ದೇವರೆಂಬುದು ಎಷ್ಟು ಚಂದದ ಪರಿಕಲ್ಪನೆ!
- sushrutha d
- Jan 23, 2024
- 3 min read
Updated: Jun 9, 2025
ಕಲೆಗೊಂದು ಭೂಮಿಕೆ 18 : ಹಿಂದೂ, ಹಿಂದೂಯಿಸಂ, ಹಿಂದೂ ಧರ್ಮ ಎಂದಾಕ್ಷಣ, ಮತ್ತದಕ್ಕೆ ಸಂಬಂಧಪಟ್ಟ ದೇವರು, ಆತ್ಮ, ಜನ್ಮ ಮುಂತಾದ ಪರಿಕಲ್ಪನೆಗಳ ಕುರಿತು ಮೂಗಿನಲ್ಲಷ್ಟೇ ಗಾಳಿ ಬಿಟ್ಟು ತಲೆ ಅಡ್ಡಡ್ಡಾಡಿಸಿ ನಗುವ ರಾಜಕೀಯ ಜಂತುಗಳು ಈಗ ನಮ್ಮ ನಡುವೆ ಇವೆ. ಇವುಗಳ ಮೂಗಿನ ಗಾಳಿಯ ನೇರಕ್ಕೆ ಅದಾವುದೂ ವೈಜ್ಞಾನಿಕವಾಗಿಲ್ಲ, ಜೊತೆಗೆ ದಬ್ಬಾಳಿಕೆ, ದಾಸ್ಯ, ಸಂಘರ್ಷ ಮೊದಲಾದವಕ್ಕೆ ಎಡೆ ಮಾಡಿಕೊಟ್ಟಿದೆ ಎಂಬ ತಕರಾರು ಕಾಣುತ್ತಿರುತ್ತದೆ. ಅದದೇ ತರಕಾರಿಯ ಸಾಂಬಾರು ಇನ್ನೆಷ್ಟು ದಿನ ಮಾಡುತ್ತೀರಿ ಎಂದವಕ್ಕೆ ಸಿಟ್ಟು.
ಅದೇ ರೀತಿ ಈ ಭಕ್ತಿ, ಆಚರಣೆ, ತೋರಿಕೆಗೇ ಪ್ರಾಮುಖ್ಯತೆ ಕೊಡುವವು ಅದಕ್ಕೊಂದು ರೀತಿ ಕಣ್ಣು ಮುಚ್ಚಿದರೆ, ಉಳಿದದ್ದಕ್ಕೆಲ್ಲ ಇನ್ನೊಂದು ರೀತಿ ಕಣ್ಣು ಮುಚ್ಚಿ ಕೂರುತ್ತವೆ. ಕಟ್ಟಳೆ ಹೆಚ್ಚಿದಷ್ಟು ಧರ್ಮ ಹೆಚ್ಚು ಎಂದು ನಂಬುವವರಿವರು. ಮುಗ್ಧತೆ ಎಂದು ಅವರ ದಡ್ಡತನ/ಉದಾಸೀನತೆಗೆ ಅವರಿಟ್ಟ ಹೆಸರು, ಮತ್ತದು ಒಳ್ಳೆಯದು ಎಂದೇ ನಂಬಿದ ಮುಗ್ಧರವರು! ಹಯ್ಯೋ ರಾಮ!
ಇವರಿಗೆ ಪ್ರಶ್ನೆ ಎಂಬುದು ಮೈಲಿಗೆ. ಇರುವ ಕಟ್ಟಳೆಗೆ ಇನ್ನೊಂದು ಕಟ್ಟಳೆ ಸೇರಿಸಿ ಪಾಲಿಸಬೇಕು, ಹೊರತು ಪ್ರಶ್ನಿಸುವಂತಿಲ್ಲ. ಸಂಪ್ರದಾಯವನ್ನು ಮುಂದುವರೆಸಲು ಇನ್ನೊಬ್ಬರ ಅಪ್ಪಮ್ಮನನ್ನು ಬೈಗುಳಗಳ ಮೂಲಕ ಕರೆತರುವ ಈ ರಾಜಕೀಯ ಜಂತುಗಳಿಗೆ ಬೈಸಿಕೊಳ್ಳುವುದೆಂದರೆ ದೇವರ ನೈವೇದ್ಯ. ತಿನ್ನದಿರುವಂತಿಲ್ಲ, ತಿಂದು ಬಾಯಿ ತೊಳೆಯುವಂತಿಲ್ಲ. ಆಹಾ...ಚಪ್ಪರಿಸಬೇಕಾದ ಕಟ್ಟಳೆ!
ಈ ರಾಜಕೀಯ ಜಂತುಗಳ ವಿಶೇಷತೆ ಎಂದರೆ ಇವು ಮಾನವರಾಗಿ ಹುಟ್ಟುತ್ತವೆ. ಮತ್ತೆ ಈ ಸುತ್ತಮುತ್ತಲಿನ ಪ್ರಭಾವಕ್ಕೆ ಒಳಗಾಗಿ ಸುಮಾರು ಮೂವತ್ತು ವರ್ಷಗಳ ನಂತರ ರಾಜಕೀಯ ಜಂತುವಾಗಿ ಪರಿವರ್ತನೆಗೊಳ್ಳುತ್ತವೆ. ಹುಳು ಕೋಶಕಟ್ಟಿ ಚಿಟ್ಟೆಯಾಗ್ತದಲಾ ಹಾಗೆ. ಆದರೆ ಈ ಜಂತುಗಳ ಮೆದುಳು ಕೋಶದೊಳಗೇ ಬಾಕಿ!
ಅಲ್ಲಿ ಹಾಗಾಗಿದೆ, ಇಲ್ಲಿ ಹೀಗಾಗಿದೆ. ಇಸವಿ ಲೆಕ್ಕ ಸಮೇತ ತಗೋ ಲಿಂಕು, ನಿಮ್ಮವ್ನವನ್ನೋಡು...ಅಂತ ತನ್ನ ಗುಂಪಿನ ಜಂತುಗಳು ಕತ್ತರಿಸಿದ ವೀಡಿಯೋಗಳನ್ನು ಅತ್ಲಾಗಿ ಇತ್ಲಾಗಿ ವಾಲಿಬಾಲ್ ಆಡ್ದಂಗೆ ಹಾಕ್ತಿರ್ತವೆ. ನಂಗ್ ಮೆದುಳಿಲ್ಲ ಸರಿ, ಆದ್ರೆ ಆ ಜಂತುಗೆ ಮೆದುಳಿದೆ ನೋಡೋ ನಿಮ್ಮೌನ್ ಅಂತ.
ಇಪ್ಪತ್ನಾಲ್ಕು ಗಂಟೆ ಅಷ್ಟೇ ಇವೆಲ್ಲ. ಆಮೇಲಿಂದ ಹೊಸಾ ಸ್ಟೋರಿ, ಹೊಸಾ ಲಿಂಕು, ಹೊಸಾ ಜಗ್ಳ, ಹೊಸಾ ಬೈಗ್ಳ. ಫುಲ್ ಸಿಸ್ಟಮ್ ರೀಬೂಟ್. ರಿಪೀಟ್.
ಇಪ್ಪತ್ನಾಲ್ಕು ಗಂಟೆ ಆದ್ಮೇಲಿಂದ ಹೊಸಾ ಸ್ಟೋರಿ, ಹೊಸಾ ಲಿಂಕು, ಹೊಸಾ ಜಗ್ಳ, ಹೊಸಾ ಬೈಗ್ಳ. ಫುಲ್ ಸಿಸ್ಟಮ್ ರೀಬೂಟ್. ರಿಪೀಟ್.
ಇಪ್ಪತ್ನಾಲ್ಕು ಗಂಟೆ ಆದ್ಮೇಲಿಂದ ಹೊಸಾ ಸ್ಟೋರಿ, ಹೊಸಾ ಲಿಂಕು, ಹೊಸಾ ಜಗ್ಳ, ಹೊಸಾ ಬೈಗ್ಳ. ಫುಲ್ ಸಿಸ್ಟಮ್ ರೀಬೂಟ್. ರಿಪೀಟ್.
....
...
..
.
ಚೇಂಜ್ ಆಗ್ದೇ ಇರೋದು ಒಂದೇ. ಅದಿವುಗಳ ರಾಜಕೀಯ ನಿಲುವು ಮತ್ತು ಅದಕ್ಕೋಸ್ಕರ ಏನು ಬೇಕಾದರೂ ಮಾಡಬಲ್ಲಷ್ಟು ನಿಷ್ಠೆ. ಅದಕ್ಕೆ ಮಾತ್ರ ಯಾವ ಬಂಧಗಳೂ ಇಲ್ಲ. ಸರಿ, ತಪ್ಪು, ಸತ್ಯ, ನೈತಿಕತೆ, ಧರ್ಮ, ಅಧರ್ಮ, ವೈಜ್ಞಾನಿಕತೆ, ಚಂದದ ಯಾವ ಸಂಕೋಲೆಯನ್ನೂ ಲೆಕ್ಕಿಸದ ಹುಚ್ಚುನಾಯಿ ಜಾತಿಗೆ ಸೇರಿದ ಈ ಜಂತುಗಳನ್ನು ಕ್ಯಾನ್ಸಲ್ ಮಾಡುವವರಾರು ಗೊತ್ತಿಲ್ಲ!
ಆಶ್ಚರ್ಯವೆಂದರೆ ಅವುಗಳಿಗೆ ಅವುಗಳದ್ದೇ ಆದ ಒಂದು ಅಲಿಖಿತ ಸಂವಿಧಾನವಿರುವುದು. ಇದರ ಪ್ರಕಾರ, ಈ ಜಂತುಗಳು ತನ್ನ ಚಲನೆಯ ದಿಕ್ಕನ್ನು ಎಂದಿಗೂ ಬದಲಿಸುವಂತಿಲ್ಲ ಮತ್ತು ಆ ದಿಕ್ಕಿಗನುಸಾರವಾಗಿ ಅವುಗಳ ಜಾತಿ ನಿಗದಿತವಾಗುತ್ತದೆ. ಮೂವತ್ತು ವರ್ಷದಲ್ಲಿ ಎಡಕ್ಕೆ ತಿರುಗಿದವು, ಎಂದಿಗೂ ಎಡ ದಿಕ್ಕಿನಲ್ಲಷ್ಟೇ ಚಲಿಸಬೇಕು. ಬಲಕ್ಕೆ ತಿರುಗಿದವು, ಬಲಕ್ಕಷ್ಟೇ ಚಲಿಸಬೇಕು. ಒಂದೋ ಅಲ್ಲೇ ನಿಲ್ಲಬಹುದು, ಅಥವಾ ಆಯ್ದ ದಿಕ್ಕಿನತ್ತ ಮುಂದುವರಿಯಬಹುದು. ಇವೆರಡೇ ಆಯ್ಕೆ. ಒಂದಕ್ಕೊಂದು ಎಂದಿಗೂ ಸಂಧಿಸುವಂತಿಲ್ಲ. ಮಾತನಾಡುವಂತಿಲ್ಲ. ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಜಾತಿಭ್ರಷ್ಟರಾಗುವಂತಿಲ್ಲ. ದಿಕ್ಕು ತಪ್ಪದಂತೆ ತನ್ನ ಮುಂದಿರುವ ಜಂತುವಿದನ್ನು ಮೂಸುತ್ತಾ ನೆಕ್ಕುತ್ತಾ ಲೈಕಿಸುತ್ತಾ ಶಾಲು ಹೊದೆಸುತ್ತಾ ಇರಬೇಕು ಎಂಬುದು ಇವುಗಳಿಂದ ಇವುಗಳಿಗಾಗಿ ಇವುಗಳಿಗೋಸ್ಕರ ಸಿದ್ಧಪಡಿಸಿದ ಸಂವಿಧಾನದ ಆಶಯ.
ಎಲ್ಲವನ್ನೂ ತನ್ನ ಮೂಗಿಂದ ಬಿಟ್ಟ ಗಾಳಿಯ ನೇರಕ್ಕೆ ತಂದು ತೂಕ ನೋಡುವ ಇವಕ್ಕೆ ನಿಜವಾದ ಪರಿಕಲ್ಪನೆಗಳತ್ತ ಮುಖಮಾಡುವ ಶಕ್ತಿಯಿಲ್ಲ. ಅದರಲ್ಲಿನ ಸೌಂದರ್ಯವನ್ನು ಅನುಭವಿಸುವಷ್ಟು ಸಹೃದಯತೆಯೂ ಇಲ್ಲ. ಎಲ್ಲರ ಜೀವನದಲ್ಲಿಯೂ ಇರುವಂತಹ ಪ್ರಶ್ನೆಗಳಿಗೆ ಚಂದಕೆ, ಸಮಾಧಾನದಿಂದ, ಕಥೆ ಹೇಳುತ್ತಾ ವಿವರಿಸುವ ರೀತಿಯ ಗಮನಿಸುವ ಸೌಜನ್ಯವೂ ಇಲ್ಲ. ಕೊಟ್ಟ ವಿವರಣೆಗಳಿಗೆ ಸೆಡ್ಡು ಹೊಡೆದು ಇನ್ನೊಂದೇ ರೀತಿಯಲ್ಲಿ ಅದೆಲ್ಲವ ವಿವರಿಸಬಲ್ಲ ಚಾಕಚಕ್ಯತೆಯಿರಲು ಮೆದುಳೆಂಬುದೇ ಇಲ್ಲ.
ದೇವರೆಂಬುದು ಎಷ್ಟು ಚಂದದ ಪರಿಕಲ್ಪನೆ! ನೀವು ಯಾವುದೇ ಕ್ಷೇತ್ರದವರಾಗಿರಿ, ಅದರ ಮೂಲಕ್ಕೆ ಇಳಿದಷ್ಟು ಅದರ ಅಮೂರ್ತ ರೂಪಕ್ಕೆ ಹತ್ತಿರಾಗುತ್ತಾ ಹೋಗುತ್ತೀರಿ. ನೀವು, ನಿಮ್ಮಪ್ಪ, ನಿಮ್ಮಜ್ಜ...ಮತ್ತೆ ಮತ್ತೆ ಹೋದ ಹಾಗೆ ಅಮೂರ್ತವೇ! ಗಣಿತವ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಶುರುಮಾಡಿದ್ದು ನಂಬರಲ್ಲಿ. ಕೊನೆಕೊನೆಗೆ ನಂಬರ್ ಕಡಿಮೆ ಆಗಿ ಆಲ್ಫಾಬೆಟ್ ಜಾಸ್ತಿ ಆಯ್ತು. x, y, z, dx, dy ಎಷ್ಟೂ ಇದೆ. ಆದ್ರೂ ಆ ಆಲ್ಫಾಬೆಟ್ಗಳು ಅಭಿವ್ಯಕ್ತಿಸ್ತಿರೋದು ನಂಬರನ್ನೇ. ಗಣಿತ ಕಷ್ಟ ಆಗುವವರಿಗೆ 'ಕಲೆ'ಯನ್ನು ತೆಗೆದುಕೊಳ್ಳೋಣ. ಅದರಲ್ಲಿ ಪ್ರತಿಷ್ಠಾಪನ ಕಲೆ/ಇನ್ಸ್ಟಾಲೇಷನ್ ಎಂಬುದೊಂದು ಪ್ರಚಲಿತ ಪ್ರಕಾರ. ಒಂದು ವಸ್ತುವಿಗೆ ಅಸ್ತಿತ್ವವಿದೆ ಎಂದರೆ ಅದು ಇನ್ಸ್ಟಾಲೇಷನ್ನೇ ಅನ್ನುವಷ್ಟು ವ್ಯಾಪ್ತಿ ಅದಕ್ಕಿದೆ. ಈ ಕುರಿತು ವಿವರಿಸಿ ವಿವರಿಸಿ ಮೊದಲೇ ಬರೆದಾಗಿದೆ. ಬೇಕಾದರೆ, ಇದೇ ಸರಣಿಯಲ್ಲಿ ಎಲ್ಲೋ ಇದೆ, ಹುಡುಕಿಕೊಳ್ಳಬಹುದು. ಬಿಡಿ, ಈಗ ಕಥೆಗೆ ಬರುವ. ಕಥೆಯಲ್ಲದ್ದು ಯಾವುದಿದೆ?! ಒಂದು ಗಿಡ ಬೆಳೆಯುತ್ತಿದೆ ಎನ್ನುವುದೂ ಒಂದು ಕಥೆಯೇ. ಹಾಗೆಯೇ ಅದು ವಿಜ್ಞಾನವೂ ಹೌದು, ಡಿಸೈನೂ ಹೌದು, ಇಂಜಿನಿಯರಿಂಗೂ ಹೌದು, ಸಂಗೀತವೂ ಹೌದು, ಕಲೆಯೂ ಹೌದು, ಅಧ್ಯಾತ್ಮವೂ ಹೌದು, ಅಥವಾ ಇನ್ನು ಏನೇನಿದ್ಯೋ ಎಲ್ಲವೂ ಹೌದು.
ವಿಜ್ಞಾನಿಗೆ ಎಲ್ಲವೂ ವಿಜ್ಞಾನವೇ. ಇಂಜಿನಿಯರಿಗೆ ಅದೇ ವಸ್ತು-ಪ್ರಕ್ರಿಯೆಗಳು ಇಂಜಿನಿಯರಿಂಗು. ಡಿಸೈನರಿಗೆ, ಅದೇ ವಸ್ತು-ಪ್ರಕ್ರಿಯೆಗಳು ಡಿಸೈನು. ಸಂಗೀತಗಾರನಿಗೆ ಅದೇ ವಸ್ತು-ಪ್ರಕ್ರಿಯೆಗಳು ಸಂಗೀತ. ಕಥೆಗಾರನಿಗೆ ಅದೇ ವಸ್ತು-ಪ್ರಕ್ರಿಯೆಗಳು ಕಥೆ. ಅಂದರೆ, ನಾವು ತಿಳಿದುಕೊಳ್ತಾ ಹೋದ ಹಾಗೆ ಒಂದು ಹಂತದಲ್ಲಿ ಎಲ್ಲವೂ ಎಲ್ಲವೂ ಆಗಬಲ್ಲದು ಎನ್ನುವುದು ಅರ್ಥ ಆಗ್ತದೆ. ಈ ಎಲ್ಲವೂ ಎಲ್ಲವೂ ಎನ್ನುವುದಕ್ಕೆ ಏನಾದರೊಂದು ಪದ ಬೇಕಲ್ಲ! ಅದನ್ನು ಹಾಗೆಯೇ ಇಟ್ಟು ಬರಿತಾ ಹೋದ್ರೆ ನಾನು ಬರಿವ ವಾಕ್ಯದ ಹಾಗಾದೀತು. ಹಾಗಾಗದ ಹಾಗೆ ಅಂದಕಾಲತ್ತಿಲ್ ಒಂದು ಪದ ಇಟ್ರು, "ಬ್ರಹ್ಮ" ಅಂತ. ಅಷ್ಟೇ. ಮೋಕ್ಷ ಅಂದ್ರೂ ಅದೇ. ಮುಕ್ತಿ ಎಂದ್ರೂ ಅದೇ. ಅಹಂ ಬ್ರಹ್ಮಾಸ್ಮಿ ಅಂದ್ರೂ ಅದೇ. ಪರಮಸತ್ಯ ಅಂದ್ರೂ ಅದೇ. ಎಲ್ಲವೂ ಎಲ್ಲವೂ ಅದೇ.
ಇದು ಬರೀ ಹಿಂದೂಯಿಸಂ ಅಂತ ಮೂಗಿನಲ್ಲಿ ಗಾಳಿ ಬಿಟ್ಟು ತಳ್ಳಿ ಹಾಕದಿದ್ದರೆ ಇಸ್ಲಾಮಿನ ಸೂಫಿಸಂ ಅಲ್ಲೂ ಕೂಡ ಇದೇ ಇರೋದು ಎಂಬುದು ಕಾಣಿಸುತ್ತದೆ. ಬ್ರಹ್ಮನ ಬದಲು ಬೇರೇನೋ ಪದ ಇದ್ದರೂ ಕಬೀರರ ಭಜನೆಗಳೂ ಇದನ್ನೇ ಹೇಳುವುದು ಎಂದು ತಿಳಿಯುತ್ತದೆ. ಬುದ್ಧಿಸಮ್ಮಿನ ಮಾಧ್ಯಮಾಂಕ ಫಿಲಾಸಫಿಯೂ ಇದೇ, ಜೈನಿಸಮ್ಮಿನ ಅನೇಕಾಂತವಾದವೂ ಇದೇ. ಪೋಸ್ಟ್ ಮಾಡರ್ನಿಸಮ್ಮಿನಲ್ಲಿ ಅಡಗಿರುವ ಆಶಯವೂ ಇದೇ. ಎಲ್ಲವೂ ಎಲ್ಲವೂ.
ಇದನ್ನು ಅರ್ಥಮಾಡಿಕೊಂಡು ವಿವರಿಸಲಿಕ್ಕೆ ಎಷ್ಟು ಜನ ಹೇಗೇಗೆಲ್ಲ ಯಾವ ಯಾವ ಮಾಧ್ಯಮದ ಮುಖಾಂತರವೆಲ್ಲ ಕಷ್ಟ ಬಂದಿದ್ದಾರೆ/ಬರುತ್ತಿದ್ದಾರೆ ಎಂದು ನೋಡುದೇ ಒಂದು ಮಜಾ. ರಾಮ, ವಿಷ್ಣು, ಶಿವ, ದುರ್ಗೆ ಮುಂತಾದೆಲ್ಲ ದೇವರುಗಳೂ ಈ ಬ್ರಹ್ಮವನ್ನು ವಿವರಿಸಲಿರುವ ಚಂದಚಂದದ ಟೂಲ್‌ಗಳು. ಅವಕ್ಕೊಂದೊಂದು ಚಂದದ ಕತೆ, ಚಂದದ ರೂಪ ಎಲ್ಲ ಕೊಟ್ಟು ಆಹಾ ಓಹೋ ಅನ್ನಿಸುವ ಹಾಗೆ ಉದಾಸೀನದ ನೈತಿಕ ಮೌಲ್ಯಗಳ ಪರಿಚಯಿಸಲು ಯಾವನೋ ಎಷ್ಟು ತಲೆ ಉಪಯೋಗಿಸಿರ್ಬೇಡ! ಈ ಪರಿಕಲ್ಪನೆಗಳೇ ಚಂದ, ಚಪ್ಪರಿಸಬೇಕಾದ್ದು ಇದನ್ನು. ಅದು ಬಿಟ್ಟು ಇದನ್ನೆಲ್ಲ ಯಾವನೋ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡನೆಂದೋ, ವೈಜ್ಞಾನಿಕವಲ್ಲವೆಂದೋ, ತನ್ನ ಮೂಗಿನ ನೇರಕ್ಕಿಲ್ಲವೆಂದೋ, ತಲೆಯ ಮೇಲೇ ಹೋಗುತ್ತದೆಂದೋ, ತನ್ನ ಸೊಕ್ಕಿನಡಿ ಬರುವುದಿಲ್ಲವೆಂದೋ ಅಥವಾ ಇನ್ಯಾವುದೋ ರೀಸನ್ನಿನ ಸಲುವಾಗಿ ಎಲ್ಲವ ಮೂಲೆಗೆ ತಳ್ಳಿ, ರಾಜಕೀಯವನ್ನೇ ಉಸಿರಾಡುವ ಜಂತುಗಳಾಗುಳಿದೂ, ತನಗರಿವಿಲ್ಲದೇ ಬ್ರಹ್ಮವನ್ನು ಪ್ರತಿನಿಧಿಸುವವರ ನೋಡಿ ಅನುಭವಿಸಲು ಮಾತ್ರ ಯಾವುದೋ ಜನ್ಮದಲ್ಲಿ ಪುಣ್ಯ ಮಾಡಿರಬೇಕು.



