ನಾನು ಸಿನಿಮಾ ನೋಡುವುದು ನಿಲ್ಲಿಸಿದ್ದು ಯಾಕೆ ?
- sushrutha d
- Mar 26, 2024
- 2 min read
Updated: Sep 22, 2024
ವಾರಕ್ಕೊಮ್ಮೆಯಾದರೂ ಯಾವುದೋ ಸಿನಿಮಾ ಬಂದಿದೆ ನೋಡಿ ಗೆಲ್ಲಿಸಿ ಎನ್ನುವುದು ಕಾಣಿಸುತ್ತಿರುತ್ತವೆ. ಉಳಿದವರ ಬಗ್ಗೆ ನನಗೊತ್ತಿಲ್ಲ. ಆದರೆ, ನಾನು ನೋಡುವುದು ನಿಲ್ಲಿಸಿದ್ದು (ಕನಿಷ್ಟಪಕ್ಷ ಕಡಿಮೆ ಮಾಡಿದ್ದು) ಯಾಕೆ ಎಂದು ಹೇಳಬಲ್ಲೆ.
1. ಸಿನಿಮಾದವರಾರು ಸಿನಿಮಾ ಮಾಡದೇ ಆ ಮಾಧ್ಯಮದ ಮೂಲಕ ಕಥೆ ಹೇಳುವುದಕ್ಕಷ್ಟೆ ಉತ್ಸುಕರೆನಿಸಿದ್ದು. ಇದಕ್ಕೆ ಪುಷ್ಟೀಕರಿಸುವಂತೆ ನೋಡಿದ ಇಂಟರ್ವ್ಯೂಗಳಲ್ಲೆಲ್ಲ ಡೈರೆಕ್ಟರುಗಳು ಸಿನಿಮಾಕ್ಕೆ ಕಥೆ ಎಲ್ಲದಕ್ಕಿಂತ ಮುಖ್ಯ. ಕಥೆಯೇ ಕಿಂಗ್ ಎಂದೆಲ್ಲ ಭಯಂಕರ ಮಾಡಿ ಹೇಳಿದ್ದು ನನಗೆ ಸರಿಬರದಿದ್ದುದು. ಡೈರೆಕ್ಟರ್‌ಗಳ ಯೋಚನೆಯೇ ಇಷ್ಟೆಂದಾದರೆ ಮತ್ತೆ ದೊಡ್ಡ ನೋಡಲಿಕ್ಕೇನಿದೆ ಎಂದನಿಸಿದ್ದು!
2. ಒಂದಷ್ಟು ವರ್ಷಗಳು ರಂಗಭೂಮಿಯ ನಾಟಕಗಳು ನೋಡಲು ಸಿಕ್ಕಿದುದರಿಂದ, ಮತ್ತು ಆ ನಾಟಕಗಳ ಬ್ಯಾಕ್‌ಸ್ಟೇಜ್‌ನಲ್ಲಿ, ಸೆಟ್ ಡಿಸೈನಿಂಗಲ್ಲಿ ನಾನೂ ಒಂದಷ್ಟು ತೊಡಗಿಕೊಂಡಿದ್ದರಿಂದ ದಕ್ಕಿದ ಒಳನೋಟದಿಂದ ಸಿನಿಮಾದಲ್ಲಿ ಲೈವ್ಲಿನೆಸ್ ಏನೇನೂ ಇಲ್ಲವೆಂಬ ಭಾವ ಉಂಟಾದ್ದು.
3. ಸಿನಿಮಾಗಳೆಲ್ಲ ಒಂದೇ ಫಾರ್ಮ್ಯಾಟ್‌ಗೆ ಸಿಲುಕಿಕೊಂಡಂತೆನಿಸಿದ್ದು. ಹೊಸ ಹೊಸ ಯೋಚನೆಗಳು ಯಾವ ಯಾವ ರೀತಿಯಲ್ಲಿ ಒಂದು ಕಲಾಪ್ರಕಾರದಲ್ಲಿ ರೂಪ ತಳೆಯುತ್ತಿದೆ ಎಂದು ಗಮನಿಸಹೊರಟರೆ, ಇಲ್ಲಿ ಹೊಸ ಯೋಚನೆಗಳೂ ಇಲ್ಲ, ಹಳೆಯದ್ದೇ ಆದರೂ ರೂಪುಗೊಳ್ಳುವ ಬಗೆಯಲ್ಲೂ ಹೊಸತನವಿಲ್ಲ. ಒಂದು ರೀತಿಯಲ್ಲಿ ಇಂಪ್ಯಾಕ್ಟಿಂಗ್ ಕ್ರಿಯೇಟಿವ್ ಎನರ್ಜಿ ಇಲ್ಲವೆಂದೂ ಅಥವಾ ಕ್ರಿಯೇಟಿವ್ ಫ್ರೀಡಂ ಇರುವಷ್ಟನ್ನು ಸರಿಯಾಗಿ ಯಾರೂ ಬಳಸಿಕೊಳ್ಳುತ್ತಿಲ್ಲವೆಂದಿನಿಸಿದ್ದು.
4. ಸಿನಿಮಾ ಅನ್ನೋದೇ ಒಂದು ಡಿಸೀವಿಂಗ್ ಮೀಡಿಯಂ ಎಂದನಿಸಿದ್ದು. ಅಂದರೆ, ಏನನ್ನೋ ನೈಜವಾಗಿ ನಡೆಯುತ್ತಿರುವಂತೆ ಚಿತ್ರಿಸಿ, ಅದು ಹಾಗೆಯೇ ನಡೆಯುತ್ತಿದೆ ಎಂಬಂತೆ ನಂಬಿಸಿ ಮೋಸಮಾಡುವ ಮಾಧ್ಯಮವೆಂದು. ನಮ್ಮ ಕಲ್ಪನಾಶಕ್ತಿಗೆ ಅವಕಾಶ ಕೊಡುವ ಯೋಚನೆಯೇ ಸಿನಿಮಾ ಮಾಡುವವರಲ್ಲಿ ಇಲ್ಲವೆಂದೆನಿಸಿದ್ದು.
5. ಹೆಚ್ಚಿನ ವಿಡಿಯೋಗಳನ್ನೂ 1.5x, 2x ಸ್ಪೀಡ್ ಅಲ್ಲಿ ನೋಡಿ ಅಭ್ಯಾಸವಾದಮೇಲೆ ಸಿನಿಮಾಗಳೆಲ್ಲ ಬಹಳ ಸ್ಲೋ ಎಂದನಿಸಿದ್ದು. ಮೂರು ನಿಮಿಷಗಳಲ್ಲಿ ಹತ್ತು ವಿಷಯಗಳನ್ನು ಹೇಳಿ ಮುಗಿಸುವ ಈ ಯೂಟ್ಯೂಬ್ ಕಾಲದಲ್ಲಿಯೂ, ಮೂರು ಗಂಟೆಯಲ್ಲಿ ಒಂದೇ ವಿಷಯವನ್ನು, ಅದೂ ಹೆಚ್ಚಾಗಿ ಗೊತ್ತಿರುವುದನ್ನೆ ತಿರುಗಿಸಿ ಮುರುಗಿಸಿ ನಿಧಾsssssನಕ್ಕೆ ಎಳೆಯುವುದನ್ನು ಸಹಿಸಲಾಗದಿರುವುದು.
ಸಿನಿಮಾಕ್ಷೇತ್ರ ಹೀಗಾಗಲು ಕಾರಣವೂ ಹಲವಿರಬಹುದು. ಯಾವನೋ ಸಿನಿಮಾ ಮಾಡಲು ಹಣ ಹಾಕ್ಬೇಕು ಎಂದಾದಾಗ ಕಥೆ ಚೆನ್ನಾಗಿಲ್ಲದೆ ಅಥವಾ ಕಥೆಯೇ ಇಲ್ಲದೆ ಕನ್ವೀನ್ಸ್ ಹೇಗೆ ಮಾಡೋಕಾಗುತ್ತೆ? ನನ್ನ ಟೇಸ್ಟ್ ನಂಬಿ, ಏನೋ ಮಾಡ್ತೀನಿ, ದುಡ್ಡು ಕೊಡಿ ಎಂದು ಹೇಗೆ ಒಪ್ಪಿಸಬಹುದು?! ಆಗ ಆಟೋಮೇಟಿಕಲಿ ಕಥೆ ಮುಖ್ಯವೆಂದಾಗಿ, ಸಿನಿಮಾವೇ ಸೈಡಿಗೆ ಹೋಗುವಂತಾಯ್ತೇನೋ! ಇದಲ್ಲದೆ ನಮಗೆ ಸುಲಭಕ್ಕೆ ಗೊತ್ತಾಗದ ಫೀಲ್ಡಿನ ಒಳಗಿನ ಕಷ್ಟಗಳು ಬೇರೆಯೇ ಇದ್ದರೂ, ಕೆಲವರಾದ್ರೂ ಯಾವುದೋ ರೀತಿಯಲ್ಲೇ ಈ ಸಮಸ್ಯೆಗಳನ್ನು ಮೀರುವ ಪ್ರಯತ್ನ ಪಡಬಹುದೇನೋ! ಅಟ್ ಲೀಸ್ಟ್, ಶಾರ್ಟ್ ಮೂವೀಸ್‌ಗಳಲ್ಲಿ! ಅಲ್ಲೂ ಇದೇ ಸಿದ್ಧ ಮಾದರಿಗಳ ಹಿಂದೆಯೇ ಹೋಗುವುದಾ?! ಮಾಧ್ಯಮದೊಂದಿಗೆ ಒಂದು ಫ್ರೀಡಂ ತೆಗೆದುಕೊಳ್ಳುವವರೇ ಇಲ್ಲವೆಂದಾದರೆ ಮತ್ತೆಲ್ಲಿ ಹೊಸತನವಿರುತ್ತದೆ! ಆ ತರಹದವರೂ ಇರಬಹುದು, ಬೆರಳೆಣಿಕೆಯಷ್ಟಾದರೂ. ನನಗೊತ್ತಾಗಿಲ್ಲ ಅಷ್ಟೆ.
ಇನ್ನೂ ಉದ್ದಾಕೆ ಹೇಳ್ತಾ ಹೋಗ್ಬೋದು. ಪ್ರತಿಯೊಂದು ಪಾಯಿಂಟನ್ನು ಹೆಚ್ಚು ವಿವರಿಸಲೂಬಹುದು. ಜೊತೆಗೆ, ಇದನ್ನೂ ಹೇಳಿಬಿಡುವುದೊಳ್ಳೆದು - ಖಂಡಿತವಾಗಿಯೂ ಇಲ್ಲಿ ಬರೆದದ್ದಕ್ಕೆಲ್ಲಕ್ಕೂ ಅಪವಾದಗಳಿರುತ್ತವೆ. ಇದು ಇಡಿಯ ಸಿನಿಮಾಕ್ಷೇತ್ರದ ಕುರಿತಲ್ಲ. ನಮ್ಮ ಸುತ್ತಮುತ್ತಲು ಕಾಣುವ ಸಿನಿಮಾಗಳನ್ನಷ್ಟೇ ಪರಿಗಣಿಸಿದ್ದುದರಿಂದ ದೊಡ್ಡ ದೊಡ್ಡ ಸಿನಿಫೈಲುಗಳು ನೋಡಲೇಬೇಕಾದ ಲಿಸ್ಟೊಂದನ್ನೂ ಕೊಡದೆ ಶಾಂತಿಯನ್ನು ಕಾಪಾಡಬೇಕು.


