top of page

ಕಲೆಯಲ್ಲಿ ಕಾಲಕ್ಕೆ ತಕ್ಕ ವಾದಗಳಿರಬೇಕೇ ಬೇಡವೇ?

  • Writer: sushrutha d
    sushrutha d
  • Mar 21, 2024
  • 4 min read

Updated: Jun 9, 2025

ಕಲೆಗೊಂದು ಭೂಮಿಕೆ 19 : ಈಗ ಟಿ ಎಂ ಕೃಷ್ಣರೊದ್ದೊಂದು ದೊಡ್ಡ ಗಲಾಟೆ. ಆ ಮನುಷ್ಯ ಮಾಡಿದ್ದೇನು? ಸಂಪ್ರದಾಯನಿಷ್ಠರಿಗೆ ಅರಗಿಸಿಕೊಳ್ಳಲಾಗದ ಆರ್ಗ್ಯುಮೆಂಟನ್ನು ತನ್ನ ಕಲಾಮಾಧ್ಯಮದ ಮೂಲಕ ಮುಂದಿಟ್ಟದ್ದು. ತಪ್ಪೇನು?


ಲಂಬೋದರ ಲಕುಮಿಕರವನ್ನೋ ಸೋಜುಗಾದ ಸೂಜು ಮಲ್ಲಿಗೆಯನ್ನೋ ಸಾವಿರ ಲಕ್ಷ ಬಾರಿ ಹೇಳಿದ್ದರಿಂದ ಸಂಗೀತ ಬೆಳೆಯುವುದಿಲ್ಲ. ಸುತ್ತಲೂ ಅದದೇ ಅದದೇ ಮೊಳಗಿ ಮೋನೋಟೋನಸ್ ಕಲ್ಚರ್ ಬೆಳೆಯುತ್ತಿರುವ ಸಂದರ್ಭದಲ್ಲಿ ಪರ್ಸನಲ್ ಆರ್ಗ್ಯುಮೆಂಟ್ ಒಂದನ್ನು ಮುಂದಿಡುವುದೇ ಒಂದು ರೀತಿಯಲ್ಲಿ ಕಮೆಂಡೇಬಲ್ ವಿಚಾರ. ಆ ವಾದದ ಔಚಿತ್ಯಪ್ರಶ್ನೆ ಏನೇ ಇದ್ದರೂ ತನ್ನದೇ ಆದ ವಾದವನ್ನು ಬೆಳೆಸಿ ಮುಂದಿಡುವ ಕರ್ತವ್ಯಪ್ರಜ್ಞೆಯನ್ನು ಹೊಂದಿರುವುದಕ್ಕೆ, ನಿಂತು ನೀರಾಗುವ ಕಲಾಪ್ರಕಾರವನ್ನು ತನಗೆ ಸರಿಯೆನಿಸಿದ ದಿಕ್ಕಿನಲ್ಲಿ ಬೆಳೆಯಿಸುತ್ತಿರುವುದಕ್ಕೆ, ಮತ್ತು ಆ ವ್ಯಾಲ್ಯೂ ಸಿಸ್ಟಮ್ ಅನ್ನು ಮುಂದಿನ ದಿನಗಳಿಗೂ ಪ್ರಜ್ಞಾಪೂರ್ವಕವಾಗಿ ದಾಟಿಸುತ್ತಿರುವುದಕ್ಕೆ ಹೆಚ್ಚಿನ ಸಂಗೀತಗಾರರಿಗಿಂತಲೂ ಟಿ ಎಂ ಕೃಷ್ಣರು ಮಹತ್ವದವರೇ ಆಗುತ್ತಾರೆ ಎಂದನಿಸುತ್ತದೆ ನನಗೆ.


ಹಿಂದೂಯಿಸಂ ಅನ್ನು ಒಂದು ಲಿಬರಲ್ ಧರ್ಮವೆಂದು, ಅದರಲ್ಲಿ ಕಾಲಕಾಲಕ್ಕೆ ಪರಿಷ್ಕರಣೆ ಸಾಧ್ಯವೆಂದೂ ಆ ಕಾರಣಕ್ಕಾಗಿ ಅದು ಉನ್ನತವಾದದ್ದೆಂದು ಹೇಳುವವರೇ ಸಂಗೀತ ಮಾತ್ರ ತನ್ನ "ಭಕ್ತಿರಸ" ದ ಕೋರ್‌ ಬಿಟ್ಟು ಹೊರಬರಬಾರದೆಂದು, ಅಂತಹ ಪ್ರಯತ್ನಗಳ ವಿರುದ್ಧ ಫತ್ವಾ ಹೊರಡಿಸುವುದು ಯಾಕೋ!? ಹಾಗೆ ನೋಡಿದರೆ ರಸ ಸಿದ್ಧಾಂತಕ್ಕೆ ಬುನಾದಿ ಹಾಕಿದ ಭರತಮುನಿ "ಭಕ್ತಿರಸ"ವನ್ನು ಹೇಳಿಯೇ ಇಲ್ಲವಲ್ಲಾ! "ಕರ್ನಾಟಿಕ್ ಸಂಗೀತ"ವೇ ಆಗಿರಲಿಲ್ಲವಲ್ಲಾ! ಅದನ್ನೆಲ್ಲ ಕಾಲಕ್ಕೆ ತಕ್ಕಂತೆ ಒಪ್ಪಲು ಸಾಧ್ಯವಾಗುವಾಗ ಇಂದಿನ ಕಾಲದ ಯೋಚನೆಗಳನ್ನು ಒಳಗೊಳ್ಳುವಂತಹ ಆರ್ಗ್ಯುಮೆಂಟ್‌ಗಳಿಗೆ ವಿರೋಧ ಯಾಕೆ?!


ಕಲೆಯೆಂಬುದು ಎಂದಿಗೂ ತನ್ನ ಕಾಲವನ್ನು ತಾನು ಅಭಿವ್ಯಕ್ತಗೊಳ್ಳುತ್ತಿರುವ ಮಾಧ್ಯಮಗಳಲ್ಲಿ ಒಳಗೊಳ್ಳಲು ಹವಣಿಸುತ್ತಿರುತ್ತದೆ. ಹಾಗಾದರೆ ಇಂದಿನ ಕಾಲ ಯಾವುದು? ಕೂಪಮಂಡೂಕರಂತೆ ತನ್ನ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿರಬೇಕಾದ ಕಾಲದ ನಂತರದ್ದು. ಇಂದಿಗೆ ಎಲ್ಲವೂ ಎಲ್ಲೆಡೆಯಿಂದಲೂ ಲಭ್ಯ. ಅದೆಲ್ಲದಕ್ಕೆ ತೆರೆದುಕೊಂಡು, ಇತರ ಕಲಾಕ್ಷೇತ್ರಗಳ ವಿಚಾರಗಳಿಂದಲೂ ಪ್ರಭಾವಿತಗೊಂಡು, ಒಳಿತೆನಿಸಿದವನ್ನು ತನ್ನ ಕ್ಷೇತ್ರದಲ್ಲಿ ಒಳಗೊಂಡುಕೊಂಡು, ಕ್ಷೇತ್ರದ ವ್ಯಾಪ್ತಿಯನ್ನು ಹಿರಿದು ಮಾಡುವತ್ತ ದುಡಿಯಬೇಕಾದ ಕಾಲವಿದು.


ಟಿ ಎಂ ಕೃಷ್ಣರು ಆ ತರಹದವರು. ಅವರದ್ದು ಕಂಟೆಂಪರರಿ ಸ್ಕೂಲ್ ಆಫ್ ಥಾಟ್. ಅವರನ್ನು ಅಳೆಯಬೇಕಿದ್ದರೆ, ಅಳೆಯಬೇಕಾದುದೂ ಕಂಟೆಂಪರರಿ ವ್ಯಾಲ್ಯೂ ಸಿಸ್ಟ‌ಮ್ ಪ್ರಕಾರ. ಇವರ ಅಭಿಪ್ರಾಯಗಳು ರೂಪುಗೊಂಡಿರುವುದು ಡಿಕನ್ಸ್‌ಟ್ರಕ್ಷನ್ ಕಾಲದಲ್ಲಿ. ಅದರಿಂದ ಪ್ರಭಾವಿತರಾಗಿ, ಆ ದೃಷ್ಟಿಕೋನದಲ್ಲಿ ಸಂಗೀತದ ಇತಿಹಾಸವನ್ನು ನೋಡಿ, ತನ್ನ ಸುತ್ತಲಿನ ಸಾಮಾಜಿಕ ವ್ಯಾಲ್ಯೂ ಸಿಸ್ಟಮ್‌ಗಳೊಂದಿಗೆ ತುಲನೆ ಮಾಡಿ, ಅವರಿಗೆ ಕಂಡ ಕುಂದುಕೊರತೆಗಳನ್ನು ತನ್ನ ಕಲಾಭಿವ್ಯಕ್ತಿಯ ಮೂಲಕವೇ ನೀಗಿಸುವತ್ತ ಕೆಲಸ ಮಾಡುತ್ತಿರುವವರು. ಬರಿಯ ರಾಜಕಾರಣದ ವಾದ ಆದರೆ ಅದು ಎರವಲು ಪಡೆದಂತದ್ದು. ಅವರದ್ದೇ ಆದದ್ದು ಏನಿಲ್ಲ ಎಂದರ್ಥ. ಆದರೆ ಇವರ ವಾದ ಸಂಗೀತದ ಸ್ಟ್ರಕ್ಚರಿನ ಕುರಿತಾಗಿಯೇ ಇರುವಂತದ್ದು. ಸಂಗೀತದ ಉದಾಹರಣೆಗಳನ್ನೇ ಎತ್ತಿಕೊಂಡು ಬಗೆದು ತೋರಿಸಿ ಇದು ಹೀಗೀಗಾಗಿದೆ ಎನ್ನುತ್ತಿರುವವರು. ಅಂದಮೇಲೆ ಏನು ಹೇಳುತ್ತಿದ್ದಾರೆ ಎಂಬುದು ಗೊತ್ತಿರಲೇಬೇಕಲ್ಲ!


ಅಕಸ್ಮಾತ್ ಆ ವಾದವೇ ಸಮಸ್ಯಾತ್ಮಕವಾದುದೆನಿಸಿದರೆ ಇನ್ನೊಂದೇ ಸಶಕ್ತವಾದ ವಾದ ರೂಪಿಸಿ ಮುಂದಿಡಬೇಕು. ಅದು ಈ ಕಾಲದ ಆಶಯಗಳನ್ನು ತಳಮಳಗಳನ್ನು ಒಳಗೊಳ್ಳುವಂತಿರಬೇಕು. ಅದಕ್ಕೆ ತಕ್ಕಷ್ಟು ಅಭ್ಯಸಿಸಿ, ತಾನು ಬೆತ್ತಲಾಗಿ, ತನ್ನ ವೈಯಕ್ತಿಕ/ಸಾಮಾಜಿಕ ಪ್ರೇರಿತ ವ್ಯಾಲ್ಯೂ ಸಿಸ್ಟಮ್‌ಗಳನ್ನು ಓರೆಗೆ ಹಚ್ಚಿ, ತನಗೆ ಕಂಡ ಕೊರತೆಗಳನ್ನು ನೀಗುವಂತಹ ಮತ್ತು ಭವಿಷ್ಯಕ್ಕೆ ತನ್ನ ಪ್ರಕಾರ ದಾರಿದೀಪವಾಗಬಲ್ಲಂತಹ ವಾದವನ್ನು ರೂಪಿಸಿ, ಅದನ್ನು ತನ್ನ ಕಲಾಭಿವ್ಯಕ್ತಿಯ ಮೂಲಕ ಮುಂದಿಡಲು ಸಾಧ್ಯವಾಗಬೇಕು. ಯಾರಾದರೂ ಪ್ರಯತ್ನಿಸಿರಲ್ಲಾ..!!? ಅದಕ್ಕಾಗಿ ಇರೋ ಬರೋ ರಸವೆಲ್ಲಾ ತನ್ನಿಂದ ಹರಿದಾಗ ಭಕ್ತಿರಸದ ಅನಿವಾರ್ಯತೆ ಸಂಗೀತಕ್ಕೆ ಎಷ್ಟೆಂದು ಕಾಣಿಸೀತೇನೋ!


ಇಲ್ಲ, ಕಾಲಕ್ಕೆ ತಕ್ಕ ಹೊಸ ವಾದಗಳ ಅಗತ್ಯವಿಲ್ಲ. ಹಳೆಯದೇ ಪರಂಪರೆಯದೇ ಎಂದೆಂದಿಗೂ ಶ್ರೇಷ್ಠ ಎಂಬ ವಾದ ನಿಮ್ಮದಾಗಿದ್ದರೆ ಅದಕ್ಕೊಂದು ಕುರಾನ್ ಅಂತಹ ಎಂದಿಗೂ ಸುಳ್ಳಾಗದ ಧರ್ಮಗ್ರಂಥವಾದರೂ ಬರೆದಿಡಿ. ಅದಕ್ಕೆ ತಪ್ಪಿದವರನ್ನು ಕಾಫಿರರೆಂದೋ ಅಯೋಗ್ಯನೆಂದೋ ಅಥವಾ ಸಮನಾದ ಪದವನ್ನು ನಿಮ್ಮ ಭಕ್ತಿರಸದ ಡಿಕ್ಷನರಿಯಲ್ಲಿ ಹುಡುಕಿಡಿ. ನೋಡುವ, ಎಷ್ಟು ಮನಸ್ಸುಗಳು ಇದಕ್ಕೆ ಒಪ್ಪೀತೆಂದು! ಯಾವುದು ನಿಮ್ಮ ಮನೋಧರ್ಮಕ್ಕೆ ಹೆಚ್ಚು ಹಿಡಿಸುತ್ತದೆಂದು!


ಇಲ್ಲಿ ನಿಜವಾಗಿ ಗಮನಿಸಬೇಕಾದ್ದು, ಅವರು ಹೇಳುವುದಕ್ಕೂ ಅವರ ಕೃತಿಗಳಲ್ಲಿ ಅಭಿವ್ಯಕ್ತವಾಗುವುದಕ್ಕೂ ವ್ಯತ್ಯಾಸವಿದೆಯೇ ಎಂಬುದು. ಹಾಗೇನೂ ಇಲ್ಲವೆಂದರೆ, ಮತ್ತೇನು ಸಮಸ್ಯೆ?! ಕಲೆಗೆ ಅಥವಾ ಕಲಾಮಾಧ್ಯಮಗಳಿಗೆ ಎಂತಹ ಪರಂಪರೆ ಇದ್ದರೂ ಅಷ್ಟೆ, ಅದು ಕೊನೆಗೆ ವೈಯಕ್ತಿಕ/ಸಾಮೂಹಿಕ ಅಭಿವ್ಯಕ್ತಿಯೇ. ಆಗ ಆ ಸಮೂಹ/ವ್ಯಕ್ತಿಯ ಕೃತಿಗಳು ಎಷ್ಟರ ಮಟ್ಟಿಗೆ ತಾವು ನಂಬಿರುವುದಕ್ಕೆ, ಹೇಳಿದ್ದಕ್ಕೆ, ಕಂಡುಕೊಂಡಿದ್ದಕ್ಕೆ ಬದ್ಧವಾಗಿವೆ ಎಂಬುದು ಮುಖ್ಯವಾಗುತ್ತದೆ.


ಎಲ್ಲವೂ ಆಯಾ ದೇಶಕಾಲಕ್ಕೆ ಅನುಗುಣವಾಗಿ ರೂಪ ತಳೆಯುವಂತವುಗಳಾದ್ದರಿಂದ ಕಲೆಯಲ್ಲಿ ಯಾವುದೂ ಇದಮಿತ್ಥಂ ಎಂದಿರಲು ಸಾಧ್ಯವಿಲ್ಲ. ಪರಂಪರೆಯನ್ನೇ ನೋಡುವುದಾದರೂ, ನಮ್ಮ ಭಾರತೀಯತೆಯಲ್ಲೊಂದು ಚಲನಶೀಲ ಗುಣವಿದೆ. ಇಲ್ಲಿ ಎಲ್ಲವೂ ಒಂದಕ್ಕೊಂದು ಹಾಸುಹೊಕ್ಕಾಗಿಯೇ ಬೆಳೆದುದರಿಂದ ಭಾರತೀಯ ಫಿಲಾಸಫಿಗಳು, ಧರ್ಮಗಳು ಎಲ್ಲದರಲ್ಲೂ ಇದರ ಇರವನ್ನು ಗುರುತಿಸಬಹುದು. ಭಾರತೀಯ ಸೌಂದರ್ಯಶಾಸ್ತ್ರವೂ ಬೆಳೆದುಬಂದುದು ಹೀಗೆಯೇ. ಅದರ ಮೂಲದಲ್ಲಿ, ಭರತಮುನಿಯ ವಿಚಾರಗಳಲ್ಲಿ ಭಕ್ತಿರಸ ಎನ್ನುವುದೇ ಇರಲಿಲ್ಲವಾದರೂ ಮತ್ತೆಂದೋ ಅದನ್ನು ಸೇರಿಸಿದ್ದಲ್ಲದೇ ಅದನ್ನೇ ಒಂದು ಕಟ್ಟುನಿಟ್ಟಾದ ಇನ್ಸ್ಟಿಟ್ಯೂಷನ್ ಮಾಡಿರುವುದು ಭಾರತೀಯ ಪರಂಪರೆಗೆ ಮಾಡಬಹುದಾದ ಅವಮಾನವಷ್ಟೇ? ಸೌಂದರ್ಯಶಾಸ್ತ್ರವೂ ಅದನ್ನೊಂದು ವಾದವಾಗಿ ಸ್ವೀಕರಿಸಿ ತನ್ನಲ್ಲಿ ಒಳಗೊಂಡಿತೇ ವಿನಃ ಅದನ್ನು ದೂಷಿಸಿ ಫತ್ವಾ ಹೊರಡಿಸಲಿಲ್ಲವೆಂಬುದನ್ನೂ ಇಲ್ಲಿ ಗಮನಿಸಬಹುದು.


ಸಾಧಾರಣವಾಗಿ ನಮ್ಮ ಸುತ್ತಮುತ್ತಲಿರುವವರು ಅವರವರ ಕ್ಷೇತ್ರ ಬಿಟ್ಟು ಹೊರಗೆ ಇಣುಕಿದವರೂ ಅಲ್ಲ. ಹೆಚ್ಚಾಗಿ ನಮ್ಮ ಸುತ್ತ ಕಾಣುವ ವಾಂಟು-ಬಿ-ಸಿನಿಮಾದವರನ್ನೇ ನೋಡಿ. ಎಷ್ಟು ಹೊತ್ತಿಗೂ ಆ ಸಿನಿಮಾ ಈ ಡೈರೆಕ್ಟರು ಎಂದಷ್ಟೇ. ವಾಂಟು-ಬಿ-ಸಾಹಿತಿಗಳಿಗೆ ಆ ಪುಸ್ತಕ ಈ ಲೇಖಕ. ಅಂದರೆ, ಅವರವರ ಮಾಧ್ಯಮಗಳ ಟೆಕ್ನಿಕಾಲಿಟಿಯನ್ನು ಮೀರಿದ ಚಿಂತನೆಗಳು ಹೆಚ್ಚಿನವರಲ್ಲೂ ಇಲ್ಲ. ಸಂಗೀತದವರೂ ಅಷ್ಟೇ, ಖಾಲಿ ದೋಸೆ ತಿರುವಿ ಹಾಕಲು ಬಂದರಾಯಿತು. ಹೆಚ್ಚಿನವರೂ ಸ್ವರ ರಾಗ ತಾಳಗಳಾಚೆಯ ಚಿಂತನೆಗಳಿಗೆ ತೆರೆದುಕೊಂಡವರಲ್ಲ. ಹಾಗಾಗಿಯೇ "ಭಕ್ತಿರಸ"ವನ್ನು ಮೀರಬಾರದೆನ್ನುವ ಮಾತುಗಳೆಲ್ಲ ಕೇಳಿಬರುತ್ತಿರುವುದು.


ಯಾಕೆ ಮೀರಬಾರದು ಸ್ವಾಮೀ! ಸಾಹಿತ್ಯಕಲಾಸೃಷ್ಟಿಯನ್ನೇ ನೋಡಿ. ಅದರಲ್ಲಿ ಯಾವ ರಸ ಪ್ರಧಾನವಿರಬೇಕೆನ್ನುತ್ತೀರಿ? ಅದೆಲ್ಲವನ್ನೂ ಮೀರಿದ ಸೃಷ್ಟಿಕಾರ್ಯವೊಂದಿದೆ ಅಲ್ವೇ!? ಮತ್ತೆ ಯಾಕೆ ಸಂಗೀತಕ್ಕೆ ಈ ಕಟ್ಟಳೆ?! ಲಿರಿಕ್ಸು ಪ್ರಾಬ್ಲೆಮ್ ಎಂದಾದರೆ, ಲಿರಿಕ್ಸ್ ಬದಲಿಸಿದರಾಯ್ತು. ರಾಗ ಸಮಸ್ಯೆಯಾದರೆ ಹೊಸರಾಗಗಳನ್ನು ಹುಟ್ಟುಹಾಕಿದರಾಯ್ತು. ಎಂ ಬಾಲಮುರಳಿಕೃಷ್ಣರೆಲ್ಲ ಮಾಡಿ ತೋರಿಸಿದ್ದಾರಲ್ಲಾ! ಮತ್ತೆಂತ ಇದ್ದುದರಲ್ಲೇ ಹೊರಳಾಡಿಕೊಂಡು ಸುಮ್ಮನೇ ಚೊರೆ!?


ರಾಗಗಳೆಂಬವು ಸಂಗೀತಕ್ಕೆ ಒಂದು ಮಾರ್ಗದರ್ಶಿ ಅಷ್ಟೇ. ಜನರಲ್ ಗೈಡ್‌ಲೈನ್ಸ್. ನೋಡ್ರಪ್ಪಾ, ಇವಿವನ್ನು ಈ ಈ ರೀತಿ ಹೇಳಿದ್ರೆ "ಚಂದ" ಕೇಳ್ತದೆ ಅಂತ. ಅದರಿಂದಾಚೆಗೆ ಬೇರೆ ಚಂದವೇ ಇಲ್ಲಾಂತಲ್ಲ. ಆ ಇತರ 'ಚಂದ'ಗಳನ್ನು ತಮ್ಮ ತಮ್ಮ ಕಾಲಕ್ಕೆ ದೇಶಕ್ಕೆ ಅನುಭವಕ್ಕೆ ತಕ್ಕ ಹಾಗೆ ಪ್ರಯತ್ನಪಟ್ಟು ಕಂಡುಹಿಡಿದು, ಮೊದಲಿಂದ ಇದ್ದುದಕ್ಕೆ ಸೇರಿಸುತ್ತಾ ಹೋಗಬೇಕಾದ್ದು ಒಬ್ಬ ಕಲಾವಿದನ ಜವಾಬ್ದಾರಿ. ಆ ದಾರಿ ಕಷ್ಟವೆಂದು ಅದ ಬಿಟ್ಟು ಇದ್ದ ಕೆಲವು ರಾಗಗಳನ್ನೇ ಇನ್ಸ್ಟಿಟ್ಯೂಷನಲೈಸ್ ಮಾಡಿ ಇತರ ಪ್ರಯತ್ನಗಳಾವುವೂ ಕೋರ್ ವ್ಯಾಲ್ಯೂವನ್ನು ಎತ್ತಿ ಹಿಡಿಯುವುದಿಲ್ಲವೆನ್ನುವುದು ಯಾರಿಗುಪಯೋಗವೋ ಕಾಣೆ! ಕಲೆಯ ವ್ಯಾಲ್ಯೂ ಇರುವುದೇ ಇಂತಹ ಅಸಂಬದ್ಧ ಕಟ್ಟಳೆಗಳನ್ನು ಮೀರುವುದರಲ್ಲಿ. ಪಂಡಿತ ಕುಮಾರ ಗಂಧರ್ವರು ರಾಗಗಳನ್ನೇ ತ್ಯಜಿಸಿ ನಿರ್ಗುಣವಾದವನ್ನು ಮುಂದಿಡಲಿಲ್ಲವೇ!? ಅಂತಹ ಅಪ್ರೋಚ್ ಅನ್ನು ಜಾಗೃತವಾಗಿಡಬೇಕಾದ್ದು ಕಲೆಯ ಬೆಳವಣಿಗೆ ದೃಷ್ಟಿಯಲ್ಲಿ ಅವಶ್ಯಕವೆನಿಸುವುದಿಲ್ಲವೇ!?


ಮಾರ್ಸೆಲ್ ದುಷಂಪ್ ತಂದಿಟ್ಟ ಕಮೋಡ್ ಕೂಡ ಇಂತದ್ದೇ ಒಂದು ವಾದ. ಅಡಿಗರು ಛಂದಸ್ಸಿನ ಕಟ್ಟಳೆ ಮೀರಿದ್ದೂ ಇಂತದ್ದೇ ಒಂದು ವಾದ. ಕಾಫ್ಕಾ ಬರೆದುದರಲ್ಲೂ ಅಭಿವ್ಯಕ್ತವಾಗಿರುವುದು ಇಂತದ್ದೇ ಒಂದು ವಾದ. ಆನಂದವರ್ಧನ, ಅಭಿನವಗುಪ್ತ, ಕುಂತಕ, ಬಾಣಭಟ್ಟರದ್ದೂ ಇಂತವೇ. ಅರಿಸ್ಟಾಟಲ್, ಹೆಗಲ್, ಕಾಂಟರದ್ದೂ ಅಷ್ಟೇ. ವಿಟ್ಗೆನ್‌ಸ್ಟೈನನ ಫಿಲಾಸಫಿ, ಗಾಂಧೀಜಿಯ ರಾಜಕೀಯ, ಇಲಾನ್‌ ಮಸ್ಕನ ಕಂಪೆನಿ ಕೂಡ ಇಂತದ್ದೇ ಒಂದೊಂದು ಅವರವರ ಕಾರ್ಯಕ್ಷೇತ್ರಕ್ಕನುಗುಣವಾದ ವಾದಗಳು. ನಮ್ಮ ಆಚಾರ್ಯತ್ರಯರು, ಬುದ್ಧ, ಬಸವಣ್ಣರೂ ಮಂಡಿಸಿದ್ದು ಇಂತ ವಾದಗಳನ್ನೇ‌. ಅವರೆಲ್ಲಾ ಕೃತಿಗಳೂ ಆಯಾ ದೇಶಕಾಲದ ತಳಮಳಗಳನ್ನು ಒಳಗೊಳ್ಳುವಂತಹ ಮತ್ತು ಆಯಾ ಕ್ಷೇತ್ರದ ಹಿಸ್ಟರಿಯನ್ನು ಪರಿಗಣಿಸಿ ರೂಪಿಸಿದಂತಹ ಅಭಿವ್ಯಕ್ತಿಗಳು‌. ಪರವೋ ವಿರೋಧವೋ, ಯಾವುದೋ ಒಂದು ರೂಪದಲ್ಲಿ ಅಡ್ರೆಸ್ ಅಂತೂ ಮಾಡಬಲ್ಲಂತವು. ಇಂತದ್ದರ ಮುಂದೆ ಲಂಬೋದರ ಲಕುಮಿಕರದಂತ ಯಾವದೋ ಪದ್ಯವನ್ನೋ ಕೀರ್ತನೆಯನ್ನೋ ನೂರೈವತ್ತು ಸಲ ಸ್ವರಬದ್ಧವಾಗಿ ಹಾಡಿ ಸಂಗೀತ ಕಲಾವಿದರಾದವರು ಹೇಗೆ ಇಂದಿನ ದಿನಗಳನ್ನು ತನ್ನ ಕೃತಿಗಳಲ್ಲಿ ಒಳಗೊಂಡಿದ್ದಾರೆ ಹೇಳಿಯಲ್ಲಾ...


ಕ್ರಾಫ್ಟ್ ಅನ್ನೇ ಆರ್ಟ್ ಎಂದು ಮಾಡಿ, ಅದನ್ನೊಂದು ಅತಿಯಾಗಿಸಿ, ಅದರಿಂದ ಹೊರಬಾರಲಾರದೇ, ಅದಕ್ಕೊಂದಷ್ಟು ಕಣ್ಣುಮುಚ್ಚಿ ಭಕ್ತಿಯ ಲೇಪ ಹಚ್ಚಿ, ಅದೇ ಶ್ರೇಷ್ಠವೆನ್ನುವ ಕಾಲ ಇಂದಿಗೆ ಸರಿದಾಗಿದೆ. ಮತ್ತು ಅಂತಹ ಒಳ್ಳೆಯ ಕೃತಿಗಳೂ ಈಗಾಗಲೇ ಸಾಕಷ್ಟಿವೆ ಕೂಡ. ಅಂತದನ್ನು ಬೇಕುಬೇಕೆಂದಾಗ ನೋಡ್ಲಿಕ್ಕೆ ಕೇಳಲಿಕ್ಕೆ ಎಲ್ಲಾ ಬೇಕಾದಷ್ಟು ವ್ಯವಸ್ಥೆಗಳೂ ಈಗಿವೆ. ಮತ್ತೆ ಇನ್ನೊಂದು ಅದೇ ಲಿಸ್ಟಿಗೆ ಸೇರುವುದರಿಂದ ಯಾರಿಗ್ಯಾವ ಉಪಯೋಗವೂ ಇಲ್ಲ. ಹಾಗಾದರೆ..?! ಇಲ್ಲಿಯ ತನಕ ಇಲ್ಲದ್ದನ್ನು ತಮ್ಮತಮ್ಮ ಅಭ್ಯಾಸಬಲದ ಮೂಲಕ ಮತ್ತು ತಾನಿರುವ ದೇಶಕಾಲದ ಪ್ರಭಾವದಿಂದ ಕಂಡುಕೊಂಡು, ಅದು ಇಂದಿಗೆ/ಮುಂದೆಗೆ ಅವಶ್ಯವೂ ಆಗಿದ್ದಲ್ಲಿ, ಸೂಕ್ತವಾಗಿ ಅಭಿವ್ಯಕ್ತಿಸುವ ಮೂಲಕ ಈಗಾಗಲೇ ಇರುವುದರ ವ್ಯಾಪ್ತಿಯನ್ನು ಹಿಗ್ಗಿಸಲು ಹೇಗೋ ಅದು ಸಹಕಾರಿಯಾದಲ್ಲಿ ಅದೊಂದು ಶ್ರೇಷ್ಠ ಕೆಲಸವಾದೀತು. ಅದನ್ನೇ ಅಲ್ಲವೇ ಟಿ ಎಂ ಕೃಷ್ಣರೂ ಮಾಡುತ್ತಿರುವುದು?


Art is an act of defining what beauty is for the respective time and space by the artist belonging to the same through acting out in any medium of choice. ಹೊಸ ಹೊಸ 'ಚಂದ'ವನ್ನು ತಾವಾಗಿಯೇ ತಮಗೆ ಸೂಕ್ತವೆನಿಸಿದ ರೀತಿಯಲ್ಲಿ ಕಂಡುಕೊಳ್ಳಲು ಅವಕಾಶವಿರುವಷ್ಟು ವಿಸ್ತಾರ ಕಲೆಗಿರುವುದೇ ಅದ್ರ ಚಂದ ಕೂಡ. ಅದನ್ನೀ ರಾಜಕೀಯ ತೆವಲು ಓತಾಪ್ರೋತ ಸಂಕುಚಿತಗೊಳಿಸದಿದ್ದರೆ ಸಾಕು.

bottom of page