top of page

ನಮ್ಮ ಬಳಿ ಬೆನ್ನೆಲುಬಿರೋ ಯೋಚನೆಗಳೇ ಇಲ್ಲ!

  • Writer: sushrutha d
    sushrutha d
  • Aug 13, 2024
  • 2 min read

Updated: Sep 22, 2024

2024ರ ಬುಕ್ ಬ್ರಹ್ಮ ಲಿಟ್ ಫೆಸ್ಟಲ್ಲಾದರೂ ಈಗಿನ ಕಾಲದ ಬಗ್ಗೆ ಒರಿಜಿನೆಲ್ ಚಿಂತನೆಗಳಿವೆಯಾ ನೋಡೋಕೆ ಒಂದಷ್ಟು ಗೋಷ್ಠಿಗಳನ್ನ ನೋಡ್ದೆ. ಹಳೇ ಕಾಲದ ಶ್ರೇಷ್ಠತೆ ಮಾತಾಡೋರ್ಗೆಲ್ಲ ಮುಷ್ಠಿಲಿ ನನ್ ಕಾಲಿಗೇ ಗುದ್ದುತ್ತಾ ಹೊಸ ಯೋಚನೆಗಳ ಹುಡುಕ್ತಿದ್ದೆ. ಸೋಶಿಯಲ್ ಮೀಡಿಯಾದಲ್ಲಿ ಮಾರ್ಕೆಟಿಂಗ್ ಮಾಡಬಹುದು, ಎಐ ಅನ್ನು ಕೃತಿ ಕಟ್ಟುವ ಕಾರ್ಯದಲ್ಲಿ ಬಳಸಿಕೊಳ್ಳಬಹುದು ಎಂಬಂತಹ ವಿಷಯಗಳು ಹಳೆಯ ಜನರೇಷನ್ನಿನ ಕಣ್ಣು ತೆರೆಸುವಂತಿತ್ತೋ ಏನೋ! ನಮಗಂತೂ ಅಲ್ಲ.


ನಮ್ಮ ಕರ್ನಾಟಕದವರು ಯಾಕಿಂಗೆ ಗೊತ್ತಿಲ್ಲ. ಅದೇನೋ ಹೆದರಿಕೊಂಡು ಹೆದರಿಕೊಂಡು ಮಾತಾಡೋದೇ ರೂಢಿ ಆಗಿಬಿಟ್ಟಿದೆ ನಮ್ಗೆ. ಇದು ನನ್ನ ಅಭಿಪ್ರಾಯ ಅಷ್ಟೆ, ಈತರದ ಪ್ರಶ್ನೆಗಳು ಹುಟ್ಟಬಹುದು, ನಾವೆಲ್ಲರೂ ಪ್ರಶ್ನೆ ಹಾಕಿಕೊಳ್ಳಬೇಕು ಇಂತಹವುಗಳಲ್ಲೇ ಎಲ್ಲಾ ಗೋಷ್ಠಿಗಳೂ ಮುಗ್ದೋಯ್ತು. ಇಂದು ನಾಳೆ ಎಂದೆಂದಿಗೂ ಎಲ್ಲರಿಗೂ ಒಪ್ಪಿತವಾಗಬೇಕೆಂದು ಯೋಚಿಸಿ ಮಾತಾಡಿದ ಸುದ್ದಿಗಳೇ. ಹೌದೌದು, ಅವ್ರು ಹೇಳಿದ ಹಾಗೇ, ಅವ್ರು ಹೇಳಿದ್ದನ್ನು ಒಪ್ಪಿಕೊಳ್ತಾ, ಅದನ್ನೇ ಮುಂದುವರಿಸೋದಾದ್ರೆ... ಒಬ್ಬಂಗೂ ಇನ್ನೊಬ್ಬನ ಒಂದ್ ಪಾಯಿಂಟೂ ಸರಿ ಇಲ್ಲ ಅನ್ಸಿಲ್ಲ! ಎಷ್ಟು ನಾಜೂಕು, ಎಷ್ಟು ಜಾಗ್ರತೆ, ಎಷ್ಟು ವೇಸ್ಟ್ ಮಾತುಗಳು ಹಾಗಿದ್ರೆ!


ಅದೇ ಮಲಯಾಳದ್ದೊಂದು ನೋಡ್ದೆ. ಅವ್ರು ಹೆಸ್ರು ಗೊತ್ತಿಲ್ಲ, ಪೂರ್ತಿ ಅರ್ಥ ಆಗ್ಲೂ ಇಲ್ಲ. ಆದ್ರೂ "ಅಪ್ಪೋ, ಅಂಙಣೆ ಆದಂಗಿಲ್ ಶೆರಿ ಆವೋ! ಪಿಣ್ಣೆ?" ಅಂತ ಎದುರು ಕೂತವ್ನಿಗೇ ಸವಾಲಾಕೋ ಬೆನ್ನೆಲುಬಾದ್ರೂ ತೋರಿಸ್ತಿದ್ರು. ಗೋಷ್ಠಿ ಅಂದ್ರೆ ಇಂತ ಒಂದಷ್ಟು ಗಟ್ಟಿವಾದಗಳಿದ್ದು, ಹೊಸ ಚಿಂತನೆಗಳನ್ನು ಪ್ರೇರೇಪಿಸುವ ಹಾಗಿರ್ಬೇಕು. ಅಂತ ವಾದಗಳು ಇರುವವರನ್ನು, ಮಂಡಿಸಬಲ್ಲವರನ್ನು ಹುಡುಕಿ ಚರ್ಚೆಗೆ ಕೂರಿಸಬೇಕು. ಆಗ ಒಂದಷ್ಟು ಉಪಯೋಗ ಆದ್ರೂ ಇರುತ್ತೆ. ಇದು ಸುಮ್ಮನೇ ಒಟ್ಟಿಗೆ ಕೂತು ಚಾ ಕುಡಿಲಿಕ್ಕೆ ಬಂದವರನ್ನೆಲ್ಲ ಕೂರ್ಸಿ ಮಾತಾಡಿಸಿದ ಹಾಗಿತ್ತು.


ಬೇಸಿಕಲಿ, ಕಾಲಕಾಲಕ್ಕೆ ಬದಲಾದಂತಹ ಇಸಂಗಳು, ಯಾಕಾಗಿ ಬದಲಾದವೆಂದು ಮತ್ತು ಅದು ಹೇಗೆ ಅಂದಿನ ಕೃತಿಗಳ ಅಭಿವ್ಯಕ್ತಿಯ ರೀತಿಯನ್ನು ಬದಲಿಸಿತೆಂದು ತಿಳಿದುಕೊಂಡವರು, ಇಂದಿನ ಜೀವನಶೈಲಿಯನ್ನು ಅಭಿವ್ಯಕ್ತಿಸಬಹುದಾದ ಸಾಧ್ಯತೆಗಳ ಕುರಿತು ಮಾತಾಡಬೇಕಿತ್ತು. ಅಂದಿನ ಸ್ವರೂಪಗಳಿಗೇ ಅಂಟಿಕೊಳ್ಳದೆ, ಹೊಸದನ್ನು ಪ್ರೇರೇಪಿಸುವತ್ತ ವಾದವಿವಾದಗಳಿರಬೇಕಿತ್ತು.


ಕನಿಷ್ಟಪಕ್ಷ ಅಂತಹ ಚಿಂತನೆಯೊಂದು ಯಾರ ಕೃತಿಗಳಲ್ಲಿ ತಕ್ಕಮಟ್ಟಿಗಾದರೂ ಅಭಿವ್ಯಕ್ತ ಆಗುತ್ತಿದೆಯೋ ಅಂತಹವರನ್ನು ಪ್ರಶ್ನಿಸಿ ಅವರಿಗೇ ತಿಳಿಯದ್ದನ್ನು ಅವರಿಂದ ಹೊರಗೆಳೆಯಬೇಕಿತ್ತು. ಅಂತದ್ದೇನಾದರೂ ಈ ತಿಳಿದ ದೊಡ್ಡದೊಡ್ಡವರಿಂದ ನಡೆದಿದ್ದರೆ, ಈ ಕಾಲದ ಹೊಸ ಚಿಂತನೆಗಳು ಹೇಗೆ ರೂಪುಗೊಳ್ಳುತ್ತಿದೆ ತಿಳಿಯಲು ಸುಲಭ ಆಗ್ತಿತ್ತು.


ಹ್ಞಾಂ. ಒಬ್ಬರು ಸೂಚ್ಯವಾಗಿ ಒಂದು ಪ್ರಾಬ್ಲೆಮ್ ಹೇಳಿದ್ರು. ಇತ್ತೀಚಿನ ದಿನಗಳಲ್ಲಿ ನಾಟಕ ಬರೆಯೊಕೆ ಯಾಕೆ ಕಷ್ಟ ಆಗ್ತಿದೆ ಅಂತ. ಇಂದಿಗೆ ಒಂದು ಕತೆ ನಾಟಕವಾದ್ರೆ ಸಾಕಾಗುದಿಲ್ಲ, ಹಲವು ಸೇರಬೇಕು ಅಂದಿದ್ದು ಒಳ್ಳೆಯ ಪಾಯಿಂಟ್. ಅದನ್ನು ಬರೀ ನಾಟಕ ಪ್ರಕಾರಕ್ಕೆ ಸೀಮಿತಗೊಳಿಸದೇ, ಎಲ್ಲಾ ಬಗೆಯ ಕೃತಿರಚನೆಗೂ ವಿಸ್ತರಿಸಬಹುದು. ಎಐ ಹೇಗೆ ನಮ್ಮ ಸೈಕಾಲಜಿ ಮೇಲೆ ವರ್ಕ್ ಆಗ್ತಿದೆ ಅಂತ ಈ ಎಳೆಯನ್ನು ಹಿಡಿದು ಮುಂದುವರೆಸಿಕೊಂಡು ಹೋಗ್ಬೋದಿತ್ತು. ಅವರು ಹೇಳಿದ ತೊಳಲಾಟ ಇರೋದು information burden ಅಲ್ಲಿ. ಅದ್ನ ಹೇಗೆ ಇಂದು ಯುಟಿಲೈಸ್ ಮಾಡ್ಬೇಕು ಅನ್ನೋ ದಾರಿಲಿ ಚರ್ಚೆ ಮುಂದುವರೆದಿದ್ರೆ ಇಂಟರೆಸ್ಟಿಂಗ್ ಇರ್ತಿತ್ತು. ಆದ್ರೆ ಆ ಪಾಯಿಂಟನ್ನು ಅಲ್ಲಿದ್ದವರು ಗುರುತಿಸಿದಂತೆಯೂ ಕಾಣಲಿಲ್ಲ.


ಎಲ್ಲರನ್ನೂ ಮೆಚ್ಚಿಸೆಂದ ಕೂಡಲಸಂಗಮದೇವನಿಗೆ ಅಡ್ಡಬೀಳುತ್ತಾ ನಾವು ಟಿಪಿಕಲ್ ಮ್ಯಾನರ್ಸು, ಪೊಲಿಟಿಕಲ್ ಕರೆಕ್ಟ್ನೆಸ್ಸು ಇಂತದ್ರಲ್ಲೇ ಕಳ್ದೋಗಿದ್ದೀವಿ. ಅದಕ್ಕೇ ಬೆನ್ನೆಲುಬಿರೋ ಯೋಚನೆಗಳೇ ಇಲ್ಲ! ಒಂದಷ್ಟು ಸಣ್ಣಸಣ್ಣ ವಾಕ್ಯಗಳು ಅಲ್ಲಲ್ಲಿ ಬಂದುಹೋಗಿದ್ದಿರಬಹುದಾದರೂ ಒಟ್ಟಾಗಿ‌ ಒಂದೂ ಗಟ್ಟಿದನಿಯನ್ನು ಇಷ್ಟು ವರ್ಷಗಳಲ್ಲಿ ಅಲ್ಲಿದ್ದವರಿಗೆ ಕಂಡುಕೊಳ್ಳಲಾಗಿಲ್ಲ. ಇನ್ನು ಗೋಷ್ಠಿಯಲ್ಲಿ ಹೇಳಿದ ಹಾಗೆ ಹೊಸ ತಲೆಮಾರಿಗೆ ಏನು ಬಿಟ್ಟುಹೋಗ್ತಿದ್ದೇವೆ ಅಂತೆಲ್ಲ ತಲೆಕೆಡ್ಸಿಕೊಳ್ಭೇಡಿ. ಬಿಟ್ಟು ಹೋಗಿ, ಸಾಕು.

bottom of page