ಕಲೆಗೊಂದು ಭೂಮಿಕೆ ಸರಣಿ ಇವರಿಗೇ ಅರ್ಪಣೆ
- sushrutha d
- Jul 21, 2023
- 2 min read
Updated: Sep 26, 2024
"ಬುದ್ಧಿಮಂತ ಇದ್ದಿ ನೀ" ಅನ್ನೋರು. ಮೂಲತಃ ಗೋವಾದವರಾಗಿ, ದೊಡ್ಡವರಾದ ಮೇಲೆ ಕನ್ನಡ ಕಲಿತಿದ್ದಕ್ಕೆ ಅವರ ಬಾಯಲ್ಲಿ ಬುದ್ಧಿವಂತ ಹನುಮಂತ ಮಿಕ್ಸ್ ಆಗಿ ಬುದ್ಧಿಮಂತ ಆಗಿತ್ತು. ಅವನು/ಳು/ರು ಎಂಬುದಕ್ಕೆಲ್ಲ ಕಷ್ಟಪಡದೇ ಎಲ್ಲರನ್ನೂ ಅದು ಇದು ಎಂದು ಪ್ರಾಮಾಣಿಕವಾಗಿ ಪ್ರಾಣಿಸಮಾನವಾಗಿ ಕಾಣುತ್ತಿದ್ದವರು ನಮ್ಮ ಉಲ್ಲಾಸ್ ಸರ್. ಕೆಲವರಿಗೆಲ್ಲ ಅದು ಸಿಟ್ಟು ಬರಿಸುತ್ತಿತ್ತು ಬಿಡಿ. ನಮಗೇನೋ ಖುಷಿ. ಇದೇ ಒಂತರಾ ಚೆನ್ನಾಗಿದೆ ಅನ್ನಿಸೋದು. ನಾವೂ ಹಂಗೇ ಆಡುತ್ತಿದ್ದುದಕ್ಕೋ ಏನೋ!
ಕಾಲೇಜಿಗೆ ಸೇರಿದ ಹೊಸತರಲ್ಲಿ ಯಾರ ಬಳಿ ಒಂದರ್ಧ ಗಂಟೆ ಮಾತಾಡಿದ್ರು "ಉಲ್ಲಾಸ್ ಸರ್" ಬರದೆ ಇರ್ತಿರಲಿಲ್ಲ. ಅವರೇನೋ ಭಯಂಕರದ ಜನ, ಅವರೊಂದಿಗೆ ನಾವೆಲ್ಲ ಮಾತಾಡಲಿಕ್ಕೇ ಸಾಧ್ಯವಿಲ್ಲವೆಂಬಂತಹ ಭಾವ. ನಾವೂ ಮೊದಮೊದಲು ಹೆದರಿಕೊಂಡು ಸ್ವಲ್ಪ ದೂರವೇ ಇದ್ವಿ. ತುಂಬಾ ಏನಲ್ಲ, ಇದ್ದರೆ ಇದ್ದರೆ ಎಷ್ಟು ಭಯಂಕರ ಇರಬಹುದು ಎಂದು ಲೆಕ್ಕಾಚಾರ ಹಾಕುವಷ್ಟು ದೂರದಲ್ಲಿ.
ಒಂದು ಸಲ ಧೈರ್ಯಮಾಡಿ ಅವರೆದುರು ಕೂತು "ಸಾರ್, ನೀವು ಹೇಳಿದ್ದನ್ನೆಲ್ಲ ನಾವ್ಯಾಕೆ ಮಾಡಬೇಕು ಸಾರ್?!" ಎಂದಿದ್ದೆ ಅಷ್ಟೇ. ಇಂತವಕ್ಕೆಲ್ಲ ಕಿರಿಕಿರಿ ಹಣೆಪಟ್ಟಿ ಇಸಕೊಂಡು ಕ್ಲಾಸಿಂದ ಹೊರಹೋಗಿ ಅಭ್ಯಾಸ ಇರೋ ನನಗೆ ಇವರು ಹೊಗಳಿದಾಗ ಆಶ್ಚರ್ಯ. ಮಾರನೇ ದಿನಾನೂ ಇನ್ನೊಬ್ಬ ಮೇಷ್ಟ್ರ ಹತ್ರ ನನ್ನ ತೋರಿಸಿ, "ಇದು ಇದ್ಯಲ್ಲ ಇದು, ನಿನ್ನೆ ನನ್ ಮಾತು ಯಾಕ್ ಕೇಳ್ಬೇಕು ಅಂತಿತ್ತು" ಅಂತ ಖುಷಿ ಖುಷಿಯಿಂದ ಹೇಳಿದಾಗ ನಂಗೆ ನಾ ಕೇಳಿದ್ರಲ್ಲಿ ಅಂತದ್ದೇನಿತ್ತು ಗೊತ್ತಾಗದೆ ಒಂಥರಾ ಮುಜುಗರ.
ಅವ್ರಿದ್ದದ್ದೇ ಹಾಗೆ. ಸಿದ್ಧವಿದ್ದ ಪಾಠವ ಎಲ್ಲರನ್ನೂ ಗುಡ್ಡೆ ಹಾಕಿ ಬುರ್ರಂತ ಮಾಡಿ ಹೋಗೋರಲ್ಲ. ಪ್ರತಿ ವಿದ್ಯಾರ್ಥಿಯನ್ನೂ ಒಂದು ಇಂಡಿವಿಜುವಲ್ ಎಂಟಿಟಿ ಆಗಿ ಗುರುತಿಸಿ, ದಿನಪೂರ್ತಿ ತಲೆಕೆಡಿಸಿಕೊಂಡು, ಎಲ್ಲವನ್ನೂ ನೆನಪಿಟ್ಟುಕೊಂಡು, ನಮ್ಮನ್ನೂ ಕುಳ್ಳಿರಿಸಿಕೊಂಡು ಪ್ರಪಂಚ ಸುತ್ತಿಸೋರು. ಬಿಳಿ ಹಾಳೆಯಲ್ಲಿ ಹಾಕಿದ ಕಪ್ಪು ಗೆರೆಯ ಹಿಡಿದು, ವಿಶ್ವಾಮಿತ್ರನಲ್ಲಿಗೆ ಹೋಗಿ, ಬುದ್ಧನ ಹತ್ತಿರ ಕರೆದು, ಕೀಫರ್, ಕೆಂಟ್ರಿಜ್, ಕಂಫ್ಯೂಶಿಯಸ್ ಎಂದೆಲ್ಲ ಕೇಳೇ ಇಲ್ಲದ ಒಂದಷ್ಟು ಹೆಸರುಗಳ ಸೂಚಿಸಿ, ಚಿತ್ರ, ಪುಸ್ತಕ, ಸಿನಿಮಾ, ಮ್ಯೂಸಿಕ್, ಪೊಲಿಟಿಕ್ಸು ಅದು ಇದು ಎಂದು ಬನಾರಸ್ ಗಲ್ಲಿಯಿಂದ ಹೊತ್ತು ತಂದಿದ್ದ ಎಲ್ಲವನ್ನೂ ಅಟ್ಟಿ ಅಟ್ಟಿಯಾಗಿ ಸುರಿಯೋರು. ಹೆಕ್ಕಿಕೊಳ್ಳಲು ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಬ್ಬರು ನೋಟ್ ಮಾಡ್ಕೊಳ್ಳೋರು, ಇನ್ನೊಬ್ರು ರೆಕಾರ್ಡ್ ಮಾಡ್ಕೊಳ್ಳೋರು, ಇನ್ನೊಬ್ರು ನೆನಪಿಟ್ಕೊಬೇಕು ಅಂತಂದು ಮರ್ತು ಹೋಗೋರು, ಇನ್ನೊಬ್ರಿಗೆ ತಲೆಮೇಲೇ ಹೋಗಿರೋದು. ಕೊನೇಗೆ ನಾವು ನಾವು ಸೇರಿ ಕಿತ್ತಾಡಿ ಒಂದು ಕಂಕ್ಲೂಶನ್ನಿಗೋ ಕನ್ಫ್ಯೂಷನ್ನಿಗೋ ಬಂದು ವಾಪಾಸ್ ಹೋದ್ರೆ ಅವತ್ತು ಇನ್ನೊಂದಷ್ಟು ಸುರಿತಿದ್ರು.
ನಮ್ ನಮ್ ಹೆಸ್ರು ಹೇಳಿದ್ರೆ ದೇವ್ರಾಣೆಗೂ ಆ ಮನ್ಷಂಗೆ ನಾವು ಯಾರಂತನೇ ಗೊತ್ತಾಗಲ್ಲ. ಸುಶ್ರುತ ಅನ್ನೋದ್ರ ಬದಲು ಇರುವೆ, ಬ್ರೈನ್, ಗ್ರಾವಿಟಿ, ವರ್ಡ್ಸ್ ಅಂತೆಲ್ಲ ಹೇಳಿದ್ರೆ "ಓ ಅದು, ಅದು ಏನ್ಮಾಡ್ತಿದೆ ಈಗ!" ಅಂತಿದ್ರೇನೋ. ನಾನು ಅಂತಲ್ಲ. ಫುಲ್ ಸಣ್ಣಕೆ ಜೂಮ್ ಹಾಕ್ತಿದ್ನಲಾ ಅಂದ್ರೆ ನಿರಂಜನ್ ನೆನ್ಪಾಗ್ತಿದ್ದ. ಹೀಗೇ ಪ್ರತಿಯೊಬ್ಬನನ್ನೂ ವರ್ಕ್ ಮೂಲಕ ಗುರುತಿಸೋ ಅವ್ರು, ಅದೂ ಅಷ್ಟು ವರ್ಷದಿಂದ, ಅವ್ರ ತಲೆಯೊಳಗೆ ಅದೆಷ್ಟು ಕಂಪಾರ್ಟ್ಮೆಂಟ್ ಮಾಡ್ಕೊಂಡಿದ್ರೋ! ನಾವು ಜೋಶ್ ಜೋಶಲ್ಲಿ ಕೇಳಿದ ಪ್ರಶ್ನೆನ ನಾವೇ ಮರೆತು ಹೋದ್ಮೇಲೆ ಎಷ್ಟೋ ದಿನಗಳ ನಂತರವೂ ನಮಗೇ ನೆನಪಿಸಿ ವಿವರಿಸುತ್ತಿದ್ರು ಅಂದ್ರೆ ಲೆಕ್ಕ ಹಾಕಿ! ಯಪ್ಪಾ! ರಾತ್ರಿಯೆಲ್ಲಾ ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡೋ ಮಾಷ್ಟರು ಈ ಕಾಲದಲ್ಲಿ ಇದ್ದಾರೆ ಅಂದ್ರೆ... ಅಂತವ್ರು ನಮ್ಗೊಬ್ರು ಸಿಕ್ಕಿದ್ದಾರೆ ಅಂದ್ರೆ...ಅದೇನೋ ಇವಾಗ ನಮ್ಗೇ ನಂಬೋಕಾಗಲ್ಲ.
ಏನ್ ಹೇಳ್ಕೊಟ್ಟಿಲ್ಲ ಅವ್ರು. ಮಾತಾಡ್ತಿದ್ರು ಅಷ್ಟೆ. ಅದೇನ್ ಮ್ಯಾಜಿಕ್ ಮಾತುಗಳೋ ಏನ್ ಕತೆನೋ. ಏನೂ ಹೇಳ್ಕೊಡದೆ ಎಲ್ಲದರಲ್ಲೂ ಆಸಕ್ತಿ ಹುಟ್ಟಿಸಿ ನಾವು ನಾವೇ ಹುಡುಕಿ ತಿಳ್ಕೊಳ್ಳೋ ಹಾಗೆ ನಮ್ಮನ್ನ ರೆಡಿ ಮಾಡಿಸ್ಬಿಟ್ರು. ಹೊಸ ಶಿಕ್ಷಣ ವ್ಯವಸ್ಥೆಯಲ್ಲೂ ಗುರುಕುಲ ಸಿಸ್ಟಮ್ನ ತಕ್ಕ ಮಟ್ಟಿಗಾದ್ರೂ ಪರಿಚಯಿಸಿಬಿಟ್ರು. ನಾವು ನಂಬಿದ ವ್ಯಾಲ್ಯೂಗಳಿಗೆ ನಾವೆಷ್ಟು ಬದ್ಧರಾಗಿರಬೇಕು ಅಂತ ಬದುಕಿ ತೋರಿಸಿಬಿಟ್ರು. ಒಂದು ಲೆಕ್ಕದಲ್ಲಿ ಅದನ್ನ ನಾವೇ ಈಗ ಹಾಳುಮಾಡ್ತಿದ್ದೀವಿ. ಅವ್ರಿಗೆ ಅವ್ರು ತೀರ್ಕೊಂಡ್ ಮೇಲೆ ಅವ್ರೊಂದು ಕುರುಹೂ ಉಳಿಬಾರ್ದು ಅಂತಿತ್ತು. ಹಾಗಾಗಿ ಆಫೀಶಿಯಲ್ ಲೆಟರ್ಸ್ಗೂ ಸಹಿ ಹಾಕೋಕೆ ಹಿಂದೆ ಮುಂದೆ ನೋಡ್ತಿದ್ದವ್ರ ಈ ಆಸೆಯನ್ನ ಗೌರವಿಸೋದಾದ್ರೆ ನಾವು ಎಲ್ಲಾ ಗೊತ್ತಿದ್ದೂ ಗೊತ್ತಿಲ್ಲದ ಹಾಗಿರ್ಬೇಕಿತ್ತು. ಆದ್ರೆ ನಮಿಗ್ ತಡ್ಕೊಳಾಕ್ ಆಗಲ್ವಲ್ಲ. ಇಷ್ಟೂದ್ದ ಪೋಸ್ಟ್ ಬರಿತಿದ್ದೀವಿ! ಹಯ್ಯೋ ಹಯ್ಯೋ!
ಇಂತ ಒಂದ್ ನಾಲ್ಕು ಮಾಷ್ಟರು ಎಲ್ಲರ ಜೀವನದಲ್ಲಿ ಸಿಕ್ಕಿದ್ರೆ ವಿದ್ಯಾರ್ಥಿ ಪದಕ್ಕೂ ಖುಷಿ ಆಗೋದು. ಸಿಕ್ಕಿದ್ದು ಇವ್ರೇ. ಅದೂ ಒಂದು ವರ್ಷ. ಅಷ್ಟರಲ್ಲೇ ಅವ್ರ ಮನೇಗೆ ಹೋಗಿ ಒಂದು ವಾರ ಟಿಕಾಣಿ ಹೂಡಿದ್ದೂ ಆಗೋಯ್ತು. ಪೇಯಿಂಟಿಂಗ್ ಮಾಷ್ಟರ್ ಆಗಿದ್ದ ಅವ್ರ ಹತ್ರ ಸಂಗೀತ ಕೇಳೋದು ಹೇಗೆ ಅಂತನೂ ಕೇಳಿದ್ದಾಯ್ತು. ಒಂದೂ ಬಿಟ್ಟಿಲ್ಲ ಈ ಮನುಷ್ಯ. ಎಂತ ದೊಡ್ಡ ಫಿಲಾಸಫಿ ಆಗಿದ್ರೂ ಅದ್ರ ಮೂಲ ನಮ್ ಉಲ್ಲಾಸ್ ಸರ್ ಆಗ ಹೇಳಿದ್ರಲ್ಲೇ ಇದೆ ಅನ್ಸುತ್ತೆ ಈಗ್ಲೂ. ನಮ್ಮಂತ ಪುಡಿ ಹುಡುಗ್ರ ವರ್ಕ್ ನೋಡಿ ನಿಜವಾಗಿ ಖುಷಿ ಪಡುತ್ತಿದ್ದ ಮುಗ್ಧತೆಯೂ ಇತ್ತು ಅವ್ರಿಗೆ ಅನ್ನಿ. ಅವ್ರೊಬ್ರು ನೋಡಿ ಏನೋ ಹೇಳಿದ್ರೆ ಸಮಾsssಧಾನ ಆಗೋದು. ಅವ್ರಿಗೆ ತೋರ್ಸೋಕೋಸ್ಕರನೇ, ಅವ್ರೇನ್ ಹೇಳ್ತಾರೆ ಅನ್ನೋ ಕುತೂಹಲಕ್ಕೇನೇ ಜಾಸ್ತಿ ಜಾಸ್ತಿ ಏನೇನೋ ಮಾಡ್ತಿದ್ವಿ. ಹುಡುಗ್ರೇನೋ ಪ್ರಯತ್ನ ಪಡ್ತಿದ್ದಾರೆ ಅಂತ ಅವ್ರಿಗೂ ಖುಷಿ, ಅವ್ರು ಹೇಳೋದೆಲ್ಲ ಕೇಳಿ ತಲೆಕೆಡ್ಸಿಕೊಳ್ಳೋದು ನಮ್ಗೂ ಖುಷಿ. ಒಳ್ಳೆ ಸರ್ ಮಾತ್ರ.
ಇನ್ನಿಲ್ಲ ಅಷ್ಟೆ.
ನಮ್ಮ ಕಲೆಗೊಂದು ಭೂಮಿಕೆ ಆಗಿದ್ದು ಇವರೇ. ಸರಣಿ ಇವರಿಗೇ ಅರ್ಪಣೆ.

Ullas sir


