೆಯದೇನೋ! ಅಷ್ಟೂ ಜನರಿಗೆ ಈ ಸಾಹಿತ್ಯ ಪರಿಚಯಿಸಿದ್ದರಿಂದ ಆಗಿದ್ದೊಂದೇ ಲಾಭ...ಫೇಸುಬುಕ್ಕಲ್ಲಿ ರಾಜಕೀಯ ಜಗಳ ಮಾಡ್ಲಿಕ್ಕೆ ಬೇಕಾದಷ್ಟು ಜನ ಆದ್ದು.
ಜೊತೆಗೆ ಈ ಸಾಹಿತ್ಯವನ್ನಷ್ಟೇ ದೊಡ್ಡ ಪುಡಾಂಗ್ ಮಾಡುವುದು ಲೇಖಕರೆನಿಸಿದವರ ಎಲ್ಲರ ಬುದ್ಧಿ. ಇವರು ಓದುವುದು ಸಾಹಿತ್ಯವನ್ನಷ್ಟೇ ಆದ್ರಿಂದ ಹಾಗೆ ಅಷ್ಟೆ. ಸಾಹಿತ್ಯ ಚಿಂತನೆಗಳೇ ಸಮಾಜದ ಬಹುದೊಡ್ಡ ವೈಚಾರಿಕ ಸಂಗತಿಗಳಾಗಿವೆ ಅಂತೆ. ಯಾಕೆ?! ನಾಟಕದ ಚಿಂತನೆ ಯಾಕಲ್ಲ? ಸಿನಿಮಾ ಚಿಂತನೆಗಳು? ಕಲೆದು?! ಸಂಗೀತದ್ದು? ಅದೆಲ್ಲ ಲೆಕ್ಕಕ್ಕಿಲ್ಲ. ಶಂಖದಿಂದ ಬಂದ್ರೆ ಮಾತ್ರ ತೀರ್ಥ. ಸಾಹಿತ್ಯವಷ್ಟೇ. ಅದರಲ್ಲೂ ಸಂಶೋಧನೆದು ಮಾತ್ರ.
ಕಾರಣ ಇಷ್ಟೇ. ವಸ್ತುವಿಷಯವಾಗಿಯೇ ದಕ್ಕುವುದು ಅದು ಮಾತ್ರ. ಉಳಿದದ್ದರಲ್ಲೆಲ್ಲ ಹುಡುಕಬೇಕು. ಹೇಗೆ ಎಲ್ಲಿ ಏನು ಅಭಿವ್ಯಕ್ತಿಯಾಗಿದೆ ಅಂತ. ಕಷ್ಟ ಆಗುದಿಲ್ವಾ? ಸ್ವರೂಪದಲ್ಲಾದ ಅಭಿವ್ಯಕ್ತಿ ಬಗ್ಗೆಲ್ಲಾ ಯಾವನೂ ಮಾತಾಡೋದೇ ಕೇಳೋದಿಲ್ಲಪ್ಪ! ಅದೆಲ್ಲ ಹೇಗೆ ಗುರುತಿಸುದು ಅಂತ ಫರ್ಸ್ಟ್ ಸಂಶೋಧನೆ ಮಾಡಿ ಮತ್ತೆ ಅದನ್ನು ವಸ್ತುವಿಷಯದ ಆಧಾರದಲ್ಲಿ ವೈಚಾರಿಕ ಚಿಂತನೆ ಅನ್ನಬೇಕಷ್ಟೆಯೇನೋ! ಥೋ! ಎಂತಾ ದರಿದ್ರ ಸ್ಥಿತಿ!
ಲೇಖನದ ಪ್ರಕಾರ, ಕತೆ ಕವಿತೆಗಳಲ್ಲಿ ಹುಲುಸಾದ ಫಸಲು ಬರ್ತಿದೆ ಅಂತೆ, ಅದೂ ಕಳೆದ ಮೂವತ್ತು ವರ್ಷಗಳಲ್ಲಿ! ಏನ್ ಬಂತೋ ಏನ್ ಕತೆನೋ! ಒಂದಷ್ಟು ಸಿಂಬಲ್ಗಳನ್ನು ಅಲ್ಲಲ್ಲಿ ನೇತು ಹಾಕಲಾಗಿದೆ ಎಂಬ ಕಾರಣಕ್ಕೆ ಹೊಗಳಬೇಕಷ್ಟೆ. ಬೇರಾವ ಬದಲಾವಣೆನೂ ಆಗಿಲ್ಲ. 'ನವ್ಯ'ದ ನಂತರ ಒಂದೇ ಒಂದು ಒಳ್ಳೇ ವಾದ ಕನ್ನಡದಲ್ಲಿ ಹುಟ್ಟಿದಂಗೆ ನಂಗಂತೂ ಅನ್ಸಿಲ್ಲ. ಹ್ಞಾಂ. ಗೊತ್ತು ಗೊತ್ತು. ಬಂಡಾಯ ಸಾಹಿತ್ಯ ಅನ್ನೋಕ್ ಬಂದ್ರಿ ನೀವು. ಆದ್ರದು ಜಾಗತಿಕವಾಗಿ ನೂರೈವತ್ತು ವರ್ಷದ ಮೊದ್ಲೇ ಬಂದಾಗಿತ್ತು. ಫ್ರೆಂಚ್ ರಿಯಲಿಸಂ ಅನ್ನೋ ಹೆಸ್ರಲ್ಲಿ. ಕಷ್ಟದಲ್ಲಿರೋರ ಕಷ್ಟಗಳನ್ನು ಅಭಿವ್ಯಕ್ತಿಸಿ ಪ್ರತಿನಿಧಿಸಿ ಎಲ್ಲ ಆಗ್ಲೇ ಆಗಿತ್ತು. ಇಲ್ಲಿ ಯಾವುದನ್ನೂ ಕಡೆಗಣಿಸುತ್ತಲಿಲ್ಲ. ಅದರ ಮಹತ್ವ ಇದ್ದೇ ಇದೆ. ಜಾಗತಿಕವಾಗಿ ಬ್ಲಾಕ್ ಮೂವ್ಮೆಂಟ್‌ಗಳೆಲ್ಲ ಶುರುವಾದ್ದಕ್ಕೆ ಸಂವಾದಿಯಾಗಿಯೂ ನಮ್ಮಲ್ಲಿನ ಬಂಡಾಯ ಸಾಹಿತ್ಯವನ್ನು ಗ್ರಹಿಸಬಹುದು. ಕಷ್ಟದಲ್ಲಿರೋರಿಗೇ ಅಥವಾ ಮೂಲೆಗುಂಪಾಗಿದ್ದವರಿಗೇ ಅಭಿವ್ಯಕ್ತಿಸುವ ಅವಕಾಶ ಸಿಕ್ಕಿದ್ದು ಆಗೆನ್ನುವುದು ತುಂಬ ದೊಡ್ಡ ವಿಷಯ ಕೂಡ.
ಜಾಗತಿಕವಾಗಿ ಮಾಡರ್ನಿಸಂ ಇದ್ದಾಗ, ಕನ್ನಡ ಸಾಹಿತ್ಯದಲ್ಲಿ ನವೋದಯ. ಸುಮಾರು ಒಳ್ಳೇ ಕೃತಿಗಳು ಬಂತು. ಪೋಸ್ಟ್ ಮಾಡರ್ನಿಸಂ ಟೈಮಿಗೆ ಹೊಂದಿಕೊಂಡು ಕನ್ನಡದಲ್ಲಿ ನವ್ಯ. ಅಲ್ಲೇ ಎಲ್ಲೋ ಬಂಡಾಯ. ಅದ್ರ ನಂತ್ರ ಅಂತೂ ಏನೂ ಆಗೇ ಇಲ್ಲ. ಮೂವತ್ತು ವರ್ಷದಿಂದ ಆ ಕವಿತೆಗಳ ಸ್ವರೂಪ ಅಂತೂ ಒಂದುಚೂರೂ ಬದಲಾಗದೇ ಉಳ್ಕೊಂಡಿದೆ. ಹೃದಯ ಭಾವನೆ, ಬೆವರು ವಾಸನೆ, ಕಣ್ಣೀರ ಸೇವನೆ ಮತ್ತೊಂದಿಷ್ಟು ಅಂಥವೇ ರಿಪೀಟೆಡ್ ರೂಪಕಗಳಂತೂ ಅಲ್ಲಲ್ಲೇ ಕೊಳ್ತೋಗೋ ಹಂಗಿದೆ. ಅದ್ಕೇ ಹುಲುಸಾದ ಫಸಲು ಬಂತೇನೋ!
ಉಳಿದಂತೆ, ಸಾಹಿತ್ಯ ವ್ಯಕ್ತಿಕೇಂದ್ರಿತ ಆಗಿರೋದೂ, ಸಹಯಾನವಿರದೆ ಸಂಘರ್ಷವಿರೋದು, ದ್ವೀಪ ಆಗಿರೋದು, ರಾಜಕೀಯಮಯ ಆದ್ದು, ಅವೈದಿಕ ತತ್ವಚಿಂತನೆಗಳು ಎಲ್ಲಾ ಒಪ್ಪುವಂತಹದ್ದೆ. ಮತ್ತದನ್ನು ಆ ಲೇಖನವೇ ವಿಸ್ತಾರವಾಗಿ ಕಾರಣ ಸಮೇತ ವಿವರಿಸಿದೆ ಕೂಡ. ಅದನ್ನೇ ಲಗತ್ತಿಸಿದ ಮೇಲೆ ಮತ್ತೆ ಮತ್ತೆ ಅದನ್ನೇ ಹೇಳುವುದರಲ್ಲಿ ಅರ್ಥವಿಲ್ಲವೆಂದೆನಿಸುತ್ತದೆ.
ವಿಮರ್ಶೆ ಬಗ್ಗೆನೂ ಏನೋ ಇತ್ತು ಅಲ್ಲಿ. ಈ ಮೇಲಿನ ಲೇಖನದ ವಿಮರ್ಶೆ ಚಿಕ್ಕದಾಗಿ ಮಾಡ್ಬೇಕಂದ್ರೆ, ಡಿಕನ್‌ಸ್ಟ್ರಕ್ಷನ್ ಮೇಲಿನಿಂದ ಕುಣಿಸುತ್ತಿರುವ ಕೈಗೊಂಬೆ ಬರ್ದಿದ್ ತರ ಇತ್ತು ಅನ್ಬೋದೇನೋ. ಪರ್ಫೆಕ್ಟ್ ಎಕ್ಸಾಂಪಲ್. ಹೇಳಿದ ವಿಷಯಗಳೆಲ್ಲ ಸರಿಯಾದವೇ. ಒಳ್ಳೆಯ ತೂಕವಿರುವ ಅಬ್ಸರ್‌ವೇಶನ್. ಆದ್ರೆ ನೋಡುವ, ಗ್ರಹಿಸುವ ದೃಷ್ಟಿಕೋನ ಸಂಪೂರ್ಣವಾಗಿ ಡಿಕನ್‌ಸ್ಟ್ರಕ್ಷನ್ ಕುಣಿಸುತ್ತಿರುವ ಪಪ್ಪೆಟ್‌ದು. ಎಲ್ಲರನ್ನೂ ಅದಷ್ಟು ಪ್ರಭಾವಿಸಿದೆ ಅಂದ್ಮೇಲೆ ಇದ್ದದ್ದೇ. ತಪ್ಪೇನಲ್ಲ. ಆದ್ರೆ, ಅದೇ ದಾರಿಯಲ್ಲಿ ಮುಂದುವರಿಯೋದು ಮೇಲೆ ಹೇಳಿದಷ್ಟು ಕಾರಣಗಳನ್ನು ಗಮನಿಸಿದ್ರೆ ಅಷ್ಟು ಸಮಂಜಸವಲ್ಲವೆಂದು ಅನಿಸೀತೇನೋ ಎಂದಷ್ಟೆ!
ಜಾಗತಿಕವಾಗಿಯೇ ಈಗ ಡಿಕನ್‌ಸ್ಟ್ರಕ್ಷನ್ನ ಪ್ರಭಾವದಿಂದ ಕಳಚಿಕೊಳ್ಳುವ ಪ್ರಯತ್ನಗಳಾಗುತ್ತಿವೆ. ಡೆರಿಡಾನ ಚಿಂತನೆಗಳಿಂದ ಪ್ರತಿಯೊಂದನ್ನೂ ವಿಭಜಿಸಿ ಪ್ರತ್ಯೇಕ ಸಂಶೋಧನೆಗಿಳಿದು ಹುಡುಕುವಂತಾಗಿ, ಮಾರ್ಟಿನ್ ಹೈಡೆಗ್ಗರ್, ಡೆಲ್ಯೂಜ್ ಮುಂತಾದವರ ವಿಚಿತ್ರ ಚಿಂತನೆಗಳ ಕುರಿತೂ ಒಲವು ಅಲ್ಲಲ್ಲಿ ಹೆಚ್ಚಾಗಿರುವಂತೆ ಕಾಣುತ್ತಿದೆ. ಇವನ್ನೆಲ್ಲ ಪರಿಗಣಿಸಿ ಇಂದಿನ ವಾದಗಳು ಕಾಲಕ್ಕೆ ತಕ್ಕಂತೆ ಮುಂದುವರಿದರೂಪ ಪಡೆಯಬೇಕಿದೆ. ಆದರೆ ನಾವುಗಳು! ಡಿಕನ್‌ಸ್ಟ್ರಕ್ಷನನ್ನೇ ಚಾಚೂ ತಪ್ಪದೆ ಪಾಲಿಸುತ್ತಾ ಕನ್ನಡದ ಖಾಲಿ ಬಕೆಟಲ್ಲಿ ಮೀನು ಹಿಡಿಯುವ ಪ್ರಯತ್ನದಲ್ಲಿದ್ದೇವೆ.
ಹಾಗಾದ್ರೆ?! ಸ್ವಲ್ಪ ಗಾಳ ಹಾಕಿದ್ದ ಬಕೆಟ್ ಸೈಡಿಗಿಟ್ಟು ಕನ್ನಡದ ಹೊರಗೆ ಆಚೀಚೆ ನೋಡ್ತಾ ಹೊಸತಾದ ಹೊಳಹು ಕಂಡುಕೊಳ್ಬೇಕಷ್ಟೆ. ರೂಪಿಸಬೇಕಾದ್ದು ಡಿಕನ್‌ಸ್ಟ್ರಕ್ಷನ್ನಿಗೆ ಬದಲಿ ವಾದವೆಂದಾದಾಗ ಅದಕ್ಕೆ ಜಾಗತಿಕವಾಗಿ ಪ್ರಭಾವಿಸುವಷ್ಟು ತಾಕತ್ತೂ ಇರಬೇಕಲ್ಲಾ! ಅದು ಕಷ್ಟ ಎಂದು ಸುಲಭಕ್ಕೆ ಅಂತಹುದೇ ವರ್ಚಸ್ಸಿರುವ ಹಳೇಯ ಸಿಂಬಲ್‌ಗಳನ್ನು, ಸಿಂಬಲ್ಲಿನ ಚಿಂತನೆಗಳನ್ನು ಕನ್ನಡದಲ್ಲಿ ಬರೆಯುವುದನ್ನಷ್ಟೆ ಪ್ರೋತ್ಸಾಹಿಸದೆ, ಬರೆದುದನ್ನು ಹೊಗಳಿ ಅಟ್ಟಕ್ಕೇರಿಸದೆ, ಹೊಸ ಸಾಧ್ಯತೆಗಳನ್ನು ಸೃಜನಶೀಲವಾಗಿ ರೂಪಿಸುವ ಕಾರ್ಯದಲ್ಲಿ ತೊಡಗಬೇಕಿದೆ. ವ್ಯಕ್ತವಾದ ವಸ್ತುವಿಷಯಕ್ಕಷ್ಟೇ ಸೀಮಿತವಾದ ವಿಮರ್ಶೆಗಳನ್ನೆಲ್ಲ ನಿಲ್ಲಿಸಿ, ಚೆನ್ನಾಗಿದೆ ಎಂದಷ್ಟೇ ಹೇಳುವುದನ್ನು ಕಾನೂನುಬಾಹಿರವೆಂದು ಪರಿಗಣಿಸಬೇಕಿದೆ. ದೇಶಕಾಲವೆಂದರೇನು ಎಂದರಿತು ಸೃಜನಶೀಲವಾಗಿ, ಎಲ್ಲಾ ಕಟ್ಟುಪಾಡುಗಳನ್ನೂ ಮೀರಿ, ತಾನು ಕಂಡುಕೊಂಡ ಹೊಳಹನ್ನು ಅಭಿವ್ಯಕ್ತಿಸುವ ಪ್ರಯತ್ನಪಡಬೇಕಿದೆ. ರಾಶಿಕೃತಿಗಳಲ್ಲಿ ಅಂತಹವನ್ನಷ್ಟೇ ಹೆಕ್ಕಿ ಗುರುತಿಸಿ, ಅಲ್ಲಿ ಹುಟ್ಟುವ ಸಾಧ್ಯತೆಗಳ ಮೂಲಕ ಕನ್ನಡವನ್ನು ನೀಡುವ ನುಡಿಯಾಗಿಸಬೇಕಿದೆ.


