top of page

ಕೊಚ್ಚಿ-ಮುಜಿರಿಸ್ ಸ್ಟೂಡೆಂಟ್ಸ್ ಬಿಯೆನ್ನಾಲೆ 2022-23

  • Writer: sushrutha d
    sushrutha d
  • Dec 12, 2022
  • 2 min read

Updated: Sep 22, 2024

ಸುಮಾರು ನಾಲ್ಕು ವರ್ಷಗಳ ಹಿಂದೆ ನಮ್ಮ ಭಾರತದಲ್ಲಿ ಕೊಚ್ಚಿ-ಮುಜಿರಿಸ್ ಬಿಯೆನ್ನಾಲೆಯೆಂಬೊಂದು ದೊಡ್ಡ ಮಟ್ಟದ ಕಲಾಪ್ರದರ್ಶನ ನಡೆಯುತ್ತದೆ ಎಂದು ಗೊತ್ತಾಯ್ತು. ಮೈಸೂರಿನಿಂದ ನಮ್ಮ ಧೀರಜ್ ಅಣ್ಣ ಮತ್ತು ರಾಜೇಶ್ ಚಾಕೋ ಆ ವರ್ಷದ ಬಿಯೆನ್ನಾಲೆ ಕ್ಯಾಂಡಿಡೇಟ್ಸ್. ಕಲೆಗೆ ಮನ್ನಣೆಯಿಲ್ಲದ ಸಮಾಜದಲ್ಲಿ ಹತ್ತು ವರ್ಷದ ಮೊದಲು ಬೋಸ್ ಕೃಷ್ಣಮಾಚಾರಿ ಮತ್ತು ರಿಯಾಸ್ ಕೋಮುರವರು ಬಿತ್ತಿದ ಬೀಜ ಈ ಬಿಯೆನ್ನಾಲೆ. ನಡೆಸಿಕೊಂಡು ಹೋಗುವುದು ಬಿಡಿ, ಅಂತಹ ಯೋಚನೆ ಮಾಡಿರುವುದೇ ದೊಡ್ಡ ವಿಷಯ.

 

ದೇಶವಿದೇಶಗಳಿಂದ ಕಲಾವಿದರನ್ನು ಆಯ್ದು ಕೇರಳಕ್ಕೆ ಕರೆದು ಸಮಾಜದ ನಡುವಿನಲ್ಲಿ ಪ್ರದರ್ಶನ ಏರ್ಪಡಿಸುವುದು ಒಂದೆಡೆಯಾದರೆ,ದೇಶದೆಲ್ಲೆಡೆಯಿಂದ ವಿದ್ಯಾರ್ಥಿಗಳನ್ನೂ ಹೆಕ್ಕಿ ಅವಕಾಶ ಕಲ್ಪಿಸುವುದು ಇನ್ನೊಂದೆಡೆ. ಯಾವುದೇ ಕ್ಷೇತ್ರವಿರಲಿ, ಬೋಳುತಲೆ, ಬಿಳಿತಲೆ, ಡೈತಲೆಗಳೆಲ್ಲವೂ ವಿದ್ಯಾರ್ಥಿಗಳನ್ನು ಇನ್ನೂ ಏನೂ ತಿಳಿಯದವರೆಂದು ಪರಿಗಣಿಸುವಾಗ ಇವರುಗಳು ಕಪ್ಪುತಲೆ, ಹಸಿರುತಲೆ, ನೇರಳೆತಲೆ, ಮಿಶ್ರಿತತಲೆಗಳವರಿಗೂ ವೇದಿಕೆ ಕಲ್ಪಿಸಿದ್ದು ಕೊಚ್ಚಿ ಬಿಯೆನ್ನಾಲೆಯ ಹೆಗ್ಗಳಿಕೆ. ಪರೀಕ್ಷೆ ಪಾಸಾಗಲಷ್ಟೇ ಲಾಯಕ್ಕಾದ ಸಿಲೆಬಸ್ಸಿನ ಚಕ್ರಕ್ಕೆ ಸಿಲುಕದೆ ಸ್ವಂತಿಕೆಯುಳ್ಳ ವಿದ್ಯಾರ್ಥಿಗಳೂ ಇರುತ್ತಾರೆ ಎಂದು ಗಮನಿಸಿದ ಉರುಟು-ಚೌಕ ಕನ್ನಡಕದ ಬೋಸ್ ಎಳೆತಲೆಗಳಿಗೆ ದೊಡ್ಡತಲೆಗಳ ಅಕ್ಕಪಕ್ಕದಲ್ಲೇ ಪ್ರದರ್ಶಿಸುವ ಅವಕಾಶ ಮಾಡಿದ್ದಿದೆಯಲ್ಲಾ...!

 

ಏನೂ ಇಲ್ಲದಲ್ಲಿ ಏನು ಮಾಡಹೊರಟರೂ ಅಡ್ಡಗಾಲು ಹಾಕುವ ಅಭ್ಯಾಸ ನಮ್ಮದು. ಅಂತರರಾಷ್ಟ್ರೀಯ ಕಲಾವಿದರನ್ನು ಕೊಚ್ಚಿಗೆ ಕರೆಯುವುದರಿಂದ ಕೇರಳದ ಕಲಾವಿದರು ಅವಕಾಶ ವಂಚಿತರಾಗುತ್ತಿದ್ದಾರೆ ಎಂಬ ಕೂಗುಮಾರಿಯೂ ಅಂತದ್ದೇ ಒಂದು. ಅದಕ್ಕೆ ಇದೇ ಬಿಯೆನ್ನಾಲೆ ಟೀಮ್ ಪ್ರತ್ಯುತ್ತರವಾಗಿ ಕೇರಳದ ಕಲಾವಿದರನ್ನಷ್ಟೇ ಒಳಗೊಂಡು ಅದ್ದೂರಿಯಾಗಿ 'ಲೋಕಮೆ ತರವಾಡು (World is one familly)' ಎಂಬ ಪ್ರದರ್ಶನವನ್ನು ಆಲೆಪ್ಪಿಯಲ್ಲಿ ಆಯೋಜಿಸಿ ಕೂಗುಮಾರಿಗಳಿಗೆ ಮೂಗುದಾರ ತೊಡಿಸಿತ್ತು. ಆವಾಗಿನ್ನೂ ಕಲಾಕ್ಷೇತ್ರದ ಆಗುಹೋಗುಗಳು ನಮಗೂ ಆಸಕ್ತಿ ಹುಟ್ಟಿಸಲು ಶುರುಮಾಡಿದ್ದರಿಂದ 'ಬಿಯೆನ್ನಾಲೆಯಂತೂ ನೋಡಿಲ್ಲ, ಇದನ್ನಾದರೂ ನೋಡೋಣ' ಎಂದು ಹೋಗಿ ಬಂದಿದ್ದೆವು. ಅಲ್ಲೂ ಅಷ್ಟೆ, ದೊಡ್ಡ ದೊಡ್ಡ ತೆಂಗಿನ ನಾರು ಫ್ಯಾಕ್ಟರಿಗಳಲ್ಲೇ ಟೆಂಪರರಿ ಗ್ಯಾಲರಿ ಮಾಡಿ ಊರಿನವರಿಗೂ ಲಾಭವಾಗುವಂತೆ, ಆ ಕರಕುಶಲತೆಯನ್ನೂ ಪರಿಚಯಿಸುತ್ತಾ ಊರ ತುಂಬ ಹರಡಿದಂತೆ ಕಲಾಪ್ರದರ್ಶನ ಏರ್ಪಡಿಸಿದ ರೀತಿ ನಮಗೆ ಆಶ್ಚರ್ಯಕರವಾಗಿತ್ತು. (ಒಂದು ಮಾಡೆಲ್ ಸಿದ್ಧ ಪಡಿಸುವುದು ಬಹುಕಷ್ಟದ ಕೆಲಸ. ಅಳವಡಿಸಿಕೊಳ್ಳುವುದು ಸ್ವಲ್ಪ ಸುಲಭ. ಬೋಸ್ ಸೃಷ್ಟಿಸಿದ್ದು ಮಾಡೆಲ್ಗಳನ್ನು. ಕಟ್ಟುವುದು ಬಿಡಿ, ಅಳವಡಿಸಿಕೊಳ್ಳುವ ಧೈರ್ಯವೂ ಬೇರಾರಿಗೂ ಇನ್ನೂ ಬಂದಂತಿಲ್ಲ).

 

ಈ ಬಾರಿ, ನನ್ನನ್ನೂ ಸ್ಟುಡೆಂಟ್ಸ್ ಬಿಯೆನ್ನಾಲೆಗೆ ಕರಕೊಂಡಿರುವುದರಿಂದ ಸ್ವಲ್ಪ ಒಳಸುಳಿಗಳನ್ನು ಗಮನಿಸುವ ಅವಕಾಶ ಸಿಕ್ಕಿತು. ಭಾರತದ ಮಟ್ಟಿಗೇ ದೊಡ್ಡ ಕಲಾಪ್ರದರ್ಶನವೆಂದ ಮೇಲೆ ನಾವಂದುಕೊಂಡಿದ್ದಕ್ಕಿಂತ ಸ್ವಲ್ಪ ಹೆಚ್ಚು ಕಮ್ಮಿ ಇರ್ಲೇಬೇಕು. ಸುಸೂತ್ರವಾಗಿ, ವ್ಯವಸ್ಥಿತವಾಗಿ ಎಲ್ಲವೂ ನಡೆಯುತ್ತದೆ ಎಂಬ ಭ್ರಮೆ ಕಳಚಿ ಬಿತ್ತು.

 

ಊರ ತುಂಬ ನಡೆದು ನಡೆದು ಸುಸ್ತಾಗುವಷ್ಟು ಜಾಗದಲ್ಲಿ ಹಮ್ಮಿಕೊಂಡ ಪ್ರದರ್ಶನವಿದು. ನಾಲ್ಕು ಕಟ್ಟಡಗಳು ಸ್ಟುಡೆಂಟ್ ಬಿಯೆನ್ನಾಲೆಗೆ, ಉಳಿದ ಹನ್ನೆರಡೋ ಹದಿಮೂರೋ ದೊಡ್ಡವರಿಗೆ. ಎಲ್ಲವೂ ಚೆನ್ನಾಗಿದೆಯೆಂದೇನಲ್ಲ. ಹಳಸು ವಾದಗಳಿಗೆ ಹೊಸೆದವು ಬಹಳಷ್ಟು. ದೊಡ್ಡವರದ್ದು ತುಂಬ ಪ್ರೊಫೆಶನಲ್ ರೀತಿಯಲ್ಲಿದ್ದರೆ ಹುಡುಗರದ್ದು ಫುಲ್ಲ್ ಕ್ರಿಯೇಟಿವಿಟಿ. ಸಿಕ್ಕಿ ಸಿಕ್ಕಿದ ಜಾಗದಲ್ಲಿ ಕಲಾಕೃತಿಗಳು ತುಂಬಿ ಒಂದು ಆ್ಯಕ್ಟಿವ್ ಎನ್ವಿರಾನ್ಮೆಂಟ್ ಸೃಷ್ಟಿಯಾಗಿದೆ ಎನ್ನಬಹುದು. ಭಾರತೀಯ ಸಮಕಾಲೀನ ಕಲೆಯ ಕುರಿತಂತೆ ಒಂದು ಓವರಾಲ್ ವ್ಯೂ ಪಡೆಯಲು ನಮ್ಮ ಸ್ಟುಡೆಂಟ್ ಬಿಯೆನ್ನಾಲೆ ಸಹಕಾರಿ.


As tagline claims, "ITS OUR BIENNALE". ನಮ್ಮೆಲ್ಲರದು. ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ್ದು. ಆಗಮಿಸಿದ್ದ ವಿದೇಶಿಯರೊಂದಿಗೆ ಮಾತಾಡಿದಾಗ ಅದು ಖಚಿತವಾಗುವುದೂ ಹೌದು. ಈ ಬಿಯೆನ್ನಾಲೆಗಾಗಿಯೇ ಬಂದು, ಕ್ವೀನ್ ಆಫ್ ಕೊಚ್ಚಿ ಎಂದು ಪರಿಚಯಿಸಿಕೊಂಡ ಆಸ್ಟ್ರೇಲಿಯಾದವರು, ಜರ್ಮನಿಯವರು, ಬ್ರೇಸಿಲ್ನ ಕಲಾ ಇತಿಹಾಸ ಅಧ್ಯಾಪಕರು, ಸ್ವಿಜರ್ಲ್ಯಾಂಡ್ನ ಕಲೆಕ್ಟರ್ಗಳು ಸ್ಟೂಡೆಂಟ್ಸ್ ಬಿಯೆನ್ನಾಲೆಯನ್ನು ವಿಶೇಷವಾಗಿ ಹೊಗಳಿದ್ದಾರೆಂದರೆ...ಸರಿಯಾದ ದಾರಿಯಲ್ಲಿದ್ದೇವೆಂದು ಅರ್ಥ ಮಾಡಿಕೊಳ್ಳಬಹುದು.

 

ಜನವರಿ, ಫೆಬ್ರವರಿ, ಮಾರ್ಚ್ನಲ್ಲಿ ಸಾಧ್ಯವಾದರೆ ನೀವೂ ಭೇಟಿಕೊಡಿ. ಅನಗತ್ಯ ಜಗಳಗಳ ಮಧ್ಯದ ಹೆಮ್ಮೆ ತರುವಂತಹ ಒಳ್ಳೆಯ ಪ್ರಯತ್ನಗಳಿಗೆ ಪ್ರೋತ್ಸಾಹವಿರಲಿ. ಕರ್ನಾಟಕದಲ್ಲೂ ಇಂತವೆಲ್ಲ ಶುರುವಾಗಲಿ.

 

ಕೆಳಗಡೆ- ರಂಜಿತ್ ಕುಮಾರ್, ನಿರಂಜನ ಜಿಎಂ ಮತ್ತು ನಾನು. ಸದ್ಯದ ಮಟ್ಟಿಗೆ ಕಾವಾ ಕಾಲೇಜಿನ ಬ್ರಾಂಡ್ ಅಂಬಾಸಿಡರ್ಸ್ 🙂

Recent Posts

See All
ಕಾರ್ಪೋರೇಟ್ ಮತ್ತು ನಾನು

ಆಗಿನ್ನೂ ಇಂಜಿನಿಯರಿಂಗ್. ಫೈನಲ್ ಇಯರ್. ಎಲ್ರೂ ಜಮಾಯ್ಸ್ತಿದ್ದ ಐಟಿ ಸೆಕ್ಟರಿಗೆ ನಾವೂ ಟೈ ಹಾಕಿ, ಇನ್‌ಶರ್ಟ್ ಮಾಡ್ಕೊಂಡು ಹೋಗಿ ಆಪ್ಟಿಟ್ಯೂಡ್ ಕ್ಲಿಯರ್ ಮಾಡಿದ್ವಿ....

 
 
ಒಂದು ನಾಟಕ

ಪ್ರವೇಶ‌. ಕಳೆದ ವರ್ಷ ಕ್ರಿಸ್ಟೋಫರ್ ಅವರು ಸಹನಿರ್ದೇಶಿಸಿದ ಕೆಂಡೋನಿಯನ್ಸ್ ಅನ್ನು ಮೈಸೂರಿನ ರಂಗಾಯಣದಲ್ಲಿ ನೋಡಿದ್ದೆ. ಅವರು ಸೆಟ್‌ವರ್ಕ್‌ಗಳನ್ನು ಬಳಸಿದ ರೀತಿ ನನಗೆ...

 
 
bottom of page