ಒಂದು ಕಲಾ 'ಇಸಂ' ಆಧುನಿಕ ಜಗತ್ತನ್ನು ಹೇಗೆ ಬದಲಾಯಿಸಬಲ್ಲದು?
- sushrutha d
- Jun 30, 2021
- 3 min read
Updated: Sep 22, 2024
ಕಲೆಗೊಂದು ಭೂಮಿಕೆ - 6 : ಒಬ್ಬ ಡಿಕ್ಷನರಿಯ ಮೇಲೆ ಚಾಕೊಂದನ್ನು ಎಸೆದಾಗ ಅದು Dada ಅನ್ನುವ ಪದದ ಮೇಲೆ ಬಿದ್ದುದರಿಂದ 'ದಾದಾಯಿಸಂ' ಹೆಸರು ಇಡಲಾಯ್ತಂತೆ. ಅಂದರೆ, ಅಷ್ಟೂ ರಾಂಡಮ್ ಆಗಿ ಇರುವ ಮೂವ್‌ಮೆಂಟ್ ಇದು. ಮತ್ತೊಂದು ಕತೆಯ ಪ್ರಕಾರ, ಮಗುವಿನ ಬಾಯಲ್ಲಿ ಮೊದಮೊದಲು ಬರುವ ಅರ್ಥವಿಲ್ಲದ ಅಸಂಬದ್ಧ ಶಬ್ದಗಳನ್ನು, ಅದೇ ಕಾರಣಕ್ಕೆ, ಹೆಸರು ಇಡಲು ಬಳಸಿದ್ದು. ಇಷ್ಟೇ ಸಾಕು, 'ದಾದಾ'ದಲ್ಲಿ ಏನೇನಾಗಿರಬಹುದೆಂದು ಊಹಿಸಲು.
ಕಲೆಯ ಸೌಂದರ್ಯವನ್ನೆಲ್ಲ ತ್ಯಜಿಸಿ, ಸೌಂದರ್ಯವಿಲ್ಲದ್ದನ್ನು ರಚಿಸುವ ಪ್ರಯತ್ನವೇ ಇಲ್ಲಿ ನಡೆಯುವುದು. ಒಟ್ಟೂ ವಿರುದ್ಧ. ತುಂಬ ಸಣ್ಣ ಸಮಯದ ಮೂವ್‌ಮೆಂಟ್ ಇದಾದರೂ ಅದರ ಪ್ರಭಾವ ಇಂದಿನ ತನಕವೂ ಇದೆ. ನಮ್ಮ ನಡುವಿನ 'ಮೀಮ್ಸ್'ಗಳೆಲ್ಲ ಇಲ್ಲಿಯದ್ದೇ ಮುಂದುವರಿದ ಪ್ರಾಡಕ್ಟ್‌ಗಳು. ವ್ಯಂಗ್ಯ, ತಮಾಷೆ, ಅಸಂಬದ್ಧತೆ ಟು ದ ಎಕ್ಸ್ಟ್ರೀಮ್ ಈ 'ಇಸಂ'ನ ವಿಶೇಷತೆ.
ಇದರ ಪರಿಣಾಮ, 'ಚಂದ'ವಿಲ್ಲದ ವಸ್ತುಗಳಿಗೂ ಸೌಂದರ್ಯವಿಲ್ಲವೇ? ಎಂಬಂತಹ ಪ್ರಶ್ನೆ ಉದ್ಭವಿಸಿದ್ದು. ಇಲ್ಲಿ ಬಳಸಿದ 'ಚಂದ'ಕ್ಕೆ ಆಗಿನ ಕಾಲದ ಅರ್ಥವನ್ನೇ ಕೊಟ್ಟುಕೊಳ್ಳಬೇಕು. ಅದರಲ್ಲೂ ಒಂದು ತೆರನಾದ ಸೌಂದರ್ಯವಿದೆ ಎನ್ನುವುದು ಉತ್ತರವಾಯಿತು. ಈಗಿನ ಕಾಲದ 'ಚಂದ' ದಾದಾದ 'ಚಂದ'ವನ್ನೂ ಸೇರಿಸಿಕೊಂಡೇ ಇರುವಂತಹದ್ದು. ತಾತ್ವಿಕವಾಗಿಯಾದರೂ. ಇದನ್ನೆಲ್ಲ ಹೇಳುವುದು ಅಧ್ಯಾತ್ಮವನ್ನು ವಿವರಿಸಿದಷ್ಟೇ ಕಷ್ಟ.
ಈ ಇಸಂಗಳೆಲ್ಲ ಬರಿಯ ಕಲೆಗೆ ಸೀಮಿತವಾದುದಲ್ಲ. ನಾನು ಅಭ್ಯಸಿಸಿದ್ದು ಕಲೆಯ ಮೂಲಕ ಅಷ್ಟೆ. ಎಲ್ಲಾ ಕ್ಷೇತ್ರಗಳೊಂದಿಗೇ ಒಟ್ಟೊಟ್ಟಿಗೆ ಸಾಗುವಂತವು ಇವು. ಇದು ಕವಿತೆಗಳ ಸ್ವರೂಪವನ್ನೂ ಪ್ರಶ್ನಿಸಿದೆ. ಟ್ರಿಸ್ಟನ್ ಟ್ಸಾರಾ ಎಂಬಾತ ದಾದಾ ಕವಿತೆ ಹೇಗೆ ಬರೆಯುವುದೆಂದು ಸೂಚಿಸುತ್ತಾನೆ. ಎಷ್ಟು ಸ್ವಾರಸ್ಯಕರವಾಗಿದೆ ಎಂದರೆ ನಮ್ಮ ಕಾವ್ಯಪರಂಪರೆಯ ಸಂಪ್ರದಾಯನಿಷ್ಠರಿಗೆ ಅರಗಿಸಿಕೊಳ್ಳಲು ಕಷ್ಟವಾದೀತು. ಒಂದಷ್ಟು ಪದಗಳನ್ನು ಪೇಪರ್‌ಗಳಿಂದ ಕತ್ತರಿಸಿ ಒಂದು ಚೆಂಬಿನೊಳಗೆ ತುಂಬಿಸಬೇಕು. ಚೆನ್ನಾಗಿ ಕುಲುಕಿಸಿದ ನಂತರ, ಒಂದೊಂದೇ ಪದವನ್ನು ನೋಡದೆಯೇ ಹೆಕ್ಕಿ, ಬಂದುದನ್ನು ಹಾಗೆಯೇ ಸರತಿಯಂತೆ ಪಕ್ಕಪಕ್ಕದಲ್ಲಿ ಅಂಟಿಸುತ್ತಾ ಹೋಗಬೇಕು. ಒಂದಷ್ಟು ಸಾಲಿನ ನಂತರ ಕವಿತೆ ಸವಿಯಲು ಸಿದ್ಧ.
ಹಹ್ಹಾ. ಹೇಗಿದೆ? "ಹೀಗೂ ಕವಿತೆಯೇ?" ಅಲ್ಲವೇ!
ಕಲೆ ಕಲಿಸುವ ಉತ್ತಮ ಪಾಠವೆಂದರೆ ಇದೇ. ಪ್ರತಿಯೊಂದನ್ನೂ ಹೇಗೆ ನೋಡಬಹುದೆನ್ನುವುದು. ಅದೆಷ್ಟು ಅಸಂಬದ್ಧವಾಗಿಯೇ ಇರಲಿ, ಅದರಲ್ಲೂ ಒಳ್ಳೆಯದೇನಿದೆ ನೋಡುವುದು. ಆ ರೀತಿಯಲ್ಲಿ ಎಲ್ಲವನ್ನೂ ಅನುಭವಿಸಲು ಕಲಿಸುವುದು. ಅದು ಕಲಾರಚನೆಯ ಸಂದರ್ಭದಲ್ಲಿ ಅಷ್ಟೇ ಗೊಂದಲಗಳಿಗೂ ಕಾರಣವಾಗುತ್ತದೆ.
ಏನಪ್ಪಾ ಈ ಅಸಂಬದ್ಧತೆಯಲ್ಲಿನ ತತ್ವ ಎಂದರೆ, ಪದಗಳ ನಂತರ ಇನ್ನೊಂದು ಪದ ಬಂದಾಗ ಒಂದು ವಿಶೇಷ ಅರ್ಥ ಧ್ವನಿಸುತ್ತದೆ ಎನ್ನುವುದು. "ಚಂದ್ರ ನಗು ಹಗಲು" ಎಂದಿದ್ದರೂ ಏನೋ ಅರ್ಥ ಕಲ್ಪಿಸಿಕೊಳ್ಳಲಾಗುವುದಿಲ್ಲವೇ? 'ಸರ್ರಿಯಲಿಸಂ'ನಲ್ಲಿ ನಡೆದುದೂ ಇದೇ ಅಲ್ಲವೇ? ಅದು ಒಳ್ಳೆಯ ಲಯಬದ್ಧ ಕವಿತೆಯಲ್ಲದಿರಬಹುದು. ಆದರೆ, ಭಾಷೆಯ ಪರಿಮಿತಿಯನ್ನೂ, ವಿಸ್ತಾರವನ್ನೂ ಸೂಚಿಸಬಲ್ಲ ಕೃತಿ. ಮನಸ್ಸು ಹೇಗೆ ಅಸಂಬದ್ಧತೆಯ ನಡುವೆಯೂ ಸಂಬಂಧ ಕಲ್ಪಿಸುವುದೆಂಬುದರ ನಿರೂಪಣೆ. ಲುಡ್ವಿಗ್ ವಿಟ್ಗೆನ್‌ಸ್ಟೈನರ ಫಿಲಾಸಫಿ ತಿಳಿದವರಿಗೆ ಅರ್ಥವಾದೀತು.
ಹಾಗಾದರೆ, ಕವಿತೆ ರಚನೆಯ ಸಾಧ್ಯತೆಗಳನ್ನು ಹೊಸ ಆಯಾಮದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲವೇ? ನಮ್ಮಲ್ಲಿನ ಬಂಡಾಯ ಸಾಹಿತ್ಯ ಸಾಮಾಜಿಕ ಕಾಳಜಿಯದ್ದು. ಕವಿತೆಯ ಸ್ವರೂಪವನ್ನೇ ಪ್ರಶ್ನಿಸಿದ್ದಲ್ಲ. 'ದಾದಾಯಿಸಂ'ನಲ್ಲಿ ಎದ್ದ ಪ್ರಶ್ನೆಗಳು ಸ್ವರೂಪದ, ಅಭ್ಯಾಸದ ಕುರಿತೇ ಬಂದಂತವು. ಒಂದು ರೀತಿಯಲ್ಲಿ, ಇದೂ ಕೂಡ "ರೆಡಿಮೇಡ್ ವರ್ಡ್ಸ್" ಅನ್ನು ಬಳಸಿ ಕವಿತೆ ರಚಿಸುವ ಪ್ರಕ್ರಿಯೆ. ಎಷ್ಟೂ ತರಹದಲ್ಲಿ ಇದನ್ನೆಲ್ಲ ಹೇಳಬಹುದು. "ರೆಡಿಮೇಡ್ ಆಬ್ಜೆಕ್ಸ್" ಇಂದ ಇನ್ಸ್ಟಾಲೆಷನ್ ಹುಟ್ಟಿ, ಬೆಳೆದು ದೊಡ್ಡದಾಗಿ, ಮುಂದೇನಪ್ಪಾ ಎಂದು ಯೋಚಿಸುವಂತಾಗಿದೆ. ಕವಿತೆಯಲ್ಲಿ?! ತಿಳಿದವರು ಹೇಳಬೇಕು.
"ಇದನ್ನೆಲ್ಲ ಯಾರು ಬೇಕಾದರೂ ರಚಿಸಬಹುದು" ಎಂದು ತಕರಾರು ತೆಗೆಯಬಹುದು. ಅದರೆಲ್ಲೇನಿದೆ ಶ್ರೇಷ್ಠತೆ ಎಂದು ಕಾಣಲೂಬಹುದು. ಹೌದು. ಎಲ್ಲರೂ ರಚಿಸುವಂತಾಗಬೇಕು, ಅದರೆಲ್ಲೇನಿದೆ!? ಮುಂದುವರಿದಂತೆ ಅರಿವು ಬೆಳೆಯಬಹುದು. ಹೊಸ ಪ್ರಕಾರಗಳು ಹುಟ್ಟಿಕೊಳ್ಳಬಹುದು. ಹೇಗಿದ್ದರೂ ಯಾವ ಜಾತಿಯ ಹಂಗೂ ಇದಕ್ಕಿಲ್ಲ. ಅದದನ್ನೇ ತಿರುಗಿಸಿ ಮುರುಗಿಸಿ ಹೇಳುತ್ತಾ ಜಗಳವಾಡುವುದಾದರೂ ತಪ್ಪೀತು. ಹಾಗಂತ ಏನೇನೋ ಮಾಡಿದರೆ ಅದಕ್ಕೆ ಬೆಲೆಯೂ ಇಲ್ಲ. ಮಾಡಿಯಾದ ಮೇಲೆ ಏನಾಯಿತೆಂದು ಗಮನಿಸುವ ಕುತೂಹಲವಾದರೂ ಇರಬೇಕಾಗುತ್ತದೆ. ಹಂಗಿಸುವ ಉದ್ದೇಶಕ್ಕಾಗಿಯೇ ತಯಾರು ಮಾಡಿದರೆ ಅದು ನಿಕೃಷ್ಟ ಮನಸ್ಥಿತಿಯಾದೀತಷ್ಟೆ. ಒಮ್ಮೆ ಮಾಡಿ ಕೈತೊಳೆಯುವ ಮನಸ್ಥಿತಿಯೂ ಪ್ರಯೋಜನವಿಲ್ಲ. ಹೇಗೆ ಮುಂದುವರಿಸಿಕೊಂಡು ಹೋಗಬಹುದೆನ್ನುವ ಅರಿವೂ ಮುಖ್ಯವಾಗುತ್ತದೆ.
ದುಷಂಪ್ ತನ್ನ ಕಲಾಕೃತಿ 'ನ್ಯೂಡ್ ಡಿಸ್ಸೆಂಡಿಂಗ್ ಸ್ಟೇರ್‌ಕೇಸ್'ನಲ್ಲಿ ಚಲನೆಯನ್ನು ಹೇಗೆ ತೋರಿಸಬಹುದೆಂದು ಹುಡುಕಿದ್ದಾನೆ. ಆ ಮೂಲಕ ಚಿತ್ರಗಳೆಂದರೇ ಸ್ಥಬ್ಧವಾದುದೆಂಬ ಪರಿಕಲ್ಪನೆಯನ್ನೇ ಮುದುರಿ ಎಸೆದಿದ್ದಾನೆ. ಮೊದಲೆಲ್ಲ ಒಂದು ಕತೆಯನ್ನೇ ಬಿಂಬಿಸುವುದಿದ್ದರೂ ಮುಖ್ಯ ದೃಶ್ಯವನ್ನೊಂದನ್ನು ಸ್ಥಬ್ಧವಾಗಿಸಿದಂತಿದ್ದದ್ದು ಕಾಣಬಹುದು. ಆದರೆ ಈತ ಮಾಡಿದ ಪ್ರಯತ್ನ ಅದನ್ನು ಮೀರಿ ನಿಂತುದು.
ಈ ಕಾಲಕ್ಕೇ ಸಿನಿಮಾ ಬಂದಿತ್ತೆಂದು ಕಾಣುತ್ತದೆ. ಆದ್ದರಿಂದಲೇ ಆ ಯೋಚನೆ ತಲೆಗೆ ಬಂದಿರಬೇಕಷ್ಟೆ. ಅಥವಾ ಇದರಿಂದ ಅದೋ! ಇಸವಿಗಳೆಲ್ಲ ಸ್ವಲ್ಪ ಆಚೀಚೆ ಇರಬಹುದು. ಅಷ್ಟೊಂದು ಕರಾರುವಕ್ಕಾಗಿ ನಮಗೇನು ಬೇಕಿಲ್ಲ. ನಾವು ಈ ಕಾಲದಲ್ಲಿ ಬದುಕಬೇಕಾದವರಲ್ಲವೇ! 'ದಾದಾಯಿಸಂ'ನಿಂದ ಪ್ರಭಾವಿತಗೊಂಡು, ಇತಿಹಾಸದ ಅಪೂರ್ಣ ಜ್ಞಾನದಲ್ಲಿ, ಅದರ ಅಸಂಬದ್ಧತೆಯಲ್ಲೇ ಸೌಂದರ್ಯ ಕಾಣುವ ಪ್ರಯತ್ನ ಮಾಡುವ.
ಫ್ರಾನ್ಸಿಸ್ ಪಿಕಾಬಿಯಾ ಎಂಬಾತನೂ ಬೇರೆಯಾದ ತನ್ನದೇ ರೀತಿಯಲ್ಲಿ ಇದೇ ಸಮಸ್ಯೆಯನ್ನು ನಿಭಾಯಿಸ ಹೊರಡುತ್ತಾನೆ. ಒಂದರ ಮೇಲೊಂದರಂತೆ ಒಂದೇ ಹಾಳೆಯ ಮೇಲೆ ಚಿತ್ರಗಳನ್ನು ರಚಿಸುತ್ತಾನೆ. ಈಗಿನ ಆನಿಮೇಷನ್ ತಂತ್ರಗಾರಿಕೆಗೆ ಈತನ ಚಿತ್ರಗಳೇ ಸಹಾಯ ಮಾಡಿರುವಂತಿದೆ.
ದಾದಾಯಿಸಂ ಅನ್ನು ಆ್ಯಂಟಿ-ಆರ್ಟ್ ಮೂವ್‌ಮೆಂಟ್ ಆಗಿಯೂ ಗುರುತಿಸುತ್ತಾರೆ. ಎಲ್ಲಾ ತರಹದ ನಂಬಿಕೆಗಳನ್ನೂ, ಸ್ವರೂಪಗಳನ್ನೂ ತೊರೆದು ನಡೆದ ದಾರಿಯಿದು. ಈ 'ಇಸಂ' ಕೊನೆಗೊಂಡರೂ, ಸುಪ್ತ ಮನಸ್ಸಿನಲ್ಲಿ ಜಾಗೃತವಾಗೇ ಇತ್ತು. ಇನ್ನೂ ಉಳಿದಿದೆ. ನಮಗೆ ಇದಾವುದರ ಪರಿಚಯವೇ ಇಲ್ಲದಿದ್ದರೂ, ನಮ್ಮೊಡನೆ ಅದು ಬೆಳೆಯುತ್ತಾನೇ ಬಂದಿದೆ. ನಮ್ಮ ನಡವಳಿಕೆಗಳಲ್ಲಿ ಆಗಾಗ ಕಾಣಿಸುತ್ತಲೂ ಇರುತ್ತದೆ. ಹಲವರ ಕೃತಿಗಳಲ್ಲಿಯೂ.
ಎಸ್.ಎಲ್. ಭೈರಪ್ಪರು ಅವರನ್ನು ಅವರು ಸಂಪ್ರದಾಯ ನಿಷ್ಠರೆಂದು ಕರೆದುಕೊಂಡರೂ, 'ಪರ್ವ'ದ ಅಂತಿಮ ಅಧ್ಯಾಯವನ್ನು ಗಮನಿಸಬಹುದು. ವಾಕ್ಯದ ಸ್ವರೂಪವನ್ನೇ ಅವರು ಪ್ರಶ್ನಿಸಿದಂತಿದೆ. ವಾಕ್ಯಗಳ ಅಮೂರ್ತತೆಯನ್ನು ಸಾಧಿಸಹೊರಟರೇನೋ. ಪೂರ್ಣವಾಕ್ಯವಿಲ್ಲದೆ ಬರೆದ ಸಾಲುಗಳು ಕೃತಿರಚನೆಯ ಸಾಧ್ಯತೆಗಳನ್ನು ತೆರೆದಿಟ್ಟಿವೆ. ಗಮನಿಸುವ ವಿವೇಚನೆ ಬೇಕಷ್ಟೆ. ಅವರೇನು ಮಾಡಿದ್ದರೋ ನಮಗೆ ಕರಾರುವಕ್ಕಾಗಿ ಬೇಡ, ಅದು ಗೊತ್ತಾಗುವುದೂ ಇಲ್ಲ. ಸತ್ಯ ತಿಳಿಯುವುದಷ್ಟೇ ಮುಖ್ಯವಾಗುವುದು ನಮ್ಮಲ್ಲಿ 'ವಿಜ್ಞಾನ' ಹುಟ್ಟಿಸಿದ ಮನಸ್ಥಿತಿಯಿಂದ. ಕಲೆಗೆ ಸಂಬಂಧಪಟ್ಟಂತೆಯಾದರೂ "ಅದು ಹಾಗಂತೆ" ಎನ್ನುವಷ್ಟಕ್ಕೇ ಸೀಮಿತರಾಗುವುದು ಬೇಡ. "ಅದಿನ್ನೂ ಹೇಗೇಗೂ ಇರಬಹುದು" ಎನ್ನುವಲ್ಲಿ ಸಾಧ್ಯತೆಗಳನ್ನು ಕಂಡುಕೊಳ್ಳುವ. ನಮಗೇನು ಸಿಗುತ್ತದೆ ಎಂದು ಗಮನಿಸುವ. "What matters is what it permits" ಎಂಬ ಕಲಾವಿಮರ್ಶಕ ಜಾನ್ ಬರ್ಜರ್‌ರ ಮಾತನ್ನು ಯಾವಾಗಲೂ ನೆನಪು ಮಾಡಿಕೊಳ್ಳುತ್ತಿರುವ.
ಇಲ್ಲೆಲ್ಲ ಒಂದು ಕೃತಿಯನ್ನು ಈ 'ಇಸಂ'ಗೆ ಸೇರಿದ್ದೆಂದು ಕಟ್ಟಿ ಹಾಕಲು ಆಗುವುದಿಲ್ಲ. ಎಲ್ಲವೂ ಸುಮಾರಾಗಿ ಒಟ್ಟೊಟ್ಟಿಗೇ ನಡೆದುಕೊಂಡು ಸಾಗಿದವು. ಸುಪ್ತ ಪ್ರಜ್ಞೆಯಿಂದಲೋ, ಯೋಚನೆಯಿಂದಲೋ, ಭಾವನೆಯಿಂದಲೋ, ಎಲ್ಲವೂ ಸೇರಿಕೊಂಡೋ ಸುಮಾರು ಇಸಂಗಳಿಗೂ ಸೇರುವಂತಹ ಕೃತಿಗಳಾಗುತ್ತವೆ. ಒಬ್ಬ ಕಲಾವಿದರೇ ಎಲ್ಲದರಲ್ಲೂ ಕೈ ಆಡಿಸಿದಾಗ ಹಾಗಾಗುವ ಸಾಧ್ಯತೆಯೇ ಹೆಚ್ಚು. ಪಂಥ ಕಟ್ಟಿ ಕೂರುವ ಪರಿಪಾಠದವರು ಆಗ ಕಡಿಮೆಯಿದ್ದುದೂ ಹೌದು.
ಇವೆಲ್ಲದರ ಪರಿಣಾಮ, ಕಲೆಯನ್ನು ಮಾತ್ರವಲ್ಲ ಪ್ರಪಂಚವನ್ನೇ ಹೊಸ ಆಯಾಮದಲ್ಲಿ ನೋಡಬೇಕಾಗಿ ಬಂದುದು. ಕೆಟ್ಟದ್ದೆಂದು ಗ್ರಹಿಸಿದ್ದರಲ್ಲೂ ಸೌಂದರ್ಯವಿದೆ ಎನ್ನುವ ಮೂಲಕ, ನೋಡುವ, ಗ್ರಹಿಸುವ ದೃಷ್ಟಿಕೋನಗಳೇ ವಿಸ್ತಾರಗೊಳ್ಳುತ್ತಾ ಹೋದುದು. ಎಲ್ಲವನ್ನೂ ಒಳಗೊಂಡಂತೆ ಜಗತ್ತನ್ನೇ ಬೆಸೆಯಬೇಕಾಗಿ ಬಂದುದು. ನಮ್ಮ ಉಪನಿಷತ್ತುಗಳಲ್ಲಿ ಹೇಳುವ ಉನ್ನತ ಆದರ್ಶಗಳೂ ಇವೇ ಅಲ್ಲವೇ?



