ನೀರೊಳಗಿರ್ದುಂ ಬೆಮರ್ತನುರಗಪತಾಕಂ ಸೀನ್ಸ್
- sushrutha d
- Jan 26, 2021
- 2 min read
Updated: Sep 22, 2024
3 ವರ್ಷದ ಹಿಂದೆ ಇದೇ ದಿನ (26 ಜನವರಿ 2021) ನಮ್ಮ ಕಾಲೇಜಿನಲ್ಲಿ ಒಂದು ಆಶುಭಾಷಣ ಮಾಡಿದ್ದೆ. ಗಣರಾಜ್ಯದ ಪರಿಕಲ್ಪನೆಯ ಆಧಾರದಲ್ಲಿ, ರಾಜ್ಯಗಳು ದೇಶದಲ್ಲಿ ವಿಲೀನವಾದಂತೆ, ಗುಂಪುಗುಂಪಾಗಿ ಛಿದ್ರಗೊಂಡ ವಿದ್ಯಾರ್ಥಿಗಳು ಒಟ್ಟುಸೇರಬೇಕೆಂಬುದು ಅದರ ಆಶಯವಾಗಿತ್ತು. ಪಟೇಲರು, ಅಂಬೇಡ್ಕರು ಮತ್ತಿನ್ಯಾರ್ಯಾರದ್ದೋ ಉದಾಹರಣೆಗಳನ್ನೆಲ್ಲ ಕೊಟ್ಟು ಆವೇಶದ ಭರದಲ್ಲಿ ಮಾತಾಡಿ ಮುಗಿಸಿದಾಗ...ಎದುರು ಕುಳಿತಿದ್ದ ಡೀನ್ ಎದ್ದು ಹೋಗಿದ್ದರು. ಅವರ ಹಿಂಬಾಲಕರೂ ಹಿಂದಿಂದೆ ಓಡಿದರು. ಅದೇ.. ಪ್ರಮೋಷನ್ನಿಗೆ ಕಾದು ಕುಳಿತಿರುವ ಆಡಳಿತ ಸಿಬ್ಬಂದಿಗಳು, ಶಿಕ್ಷಕರು ಸಿಟ್ಟಿನಲ್ಲಿ ಎದ್ದು ಹೋದ ಡೀನನ್ನು ಹಿಂಬಾಲಿಸಿ ಕರೆತರಲು ವಿಫಲರಾದರು. ಛೇ! ಎಂತಾ ಅನ್ಯಾಯವಾಯಿತಿದು ಎಂದು ಪರಸ್ಪರ ಮುಖಮುಖನೋಡುತ್ತಾ ಸಿಟ್ಟುಸಿರು ಬಿಟ್ಟರು.
ಕಾಲೇಜಿನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಡೀನ್ಗೆ ವಾಸ್ತವ ಸ್ಥಿತಿ ಗೊತ್ತಾಗಬೇಕೆಂದು ಕಾಲೇಜಿನಲ್ಲಿ ಪವರ್ ಪಾಲಿಟಿಕ್ಸ್‌ಗಾಗಿ ನಡೆಯುತ್ತಿದ್ದದನ್ನು ಮುಚ್ಚುಮರೆಯಿಲ್ಲದೆ ಹೇಳಿದ್ದೆನಷ್ಟೆ. ಯಾರಿಗೂ ಗೊತ್ತಿಲ್ಲದ್ದೇನಲ್ಲ. ಯಾರೂ ಒಪ್ಪದಿರುವಂತದ್ದೂ ಅಲ್ಲ. ಈ ಪವರ್ ಪಾಲಿಟಿಕ್ಸಲ್ಲಿ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದ ವಿದ್ಯಾರ್ಥಿಗಳಿಗೇ ಸಿಂಹಪಾಲು ಬೇಕೆಂಬುದು ನನ್ನ ವಾದವಾಗಿತ್ತು. "ಕಟ್ಟುವೆವು ನಾವು ದೇಶವ, ನೀವು ಮುಚ್ಕಂಡ್ ಕೂತ್ಕಳಿ" ಅಂತ ಬೇಸಿಕಲಿ.
ಭಾಷಣದ ನಂತರದ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಸಪ್ಪೆ. ಎಲ್ಲರ ತಲೆಯಲ್ಲೂ ಓಡುತ್ತಿದ್ದುದು ಈ ಕರ್ಮದವನ ಭಾಷಣದ ಪರಿಣಾಮ ಏನಪ್ಪಾ ಎಂಬುದು. ಶಿಕ್ಷಕರ ಮುಖವೆಲ್ಲಾ ಕೆಂಪು, ಆಡಳಿತ ಸಿಬ್ಬಂದಿಗಳಿಗೆ ಕೂತಲ್ಲಿ ಕೂರಲಾರದಷ್ಟು ಟೆನ್ಷನ್. ಹೆಂಗೋ ಪೂಸಿಹೊಡಿಬೇಕು ಅಂತ ಕಾಲೇಜಿನಲ್ಲೇ ಇಲ್ಲದ ಡೀನನ್ನು ಕರ್ಕೊಂಡು ಬಂದಿದ್ವಿ, ಈಗೇನಪ್ಪಾ ಮಾಡೋದು ಅಂತ! ವಿದ್ಯಾರ್ಥಿಗುಂಪು ತಲೆಮೇಲೆ ಕೈಹೊತ್ತು "ಏನ್ ಗುರೂ ಸೀನ್ ಇದು! ಏನ್ ನಡೀತೀಗ!" ಎಂದುಕೊಂಡು ಕುಳಿತಿತ್ತು. ಯಾರ ಮುಖದಲ್ಲೂ ನಗುವಿಲ್ಲ. ಯಾರ ಮುಖದಲ್ಲೂ ಅಳುವಿಲ್ಲ. ಪಕ್ಕಾ ಪ್ರೊಫೆಶನಲ್ ಪೋಕರ್ ಫೇಸಸ್!
ಆದಿನ ಧ್ವಜ ಬೇರೆ ಉಲ್ಟಾ ಹಾರಿದ್ದನ್ನ ನೆನಪಿಸಿಕೊಂಡು "ಥೂ! ಇವತ್ತಿನ ದಿನಾನೇ ಸರಿ ಇಲ್ಲ" ಅಂತ ಒಂದಷ್ಟು ಜನ ಗೊಣಕ್ಕೊಂಡ್ರು. ಇದು ಒಬ್ಬನ ಭಾಷಣವಲ್ಲ, ಇದ್ರ ಹಿಂದೆ ಸುಮಾರು ಕೈಗಳಿವೆ ಎಂದು ಒಂದಷ್ಟು ಜನ ಅಭಿಪ್ರಾಯ ಪಟ್ರು. ಒಂದಿಬ್ಬರಿಗೆ ಹಂಗಂಗೇ ಚುಚ್ಚಿ ಬಿಟ್ಟು, ಗುಸುಗುಸು ಹಬ್ಬಿಸಿದ್ರು. ಈ ಹೊಸಾ ಡೀನ್ಗೆ ಖುಷಿ ಆಗಿದ್ದಿದ್ರೆ ಈ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡು ಹೋಗಿ ಹಾರಿಸ್ತಿದ್ರು, ಉಲ್ಟಾ ಅಲ್ಲ, ಸರಿಯಾಗಿನೇ. ಈಗ ಎಲ್ಲ ಹೋಯ್ತು. ಇನ್ನು ಕಾಲೇಜಿನಲ್ಲಿದ್ದು ಏನು ಮಾಡಬೇಕಾಗೂ ಇಲ್ಲ ಎಂದು ದುಂಡುಮೇಜಿನ ಸಭೆಯಲ್ಲಿ ಶಿಕ್ಷಕರೆಲ್ಲ ಒಮ್ಮತ ನಿರ್ಣಯಕ್ಕೆ ಬಂದ್ರು.
ವಿದ್ಯಾರ್ಥಿಗಳಿಗೆ ಟೆನ್ಷನ್. "ಶಿಕ್ಷಕರು ಕೈಕಟ್ಟಿ ಕುಳಿತರೆ ನಮಗೆ ಮಾರ್ಕು ಹಾಕುವವರಾರು! ಅಯ್ಯೋ ದುರ್ವಿಧಿಯೇ! ಇದೇನಪ್ಪಾ ನಿನ್ನ ಲೀಲೆ!" ಎಂದು ಹಳೆಯ ಸನ್ಯಾಸಿಯ ಮೊರೆ ಹೋಗಿ ತಮಿಳು ಸಾಂಗಿಗ್ ಡ್ಯಾನ್ಸ್ ಆಡಿದ್ರು. ಮಾರನೇ ದಿನ, ಅಂದ್ರೆ ನಾಳೆ, ತಲೆಹಿಡಿದುಕೊಂಡು ಅಪೋಲಜಿ ಕೇಳಬೇಕಂದ್ರು.
"ಅಯ್ಯಾ! ಇದೆಂತು ಜೀವನವಯ್ಯಾ!
ಪೋರಾಡಿಹೆ ವಿದ್ಯಾರ್ಥಿಗಳೈ ಸಲುವಾಗಿ,
ಇವರಾರೈ ಎನ್ನೈ ಅಪೋಲಜಿ ಕೇಳಲ್ ಹೇಳ್ದಿರ್ಪರ್"
ಅಂದುಕೊಂಡು ಖಡಾಖಂಡಿತವಾಗಿ..
"ಸತ್ಯ ನುಡಿದಿಹೆನೈ, ಸುಳ್ಳೊಂದಕ್ಷರವಿಲ್ಲ.
ಮತ್ಯಾಕೆ ಕೇಳಲೈ ಈ ಅಪೋಲಜೀ!
ನೀಂಗಳ್ ಯಾಕ್ಕೇಳಿದಿರೈ ಅವರ ಮಾತುಗಳ್
ನಾವುಗಳ್ ಇಂತಿಪ್ಪ ಸಮಯದೊಳ್ ಜೊತೆಗಿರಬೇಕೈ" ಎಂದೆ ವಾಪಾಸ್.
ಅಲ್ಲಿಗ್ ಮುಗೀಲಿಲ್ಲ. ಇಡೀ ಕಾಲೇಜಿನ ಎದುರು ಇಲ್ಲದ ಕಟಕಟೆಯಲ್ಲಿ ಇದ್ದ ನನ್ನನ್ನು ನಿಲ್ಲಿಸಿ (ಮುಂದಿದನ್ನು ನಾಟಕೀಯವಾಗಿ ಓದಿಕೊಳ್ಳಿ) "'ಯಾವನೋ ಒಬ್ಬ' ಮಾಡಿದ ಭಾಷಣದಿಂದ ಕಾಲೇಜಿಗೇ ಬರದ ನಮ್ಮ ಪ್ರೀssತಿಯ ಡೀನಿಗೆ.. ಬೇssಸರವಾಗಿದೆಯಂತೇss.... ಅದಕ್ಕಾಗಿ ನಿಮ್ಮವನಾದ ನಾನು ಕೈssಮುಗುಳಿಸಿ ಎಲ್ಲರಲ್ಲಿ ಕ್ಷಮೆಯಾಚಿಸುತ್ತಿದ್ದೇssನೇss." ಎಂದು ಯಾವನೋ ಒಬ್ಬ ನನ್ನ ಪರವಾಗಿ ಅಡ್ಡಬಿದ್ದ. ಕ್ಲಾಪ್ಸಿಗೇ ಕ್ಲಾಪ್ಸು! ಅದ್ರ ಮಧ್ಯದಲ್ಲಿ "ಅವ್ನು" ಅಂದ ಒಬ್ಬ. "ಊಹೂಂ" ಅಂದೆ ನಾನು. ಅಷ್ಟೆ.
ಅಲ್ಲಿಗೆ ಒಂದು ಹಂತದ್ದು ಮುಗ್ದಿತ್ತು. ಮುಂದಿನೈದು ದಿನ ನಾನು ಕಾಲೇಜಿಗೇ ಹೋಗಿರಲಿಲ್ಲ. ಆರನೇ ದಿನ, ನನ್ನ ಬಿಟ್ಟು ಉಳ್ದವರೆಲ್ಲ ಕೂಲ್ ಆಗಿದ್ರು. "ನೀನ್ ಹೇಳಿದ್ದು ಸರಿ ಇತ್ತು ಮಚಾ, ನಿನ್ನೆ ಏನಾಯ್ತಂದ್ರೇss..." ಅಂತ ಒಂದಷ್ಟು ಜನ ಅಕ್ಕಪಕ್ಕ ಯಾರಿಲ್ಲದ್ದು ನೋಡಿ ಗುಟ್ಟಲ್ಲಿ ಏನೇನೋ ಹೇಳಿದ್ರು. ಓಹ್! ಇದಿಂಗೆ ಸಮಾಚಾರ ಅಂತ ನಿಧಾನಕ್ಕೆ ನಾವೂ ಕೂಲ್ ಆದ್ವಿ.
ಅಷ್ಟೇ ಪ್ರೇಂಡ್ಸ್. ಒಟ್ನಲ್ಲಿ "ನೀರೊಳಗಿರ್ದುಂ ಬೆಮರ್ತನುರಗಪತಾಕಂ" ಸೀನ್ಸ್. ಹೆಂಗೂ ಈಗ ಕತೆಯ ನೀತಿಯ ಸಮಯ! ಈ ಕತೆಯ ನೀತಿ ಏನೆಂದರೆ...
ಸರಿ, ಇನ್ನೊಮ್ಮೆ ಸಿಗುವ. ಬೇಸರ ಮಾಡಿಕೊಳ್ಬೇಡಿ ಆಯ್ತಾ.
Jan 26, 2024

