ಕಲೆಗೊಂದು ಭೂಮಿಕೆ ಸರಣಿ ಬರಹಕ್ಕೆ ಸಣ್ಣದೊಂದು ಮುನ್ನುಡಿ
- sushrutha d
- Jun 20, 2021
- 1 min read
Updated: Feb 9, 2025
"ಅರ್ಥವಾಗದ್ದೇ ಕಲೆ" ಎಂಬ ಧೋರಣೆ ಹಲವು ಜನರದ್ದು. ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗದಿರುವುದು ಅದರ ಪರಿಣಾಮಗಳಲ್ಲೊಂದು. ಈ ಧೋರಣೆ ಹೀಗೆಯೇ ಮುಂದುವರಿದರೆ, ಈ ಊರಿನಲ್ಲಿದ್ದುಕೊಂಡು ಏನನ್ನೂ ಮಾಡಲು ಸಾಧ್ಯವಿಲ್ಲವೇನೋ ಎಂಬ ಚಿಂತೆ ನನಗೆ. ಹಾಗಾಗಿ, ಸಾಧ್ಯವಿದ್ದ ಮಟ್ಟಿಗೆ "ಅರ್ಥವಾಗದ ಕಲೆ"ಯಲ್ಲಿ ಆಸಕ್ತಿ ಹುಟ್ಟಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇನೆ. ಓದುವಷ್ಟಾದರೂ ಆಸಕ್ತಿಯಿರಲಿ :)
"ಕಲೆಗೊಂದು ಭೂಮಿಕೆ"ಯಲ್ಲಿ ಸಾಧಾರಣಿಗರಂತೆ ಅಂಕಿ ಅಂಶಗಳ ಆಧಾರದಲ್ಲಿ ಕೃತಿಗಳ ಮಹತ್ವವನ್ನು ನಾ ಹೇಳಹೊರಡುವುದಿಲ್ಲ. ಅದೇ ಡಾವಿಂಚಿ, ಮೈಕಲೇಂಜಲೋ ಹೆಸರುಗಳ ಪುನರಾವರ್ತನೆಯೂ ಅಲ್ಲ. ಆಡಮ್, ವೀನಸ್, ವರ್ಜಿನ್ ಮೇರಿ ಮುಂತಾದ ನಮಗೆ ಸಂಬಂಧವೇ ಪಡದ ಕತೆಗಳ ವಿವರಣೆಯೂ ಅಲ್ಲ. ಸುಮಾರಾಗಿ ಮಾಡರ್ನಿಸಮ್ ಶುರುವಾದಾಗಿನಿಂದ ನನಗೆ ಆಸಕ್ತಿದಾಯಕವೆನಿಸಿದ ಕೆಲವು ಕಲೆಗಳ ಪರಿಚಯವೆನ್ನಬಹುದು. ಅವಶ್ಯವೆನಿಸಿದಲ್ಲಿ ಕೆಲವು ಇತರ ವಿಷಯಗಳೂ ಇಣುಕಬಹುದು.
ಪರಿಚಯವಾದ ಕಾರಣ ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಬರೆಯಬೇಕೆಂದಿದ್ದೇನೆ. ಕಲಾತತ್ವಗಳು, ಜೀವನ, ಕಲೆ, ಆದರ್ಶ ಇತ್ಯಾದಿಗಳೆಲ್ಲ ಸಂಕೀರ್ಣವಾಗಿ ಒಂದರ ಮೇಲೊಂದು ಹೆಣೆದುಕೊಂಡು ಅಡ್ಡಿ ಮಾಡಬಹುದು. ಹಾಗೆಂದು, ಸಂಕುಚಿತ ದೃಷ್ಟಿಯಲ್ಲಿ ಕಾಣದೆ, ಅದಕ್ಕೆ ಎಡೆಕೊಡದಂತೆ ಬರೆಯುವ ಜೊತೆಜೊತೆಗೇ ಇಂದಿನ ಕಾಲಕ್ಕೆ ಹೊಂದುವಂತಹ ಕಲಾ-ದರ್ಶನವೊಂದನ್ನು ರೂಪಿಸುವ ದುಸ್ಸಾಹಸದ ಪ್ರಯತ್ನ ನನ್ನದು.
ನಾನು ಈ ಬರಹಗಳನ್ನೂ ಕಲೆಯಾಗಿ ಕಾಣುವ ಕಾರಣ ಬರೆಯುವ ಶೈಲಿ ಸ್ವಲ್ಪ ವಿಭಿನ್ನವೆನಿಸಬಹುದು. ಅದಕ್ಕೆ ಅದರದ್ದೇ ಆದ ಕಾರಣಗಳಿವೆ ಮತ್ತು ಮುಂದೊಂದು ದಿನ ಇದೇ ಸರಣಿಯಲ್ಲಿ ಅವು ಪ್ರಕಟವಾಗಲಿಕ್ಕೂ ಸಾಕು. ಸದ್ಯಕ್ಕೆ ಸ್ವಲ್ಪ ಹೆಚ್ಚುಕಮ್ಮಿ ಅನಿಸಿದರೆ ಹೊಟ್ಟೆಗಾಕಿಕೊಂಡು ಓದಿ. ಸಲಹೆಗಳಿದ್ದರೆ ತಿಳಿಸಿ. ಕೆಲ ಅಭಿಪ್ರಾಯಗಳು ಕಟುವಾಗಿದ್ದರೂ ಅದೆಲ್ಲದರ ಹಿಂದಿನ ಉದ್ದೇಶ ಒಳ್ಳೆಯದೇ ಇದೆ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇನೆ. ಓದುಗರಲ್ಲಿ ಅಭಿಪ್ರಾಯ ಭೇದಗಳಿದ್ದಲ್ಲಿ ಅದು ಸಹಜ ಮತ್ತು ಸಹನೀಯವೇ ಆಗಿರುತ್ತದೆಂಬ ಆಶಾವಾದ ನನ್ನದು.
ಸ್ಪಷ್ಟನೆ: ಈ "ಕಲೆಗೊಂದು ಭೂಮಿಕೆ" ಬರಹ ಸರಣಿಗಾಗಿ ಯಾವುದೇ ಜಾತಿ, ಲಿಂಗ, ಧರ್ಮಗಳು ಹಾನಿಗೊಳಗಾಗಿರುವುದಿಲ್ಲ.



