top of page

ಎಲ್ಲಾ ದಿನಪತ್ರಿಕೆಗಳ ಮುಖಪುಟದಲ್ಲಿ ರಾಜಕೀಯ ಸುದ್ದಿಗಳೇ ಯಾಕೆ?!

  • Writer: sushrutha d
    sushrutha d
  • Apr 20, 2023
  • 2 min read

Updated: Sep 22, 2024

ಈ ರಾಜಕೀಯಯೋಮಯ ಕಾಲದಲ್ಲಿ ನನ್ನದೊಂದು ಪ್ರಶ್ನೆ. ಪ್ರತಿದಿನವೂ ಪ್ರತಿಮನೆಗೂ ತಲುಪುವ ದಿನಪತ್ರಿಕೆಗಳ ಮುಖಪುಟದಲ್ಲಿ ಯಾವಾಗಲೂ ರಾಜಕೀಯ ಸುದ್ದಿಗಳೇ ಯಾಕೆ?! ಕಡಿಮೆ ಎಂದರೂ ನೂರು ವರ್ಷಗಳಿಂದ ನಮ್ಮನ್ನದು ಯಾವ ರೀತಿ ಪ್ರಭಾವಿಸಿದೆ?


ಜನರೆಲ್ಲರ ಅಭಿಪ್ರಾಯಗಳು ರೂಪಿತವಾಗುವುದು ಅನುಭವ ಮತ್ತು ಅವರಿಗೆ ಸಿಗುವ ಮಾಹಿತಿಗಳ ಆಧಾರದ ಮೇಲೆ. ಈ ಮಾಹಿತಿಗಳನ್ನು ಹಲವಾರು ದಶಕಗಳಿಂದ ಒದಗಿಸುತ್ತಾ ಬಂದಿರುವುದು ದಿನಪತ್ರಿಕೆಗಳು. ಕಳೆದೆರಡು ದಶಕಗಳಲ್ಲಿ ನ್ಯೂಸ್ ಚಾನೆಲ್ಗಳು. ಮತ್ತೂ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು. ಅಂದರೆ, ಇವುಗಳಲ್ಲಿ ಬರುವ ವಿಷಯಗಳು ಹೆಚ್ಚಿನ ಜನರಿಗೂ ತಲುಪಿ, ಜನರ ಒಟ್ಟಭಿಪ್ರಾಯ ರೂಪಿಸುತ್ತಿರುತ್ತದೆ. ಈ ಎಲ್ಲಾ ಮಾಧ್ಯಮಗಳನ್ನು ಬಹುಪಾಲು ಆವರಿಸಿರುವುದು ರಾಜಕೀಯ ಸಂಗತಿಗಳೇ ಆದ್ದರಿಂದ ಜನರ ಯೋಚನೆಗಳೂ ರಾಜಕೀಯಮಯವೇ ಆಗಿಹೋಗಿದೆ.


ಒಂದಾನೊಂದು ಕಾಲದಲ್ಲಿ, ಬ್ರಿಟಿಷರಿದ್ದರು. ಅವರ ವಿರುದ್ಧ ಜನರೆಲ್ಲ ಸೇರಿ ಸ್ವಾತಂತ್ರ್ಯ ಹೋರಾಟ ಮಾಡಬೇಕಿತ್ತು. ಅಂದು, ಅಂದರೆ ದಿನಪತ್ರಿಕೆಗಳು ಹೋರಾಟದ ಬಳಕೆಗಾಗಿ ಶುರುವಾದ ಸಂದರ್ಭದಲ್ಲಿ ಈ ರಾಜಕೀಯ ವಿಷಯಗಳು ಮನೆಮನೆಗೆ ತಲುಪುವ ಅಗತ್ಯ ಇತ್ತು. ಮುಖಪುಟದಲ್ಲೇ ಇದ್ದರೆ ತಲುಪುವುದು ಹೆಚ್ಚು ಸುಲಭ. ಆ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕರ ನಡೆ ಅಂದಿನ ಅಗತ್ಯಕ್ಕೆ ಸ್ಪಂದಿಸಿದ್ದಾಗಿತ್ತು. ಆದರೆ, ಅಂದಿನ ಅಭ್ಯಾಸವೇ ಇಂದಿಗೂ ಮುಂದುವರಿದಿರುವುದು ಯಾಕೆ? ಡಿಕೆಶಿ, ಬೊಮ್ಮಾಯಿ ಬಗ್ಗೆ ಏನು ಹೇಳಿದರೆಂಬುದು ಯಾಕೆ ಇಂದು ಜನರಿಗೆ ಮುಖಪುಟದಲ್ಲಿ ಬರುವಷ್ಟು ಪ್ರಸ್ತುತ ವಿಷಯ!?


ಇಂದಿನ ಅಗತ್ಯ ಹೋರಾಟವಲ್ಲ. ಅಭಿವೃದ್ಧಿ. ಜನರಿಗೆ ತಲುಪಬೇಕಿರುವುದು ಅಭಿವೃದ್ಧಿಯ ಕುರಿತಾದ ವಿಷಯಗಳು. ಅಭಿವೃದ್ಧಿ ಎಂದರೆ ಯಾವ ರಾಜಕಾರಣಿ ಎಷ್ಟು ರೋಡ್ ಮಾಡಿಸಿದ ಎಂಬ ವಿಷಯವನ್ನು ಉರುಗುವುದಲ್ಲ. ಅಭಿವೃದ್ಧಿಯ ಕುರಿತಾದ ಯೋಚನೆಯನ್ನು ಜನರಲ್ಲಿ ಹುಟ್ಟುಹಾಕಬಹುದಾದ ಸುದ್ದಿಗಳು. ಉದಾಹರಣೆಗೆ, ಯಾರದ್ದೋ ಸ್ಟಾರ್ಟ್ ಅಪ್, ಯಾವದೋ ಕಂಪೆನಿಯ ಮಹತ್ತರ ಬೆಳವಣಿಗೆ, ಹೊಸದಾಗಿ ರೂಪುಗೊಳ್ಳುತ್ತಿರುವ ಚಿಂತನೆಗಳು, ಹೊಸದಾಗಿ ಜನರು ಬಳಸಬಲ್ಲ ಸೌಲಭ್ಯಗಳು (ಎಐ, ಬ್ಲಾಕ್ಚೈನ್ ಮುಂತಾದವು), ಒಟ್ಟಾಗಿ ಹೇಳುವುದಿದ್ದರೆ ಒಂದು ಐಡಿಯಾವನ್ನು ಸಾರುವಂತವು. ಹೇಗೆಲ್ಲ ನಾವುಗಳು ಒಟ್ಟಾರೆ ಅಭಿವೃದ್ಧಿಯಾಗಬಹುದು ಎಂದು ತಿಳಿಸಿ ಜನರನ್ನು ಪ್ರೇರೇಪಿಸಬಲ್ಲ ವಿಷಯಗಳು ಇಂದಿನ ಮುಖಪುಟದಲ್ಲಿರಬೇಕಾದ್ದು.


ಇದಾರಿಗೂ ತಿಳಿಯದ ಸಂಗತಿಯೇನಲ್ಲ. ತಿಳಿದೂ ಪ್ರಜ್ಞಾಪೂರ್ವಕವಾಗಿ ನಿರಾಕರಿಸಿದವು. ಆದರೆ ಯಾಕೆ? ಅಭಿವೃದ್ಧಿಯ ಕುರಿತಾದ ವಿಷಯಗಳನ್ನಲ್ಲದೆ ರಾಜಕೀಯ ವಿಷಯಗಳೇ ಇಂದಿಗೂ ಮನೆಮನೆ ಮುಟ್ಟುವಂತೆ ನೋಡಿಕೊಳ್ಳುವುದರ ಹಿಂದಿನ ಉದ್ದೇಶ ಏನು? ಅಭಿವೃದ್ಧಿಯ ಯೋಚನೆಗಳು ಜನರಲ್ಲಿ ಬರದಂತೆ, ರಾಜಕೀಯವೇ ಜನರ ತಲೆಯಲ್ಲಿ ತುಂಬುವಂತೆ ಮಾಡುವುದರಿಂದ ಲಾಭ ಯಾರಿಗೆ? ಅವರುಗಳ ಲಾಭಕ್ಕೆ ನಾವುಗಳು ಹೇಗೆ, ಎಷ್ಟರ ಮಟ್ಟಿಗೆ ದಾಳಗಳಂತೆ ದಡಬಡನೆ ಉರುಳುತ್ತಿದ್ದೇವೆ?!


ರಾಜಕೀಯದ ಸುದ್ದಿಗಳೇ ರಾಜಕೀಯದ ಜಾಹೀರಾತು. ಒಂದು ರೀತಿಯಲ್ಲಿ ಪ್ರತಿನಿತ್ಯವೂ ಜಾಹೀರಾತು ನೀಡದೆಯೇ ಜಾಹೀರಾತಿನ ಲಾಭ ಪಡೆದುಕೊಳ್ಳುತ್ತಿರುವ ಕ್ಷೇತ್ರ ಅದು. ಅದೇನು ಮಾಡುತ್ತಿದೆ ಅಂತೀರಾ! ಎಲ್ಲದಕ್ಕಿಂತ ಮುಖ್ಯ ರಾಜಕೀಯವೇ ಎಂದು ಎಲ್ಲರಿಗೂ ಅನ್ನಿಸುವಂತೆ ಮಾಡಿದ್ದು ಇದೇ ಸುದ್ದಿ/ಜಾಹೀರಾತುಗಳು. ಯಾಕೆ ಎಲ್ಲರಿಗೂ ರಾಜಕೀಯ ಮುಖ್ಯವಾಗಬೇಕು ಎಂಬ ಪ್ರಶ್ನೆಯೇ ಒಂದು ತಲೆಮಾರಿನವರಲ್ಲಿ ಇಲ್ಲ. ಪ್ರತಿದಿನವೂ ಅದದೇ. ಅದದೇ ಮಾತು, ಅದದೇ ಬೊಬ್ಬೆ, ಅದದೇ ಪರಚಾಟ. ಅದರೆಲ್ಲದರ ಉಪಯೋಗ ರಾಜಕೀಯ ಕ್ಷೇತ್ರಕ್ಕೆ. ಬೈದರೂ ಹೊಗಳಿದರೂ ಯಾವ ಯಾವ ರೀತಿ ತಿಪ್ಪರಲಾಗ ಹೊಡೆದರೂ ಅದು ರಾಜಕೀಯದ ಜಾಹೀರಾತೇ ಆಗುತ್ತಿರುತ್ತದೆ. ರಾಜಕಾರಣಿಗಳು ಬದಲಾಗುತ್ತಿರಬಹುದು, ಅವರ ಸ್ಥಾನಗಳು ಬದಲಾಗಬಹುದು, ಆದರೆ ರಾಜಕೀಯದ ಸ್ಥಾನ, ಅದಕ್ಕಿರುವ ಇಂಪಾರ್ಟೆನ್ಸ್ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದೆ ಇದು. ರಾಜಕೀಯ ಕ್ಷೇತ್ರಕ್ಕೆ ನಿರಂತರ ದುಡ್ಡು ಹರಿದುಬರುವಂತೆ ಮಾಡುವ ವಿಧಾನ, ಜನರನ್ನೇ ದಾಳಗಳಾಗಿ ಉಪಯೋಗಿಸಿಕೊಂಡು!


ಬರೀ ಅಲ್ಲಿಗೇ ನಿಲ್ಲಿಲ್ಲ. ರಾಜಕೀಯ ವಿಷಯ ಹೊತ್ತ ಸಿನಿಮಾ ಇಂದು ಒಳ್ಳೆಯ ಸಿನಿಮಾ. ಕಥೆಗಳೂ ರಾಜಕೀಯಮಯವಾಗಿರಬೇಕು. ಕವನದಲ್ಲೂ ರಾಜಕೀಯ, ಕಲೆಯಲ್ಲೂ ರಾಜಕೀಯ, ನಾಟಕದಲ್ಲೂ ರಾಜಕೀಯ, ಕೊನೆಗೆ ಸಂಶೋಧನೆಗಳಲ್ಲೂ ರಾಜಕೀಯ! ಈ ಎಲ್ಲವೂ ರಾಜಕೀಯವನ್ನೇ ಹೊತ್ತು ತಿರುಗಿದರೆ, ಉಳಿದ ವಿಷಯಗಳ ಬಗ್ಗೆ ಮಾತಾಡುವವರು ಯಾರು!? ಈ ರಾಜಕೀಯದ ಮೋನೋಪಲಿಯನ್ನು ಮುರಿದು ಉಳಿದ ಕ್ಷೇತ್ರಗಳಿಗೂ ಬೆಲೆ ಬರುವಂತೆ ಮಾಡುವವರಾರು? ಇಂದಿನ ಈ ಅಗತ್ಯಗಳನ್ನು ಗುರುತಿಸಿ ಪಸರಿಸುವವರಾರು?


ರಾಜಕೀಯ ಸರಿಯಿಲ್ಲ, ರಾಜಕೀಯದವ್ರು ಸರಿಯಾಗಬೇಕು ಎಂಬ ತೂಕಲೆಸ್ ಮಾತುಗಳನ್ನು ನಾ ಹೇಳುತ್ತಿಲ್ಲ. ಸರಕಾರದ ನಡೆ ಸರಿಯಿಲ್ಲದಿದ್ದರೆ ಪ್ರಶ್ನಿಸಲು ವಿರೋಧಪಕ್ಷವೂ ಅಲ್ಲೇ ಇದೆ. ಅವರವರು ಅಧಿಕಾರಕ್ಕಾಗಿ ಸಿಕ್ಕಿದ ಅವಕಾಶಗಳನ್ನೆಲ್ಲಾ ಮೈಮೇಲೆ ಎಳ್ಕೊಂಡು ಬಡಿದಾಡಿಕೊಳ್ಳುತ್ತನೇ ಇರುತ್ತಾರೆ ಎನ್ನುವಷ್ಟು ನಂಬಿಕೆಯೂ ಇದೆ. ಅಷ್ಟಲ್ಲದೆ ಅವರೆಲ್ಲರಿಗೂ ಸಲಹೆ ನೀಡಲೆಂದೇ ತಜ್ಞರ ದೊಡ್ಡ ಗುಂಪಿರುತ್ತದೆ. ಮತ್ತೂ ನಾವುಗಳೂ ಅದೇ ಕೆಲಸ ಮಾಡಬೇಕೆಂದಾದರೆ ಸ್ವಂತಕ್ಕೆ ಸ್ವಲ್ಪವಾದರೂ ಮರ್ಯಾದೆ ಅನ್ನೋದಿಲ್ವಾ!


ಈ ಕಾಲದಲ್ಲಿ ನಾವುಗಳು ಯಾರದ್ದೋ ದಾಳಗಳಾಗದೆ ಉಳಿಯಲು ಭಯಂಕರ ಕಷ್ಟ. ನೂರು ವರ್ಷಗಳ ನಿರಂತರ ಸುದ್ದಿಗಳು ನಮ್ಮನ್ನಷ್ಟು ಮಂಕು ಮಾಡಿರುವದರಲ್ಲಿ ಆಶ್ಚರ್ಯ ಏನಿಲ್ಲ. ಇದನ್ನೆಲ್ಲ ಮನಃಪೂರ್ವಕವಾಗಿ ಒಪ್ಪಿಕೊಳ್ಳಲು ಕಷ್ಟವಾದರೆ ಎಷ್ಟರ ಮಟ್ಟಿಗದು ಪ್ರಭಾವಿಸಿರಬಹುದು ನೀವೇ ಯೋಚಿಸಿನೋಡಿ. ಇನ್ನಾದರೂ ಈ ರಾಜಕೀಯದ ಕುರಿತು ಪ್ರಜ್ಞಾಪೂರ್ವಕವಾದ ನಿರಾಸಕ್ತಿ ತಳೆಯಲು ಸಾಧ್ಯವಾದರೆ ಬೇರೆ ವಿಷಯಗಳೂ ಮುನ್ನೆಲೆಗೆ ಬಂದೀತೇನೋ. ಇಲ್ಲದಿದ್ದರೆ ನಮ್ಮ ತಲೆಮಾರೂ ಎಡಬಲ ಪರಿಚಿಕೊಳ್ಳುವುದರಲ್ಲೇ ಕೊನೆಯುಸಿರೆಳೆಯುತ್ತಿರುತ್ತದೆ ಅಷ್ಟೆ.


ಯಾರು ಹೇಗೆ ಈ ರಾಜಕಾರಣದಲ್ಲಿ ಕಾರಣವಿಲ್ಲದ ಜಗಳ ಮಾಡಿದರೂ ನಮಗದು ನಿಜವಾಗಿ ಬೇಕಾಗಿಲ್ಲ. ನಾವೇನೇನು ಮಾಡಬಹುದು ಈ ಕಾಲದಲ್ಲಿ ಎಂಬುದು ಬೇಕಾಗಿದೆ. ಅದನ್ನೊದಗಿಸುವ ಮಾಧ್ಯಮಗಳು ಬೇಕಾಗಿದೆ. ಎಲ್ಲಿಯ ತನಕ ಇವುಗಳನ್ನು ಮನೆಮನೆ ಮುಟ್ಟದಂತೆ ನೋಡಿಕೊಳ್ಳುವ ಶಕ್ತಿ ಇರುತ್ತದೆಯೋ ಅಲ್ಲಿಯ ತನಕ ನಮಗಾಗಿ ನೋಟಾವೂ ಇರುತ್ತದೆ. ಮತ್ಯಾಕೆ ಟೆನ್ಶನ್ ಅಲ್ವಾ ಪಿರೆಂಡ್ಸ್!? ಆರಾಮ್ಸೆ ದಾಳ ಉರುಳಿಸಿದ್ರಾಯ್ತು.


 

April 2023

Recent Posts

See All
ಪ್ರಜಾಪ್ರಭುತ್ವದಲ್ಲಿ ನೋಟಾ (NOTA)

ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರಜೆಗಳಿಗೆ ಶಕ್ತಿ ಇರಬೇಕು. ರಾಜಕೀಯದವರ ಬಳಿ ಅಲ್ಲ. ಹಿಂದಿನ ಪೋಸ್ಟ್ಗಳಲ್ಲೇ ಹೇಳಿದಂತೆ, ರಾಜಕೀಯದವರನ್ನು ಯಾರೇನೂ ಮಾಡಲಾಗದ ಕಾಲದಲ್ಲಿ...

 
 
bottom of page