top of page

ಇಮೇಜ್ ರೀಡಿಂಗ್ - ಯಾಕೆ? ಏನು? ಹೇಗೆ?

  • Writer: sushrutha d
    sushrutha d
  • May 8, 2024
  • 4 min read

Updated: Jan 21, 2025

ಕಲೆಗೊಂದು ಭೂಮಿಕೆ - 21 : ಈ ಬಾರಿ ವಿಶುವಲ್ ಇಮೇಜ್ ಒಂದನ್ನು ಓದುವುದೆಂದರೆ ಏನೆಂದು ನೋಡುವ. ಸ್ಟೆಪ್ ಬೈ ಸ್ಟೆಪ್. ಸುಲಭಕ್ಕಾಗಿ, ಯಾವುದೇ ಯೋಚನೆ ಇಲ್ಲದ, ಪ್ಲಾನ್ಡ್ ಅಲ್ಲದ, ಬರಿಯ ವಿಶುವಲ್ ಇಮೇಜ್ ಒಂದನ್ನು ಉದಾಹರಣೆಯಾಗಿ ತೆಗೆದುಕೊಳ್ಳುವ. ಸದ್ಯಕ್ಕೆ ನಿಮಗಿದನ್ನು ಮಾಡಿದವರಾಗಲೀ ಎಲ್ಲಿ ಏನು ಎತ್ತ ಎಂಬುದಾವುದೂ ಗೊತ್ತಿಲ್ಲವೆಂದು ಇಟ್ಟುಕೊಂಡು ಹೇಗೆ ಈ ಕೆಳಗಿನ ಚಿತ್ರವನ್ನು ನೋಡಬಹುದೆಂದು ಓದುವ.


ಯಾವುದೇ ಕಲೆ ಇರಲಿ, ಅದನ್ನು ಓದುವುದೆಂದರೆ ಬರಿಯ ವಿಷಯವಸ್ತುವನ್ನು ಗುರುತಿಸುವುದಲ್ಲ. ಇದನ್ನೊಂದು ತೋಟ ಎಂದು ಮೂರು ಸೆಕೆಂಡಲ್ಲಿ ಗುರುತಿಸಿದರೆ ಮುಗಿಲಿಲ್ಲ. ತೋಟವಲ್ಲದ್ದು ಮತ್ತೇನು ಎಂದು ಗುರುತಿಸಬೇಕು. ಕಲೆಯ ಭಾಷೆ, ವ್ಯಾಕರಣದ ಸಮಸ್ಯೆಯ ಕುರಿತೆಲ್ಲ ಮೊದಲೇ, ಕಲೆಗೊಂದು ಭೂಮಿಕೆ - 11ರಲ್ಲೇ ಹೇಳಿದ್ದೆ. ಇದೀಗ ಆ ಗೋಜಲನ್ನು ಒಂದು ಉದಾಹರಣೆಯ ಮೂಲಕ ಗುರುತಿಸುವ ಮತ್ತದನ್ನು ಸಾಧ್ಯವಾದಷ್ಟು ವಿವರಿಸುವ ಪ್ರಯತ್ನ.


ಯಾವನೋ ಒಬ್ಬ ಮಾತಾಡುವುದನ್ನು ಕೇಳಿದಾಗ ಇವ ಸತ್ಯ ಹೇಳ್ತಿರುದಾ ಅಥವಾ ಬರೀ ಬಾಯುಪಚಾರವಾ ಎಂದು ಗೊತ್ತಾಗ್ತದಲಾ...ಹಾಗೆಯೇ ಒಂದು ಕೃತಿಯನ್ನು ನೋಡಿದಾಗ್ಲೂ ಅದರಲ್ಲಿ ಹಾನೆಸ್ಟಿ ಎಷ್ಟಿದೆ ಎಂಬುದನ್ನು ಗುರುತಿಸಬಹುದು. ಹಾನೆಸ್ಟಿ ಹೆಚ್ಚಿದ್ದರೆ ಆ ಕಲಾವಿದನ ಅಭಿವ್ಯಕ್ತಿಯ ಮೇಲೆ ನಂಬಿಕೆ. ಕಡಿಮೆಯಾದಷ್ಟು ಅವ ಸೈಡಿಗೆ. ಇಲ್ಲಿರುವ ಮಾಯೆ ಇಷ್ಟೇ. ಕಲಾಕೃತಿ ಎಂದರೇ ಯಾರದ್ದೋ ಒಂದು ತೆರನಾದ ಅಭಿವ್ಯಕ್ತಿ. ಅಂದರೆ, ಕೃತಿಯಲ್ಲಿ ಅವರ ಗುಣಗಳೂ ಒಂದಷ್ಟು ಹಾಸುಹೊಕ್ಕಾಗಿ ಇರಲೇಬೇಕು. ಅದಿಲ್ಲದಿದ್ದರೆ, ಹೆಚ್ಚೆಚ್ಚು "ಫೈನ್‌ಟ್ಯೂನ್" ಆಗ್ತಾ ಹೋದ ಹಾಗೆ, ಕೃತಿಯಲ್ಲಿನ rawness ಕಡಿಮೆ ಆಗ್ತಾ ಹೋದ ಹಾಗೆ, ಕೃತಿಯಲ್ಲಿ ಗಮನಿಸಲು ಹೆಚ್ಚೇನೂ ಉಳ್ದಿರುವುದಿಲ್ಲ. It feels more like a plastic. ಬಾಯುಪಚಾರದಂತೆ ಅಷ್ಟೆ. ಚಂದ ಕಾಣಬೇಕೆಂದು ಮಾಡಿದ್ದು, ಚಂದವಿಲ್ಲದ್ದು. ಸಿಂಪಲ್.


ಆದರೆ ಅದನ್ನು ಗುರುತಿಸುವುದು ಹೇಗೆ?! ಸುಲಭದಲ್ಲಿ ಉದಾಹರಣೆ ಕೊಡಬೇಕಾದ್ರೆ, ಹೆಚ್ಚಾಗಿ ಈ ಇನ್ಸ್ಟಾಗ್ರಾಮ್ ಅರ್ಟಿಸ್ಟ್ಸ್ ಮಾಡುವಂತದ್ದಕ್ಕೆಲ್ಲಕ್ಕೂ ಆ ಪ್ಲಾಸ್ಟಿಕ್ ಫೀಲ್ ಇರುತ್ತದೆ. ಅಲ್ಲಿ ಓದಬೇಕೆಂದರೂ ಓದಲೇನೂ ಇರುವುದಿಲ್ಲ! ಚಿತ್ರವನ್ನು ನೈಸ್ ಮಾಡಹೊರಟು ಉಜ್ಜಿ ಉಜ್ಜಿ ಅದರಲ್ಲಿ ಏನಂದ್ರೆ ಏನೂ ಉಳ್ದಿರುದಿಲ್ಲ. Characterless mere representations! ಈ ಇಲ್ಲುಸ್ಟ್ರೇಶನ್ ಎಂದು ಹೇಳಿಕೊಳ್ಳುವ ಜಾತಿಯವೆಲ್ಲ ಈ ತರದ ತನ್ನತನವನ್ನು ಕಡಿಮೆ ಮಾಡಿಕೊಂಡಿರುತ್ತವೆ. ಅಂಥವಕ್ಕೆ 'ಕಲಾವಲಯ'ದಲ್ಲಿ ಬೆಲೆಯಿಲ್ಲ. ವಸ್ತುವಿಷಯದಲ್ಲಿ ವ್ಯಾಪಕತೆಯಿದ್ದು, ಅಭಿವ್ಯಕ್ತಿಸುವ ರೀತಿಯಲ್ಲಿ ಇಂಡಿವಿಜುವಲ್‌ನೆಸ್ ಇದ್ದಷ್ಟು ಕಲೆಗೆ ಬೆಲೆ. ಅದು ಬಿಡಿ, ಅದೀಗ ಬೇಡ. ನಾವು ನೋಡಬೇಕಾದ್ದು ನಮ್ಮ ಎದುರಿರುವ ಕೃತಿಗೆ ಎಷ್ಟು ಸಮಯ ಕೊಡಬೇಕೆನ್ನುವುದು. ಆ ಕೃತಿಯು ನಮ್ಮ ಹಾನೆಸ್ಟಿ ಚೆಕ್ ಅಲ್ಲಿ ಪೀssಪೀss ಆಗದೆ ಹೊರಬಂದರೆ ಅದನ್ನೋದಲು/ನೋಡಲು ಇನ್ನೊಂದಷ್ಟು ಸಮಯ ಕೊಡಲು ಲಾಯಕ್ಕೆಂದರ್ಥ.


ಈ ಕೆಳಗಿನ ಚಿತ್ರಕ್ಕೆ ಬಂದರೆ, ಇದು ಪ್ಲಾಸ್ಟಿಕ್ ತರದ್ದಲ್ಲ. ಒಂದು ಬಯಲು, ಬದಿಯಲ್ಲೊಂದು ಕಪ್ಪು ಮರ, ಮರದಲ್ಲಿ ಪಿಂಕ್ ಹೂ, ಕೊಂಬೆಯಲೆರಡು ಹಕ್ಕಿ, ಹಿಂದುಗಡೆ ನೀಲಿ ಆಕಾಶ, ನೆಲದಲಿ ನಾಲ್ಕು ಹುಲ್ಲು ಎಂಬಂತೆ ಇದರಲ್ಲಿ ಎಲ್ಲವೂ ಡಿಫೈನ್ಡ್ ಡಿಫೈನ್ಡ್ ಆಗಿಲ್ಲ. ಎತ್ತೆತ್ತಗೋ ಗೀಚಿದ ಗೆರೆಗಳು, ಮರದ ಕಾಂಡ ಇದ್ದರೆ ಅದಕ್ಕೆ ಎಲೆಯಿಲ್ಲ, ಎಲೆಯಿದ್ದರೆ ಕಾಂಡ ಇಲ್ಲ, ಗೆರೆ ಇರುವುದೇ ಎಲ್ಲೋ, ಬಣ್ಣ ತುಂಬಿದ್ದೇ ಎಲ್ಲೋ, ಒಟ್ಟು ಏನೇನು ಎಲ್ಲಿಂದೆಲ್ಲಿಗೆ ಸೇರಿಕೊಳ್ಳುತ್ತಿದೆ ಎಂದೇ ಗೊತ್ತಾಗುವಂತಿಲ್ಲ. ಇಷ್ಟಿದ್ದಾಗ ಇದು ಚಂದ ಕಾಣಬೇಕೆಂದು ಮಾಡಿದ್ದಂತೂ ಅಲ್ಲ ಎಂಬುದು ಸ್ಪಷ್ಟ. ಮತ್ತೆ ಯಾಕೆ? ಯಾಕೆ ಈ ತೆರನಾದ ಗಜಿಬಿಜಿನೆಸ್ ಇದರಲ್ಲಿ?!


ಈ ಚಿತ್ರವನ್ನು ಮೊದಲೇ ನೀವು ನೋಡಿದ್ದರೆ, ಅದರಲ್ಲಿನ ಗಜಿಬಿಜಿನೆಸ್ ನಿಮ್ಮ ಅನುಭವಕ್ಕೆ ಬಂದಿದ್ದರೂ ಅದನ್ನು ನೀವು ಗುರುತಿಸಿರಲಿಕ್ಕಿಲ್ಲ. ಯಾಕೆಂದರೆ ನಮಗೆ ಆ ಕುರಿತು, ಅಂದರೆ ಒಂದು "ಸ್ಪೇಸ್" ಅನ್ನು ಓದಲಿಕ್ಕೆ ಎಲ್ಲಿಯೂ ಹೇಳಿಕೊಟ್ಟೇ ಇಲ್ಲ. ಪದ್ಯ, ಕತೆ, ಕವನ, ಪ್ರಬಂಧ, ಇತಿಹಾಸ, ರಾಜಕೀಯ ಎಲ್ಲವನ್ನೂ ಪಾಠ ಪುಸ್ತಕಗಳಲ್ಲಿ ಹನ್ನೆರಡು ವರ್ಷ ಎಲ್ಲರಿಗೂ ತುರುಕಿಸಿದ್ದಲ್ಲದೇ ಎಲ್ಲೂ ಒಂದೇ ಒಂದು, ಒಂದೇ ಒಂದು ಇಮೇಜ್ ಅನ್ನು ನೋಡುವ ಕುರಿತಿಲ್ಲ. ಬೇಲೂರು ಹಳೇಬೀಡು ಟ್ರಿಪ್ ಹೋದಾಗಲೂ ಅಲ್ಲೂ ಹೇಳುವುದು ಇತಿಹಾಸವೇ ಹೊರತು ಇಮೇಜ್ ರೀಡಿಂಗ್ ಅಲ್ಲ. ನಾವು ಇಲ್ಲಿ ಪ್ರಯತ್ನ ಪಡುತ್ತಿರುವುದು ಪ್ಯೂರ್‌ಲೀ ಇಮೇಜ್ ರೀಡಿಂಗ್ ಬಗ್ಗೆ. ಅದಕ್ಕೇ ಇದೊಂದು ತೋಟ ಎನ್ನುವುದನ್ನು ದಾಟಿ ನೋಡಬೇಕಿರುವುದು.


ಮೊದಲಿಗೆ ಕೃತಿಯ ಹೊರ ಸ್ವರೂಪ. ಇದೊಂದು 2D ಇಮೇಜ್‌. ಇದನ್ನು ದೇವಸ್ಥಾನಕ್ಕೆ ಸುತ್ತು ಹಾಕಿದ ಹಾಗೆ ಸುತ್ತಿ ಸುತ್ತಿ ನೋಡಲಿಕ್ಕೇನಿಲ್ಲ. ಎದುರಿನಿಂದ ಕಂಡಷ್ಟೇ. ನೋಡುತ್ತಿರುವುದು ಏನನ್ನು? ಒಂದಷ್ಟು ಜಾಗವನ್ನು. ಆಯತಾಕಾರದ ಒಂದು ಜಾಗ. ಆ ಜಾಗದಲ್ಲಿ ಒಂದಷ್ಟು ಗೆರೆ ಬಣ್ಣ ಆಕಾರಗಳೆಲ್ಲಾ ಇದೆ ಅಷ್ಟೆ. ಈಗ ಅಷ್ಟನ್ನು ಮಾತ್ರ ತೆಗೊಳ್ಳುವ. ಅದ್ರ ಹೊರಗಿದನ್ನೆಲ್ಲ ಬಿಡುವ.


ಪ್ರಶ್ನೆ: ಈ ಜಾಗದ ಎದುರು ಈಗ ನೀವಿದ್ರೆ ಯಾವ ಕಡೆಗೆ ಹೋಗ್ತೀರಾ?! ನೆನಪಿರ್ಲಿ. ಹೊರಗಿದೆಲ್ಲ ಮರ್ತಾಗಿದೆ. ಸೈಡಿಗೆ ನಿಮ್ಮಷ್ಟಕ್ಕೆ ನೀವು ಹೋಗ್ಲಿಕ್ಕೆ ಇಲ್ಲ. ಒಳಗೆಯೇ ಹೋಗ್ಬೇಕಷ್ಟೆ. ಆದ್ರೆ ಎಲ್ಲಿಗೆ ಹೋಗ್ತೀರಿ?!


(ಸ್ವಲ್ಪ ಚಿತ್ರ ನೋಡಿ ಬನ್ನಿ)



ಆಚೆ ಈಚೆ ಕಣ್ಣಾಡಿಸಿದ್ರಿ. ಎಂತ ಹೊಸ್ತು ಗೊತ್ತಾಗ್ಲಿಲ್ಲ ಅಲಾ..ಹಾ...ಈಗ ಬನ್ನಿ ಇಲ್ಲಿ ದಾರಿಗೆ. ಕರ್ಕೊಂಡು ಹೋಗ್ತೇನೆ.


ಸೀದ ಒಳಗೆ ಹೋಗ್ಲಿಕ್ಕೆ ನೋಡಿದ್ರೆ ಇಡೀ ಕ್ಯಾನ್ವಾಸ್ ಬ್ಲಾಕ್ ಆಗಿದೆ. ಮುಕ್ಕಾಲಕ್ಕಿಂತಲೂ ಹೆಚ್ಚು ಭಾಗವನ್ನು ಒಂದು ದೊಡ್ಡ ಅಡ್ಡಗೋಡೆ ಬ್ಲಾಕ್ ಮಾಡಿದೆ‌. ಅದು ದೊಡ್ಡ ಮರ ಇರ್ಲಿಕ್ಕೂ ಸಾಕು. ಫುಲ್ ಬ್ಲಾಕ್ ಮಾತ್ರ. (ಬದಿಯಲಿ ಕಾಣಿಸುವ ಎರಡು ಮರ ಮತ್ತದರ ಮಧ್ಯದ ಜಾಗ). ಆಚೆದು ಎಂತಾದ್ರೂ ಕಂಡ್ರೆ ಅಲಾ ಎತ್ಲಾಗಿ ಹೋಗುದು ಡಿಸೈಡ್ ಮಾಡುದು. ಬದಿಯಲ್ಲಿ ಉಳಿದ ಸಣ್ಣ breathing space ಅಲ್ಲಿ ಆಚೆದೆಂತದೂ ಗೊತ್ತಾಗ್ತಾ ಇಲ್ಲ. ತಲೆ ಕೂಡ ಪೂರ್ತಿ ಹೋಗ್ಲಿಕ್ಕಿಲ್ಲ ಅದ್ರಲ್ಲಿ. ಓರೆಕಣ್ಣಿಂದ ಬಾಗಿಲ ಸೆರೆಯಲ್ಲಿ ನೋಡಿದ ಹಾಗೆ ಆಚೆದನ್ನು ನೋಡ್ಬೋದಷ್ಟೆ. ಅಡ್ಡಗೋಡೆಯ ಹಿಂದಿನದ್ದೂ ಕಾಣ್ತಾ ಇಲ್ಲ. ಬದಿಯಲ್ಲೂ ಜಾಗ ಇಲ್ಲ. ಒಟ್ಟಿಗೆ ಕಚಪಿಚ ಕಸಕಸ, ಸಿಕ್ಕಾಪಟ್ಟೆ. ಕಾಲು ಹಾಕ್ಲಿಕ್ಕೆ ಜಾಗ ಇಲ್ಲದ ತರ!


ಇದೇ ರೀಡಿಂಗ್ ಅಂದ್ರೆ. ಒಟ್ಟು ಚಿತ್ರವನ್ನು ಅದರ ವಸ್ತುವಿಷಯ ಮರೆತು ನೋಡುವುದು. ಒಂದು ಜಾಗವು ಹೇಗೆಲ್ಲ ಡಿವೈಡ್ ಆಗಿದೆ ಎಂದು ಗುರುತಿಸುತ್ತಾ ಹೋಗುದು. ಇಲ್ಲೀಗ ಒಟ್ಟು ನೋಡಿದಾಗ ಇಮೇಜ್ ತುಂಬ ಕ್ಲಸ್ಟರ್ಡ್ ಆಗಿದೆ. Breathing space ಅಂದ್ರೆ ಸಬ್ಜೆಕ್ಟ್ ಅಲ್ಲದ ಒಂದಷ್ಟು ಖಾಲಿ ಖಾಲಿ ಜಾಗ ಇದರಲ್ಲಿ ಇಲ್ಲವೇ ಇಲ್ಲ. ಅದ್ರ ಪರಿಣಾಮ ಏನಾಗ್ತಿದೆ ಅಂದ್ರೆ ಇಮೇಜಲ್ಲಿ ಎಲ್ಲಿ ನೋಡ್ಬೇಕು ಅಂತನೇ ಗೊತ್ತಾಗ್ತಾ ಇಲ್ಲ. ಅಂದ್ರೆ ಚಿತ್ರವೇ ನಮ್ಮ ಕಣ್ಣನ್ನು ಗೈಡ್ ಮಾಡ್ತಾ ಇಲ್ಲ. ಫರ್ಸ್ಟ್ ಇಲ್ಲಿ ನೋಡು, ಮತ್ತಲ್ಲಿ ನೋಡು ಅನ್ನೋ ತರ. ಕಣ್ಣಿಗೆ ಹೊಡ್ದು ಕಾಣುವ ಬಣ್ಣಗಳಿಲ್ಲ. ಎಲ್ಲವೂ ಒಂಥರಾ ಮಸ್ಕು ಮಸ್ಕು.


ಕೆಲವರಿಗೆ ಮಧ್ಯದಲಿ ದೊಡ್ಡ ಹೊಂಡ ಬೇರೆ ಇದ್ದ ಹಾಗೆ ಕಾಣ್ಬೋದು. ಬಿದ್ರೆ ಅಂತ ಭಯ ಕೂಡ ಆಗ್ಬೋದು. ಒಬ್ಬನೇ, ಯಾರೂ ಜೊತೆಗೆ ಕಾಣ್ತಾನೂ ಇಲ್ಲ ಅನ್ಸ್ಬೋದು. ಆದ್ರೂ ಧೈರ್ಯ ಮಾಡಿ ಕಣ್ಣನ್ನು ಸ್ವಲ್ಪ ಮಧ್ಯಕೆ ತಂದ್ರೆ, ಆ ಮರವೋ/ಗೋಡೆಯೋ ಎಂತದೋ ಒಂದು ಅಡ್ಡ ಅನ್ಸಿದ್ದರ ಬುಡದವರೆಗೆ ಹೋಗಿ ನೋಡಿದ್ರೆ, ಅಲ್ಲಿ ಮಧ್ಯದಲ್ಲಿ ಆಚೆಗೆ ಹೋಗ್ಲಿಕ್ಕೆ ದಾರಿ ಇರುವಂತೆಯೂ ಕಾಣಬಹುದು.


ಹೀಗೆಯೇ ಸಮಯಕೊಟ್ಟು ನೋಡಿದ್ರೆ, ನಿಮಗೆ ಬೇರೆಯೇ ಏನೇನೋ ಅನಿಸ್ಲಿಕ್ಕೂ ಸಾಕು. ಮತ್ತದು ಓಕೆ ಕೂಡ. ಹಸಿರು ಸಮೃದ್ಧಿಯ ಸೂಚಕ, ಅದನ್ನು ಬಿಂಬಿಸುತ್ತದೆ, ಕಂದು ಇದನ್ನು ಎತ್ತಿ ಹಿಡಿಯುತ್ತದೆ ಎಂಬ ಸಿದ್ಧ ಮಾದರಿಯ ಕೆಟ್ಟ ರೀಡಿಂಗ್ ಇದಲ್ಲವೆಂಬುದನ್ನು ಗಮನಿಸಿದ್ರೆ ಸಾಕು. ಫುಲ್ ಇಕಲಾಜಿಕಲ್ ಕನ್ಸರ್ನ್ ಎಂದೋ, ಎನ್ವಿರಾನ್‌ಮೆಂಟ್‌ಗೆ ಗಿಡಗಳು ಸಹಕಾರಿ ಎಂಬುದಕ್ಕೆ ಹಿಡಿದ ಕನ್ನಡಿ ಇದೆಂದೆಲ್ಲ ಇಲ್ಲಸಲ್ಲದ್ದು ನಾ ಹೇಳುತ್ತಿಲ್ಲ. ಮುಖ್ಯವಾಗಿ ಇದರಲ್ಲೊಂದು ಅನ್-ಈಸೀನೆಸ್ ಅನ್ನು ಗುರುತಿಸಬಹುದು ಎಂಬಷ್ಟು ಸಿಂಪಲ್ಲಿದು.


ಇದು ಮೊದಲನೇ ಹಂತ ಅಷ್ಟೆ. ಇದರಲ್ಲಿ ದೇಶಕಾಲದ ಬಗ್ಗೆ ಆಗಲೀ, ರಿಲವನ್ಸಿ ಬಗ್ಗೆ ಆಗಲೀ, ವ್ಯಾಲ್ಯೂ ಕುರಿತಾಗಲೀ ನಾವು ಕೈ ಹಾಕಿಲ್ಲ. ಸಿಂಪಲ್ಲಾದ ಹಾನೆಸ್ಟಿ ಚೆಕ್ ಅಷ್ಟೆ. ಅದರಲ್ಲೇ ಮುಕ್ಕಾಲು ಪಾಲು ಕಲಾಕೃತಿಗಳೆನಿಸಿಕೊಂಡವು ಕಲೆಯಾಗುಳಿಯಲು ಲಾಯಕ್ಕಿಲ್ಲದವೆಂದು ಗುರುತಿಸಬಹುದು. ಆ ಕವಿತೆ ಪಕ್ಕ ಒಂದೇ ತರ ಕಾಣುವ, ಸುಮ್ಮನೇ ಆರ್ಮ್‌ರೆಸ್ಟ್ ಆಗಿ ಕೈಕಟ್ಟಿ ಕೂರುವ ಚಿತ್ರವನ್ನೆಲ್ಲ ನೋಡಿ ಬನ್ನಿ ಬೇಕಿದ್ದರೆ. ಯಾವ ರೀತಿ ಒಂದು ಜಾಗ ಅಲ್ಲಿ ಡಿವೈಡ್ ಆಗಿದೆ, ಮತ್ತದೇನು ಧ್ವನಿಸುತ್ತದೆ ಅಂತ! ಬರೀ ಚಿತ್ರ ಅಂತಲ್ಲ. ಫೊಟೋಗ್ರಾಫಿ, ಸಿನಿಮಾ, ನಾಟಕ ಎಲ್ಲದಕ್ಕೂ ಇದು ಅನ್ವಯ ಆಗ್ತಾ ಹೋಗ್ತದೆ. ಸ್ವಲ್ಪ ಬದಲಾವಣೆಯೊಂದಿಗೆ, ಕತೆ ಕವನ ಪ್ರಬಂಧ ಸಂಗೀತ ಇತ್ಯಾದಿಗಳಿಗೂ.


ಮೇಲಿನ ನಾಲ್ಕೈದು ಪ್ಯಾರಾಕ್ಕೂ, ಚಿತ್ರದ ತೋಟಕ್ಕೂ, ಅಲ್ಲಿರುವ ಗಿಡಕ್ಕೂ, ಅದ್ರ ವಿಷಯಕ್ಕೂ ಯಾವ ಸಂಬಂಧವೂ ಇಲ್ಲ. ಅಲ್ಲಿರುವುದು ಏನು ಹಾಗಾದ್ರೆ? ಸದ್ಯದ ನಮ್ಮ ಮನಸ್ಥಿತಿಯ ವಿವರಣೆ ಅಷ್ಟೆ. ಅದಾವದೂ ಬೇಕುಬೇಕೆಂದು ಮಾಡಿದ್ದಲ್ಲ. ಹಾಗೆ ಮಾಡಲು ಸಾಧ್ಯವೂ ಇಲ್ಲ. ಒಂದು ಚಿತ್ರ ರೆಡಿ ಆಯ್ತು ಎಂದು ನಿಲ್ಲಿಸಬೇಕಾದರೆ, ಆಗಿನ ಮನಸ್ಥಿತಿಗೆ ಅದು ಹೇಗೋ ಹೊಂದಿಂದಂತೆನಿಸಲೇಬೇಕು. ಆ ಕನೆಕ್ಷನ್ ಪಕ್ಕಾ ಆಗುವವರೆಗೂ ಅದನ್ನೇ ಆಚೆ ಈಚೆ ತಿದ್ದುತ್ತಾ ತೀಡುತ್ತಾ ಇರುತ್ತೇವೆಯೋ ಹೊರತು ನಿಲ್ಲಿಸಲಾಗುವುದಿಲ್ಲ.


ಈ ಪ್ರಕ್ರಿಯೆಯಲ್ಲಿ ನಮಗೆ ಗೊತ್ತಿಲ್ಲದೆ ದಾಟಿದ್ದನ್ನು, ಅಭಿವ್ಯಕ್ತಿಗೊಂಡ ಕೃತಿಗಳ ನೋಡಿ ಗುರುತಿಸಲಿಕ್ಕೆ ಸಾಧ್ಯ ಆದ್ರೆ ನೀವು ಕಲೆಯನ್ನು ಓದಬಲ್ಲಿರಿ ಎಂದರ್ಥ. ಇನ್ನೂ ಒಳ್ಳೆಯ ಕೃತಿ ಆಗ್ತಾ ಹೋದ ಹಾಗೆ, ಸದ್ಯದ ಸ್ಥಿತಿಯನ್ನು ವಿವರಿಸುವುದರ ಜೊತೆಗೆ, ಅದರಲ್ಲೇ ಮುಂದೆ ಇಡಬಹುದಾದ ಹೆಜ್ಜೆಯ ಗುರುತುಗಳೂ ಕಾಣಿಸುತ್ತವೆ. ಇಂದಿನ ಸಾಧ್ಯತೆಗಳು, ಹೊಳಹುಗಳು, ಪರಿಹಾರ ಸೂಚಿಗಳು ನಮ್ಮ ನಮ್ಮ ರೀಡಿಂಗ್ ಕೆಪಾಸಿಟಿಗೆ ತಕ್ಕಷ್ಟು ಕಾಣಸಿಗುತ್ತವೆ. ಅದಕ್ಕೇ ನಮ್ಮ ಮಹಾಭಾರತ ಎಲ್ಲ ಎಪಿಕ್ ಎನಿಸಿಕೊಂಡದ್ದು. ಈಗ ಭಗವದ್ಗೀತೆಯನ್ನೇ ತೆಗೆದುಕೊಂಡ್ರೂ ಮೇಲ್ನೋಟಕ್ಕೆ 'ಯುದ್ಧ ಮಾಡು ಮಾರಾಯ' ಎಂದು ಬಗೆಬಗೆಯಲ್ಲಿ ಕೃಷ್ಣ ಹೇಳಿದ್ದಷ್ಟೆ. ಆದ್ರೆ ಅದನ್ನು ದಾಟಿ ಸ್ವಲ್ಪ ಗುರುತಿಸಹೊರಟ್ರೆ ಅದು ಮುಟ್ಟದ ವಿಷಯ ಇಲ್ಲವೆಂದೂ ಅನಿಸುತ್ತದೆ. ಇಲ್ಲಿ ಯಾವುದೂ ವಾಚ್ಯ ಅಲ್ಲ. ಆದರೆ ಗುರುತಿಸಹೊರಟರೆ ಎಲ್ಲವೂ ಕಾಣುವ ಹಾಗೇ ಇರುತ್ತದೆ.


ನಾವೆತ್ತಿಕೊಂಡದ್ದು ಅಷ್ಟೆಲ್ಲ ಒಳ್ಳೆ ಕೃತಿಯಲ್ಲ. ಬರಿಯ ಒಂದು ವಿಶುವಲ್ ಇಮೇಜ್. ಯಾವ ಹೊಳಹೂ ಇದರಲ್ಲಿಲ್ಲ. ಇಟ್ಸ್ ಅ ರೆಪ್ರೆಸೆಂಟೇಶನ್ ಆಸ್ ವೆಲ್. ಆದರೂ ಜೀವನದ ಭಾಗವಾಗಿ ರೂಪುಗೊಂಡದ್ದು. ಸುಮ್ಮನೆ ಚಂದ ಕಾಣಲಿಕ್ಕಲ್ಲ. ಮುಂದಿನ ಹಂತಕ್ಕೆ ಹೋದ ಹಾಗೆ ಇದೂ ಮಕಾಡೆ ಮಲ್ಕೋತದೆ‌. ಅದು ಬೇರೆ ವಿಷ್ಯ. ಸದ್ಯಕ್ಕದು ಬೇಡ ಬಿಡಿ. ನನ್ನ ರೀಡಿಂಗ್ ಕೆಪಾಸಿಟಿಗೆ ಏನೂ ಅಲ್ಲದ ಇಮೇಜ್ ಒಂದರಲ್ಲಿ ಇಷ್ಟನ್ನು ಗುರುತಿಸಿ ವಿವರಿಸಲು ಸಾಧ್ಯವಾಯ್ತು ಅಷ್ಟೆ. ನಿಮಗನಿಸಿದ್ದನ್ನು ನೀವೇ ಹೇಳಬೇಕಷ್ಟೆ.


ದಿನಕ್ಕೆ ಸಾವಿರ ಇಮೇಜ್‌ಗಳನ್ನು ನೋಡುವ ಕಾಲದಲ್ಲಿ ನಾವಿದ್ದೇವೆ. ಮಾರ್ಕೆಟಿಂಗ್ ಹೆಸರಲ್ಲಿ ನಮ್ಮನ್ನು ಇದೇ ಇಮೇಜ್‌ಗಳ, ವಿಶುವಲ್ಸ್‌ಗಳ ಮೂಲಕ ಮತ್ತೆ ಮತ್ತೆ ನಂಬಿಸಿ ಮೋಸಮಾಡುತ್ತಲೇ ಇದ್ದಾರೆ. ಇನ್ನೂ ಹೇಗೆ ಮೋಸ ಮಾಡಬಹುದು ಎನ್ನುವುದನ್ನು ಕಂಡುಕೊಳ್ಳುವುದೇ ಇಂದಿಗೆ ಪ್ರಸಿದ್ಧ ಜಾಬ್ ಕೂಡ ಹೌದು. ಈಗ ಎಐ ಬೇರೆ ಇದೇ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ನಾವೊಬ್ಬರೇ ಅಲ್ಲ, ಎಲ್ಲರೂ ಮೋಸ ಹೋಗುತ್ತಿದ್ದಾರಲ್ಲಾ, ಹಾಗಾಗಿ ತೊಂದರೆ ಇಲ್ಲ ಎಂಬ ವಿಕೃತಿಗೆ ಮಾತ್ರ ಇಮೇಜ್ ರೀಡಿಂಗ್‌ನ ಅವಶ್ಯಕತೆ ಇನ್ನೂ ಕಾಣದಿದ್ದೀತು. ಒಬ್ಬನ ಮನಸ್ಥಿತಿಯನ್ನು ಒಂದು ಚಿತ್ರ ಪರಿಚಯಿಸಬಲ್ಲುದಾದರೆ, ಡಿಜಿಟಲ್ ಮೀಡಿಯಾಗಳಲ್ಲಿ ಮೋಸ ಹೋಗುವುದು ಎಷ್ಟೋ ಪಟ್ಟು ಕಡಿಮೆಯಾದೀತು ಎಂಬ ಕಾರಣಕ್ಕಾದರೂ ಉಳಿದವರು ಇಮೇಜ್ ರೀಡಿಂಗ್ ಅನ್ನು ಅಭ್ಯಾಸ ಮಾಡುವುದೊಳ್ಳೆದು. And...Art is the best place to start.

bottom of page