ಕಲೆಯೆಂಬ ಶಿಕ್ಷಣಪದ್ಧತಿ!
- sushrutha d
- Mar 31, 2024
- 2 min read
Updated: Sep 22, 2024
ಕಲೆಗೊಂದು ಭೂಮಿಕೆ 20 : ಕಲೆಯನ್ನು ಮನರಂಜನಾ ವಿಭಾಗದಲ್ಲಿಟ್ಟು ಮಜಾ ನೋಡುತ್ತಿದ್ದಾರೆ ಜನ ಎಂದನಿಸುತ್ತೆ ಎಷ್ಟೋ ಸಲ. ಅದು ದೃಶ್ಯಕಲೆ, ಕಥೆ, ಮ್ಯೂಸಿಕ್, ನಾಟಕ, ಸಿನಿಮಾ ಯಾವ್ದಾಗಿದ್ರೂ ಅಷ್ಟೆ, ಅದಿರುವುದು ಮನರಂಜನೆಗಾಗಿ ಎಂದು ಲೆಕ್ಕ. ಅಕಸ್ಮಾತ್ ಮನರಂಜಿಸದಿದ್ದಲ್ಲಿ ಅದು ಪ್ರಯೋಜನವಿಲ್ಲವೆಂದು ಲೆಕ್ಕ. ರಾಜರ ಕಾಲದಲ್ಲಿ ಅದೆಲ್ಲ ಸರಿ. ತಾನು ಉನ್ನತ ಸ್ಥಾನದಲ್ಲಿದ್ದೇನೆ/ಳೆ ಎಂಬ ಭಾವಕ್ಕೆ ತನ್ನನ್ನು ಮನರಂಜಿಸುವುದೇ ಕಲಾವಿದರಾದವರ ಕೆಲಸ ಎಂದನಿಸೀತು. ಆದರೀಗ? ನೀವ್ಯಾವ ತೋಳಂಡನಾಯಕರು ಅಂತ ಅದನ್ನೇ ಬಯಸುತ್ತಿದ್ದೀರಿ?!
"ಅರೆರೆರೇ..! ತನ್ನ ಒಣಜಂಭಕ್ಕೇ ಪೆಟ್ಟು ಬಿತ್ತೇ?!
...ಹ್ಞಾಂ..!!?
(ಮೊಣಕಾಲನು ಗುಂಡಗೆ ಉಜ್ಜುತ್ತಿದ್ದ ಎಡಕೈ ಅನ್ನು ಮೇಲಕೆತ್ತಿ)
ಎಲಾ ಅವನನ್ನಲ್ಲಿ ಕಟ್ಟಿ ಹಾಕಿ, ಬಹಿಷ್ಕರಿಸಿ, ಕ್ಯಾನ್ಸಲ್ ಮಾಡಿ.."
ಇಷ್ಟೇ ಮನರಂಜನೆ. ಮುಂದಿದೆಲ್ಲಾ ಛಾಟಿ ಏಟೇ. ತಡ್ಕಳಿ.
ಇದಕ್ಕೆಲ್ಲ ಸರಿಯಾಗಿ ಈ ಅರೆಬೆಂದ ಕಲಾವಿದರಿದ್ದಾರೆ. ಹೆಚ್ಚಾಗಿ ಪೋಪ್ಯುಲಾರ್ ಮೀಡಿಯಾಗಳಲ್ಲಿ. ಫ್ಯಾಮಿಲಿ ಎಂಟರ್ಟೈನ್‌ಮೆಂಟ್ ನಮ್ದು ಅಂತ ಹೇಳ್ಲಿಕ್ಕೆ. ಎಲ್ಲರೂ ಜೊತೆಯಾಗಿ ಕೂತು ನೋಡಿ ಮೆಚ್ಚುವಂತೆ ಮಾಡಿದ್ದೇವೆ, ಬನ್ನಿ ಗೆಲ್ಲಿಸಿ ಅಂತೆಲ್ಲ ಒಂದಷ್ಟು ಗರಂ ಆಗಿ ರಂಪಾಟ ಕಂಪೆನಿಯ ಮಸಾಲೆ ಹಾಕಿ ಕೈತೊಳ್ಕೊಂಡು ಬಿಡ್ತಾರೆ. ಹೀಗೆ ಜನರೆಲ್ಲ ಒಟ್ಟು ಸೇರಿ ಯಾವುದೇ ರೂಪದಲ್ಲಿಯೂ ಉನ್ನತ ಉದ್ದೇಶವಿರದ ಪೊಟ್ಲಾಸ್ ರಿಯಾಲಿಟಿ ಶೋಗಳ ಲೆವೆಲಲ್ಲಿ ಇಡೀ ಕಲೆಯನ್ನು ತಂದಿಡುವುದರಿಂದ ಒಂದು ನಿಯತ್ತಾದ ಕ್ಷೇತ್ರಕ್ಕೆ ಆಗುತ್ತಿರಬಹುದಾದ ತೊಂದರೆ ಎಷ್ಟು?!
ಯಾವುದೇ ಕ್ಷೇತ್ರದಲ್ಲಿ ದುಡಿಯುವವನಿಗೂ ಆ ಕ್ಷೇತ್ರದ ಕುರಿತು ಒಂದು ಬದ್ಧತೆ ಇರ್ಬೇಕಾಗ್ತದೆ. ಅದು ಇಲ್ಲಿ ಇಲ್ಲದಿರುವುದಕ್ಕೆ ಕಾರಣ ಈ ಹಬ್ಬಿದ ಎಂಟರ್‌ಟೈನ್‌ಮೆಂಟ್ ಮೆಂಟಾಲಿಟಿ. ವಿಜ್ಞಾನದಲ್ಲಿ ಎಷ್ಟೇ ಗಮ್ಮತ್ತಿನ ವಿಷಯಗಳಿದ್ದರೂ ಅದೆಂದೂ ಮನರಂಜನೆ ಎಂದು ಪರಿಗಣಿತವಾಗಿಲ್ಲ. ಕ್ರೀಡೆ?! ಅದು ಕೂಡ ಪದಕ, ಕಪ್ ಎಲ್ಲಾ ಗೆದ್ದು ದೇಶದ ಪ್ರತಿಷ್ಠೆಯನ್ನು ಮೇಲೆತ್ತಲಿಕ್ಕಿರುವುದೇ ಹೊರತು ಅದ್ರ ಉದ್ದೇಶವೇ ತಮ್ಮನ್ನು ರಂಜಿಸುವುದೆಂದು ಜನರ ಭಾವನೆಯಲ್ಲ. ಅದರಿಂದೆಲ್ಲ ಮನರಂಜನೆ ಸಿಕ್ಕರೆ ಅದು ಬೈಪ್ರಾಡಕ್ಟ್ ಅಷ್ಟೇ. ಹಾಗಾಗಿ ವಿರಾಟ್ ಕೊಹ್ಲಿಯತ್ರನೋ, ಪ್ರಜ್ಞಾನಂದನತ್ರನೋ ಹೋಗಿ ನೀನು ಆಟ ಆಡಬೇಕಾದ್ದೇ ನನ್ನ ಮನರಂಜಿಸಲಿಕ್ಕೆಂದು ಯಾರೂ ಹೇಳುವುದಿಲ್ಲ. ಆದ್ರೆ ಕಲಾವಿದರ ಬಳಿ?!
ಕೆಳಗಿರುವ ಸ್ಕ್ರೀನ್‌ಶಾಟ್ ಇಲ್ಲೇ ಫೇಸುಬುಕ್ಕಿನದ್ದು. ಟಿ ಎಂ ಕೃಷ್ಣರ ಗಲಾಟೆಗೆ ಸಂಬಂಧಪಟ್ಟದ್ದು. ಅದು ಮುಖ್ಯವಲ್ಲ. ಎಷ್ಟು ಸುಲಭದಲ್ಲಿ ಜನರಿಗೆ ಬೇಕಾದ್ದನ್ನು ಮಾಡಬೇಕಾದವ ಕಲಾವಿದ ಎಂದು ನಿಗದಿಯಾಯ್ತು! ಇಲ್ಲಿ ಹೇಳಿದವರು ಒಬ್ಬರಾದರೂ ಇದು ನಿಜವಾಗಿ ಒಬ್ಬಿಬ್ಬರ ಮೆಂಟಾಲಿಟಿಯಲ್ಲ. ಎಲ್ಲರದ್ದೂ ಹೀಗೆಯೇ. ತಿರುಗಿ ನಿತ್ತು ಕುಂಡೆ ಅಲ್ಲಾಡಿಸುವುದನ್ನು ಜನ ಬಯಸುತ್ತಾರೆ. ಹಾಗಾಗಿ ಅದು ಕಲೆ..!!!!&₹#!;:!'-??! ನಿಮಗಿಷ್ಟವಾಗುವ ಹಾಗೆ ಮಾಡಿದ್ದೇವೆ, ಹಾಗಾಗಿ ಅದು ಕಲೆ!!?

ಸಾಧಾರಣವಾಗಿ ಈ ಬರಹಗಾರರ ತಂಡಗಳಲ್ಲಿ ನಡೆಯುವ ಚರ್ಚೆಯೂ ಹೀಗೆಯೇ ಇರುತ್ತದೆ. ಜನಮೆಚ್ಚಬೇಕಾದ್ದು ಮುಖ್ಯ ಮತ್ತೊಂದು ಮಣ್ಣಂಗಟ್ಟಿ. ಇಲ್ಲೆಲ್ಲಾ ಹೇಳುವುತ್ತಿರುವುದೇನು ಹಾಗಾದ್ರೆ! ವಿಜ್ಞಾನಕ್ಕೂ ಹೀಗೇ ಹೇಳಿ ಅಲಾ...ಜನರಿಗೆ ಅರ್ಥವಾಗುವ ಹಾಗೆ ಇರಬೇಕೆಂದು! ಉಸೇನ್ ಬೋಲ್ಟಿಗೆ ಹೇಳಿ...ನಾವು ಓಡುವಷ್ಟೇ ಸ್ಪೀಡಲ್ಲಿ ನೀನೂ ಓಡಬೇಕೆಂದು! ಪ್ರಜ್ಞಾನಂದನಿಗೆ ನಾಲ್ಕು ಸ್ಟೆಪ್ಪಲ್ಲಿ ಚೆಕ್‌ಮೇಟ್ ಮಾಡ್ಲಿಕ್ಕೆ ಹೇಳಿ. ಮತ್ತೆ ಪದಕ ಬರ್ಲಿಲ್ಲ, ಪ್ರಯೋಜನ ಇಲ್ಲ ಅಂತ ಫೇಸುಬುಕ್ ತುಂಬ ಹೊಯ್ಕೊಳಿ.
ಅದೆಲ್ಲ ಸರಿ, ಆದ್ರೆ ಕಲೆ ಮನರಂಜನೆಯಲ್ಲದೆ ಮತ್ತೇನು ಎಂದು ನೀವು ಕೇಳಬಹುದು. ಸುಲಭಕ್ಕೆ, ಕಲೆಯೆಂಬುದು ಇಂತಹ ಪೋಪ್ಯುಲಾರ್ ಮೀಡಿಯಗಳಲ್ಲಿ ಕಾಣಿಸುವಂತದ್ದಲ್ಲ. ಸ್ವಲ್ಪ ಹೈವೇ ಬಿಟ್ಟು ದಾರಿಬದಿಯನ್ನು ಗಮನಿಸಿದಾಗ ಕಾಣಿಸುವಂತದ್ದು. ಸ್ಟಾರ್‌ಗಳೇ ಬೇರೆ, ಆ್ಯಕ್ಟರ್ಸ್‌ಗಳೇ ಬೇರೆ. ದಾರಿಬದಿಯಲ್ಲಿ ಕಾಣುವ ದೊಡ್ಡ ಜಗಮಗ ಹೋಟೆಲಿಗೂ, ಗಲ್ಲಿಯೊಳಗೆ ಊರಿನವರಿಗೆ ಮಾತ್ರವೇ ಗೊತ್ತಿರುವ ಜಾಗದಲ್ಲಿ ಸಿಗುವ ಊಟದ ರುಚಿಗೂ ಇರುವ ವ್ಯತ್ಯಾಸದ ಹಾಗೆ ಇದೆಲ್ಲ. ಕಲೆಯನ್ನು ಹುಡುಕಬೇಕು. ಕಲೆಗಾಗಿ ಹುಡುಕಬೇಕು. It's a continuous search. ಹಾಗಿದ್ದಮೇಲೆ, ಕಲೆಯನ್ನು ಮನರಂಜನೆಯಾಗಿ ನೋಡದೆ ಒಂದು ಶಿಕ್ಷಣಪದ್ಧತಿಯಾಗಿ ನೋಡಿದ್ರೆ ಹೇಗಿರ್ತಿತ್ತು ಅಂತ!
ಮೊದಲನೆಯದಾಗಿ ಕಲೆಯ ಕುರಿತಂತೆ ಒಂದು ಗಾಂಭೀರ್ಯತೆ ಬರುತ್ತಿತ್ತು. ಹುಚ್ಚಾಂಪಟ್ಟೆ ವಿಜ್ಞಾನ ಯಾರೂ ಮಾಡುವುದಿಲ್ಲ ನೋಡಿ. ವಿಜ್ಞಾನದಲ್ಲಿ ಏನಾಗ್ತದೆ? ಏನೋ ಒಂದು ತಲೆಕೊರಿಯುವ ವಿಷಯ ಇರ್ತದೆ. ಅದರ ಕುರಿತ ಹೆಚ್ಚಿನ ಸತ್ಯ ತಿಳಿಯಬೇಕೆಂಬುದು ಅಲ್ಲಿನ ಉದ್ದೇಶ. ಅದೇ ರೀತಿ ಕಲೆಯೂ. ಇಲ್ಲೂ ತಲೆಕೊರೆಯುವ ವಿಷಯಗಳೇ. ಆದರೆ ಕಲೆಯಲ್ಲಿ ಸತ್ಯಕ್ಕಿಂತ ಹೆಚ್ಚು ಸೌಂದರ್ಯ ಮುಖ್ಯ ಆಗ್ತಾ ಹೋಗ್ತದೆ. ನಮ್ಮ ಈ ದೇವರು, ಅವರ ಕತೆಗಳೆಲ್ಲ ಎಷ್ಟು ಚಂದ ಚಂದ ಇರ್ತವೆ ನೋಡಿ, ಹಾಗೆ. ಅದು ಜನಮೆಚ್ಚಬೇಕೆಂದು ಬರೆದದ್ದಲ್ಲ. ಇನ್ನೇನನ್ನೋ ತಿಳಿಯುವ/ತಿಳಿಸುವ ಸಲುವಾಗಿ ಹುಟ್ಟಿಕೊಂಡದ್ದು. ಅಂದರೆ, ಕಲೆಯ ಉದ್ದೇಶ ಆಯಾ ದೇಶಕಾಲಕ್ಕೆ ತಕ್ಕಂತಹ ಶಿಕ್ಷಣವೇ ಹೊರತು ಮನರಂಜಿಸುವುದಲ್ಲ.
ಶಿಕ್ಷಣವೆಂದ ತಕ್ಷಣ ಅದೊಳ್ಳೆ ಒರಟು ಒರಟಾಗಿರಬೇಕಾಗಿಲ್ಲ, ಮತ್ತೆ ಮೇಲಿಂದ ಅದನ್ನು ಇಷ್ಟಪಟ್ಟು ಕಲಿಯಬೇಕೆಂದು ಮಕ್ಕಳನ್ನು ಕಷ್ಟಪಟ್ಟು ಕುಳ್ಳಿರಿಸಿ ಮೋಟಿವೇಷನ್ ಭಾಷಣ ಮಾಡಬೇಕಾಗೂ ಇಲ್ಲ. ಶಿಕ್ಷಣದ ಸ್ವರೂಪವೇ ಚಂದ ಚಂದಕಿರಬಹುದು ಎಂಬುದನ್ನು ತೋರಿಸುವುದು ಕಲಾಶಿಕ್ಷಣವೇ. ಕಲೆಯೆಂದರೆ ಯೂಟ್ಯೂಬಲ್ಲಿ ಕಾಣುವ ಹಾಗೆ ಬಣ್ಣ ತುಂಬುವುದಕ್ಕೆ, ಕ್ಯಾಮರಾ ತಿರುಗಿಸುವುದಕ್ಕೆ ಸೀಮಿತವಲ್ಲ. ಅದು ನಮಗೆ ಸಿಕ್ಕಿದ ಈ ಒರಟು "ಸತ್ಯ" ಆಧಾರಿತ ಶಿಕ್ಷಣದ ಪ್ರತಿಫಲ ಅಷ್ಟೇ.
ಕಲಾ ದೃಷ್ಟಿಕೋನದ ಮೂಲಕ ನಾವು ಇತಿಹಾಸ, ರಾಜಕೀಯ ಅಥವಾ ನಿಮಗೆ ಬೇಕಬೇಕಾದ್ದೆಲ್ಲ ಚಂದಕೆ ತಿಳಿದುಕೊಳ್ಳಲು ಸಾಧ್ಯವಿರುವಾಗ ಅದನ್ನೊಂದು ಶಿಕ್ಷಣಪದ್ಧತಿಯಾಗೇ ಪರಿಗಣಿಸಿದ್ದರೆ ಅದಕ್ಕೊಂದು ಸಮಾಜದಲ್ಲಿ ಬೆಲೆ ಇರುತ್ತಿತ್ತು. ಕಲೆಯ ಹುಡುಕುವ ಭರದಲ್ಲಿ ಹೈವೇ ಬಿಟ್ಟು ಪಕ್ಕಕ್ಕೆ ತಿರುಗಿದಾಗ ಅಕ್ಕಪಕ್ಕದಲ್ಲೇ ಇದ್ದ ಇನ್ನೊಂದಷ್ಟು ಏನೇನೋ ಕಾಣಸಿಗುತ್ತಿತ್ತು. ಅದೆಲ್ಲ ಈ ಮೆದುಳಲ್ಲಿ ಒಟ್ಟುಸೇರಿದಾಗ ಆಯಾ ದೇಶಕಾಲದ ಪರಿಸ್ಥಿತಿ ಅರ್ಥವಾಗುತ್ತಿತ್ತು. ಅದಕ್ಕೆ ತಕ್ಕಂತೆ ಒಂದು ಜೀವನದೃಷ್ಟಿ ಬೆಳೆಯುತ್ತಿತ್ತು. ಅದು ತನಗೆ ವಿಶಿಷ್ಟವಾಗಿರುವುದರಿಂದ ಅಭಿವ್ಯಕ್ತಿಸುವ ತುಡಿತ ಉಂಟಾಗುತ್ತಿತ್ತು. ಅದಕ್ಕೊಂದು ಮಾರ್ಗ ಬೇಕೆನಿಸಿ, ಇತಿಹಾಸ ಕೆದಕಿದಾಗ ಕಂಡ ಕಾಲುದಾರಿಗಳ ಅಭಿವೃದ್ಧಿಗೆ ಮನಸ್ಸು ಸಿದ್ಧವಾಗುತ್ತಿತ್ತು. ಮುಂದೆ, ಅದೊಂದು ಗಲ್ಲಿಯಾಗಿ ಹೊಸರುಚಿಯ ಇನ್ನಿಬ್ಬರಿಗೆ ತೋರಿಸಿ, ಇನ್ನೊಂದೆರಡು ಮಾರ್ಗದ ಅಭಿವೃದ್ಧಿಗೆ ನೆರವಾಗುತ್ತಿತ್ತು. ಶಿಕ್ಷಣದ ಉದ್ದೇಶ ನಿಜವಾಗಿಯೂ ಸಾರ್ಥಕಗೊಳ್ಳುತ್ತಿತ್ತು.
ಆದರೀಗ..ಕಲೆ ಯಾಕೆ ಒಳ್ಳೆಯದೆಂಬುದನ್ನೂ ಕಿವಿ ಹಿಂಡಿ ಅರ್ಥ ಮಾಡಿಸಬೇಕಾದ ಪರಿಸ್ಥಿತಿ!


