ಒಂದು ನಾಟಕ
- sushrutha d
- Mar 2, 2021
- 2 min read
Updated: Sep 22, 2024
ಪ್ರವೇಶ.
ಕಳೆದ ವರ್ಷ ಕ್ರಿಸ್ಟೋಫರ್ ಅವರು ಸಹನಿರ್ದೇಶಿಸಿದ ಕೆಂಡೋನಿಯನ್ಸ್ ಅನ್ನು ಮೈಸೂರಿನ ರಂಗಾಯಣದಲ್ಲಿ ನೋಡಿದ್ದೆ. ಅವರು ಸೆಟ್‌ವರ್ಕ್‌ಗಳನ್ನು ಬಳಸಿದ ರೀತಿ ನನಗೆ ಬಹಳವೇ ಹಿಡಿಸಿತ್ತು. ಮೊನ್ನೆ ಅವರದೇ ನಿರ್ದೇಶನದ ಆಮಿ ಪಯ್ಣಾರಿ ಸುಳ್ಯದ ರಂಗಮನೆಯಲ್ಲಿತ್ತು. ಮಾನವನ ಯೋಚನೆಗಳ abstractness ಅನ್ನು ಅರ್ಥಮಾಡಿಕೊಂಡು ಅದನ್ನು ಸಮರ್ಪಕವಾಗಿ ಅವರು ನಾಟಕಗಳಲ್ಲಿ ಬಳಸಿಕೊಳ್ಳುತ್ತಿರುವಂತೆ ಕಂಡುಬಂತು. ಅಂದು, ಬರೀ ರಟ್ಟಿನ ಪೆಟ್ಟಿಗೆಯು ಚಕ್ರ, ಕಾರು, ಸೂಟ್‌ಕೇಸ್ ಎಲ್ಲದೂ ಆಯ್ತು. ಇಂದು, ಮನುಷ್ಯನನ್ನೇ ಸೆಟ್‌ಗಳಾಗಿ ಪರಿವರ್ತಿಸಿದ್ದಾರೆ. ಮೂವಿಂಗ್ ಸೆಟ್ಸ್. ಅವರವರೇ ಬದಲಾಗುವುದು. ಪಾತ್ರಗಳೂ ಅವರೇ, ಆಹಾರ್ಯ(ಡ್ರೆಸ್) ಬದಲಿಸಿದರೆ ಪರಿಕರಗಳೂ ಅವರೇ. ಅಷ್ಟೇ ಸಾಕಾಗುತ್ತದೆ ಅರ್ಥ ಮಾಡಿಕೊಳ್ಳಲು ಎಂಬುದನ್ನು ಅವರು ಬಹಳ ಚಂದಕೆ ಯಾವುದೇ ಆಡಂಬರವಿಲ್ಲದೆ ನಿರೂಪಿಸಿದ್ದಾರೆ.
ಎಲ್ಲವೂ ಓಪನ್ ಆಗಿಯೇ ಎದುರೆದುರೇ ಮಾಡಿದ್ದು ಮತ್ತೊಂದು ಮೆಚ್ಚಬೇಕಾದ ಅಂಶ. ವೇದಿಕೆಯ ಒಳಗೊಂದು ವೇದಿಕೆ, ಮುಖ್ಯ ವೇದಿಕೆಯ ಹೊರಗೆ ಇದ್ದವರಿಗೂ ಸಂಭಾಷಣೆ, ಅವರನ್ನೀಗ ಪಾತ್ರಗಳಾಗಿ ಪರಿಗಣಿಸಬೇಕೋ ಬೇಡವೋ ಎಂಬ ಒಂದು ಸಣ್ಣ ಗೊಂದಲ, ಹೊರಗಿದ್ದವರು ಪಾತ್ರಗಳ ರೂಪ ತಳೆದು ಒಳಗಿನ ವೇದಿಕೆಗೆ ಬರುವ ರೀತಿ ಎಲ್ಲವನ್ನೂ ಗಮನಿಸಿದರೆ ಅನುಭವಿಸದೆ ಇರಲು ಸಾಧ್ಯವಿಲ್ಲ. ಸದ್ಯ ಪ್ರಚಲಿತದಲ್ಲಿರುವ thug life, tik tok, India wants to know ಇತ್ಯಾದಿಗಳು ನಾಟಕದ ಭಾಗವಾಗಿದ್ದು ಮನರಂಜನೆಯ ಸಾಮಾಗ್ರಿಗಳಾಗಿ ಮಾತ್ರವಲ್ಲ, ಸಮಕಾಲೀನ ಅವಧಿಯ ಪರಿಚಯವಾಗಿಯೂ ಹೌದು, ಅದರ ಮುದ್ರಣವಾಗಿಯೂ ಹೌದು.
ಕೆಲವೊಂದು ಕಡೆಗಳಲ್ಲಿ ಕೇವಲ ಅರ್ಥ ಮಾಡಿಸಬೇಕೆಂದು ಕೆಲವು ಸಂಭಾಷಣೆಗಳಿದ್ದಂತೆ ಭಾಸವಾಯ್ತು. ಉದಾಹರಣೆಗೆ, "ನೀನು ಮರ, ಮರ ಮಾತಾಡುದಿಲ್ಲ" ಎಂಬಂತಹದ್ದು. ತಮಾಷೆಗಾಗಿ ಇದ್ದಂತೆ ಕಂಡರೂ ಅದರ ಮೂಲೋದ್ದೇಶ ಅದಲ್ಲ ಎಂಬುದು ಸ್ಪಷ್ಟ. ಮತ್ತೆ, ಕ್ರಿಸ್ಟೋಫರ್ ಅವರೇ ಲೈಟಿಂಗ್ ಅಲ್ಲಿ ಕೂತಿದ್ದಾಗ ಇದ್ದ ಲೈಟಿಂಗ್ಸ್, ಅವರ ಅನುಪಸ್ಥಿತಿಯಲ್ಲಿ ಇರಲಿಲ್ಲ. ಲೈಟ್‌ಗಳ ಬಳಕೆ ಆಗಲೇ ಇಲ್ಲ ಎನ್ನುವಷ್ಟು ಕಡಿಮೆಯಾಗಿತ್ತು. ಹಾಗೆಂದು ಸುಮ್ಮಸುಮ್ಮನೇ ಬದಲಿಸಬೇಕಿತ್ತೆಂದೂ ಅಲ್ಲ. ಅವರ ಎರಡೂ ನಾಟಕಗಳಲ್ಲೂ ಕೊನೆಗೆ ಜನರನ್ನು ಪ್ರಶ್ನಿಸಿದ್ದು, ಸ್ವಲ್ಪ ತುರುಕಿದಂತೆ ಕಂಡಿತು. ಅಂದರೆ, ಉದ್ದೇಶಪೂರ್ವಕವಾಗಿ ಒಂದು ನೀತಿಯನ್ನು ತೋರಿಸಿ, ನೀವು ಹೀಗಿದ್ದೀರಾ ಎಂದು ಜನರನ್ನು ಕೇಳಿದಂತೆ. ಅದನ್ನು ನಾಟಕರೂಪದಲ್ಲಿ ಬಿಂಬಿಸಿದ ಮೇಲೆಯೂ ಬಾಯಿಬಿಟ್ಟು ಕೇಳದೆ ಹೇಳದೆ ಇದ್ದರೆ ನಾಟಕದ ಮೌಲ್ಯ ಹೆಚ್ಚುತ್ತಿತ್ತೆಂಬ ಭಾವನೆ ನನ್ನದು.
ವಿದ್ಯಾರ್ಥಿಯು ಪಾಠ ಕೇಳಲು ಜನಗಳ ಮಧ್ಯ ಕೂತಿದ್ದು, ಕೂತ ತಕ್ಷಣ ಮೊಬೈಲಲ್ಲಿ ವಿಡಿಯೋ/ಫೋಟೋ ತೆಗೆಯಹೊರಟದ್ದು ನಿಜವಾಗಿಯೂ ಈಗಿನ ವಿದ್ಯಾರ್ಥಿಗಳು ಮಾಡುವಂತಹದ್ದೇ ಆಗಿದೆ. ಅದು ಪೂರ್ವನಿಯೋಜಿತವಲ್ಲವೆಂದು ತೋರುತ್ತದೆ. ನಿಜವಾಗಿ ವಿದ್ಯಾರ್ಥಿಗಳ ನಡವಳಿಕೆಗೆ ಸಂಬಂಧಿಸಿದ ಸತ್ಯವನ್ನು ಬಿಂಬಿಸಿದಂತೆಯೇ ಆದದ್ದು ಖುಷಿಯನ್ನುಂಟು ಮಾಡಿತು.
ನನಗೆ ಕೊಂಕಣಿ ಬರುವುದಿಲ್ಲ. ಆದಕಾರಣ ಎಲ್ಲಾ ಸಂಭಾಷಣೆಗಳು ಅರ್ಥವಾಗಿಲ್ಲ. ಸುಮಾರಾಗಿ ಸಾರಾಂಶದ ರೀತಿಯಲ್ಲಿ ತಿಳಿಯಿತು. ಅದು ಕನ್ನಡದಲ್ಲಿ ಸ್ವಲ್ಪ ಹೇಳಿದ್ದರಿಂದ ಇರಬಹುದು. ಹೇಳದಿದ್ದರೆ ಬೇರೆಯೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದಿತ್ತೇನೋ. ವಾಚಿಕ ತಿಳಿಯದಿದ್ದರೂ ಆಂಗಿಕ ಮತ್ತು ಆಹಾರ್ಯವನ್ನು ನೋಡಿ ಅನುಭವಿಸಲು ಸಾಧ್ಯವಿತ್ತು.
ಪಠ್ಯಪುಸ್ತಕವನ್ನು ಈ ರೀತಿಯಾಗಿ ಪರಿವರ್ತಿಸಿದ್ದಂತೂ ಬಹಳ ದೊಡ್ಡ ವಿಷಯ. ಅದೂ, ಒಂದು ಕಾವ್ಯವನ್ನು ಕಾವ್ಯಮಯವಾಗಿಯೇ ತೋರಿಸುವುದು ಹೊಸತೆಂದು ಕಾಣುತ್ತದೆ. ಲೇಖನವನ್ನು ಯಾರು ನಾಟಕರೂಪದಲ್ಲಿ ತೋರಿಸುತ್ತಾರೆ! ಎಲ್ಲದಕ್ಕೂ ಕಥೆಕಟ್ಟಿ ಆ ಮೂಲಕ ಅದರಲ್ಲಿರುವ ವಿಚಾರವನ್ನು ಮುಟ್ಟಿಸುವಂತೆ ಅಭಿನಯಿಸುತ್ತಾರೆಯೇ ವಿನಃ ಇರುವಂತೆಯೇ ಅದನ್ನು ನಾಟಕರೂಪಕ್ಕೆ ಪರಿವರ್ತಿಸಿದ್ದು ಈ ತನಕ ನಾನು ಕಂಡಿಲ್ಲ. ಅದೆಲ್ಲವನ್ನೂ ಮಾಡಿ, ಮಾಡಬಹುದೆಂದು ತೋರಿಸಿದ್ದು ನಾಟಕದ ಸಾಧ್ಯತಾವ್ಯಾಪ್ತಿಯನ್ನು ಹೆಚ್ಚಿಸಿದೆ ಅಂದುಕೊಳ್ಳುತ್ತೇನೆ. ಅಥವಾ, ನಾಟಕದ ವ್ಯಾಪ್ತಿ ಮೊದಲಿಂದಲೂ ವಿಶಾಲವೇ ಎಂದು ಪರಿಗಣಿಸುವುದಾದರೆ, ಸಿದ್ಧನಾಟಕ ಶೈಲಿಯ ಪ್ರದರ್ಶನಗಳಿಂದುಂಟಾದ ಸಂಕುಚಿತತೆಯನ್ನು ಮೀರಿದ ಪ್ರದರ್ಶನವಿದು ಎಂದು ಭಾವಿಸಬಹುದೆಂದು ತೋರುತ್ತದೆ.
ಬಹಳಷ್ಟು ಜನರಿಗೆ ಕೊಂಕಣಿ ನಾಟಕ ಅರ್ಥವಾದೀತಾ ಎಂಬ ಪ್ರಶ್ನೆ ಬಂದಿತ್ತು. ಕಥೆಯೇ ಗೊತ್ತಾಗಲಿಕ್ಕಿಲ್ಲ ಎಂದು ಕೆಲವರು. ಆ ಕಾರಣಕ್ಕಾಗಿಯೇ ನಾಟಕ ನೋಡದೆ ಇದ್ದವರೂ ಬಹಳಷ್ಟು ಜನ. ಈ ಧೋರಣೆ ಜನರಲ್ಲಿ ಇರುವವರೆಗೂ ಕಥೆ ಅರ್ಥವಾಗಬೇಕಾದ್ದೇ ನಾಟಕ ಮಾಡುವ ಉದ್ದೇಶವಾ ಎಂಬ ಪ್ರಶ್ನೆ ಸಹಜವಾಗಿ ನಾಟಕ ಮಾಡುವವರಲ್ಲಿ ಏಳುತ್ತಿರುತ್ತದೆ. ಅಷ್ಟೇ ಎಂದವರು ಕಂಡುಕೊಂಡರೆ, ನಾಟಕರಂಗವೇ ನಿಂತ ನೀರಾಗುತ್ತದೆ. ಅಂತಹ ಅನಾಹುತವನ್ನು ತಪ್ಪಿಸುವತ್ತ ಹೆಜ್ಜೆ ಹಾಕಿದ, ಹಾಕುತ್ತಿರುವ ಕ್ರಿಸ್ಟೋಫರ್ ಅವರಿಗೆ, ಅವರ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳನ್ನು ಹೇಳಲೇಬೇಕು.
ಕಥೆ ಎಂಬುದು ನಾಟಕದ ಒಂದು ಸಾಧನವಷ್ಟೆ. ಬಹಳಷ್ಟು ಅಂತಹುದೇ ಸಾಧನಗಳು ಒಂದನ್ನೊಂದನ್ನು ಅವಲಂಬಿಸಿಕೊಂಡು ಸಮನ್ವಯ ಸಾಧಿಸುತ್ತಿರುವುದನ್ನು ನಾಟಕಗಳಲ್ಲಿ ಕಾಣಬಹುದು. ಕಥೆಯನ್ನು ಹೊರತುಪಡಿಸಿಯೂ ಇತರ ಸಾಧನಗಳು ಯಾವ ರೀತಿಯಲ್ಲಿ ಅಭಿವ್ಯಕ್ತವಾಗಿದೆ, ಹೇಗೆ ಒಂದಕ್ಕೊಂದು ಪೂರಕವಾಗಿ ಸಾಗುತ್ತಿದೆ ಎಂಬುದನ್ನು ಗಮನಿಸುವ ವಿವೇಚನೆ ಎಲ್ಲರಲ್ಲೂ ಬೆಳೆದರೆ, ಸಂಭಾಷಣೆಗಳು ಅರ್ಥವಾಗದಿದ್ದರೂ ನಾಟಕವನ್ನು ಅನುಭವಿಸಲು ಸಾಧ್ಯವಾಗುತ್ತದೆ. ನಾಟಕಕ್ಕೆ ನಾವು ಮಾತಾಡುವ ಬರೆಯುವ ಭಾಷೆಯ ಹಂಗಿಲ್ಲ. ಅದಕ್ಕೆ ಅದರದ್ದೇ ಭಾಷೆಯಿದೆ. ಅದು ರಚನಾಶೈಲಿಯಲ್ಲಿರುವಂತಹದ್ದು. ಕ್ರಿಸ್ಟೋಫರ್ ಅವರ ನಾಟಕದ ಭಾಷೆಯು ಒಂದು ತೆರನಾದ ಹೊಸತನದಿಂದ ಕೂಡಿರುವ ಕಾರಣ ಇಷ್ಟುದ್ದ ಬರೆಯಬೇಕಾಯ್ತು. ಇನ್ನು ತಂಡ, ಅವರುಗಳ ಅಭಿನಯ, ಆರಿಸಿಕೊಂಡ ಕತೆ, ಕವನಗಳ ಕುರಿತು ಹೇಳುವ ತಾಳ್ಮೆ ಉಳಿದಿಲ್ಲ. ನನ್ನನ್ನು ಮನ್ನಿಸಿ ಬೇರೆಲ್ಲಾದರೂ ಓದಿಕೊಳ್ಳಬೇಕು.
ನಿರ್ಗಮನ. ಪುನಃ ಬನ್ನಿ.

