top of page

ಕಾರ್ಪೋರೇಟ್ ಮತ್ತು ನಾನು

  • Writer: sushrutha d
    sushrutha d
  • Aug 30, 2024
  • 4 min read

Updated: Sep 22, 2024

ಆಗಿನ್ನೂ ಇಂಜಿನಿಯರಿಂಗ್. ಫೈನಲ್ ಇಯರ್. ಎಲ್ರೂ ಜಮಾಯ್ಸ್ತಿದ್ದ ಐಟಿ ಸೆಕ್ಟರಿಗೆ ನಾವೂ ಟೈ ಹಾಕಿ, ಇನ್‌ಶರ್ಟ್ ಮಾಡ್ಕೊಂಡು ಹೋಗಿ ಆಪ್ಟಿಟ್ಯೂಡ್ ಕ್ಲಿಯರ್ ಮಾಡಿದ್ವಿ. ಮತ್ತೆ ಕೋಡಿಂಗು! ಹುಹ್ಹೂ. ಏನೇನೋ ಟೆಕ್ನಿಕ್ ಯೂಸ್ ಮಾಡಿ ಕಾಪಿ ಹೊಡ್ದು ಎಷ್ಟೋ ಸಾಲಲ್ಲಿ ಡಿಸೈನ್ ಡಿಸೈನ್ ಸ್ಟಾರ್ ತುಂಬ್ಸಿದ್ದಾಯ್ತು. ಮಾರನೇ ದಿನ ಇಂಟರ್‌ವ್ಯೂಗೆ ಶೂ ಎಲ್ಲಾ ಹಾಕ್ಕೊಂಡು, ಕಿಸೆಗೆ ಪೆನ್ನು ಸಿಕ್ಕಿಸ್ಕೊಂಡು ಹೋಗಿದ್ದೆ.


ಬಾಸ್ ಕರ್ದ್ರು ಒಳಗಡೆ. ಯಾವ್ ಡಿಪಾರ್ಟ್‌ಮೆಂಟು? ಇಲೆಕ್ಟ್ರಿಕಲ್. ಹಾಸ್ಟೆಲಲ್ಲಿ ಆವಾಗೊಮ್ಮೆ ಸೀನಿಯರ್ಸ್ ಉಗ್ದಿದ್ ನೆನ್ಪಿಗ್ ಬಂದು...ಆಂಡ್ ಇಲೆಕ್ಟ್ರಾನಿಕ್ಸ್ ಸೇರಿಸ್ದೆ. ಅದೇನ್ ಡೌಟು ಬಂತೋ! ನಿಮ್ಗೆ ಈ ಸೆಮ್ಮಲ್ಲಿ ಯಾವ್ಯಾವ ಸಬ್ಜೆಕ್ಟ್ ಇದೆ ಕೇಳ್ಬಿಟ್ರು. ಇನ್ನಾ ಎಕ್ಸಾಮಿಗೆ ಒಂದ್ ತಿಂಗ್ಳಿತ್ತು. ಅಷ್ಟ್ ಬೇಗ ಯಾವನಿಗೊತ್ತಿರುತ್ತೆ ಸಬ್ಜೆಕ್ಟೆಲ್ಲ! ಯಾವ್ ಟೀಚರ್ ಕ್ಲಾಸಿಗ್ ಬರ್ತಾರೆ ನೆನ್ಪಾಗ್ತಿದೆ. ಅದೇನ್ ಹೇಳ್ತಾರೆ ನೆನ್ಪಾಗ್ತಿಲ್ಲ. ಹೋದ ಸೆಮ್ಮಲ್ಲಿ ಅದ್ ತೆಗೊಂಡಿದ್ರು. ಅದೇನ್ ಹೆಸ್ರೋ! ಹಂಗೂ ಹಿಂಗೂ ಮೂರೋ ನಾಲ್ಕೋ ಹೇಳ್ದೆ. ಇನ್ನೆರಡು ಬೆಬ್ಬೆಬ್ಬೆಗ್ ಮುಗ್ದೋಯ್ತು.


ಕೋಡಿಂಗ್ ಬರುತ್ತಾ? ಇಲ್ಲ. ಮತ್ತೆ? ಹಲ್ಲು ತೋರಿಸ್ದೆ. ಬೆಳಿಗ್ಗೆ ನೆನ್ಪಲ್ಲಿ ಉಜ್ಜಿದ್ದು ಒಳ್ಳೆದಾಯ್ತು. ನಿನ್ನೆ ಬಂದ ತರಾನೇ ಇವತ್ತೂ ಈ ಪೇಜ್ ಮೇಲೆ ಸ್ಟಾರ್ ಬರ್ಸು ನೋಡೋದಾ ಅಂದ್ರು. ಕಿಸೆಲಿದ್ದ ಪೆನ್ ಸ್ಲೋ ಮೋಶನಲ್ಲಿ ಕೈಗ್ ಬಂತು. ಸ್ಟೈಲಾಗಿ ಟಕ್ಕಂತ ಕ್ಯಾಪ್ ತೆಗ್ದು..

ಫಾರ್(x=0; x<5; x++)

ಹಾಕು ಫ್ಲವರ್ ಬ್ರಾಕೆಟ್.

ಇನ್ನೊಂದು ಅಂತದ್ದೇ ಫಾರ್ ಲೂಪ್. ಫ್ಲವರ್ ಬ್ರಾಕೆಟ್. ಯೇಯ್! ಅದೇನೋ ಖುಷಿ ತಿರುಗ್ಸಿ ತಿರುಗ್ಸಿ ಆ ಬ್ರಾಕೆಟ್ ಹಾಕೋದಿಕ್ಕೆ. ಹಾಕೋದು, ಹೊಡ್ದಾಕೋದು. ವಾಪಾಸ್! ಕೋಡ್ ಬರ್ಯೋಕ್ ಬರ್ಲಿಲ್ಲಾಂದ್ರೂ ಪರವಾಗಿಲ್ಲ. ಫ್ಲವರ್ ಬ್ರಾಕೆಟ್ ಚೆನ್ನಾಗಿರ್ಬೇಕು, ಅಷ್ಟೇ. ಬಾಸ್ ಕಂಡುಹಿಡ್ದ್ರು ಅನ್ಸುತ್ತೆ, ಏನಾದ್ರೂ ಪ್ರಶ್ನೆ ಇದ್ಯಾ ಕೇಳ್ದ್ರು.


ನಂಗಾಲ್ರೆಡಿ ಗೊತ್ತಾಗಿತ್ತಲ್ಲ ನಮ್ ಕತೆ. ಕೇಳ್ದೆ ಪ್ರಶ್ನೆ. ನೀವು ನಿಮ್ ಕಂಪೆನಿಲಿ ಈ ಎಕ್ಸ್ಟ್ರಾ ಕರಿಕ್ಯುಲರ್ ಆಕ್ಟಿವಿಟಿಗಳಿಗೆಲ್ಲ ಹೇಗ್ ಸಪೋರ್ಟ್ ಮಾಡ್ತೀರಾ!? ಏನೋ ಆಶ್ಚರ್ಯಚಕಿತರಾಗಿ ಬುಕ್ಕಿ ಬುಕ್ಕಿ ಉತ್ರ ಕೊಟ್ರು. ಹೋ. ಹಾಗಾದ್ರೆ..ಅಂತ ನಾನು ಮುಂದುವರಿಸ್ದೆ. ನೀವು ಹೊರಗಡೆ ಕಾಯ್ರಿ ಸ್ವಲ್ಪ ಅಂತ ಕಳ್ಸಿದ್ರು.


ಒಂಥರಾ ಕ್ಲಾಸ್ ಜೋಕರ್ ಆಗಿದ್ದ ನಾವು ನಗ್ತಾ ನಗ್ತಾ ಹೊರಗ್ ಬರೋದ್ ನೋಡಿ ಬಾಯ್ಸೆಲ್ಲಾ ಖುಷಿಲಿ ಏನಾಯ್ತ್ ಮಗಾ ಅಂದ್ರು. ಹೇಳ್ದೆ ಕತೆ. ಆಮೇಲಿಂದ ಇಂಟರ್‌ವ್ಯೂ ಹೇಗ್ ಅಟೆಂಡ್ ಮಾಡ್ಬಾರ್ದು ಅನ್ನೋದಕ್ಕೆ ನಮ್ದೊಂತರಾ ಇನ್ಸ್ಪಿರೇಶನಲ್ ಸ್ಟೋರಿ ಆಗೋಯ್ತು.


ಇನ್ನೊಬ್ಬ ದೋಸ್ತು ಇದ್ ಬದ್ ಕೋಡಿಂಗು ಪಾಲಿಟಿಕ್ಸು ಕರ್ನಾಟಕ ತಮಿಳುನಾಡು ಎಲ್ಲಾದಕ್ಕೂ ಉತ್ರ ಕೊಟ್ಮೇಲೆ, ಒಂದು ಶಾರ್ಟ್ ಮೂವೀ ಮಾಡ್ಬೇಕು ಅಂತಿದ್ದೀನಿ ಅಂದ್ನಂತೆ. ನೋಡೋದ ಒಂದ್ ಕತೆ ಹೇಳು ಅಂದಾವ್ರೆ ಬಾಸ್. ಕತೆ ಕೇಳಿ, ಇಷ್ಟೊಳ್ಳೇ ಕತೆ ಇಟ್ಕಂಡ್ ಇಲ್ಲಿಗ್ ಬಂದಿದ್ದೀಯಲ್ಲ, ಹೋಗ್ ಮೂವೀ ಮಾಡು ಹೋಗು ಅಂತ ಕಳ್ಸಿದ್ರಂತೆ. ಆದಿನ ಅಂತೂ ಎಲ್ರಿಗೂ ಕೂಳೆ ನಗು. ಒಬ್ಬೊಬ್ರ ಕತೆನೂ ಒಂದೊಂತರ.


ಹಂಗೇ ಯಾರೋ ಮನೆಯಿಂದ ತಂದಿದ್ದ ಬುತ್ತಿ ತೆಗ್ದು ನಮ್ ಹೊಟ್ಟೆ ತುಂಬಿಸ್ಕೊಂಡು ಸೀದಾ ಹಾಸ್ಟೆಲ‌್ಗೋಗಿ, ಫರ್ಸ್ಟ್ ಆ ಕಿತ್ತೋದ್ ಶೂ ಬಿಚ್ಚಾಕಿ, ಔಟ್ ಶರ್ಟ್ ಮಾಡ್ಕೊಂಡು, ಫ್ಯಾನ್ ಹಾಕ್ಕೊಂಡ್ ಮಲ್ಕಂಡೆ. ಹೆಂಗಿದ್ರೂ ಇಡೀ ದಿನದ ಅಟೆಂಡೆನ್ಸ್ ಸಿಗುತ್ತೆ. ಮತ್ಯಾವನ್ ಕ್ಲಾಸಿಗ್ ಹೋಗ್ತಾನೆ!


ಯಾವ್ದೋ ಇನ್ನೊಂದು ಕಂಪೆನಿ ಸಿಲೆಕ್ಷನಲ್ಲೂ ಏನೋ ಗೋಲ್ ಮಾಲ್ ಮಾಡಿ ಒಳಗ್ ನುಗ್ಗಿದ್ದೆ. ಬೆಳಿಗ್ಗೆ ಇಂದ ಸ್ಲೈಡ್ ಹಾಕಿ ಕೊರ್ದು ಕೊರ್ದು, ಕೊನೆಗೆ ಅದ್ಯಾವ್ದೋ ರೂಮಲ್ಲಿ ತಿರುಪತಿಲಿ ಕಾಯೋ ಹಂಗೆ ಕಾಯೋಕೆ ನಮ್ಮೊಂದಷ್ಟು ಜನರನ್ನ ಕೂಡಾಕಿದ್ರು. ಅಕ್ಕಪಕ್ಕ ನೋಡಿದ್ರೆ ನಮ್ ದೋಸ್ತುಗಳು ಯಾರಿಲ್ಲ. ಪರಿಚಯ ಇದ್ದವ್ರು ಒಂದಷ್ಟಿದ್ರು. ಸೀರಿಯಸ್ಸು. ಕೂರೋಕೆ ಇದ್ದಿದ್ದು ತಿರುಗ್ಸೋ ಚಯರು! ಇನ್ನೇನು ಬೇಕು! ಅಲ್ಲಾಡ್ಸ್ತಾ ಕೂತಿದ್ದೆ. ಬಂದ್ರು ಬಾಸ್.


ಗೊತ್ತಾಯ್ತು ಅಂದ್ಕೋತೀನಿ ಏನಾಯ್ತು ಅಂತ. ಆದ್ರೇss...ನಾವೂ ಬುದ್ವಂತ್ರೆ. ಬಂದ್ ತಕ್ಷಣ ನೆಟ್ಟಗ್ ಕೂತ್ಕಂಡೆ ಹಾ. ಹಂಗೂ ನೀವು ಅನ್ಕೊಂಡಂಗೇ ಬೈದಾಕ್ಬುಟ್ರು. ಒಂದು ಚೂರೂ ಅಲ್ಲಾಡ್ದಂಗೆ ಕಲ್ಲಲ್ಲಿ ಕಲ್ಲಾಗಿ ಕೂತೆ. ಏನೋ ಹೇಳೋಕೆ ಶುರು ಮಾಡ್ದವ್ರು ಅರ್ಧ ವಾಕ್ಯಕ್ಕೇ ನಿಲ್ಸಿ ನಂಗ್ ಬೈಯೋಕ್ ಶುರು ಹಚ್ಕೊಂಡ್ರು! ನಂಗ್ಯಾಕೆ ಅಂತನೂ ಗೊತ್ತಾಗ್ತಿಲ್ಲ! ಫರ್ಸ್ಟ್ ತಿರುಗಿ ನೋಡ್ದೆ. ಹಿಂದೆ ಇರೋರ್ಗೇನೋ ಅಂತ. ಅದ್ಕೂ ಬೈದ ನನ್ಮಗ! ಸರೀಗ್ ಕೂತಿಲ್ಲ ಅಂತಾವ್ನೆ. ಇನ್ನೆಂಗ್ ಕೂರ್ಬೇಕು ಅಂತ ಹೇಳ್ತಿಲ್ಲ. ಥೋ!


ಎರಡ್ಮೂರು ಸಲ ಇದಿದೇ ಆದ್ಮೇಲೆ ಚೆಸ್ ಅಲ್ಲಿ ಡ್ರಾ ಅಂತ ಅನೌನ್ಸ್ ಮಾಡ್ದಂಗೆ ಇವ್ನೂ ಸುಮ್ನಾಗ್ತಾನೆ ಅಂದ್ಕಂಡೆ. ಕೊನೇಗೆ ಬಾಸವ್ರು ಸೋಲೊಪ್ಕೊಂಡು ಬಾಯಿಬಿಟ್ಟು ಏನಾಗ್ಬೇಕ್ ಹೇಳ್ದ. ಆವಯ್ಯಂಗ್ ಆಗಿದ್ ಸಮಸ್ಯೆ ಏನಂದ್ರೆ ನಾ ಚಯರ್ ಎತ್ರ ಮಾಡ್ಕೊಂಡು ಕೂತಿಲ್ಲ ಅನ್ನೋದು! ಅದೆಂಗ್ ಇತ್ತೋ ಹಂಗೇ ಅದ್ರ ಮೇಲೆ ಅಂಡೂರಿದ್ದೆ. ಅವ್ನಿಗದ್ರಿಂದ ಏನ್ ಪ್ರಾಬ್ಲೆಮ್ಮೋ ಏನೋ! ಪೂರ್ತಿ ಇನ್ನೂ ನಂಗರ್ಥ ಆಗಿಲ್ಲ. ನನ್ ಕಾಲ್ ಬೇರೆ ಊರುದ್ದ ಇದೆ ಅಂತ ಹಿಂದಕ್ಕೆ ಕಾಲಿಟ್ಕೊಂಡೇ ಕೂತಿದ್ದೆ. ಕ್ಲಾಸಲ್ಲಿ ಕೂರೋ ಹಂಗೇನ್ ಕೂತಿರ್ಲಿಲ್ಲ. ಆದ್ರೂ ಬೈತಿದ್ದ. ಸರಿ, ಅವ್ನ್ ಸಮಾಧಾನಕ್ಕೆ ಎದ್ ನಿತ್ತು ಕುರ್ಚಿ ಎತ್ರ ಮಾಡ್ಕಂಡೇ ಕೂತೆ. ಮತ್ತೆ ಸರೀಗ್ ಕೂತಿಲ್ಲ ಅಂತಾವ್ನೆ! ಥತ್ ತಲೆಹಿಡ್ಕನ್ ತಂದು!


ಇಂಜಿನಿಯರಿಂಗ್ ಪಾಸ್ ಆಗ್ತಿದ್ದೀನಿ. ಚೇಯರಲ್ಲಿ ಅವ್ನಿಗ್ ಬೇಕಾದಂಗೆ ಕೂರೋಕ್ ನಂಗ್ ಬರ್ತಿಲ್ಲ! ಇದ್ನ ಆವಾಗ ನಮ್ ದೋಸ್ತ್ರ ಜೊತೆ ಹೇಳೋ ಧೈರ್ಯನೂ ತೆಗಳ್ಳಿಲ್ಲ ನಾ. ಸತ್ತೋಯ್ತು ಇವ್ರ್ ಕೆಲ್ಸ ಅಂತ ಆವಾಗ್ಲೇ ಡಿಸೈಡ್ ಮಾಡ್ದೆ. ಏನಾದ್ರೂ ಸರಿ, ಇನ್ನೊಬ್ರು ಕೆಳಗಡೆ ಕೆಲಸ ಅಂತೂ ಮಾಡಕಾಗಲ್ಲ ನನ್ ಕೈಲಿ ಅಂತ. ಎಲ್ರೂ ಹಿಂಗೇ ಇರ್ತಾರೋ, ಇವ್ನಷ್ಟೇ ಹಿಂಗಿದ್ದಿದ್ದೋ. ಒಟ್ನಲ್ಲಿ ಖರಾಬ್ ಎಕ್ಸ್ಪೀರಿಯನ್ಸು. ಕಾರ್ಪರೇಟ್ ಅಂದ್ರೇನೇ ಸಿಟ್ ಬರೋವಷ್ಟು ಮಾಡಿಟ್ಬುಟ್ಟ.


ಇಂಜಿನಿಯರಿಂಗ್ ಅಂದ್ರೆ ಏನಂತನೇ ನಾಲ್ಕು ವರ್ಷದಲ್ಲಿ ಗೊತ್ತಾಗಿರ್ಲಿಲ್ಲ. ಮಾರ್ಕ್ಸ್ ಏನೋ ಬರ್ತಿತ್ತು. ಪಾಸಾಗ್ತಿದ್ವಿ. ಆದ್ರೆ ಅದೇನೋ ಓವರಾಲ್ ವ್ಯೂ ಅಂತೂ ಇರ್ಲೇ ಇಲ್ಲ. ಯಾವನೋ ನಮ್ ಚಿತ್ರ ಗಿತ್ರ ಎಲ್ಲ ನೋಡಿ ಅವ್ನ್ ಇಂಟೀರಿಯರ್ ಡಿಸೈನ್ ಕಂಪೆನಿಲಿ ಕೆಲ್ಸ ಮಾಡೋಕ್ ಬಾ ಅಂತ ಕರ್ದ. ಆದ್ರೆ ನಾವಾಗ್ಲೇ ಕೆಲ್ಸಕ್ಕೋಗಲ್ಲ ಅಂತ ಡಿಸೈಡ್ ಮಾಡಾಗಿತ್ತು. ಇನ್ನೇನ್ ಮಾಡದು! ನಮ್ ಆರ್ಟ್ ಅನ್ನೇ ಮುಂದುವರ್ಸೋದ ಅನ್ಕಂಡು ಆವಾಗ ಗೊತ್ತಿದ್ದ ಚಿತ್ರಕಲಾ ಪರಿಷತ್ತಿಗೂ, ಮೈಸೂರಿನ ಕಾವಾಗೂ ಇಂಜಿನಿಯರಿಂಗ್ದು ಪರೀಕ್ಷೆ ಮಧ್ಯ ಮಧ್ಯ ಓಡಾಡ್ಕೊಂಡು, ಕೊನೆಗೆ ಮೈಸೂರಲ್ಲಿ ಕಾಲೇಜಿಗ್ ಸೇರ್ಕಂಡೆ. ಅದ್ರದ್ದು ಇನ್ನೊಂದೇ ಕತೆ. ಕಾರ್ಪರೇಟಿಗ್ ಸರೀ ಉಲ್ಟಾ ಕತೆಗಳು. ನಮ್ "ಇಂಟ್ರಡಕ್ಷನ್" ಇಂದ ಹಿಡ್ದು ನಾವ್ "ಇಂಟ್ರಡಕ್ಷನ್" ಮಾಡ್ಸೋ ತನ್ಕನೂ ಬೇರೆನೇ. ಅದೆಲ್ಲ ಇಲ್ಲಿ ಬೇಡ. ಹಂಗೂ ಆ ಗ್ಯಾಪಲ್ಲಿ ಎರಡು ವರ್ಷ ಕಷ್ಟಪಟ್ಟು ಒಂದಷ್ಟು ಹುಡುಗ್ರನ್ ಸೇರಿಸ್ಕೊಂಡು ಏನೋ ಮಾಡದ ಜೊತೆಲಿ ಅಂತ ಒಂದು ಸಣ್ ಟೀಮ್ ಬಿಲ್ಡ್ ಮಾಡ್ತಿದ್ದೆ. ಯಾವ್ಯಾವ್ದೋ ಕಾರಣಕ್ಕೆ ಎಲ್ಲಾ ಕೈ ಎತ್‌ಬುಟ್ರು!


ಅಂತೂ ಕಾಲೇಜ್ ಮುಗ್ಯೋ ಹೊತ್ತಿಗೆ ಕೊಚ್ಚಿ ಬಿಯೆನ್ನಾಲೆಗೆಲ್ಲ ಸಿಲೆಕ್ಟ್ ಆಯ್ತಾ. ಏನೋ ಪರವಾಗಿಲ್ಲ ಅಂದ್ಕಂಡಾಗ ಮುಂಬೈಗ್ ಒಂದು ರೌಂಡು ಹೋಗ್ಬರೋಕ್ ಸಿಕ್ತು. ನಿಧಾನಕ್ಕೆ ಹಂಗಂಗೇ ಮುಂಬೈ ಗೋವಾ ಹೈದರಾಬಾದ್ ಅಂತೆಲ್ಲ ತಿರ್ಗಾಡ್‌ಬೇಕಿದ್ರೆ ದೆಲ್ಲಿ, ಕಲ್ಕತ್ತಾ ನಾಗಾಲ್ಯಾಂಡವ್ರೆಲ್ಲ ಪರಿಚಯ ಆಗಿ, ಈ ಫೀಲ್ಡಲ್ಲಿ ತುಂಬಿರೋ ಕಾರ್ಪರೇಟ್‌ ಬುದ್ಧಿಗಳೂ ಕಾಣ್ಸೋಕ್ ಶುರು ಆಯ್ತು. ಅದೂ ಇನ್ನಷ್ಟ್ ಕಚಡಾ ರೀತಿಲಿ. ಇರೋ ಬರೋ ಗ್ರಾಂಟ್ಸ್ ಎಲ್ಲಾ ನೋಡ್ದೆ. ಊಹೂಂ. ಸದ್ಯಕ್ಕಂತೂ ನಾವು ದೆ/ದೆಮ್ ಆಗದ ಹೊರತು ಚಾನ್ಸೇ ಇಲ್ಲ. ಒಂಥರಾ ಆಸೆ, ಹೋಪು ಎಲ್ಲಾ ಕಳ್ಕೊಂಡು ಕೂತಿರ್ಬೇಕಿದ್ರೆ, ವಯಸ್ಸಾಗ್ತಿರೋದ್ ನೆನ್ಪಾಗಿ ಅತ್ಲಾಗೊಂದು ಯಾವ್ದೋ ಕೆಲ್ಸ ಹುಡ್ಕೋದಾ ಅಂತ ನೋಡ್ದೆ. ಸಿಕ್ತು ಒಂದ್ ಮಾರ್ಕೆಟಿಂಗ್ ಏಜೆನ್ಸಿಲಿ. ಉದ್ದುದ್ದ ಕಾಂಟ್ರಾಕ್ಟಿಗೆಲ್ಲ ಸೈನಾಕಿದ್ದಾಯ್ತು.


ಹೊಸಾ ಇಮೈಲ್ ಐಡಿ ಮೂಲಕ ಅವ್ರ ಹಳೇ ಕೆಲ್ಸ ಎಲ್ಲ ನೋಡೋಕ್ ಸಿಕ್ತು. ನಂಗ್ ಕೊಟ್ಟಿದ್ ಕೆಲ್ಸದ್ ಪಾರ್ಟ್ ಆಗಿತ್ತದು. ಅನ್ಸಿದ್ದಿಷ್ಟೇ. ಅದ್ಯಾಕಾದ್ರೂ ದುಡ್ ಕೊಟ್ಟು ಇವ್ರ ಹತ್ರ ಮಾರ್ಕೆಟಿಂಗ್ ಮಾಡಿಸ್ತಾರೋ ಏನೋ! ಇಡೀ ಒಂದ್ ವರ್ಷದಲ್ಲಿ ಆಲ್ರೆಡಿ ಚೆನ್ನಾಗಿ ನಡಿತಿರೋ ಒಂದು ರಿಚ್ ಲುಕ್ ಇರೋ ಹೋಟೆಲ್‌ದು ಫಾಲೋವರ್ಸ್ ಹೆಚ್ಚಾಗಿದ್ದು ಮೂವತ್ತು. ಇಡೀ ಒಂದು ವರ್ಷದಲ್ಲಿ!! ಕಾಸು ಕೊಟ್ಟು! ಸುಮ್ನೆ ಏನೂ ಮಾಡದೇ ಇದ್ರೂ ಆ ಹೋಟೆಲಿಗೆ ಬರೋ ಜನ್ರಿಂದ, ತಟ್ಟೆ ಫೋಟೋ ಟ್ಯಾಗ್ ಮಾಡೋರಿಂದ ಅಷ್ಟಾಗ್ತಿತ್ತು. ಇವ್ರ ಕಾಂಟ್ರಿಬ್ಯೂಶನ್ ಪ್ರಾಕ್ಟಿಕಲಿ ಜೀರೋ! ಆ ಕಂಟೆಂಟ್‌ಗಳೋ ಆ ಕ್ರಿಸ್ತಂಗೇ ಪ್ರೀತಿ. ಒಂದ್ ಸ್ಟ್ರಾಟಜಿ ಇಲ್ಲ, ಡಿಸೈನ್ ಸೆನ್ಸಿಬಿಲಿಟಿ‌ ಇಲ್ಲ, ಯಾರಿಗ್ ಟಾರ್ಗೆಟ್ ಮಾಡ್ಬೇಕು ಅನ್ನೋದಿಲ್ಲ. ಏನಿಲ್ಲ. ಆದ್ರೂ ಕ್ಲೈಂಟ್ಸು! ಹೌ!!?


ಒಂದು ತಿಂಗ್ಳಲ್ಲಿ ಅದೇ ಹೋಟೆಲ್‌ಗೆ ಎರಡು ಫಾಲೋವರ್ ಜಾಸ್ತಿ ಆಗಿತ್ತು. ಕೆಳಗಡೆ ರಿಮಾರ್ಕ್ಸ್ ನೋಡಿದ್ರೆ ಸಕ್ಸಸ್‌ಫುಲ್ ಸ್ಟ್ರಾಟಜಿ ಅನ್ನೋ ತರ ಇದೆ. ಅದ್ ಹೇಗಷ್ಟು ಫೇಕ್‌ನೆಸ್ಸಲ್ಲಿ ಬದುಕೋಗಾತ್ತೋ ಏನೋ! ಅದೂ ಇನ್ನೊಬ್ರ ದುಡ್ಡು ಅದಕ್ಕೋಸ್ಕರ ಇಸ್ಕೊಂಡು! ಹುಟ್ಟಿದಾಗಿಂದ ಸತ್ಯ ಹೇಳ್ಬೇಕು, ಒಳ್ಳೆಯವನಾಗ್ಬೇಕು ಎಂಬೆಲ್ಲ ಆದರ್ಶ ಕೇಳ್ಕೊಂಡು ಬೆಳ್ದವ್ನಿಗೆ ಇದ್ನೆಲ್ಲ ನೋಡಿ ಅರಗಿಸಿಕೊಳ್ಳೋಷ್ಟರಲ್ಲಿ ಸಾಕಾಯ್ತು.


ಸರ್ಚ್ ಇಂಜಿನ್ ಆಪ್ಟಿಮೈಜೇಶನ್‌ಗೆ ಟ್ಯಾಗ್ ಹೆಂಗ್ ಹುಡ್ಕೋದು ಅಂತ ಕ್ಲಾಸ್ ತೆಗಂಡ ಒಬ್ಬ. ಹಂಗ್ ತೆಗಂಡ್ರೆ ದೇವ್ರಾಣೆಗೂ ಸೈಟ್ ಲಿಸ್ಟಾಗಕ್ ಸಾಧ್ಯ ಇಲ್ಲಾಂತ ಗೊತ್ತಿದ್ದಕ್ಕೆ ಟೆಸ್ಟ್ ಮಾಡಿ ನೋಡ್ದೆ. ಅವ್ರೇ ಡಿಸೈನ್ ಮಾಡಿ ಮಾರ್ಕೆಟ್ ಮಾಡೋ ವೆಬ್ಸೈಟ್. ಕಣ್ಣಲ್ಲಿ‌ ಕಂಡರೂ ಪರಾಂಬರಿಸಿ ಪರಾಂಬರಿಸಿ ನೋಡ್ದೆ. ಊಹುಂ. ಎಕ್ಸಾಕ್ಟ್ ಹೆಸ್ರು ಹಾಕಿದ್ರೂ ಲಿಸ್ಟಾಗಲ್ಲ. ಇನ್ನದೇನ್ ಮಾರ್ಕೆಟಿಂಗ್ ಫರ್ಮೋ!! ಯಾವ್ ಡೊಮೈನೂ ತೆಗಳ್ಳದೆ ಇರೋ ನನ್ ಪರ್ಸ‌ನಲ್ ಸೈಟ್ ಲಿಸ್ಟಾಗುತ್ತೆ, ಎಗ್ಸಾಕ್ಟ್ ಸರ್ಚ್ ಹೊಡ್ದ್ರೆ, ಯಾವ್ ಮಾರ್ಕೆಟಿಂಗೂ ಇಲ್ದೆ. ಇವ್ರದ್ದಾಗಲ್ಲ! ಆದ್ರೂ ಅದೆಂಗ್ ದುಡ್ಡು ಇಸ್ಕೋತಾರೋ ಇಂತವ್ಕೆಲ್ಲಾ! ಅರ್ಥನೇ ಆಗಲ್ಲ. ರಾತ್ರಿ ನಿದ್ರೆದೇನ್ ಕತೆ!?


ಇವ್ರು ಹೇಳೋದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ನಮ್ಗೇ ಗೊತ್ತಿರೋವಾಗ, ಇನ್ನಾ ಚೆನ್ನಾಗಿ ಮಾಡ್ಬೋದು ಅನ್ನೋ ಕಾನ್ಫಿಡೆನ್ಸ್ ಇರೋವಾಗ, ಇವ್ರುಗಳ ಜೊತೆಯೆಲ್ಲಾ ಏನ್ ಮಾಡ್ಬೇಕು‌ ಅನ್ನೋದೂ ಗೊತ್ತಾಗಲ್ಲ. ಕೂತಿದ್ದು ನಿತ್ತಿದ್ದು ಬರೆದಿದ್ದು ಎಲ್ಲಾದೂ ತಪ್ಪೇ. ಇವ್ರ್ ಬರಿಯೋ ರಿಮಾರ್ಕ್ಸ್ ಒಂದ್ಬಿಟ್ಟು! ಅದ್ಹೇಗ್ ಈತರ ಕೆಲಸ ಮಾಡ್ತಾರೋ ಎಲ್ಲಾರೂ! ಬೈಕೊಂಡ್ ಬೈಕೊಂಡೇ! ಜಸ್ಟ್ ಹೌ!!?


ಅಫ್ಕೋರ್ಸ್ ನಂದು ಒಂದೇ ದಿನ ಸರ್ವಿಸ್ ಇದ್ದಿದ್ದಲ್ಲಿ. ಆಸ್ ಯೂಶುವಲ್ ತಿಕಗಾಂಚಾಲಿ ಅಂತ ತೆಗ್ದಾಕಿದ್ರು. ಅದ್ಕೇ ಮತ್ತೊಂದ್ಸಲ ನಮ್ಗೂ ಕಾರ್ಪರೇಟ್‌ಗೂ ಆಗ್ಬರಲ್ಲ ಅಂತ ಹಿಂದೇದೆಲ್ಲ ನೆನ್ಪಾಯ್ತು. ಮುಂದೇದೆಲ್ಲ ಇನ್ನಾ ನೋಡ್ಬೇಕು.

Recent Posts

See All
bottom of page