ಪ್ರಜಾಪ್ರಭುತ್ವದಲ್ಲಿ ನೋಟಾ (NOTA)
- sushrutha d
- May 9, 2023
- 2 min read
Updated: Sep 22, 2024
ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರಜೆಗಳಿಗೆ ಶಕ್ತಿ ಇರಬೇಕು. ರಾಜಕೀಯದವರ ಬಳಿ ಅಲ್ಲ. ಹಿಂದಿನ ಪೋಸ್ಟ್ಗಳಲ್ಲೇ ಹೇಳಿದಂತೆ, ರಾಜಕೀಯದವರನ್ನು ಯಾರೇನೂ ಮಾಡಲಾಗದ ಕಾಲದಲ್ಲಿ ನಾವಿದ್ದೇವೆ. ಎಲ್ಲರೂ ಒಟ್ಟು ಸೇರಿ(ದರೆ), ಒಂದು ಇಲೆಕ್ಷನಲ್ಲಿ ಒಬ್ಬರನ್ನು ಸೋಲಿಸಬಹುದು. ಅದೇ ಮ್ಯಾಕ್ಸಿಮಮ್ ನಾವು ಮಾಡಲಿಕ್ಕಾಗುವುದು. ಅದೇ ಅವರು ಬಯಸಿದರೆ ನಮ್ಮನ್ನು ಏನೇನು ಮಾಡಬಹುದು?! ಅಷ್ಟು ಶಕ್ತಿ ಅವರಿಗೆ ಯಾಕೆ? ಎಲ್ಲಾ ಕ್ಷೇತ್ರಗಳಂತೆ ಒಂದು ಕ್ಷೇತ್ರವಾದ ರಾಜಕೀಯದಲ್ಲಿ ಮಾತ್ರ ಅಷ್ಟು ಶಕ್ತಿ ಕ್ರೋಢೀಕರಣವಾಗಲು ಕಾರಣವೇನು? ಅದಕ್ಕೆ ಪ್ರಜೆಗಳೇನು ಮಾಡಬಹುದು?
ಇಡೀ ಜಾಗತಿಕವಾಗಿಯೇ ಡಿಕನ್ಸ್‌ಟ್ರಕ್ಷನ್ ನಂತರದ ಕಾಲದಲ್ಲಿ ಹೊಸದಾಗಿ ಬೆಳೆಯುತ್ತಿರುವ ಒಂದು ಜ್ಞಾನಶಾಖೆ ವಿಕೇಂದ್ರೀಕರಣ/ಡಿಸೆಂಟ್ರಲೈಜೇಷನ್. ಅದರ ಮೂಲೋದ್ದೇಶವೇ ಶಕ್ತಿ ಹಂಚಿಕೆಯಾಗಬೇಕು, ಒಂದೆಡೆ ಕ್ರೋಢೀಕೃತವಾಗಿರಬಾರದು ಎಂದು. ಅಂತೆಯೇ, ರಾಜಕೀಯದ ಮೋನೊಪಲಿ ಮುರಿದು ಶಕ್ತಿಯ ಹಂಚಿಕೆಯಾಗಬೇಕಾದುದು ಇಂದಿನ ತುರ್ತು. ಇನ್ನೂ ವಿವರಿಸಿ ಹೇಳುವುದಾದರೆ, ನೋಟಾ ಎಂಬ ಕಾನ್ಸೆಪ್ಟೇ ಚಳುವಳಿಯ ರೂಪದ್ದು. ಭಾರತದಲ್ಲಿ ನೋಟಾ ಶುರುವಾಗಿದ್ದು 2013ರಲ್ಲಿ. ಹತ್ತು ವರ್ಷ ಕಳೆಯಿತಷ್ಟೆ. ನಮ್ಮ ಮರ್ಕಂಜದಂತಹ ಸರಿಯಾಗಿ ನೆಟ್ವರ್ಕ್ ಸಿಗದ ಹಳ್ಳಿಗೂ ನೋಟಾ ಗಾಳಿ ಹರಡಿದೆ ಎಂದರೆ ನೋಟಾ ಒಂದು ಶಕ್ತಿಯಾಗಿ ಬೆಳೆಯುತ್ತಿದೆ ಎಂದಾಯ್ತು. ಈ ನೋಟಾ ಓಟುಗಳ ಸಂಖ್ಯೆ ಹೆಚ್ಚಾದಂತೆ ರಾಜಕೀಯ ವ್ಯವಸ್ಥೆಗೇ ಬಿಸಿಮುಟ್ಟಬಹುದೆಂದೊಂದೂಹೆ. ಈಗಾಗಲೇ ಪುತ್ತೂರಿನ ಪಕ್ಷೇತರ ಅಭ್ಯರ್ಥಿಯ ಬ್ಯಾಟಿಂಗಿಗೆ ಧುರೀಣರು ಬೆವರಿದ್ದಾರೆಂಬುದು ಗೊತ್ತಾಗಿದೆ. ಇನ್ನು ನೋಟಾ ಗಾಳಿ ನಿಜವಾಗಲೂ ಎಲ್ಲೆಡೆ ಬೀಸಲು ಶುರುವಾದರೆ..!?ಫೂ...ಪೂ...ಫೂ...ಫೂss...
ಮತದಾನವಿರುವುದು ಅಭ್ಯರ್ಥಿಯನ್ನು ಗೆಲ್ಲಿಸಲಿಕ್ಕೆ/ಸೋಲಿಸಲಿಕ್ಕೆ ಎನ್ನುವುದು ಬಹಳ ಸಂಕುಚಿತಗೊಂಡ ವಿಶ್ಲೇಷಣೆ. ಆ ಸಂಕುಚಿತ ದೃಷ್ಟಿಗೆ ನೋಟಾ ನಿರರ್ಥಕ ಎಂದೇ ಕಾಣುತ್ತದೆ. ಮತ್ತು ಆ ವಿಶ್ಲೇಷಣೆಯನ್ನೇ ರಾಜಕೀಯ ಪಕ್ಷಗಳು ಮುಂದಿಡುತ್ತವೆ. ಯಾಕೆಂದರೆ ಅವರಿಗೆ ಗೆಲ್ಲಬೇಕಿದೆ. ಹಾಗೆಂದು ಜನರಿಗೆ ಗೆಲ್ಲಿಸುವ ಜವಾಬ್ದಾರಿಯೂ ಇಲ್ಲ, ಸೋಲಿಸುವ ಜವಾಬ್ದಾರಿಯೂ ಇಲ್ಲ. ಜನರಿಗೆ ಅವರ ಅಭಿಪ್ರಾಯವನ್ನು ದಾಖಲಿಸಬೇಕಾದ ಜವಾಬ್ದಾರಿ ಇದೆ ಅಷ್ಟೆ. ಎರಡರ ಮಧ್ಯದ ವ್ಯತ್ಯಾಸ ತುಂಬ ಸೂಕ್ಷ್ಮವಾದದ್ದು. ಮತದಾನವು ನಮ್ಮ ಈ ಹೊತ್ತಿನ ನಿಲುವನ್ನು ದಾಖಲಿಸುವ ಜಾಗ ಎಂದು ಅರ್ಥೈಸಿಕೊಂಡಾಗ, ನೋಟಾ ಸದ್ಯದ ವ್ಯವಸ್ಥೆಯಲ್ಲಿ ಒಂದು ಆಶಾಕಿರಣವಾಗಿ ಕಾಣಿಸುತ್ತದೆ.
ನೋಟಾ ಎನ್ನುವುದು ಮೇಲ್ನೋಟಕ್ಕೆ ತುಂಬ ಸಿಂಪಲ್ ಆಗಿ None of the above ಎಂಬ ನಾಲ್ಕನೇ ಆಪ್ಷನ್ನಿನಂತೆ ಕಂಡರೂ, ತಾರ್ಕಿಕವಾಗಿ ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ. ನೋಟಾ ಗೆಲ್ಲುವುದಿಲ್ಲ ಎಂದು ಗೊತ್ತಿದ್ದೂ ಅದಕ್ಕೆ ಮತ ಚಲಾಯಿಸುವ ಕಾನ್ಸೆಪ್ಟೆಲ್ಲ ತಲೆತಲಾಂತರದವರ ತಲೆ ಮೇಲೇ ಹೋಗುವಂತದ್ದು. ಗೆಲ್ಲುವುದಕ್ಕಾಗಿ/ಗೆಲ್ಲಿಸುವುದಕ್ಕಾಗಿ ಓಟು ಹಾಕುವುದೇ ಅಲ್ಲ ಎಂದೆಲ್ಲ ಹೇಳಿಬಿಟ್ಟರೆ ಅಷ್ಟೆ ಮತ್ತೆ...ಧೂಮಕೇತು ಹೋದ ಹಾಗೆ, ಸೀದಾ ಸುಂಯ್ಕ!
ನೋಟಾ ಒತ್ತಿ ಮತ ಹಾಳುಮಾಡಿಕೊಂಡವರಿಗೆ ಸರಕಾರದ ನಡೆಗಳನ್ನ ಪ್ರಶ್ನಿಸುವ ನೈತಿಕ ಹಕ್ಕಿರುವುದಿಲ್ಲ ಎಂದೆಲ್ಲ ನೈತಿಕವಾಗಿಯೇ ಹೊಯ್ಕೊಳ್ಳುವವರು ಇಷ್ಟು ಸಮಯ ನೈತಿಕ, ಅನೈತಿಕ, ತರತರಾತಿಕದಿಂದ ಪ್ರಶ್ನಿಸಿದ ವ್ಯವಸ್ಥೆಗಳೆಲ್ಲ ಎಷ್ಟು ಸುಧಾರಿಸಿದೆ ಬೇಕಲ್ಲ! ಯಾವೊಬ್ಬನೂ ನೈತಿಕವಾಗಿಯೂ ಮೂಸಿ ನೋಡುವುದಿಲ್ಲ ನಮ್ಮ ಪ್ರಶ್ನೆಗಳನ್ನು, ಖಂಡನೆಗಳನ್ನೆಲ್ಲ. 'ನಾನು ಸರಕಾರದ ಆ ನಿರ್ಧಾರವನ್ನು ಖಂಡಿಸುತ್ತೇನೆ' ಎಂದು ಹಾ ಹಾ ಮಾಡುವುದೆಲ್ಲ ಪಕ್ಕದ ಗಲ್ಲಿಯವರೊಡನೆ ಜಗಳವಾಡಲು ಆದೀತಷ್ಟೆ. ಸರಕಾರ 'ಖಂಡಿಸಿಕೊಂಡು ಕೂತುಕೋ' ಎಂದು ಅದರ ಪಾಡಿಗೆ ಬೇಕಾದ್ದು ಬೇಕಾದ ಹಾಗೆ ಮಾಡಿಕೊಂಡಿರ್ತದೆ. ತಲೆತಲಾಂತರದಿಂದ ಹೊತ್ತು ಮೆರೆಸಿದ್ದಲ್ವಾ! ಯಾವ ನೈತಿಕ ರಾಜಕಾರಣಿ ಎಷ್ಟು ಬಾರಿ ಈ ನೈತಿಕ ಧ್ವನಿಯನ್ನೆಲ್ಲ ಆಲಿಸಿ ನೈತಿಕ ಕ್ರಮ ತೆಗೆದುಕೊಂಡಿದ್ದಾರೆ?! ಸುಮ್ಮನೇ ಬೊಬ್ಬೆ. ಅದರ ಮೇಲಿಂದ ಇವರೆಲ್ಲರ ಎಲ್ಲಾ ಪ್ರಶ್ನೆಗಳೂ ಎಡಬಲ ಪ್ರೇರಿತವಾದದ್ದು. ಎಂಥದ್ದನ್ನೂ ಸಮರ್ಥಿಸಲಿಕ್ಕೆ ಮತ್ತು ಎಂಥದ್ದನ್ನೂ ಹೀಯಾಳಿಸಲಿಕ್ಕೆ ಇವರಿಗೆ ನೈತಿಕ ಹಕ್ಕು ಬೇಕಾಗುದು. ನೈತಿಕ ಕರ್ಮ ನಮ್ಮದು! ಹೇಳಿ ಪ್ರಯೋಜನ ಇಲ್ಲ.
ಒಂದೊಳ್ಳೆಯ ಸಮಾಜಕ್ಕೆ, ರಾಜಕಾರಣಿಗಳಿಗೆ ಮಾತ್ರ ದೂರದೃಷ್ಟಿ ಇರಬೇಕಾದ್ದಲ್ಲ. ಮತದಾರರಿಗೂ ಇರಬೇಕು. ನೋಟಾ ಎಂಬುದು ಅಂತಹುದೇ ಒಂದು ದೂರದ ಬೆಟ್ಟ. ದೃಷ್ಟಿ ನೆಟ್ಟು ನಡೆಯಬೇಕು. ಕಣ್ಣಿಗೆ ನುಣ್ಣಗೆ ಕಂಡರೂ ಏರಬೇಕಾದರೆ ಮನಸ್ಸು ಅಷ್ಟೇ ಸಿದ್ಧವಾಗಿರಬೇಕು. ಅದೊಂದು ಒಗ್ಗಟ್ಟಾದ ಪ್ರತಿರೋಧದ ಧ್ವನಿ. ಚಿಲ್ರೆ ಪಿಲ್ರೆ ಅಭ್ಯರ್ಥಿಗಳಿಗಲ್ಲ, ಹರಕು ಪರಕು ಪಕ್ಷಗಳಿಗಲ್ಲ, ಸೀದಾ ವ್ಯವಸ್ಥೆಗೇ. ನೋಟಾದಿಂದ ಇಮಿಡಿಯೇಟ್ ಡೋಪಮೈನ್ ಸಿಗುವುದಿಲ್ಲ, ನಿಜ. ಆದರೂ, ಅದನ್ನೊತ್ತಬೇಕಾದ ಅನಿವಾರ್ಯತೆ ಈಗಿನದ್ದು. ನೋಟಾ ಹೆಚ್ಚಾದಂತೆ ನಿಜವಾದ ಪ್ರಜಾಪ್ರಭುತ್ವ ಕಾರ್ಯರೂಪಕ್ಕೆ ಬಂದೀತು. ಯಾಕೆಂದರೆ, ನೋಟಾವು ಜನರಿಂದ ಜನರಿಗಾಗಿ ಜನರಿಗೋಸ್ಕರ ಜನರೇ ನಡೆಸುವ ಮತ್ತು ನಡೆಸಬೇಕಾದ ಒಂದು ಚಳುವಳಿ.
May 2023
