ಎಲ್ಲಿದೆ ಸಮಾನತೆ!!
- sushrutha d
- Nov 14, 2019
- 1 min read
Updated: Sep 22, 2024
ಅವಳು ತನ್ನ ಪಕ್ಕದಲ್ಲಿ ಕುಳಿತಿದ್ದ ನಂಬಿಕಸ್ಥನ ಬಳಿ ನಡೆದ ಘಟನೆಯನ್ನು ಹೇಳಿದಳೋ ಅಥವಾ ಆ ನಂಬಿಕಸ್ಥನು ಕಣ್ಣಾರೆ ಕಂಡನೋ ತಿಳಿಯದು. ಕೂಡಲೇ ಆ ನಂಬಿಕಸ್ಥ ಸಿಟ್ಟಿನಲ್ಲಿ ಬೊಬ್ಬೆ ಇಡುತ್ತಾ ಒಬ್ಬ ಕುಡುಕನಿಗೆ ಹೊಡೆಯಲಾರಂಭಿಸಿದ.
ನಡೆದುದ್ದನ್ನು ಕಾಣಲು ಸಾಧ್ಯವೇ ಇಲ್ಲದವನೊಬ್ಬ ಬಂದು ತನ್ನ ಶಕ್ತಿಪ್ರದರ್ಶನವನ್ನು ತೋರಿಸಲು ಇದೇ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ. ತನ್ನ ದೇಹದಾರ್ಢ್ಯವನ್ನು ಬೆಳೆಸಿದ್ದಂತೆ ಕಾಣುತ್ತಿದ್ದವನಿಗೆ ಸರಿಯಾಗಿ ನಿತ್ತುಕೊಳ್ಳಲೂ ಸಾಧ್ಯವಾಗದ ಕುಡುಕನಿಗೆ ಹೊಡೆಯುವುದರಲ್ಲಿ ಏನು ಖುಷಿ ಸಿಕ್ಕಿತೋ ಏನೋ! ಕುಡುಕನಿಗಂತೂ ಧರ್ಮದೇಟಿನ ಸುರಿಮಳೆ! ಆತನನ್ನು ನಂಬಿಕಸ್ಥನ ಆಸೆಯಂತೆ ಬಾಡಿಬಿಲ್ಡರ್‌ನ ಸಹಾಯದೊಂದಿಗೆ ಬಸ್ಸಿನಿಂದ ಒದ್ದು ಹೊರಹಾಕಲಾಯಿತು.
ಕುಡುಕ ಕುಳಿತಿದ್ದ ಜಾಗವನ್ನು ತಕ್ಷಣ ಆಕ್ರಮಿಸಿದ ಒಬ್ಬರ ನಿಟ್ಟುಸಿರು, ಬಸ್‌ಗೆ ಹತ್ತುವ ಮೆಟ್ಟಿಲಿನಲ್ಲಿ ಕುಳಿತಿದ್ದ ಒಬ್ಬ ಅಜ್ಜನಿಗೆ ತನಗೇನಾಗುತ್ತದೋ ಈ ಹೊಡೆದಾಟದಲ್ಲಿ ಎನ್ನುವ ಭಯ, ಹೇಗೋ ಇದನ್ನೆಲ್ಲ ಮುಗಿಸಿ ತಮ್ಮ ಪಾಡಿಗೆ ತಾವು ಹೋಗಬೇಕೆಂದಿರುವ ಕಂಡಕ್ಟರ್, ಯಾವುದರ ಅರಿವೂ ಇಲ್ಲದೆ ತನ್ನ ಪಾಡಿಗೆ ಸ್ಟೇರಿಂಗ್ ತಿರುಗಿಸುತ್ತಿರುವ ಡ್ರೈವರ್, ಹಿಗ್ಗಾಮುಗ್ಗಾ ಏಟು ತಿನ್ನುತ್ತಿರುವ ಕುಡುಕ, ಇವನ್ನೆಲ್ಲ ನೋಡುತ್ತಾ ಮಜಾ ತೆಗೆದುಕೊಳ್ಳುತ್ತಿರುವ ಒಂದಷ್ಟು ಜನರು, ಹೆಣ್ಣಿನ ಸ್ಥಿತಿಗೆ ಮರುಗುತ್ತಾ ಬಾಯಲ್ಲೇ ಸಿಟ್ಟಿನ ಪ್ರದರ್ಶನಗೈದ ಜನರ ಮಧ್ಯದಲ್ಲಿ ನಾನ್ಯಾಕೆ ಏನೂ ಮಾಡಲಿಲ್ಲ ಎಂಬ ಪ್ರಶ್ನೆಯೊಂದಿಗೆ ನಾ ಕುಳಿತಿದ್ದೆ.
ಯಾರೂ ಕಣ್ಣಾರೆ ಕಾಣದಿದ್ದರೂ, ನಡೆದಿದ್ದೇನೆಂಬುದನ್ನು ಇಬ್ಬರಲ್ಲೂ ಕೇಳಿ ತಿಳಿಯದೆ, ಅದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲದೆ, ಯಾರದ್ದು ಸರಿ ಯಾರದ್ದು ತಪ್ಪು ಎಂದು ನಿರ್ಧಾರಕ್ಕೆ ಬರುವಂತೆ ಮಾಡಿದ ಆ ಹುಡುಗಿಯ ಹೇಳಿಕೆಗೆ ಎಷ್ಟು ಬೆಲೆ!
ಎಲ್ಲಿದೆ ಸಮಾನತೆ!!

