ಚಿನ್ ಟಪಕ್ ಡುಮ್ ಡುಮ್ - ಕಲೆಗೊಂದು ಭೂಮಿಕೆ ಸವಿಯಲು ಸಿದ್ಧ
- sushrutha d
- Dec 24, 2024
- 4 min read
Updated: Jan 21, 2025
ಕಲೆಗೊಂದು ಭೂಮಿಕೆ 25 : ಅಂತೂ ಇಂತೂ ಇಪ್ಪೈತ್ತೈದರ ತನಕ ಬಂದ್ವಿ. ಮೊದಲಿಗೆ ಕಲೆಗೊಂದು ಭೂಮಿಕೆ ಬರೆದದ್ದಕ್ಕೂ ಇವಾಗ ಬರೆಯೋದಕ್ಕೂ ಸುಮಾರೆಲ್ಲ ಬದಲಾದಂಗಿದೆ. ನೀರು ಹರಿದಂತೆ ಕಲ್ಲು ಸವಿದಂತೆ ಇನ್ನೊಬ್ಬ ಮಡಗ್ದಂಗೇನಲ್ಲ. ತುಂಬಾ ಕೇರ್‌ಫುಲ್ ಆಗಿ ಕೂತು ಯೋಚಿಸಿ ಮಾಡಿದ ಬದಲಾವಣೆಗಳೇ.
ಶುರುವಿನಲ್ಲಿ ನನಗಿದ್ದ ಮುಖ್ಯ ಉದ್ದೇಶ ಒಂದಷ್ಟು. ಬರಹಗಳಿಲ್ಲ ಕನ್ನಡದಲ್ಲಿ - ಈ ಕಾಲಕ್ಕೆ ತಕ್ಕ ಹಾಗೆ ಕಲೆಯನ್ನು, ಅದರ ಸಾಧ್ಯತೆಯನ್ನು ಕನ್ನಡದಲ್ಲಿ ಸೂಚಿಸಿದವರೂ ಇಲ್ಲ, ತಿಳಿದುಕೊಂಡವರು ನನ್ನ ಸುತ್ತಮುತ್ತಲಂತೂ ಇಲ್ಲ.
ಇರೋ ಚೂರುಪಾರರಲ್ಲಿ ಒಂದೋ ಅವರಿವರದ್ದು ಓದಿ ಕೇಳಿ ಟ್ರಾನ್ಸ್‌ಲೇಟ್ ಮಾಡಿದವು. ಅವರು ಹಾsssಗೆ ಹೇಳಿದ್ದಾರೆ ಮತ್ತು ಪಕ್ಕದಲ್ಲಿ ಆಶ್ಚರ್ಯಸೂಚಕ ಟೈಪ್ಸ್. ಯಾರೇನಾದ್ರೂ ಹೇಳ್ಕಂಡಿರ್ಲಿ ನಮ್ಗೇನು ಅನ್ನೋ ನಮ್ಮ ಜನರೇಶನ್ನಿಗೆ ಊಹೂಂ.
ಇದು ನಿಮಗೆ ಗೊತ್ತೇ ಮತ್ತು ಪಕ್ಕದಲ್ಲಿ ಪ್ರಶ್ನಾರ್ಥಕ ಟೈಪ್ಸ್. ಗೂಗಲ್ ಅಲ್ಲಿ ಇರೋ ತನಕ ನನಗೆ ಗೊತ್ತಿರಬೇಕಾದ ಅವಶ್ಯಕತೆನೇ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳದವು.
ಅದು ಕಲೆ, ಭಲೇ ಭಲೇ, ಇದು ಕಲೆ, ಭಲೇ ಭಲೇ ಟೈಪ್ಸ್. ಅಂದ್ರೆ ಫುಲ್ಲು ಕಾರ್ಪೋರೇಟ್ ಮ್ಯಾನರ್ಸ್‌ನವು! ಸುಳ್ ಸುಳ್ಳೇ. ಹ್ಞಾಂ. ಸುಳ್ಳು ಹೇಳುವುದೂ ಕಲೆ, ನಿದ್ದೆ ಮಾಡುವುದೂ ಕಲೆ, ಇಸ್ತ್ರಿ ಹಾಕುವುದೂ ಕಲೆ ಮತ್ತು ಪಕ್ಕದಲ್ಲಿ ಯಾವುದಾದ್ರೂ ಇಮೋಜಿ ಟೈಪ್ಸ್. ಒಂಥರಾ ಅಗ್ಗದ ಸದ್ಗುರು. ಇಸಿಂಟಿಟ್? ಹೆಲೋ??
ಹಾ ಹೆಲೋ. ಯಾರು??? <-- ಈ ಪ್ರಶ್ನಾರ್ಥಕಗಳನ್ನ ನೋಡಿದ್ರೆ ಅಲುಗಾಡ್ತಿರೋ ಭುಜ ನೆನಪಾಗ್ತಿಲ್ವಾ?? ಹೆಲೋ? ಕೇಳಿಸ್ತಿದ್ಯಾ?? ಹೆಲೋ???
ಸೀರಿಯಸ್ಸಾಗಿ...ಬರೆಯುವವರು ಯಾವ್ದಾರು ಕವಿ-ಸಾಹಿತಿಗಳೇ ಆಗಿರೋ ಕಾರಣ, ಅದೆಂಗಾರ ಕಷ್ಟಪಟ್ಟು, ಕಲೆಯನ್ನು ಬರೀ ಪುಚ್ಕ ಮಾಡಿ ಕವಿತೆ ಸಾಹಿತ್ಯವನ್ನು ಪುಡಾಂಗ್ ಮಾಡುವವೇ ಹೆಚ್ಚು. ಈಗಲೂ ಈ ಫೇಸುಬುಕ್ಕಲ್ಲಿ ಸಾಹಿತ್ಯದ ಬಗ್ಗೆಲ್ಲ ಉದ್ದುದ್ದ ಬರೆಯುವವರಿಗೆ ದೃಶ್ಯಮಾಧ್ಯಮವನ್ನು ಆಕ್ಸೆಪ್ಟ್ ಮಾಡಲಾಗದಿರುವುದು ಕಾಣಬಹುದು. ಗುಡ್ಡೆಗಟ್ಲೆ ಪುಸ್ತಕಗಳನ್ನು ಓದುವುದೊಂದೇ ದಾರಿ ಎಂಬಂತಹ ಭಾವ! ಅವರ ಟಾರ್ಗೆಟ್ ಆಡಿಯನ್ಸ್ ಹೇಗಿದ್ರೂ ಓದುಗರೆಂಬ ಕಾರಣಕ್ಕೆ ಸ್ವಲ್ಪ ಖುಷಿಪಡಿಸ್ಲಿಕ್ಕೆ ಹಾಗೆ ಹೇಳ್ತಾರೋ, ಅಥವಾ ನಿಜವಾಗ್ಲೂ ಅವ್ರ ತಿಳುವಳಿಕೆಗಿರೋ ವ್ಯಾಪ್ತಿ ಅಷ್ಟೋ ಗೊತ್ತಿಲ್ಲ ಮಾತ್ರ!
ಎದುರು ಸಿಕ್ಕಿದಾಗೆಲ್ಲ ಗೊತ್ತಿರುವ ಮೂರು ಪ್ರಶ್ನೆಯನ್ನೇ ಮತ್ತೆ ಮತ್ತೆ ಕೇಳುವವರ ಗೋಳಂತೂ ಬೇರೆಯೇ. ಎರಡು ಪದದಲ್ಲಿ, ಹೆಚ್ಚೆಂದರೆ ಒಂದೆರಡು ವಾಕ್ಯದಲ್ಲಿ ಉತ್ತರಿಸಬೇಕು ಬೇರೆ. ಹೇಗೆಂದು ಗೊತ್ತಾಗದೆ, ಆ ಕ್ಷಣದಲ್ಲಿ ಎಲ್ಲದಕ್ಕೂ ಹೌದೆನ್ನಲೂ ಆಗದೆ, ಅಲ್ಲವೆನ್ನಲೂ ಆಗದೆ, ಏನೋ ಹೇಳಿ ಮತ್ತದನ್ನ ಅರ್ಥ ಮಾಡಿಸಲೂ ಆಗದೆ...ಥೋ ಥೋ ಹಾರಿಬಲ್ ಸಿಚುವೇಶನ್ಸ್! ನಾಲಗೆ ಹೊರಳುತ್ತದೆ ಎಂದು ಸುಮ್ಮನೆ ಮಾತಾಡುವವರ ಮಧ್ಯ ನಿಜವಾಗ್ಲೂ ಆಸಕ್ತಿ ಇದ್ದವ್ರು ಇವ್ರುಗಳಲ್ಲಿ ಇದ್ದಿದ್ರೆ ಎಂಬ ಗಿಲ್ಟ್ ಬೇರೆ ಆಮೇಲೆ!
ಇನ್ನೂ ನಲವತ್ತು ವರ್ಷ ದಾಟಿಲ್ಲದ ನನ್ನ ಮಾತಿಗೆ ನಾಕುಕಾಸಿನ ಬೆಲೆಯೂ ಇರುವುದಿಲ್ಲವೆಂದು ಗೊತ್ತಿದ್ದೂ, ನನ್ನ ಕೈಲಾದಷ್ಟಾದರೂ ಇದನ್ನೆಲ್ಲ ಸುಧಾರಿಸುವ ಸಲುವಾಗಿ ಬರೆಯ ಹೊರಟದ್ದು ಈ ಕಲೆಗೊಂದು ಭೂಮಿಕೆ ಸರಣಿ. ಕನಿಷ್ಟಪಕ್ಷ ಆಸಕ್ತಿ ಇದ್ದು ಗೂಗಲಲ್ಲಿ ಹುಡುಕಿದವರಿಗಾದ್ರೂ ಕನ್ನಡದಲ್ಲಿ ಕಂಟೆಂಪರರಿ ಕಲೆಯ ಕುರಿತು ಆ ಕ್ಷಣದಲ್ಲಿ ಓದಿ ಮುಗಿಯದಷ್ಟು ಸಿಗುವಂತಾಗಬೇಕಿತ್ತು. ಅದದೇ ಹಳೇ ಉಸ್ಕುಡಂಗೇ ಸೀಮಿತಗೊಳಿಸದೇ ಗೊತ್ತಿರುವ ಹತ್ತು ಪದವನ್ನಿಟ್ಟುಕೊಂಡು ಬೋರು ಬರದಂಗೆ ಬರಿಬೇಕು. ಒಳಗಿಂದ ಬರೋ ಇಮೋಶನ್ನು ಪೀಲಿಂಗು ಅಂತೆಲ್ಲ ಜನರಿಕ್ ಮಾತುಗಳನ್ನಾಡದೇ ಹೇಳಬೇಕಾಗಿದ್ನ ಖಡಕ್ಕಾಗಿಯೇ ಹೇಳ್ಬೇಕು. ಕೃತಿಗೂ ಬರಹಕ್ಕೂ ತಾಳೆ ಆಗ್ಬೇಕು. ಹೇಳೋದನ್ನ ಪಾಲಿಸಬೇಕು. ಪಾಲಿಸಿದ್ನ ಹೇಳ್ಬೇಕು. ಅದು ಬರ್ದದ್ರಲ್ಲಿ ಕಾಣ್ಬೇಕು. ಸೆನ್ಸ್ ಆಗ್ಬೇಕು.
ಯಾರ ಕೃತಿಯನ್ನೂ ಬೊಟ್ಟುಮಾಡದೆ ಅಂಡರ್‌ಸ್ಟಾಡಿಂಗಲ್ಲಿರುವ ಸಮಸ್ಯೆಯನ್ನು ವಿವರಿಸುವುದೇ ಭಾರೀ ಟಾಸ್ಕ್. ಯಾರದ್ದೋ ಉದಾಹರಣೆ ತೆಗೊಂಡ್ರೆ ಸುಮ್ಮನೆ ರಗಳೆ. ಯಾರಿಗೂ ಬೇಡದ ವಿಷಯಕ್ಕೆ ಯಾರ್ಯಾರೊಟ್ಟಿಗೋ ಜಗಳ ಮಾಡ್ಕೊಂಡು ಕೂರ್ಬೇಕಾದೀತು. ಆದ್ರೆ ಸಮಸ್ಯೆ ಹೇಳದೆ ಪರಿಹಾರ ಎಂತದಕ್ಕೆ! ಒಟ್ಟೂ ಕಷ್ಟ.
ಕಲಾಕೃತಿಗಳೆಂದರೆ ಇನ್ನೂ ಬ್ರಶ್ ಸ್ಟ್ರೋಕು, ಕ್ಯಾನ್ವಾಸಿನ ವ್ಯಾಪ್ತಿ, ಬಣ್ಣಗಳ ಹೋಳಿ ಎಂಬಂತಹ ಒಂದಷ್ಟು ಕ್ಲೀಷೆ ರೂಪಕಕ್ಕೆ ತನ್ನ ಅರಿವನ್ನು ನಿಲ್ಲಿಸಿದವರಿಗೆ ನಾ ಕಲಾ ಇತಿಹಾಸದಿಂದಲೇ ಹೆಕ್ಕಿ ಕೊಡುತ್ತಿದ್ದ ಉದಾಹರಣೆಗಳನ್ನು ಕಲೆಯೆಂದು ಒಪ್ಪಿಕೊಳ್ಳುವುದೇ ಕಷ್ಟವಾಗಿದ್ದಿರಬಹುದು. ಪೆನ್ಸಿಲನ್ನು ಹೇಗೆ ಹಿಡಿಯಬೇಕು, ಚೂಪು ಮಾಡಬೇಕು ಎಂಬುದನ್ನು ಬರೆಯದೆ ಉದ್ದುದ್ದ ಬರೆದದ್ದು ಕಲೆಗೆ ಭೂಮಿಕೆ ಹೇಗಾಗುತ್ತದೆ ಎಂದನಿಸಿರಲೂ ಸಾಕು! ಅವಾಗವಾಗ ಅಲ್ಲಲ್ಲಿ ತುರುಕಿಸುತ್ತಿದ್ದ ಡಿಕನ್‌ಸ್ಟ್ರಕ್ಷನ್ನಿಗೂ, ರಾಜಕೀಯಕ್ಕೂ, ಸೈಕಾಲಜಿಗೂ, ಫಿಲಾಸಫಿಗೂ, ಮುಂತಾದ ಏನೇನೋ ವಿಚಿತ್ರ ಪದಗಳಿಗೂ ಈ ಕಂಟೆಂಪರರಿ ಕಲೆಗೂ ಏನು ಸಂಬಂಧ ಎಂದಾಗಿರಲೂ ಸಾಕು! ಕಲೆಯ ಬಗ್ಗೆ ಮಾತಾಡೋಕೆ ಹೊರಟೋನು ಅದೇ ಹ್ಯಾಶ್‌ಟ್ಯಾಗಿನಲ್ಲಿ ನಮ್ಮ ಸಂಗೀತ, ಸಾಹಿತ್ಯ, ಸಿನಿಮಾ ಬಗ್ಗೆಯೆಲ್ಲಾ ಮಾತಾಡೋದು ಯಾಕೆಂದು ಕೆಲವರಿಗೆ ಸಿಟ್ಟೂ ಬಂದಿರಬಹುದು.
ಇರಲಿ. ನಾ ಬರೆಯುವ ರೀತಿಯ ಬಗ್ಗೆ ಒಂದಷ್ಟು ಪ್ರಶ್ನೆಗಳು ಎದ್ದಿದ್ದಂತೂ ನನಗೆ ಗೊತ್ತು. ಬರಹದ ಆಶಯದಂತೆಯೇ ವ್ಯಕ್ತವಾದ ವಿಷಯವನ್ನು ದಾಟಿ, ನಾ ಬಳಸುತ್ತಿರುವ ಪದಗಳು, ಭಾಷೆಗಳು, ಶಬ್ದಗಳು, ವಾಕ್ಯದ ಶೈಲಿ ಮುಂತಾದ್ದರ ಬಗ್ಗೆ ಓದಿದ ಹತ್ತಿಪ್ಪತ್ತು ಜನರಲ್ಲಿ ಒಂದು ಕೈಬೆರಳೆಣಿಕೆಯಷ್ಟು ಜನರಾದ್ರು ಯೋಚಿಸಿದ್ದು ಸಂತೋಷವೆ. ನನ್ನ ಯೋಚನೆ, ವಾದ, ಕಾರಣಗಳನ್ನೆಲ್ಲ ಸ್ಥೂಲವಾಗಿ ಅಲ್ಲಲ್ಲಿ ಹೇಳಿದ್ದರೂ, ಎಲ್ಲ ಒಟ್ಟು ಸೇರುವುದು ಇಂದಿನ ಕಾಲದ ಅಭಿವ್ಯಕ್ತಿ ಎನ್ನುವಲ್ಲಿ, ಗುರುತಿಸುವಲ್ಲಿ, ರೂಪಿಸುವಲ್ಲಿ.
ಉದಾಹರಣೆಯ ಸಮಯ. ನಮ್ಮ ದೈನಂದಿನ ಬದುಕಿನಲ್ಲಿ ಈಗೀಗ ಹಾಸುಹೊಕ್ಕಾಗಿರುವ ಒಂದಷ್ಟು ಪದಗಳನ್ನು ನೋಡುವ. ಗೂಗಲ್, ಯೂಟ್ಯೂಬ್, ಅಡೋಬ್, ವಾಟ್ಸಾಪ್ ಮುಂತಾದವು. ಬೇಸಿಕಲಿ ಅರ್ಥವಿಲ್ಲದ ಪದಗಳು. ಆದರೆ ಬಳಕೆಯಲ್ಲಿದೆ. ಸಮಾಜವು ಕ್ಯಾಪಿಟಲಿಸ್ಟಿಕ್ ಆಗಿ, ಬ್ರಾಂಡಿಂಗ್ ಎಂಬುದೆಲ್ಲ ಶುರುವಾದಾಗ್ಲೇ ಈ ಅರ್ಥವಿಲ್ಲದ ಪದಗಳ ಬಳಕೆಯೂ ಜೊತೆಜೊತೆಗೇ ಹೆಚ್ಚಾಗಿದೆ. ಅದೊಂಥರಾ ಪಾರ್ಟ್ ಆಫ್ ಕಲ್ಚರ್ ಈಗ! ನಾವದನ್ನು ಗಮನಿಸಿದ್ದೇವಾ ಎಂಬುದು ಪ್ರಶ್ನೆ. ಎಷ್ಟು ಅನರ್ಥ ಹ್ಯಾಶ್‌ಟ್ಯಾಗ್‌ಗಳು ಪ್ರತಿದಿನ ಫಾರ್ಮ್ ಆಗ್ತಿದೆ! ಇಬ್ಬರು ಸೆಲೆಬ್ರಿಟಿಗಳ ಮದುವೆಗೆ ಹೆಸರು ಸೇರಿಸಿ ಹೊಸ ಪದವಾಗಿಸುವುದಂತೂ ಇಂದಿಗೆ ಮಾಮೂಲು. ಅಂದು ಅರ್ಥವಿಲ್ಲದ 'ಗೂಗಲ್' ಪದಕ್ಕೂ ಇಂದು ಅರ್ಥ ಇದೆ. ಹಾಗೇ 'ವಿರುಷ್ಕಾ'ಗೂ ಇದೆ. ಅಂದ್ರೆ, ಈ ದೇಶಕಾಲಕ್ಕೆ ಸಂಬಂಧ ಪಟ್ಟ ಹಾಗೆ ಇಲ್ಲೆಲ್ಲೋ ಒಂದು ಹೊಸತರದ ಅಭಿವ್ಯಕ್ತಿಯ ಸಾಧ್ಯತೆ ಇದೆ. ಅರ್ಥವಿಲ್ಲದ್ದರಲ್ಲಿ ಬೇಕಾದ ಅರ್ಥ ತುಂಬಿಸುವ ಸಾಧ್ಯತೆ. ಹೇಗೆ ನಮ್ಮ ಕೃತಿಗಳಲ್ಲಿ ಈ ಸಾಧ್ಯತೆಯನ್ನು ಬಳಸಿಕೊಳ್ಳಬಹುದು ಮತ್ತು ಪುಶ್ ಮಾಡಬಹುದು ಎಂಬ ಪ್ರಶ್ನೆ ನಮ್ಮ ಮುಂದಿದೆ.
ಇನ್ನೊಂದು ಎಲ್ಲರಕನ್ನಡ. ಏನೋ ಒಂಥರಾ ಅಸಂಬದ್ಧ ಪದಗಳೇ ಸೃಷ್ಟಿಯಾಗ್ತಿರೋದು ಅಲ್ಲೂ. ಅದು ಸರಿ-ತಪ್ಪು ಅಂತನೇ ಮತ್ತೆ ಮತ್ತೆ ವಾದ ಮಾಡೋ ಬದ್ಲು ಈ ಟೈಮ್ ಡಿಪೆಂಡೆಂಟ್ ಆರ್ಗ್ಯುಮೆಂಟಲ್ಲಿ ಹುಟ್ಟಿಕೊಳ್ತಿರೋ ಸಾಧ್ಯತೆಗಳನ್ನ ಗಮನಿಸಿ ಬಳಸಬಹುದಲ್ಲಾ! ಹೊಸ ಚಂದವನ್ನು ರೂಪಿಸಬಹುದಲ್ಲ! ಫೇಸುಬಕ್ಕಲ್ಲಿ ಕಮ್ಯುನಿಟಿ ಸ್ಟಾಂಡರ್ಡ್ ವಾರ್ನಿಂಗಿಂದ ಬಚಾವಾಗಲು ಕೆಲವು ಪದಗಳನ್ನು ಅದಲುಬದಲಾಗಿಸಿ ಬರೆಯುವುದೇ ಇಂದಿಗೆ ಸ್ಟಾಂಡರ್ಡ್ ಆಗಿದೆ. ಎಷ್ಟು ಸೃಜನಶೀಲ ಬರಹಗಳು ಈ ಕ್ವಾಲಿಟಿಗಳನ್ನು ತನ್ನಲ್ಲಿ ಬಳಸಿಕೊಂಡಿದೆ? ಎಷ್ಟು ಭಾಷಾ ಸಂಶೋಧನೆ ವಿಮರ್ಶೆಗಳಲ್ಲಿ ಇವುಗಳನ್ನು ಕನಿಷ್ಟಪಕ್ಷ ಗುರುತಿಸಲಾಗಿದೆ? ಅಂಬೇಡ್ಕರ್ ಸಾವರ್ಕರ್ ಬಂದ್ರೆ ಮಾತ್ರವಾ ಎಲ್ಲ ಪ್ರಕಾರಗಳೂ ಕರಕರಗುಡುವುದು?!
ಅಂತೂ ಕಾರ್ಪೋರೇಟ್ ಅವ್ರು ಹೊಸತರದ ಕತೆ ಬರಿತಿದ್ದಾರೆ ಅಂತೆಲ್ಲ ಹೇಳ್ತಾರಪ್ಪ. ಯಾವ ರೀತಿ ನೋಡಿದ್ರೆ ಬರೀ ಕತೆಯ ವಸ್ತುವಿಷಯದಲ್ಲಿ. ಅದೇ ಆಫೀಸಿಗೆ ಹೋಗಿದ್ದೆ. ಬಾಸ್ ಬೈದ್ರು. ಕಾರಲ್ಲಿ ಬರ್ತಿದ್ದೆ. ಕೊ-ವರ್ಕರ್. ಟ್ರಾಫಿಕ್ ಜಾಮ್! ಪೋಂ ಪೋಂ! ಇಡೀ ಭಾಷೆ ಮೇಲೇ ಡಿಪೆಂಡಾಗಿರೋ ಅಭಿವ್ಯಕ್ತಿ ಮಾಧ್ಯಮದಲ್ಲೂ ಭಾಷೆಯ ಸ್ವರೂಪವೇ ಬದಲಾಗ್ತಿರೋದು ಅಭಿವ್ಯಕ್ತಿ ಆದಂಗಿಲ್ಲ.
ಕಾರ್ಪೋರೇಟ್ ವರ್ಲ್ಡಿನ ಇಂಪ್ಯಾಕ್ಟ್ ನಾವು ಬಳಸುವ ಭಾಷೆಯ ಮೇಲೆ ಎಷ್ಟಾಗಿದೆ! ಅದಕ್ಕೆ ಅದರದ್ದೇ ಆದ ಒಂದು ತೆರನಾದ ಭಾಷೆ, ಸ್ಟಾಂಡರ್ಡ್ ಎಲ್ಲ. ಅಲ್ಲಿ ತಪ್ಪಿಗೆ 'ತಪ್ಪು' ಅನ್ನಂಗಿಲ್ಲ. ಅಲ್ಲಲ್ಲ, ಅನ್ನಂಗಿಲ್ಲದಿರಬಹುದು?! ಆ ರೇಂಜಿಗೆ ತಕ್ಕಂಗೆ ಹೇಗ್ ಹೇಳ್ಬೇಕೋ ಏನೋ! ಸಾಯ್ಲಿ. ಆ ರಸವಿಲ್ಲದ ಮೊನೋಟೋನಸ್ ಭಾಷೆಲಿ ಯಾರಾದ್ರೂ ಫುಲ್ಲು ಫಾರ್ಮಲ್ ಕತೆ ಬರ್ದಿದ್ದಾರಾ? ಡಿಯರ್ ರೀಡರ್ಸ್, ಅದನ್ನ ಇಂಟರೆಸ್ಟಿಂಗ್ ಮಾಡೋಕಾಗುತ್ತಾ ನೋಡಿದ್ದಾರಾ? ಬೆಸ್ಟ್ ರಿಗಾರ್ಡ್ಸ್, ಆ ನಿಟ್ಟಿನಲ್ಲಿ ಪ್ರಯತ್ನ ಆದ್ರೂ ಆಗಿದ್ಯಾ?! ಇಂತದ್ದೆಲ್ಲ, ಅಂದ್ರೆ ಈಗಾಗಲೇ ಲೈಫ್‌ಸ್ಟೈಲಿನ ಭಾಗವಾದ ಚಿಕ್ಕ ಚಿಕ್ಕ ಎಲಿಮೆಂಟ್‌ಗಳು ಒಂದೊಂದು ತೆರನಾದ ಸಾಧ್ಯತೆಗಳಾಗಿ ಯಾರಿಗೂ ಕಾಣುದಿಲ್ವಾ. ಆ ದೊಡ್ಡ ದೊಡ್ಡ ಸಮ್ಮೇಳನಗಳಲ್ಲೂ ಈ ಕುರಿತು ಒಂದು ಮಾತು ಆಡೋಕೆ ಬಂದಿಲ್ಲ ಒಬ್ಬಂಗೂ. ಈ ಜೆನ್ ಜಿ, ಜೆನ್ ಆಲ್ಫಾದವ್ರದ್ದೆಲ್ಲ ಭಾಷೆ ಪೂರ ಸಿಗ್ಮಾ ಆಗಿರುವಾಗ, ಅದೇ ಕಾಲದಲ್ಲಿ ಬದುಕ್ತಿರೋ ನಮ್ಮನ್ನ ಇಷ್ಟೂ ಇಂಪ್ಯಾಕ್ಟ್ ಮಾಡ್ತಿಲ್ಲ ಅಂತಂದ್ರೆ ಸಮಕಾಲೀನ ಕಂಟೆಂಪರರಿ ಅನ್ನೋದಕ್ಕೆಲ್ಲ ಏನರ್ಥ ಇದ್ದಂಗಾಯ್ತು!!?
ಪ್ರತಿದಿನ ಕೋಡಿಂಗ್ ಮಾಡುವವರಿಗೆ ಸಿ, ಜಾವಾ, ಪೈಥಾನ್ ಎಲ್ಲ ಒಂದೊಂದು ಭಾಷೆಯೇ ಎಂದು ಗೊತ್ತಿದ್ದೂ ಅದ್ರಲ್ಲಿ ಕತೆನೋ ಪ್ರಬಂಧನೋ ಬರಿಬೋದೇನೋ ಅಂತ ಯೋಚ್ನೆ ಬರಲ್ಲ ಅಂತಂದ್ರೆ! ಕಾರ್ಪೋರೇಟ್ ಕತೆ ಮಧ್ಯ ಫಾರ್ ಲೂಪ್ ಹಾಕಿ ಬೇಕಾದ ಸಿದ್ಧಾಂತ ತುರುಕಿಸಬಹುದಿತ್ತಪ್ಪ. ಇದ್ನೆಲ್ಲ ಮಾಡದೆ ಹೊಸತನ ಆಕಾಶದಿಂದ ಮಳೆಹನಿಯಾಗಿ ಇಬ್ಬನಿಯಾಗಿ ಹೂವರಳಿ ದುಂಬಿ ಬಂದು ಉದುರಿಸುತ್ತಾ!!?
ಒಬ್ಬ ಉದ್ದ ಕೂದ್ಲು ಬಿಟ್ಟ ರೌಡಿ ಹೀರೋಯಿನ್ ಕಿಡ್ನಾಪ್ ಮಾಡಿ ಚಯರಲ್ಲಿ ದೊಡ್ಕಣ್ಬಿಟ್ಟು ಕೂತ್ಕೊಂಡು ಕಾಯ್ತಿರ್ಬೇಕಿದ್ರೆ ಡಬಕ್ಕನೆ ಹಾರಿದ ಹೀರೋ ಘರ್ಜಿಸಿ ಡುಶುಂ ಡುಶುಂ ಫೈಟ್ ಮಾಡಿ ಬಿದ್ದು, ಗಾಳಿ ಬೀಸ್ದಾಗ ಎದ್ದು, ಕ್ಲೋಸಪ್ಪಲ್ಲಿ ಮಾಸ್ರಿಂಜ್ ಡೈಲಾಗ್ ಹೊಡ್ದು, ಒಂದೊಂದೆ ಬೆರಳು ಮಡ್ಸಿ ಮುಷ್ಟಿ ಕಟ್ಟಿ ಕೊಟ್ಟ ಪಂಚ್‌ಗೆ ಗೋಡೆ, ಗ್ಲಾಸ್, ಬಲ್ಬ್ ಎಲ್ಲಾ ಮುರ್ದು ರಕ್ತ ಹರ್ದು, ಹೀರೋಯಿನ್ ಹೀರೋ ಮದ್ವೆ ಆಗಿ ಹಳದಿ ಕಲರಲ್ಲಿ ಶುಭಂ ಪಿಚ್ಚರ್ ತರದ್ದು ಇವಾಗ ಇನ್ನೊಂದಿದ್ರೆ ಹೆಂಗಿರುತ್ತೆ! ಛೆ! ಫುಲ್ ಹೊಸತನ. ಆ್ಯಕಟ್ರ್ ಬೇರೆ, ಗೆಟಪ್ಪು ಬೇರೆ, ಕ್ಯಾಮೆರಾ ಹಿಡ್ದವ್ನೂ ಅಲ್ಗಾಡಿಸ್ದವ್ನು ಬೇರೆ. ಜೊತೆಗೆ ಮಧ್ಯಕ್ಕೊಂದ್ಸಲಿ ಅದೇ ಅವ್ರ್ದು ಪ್ರತಿಮೆ ತೋರ್ಸದು. ಪಟ ಮೂರ್ ಸಲಿ. ಕಂಪೆನಿಗೆ ಇನ್ನಿಬ್ರನ್ನ ಸೈಡ್‌ಸೈಡಲ್ಲಿ ನೇತಾಕೋದು. ಹೊಸತನ ಸಿಂಬಾಲಿಕ್ಕಾಗಿರ್ಲಿ ಅಂತ ಶುಭಂ ಯುನಿಕೋಡ್ ಫಾಂಟಲ್ಲಿ ಬರ್ಯೋದು! ಓಕೆನಾ? ಮತ್ತೆ ಉಳ್ದಿದ್ದೆಲ್ಲಾ ಯಾಕ್ ಓಕೆ!!?
ಹೀಗೇ.., ಫೀಲ್ಡಿನ ಹೊರಗಿರೋರಿಗೆ ಸ್ವಲ್ಪ ತಮಾಷೆಯಾಗಿ, ಒಳಗಿರೋರಿಗೆ ಸ್ವಲ್ಪ ಗಾಂಡ್ ಗಾಬ್ರಿ ಆಗೋ ಹಾಗೆ ಕಾಂಪ್ಯಾಕ್ಟಾಗಿ ಬರ್ದ ಸರಣಿ ಇದು. ಒಟ್ಟಿನಲ್ಲಿ ಈ ದೇಶಕಾಲದ ಜೊತೆಜೊತೆಗೇ ಕಲೆಯ ವ್ಯಾಖ್ಯೆ ಹೇಗೆ ಬದಲಾಗ್ತದೆ, ಗಮನಿಸುವ ಬಗೆ, ಮೊದಲು ಹೇಗಿತ್ತು, ಇಂದಿಗೆ ಯಾಕೆ ಮೊದಲಿದು ಸೂಕ್ತವಲ್ಲ, ಹಾಗಾದರೆ ಇಂದಿಗೆ ಸೂಕ್ತವಾಗುವಂತಹ ಕಲೆ ಯಾವುದು, ಏನು ಬದಲಾಗಬೇಕು, ಹೇಗೆ ಬದಲಾಗಬಹುದು ಮತ್ತು ಅದರಲ್ಲಿ ನಮ್ಮ ಪಾರ್ಟ್ ಏನು ಎಂಬುದಕ್ಕೆಲ್ಲ ಸಂಬಂಧಪಟ್ಟಂತೆ ಬರೆದವಿವು. ಕಲೆ ಕತೆ ಸಾಹಿತ್ಯ ಸಿನಿಮಾ ಮುಂತಾದ ಯಾವುದರೊಂದಿಗೂ ತಾರತಮ್ಯ ಮಾಡದೆ, ಎಲ್ಲ ನಿಂತ ನೀರನ್ನೂ ಸಮನಾಗಿ ದೂಷಿಸುತ್ತಾ, ಹೊಸ ಒರತೆಯ ಒಟ್ಟುಸೇರಿ ಹುಡುಕುವ ಆಶಯವನ್ನು ಹೊಂದಿದವು.
ಒಂದು ಕ್ಷಣದಲ್ಲಿ ಓದಿ ಮುಗಿಯದಷ್ಟನ್ನು, ಕೈಗೆಟಕುವ ದೂರದಲ್ಲಿರುವ ವಿಷಯಗಳ ಪುನರ್‌ಸುರಿಮಳೆ ಮಾಡದೆ ಮುಖ್ಯವೆಂದನಿಸಿದವನ್ನು ಇಷ್ಟಬಂದಂತೆ ಹೇಳುತ್ತಾ, ಹೇಳುವ ರೀತಿಯಲ್ಲಿ ನಾ ಏನು ಹೇಳಹೊರಟಿದ್ದೆಂದು ಸೂಚಿಸುತ್ತಾ ಬಂದಿದ್ದೇನೆ. ಭೂಮಿಕೆಯಾಗಿ ಇಷ್ಟು ಸಾಕು ಅನ್ಸುತ್ತೆ. ಸ್ವಲ್ಪ ಎಸ್ಸೀಓ ಗಿಸ್ಸೀಓ ಮಾಡಿ ಗೂಗಲಲ್ಲಿ ಮೇಲೆನೆ ಸೀಗೋ ಹಾಗೆ ಮಾಡೋದು ಬಾಕಿ ಇದೆ. ಪೂರ್ತಿ ಸರಣಿಯ ಬ್ಲಾಗ್ ಲಿಂಕ್ ಬೇಕಾದವರಿಗೆ ಕಮೆಂಟಲ್ಲಿದೆ.
ಬೈಬೈ.



