ಕಲೆಯಲ್ಲಿ ಅಡಗಿರುವ ವೈಯಕ್ತಿಕ ವ್ಯಾಕರಣ
- sushrutha d
- Jul 24, 2021
- 3 min read
Updated: Jun 9, 2025
ಕಲೆಗೊಂದು ಭೂಮಿಕೆ 11 : ದೃಶ್ಯಕಲೆಗೆ ವ್ಯಾಕರಣವಿಲ್ಲ ಎನ್ನುವುದು ಗಮನಾರ್ಹ. ಇತರ ಕಲಾಪ್ರಕಾರಗಳ ಕತೆ ಹಾಗಲ್ಲ. ಬರಹ ಮಾಧ್ಯಮದಲ್ಲಿ ಬಳಸುವ ಎಲ್ಲಾ ಭಾಷೆಗೂ ಒಂದೊಂದು ವ್ಯಾಕರಣ ಇದೆ. ಅಮೂರ್ತತೆಯನ್ನು ಶುದ್ಧರೂಪದಲ್ಲೇ ಉಳಿಸಿಕೊಂಡು ಬಂದ ಸಂಗೀತ ಸ್ವರಗಳಿಗೂ ರಾಗಗಳೆಂಬ ವ್ಯಾಕರಣವಿದೆ. ಆದರೆ, ಬಣ್ಣಕ್ಕಾಗಲಿ, ರೇಖೆಗಾಗಲಿ, ಆಕಾರಗಳಿಗಾಗಲಿ ಅಥವಾ ಇತರ ಯಾವುದೇ ಕಲಾ'ಸಾಧನ'ಗಳಿಗಾಗಲೀ, ಅವುಗಳ ಸಂಯೋಜನಾ ರೀತಿಗಾಗಲೀ ಸಿದ್ಧ ವ್ಯಾಕರಣವೆಂಬುದಿಲ್ಲ.
ಬೇಂದ್ರೆಯವರ ಕಾವ್ಯವೂ ಕೆ.ಎಸ್.ನರಸಿಂಹಸ್ವಾಮಿಯವರ ಕಾವ್ಯವೂ ಶೈಲಿಯಲ್ಲಿ ಬೇರೆಯಿದ್ದರೂ ವ್ಯಾಕರಣ ಅದುವೇ, ಓದುಗರಿಗೂ ತಿಳಿದಿರುವಂತಹದ್ದೇ. ಅಂತಿದ್ದರೂ ಅದು ಓದುಗರ ತಲುಪುವ ರೀತಿಯಲ್ಲಿ ಸಾಕಷ್ಟು ಗೋಜಲುಗಳಿವೆ. ದೃಶ್ಯಕಲೆಗೆ ಸಂಬಂಧಪಟ್ಟಂತೆ ಒಬ್ಬ ತನ್ನ ವ್ಯಾಕರಣವನ್ನು ತಾನೇ ಗುರುತಿಸುವುದರ ಜೊತೆಗೇ ಅದಕ್ಕೆ ತಕ್ಕಂತೆ ಶೈಲಿಯನ್ನೂ ವೃದ್ಧಿಸಿಕೊಳ್ಳಬೇಕು. ಅಂದರೆ, ಪ್ರತಿಯೊಬ್ಬ ಕಲಾವಿದರ ವ್ಯಾಕರಣವೂ ಬೇರೆ ಬೇರೆ ಮತ್ತು ನೋಡುಗರಿಗೆ ಅದರ ಸುಳಿವೂ ಇರುವುದಿಲ್ಲ. ಇಲ್ಲಿ ಶೈಲಿ ಮೇಲ್ನೋಟಕ್ಕೆ ಕಾಣಿಸುವಂತಹದ್ದು, ವ್ಯಾಕರಣವನ್ನು ನಾವು ಗಮನಿಸುವುದೇ ಇಲ್ಲ. ಹಾಗಿದ್ದಾಗ ಮಾಡುಗ ನೋಡುಗರ ನಡುವಿನ ವ್ಯವಹಾರ ಕುದುರುವುದು ಹೇಗೆ?
ಸಂಗೀತದಲ್ಲಿನ ರಾಗಗಳ ಪರಿಚಯವೇ ಇಲ್ಲದಿದ್ದರೂ ಸ್ವರಗಳ ಸಂಯೋಜನೆಗೆ ತಕ್ಕಂತೆ ತಲೆದೂಗುವ ನಮಗೆ ಇಲ್ಲೂ ಅಂತಹ ಸಾಧ್ಯತೆ ಇದೆ. ಆದರೆ, ದೇಶಬದ್ಧ ಕಲೆಗಳನ್ನು ಜಾಗಗಳ ಮೂಲಕ ಗುರುತಿಸಬೇಕು. ನಾವು ಸಾಮಾನ್ಯವಾಗಿ ನಮ್ಮ ಜೀವನವನ್ನು ಸಮಯಾಧಾರಿತವಾಗಿಯಷ್ಟೇ ನೋಡುವುದರಿಂದ ಅಲ್ಲಿ ಸ್ವಲ್ಪ ಹೆಚ್ಚಿನ ಪ್ರಯತ್ನ ಬೇಕಾಗಬಹುದು. ಅಲ್ಲದೆ ಒಬ್ಬರಿಗೆ ಬಣ್ಣ ಮುಖ್ಯವಾದರೆ, ಮತ್ತೊಬ್ಬರಿಗೆ ಸಂಯೋಜನೆ ಮುಖ್ಯವಾಗಬಹುದು. ಕಲೆಯನ್ನು ಹೀಗೇ ನೋಡಬೇಕೆನ್ನಲು ಸಾಧ್ಯವಿಲ್ಲ. ಒಂದು ಭಾಗವನ್ನಷ್ಟೇ ಅಲ್ಲದೆ, ಪೂರ್ಣವಾಗಿ ನೋಡಬೇಕೆನ್ನುವುದು ಮುಖ್ಯ. ಅದೂ ಭಾರತೀಯರಾದ ನಮಗೆ ಸ್ವಲ್ಪ ಕಷ್ಟವೇ.
ನಮ್ಮ ಕಾವ್ಯಮೀಮಾಂಸೆಗಳಲ್ಲೆಲ್ಲ ಕಂಡುಬರುವುದು ಬಿಡಿ ಬಿಡಿ ಮೀಮಾಂಸೆಯೇ ಹೊರತು ಪೂರ್ಣಕಾವ್ಯ ಮೀಮಾಂಸೆಯಲ್ಲ. ಕುಂತಕನ ವಕ್ರೋಕ್ತಿ ಸಿದ್ಧಾಂತವ ವಿವರಿಸಲು ಯಾವುದೋ ಪದ್ಯದ ತುಣುಕನ್ನಷ್ಟೇ ಬೇರ್ಪಡಿಸಿ ಉದಾಹರಿಸುವುದನ್ನು ಗಮನಿಸಬಹುದು. ನಾವು ಕೂಡ ಓದಿದ ಕವಿತೆಯ ಒಂದೆರಡು ಸಾಲು ಎಷ್ಟು ಚನ್ನವೆಂದು ಹೊಗಳುತ್ತೇವೆಯೇ ಹೊರತು ಒಂದು ಪದ್ಯ ಪೂರ್ಣವಾಗಿ ಏನು ಧ್ವನಿಸುತ್ತಿದೆ ಎಂದು ಗಮನಿಸ ಹೊರಡುವುದಿಲ್ಲ. ಅಂತಹ ಪರಿಪಾಠ ನಮ್ಮಲ್ಲಿ ಸ್ವಲ್ಪ ಕಡಿಮೆಯೇ ಎನ್ನಬಹುದು. ಸಂಗೀತವು ಶುದ್ಧ ಕಾಲಬದ್ಧ ಕಲೆಯಾದ ಕಾರಣ ಈ ಸಮಸ್ಯೆ ಅಲ್ಲಿಲ್ಲ. ಓದುವುದೂ ಕಾಲದ ಜೊತೆ ಸಾಗುವಂತಹ ಪ್ರಕ್ರಿಯೆ. ಆದರೆ, ಚಿತ್ರ ಶಿಲ್ಪ ಫೊಟೋ ಮುಂತಾದ ಸ್ತಬ್ಧ ದೃಶ್ಯಕಲೆಗಳು ಕಾಲದ ಹಂಗಿನಿಂದ ಕಳಚಿಕೊಂಡು ತನ್ನನ್ನು ತಾನು ಒಮ್ಮೆಗೇ ಹೊರಗೆಡವಿ ಕ್ಷಣಮಾತ್ರದಲ್ಲಿ ಬೆತ್ತಲಾಗಿ ನಿಲ್ಲುವ ಕಾರಣ, ಇವುಗಳನ್ನು ಪೂರ್ಣವಾಗಿ ನೋಡುವುದೇ ಒಳಿತು.
ಯಾವುದೇ ಕೃತಿಯಲ್ಲಿನ ಶಕ್ತಿ, ವಸ್ತು, ಸ್ವರೂಪ, ಗುರುತ್ವ ಮತ್ತು ಜಾಗಗಳ ಆಧಾರದಲ್ಲಿ ಅದು ಹೊಮ್ಮಿಸುವ ಧ್ವನಿಯನ್ನು ಕಾಣಲು ಶಕ್ತರಾಗುವುದೇ ಸಹೃದಯರ ಕೆಲಸ. ಅಂದರೆ, ಕಲೆಯ ವ್ಯಾಕರಣವಿರುವುದು ಈ ಮೂಲಭೂತ ಅಂಶಗಳಲ್ಲಿ, ಅವುಗಳ ಸಮ್ಮಿಶ್ರದಲ್ಲಿ. ಕಲಾವಿದನಿಗೆ ಇವುಗಳೆಲ್ಲ ತಿಳಿಯದೇ ಇದ್ದರೂ ಆತನ ಪ್ರತಿಯೊಂದು ಕೃತಿಗಳಲ್ಲಿ ಇವುಗಳ ಛಾಯೆಯಂತೂ ಇದ್ದೇ ಇರುತ್ತವೆ. ಎಷ್ಟು ಪ್ರಮಾಣದಲ್ಲಿವೆ, ಹೇಗೆ ಅವುಗಳು ವ್ಯಕ್ತವಾಗುತ್ತಿವೆ ಎನ್ನುವುದನ್ನು ಕಂಡುಕೊಳ್ಳುವುದೇ ದೊಡ್ಡ ಕೆಲಸ. ಕಂಡುಕೊಳ್ಳಬೇಕೆಂದು ತಿಳಿಯುವುದು ಮೊದಲ ಕೆಲಸ. ಮತ್ತೆ ಅದರ ಆಧಾರದಲ್ಲಿ ಪ್ರಜ್ಞಾಪೂರ್ವಕವಾಗಿ ಕೃತಿ ರಚನೆಯಾಗಬೇಕು. ಬಹು ಉದ್ದದ ಪ್ರಕ್ರಿಯೆ. ಸಮಯ ಹಿಡಿಯುವಂತದ್ದು.
ಎಲ್ಲರೂ ಹೀಗೆಲ್ಲ ಯೋಚಿಸಿ ಕೃತಿ ರಚಿಸುತ್ತಾರೆ ಎಂದೆಲ್ಲ ಹೇಳುವಂತಿಲ್ಲ. ಆದರೆ ಪೋಸ್ಟ್ ಮಾಡರ್ನಿಸಮ್ ಇನ್ನೇನು ಮುಗಿಯುತ್ತಾ ಬಂತು. ಈಗಾಗಲೇ ಮುಗಿದಿರಲೂ ಸಾಕು. ಅದು ಇನ್ನೊಂದು ಐವತ್ತು ವರ್ಷ ಕಳೆದ ಮೇಲೆ ತಿರುಗಿ ನೋಡಿದಾಗ ತಿಳಿಯಬಹುದಷ್ಟೆ. ಹೇಗಿದ್ದರೂ ನಾವೆಲ್ಲರೂ ಅದರ ಪ್ರಭಾವಕ್ಕೆ ತಿಳಿದೋ ತಿಳಿಯದೆಯೋ ಒಳಗಾದವರೇ. ಪ್ರತಿಯೊಂದರಲ್ಲೂ ನಮನಮಗೆ ದಕ್ಕಿದಷ್ಟು ಎನ್ನುವ ಸಿದ್ಧಾಂತದಿಂದ "ನನ್ನದು ಇದು" ಎನ್ನುವ ಸಿದ್ಧಾಂತದತ್ತ ಹೊರಳುತ್ತಿದ್ದೇವೆ. ಸಮಕಾಲೀನ ತತ್ವಶಾಸ್ತ್ರದಲ್ಲಿ, ಪ್ರತಿಯೊಬ್ಬರೂ ಒಂದೊಂದು ರಿಲಿಜಿಯನ್ ಎನ್ನುವ ಸದ್ಗುರುವಂತಹ ಪ್ರಚಲಿತ ವ್ಯಕ್ತಿಗಳ ಭಾಷಣದಲ್ಲಿ, ಮೋದಿಯ ಆತ್ಮನಿರ್ಭರತೆಯಲ್ಲಿ, ನಮ್ಮ ನಾಡು ಸೊಗಡು ಸಂಸ್ಕೃತಿ ಎಂಬಂತಹ ಎಲ್ಲಾ ಬೊಬ್ಬೆಯಲ್ಲೂ ಈ ಎಳೆಯನ್ನು ಗುರುತಿಸಬಹುದು. ಒಂದು ತೆರದಲ್ಲಿ ಲೋಕಲ್ ಪೋಸ್ಟ್ ಮಾಡರ್ನಿಸಮ್ ಅನ್ನಬಹುದು. "ನಿಮ್ಮೆಲ್ಲಾ ಆಸೆಗಳನ್ನು ಪೂರೈಸುವ ಶಕ್ತಿ ನಿಮ್ಮೊಳಗೆಯೇ ಇದೆ" ಎಂಬ ವಿವೇಕವಾಣಿಗೆ ಹತ್ತಿರಾಗುತ್ತಿದ್ದೇವೋ ಏನೋ! ಗೊತ್ತಿಲ್ಲ, ಪ್ರತಿಯೊಂದೂ ವೈಯಕ್ತಿಕವಾಗುತ್ತಿದೆ ಎನ್ನುವುದಂತೂ ಸ್ಪಷ್ಟ. ಕನಿಷ್ಟಪಕ್ಷ ಈ ಕಾಲಕ್ಕೆ ವೈಯಕ್ತಿಕ ವ್ಯಾಕರಣ ಕಂಡುಕೊಳ್ಳುವುದು ಬಹುಮುಖ್ಯ.
ಇದು ಬರಿಯ ದೃಶ್ಯಕಲೆಗೆ ಸೀಮಿತವೂ ಅಲ್ಲ. ರಾಗಗಳಿಂದ ಹೊರಬಂದ ಸಂಗೀತಗಳೂ ಈಗ ನಮ್ಮ ನಡುವೆ ಇವೆ. ಅದಲ್ಲದೆ, ಕಾಲಬದ್ಧ ದೇಶಬದ್ಧಗಳೆರಡೂ ಆದ ಸಿನಿಮಾ, ನಾಟಕಗಳೂ ಇವೆ. ಇಲ್ಲೆಲ್ಲವೂ ವೈಯಕ್ತಿಕ ವ್ಯಾಕರಣವನ್ನು ಕಂಡುಕೊಳ್ಳಬೇಕಾಗುತ್ತದೆ. ಅದೇ ಶಕ್ತಿ, ವಸ್ತು, ಗುರುತ್ವ, ಸ್ವರೂಪ, ಜಾಗದ ಜೊತೆಗೆ ಕಾಲವೊಂದು ಹೆಚ್ಚಿನ ಅಂಶವಾಗಿ ಸೇರ್ಪಡೆಯಾಗುತ್ತದೆ ಅಷ್ಟೆ. ಈ ವ್ಯಾಕರಣವನ್ನು ಆಯಾ ಕಲೆಯ ಸಾಧನಗಳಿಂದ ಪ್ರತ್ಯೇಕಿಸಿ ನೋಡುವುದು ಸಾಧ್ಯವಿಲ್ಲ. ರಾಗಗಳನ್ನು ಸ್ವರಗಳಿಂದ ಪ್ರತ್ಯೇಕಿಸಲಾಗುವುದಿಲ್ಲವಲ್ಲಾ! ಹಾಗೆಯೇ ಇಲ್ಲೂ. ಕಲೆಯ ವ್ಯಾಕರಣವನ್ನು ಗುರುತಿಸುವುದು ರೇಖೆ, ಆಕಾರ, ರೂಪ, ಬಣ್ಣ, ಟೆಕ್ಸ್ಚರ್ ಮುಂತಾದ ಸಾಧನಗಳ ಅಥವಾ ಶಬ್ದಗಳ ಮೂಲಕ. ಈ ಪ್ರತಿಯೊಂದು ಶಬ್ದಗಳೂ ಒಂದೊಂದು ಭಾಷೆಯಂತೆಯೇ ವರ್ತಿಸುತ್ತದೆನ್ನಬಹುದು. ಅಷ್ಟು ಸಾಧ್ಯತೆಗಳಿವೆ. ಇಂತಹ ಶಬ್ದಗಳನ್ನು ಅಥವಾ ಸಾಧನಗಳನ್ನು ಬಳಸಿಕೊಳ್ಳುವ ರೀತಿಯೇ ಶೈಲಿ. ಇವೆಲ್ಲವೂ ಒಂದಕ್ಕೊಂದು ಹೊಂದಿಕೊಂಡವೇ. ನೋಡುಗನು ಈ ಶೈಲಿಯ ಮುಖಾಂತರ ಒಬ್ಬರ ವ್ಯಾಕರಣವನ್ನು ಗಮನಿಸಬೇಕಾಗುತ್ತದೆ.
ನಾವು ಹೇಗೆ ನೋಡುತ್ತೇವೆ, ಏನನ್ನು ಗುರುತಿಸುತ್ತೇವೆ ಎನ್ನುವುದು ನಮ್ಮ ವ್ಯಾಕರಣ ಕಂಡುಕೊಳ್ಳುವಲ್ಲಿ ಅನುಕೂಲವಾಗುತ್ತದೆ. ಅಂದರೆ, ನಾವು ಗಮನಿಸುವ ರೀತಿಯಲ್ಲಿ ನಮ್ಮ ವ್ಯಾಕರಣ ರೂಪುಗೊಂಡು ಅದರ ಆಧಾರದಲ್ಲಿ ಕಲಾರಚನೆಗಳು ನಡೆಯುವಂತಾಗುತ್ತದೆ. ಹಾಗಾಗಿ ನಮ್ಮ ವ್ಯಕ್ತಿತ್ವವೇ ನಮ್ಮ ಕೃತಿಗಳಲ್ಲೂ ಕಾಣಸಿಗುತ್ತದೆ.
ಇದೆಲ್ಲ ಅರ್ಥವಾದಾಗ ಕೃತಿಯೊಳಗೆ ಯಾವ ವಿಷಯವಸ್ತುವೇ ಇರಲಿ, ಯಾವುದನ್ನು ಬೇಕಾದರೂ ಪ್ರತಿಬಿಂಬಿಸಲಿ ಅಥವಾ ಬಿಂಬಿಸದಿರಲಿ, ಅದರಿಂದಾಚೆಗಿನ ನೋಟದಲ್ಲಿ ಸೌಂದರ್ಯವಿದೆ ಎನ್ನುವ ಅರಿವಾಗುತ್ತದೆ. ಕಲೆಯನ್ನು ಕಲೆಯಾಗಿ ನೋಡಲು ವಿಷಯವಸ್ತುಗಳು ಮುಖ್ಯವಲ್ಲ. ಹಾಗೆಂದು ವಿಷಯವಸ್ತುಗಳು ಇರಬಾರದೆಂದೂ ಅಲ್ಲ. ಅವು ಕೃತಿಯ ಸ್ವರೂಪಕ್ಕೆ ತಕ್ಕಂತಿದ್ದಲ್ಲಿ ಆ ಕೃತಿಯ ಶಕ್ತಿಯನ್ನು ಹೆಚ್ಚಿಸಬಲ್ಲವು. ಆದರೆ ಒಂದು ಕೃತಿಯನ್ನು ಅಳೆಯಲು ಅದರ ವಿಷಯವಸ್ತುವೇ ಮಾನದಂಡ ಆಗಬಾರದು. ವಿಷಯವಸ್ತುವಿನ ಮೂಲಕವೇ ಅದನ್ನು ದಾಟಿ ನಾವು ಕಲೆಯನ್ನು ಅನುಭವಿಸಲು ಕಲಿಯಬೇಕು.
ಸುಲಭಕ್ಕೆ ಒಂದು ಉದಾಹರಣೆ. ಸಾಂಬಾರಿನಲ್ಲಿರುವ ತರಕಾರಿಗಳ ಹಾಗೆ ಈ ವಿಷಯವಸ್ತುಗಳು. ಅವುಗಳು ಇಲ್ಲದೇ ಹೋದರೆ ಸಾಂಬಾರು ಒಂಥರಾ ಖಾಲಿ ಖಾಲಿ. ಆದರೆ ಸಾಂಬಾರಿನ ರುಚಿಯಿರುವುದು ಉಪ್ಪು ಖಾರ ಹುಳಿಯ ಮೇಳದಲ್ಲಿ. ಅಲಸಂಡೆ ಇದ್ದ ಮಾತ್ರಕ್ಕೆ ಸಾಂಬಾರು ರುಚಿಸುತ್ತದೆ ಎಂದೇನಿಲ್ಲ. ಬದನೆ ಇದ್ದ ಮಾತ್ರಕ್ಕೆ ರುಚಿಸುವುದಿಲ್ಲವೆಂದೂ ಇಲ್ಲ. ಆದರೂ ಅವುಗಳೆಲ್ಲ ಇದ್ದರೇ ಸರಿ. ಇಲ್ಲಿ ಹೇಗೆ ತರಕಾರಿಗಳನ್ನು ತಿನ್ನುತ್ತಾನೇ ಅದನ್ನು ದಾಟಿ ಉಪ್ಪು ಹುಳಿಯನ್ನು ಗುರುತಿಸುತ್ತೇವೆಯೋ ಕೃತಿಗಳಲ್ಲೂ ವಿಷಯವಸ್ತುವಿನ ಮೂಲಕವೇ ಅದನ್ನು ದಾಟಿ ಕಲೆಯನ್ನು ಗುರುತಿಸಬೇಕು. ಆಗಷ್ಟೇ ಕಲೆಯನ್ನು ಕಲೆಯಾಗಿ ಅನುಭವಿಸಲು ಸಾಧ್ಯ.
ಎಲ್ಲೆಲ್ಲೋ ಹುಗ್ಗಿ ಕೂತ ವೈಯಕ್ತಿಕ ವ್ಯಾಕರಣವನ್ನು ಒಂದು ಕೃತಿಯಲ್ಲಿ ಗುರುತಿಸುವುದು ಬಹುಶಃ ಅಸಾಧ್ಯ. ಒಬ್ಬರದ್ದೇ ಹಲವಾರು ಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಅದಲ್ಲದೆ ಈ ವ್ಯಾಕರಣವು ಅವರ ವ್ಯಕ್ತಿತ್ವದ ಜೊತೆ ಕಾಲದಿಂದ ಕಾಲಕ್ಕೆ ನಿಧಾನವಾಗಿ ಪರಿಷ್ಕರಣೆಯಾಗಲೂಬಹುದು. ಅದನ್ನೆಲ್ಲ ಗಮನಿಸುವ ಕಷ್ಟ ಯಾರಿಗೆ ಬೇಕು ಎಂದು ವಿಮರ್ಶಕರು ಸುಲಭದಲ್ಲಿ ಸಿಗುವ ವಿಷಯವಸ್ತುವನ್ನು ಜಗ್ಗುತ್ತಾರೆ ಅಷ್ಟೆ. ಇದರಿಂದ ನೋಡುವ ವ್ಯವಧಾನ ಇಲ್ಲದ ನೋಡುಗರೂ ಅಷ್ಟಕ್ಕೇ ಸೀಮಿತರಾಗುತ್ತಾರೆ. ಆದರೆ, ನಿಜವಾಗಿ ಒಂದು ಕೃತಿಯನ್ನು ನೋಡಲು ಅವರ ಹಳೆಯ ಕೃತಿಗಳ, ಕೃತಿರಚನಾ ಪ್ರಕ್ರಿಯೆಯ ಪರಿಚಯವಿದ್ದಲ್ಲಿ ಸುಲಭವಾಗುತ್ತದೆ.
ಒಂದೇ ಕೃತಿಯನ್ನು ನೋಡಿ ಅನುಭವಿಸಲು ಸಾಧ್ಯವಿಲ್ಲವಾ ಕೇಳಿದರೆ ಸಾಧ್ಯವಿದೆ. ಆದರೆ, ಸಮಕಾಲೀನ ಸ್ಥಿತಿಯಲ್ಲಿ ಒಂದು ಕೃತಿಯನ್ನಷ್ಟೇ ಬೇರ್ಪಡಿಸಿ ನೋಡಿದಾಗ ಅದು ನೀರಸವೆನಿಸುವ ಸಾಧ್ಯತೆಯೇ ಹೆಚ್ಚು. ಉದಾಹರಣೆಗೆ, ಒಂದು ಗೆರೆ ಎರಡು ಚುಕ್ಕಿಯ ಸೇರಿಸುವುದರ ಜೊತೆಗೇ ಒಂದು ಜಾಗವ ಎರಡು ಭಾಗವಾಗಿಸುತ್ತಾನೂ ಇರುತ್ತದೆ. ಅದಷ್ಟೇ, ಅಂದರೆ ಒಂದು ಗೆರೆ ಮಾತ್ರವೇ ಒಂದು ಕೃತಿಯಾಗಬಲ್ಲದು. ಆದರೆ ಅದಕ್ಕೆ ಮಹತ್ವ ಬರುವುದು ಆತನ ಇತರ ಕೃತಿಗಳು ಅದೇ ಸಮಸ್ಯೆಯನ್ನು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ನೋಡಿದ್ದಲ್ಲಿ ಮಾತ್ರ. ಒಂದು ಕಾಲ್ಪನಿಕ ಗೆರೆ ಉಂಟುಮಾಡುವ ಗಡಿ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡರೆ ಪಾಲುಪಟ್ಟಿಯಿಂದ ಹಿಡಿದು ಭಾರತ ಪಾಕಿಸ್ತಾನದವರೆಗೂ ವಿಷಯ ಹಬ್ಬುತ್ತದೆ. ಪುರಾಣದ ಲಕ್ಷ್ಮಣರೇಖೆಯಿಂದ ನಾವೇ ಹಾಕಿಕೊಳ್ಳುವ ನೈತಿಕ ಗೆರೆಗಳ ತನಕವೂ ವಿಶ್ಲೇಷಣೆ ಮಾಡಬಹುದು. ಅಂದರೆ, ಕೃತಿಗಳೆಂಬುದು ಒಂದು ಸಮಸ್ಯೆಯ ಅಥವಾ ಭಾವನೆಯ/ಯೋಚನೆಯ ಕುರಿತಾದ ವಿಮರ್ಶೆ ಎನ್ನಬಹುದು. ಇದು ಭಾವನಾತ್ಮಕವೂ ಇದ್ದೀತು, ಯೋಚನಾತ್ಮಕವೂ ಇದ್ದೀತು. ಇಂತವೇನಾದರೂ ಆತನ ಇತರ ಕೃತಿಗಳಲ್ಲಿ ಇದ್ದರೆ, ಅದರ ತಿಳುವಳಿಕೆ ನೋಡುಗರಿಗೆ ಇದ್ದರೆ ಅದಕ್ಕೆ ಬೆಲೆ. ಇಲ್ಲದಿದ್ದರೆ ಅದು ಯಾರೂ ಹಾಕಬಹುದಾದ ಒಂದು ಗೆರೆ.
ಇಲ್ಲೆಲ್ಲ ನಾನು ಹೇಳುತ್ತಿರುವುದು ಕೃತಿಯು ಹೇಗೆ ಕಾಣುತ್ತಿದೆ ಎಂಬುದಷ್ಟೇ ಮುಖ್ಯವಲ್ಲ ಎಂದು. ಇತರ ಎಷ್ಟೆಷ್ಟೋ ಕಾರಣಗಳ ಮುಖಾಂತರ ಒಂದು ಕೃತಿಯ ಬೆಲೆ ಬದಲಾಗುತ್ತದೆ. ಒಂದು ಕೃತಿಯ ಹಿಂದೆ ಏನು ನಡೆದಿದೆ, ಮುಂದೆ ಎಂತಹ ಪ್ರಭಾವ ಬೀರಿದೆ/ಬೀರಬಹುದು ಮತ್ತು ಆ ದೇಶಕಾಲಕ್ಕೆ ಅದು ಹೇಗೆ ಹೊಂದಿಕೊಂಡಿದೆ, ಎಂತಹ ಅನುಭವವನ್ನು ಉಂಟುಮಾಡುತ್ತಿದೆ ಎಂಬಿಷ್ಟೂ ಅಂಶಗಳನ್ನು ಗಮನದಲ್ಲಿಟ್ಟು ಅದರ ಮಹತ್ವವನ್ನು ಅಳೆಯಬೇಕಾಗುತ್ತದೆ.




