top of page

ಸರ್ಕಾರಕ್ಕೆ ಕಲಾವಿದರು ಬಾವಲಿಗಳಂತೆ ನೇತಾಡುವುದು ಯಾಕೆ?

  • Writer: sushrutha d
    sushrutha d
  • Jun 28, 2021
  • 2 min read

Updated: Sep 22, 2024

ಕಲೆಗೊಂದು ಭೂಮಿಕೆ - 5 : ಭಾರತದಲ್ಲಿ, ಓದಲು ಆಸಕ್ತಿಯಿಲ್ಲದವರು ಕಲಾರಚನೆಗಳಲ್ಲಿ ತೊಡಗುವುದು ಸಾಮಾನ್ಯ. ಗೋಡೆಗಳಲ್ಲಿ "ಪ್ಲಸ್ಟಿಕ್ ಇಲ್ಲಿ ಹಕಬಾರದು" ಎಂದು ಬರೆದಿರುವ ಉದಾಹರಣೆಗಳು ಎಲ್ಲೆಲ್ಲೂ ಸಿಗುತ್ತವೆ. ಅವರಿಗೆ ಈ ಕಾನ್ಸೆಪ್ಚುವಲ್‌ ಆರ್ಟ್‌ನ ಪರಿಭಾಷೆಗಳು ತಿಳಿಯುವುದಿಲ್ಲ. ಇಂಗ್ಲಿಷ್ ಅರ್ಥವಾಗುವುದಿಲ್ಲ. ಕನ್ನಡದಲ್ಲಿ ಪುಸ್ತಕಗಳಿಲ್ಲ. ಇರುವುದನ್ನೂ ಹುಡುಕಿ ಓದುವ ಮನಸ್ಸಿಲ್ಲ. ಹೀಗೆಲ್ಲ ಕಾರಣಗಳಿವೆ. ಅದಕ್ಕೆ ಸರಿಯಾಗಿ, "ಅದನ್ನೆಲ್ಲ ತಿಳಿದು ಆಗಬೇಕಾದ್ದೇನಿದೆ? ನಮ್ಮಷ್ಟಕ್ಕೆ ನಾವು ಮಾಡಿಕೊಂಡು ಹೋದರೆ ಆಯ್ತು, ಕಲೆ ಸಿದ್ಧಿಸಲು" ಎನ್ನುವ ಮಾರ್ಗದರ್ಶಕರೂ ಇದ್ದಾರೆ.

ಕಲೆಯನ್ನು ಯಾರಿಗೂ ಹೇಳಿಕೊಡಲು ಆಗುವುದಿಲ್ಲ. ತಿಳಿದುಕೊಳ್ಳುವಂತೆ ಮಾಡಬಹುದಷ್ಟೆ. ಅವರವರ ಗೋಜಲುಗಳನ್ನು ಅವರವರೇ ನಿಧಾನವಾಗಿ ಬಿಡಿಸಿಕೊಂಡು ಹೋಗಬೇಕು. ಅದಕ್ಕೆ ನೆರವಾಗುವಂತೆ ಸರಿಯಾದ ಪ್ರಶ್ನೆಗಳನ್ನು ಕೇಳುತ್ತಾ, ಮಾಹಿತಿಗಳನ್ನು ಒದಗಿಸುತ್ತಾ, ಅಭಿಪ್ರಾಯ ತಿಳಿಸುತ್ತಾ ಸಹಾಯ ಮಾಡಬಹುದಷ್ಟೆ. ಆದರೆ, ಬಹುಜನರು ಬಯಸುವುದು ಸಿದ್ಧ ಉತ್ತರಗಳನ್ನು. ಅದು ಇಲ್ಲಿ ಸಿಗುವುದಿಲ್ಲ. ಸಿದ್ಧ ಉತ್ತರಗಳನ್ನು "ಕಂಡುಹಿಡಿದು"ದರಿಂದ ಉಂಟಾದ ಸಮಸ್ಯೆ ಬೇರೆಯೇ ತೆರನಾದದ್ದು. ಅದೀಗ ಬೇಡ. ಯಾರೋ ಏನೋ ಮಾಡಿದ್ದನ್ನು ನೋಡಿ ಅನುಕರಿಸುವವರು ಹೆಚ್ಚು. "ಕದಿಯಲು" ಗೊತ್ತಿಲ್ಲ. ಕೌಶಲವಷ್ಟೇ ಇರುತ್ತದೆ. ವಿಷಯವೂ ಇಲ್ಲ, ಸತ್ವವೂ ಇಲ್ಲ. ದಾರಿ ಬದಿಯಲ್ಲಿ ಹರಕು ಬಟ್ಟೆಯ ಭಿಕ್ಷುಕನ ಚಿತ್ರ ಬಿಡಿಸಿ, ಇದು ಭಿಕ್ಷುಕನ ಕಷ್ಟಗಳನ್ನು ಪ್ರತಿನಿಧಿಸುತ್ತದೆ ಎಂದು ಕಾನ್ಸೆಪ್ಚುವಲ್ ಮಾಡಬೇಕಾದ ಪರಿಸ್ಥಿತಿ. ಏನು ಮಾಡುವುದು?

ಯಾವುದೇ ಕಾರ್ಪೋರೇಟ್ ಕಂಪೆನಿ ಇರಬಹುದು, ಗ್ಯಾಲರಿಗಳೇ ಇರಬಹುದು ಇಂತವುಗಳಿಗೆ ಮಾರು ಹೋಗುವುದಿಲ್ಲ. ಅವರು ಇವರುಗಳನ್ನು ಪ್ರತಿನಿಧಿಸಲು ಒಪ್ಪುವುದಿಲ್ಲ. ಕೆಲವೊಮ್ಮೆ, ಯಾವುದೋ ರಾಜಕೀಯ ಕಾರಣಗಳಿಂದ ಒಳ್ಳೆಯ ಕಲೆಗಾರರನ್ನೇ ಪ್ರತಿನಿಧಿಸಲು ಒಪ್ಪದಿರುವುದುಂಟು. ಆಗ ಇವರುಗಳು ಏನು ಮಾಡಬೇಕು? ಬೇರೆಯವರಿಗೆ ಕಲೆಯಲ್ಲಿ ಭವಿಷ್ಯವಿಲ್ಲ ಎಂದು ಸಾರುತ್ತಾ, ಜನರೇನು ಬಯಸುತ್ತಾರೋ ಅದನ್ನು ಮಾಡುತ್ತಾ, ವ್ಯಾಪಾರವಾಗಲೆಂದು ದೇವರ ಬೇಡುತ್ತಾ ಕಾಲ ಕಳೆಯಬೇಕಾಗುತ್ತದೆ. ಇಡೀ ಬೆಂಗಳೂರಿನ 'ಚಿತ್ರಸಂತೆ'ಯಲ್ಲಿ ಈ ಮನಸ್ಥಿತಿಯ ಅನಾವರಣವನ್ನು ಕಾಣಬಹುದು.

ಜನರೋ! ತಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ತೂಗುಹಾಕಲು ಏನೋ ಒಂದು ಬೇಕೆನ್ನುವವರು. ಹೋಟೆಲ್‌ಗಳಲ್ಲಿ ಕೂರುವ ಅರ್ಧ ಗಂಟೆಯಲ್ಲಿ ಜನರಿಗೆ ಏನೇನೋ ಇದೆ ಇಲ್ಲಿ ಎನಿಸಿದಂತಾದರೆ ಸಾಕು. ಎಷ್ಟು ಕಡಿಮೆಗೆ ಸಿಗುತ್ತೋ ಅದು ಒಳ್ಳೆಯದು. ಹೇಗಿದ್ದರೂ ಮತ್ತೆ ನೋಡುವುದು ಅಷ್ಟರಲ್ಲೇ ಇದೆ. ನೇತು ಹಾಕಿದರೆ ಕಲೆಯ ಕೆಲಸ ಮುಗಿದಂತೆ.

ಇದೆಲ್ಲ ಕಲಾಜಗತ್ತಿಗೆ ಕೆಡುಕೇ ಹೌದಾದರೂ, ಅವರ ಹೊಟ್ಟೆಪಾಡು. ತಪ್ಪೆನ್ನಲು ಬರುವುದಿಲ್ಲ. ಹೊಟ್ಟೆಪಾಡಿಗೆ ಏನೋ ಕತೆ ಹೇಳಿ ದೊಡ್ಡವರಾದ ಕಲಾವಿದರೂ ಇದ್ದಾರೆ‌. ಮಾಡಿಲ್ಲದ ಸಾಧನೆಗಳೆನ್ನ ಬರೆದು, ಗೊತ್ತಿಲ್ಲದ ಉತ್ತರ ಹೇಳಿಕೊಂಡು, ಯಾವುದೋ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಿಲ್ಲವೇ, ಹಾಗೆಯೇ ಇದೂ. ನಾವು ಇವರನ್ನಷ್ಟೇ ನೋಡಿ ಕಲಾಜಗತ್ತು ಎಂತದ್ದೆಂದು ತೀರ್ಮಾನಿಸಿದರೆ ಅದು ನಮ್ಮ ಮೂರ್ಖತನವಾದೀತಷ್ಟೆ. ಎತ್ತ ನೋಡಿ ಒಂದು ಕ್ಷೇತ್ರವನ್ನು ಕಾಣಬೇಕೆನ್ನುವುದೂ ಮುಖ್ಯವಾಗುತ್ತದಲ್ಲವೇ?

ಕಣ್ಣಿಗೆ ಕಾಣುವುದಿಲ್ಲವೆಂದಲ್ಲ. ಪ್ರಶ್ನೆಗಳು ಕಾಡುವುದಿಲ್ಲವೆಂದಲ್ಲ. ಏನು ಮಾಡುವುದೆಂದು ತಿಳಿಯುವುದಿಲ್ಲ. ಯಾರಿಗಾದರೂ ಏನಾದರೂ ಹೇಳಲು ಸಾಧ್ಯವೇ! ಅದರಲ್ಲೂ ಹಿರಿಯ ತಲೆಮಾರೆಂದರೆ, ಜೀವನವ ಕಂಡು ಅನುಭವಿಸಿ, ಕಷ್ಟಗಳನ್ನು ಜಯಿಸಿ ಜೀವನ ಸವೆಸಿದ ಜೀವಗಳಲ್ಲವೇ! ನಿಮಗೆ ಪರಿಸ್ಥಿತಿಯ ಅರಿವಿಲ್ಲವೆಂದೋ, ಅನುಭವ ಸಾಲದೆಂದೋ, ಮುಂದೆ ತಿಳಿಯುತ್ತದೆಂದೋ ಹೇಳಿದರೆ ಮುಗಿಯಿತು, ನಾವು ಗಪ್‌ಚುಪ್‌ ಆಗಬೇಕು. ಹೇಳುವ ವಿಧಾನ ಸರಿಯಿಲ್ಲವೆಂದರೂ ನಡೆಯುತ್ತದೆ. ಕೆಂಪೇಗೌಡರ ಮೂರ್ತಿ ನಿರ್ಮಿಸುವ ಯೋಚನೆಯವರು! ಅನುಭವದ ಕಿರೀಟ ಹೊತ್ತು ತಿಳಿಯದ ಸಂಗತಿಗಳನ್ನೂ ನಿರ್ದೇಶಿಸಲು ಹೊಡಚುವುದರಲ್ಲಿ ಮಜಾ ನೋಡುತ್ತಾ ಕೂರುವುದಷ್ಟೆ ನಾವು ಮಾಡಬಹುದಾದ್ದು. ಸ್ವಂತ ಅನಿಸಿಕೆಗಳನ್ನು ಹೇಳಿದರೂ ಬೈಸಿಕೊಳ್ಳಬೇಕಾಗುತ್ತದೆ. ಎಲ್ಲೋ ಕೆಲವರು ಸ್ವಲ್ಪ ತಿಳಿದವರು, ಅರ್ಥ ಮಾಡಿಕೊಳ್ಳಬಲ್ಲ ಹಿರಿಯರು ಸಿಗುತ್ತಾರೆ. ಅವರನ್ನು ನೋಡಿ, ಕೇಳಿ, ಗಮನಿಸಿ ಸಾಧ್ಯವಿದ್ದಷ್ಟು ತಿಳಿಯುವುದು, ವೈಯಕ್ತಿಕವಾಗಿ ಬೆಳೆಯುವುದು. ಪ್ರಯತ್ನ ಮಾಡುವುದು. ಸಾಂಪ್ರದಾಯಿಕ ಕಲೆಗಳಿಗೆ, ಅಭಿವೃದ್ಧಿಯ ಚಿಂತೆಯಿಲ್ಲ. ನಶಿಸಿಹೋಗದಂತೆ ಇದ್ದದ್ದನ್ನು ಮುಂದುವರೆಸಿಕೊಂಡು ಹೋಗಬೇಕಷ್ಟೆ. ಸಮಕಾಲೀನ ಸ್ಥಿತಿಗತಿಗಳೂ ಇದಕ್ಕೆ ಮುಖ್ಯವಲ್ಲ. ಪರಂಪರೆ, ಶೈಲಿಯ ಹಿಡಿತ, ರೂಢಿ, ಪುರಾಣ, ಧ್ಯಾನಸ್ಥ ಮನಸ್ಥಿತಿಗಳು ಮುಖ್ಯ. ಇದನ್ನು ಸಾಧಿಸುವುದೂ ಸುಲಭವಲ್ಲ. ಅದರ ಕಷ್ಟ ಅದಕ್ಕೆ, ಇದರ ಕಷ್ಟ ಇದಕ್ಕೆ.

 

ಸಾಂಪ್ರದಾಯಿಕ ಕಲೆಯೂ ಒಂದು ಬ್ಯುಸಿನೆಸ್ ಆಗಿದೆ ಈಗ. ಅದನ್ನು ವಿದೇಶೀಯರಿಗೆ ಮಾರಲು ಸುಲಭವೂ ಹೌದು. ನಮ್ಮಲ್ಲಿ ಸಮಕಾಲೀನ ಕಲೆಯ ಪರಿಭಾಷೆಯೇ ಯಾರಿಗೂ ಅರ್ಥವಾಗದ ಕಾರಣ, ಬ್ಯುಸಿನೆಸ್ ಸಾಧ್ಯತೆಗಳನ್ನು ಗಮನಿಸಿಲ್ಲ ಅಷ್ಟೆ. ತಿಳಿದವರು ಮಾಡುತ್ತಲೇ ಇದ್ದಾರೆ. ಕೊಚ್ಚಿ ಬಿಯೆನ್ನಾಲೆ ಎಲ್ಲ ಇನ್ನೇನು?!

ನಮ್ಮ ದೇಶದಲ್ಲೂ ನಿಧಾನವಾಗಿ ಪ್ರಗತಿಯಾಗುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ, ಅದೇನೇನೂ ಸಾಲದು ಎಂಬುದಷ್ಟೆ. ಸದ್ಯದಲ್ಲೇ MAP ಎಂಬ ದೊಡ್ಡ ಗ್ಯಾಲರಿಯೊಂದು ಬೆಂಗಳೂರಿನಲ್ಲಿ ಶುರುವಾಗಲಿದೆ. ಅವರ ಆನ್‌ಲೈನ್ ಚಟುವಟಿಕೆಗಳು ಭರವಸೆ ಮೂಡಿಸುತ್ತನೂ ಇವೆ. ಅಂದರೆ, ಅವಕಾಶಗಳು ಸೃಷ್ಟಿಯಾಗುತ್ತಾನೂ ಇವೆ.

ವಿದೇಶಗಳಲ್ಲಿ ಈ ಸಮಸ್ಯೆಗಳಿಲ್ಲ. ಹಲವಾರು ಗ್ಯಾಲರಿಗಳು, ಕಲಾ ವಿಮರ್ಶಕರು, ಕಲಾ ಮಧ್ಯವರ್ತಿಗಳು, ಕಲಾ ಸಲಹೆಗಾರರು ಕೂಡ ಪಟ್ಟಿ ಮಾಡುವಷ್ಟು ಇದ್ದಾರೆ. ಒಂದು ಕೃತಿಯನ್ನು ಕೊಂಡುಕೊಳ್ಳುವುದು ಲಾಭವೋ, ಕೊಳ್ಳದಿರುವುದು ಲಾಭವೋ ಎಂದು ಸಲಹೆ ಕೊಡುವುದೇ ಒಂದು ಉದ್ಯೋಗ ಎಂದರೆ ನಮಗೆ ನಂಬಲು ಸಾಧ್ಯವೇ?! ಅಲ್ಲಿ ಈ ಪ್ರಶ್ನೆಗಳೆಲ್ಲ ಉದ್ಭವಿಸುವುದೇ ಇಲ್ಲ. ಸರ್ಕಾರಕ್ಕೆ ಬಡವರ ಏಳಿಗೆಯ ಚಿಂತೆಯೂ ಇಲ್ಲ. ಸಹಾಯ, ಮಾನವೀಯತೆ ಎಲ್ಲ ನಗಣ್ಯ‌. ದುಡ್ಡು ಮಾಡುವುದು ಬಡವರ ಕರ್ತವ್ಯ ಎನ್ನುವ ಧೋರಣೆ ಅಲ್ಲಿದೆ. ಇಲ್ಲಿಲ್ಲ.

 

ಸರ್ಕಾರಕ್ಕೆ ಕಲಾವಿದರು ಬಾವಲಿಗಳಂತೆ ನೇತಾಡುವುದು ಯಾಕೆಂದು ಕುಹಕವಾಡಬಹುದು. ಅದು ಸತ್ಯವೇ ಆಗಿದೆ ಕೂಡ. ಆದರೆ ಆ ಪರಿಸ್ಥಿತಿಯೂ ಇಲ್ಲಿದೆ. ಯಾರನ್ನೆಂದು ದೂರುವುದು?!

bottom of page