ಈ ಬಾರಿ(ಯೂ) ನಮ್ಮ ಬಾವಿಗೆ ಹಾರಿ : ಮತ ವ್ಯವಸ್ಥೆ
- sushrutha d
- May 5, 2023
- 2 min read
Updated: Sep 22, 2024
ಈಗೆಲ್ಲ ಎಲ್ಲಿ ಹೋದರೂ ಯಾರು ಸಿಕ್ಕಿದರೂ ಪುತ್ತೂರು-ಪುತ್ತಿಲ-ಕಲ್ಲಡ್ಕ-ಹಿಂದುತ್ವ-ಬ್ಯಾರಿ-ಜಾತಿ- ಮೋದಿ-ಬಗ್ಗಿಸುದು-ಬಿಡದಿರುವುದು ಮತ್ತು ಅಲ್ಲಲ್ಲೇ ಗಿರಕಿ ಹೊಡೆಯುವ ಸುದ್ದಿಗಳು. ಸಣ್ಣವರಾದ ನಾವು ಬಾಯಿ ಕಿಸಿಲಿಕ್ಕೆ, ತಲೆ ಅಲ್ಲಾಡಿಸಲಿಕ್ಕೆ, ಕದ್ದು ಮುಚ್ಚಿ ಬರುವ ಆssಕಳಿಕೆ ಅದುಮಿಡಲಿಕ್ಕೆ ಅಷ್ಟೆ. ದೊಡ್ಡವರು ಅವರಜ್ಜನ ಕಾಲದಿಂದಲೇ ಅವರದು ಆ ಪಕ್ಷ ಈ ಪಕ್ಷ ಎಂದೆಲ್ಲ ಹೇಳಿಕೊಂಡು ತಮಗೆ ಮೆದುಳಿಲ್ಲ, ಸ್ವಂತ ಯೋಚನೆ ಅನ್ನುವುದಿಲ್ಲ ಎಂದು ಸಂತೋಷದಿಂದ ಒಪ್ಪಿಕೊಳ್ತಾ ಇರ್ತಾರೆ.
ಮತ ನೀಡುವುದೆಂದರೇ ಆ ಕಾಲದ ಅಗತ್ಯಗಳಿಗೆ ಜನರು ಸ್ಪಂದಿಸಲಿರುವ ಒಂದು ವ್ಯವಸ್ಥೆ. ಇವರುಗಳದ್ದು ತಲೆತಲಾಂತರದಿಂದ ತಮ್ಮದೊಂದೇ ಪಕ್ಷ ಎಂಬ ಸಮಜಾಯಿಷಿ. ಎಂಥಾ ದುರವಸ್ಥೆ! ಇವರ ಪ್ರಕಾರ ಮತ ಬದಲಿಸುವುದೆಂದರೆ ಸ್ವ-ಲಾಭಕ್ಕಾಗಿ ಅಂತ! ಜಾಸ್ತಿ ಮಾತಾಡಲು ನಮಗೂ ಗೊತ್ತಿಲ್ಲ. ಈಗಿನ ಸಿಎಂ ಮಾನ್ಯ ಬೊಮ್ಮಾಯಿಯವರು ಸಿನೆಮಾ ನೋಡ್ತಾರೆ ಅನ್ನೋದು ಬಿಟ್ರೆ ಮತ್ತೇನು ಮಾಡಿದಾರೋ ಏನೋ!
ಪ್ರಣಾಳಿಕೆ ಮಾತ್ರ ಉದ್ದುದ್ದ ಇರ್ತದೆ ಎಲ್ಲಾ ಪಕ್ಷಗಳದ್ದೂ. ಅದನ್ನೂ ಯಾರೋ ಬೇರೆಯವರು ಬರೆದು ಕೊಡುವುದು. ಸ್ಪಷ್ಟವಾಗಿ ಏನಂದ್ರೆ ಏನಿರುವುದಿಲ್ಲ ಅದ್ರಲ್ಲಿ. ಜಾತಿಯ/ವೃತ್ತಿಯ ಆಧಾರದಲ್ಲಿ ಜನರನ್ನು ವಿಂಗಡಿಸಿ ಮೇಲೆಮೇಲೆ ಕಾಣುವ ಹಾಗೆ ಅವರಿಗುಪಯೋಗ ಇವರಿಗುಪಯೋಗ ಎಂದು ಹೇಳ್ತಾ ಹೋಗುದು. ನಿಜವಾಗಿಯೂ ಏನೋ ಒಂದು ವಿಶನ್ ಉಳ್ಳವರೇ ಆಗಿದ್ರೆ ಹೇಗೆ ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬಹುದು ಅಂತನೂ ಇರ್ಬೇಕಲ್ವಾ?! ಅಂತಹ ಯಾವ ದೂರದೃಷ್ಟಿಯೂ ಇದ್ದಂತಿಲ್ಲ, ಸುಮಾರು ಮೇ ಹದಿನೈದು-ಇಪ್ಪತ್ತರವರೆಗೆ ಮಾತ್ರವೇ ಎಲ್ಲಾ ದೃಷ್ಟಿ ಇರುವುದು.
ಪ್ರತಿ ಊರಲ್ಲೂ ಹಾಸ್ಪಿಟಲ್ ಆಗಬೇಕೆನ್ನಲು ಯಾವ ಮುತ್ಸದ್ಧಿಯೂ ಧುರೀಣರೂ ಬೇಕಾಗಿಲ್ಲ. ಪ್ರೈಮರಿ ಶಾಲೆಯಲ್ಲಿರುವಾಗಲೇ 'ಪ್ರಧಾನಮಂತ್ರಿಯಾದರೆ' ಪ್ರಬಂಧದಲ್ಲಿ ಅಂತದ್ದನ್ನೇ ಇವರ ಪ್ರಣಾಳಿಕೆಗಿಂತ ಚೆನ್ನಾಗಿ ನಾವುಗಳೆಲ್ಲರೂ ಬರೆದಿರುತ್ತೇವೆ. ಇವರು ಅದನ್ನೇ ಪಾಯಿಂಟ್ ಪಾಯಿಂಟ್ ಮಾಡಿ ಒಂದಷ್ಟು ಜಾತಿ ಅದಕ್ಕೆ ತುರುಕಿಸಿ ಬರೆಯುವುದಷ್ಟೆ.
ಅದರ ಮೇಲಿಂದ ಎಲ್ಲ ಕೋಟಿ ಲೆಕ್ಕದಲ್ಲಿ ಮಾತಾಡುದು. ನೂರು ಕೋಟಿಗೂ ನೂರೈವತ್ತು ಕೋಟಿಗೂ ಇರುವ ಡಿಫರೆನ್ಸ್ ಸಾವಿರಗಳನ್ನಷ್ಟೆ ಎಣಿಸಿದ ನಮಗೆ ಹೇಗೆ ಗೊತ್ತಾಗ್ತದೆ!? ನಮಗೆ ಎರಡೂ ಒಂದೆ, ಕೈಗೆಟುಕದ್ದು. ನಿಜವಾಗಿ ಜನರಿಗೆ ತಿಳಿಸಬೇಕಿದ್ದರೆ ಸ್ಟೆಪ್ ಸ್ಟೆಪ್ಪಾಗಿ ಹೀಗೆ ಮಾಡ್ತೇವೆ, ಹೀಗಾಗ್ತದೆ, ಮತ್ತೆ ಹೀಗೆ ಮಾಡಬಹುದು ಎಂದು ವಿವರಿಸಬೇಕಪ್ಪ. ಎಷ್ಟು ಕೋಟಿ ಎಂದು ಸಾರಾಸಾಗಾಟಾಗಿ ಹೇಳಿದರೆ ನಮಗೇನು ಗೊತ್ತಾಗ್ತದೆ ಬೇಕಲ್ಲ!
ವ್ಯವಸ್ಥೆ ಇರುವುದೇ ಹೀಗೆ. ಎಲ್ಲ ಬಾವಿ ಒಂದೇ ಸೈಜ್ ಇರುವುದಿಲ್ಲ. ಇರುವುದರಲ್ಲಿ ಯೋಗ್ಯರನ್ನು ಆಯ್ಕೆ ಮಾಡಿ ಮತ ನೀಡಿ ಎನ್ನುವುದು ಇದ್ದಿದ್ದರಲ್ಲಿ ಸಣ್ಣ ಬಾವಿ ನೋಡಿ ಹಾರಿ ಎಂದ ಹಾಗೆ. ಹಾರುವುದು ಕಂಪಲ್ಸರಿ, ಅದು ಬಾವಿಯೆಂದು ಗೊತ್ತಾದಮೇಲೂ! ಖ ಖ ಖ ಮೂರು ಖ ಆಗಲು ತಯಾರಿಲ್ಲದ ಯಾರೇ ಆದರೂ ನೋ-ವೇ-ಟಾ-ಟಾ ಎಂದಲ್ಲಿಂದ ಓಡುತ್ತಾನೆಯೇ ಹೊರತು, ಬಾವಿ ಸೈಜ್ ಅಳೆಯ ಹೊರಡುವುದಿಲ್ಲ. ನೀರು ಬೇಕಿದ್ರೆ ಕೊಡಪ್ಪಾನ ಇದೆ, ಕೊಡ ಇಳ್ಸಿ ನೀರು ಸೇದಿದ್ರಾಯ್ತು. ಬಾವಿಗೇ ಹಾರಬೇಕಾಗಿಲ್ಲ.
ಆಯ್ತು. ಯಾರೇ ಅಧಿಕಾರಕ್ಕೆ ಬಂದ್ರೂ ಎಂತದೂ ಬದಲಾಗುವುದಿಲ್ಲ. ದುಡ್ಡು ಕೊಟ್ಟರೆ ಬೇಕಾದ ಕೆಲಸ ಆಗ್ತದೆ. ದುಡ್ಡು ಕೊಟ್ಟರೆ ಮಾತ್ರವೇ ಬೇಕಾದ ಕೆಲಸ ಆಗುತ್ತಿರುತ್ತದೆ. ರಾಜಿಯೇ ಇಲ್ಲ ಅದರಲ್ಲಿ. ಯಾವ ರಾಜಕೀಯ ಪುಢಾರಿಯನ್ನೂ ನಮ್ಮಿಂದ ಎಂತಹ ಪರಿಸ್ಥಿತಿಯಲ್ಲೂ ಏನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಆಗಬೇಕು ಎನಿಸಿದ್ದನ್ನು ಶತಾಯಗತಾಯ ಮಾಡಿಯೇ ತೀರುತ್ತಾರೆ. ಅಷ್ಟು ಶಕ್ತಿಯನ್ನು ನಾವೇ ಅವರಿಗೆ ಕೊಟ್ಟಿದ್ದೇವೆ ಮತ್ತದನ್ನು ಸಂಭ್ರಮಿಸುತ್ತಾ ಇನ್ನಷ್ಟು ಶಕ್ತಿಯನ್ನು ಕಳಕೊಂಡಿದ್ದೇವೆ, ಕಳಕೊಳ್ಳುತ್ತಿದ್ದೇವೆ.
ಮತ ಚಲಾಯಿಸುವುದೇ ತಮ್ಮ ಶಕ್ತಿ ಎಂದುಕೊಂಡವರು, ಒಟ್ಟು ಸೇರಿ, ಒಬ್ಬ ರಾಜಕಾರಣಿಯನ್ನು ಅವರ ಕ್ಷೇತ್ರದಲ್ಲಿ ಸೋಲಿಸಬಲ್ಲರು. ಅಷ್ಟೆ. ಸೋಲಿಸಿ ಸಾಧಿಸುವುದೇನು?! ಎಂತದೂ ಇಲ್ಲ. ವ್ಯವಸ್ಥೆ ಮತ್ತೂ ಅದುವೇ. ಅದೇ ಲಂಚ ಕೊಡಬೇಕು, ಕೊಟ್ಟೇ ಕೆಲಸ ಮಾಡಿಸಬೇಕು. ಅಕಸ್ಮಾತ್ ಆಗದಿದ್ದರೆ ಮುಂದಿನ ಬಾರಿ ಸೋಲಿಸುವ ಕಂಟ್ರಾಕ್ಟ್ ತೆಗೋಬಹುದು, ಹಾಗೇ ಗಿರಕಿ ಹೊಡೆಯುತ್ತಾನೇ ಇರಬಹುದು. ಬಿದ್ದದ್ದು ಬಾವಿಗೆ ಎಂದು ಗೊತ್ತಾಗುವ ತನಕವೂ.
ಈ ಬಾರಿ(ಯೂ) ನಮ್ಮ ಬಾವಿಗೆ ಹಾರಿ ಎಂದು ಹೇಳ್ಕೊಂಡು ಯಾರ್ಯಾರೋ ಬರ್ತಾರೆ. NO-way-TA-ta ಎಂದೋಡಿದಿರೋ ಬಚಾವ್. ಇಲ್ಲದಿದ್ದರೆ ತಳ್ಳಲಿಕ್ಕೆಂದೇ ತಲೆತಲಾಂತರದಿಂದ ಹಾರುವವರು ಕಾಯುತ್ತಿರುತ್ತಾರೆ. ಗಂಗಾನದಿ ತೋರಿಸಿ ಅದಕ್ಕೆ ಸೇರುವ ಬಾವಿಗೆ ಹಾರಲು ಹೇಳುವವರು ಮತ್ತು ಗಂಗಾನದಿಯನ್ನೇ ತೋರಿಸಿ ಅದಕ್ಕೆ ಸೇರದ ಮತ್ತೊಂದು ಬಾವಿಗೆ ಹಾರಲು ಹೇಳುವವರು. ಇವೆಲ್ಲ ಈ ಪುಣ್ಯಕ್ಷೇತ್ರಗಳಲ್ಲಿರುವ ಗುಹೆಯ ಹಾಗೆ, ನಮ್ಮ ಸುಬ್ರಹ್ಮಣ್ಯದಲ್ಲೂ ಇದೆ ಒಂದು, ಇಳ್ದ್ರೆ ಸೀದಾ ಕಾಶಿಗೆ ಹೋಗ್ತದಂತೆ. ಹೇಳುವವರೂ ಹೋಗುವುದಿಲ್ಲ, ಕೇಳಿದವರೂ ಹೋಗುವುದಿಲ್ಲ. ಆದರೆ ಇಲ್ಲಿ, ಹೇಳಿದವರೂ ಹಾರುತ್ತಾರೆ, ಕೇಳಿದವರನ್ನೂ ಹಾರಿಸುತ್ತಾರೆ, ಯಾರ್ಯಾರದ್ದೋ ಲಾಭಕ್ಕೆ ಯಾವುದೋ ಒಂದು ಬಾವಿಗೆ. ಯಾವುದಕ್ಕೂ ಹುಷಾರು ಮಾತ್ರ.
May 2023
