top of page

ಜೀವನವೇ ಕಲಾರಂಗ : ಪರ್ಫಾರ್ಮೆನ್ಸ್ ಆರ್ಟ್ಸ್

  • Writer: sushrutha d
    sushrutha d
  • Jul 2, 2021
  • 3 min read

Updated: Jun 10, 2025

ಕಲೆಗೊಂದು ಭೂಮಿಕೆ 8 : ದುಷಂಪನು ತನ್ನ ಜೀವನದ ಕೊನೆಯ ಘಟ್ಟದಲ್ಲಿ ನಿಜವಾಗಿ ಕಲೆಯಿರುವುದು ಚೆಸ್‌ ಆಟದಲ್ಲಿ ಎಂದು ಚೆಸ್ ಆಡತೊಡಗುತ್ತಾನೆಂದರೆ ಆತನ ಗಂಭೀರತೆಯನ್ನು ಗಮನಿಸಿ. ಆ ಕಾಲದ ಉತ್ತಮ ಆಟಗಾರರಲ್ಲಿ ಆತನೂ ಒಬ್ಬ‌. ಅದು ಮುಖ್ಯವಲ್ಲ. ಗಮನಿಸಬೇಕಾದ್ದು, ಆತ ತನ್ನ ಜೀವನವನ್ನೇ ಕಲಾರಂಗವನ್ನಾಗಿ ಮಾಡಿಕೊಂಡದ್ದನ್ನು. ಜೀವನವೇ ಕೃತಿಯಾಗತೊಡಗಿದ್ದನ್ನು‌. ಹಿಂದಿನ ಅಭ್ಯಾಸಗಳಿಂದ ಕಳಚಿಕೊಂಡು ಚೆಸ್ ಆಡಹೊರಟದ್ದರಲ್ಲಿ ಆತನ ಜೀವನಶೈಲಿಯೂ ಕೃತಿಗಳೂ ಒಂದೇ ತೆರನಾಗಿರುವುದನ್ನು ಕಾಣಬಹುದು. ಹೀಗೆ ಬರುಬರುತ್ತಾ ಕೃತಿಗಿಂತ ಕಲೆಗಾರರೇ ಮುಖ್ಯವಾಗತೊಡಗಿದರು. ಅಂದರೆ ನೋಡುಗರಿಗೆ, ಒಂದು ಕೃತಿಗಿಂತ ಕಲೆಗಾರನ ಜೀವನ ಮುಖ್ಯವಾಗುತ್ತಾ ಹೋಯಿತು. ಈ ಕಾಲದ ನಂತರ ಹುಟ್ಟಿದ ನಾವುಗಳು ಸ್ವಭಾವತಃ, ಕಲೆಗಾರನ ವರ್ಚಸ್ಸಿನ ಮೇಲೆ ಕೃತಿಯನ್ನು ನೋಡುತ್ತೇವೆನ್ನುವುದನ್ನು ಗಮನಿಸಬಹುದು.

'ಸಾಕ್ಷಿ' ಎಂದು ಓದುವುದಕ್ಕಿಂತಲೂ 'ಭೈರಪ್ಪ' ಬರೆದದ್ದೆಂದು ಓದುವುದಲ್ಲವೇ? ನೋಲನ್ನನ ಸಿನೆಮಾ ಎಂದು ನೋಡುವುದಲ್ಲವೇ? ಎಷ್ಟೋ ಕವಿತೆಗಳ ಹೆಸರೂ ಗೊತ್ತಿರುವುದಿಲ್ಲ, ಕವಿಗಳಷ್ಟೆ. ನಮಗಿಂತ ಹಿಂದಿನ ಕಾಲದವರ ಕೃತಿಗಳನ್ನೂ ನಾವು ಅಭ್ಯಾಸ ಮಾಡುವುದು ಇದೇ ರೀತಿಯಲ್ಲಿ.

ಜಾಕ್ಸನ್ ಪೊಲಾಕ್‌ರ ಆ್ಯಕ್ಷನ್ ಪೇಯಿಂಟಿಂಗ್‌ನ ಪ್ರಭಾವದಿಂದ ಪರ್ಫಾರ್ಮೆನ್ಸ್ ಆರ್ಟ್ಸ್ ಶುರುವಾಯಿತು. ಇದು, ನಮ್ಮ ನಾಟಕ ರೂಪಕ ನೃತ್ಯಗಳಿಗಿಂತ ಭಿನ್ನವಾದುದು. Art is an experience ಎಂಬ ತತ್ವದ ಆಧಾರದಲ್ಲಿ ಬೆಳೆದವು. ಇಲ್ಲಿ ಕಲಾವಿದರು ತನ್ನನ್ನು ತಾನೇ ಕಲಾಕೃತಿಯನ್ನಾಗಿ ಬದಲಾಯಿಸಿಕೊಳ್ಳುತ್ತಾರೆನ್ನಬಹುದು. ನೋಡುಗರ ದೃಷ್ಟಿಗೆ ತನ್ನನ್ನು ನೇರವಾಗಿ ತೆರೆದಿಡುವ ಮುಖಾಂತರ ತಾನು ಕಲೆಯನ್ನು ಅನುಭವಿಸಬಹುದು ಎನ್ನುವುದಿದರ ತತ್ವ. ಬರೀ ಅಷ್ಟು ಮಾತ್ರವೆಂದಲ್ಲ. ಪ್ರತಿಯೊಂದು ಕೃತಿಗಳೂ ಒಂದು ಉದ್ದೇಶವನ್ನೋ, ತತ್ವವನ್ನೋ ಸಾರುತ್ತಿರುತ್ತದೆ ಕೂಡ.


Jackson Pollock's drip painting actions
Jackson Pollock's drip painting actions

ಮರಿನಾ ಅಬ್ರಾಮೋವಿಚ್ ಎಂಬಾಕೆ ಒಂದು ಕೋಣೆಯಲ್ಲಿ ಗುಲಾಬಿ ಹೂ, ರಿಬ್ಬನ್, ಚಾಕು, ಕತ್ತರಿ, ಬುಲೆಟ್ ಇರುವ ಗನ್ ಮುಂತಾದ ಒಂದಷ್ಟು ಸೌಮ್ಯವಾದ ಮತ್ತು ರೌದ್ರವಾದ ವಸ್ತುಗಳನ್ನಿಟ್ಟು, ತನ್ನನ್ನು ತಾನು ಅವುಗಳಿಗೆ ನೋಡುಗರ ಮುಖಾಂತರ ಒಡ್ಡಿಕೊಳ್ಳುತ್ತಾಳೆ. ಯಾರು ಬೇಕಾದರೂ ಈ ವಸ್ತುಗಳನ್ನು ಯಾವ ರೀತಿಯಾಗಿಯೂ ತನ್ನ ಮೇಲೆ ಪ್ರಯೋಗ ಮಾಡಬಹುದೆಂದೂ, ಅದೆಲ್ಲ ಕೃತ್ಯಗಳಿಗೆ ತಾನೇ ಜವಾಬ್ದಾರಿಯೆಂದೂ ಅಲ್ಲಿ ನೆರೆದವರಿಗೆ ಸಾರುತ್ತಾಳೆ.

ಮೊದಮೊದಲು ಸಂಕೋಚದಿಂದಲೇ ಹತ್ತಿರಬಂದ ಜನ ರಿಬ್ಬನ್ ಕಟ್ಟುವುದೋ ಮತ್ತೊಂದೋ ಮಾಡತೊಡಗುತ್ತಾರೆ. ಸಮಯ ಕಳೆದಂತೆ ಜನರ ಮೃಗೀಯ ಪ್ರವೃತ್ತಿ ಜಾಗೃತವಾಗುತ್ತದೆ. ಕತ್ತರಿಯಿಂದ ಆಕೆ ತೊಟ್ಟಿದ್ದ ಬಟ್ಟೆಗಳನ್ನು ಕತ್ತರಿಸಿ, ಕೂದಲು ಎಳೆಯತೊಡಗಿ, ಚಾಕು ಪ್ರಯೋಗಿಸತೊಡಗಿ, ಸಣ್ಣ ಪುಟ್ಟ ಗಾಯಗಳನ್ನೂ ಮಾಡಿ ಒಂದು ರೀತಿಯ ವಿಕೃತ ಆನಂದ ಪಡೆಯತೊಡುಗುತ್ತಾರೆ. ಆಕೆಯನ್ನು ಆಕೆಯೇ ಈ ಸ್ಥಿತಿಗೆ ಒಡ್ಡಿಕೊಂಡದ್ದೆಂದು ಗಮನಿಸಬೇಕು. ತನ್ನ ಹಣೆಗೆ ಗನ್ ಹಿಡಿದು ನಿಂತಾಗಿನ ಕ್ಷಣದಲ್ಲಿ ಆಕೆಗೆ ಏನನ್ನಿಸಿರಬಹುದು? ಸ್ತನವ ಕತ್ತರಿಸಲು ಚಾಕು ತೋರಿಸಿದ ಸಮಯದಲ್ಲಿ? ನಮಗೆ ಊಹಿಸಲೂ ಸಾಧ್ಯವಿಲ್ಲವೇನೋ. ಜನರಿಗೆ ಯಾವ ವಸ್ತುವನ್ನೂ ಬಳಸುವ ಅವಕಾಶವಿತ್ತು, ಬಳಸದೇ ಇರುವ ಅವಕಾಶವೂ ಇತ್ತು. ಆದರೆ, ಜನರು? ನಮ್ಮ ಮನಸ್ಥಿತಿ? ಯಾವ ರೀತಿಯಲ್ಲಿ ಕಲೆಯನ್ನು ಜನರು ಅನುಭವಿಸುತ್ತಾರೆಂಬುದರ ಪ್ರತ್ಯಕ್ಷ ನಿದರ್ಶನವೆನ್ನಬಹುದೇನೋ.


Rhythm 0, Marina Abramovic, 1974
Rhythm 0, Marina Abramovic, 1974

ಒಂದು ಮ್ಯೂಸಿಯಂನವರು ಜನರಿಗೆ ಅಲ್ಲಿರುವ ಕೃತಿಗಳನ್ನು ಏನು ಬೇಕಾದರೂ ಮಾಡಬಹುದೆಂದು ಬಿಟ್ಟರೆ, ಅದನ್ನು ಹಾಗೇ ಉಳಿಸಬೇಕೆನ್ನುವವರು ಎಷ್ಟು ಜನ ಇರಬಹುದು? ಚೆನ್ನಾಗಿ ನೋಡಿಕೊಳ್ಳಬೆಕೆನ್ನುವವರು? ಒಂದು ವಸ್ತುವಿನ ಮೇಲೆ ತನ್ನ ಹಕ್ಕು ಸ್ಥಾಪಿಸಿ ಕೃತಿಯನ್ನು ಹಾಳುಮಾಡಲು ಹಾತೊರೆಯುವ ಜನರೇ ಹೆಚ್ಚೇನೋ.

ತಾನು ಮದುವೆಯಾಗಿದ್ದ ಉಲಾಯ್ ಎಂಬ ಇನ್ನೊಬ್ಬ ಪರ್ಫಾರ್ಮೆನ್ಸ್ ಕಲೆಗಾರನೊಂದಿಗೆ ಡಿವೋರ್ಸ್ ನೀಡುವುದೆಂದು ನಿಶ್ಚಯವಾದಾಗ ಅವರು ಜೊತೆಸೇರಿ ಒಂದು ಕೃತಿರಚನೆಯಲ್ಲಿ ತೊಡುಗತ್ತಾರೆ. ಚೀನಾ ಮಹಾಗೋಡೆಯ ಒಂದೊಂದು ತುದಿಯಿಂದ ಒಬ್ಬೊಬ್ಬರು ನಡೆಯಲಾರಂಭಿಸಿ, ಮಧ್ಯದಲ್ಲೆಲ್ಲೋ ಮುಖಾಮುಖಿಯಾಗಿ, ಒಬ್ಬರನ್ನೊಬ್ಬರು ತಬ್ಬಿ, ತಮ್ಮ ತಮ್ಮ ಪ್ರತ್ಯೇಕ ದಾರಿ ಹಿಡಿಯುತ್ತಾರೆ.


The Lovers, Great Wall Walk, Marina and Ulay, 1988
The Lovers, Great Wall Walk, Marina and Ulay, 1988

ಫ್ರಾನ್ಸಿಸ್ ಅಲಿಸ್ ಎಂಬಾತ ದೊಡ್ಡದೊಂದು ಮಂಜುಗಡ್ಡೆಯನ್ನು ದಾರಿಯಲ್ಲಿ ತಳ್ಳುತ್ತಾ ಹೋಗುತ್ತಾನೆ. ಮೊದಮೊದಲು ಕಷ್ಟಪಟ್ಟು ತಳ್ಳಬೇಕಿದ್ದ ಮಂಜುಗಡ್ಡೆ, ಕರಗಿದಂತೆ, ತನ್ನ ಬಾಲವನ್ನು ದಾರಿಯುದ್ದಕ್ಕೂ ಬಿಡುತ್ತಾ ಬಂದಂತೆ ತಳ್ಳುವುದು ಸುಲಭವಾಗುತ್ತದೆ. ಮಂಜುಗಡ್ಡೆ ಕರಗಿ ಸಣ್ಣದಾದಾಗ ತಳ್ಳಲಾಗದೆ, ಕಾಲಲ್ಲಿ ಒದೆಯುತ್ತಾ, ಫುಟ್‌ಬಾಲ್‌ನಂತೆ ಆಟವಾಡುತ್ತಾ ಪೂರ್ತಿ ಕರಗುವವರೆಗೂ ಸಾಗುತ್ತಾನೆ.


Paradox of Praxis 1, Francis Alys, 1997
Paradox of Praxis 1, Francis Alys, 1997

ಟೆಚಿಂಗ್ ಹ್ಸೇ ಎಂಬಾತ ತಾನು ಹದಿಮೂರು ವರ್ಷವನ್ನು ಕಲಾರಚನೆಗೆ ಮೀಸಲಿಡುವುದೆಂದೂ, ಆ ಸಮಯದಲ್ಲಿ ಐದು ಒಂದೊಂದು ವರ್ಷದ ಕೃತಿಗಳಲ್ಲಿ ತೊಡಗಿಕೊಳ್ಳುತ್ತಾನೆ. ಕ್ರಮವಾಗಿ ನೆನಪಿಲ್ಲದಿದ್ದರೂ ಒಂದು ವರ್ಷ ಪೂರ್ತಿ ಸೂರು ಇಲ್ಲದಲ್ಲಿ ಬದುಕುತ್ತಾನೆ‌. ಯಾವುದೇ ಕಟ್ಟಡಗಳಿಗಾಗಲೀ ವಾಹನಗಳಿಗಾಗಲೀ ಟೆಂಟ್‌ಗಳಿಗಾಗಲೀ ಆತ ಕಾಲಿಡುವುದಿಲ್ಲ.

ಇನ್ನೊಮ್ಮೆ, ವರ್ಷಪೂರ್ತಿ ಪ್ರತಿ ಗಂಟೆಗೊಮ್ಮೆ ಬೆಲ್ ಬಡಿದು, ಗಡಿಯಾರದ ಜೊತೆ ಫೋಟೋ ತೆಗೆದುಕೊಳ್ಳುತ್ತಾನೆ. ಅಂದರೆ, ನಿದ್ದೆಯೇ ಇಲ್ಲವೆನ್ನಬಹುದು. ಶುರುವಿನಲ್ಲಿ ತಲೆಯ ಬೋಳಿಸಿ, ಕಾಲದ ಹರಿವನ್ನು ಸೂಚಿಸಲು ತಲೆಗೂದಲನ್ನು ಬೆಳೆಸುತ್ತಾನೆ.

ಇನ್ನೊಂದು ವರ್ಷದಲ್ಲಿ, ಒಂದು ಲೈಟ್, ವಾಶ್ ಬೇಸಿನ್, ಬೆಡ್ ಇರುವ ಅತೀ ಸಣ್ಣಕೋಣೆಯಲ್ಲಿ ಬಂಧಿಯಾಗಿಸಿಕೊಂಡು ಏನನ್ನೂ ಓದದೆ, ಬರೆಯದೆ, ಯಾರೊಂದಿಗೂ ಮಾತಾಡದೆ ಕಾಲ ಕಳೆಯುತ್ತಾನೆ.

ಮತ್ತೊಂದು ಕೃತಿಯಲ್ಲಿ, ಇನ್ನೊಬ್ಬಳೊಂದಿಗೆ ಎಂಟು ಅಡಿಯ ಅಂತರವಿರುವಂತೆ ಹಗ್ಗವನ್ನು ಸೊಂಟಕ್ಕೆ ಬಿಗಿದು ಒಂದು ವರ್ಷ ಜೊತೆಯಾಗಿಯೇ ಕಾಲ ಕಳೆಯುತ್ತಾರೆ. ಒಟ್ಟಿಗೇ ಇದ್ದರೂ, ಒಬ್ಬರನ್ನೊಬ್ಬರು ಸ್ಪರ್ಶಿಸುವಂತಿಲ್ಲ!

ಇನ್ನೊಮ್ಮೆ, ಕಲೆಯಿಂದ ತನ್ನನ್ನು ತಾನು ಸಾಧ್ಯವಿದ್ದಷ್ಟೂ ಬೇರ್ಪಡಿಸಿಕೊಳ್ಳುವ ಸಲುವಾಗಿ, ಯಾವ ಕೃತಿಯನ್ನೂ ರಚಿಸದೆ, ಕಲೆಯ ಕುರಿತು ಮಾತಾಡದೆ, ಓದದೆ, ಕಲೆಗೆ ಸಂಬಂಧಪಟ್ಟುದಾವುದನ್ನೂ ನೋಡದೆ ಒಂದು ವರ್ಷ ಕಳೆಯುತ್ತಾನೆ.

ಇದನ್ನೆಲ್ಲ ಒಂದರ ನಂತರ ಸರಾಗವಾಗಿ ಮಾಡಿದ್ದೆಂದಲ್ಲ. ಹದಿಮೂರು ವರ್ಷದಲ್ಲಿ ಒಟ್ಟು ಐದು ಕೃತಿಗಳು. ಈ ಹದಿಮೂರು ವರ್ಷಗಳ ಕೊನೆಗೆ "ತನ್ನನ್ನು ತಾನು ಬದುಕಿಸಿಕೊಂಡಿದ್ದೇನೆ" ಎಂಬ ಹೇಳಿಕೆ ನೀಡುತ್ತಾನೆ. ಅಲ್ಲಿಗೆ ಕಲಾರಚನೆಗೆ ವಿದಾಯ. ಯಾಕೆಂದು ಕೇಳಿದರೆ ಆತ, ಜೀವನವಿರಲಿ ಕಲೆಯಿರಲಿ ಅದು "doing time" ಎಂದೂ ತಾನೀಗ ಜೀವನವನ್ನು ಮಾಡುತ್ತಿರುವುದಾಗಿಯೂ ಹೇಳುತ್ತಾನೆ.


One year performance with Time clock, Tehching Hseigh, 1980-81
One year performance with Time clock, Tehching Hseigh, 1980-81

ಇನ್ನೂ ಸಾಕಷ್ಟು ರೋಚಕ ಉದಾಹರಣೆಗಳನ್ನು ಕೊಡಬಹುದು. ಹುಚ್ಚಿನ ಪರಮಾವಧಿಯಾಗಿ ಮೇಲ್ನೋಟಕ್ಕೆ ಕಂಡರೂ, ಸುಮ್ಮಸುಮ್ಮನೇ ಯಾರು ಈತರಹದ ಪ್ರಸಂಗಗಳಿಗೆ ಒಡ್ಡಿಕೊಳ್ಳುತ್ತಾರೆ? ಏನೋ ಹೇಳಬೇಕೆನ್ನುವ ತುಡಿತವಿರಲೇ ಬೇಕಲ್ಲವೇ? ಮಾಧ್ಯಮವಾಗಿ ಅವರವರ ದೇಹಗಳನ್ನು ಬಳಸಿಕೊಂಡರಷ್ಟೆ. ಒಂದು ಕೃತಿಯನ್ನಷ್ಟೆ ಪ್ರತ್ಯೇಕಿಸಿ ನೋಡಿದಾಗ, ಹುಚ್ಚೆಂದು ಅನ್ನಿಸೀತು. ಇತರ ಕೃತಿಗಳನ್ನೂ ಗಮನಿಸುವಾಗ ಗಂಭೀರವಾಗಿಯೇ ಏನನ್ನೋ ಮಾಡುತ್ತಿರುವುದು ತಿಳಿಯುವುದಿಲ್ಲವೇ? ಹುಚ್ಚು ಅವರದ್ದಲ್ಲ, ನಮ್ಮ ಪೂರ್ವಾಗ್ರಹ ಪೀಡಿತ ಮನಸ್ಥಿತಿಯದ್ದೆಂದು ಗೋಚರವಾಗುವುದಿಲ್ಲವೇ!

ಇಲ್ಲೆಲ್ಲ ಜೀವನ ಮತ್ತು ಕಲೆಯ ನಡುವಿನ ಗೆರೆ ಅಳಿಸಿಹೋದಂತೆ ಭಾಸವಾಗುತ್ತದೆ. ಇಡೀ ಜೀವನವೇ ಒಂದು ದೊಡ್ಡ ಕಲೆಯಾಗಿ, ಉಳಿದ ಕೃತಿಗಳೆಲ್ಲ ಅದಕ್ಕೆ ಪೂರಕವಾಗಿ ರಚನೆಯಾಗುತ್ತದೆ ಎನ್ನಬಹುದು. ಒಂದೊಂದು ಕೃತಿಯೂ ಏನನ್ನೋ ಧ್ವನಿಸುತ್ತಿದ್ದರೂ ಅದು ಇನ್ನೊಂದರ, ಮುಂಬರಲಿರುವ ಕೃತಿಗಳ ಭಾಗವಾಗಿರುವ ಸಾಧ್ಯತೆ ಹೆಚ್ಚು. ಹಾಗಾಗಿಯೇ, ಈಗ ಕೃತಿಗಳನ್ನು ಜೀವನ ಸಮಗ್ರವಾಗಿ ನೋಡಬೇಕೆನ್ನುವುದು.

ಈ ಕೃತಿಗಳು ಯಾವುದೋ ಒಂದು ರೂಪದಲ್ಲಿ ನಮ್ಮನ್ನು ಕಾಡತೊಡಗಿದರಷ್ಟೇ ಅಲ್ಲಿನ ಸಾಧ್ಯತೆಗಳು ಅರ್ಥವಾದೀತು. ಧ್ವನಿಸುತ್ತಿರುವುದು ಏನೆಂದು ತಿಳಿದೀತು. ಆ ಮೂಲಕ ರಸಾನುಭಾವಕ್ಕೂ ದಾರಿಯಾದೀತು. ಅಕಸ್ಮಾತ್, ಏನೊಂದೂ ಅರ್ಥ ಧ್ವನಿಸಲಿಲ್ಲ ಎಂದಿಟ್ಟುಕೊಳ್ಳೋಣ‌. ಅಲ್ಲೂ ಅವಕಾಶಗಳಿವೆ, ಗಮನಿಸುವ ಕಣ್ಣಿದ್ದರೆ. ಉದಾಹರಣೆಗೆ, ಇಬ್ಬರು ಸೇರಿಕೊಂಡು ಚೀನಾದ ಗೋಡೆಯಲ್ಲಿ ನಡೆದುದನ್ನು ಒಂದು ಕಥಾರಚನೆಯಲ್ಲಿ ಬಳಸಲು ಸಾಧ್ಯವಿಲ್ಲವೇ! ಒಬ್ಬರು ಮುಂದಿನಿಂದ, ಇನ್ನೊಬ್ಬರು ಹಿಂದಿನಿಂದ ಬರೆಯತೊಡಗಿ ಮಧ್ಯದಲ್ಲೆಲ್ಲೋ ಸಂಧಿಸಿದಾಗ ಕಥೆ ಹೇಗಿರಬಹುದು? ಬರೆದವರಿಗೂ ಪರಸ್ಪರರ ರಚನೆಯ ಕುರಿತು ಕುತೂಹಲ‌. ಇಬ್ಬರೂ ಭಿನ್ನ ದೋರಣೆಯವರಿದ್ದರೆ? ಒಂದೇ ಧೋರಣೆಯವರಿದ್ದು ಭಿನ್ನ ಶೈಲಿಯವರಾದರೆ? ಅಪರಿಚಿತರಾಗಿದ್ದರೆ? ಅಸಂಖ್ಯಾತ ಸಾಧ್ಯತೆಗಳಿವೆ ತಮ್ಮ ತಮ್ಮ ಕಾರ್ಯಕ್ಷೇತ್ರಕ್ಕೆ ಅಳವಡಿಸಿಕೊಳ್ಳಲು, ವಿಜ್ಞಾನದಿಂದ ಹಿಡಿದು ಕಲೆಯ ತನಕವೂ, ಮುಕ್ತ ಮನಸ್ಸಿನಿಂದ ಕಾಣುವ ಪರಿಪಾಠ ಬೆಳೆಯಿಸಿಕೊಳ್ಳಬೇಕು ಅಷ್ಟೆ. ನಮ್ಮ ನಮ್ಮ ಮಿತಿಗನುಗುಣವಾಗಿಯೇ ನಾವು ಪ್ರಯತ್ನಿಸುತ್ತಿದ್ದರೂ, ಮುಂದೊಂದು ದಿನ ಯಾರಿಗೋ ಅದೇ ಸಾಧ್ಯತೆಯಾಗಿ ಕಂಡೀತು.

bottom of page