ಇಂದಿನ ಇಸಂ ಹೇಗೆ ರೂಪುಗೊಂಡೀತು?
- sushrutha d
- Oct 5, 2024
- 2 min read
Updated: Jun 9, 2025
ಕಲೆಗೊಂದು ಭೂಮಿಕೆ 24 : ಪ್ರತಿಯೊಬ್ಬ ಕೃತಿ ರಚಿಸುವವನ ಹಿನ್ನೆಲೆಯಲ್ಲೂ ಇರುವುದು ಹೊಸಮಾದರಿಯ ಚಿಂತನಾಶೈಲಿಯೊಂದನ್ನು ಹುಟ್ಟುಹಾಕುವ ಜವಾಬ್ದಾರಿಯೇ ಎಂದು ದೊಡ್ಡದಾಗಿ ಕಳೆದಬಾರಿಯೇನೋ ಹೇಳಿಬಿಟ್ಟೆ. ಆದರೆ ಹೇಗೆ?!
ಯಾವುದೇ ಕ್ಷೇತ್ರ ತೆಗೊಂಡರೂ, ಅದಕ್ಕೊಂದಷ್ಟು ವರ್ಷದ ಇತಿಹಾಸ ಮತ್ತು ಅಲ್ಲಿಂದ ಹೆಕ್ಕಿದ ಜನರಲೈಸ್ಡ್ ಪ್ರಾಕ್ಟಿಸ್‌ಗಳು ಮತ್ತು ಸ್ಟೇಟ್‌ಮೆಂಟ್‌ಗಳೆಲ್ಲ ಇರುತ್ತವೆ. ಇದೆಲ್ಲ ಯಾರೂ ಹೇಳಿಕೊಡದೆ, ಎಲ್ಲೆಲ್ಲೋ ಕಿವಿಗೆ ಬಿದ್ದು ಹಾಗಾಗೆಯೇ ತಿಳಿದಿರುವಂತಹ ವಿಷಯಗಳು. ಈಗ ಕಲೆಗೆ ಬಂದರೆ, "ಸುಳ್ಳು ಹೇಳೋದೊಂದು ಕಲೆ ಮಚಾss..." ಅನ್ನೋ ತರದ್ದು. ಇಂತಹ ಜನರಲೈಸ್ಡ್ ಪ್ರಾಕ್ಟೀಸ್‌ಗಳಲ್ಲಿ ಒಂದು ತೆರನಾದ ಪ್ಯಾಟರ್ನ್ ಗುರುತಿಸಬಹುದು. ಉದಾಹರಣೆಗೆ, ಇತ್ತೀಚೆಗೆ ಫೇಸುಬುಕ್ಕಲ್ಲಿ ಪುಟ್ಕತೆಗಳ ಪ್ರದರ್ಶನ ಆಯ್ತು. ಇಪ್ಪತ್ತೈದು ಪದಗಳೊಳಗಿರಬೇಕೆಂಬ ಶರತ್ತು. ಸುಮಾರು ಜನ ಬರ್ದ್ರು. ಓದಿದವರು ಪದ ಪದ ಲೆಕ್ಕ ಹಾಕಿ ಲೈಕ್ ಒತ್ತಿದ್ರು.
ಬಿಡಿ, ವಿಷ್ಯ ಅದಲ್ಲ. ಈ ಹೆಚ್ಚಿನ ಪುಟ್ಕತೆಗಳಲ್ಲೆಲ್ಲ ಒಂದು ಪ್ಯಾಟರ್ನ್ ಅನ್ನು ಗುರುತಿಸಬಹುದಿತ್ತು. ಫರ್ಸ್ಟಿಗೊಂದು ಇನ್ವರ್ಟೆಡ್ ಕೊಮಾದೊಳಗೆ ತುರುಕಿಸಿಟ್ಟ ವಾಕ್ಯ. ಯಾರೋ ಹೇಳಿದ್ದು. ಅದ್ರ ನಂತರದ ವಾಕ್ಯ, ಮೊದಲಿನ ವಾಕ್ಯದ ಆಶಯಕ್ಕೆ ವಿರುದ್ಧ ಧ್ವನಿಯದ್ದು. ಫುಲ್‌ಸ್ಟಾಪ್ ಅಥವಾ ಆಶ್ಚರ್ಯ ಸೂಚಕ ಚಿಹ್ನೆ!
ಉದಾಹರಣೆಯ ಒಳಗಿನ ಮೊದಲ ಉದಾಹರಣೆಗೆ,
"ಇತ್ತೀಚೆಗೆ ಫೇಸುಬುಕ್ಕಲ್ಲಿ ಪುಟ್ಕತೆಗಳ ಪ್ರದರ್ಶನವಾಯ್ತು" ಎಂದು ಸುಶ್ರುತ ಹೇಳಿದ. ಯಾರೂ ಕತೆ ಬರೆದಿರಲಿಲ್ಲ!
ಈ ಉದಾಹರಣೆಯ ಇನ್ಸೆಪ್ಷನ್ನಲ್ಲಿ ಬರೆದವರಾರದ್ದೂ ಕತೆ ತರಹ ಇರಲಿಲ್ಲವೆಂದು ಅಂದುಕೊಳ್ಳಬಹುದು ಅಥವಾ ಸುಶ್ರುತ ಸುಳ್ಳು ಹೇಳುತ್ತಿದ್ದಾನೆಂದುಕೊಳ್ಳಬಹುದು.
ಇಂತಹ ಪೊಟ್ಟು ಕತೆಗಳನ್ನು ಎಷ್ಟು ಬರೆದರೂ ಬರಹ ಮಾಧ್ಯಮಕ್ಕೆ ಅದರಿಂದ ಉಪಯೋಗವಿಲ್ಲವಷ್ಟೆ. ಅದು ಎಂತಾ ದೊಡ್ಡ ಪುಡಾಂಗ್ ಇಮೋಶನಾಗಿದ್ದರೂ! ಕಣ್ಣೀರಿನ ನೋವಿನಲ್ಲಿ ಮಿಂದೆದ್ದಿದ್ದರೂ! ನೆಲಮೂಲ ತಳಸ್ಪರ್ಶಿ ವಿಷಯಕ್ಕೆ ಕನ್ನಡಿ ಹಿಡಿದಿದ್ದರೂ! ಬೆವರು ವಾಸನೆಯ ಘಮಲು ಮೂಗಿಗೆ ರಾಚುತ್ತಿದ್ದರೂ! ಸಿದ್ಧ ರಾಜಕೀಯ ವಾದವ ಹೊತ್ತು ಮೆರೆಸುತ್ತಿದ್ದರೂ! ಚಂದ್ರನ ಬೆಳಕಿನಂತೆ ತಂಪಾಗಿದ್ದರೂ! ಸೂರ್ಯನ ಪ್ರಕಾಶದಂತೆ ಪ್ರಜ್ವಲಿಸುತ್ತಿದ್ದರೂ! ಚಲಿಸುವ ನೀರಿನ ಅಲೆಯಂತೆ ವಿಶೇಷಣಗಳು ಒಂದರ ಹಿಂದೊಂದು ಬರುತ್ತಿದ್ದರೂ!
ಎರಡು ವೈರುಧ್ಯಗಳನ್ನು ಅಕ್ಕಪಕ್ಕದ ವಾಕ್ಯದಲ್ಲಿಡುವುದನ್ನೂ ಒಂದು ಪ್ಯಾಟರ್ನ್ ಆಗಿ ಗುರುತಿಸಬಹುದು. ಕತ್ತಲು ಕವಿಯುತ್ತಿದ್ದಂತೆ ಬೆಳಕಾಯಿತು ಟೈಪ್ಸ್! ಬಿಸಿನೀರ ಟ್ಯಾಪಲ್ಲಿ ತಣ್ಣೀರು ಬರುತ್ತಿತ್ತು! ಸ್ಲೋ ಆಗಿ ಕಣ್ಣು ಮಿಟುಕಿಸದೇ ಓದಿದ್ರೆ ಓಶೋ ಲೆವೆಲ್! ಹೆಗಲು ಕುಣಿಸುತ್ತಾ ಕಾಮಿಡಿ ಕಾಮಿಡಿಯಾಗಿ ಓದಿದ್ರೆ..."ಇಸಿಂಟಿಟ್! ಹೆಲೋ!"
ಅಂದೊಮ್ಮೆ ಗ್ರಹಾಂಬೆಲ್ ಫೋನ್ ಕಂಡುಹಿಡ್ದ. ನಂತರ ಬಂದ ಮಾರ್ಕೋನಿ ತಾನು ರೇಡಿಯೋ ಸುದ್ದಿಗೆ ಹೋಗದೆ ಅದೇ ಫೋನ್ ಕಂಡುಹಿಡಿಯಹೊರಟಿದ್ರೆ? ನಂತರದವ ಟೀವಿ ಹತ್ತಿರ ಹೋಗದೆ ಅದೇ ಹಳೇ ಫೋನ್ ಕಂಡುಹಿಡಿಯಹೊರಟ್ರೆ? ಅಲನ್ ಟ್ಯೂರಿಂಗೂ ಅದೇ ಫೋನ್ ಹಿಂದೆ ಬಿದ್ದಿದ್ರೆ? ಕತೆ ಕಲಾಕೃತಿಗಳಲ್ಲೂ ಇಷ್ಟೇ ವಿಷಯ! ಯಾವ ಉಪಯೋಗಕ್ಕೂ ಇಲ್ಲ.
ಹಿಂದೊಮ್ಮೆ ಕಲಾನಿಧಿ ಅವಾರ್ಡ್ ಕುರಿತ ಜಗಳದ ಸಮಯದಲ್ಲಿ ಟಿಎಂ ಕೃಷ್ಣರ ಬಗ್ಗೆ ಬರೆದಿದ್ದೆ. ಹೇಗೆ ಅವರು ಇಂದಿನ ಚಿಂತನೆಗಳನ್ನು ಅವರ ಸಂಗೀತದಲ್ಲಿ ಒಳಗೊಳ್ಳುತ್ತಿದ್ದಾರೆ ಮತ್ತದು ಯಾಕೆ ಮುಖ್ಯ ಎಂಬುದಾಗಿ. ಹಾಗೆಯೇ, ಅಸಂಬದ್ಧತೆ ಯಾಕೆ ಇಂದಿನ ಪರಿಸ್ಥಿತಿಯಲ್ಲಿ ಮುಖ್ಯವಾಗುತ್ತದೆ ಎಂದೂ. ಕಂಟೆಂಪರರಿ ಚಿಂತನೆಗಳು ಎತ್ತ ಸಾಗುತ್ತಿವೆ ಎಂದು ವಸ್ತುವಿಷಯಗಳಲ್ಲಿ ಅಲ್ಲದೆ, ಅಭಿವ್ಯಕ್ತಿಯಲ್ಲಿ ಗಮನಿಸಬಲ್ಲವರಿಗೆ ಇಂದಿನ ಕಾಲಕ್ಕೆ ಮ್ಯಾಟರ್ ಆಗುವುದು ಯಾವ ವಿಷಯವಾಗಲೀ, ಪ್ರಾಡಕ್ಟ್ ಆಗಲೀ, ಪ್ರೊಸೆಸ್ ಆಗಲೀ, ಪ್ರಕಾರಗಳಾಗಲೀ ಅಲ್ಲ, ಬಟ್ ಇಂತಹ ಸಿದ್ಧ ಪ್ಯಾಟರ್ನ್ ಅನ್ನು ಬ್ರೇಕ್ ಮಾಡುವ ಅಪ್ರೋಚ್ ಎಂಬುದು ತಿಳಿಯುತ್ತದೆ. ಮತ್ತೊಂದು ಉದಾಹರಣೆಪ್ಷನ್‌ಗೆ,
"ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡುವವರ ಹಾಗಿನ ಅಪ್ರೋಚ್ ಉಳ್ಳವರು ಅದದೇ ಪೋಸ್‌ಗೆ ಬೇರೆ ಬೇರೆ ವ್ಯಕ್ತಿಗಳನ್ನು ಪೋಣಿಸುತ್ತಾರೆ" ಎಂದು ಫೇಸುಬುಕ್ಕಲಿ ಬರೆದಿದ್ದನೊಬ್ಬ. ಕಮೆಂಟಲ್ಲಿ ಎಲ್ಲರೂ ಅದದೇ ಹೃದಯ ಕಳಿಸಿದ್ದರು!
ಈ ಮೇಲಿದು ಮೇಲ್ನೋಟಕ್ಕೆ ಬೇರೆಯೇ ವಿಷಯ ಎಂಬಂತೆ ಕಂಡರೂ ಪ್ಯಾಟರ್ನ್ ಅದುವೇ ಆಗಿದೆ. ಮೇಲಿನದೇ ಪೋಸ್‌ಗೆ ಹೊಸ ವಾಕ್ಯ ಪೋಣಿಸಿದ್ದಷ್ಟೆ. ಹೊಸ ಅಪ್ರೋಚ್ ಅಂದರೆ ಹೇಗಿರುತ್ತದೆ ಎಂದು ಬಾಯಿಬಿಟ್ಟು ಹೇಳುವುದು ಕಷ್ಟ. ಈ ಬರಹದಲ್ಲೂ ಆ ಪ್ರಯತ್ನವಿರುವುದರಿಂದ, ಅದರ ಕುರಿತೇ ಮಾತಾಡುತ್ತಿರುವ ಕಾರಣ ತಕ್ಕ ಮಟ್ಟಿಗಾದರೂ ಗುರುತಿಸಬಹುದೇನೋ! ಇರಲಿ, ಇನ್ನೊಂದು ಉದಾಹರಣೆ ನೋಡುವ.
ಇಪ್ಪತ್ತೈದು ಪದಗಳೊಳಗೆ ಕತೆ ಬರಿಬೇಕಿತ್ತು. ನೂರೈವತ್ತು ಇಮೋಜಿ ಹಾಕಿ ಕಳ್ಸ್ದೆ. ಬ್ಯಾಗ್ರೌಂಡಲ್ಲಿ ತಲೈವರ್ ಅಲಪ್ಪರ ಮ್ಯೂಸಿಕ್ ಬರ್ತಿತ್ತು.
ಕತೆಗೆ ಈ ಅಪ್ರೋಚ್ ಹೊಸತು. ಈ ಸಮಯದ್ದು! ವಿಶೇಷವಾಗಿ ಮೊದಲೆಂದೂ ಈತರದ ಯೋಚನೆ ಬರಲೂ ಸಾಧ್ಯವಿಲ್ಲದ್ದರಿಂದ ಬೇರೆ ಯಾವುದಾದರೂ ಪ್ಯಾಟರ್ನಿಗೆ ಸಿಲುಕಿರಲಾರದ್ದು! ಏನಷ್ಟು ವಿಶೇಷ?
ಇಮೋಜಿಗಳು ನಮ್ಮ ಸಂವಹನದ ಭಾಗವಾಗಿದ್ದು ಇತ್ತೀಚೆಗಷ್ಟೆ. ಅದನ್ನು ಟೈಪಿಸುವಾಗೆಲ್ಲ ಬಳಸುವ ಕಾರಣ ನಾವದನ್ನು ಪದಗಳಾಗಿ ಪರಿಗಣೆಸಬೇಕೋ ಬೇಡವೋ? ಇಪ್ಪತ್ತೈದು ಪದದ ಲೆಕ್ಕಕ್ಕೆ ನೂರೈವತ್ತು ಇಮೋಜಿ ಹೆಚ್ಚೋ ಕಡಿಮೆಯೋ? ಅದು ಪದವಲ್ಲವೆಂದಾದರೆ, ಬರೀ ಇಮೋಜಿಗಳಲ್ಲಿ ಕತೆ ಹೇಳಲು ಸಾಧ್ಯವಿಲ್ಲವೇ? ಈ ಇಮೋಜಿಗಳು ಏನು ಹೇಳುತ್ತಿವೆ ಎಂದು ಅದೆಷ್ಟು ವಾಟ್ಸಾಪ್ ಫಾರ್‌ವರ್ಡ್ ನೋಡಿಲ್ಲ. ಹಾಗೆಯೇ ಈ ಇಮೋಜಿ ಕತೆಯನ್ನು ಕತೆಯ ಯಾವ ಪ್ರಕಾರದಲ್ಲಿ ಕೂರಿಸುವುದು!! ಸರಿ, ಈಗ ಈ ಬ್ಯಾಗ್ರೌಂಡ್ ಮ್ಯೂಸಿಕ್ ಕತೆಯ ಭಾಗ ಹೌದೋ ಅಲ್ಲವೋ. ಅದನ್ನು ಪರಿಗಣಿಸಿಕೊಂಡೇ ಕತೆಯನ್ನು ಓದಬೇಕೋ ಅಥವಾ ಅದರ ವಿವರಣೆಗಷ್ಟೇ ಸೀಮಿತಗೊಳಿಸಬೇಕೋ? ಥೋ ಥೋ...ಈ ಒಂದು ನಿರ್ಧಾರ, ಕಥಾಜಗತ್ತನ್ನು ಎಷ್ಟು ಬದಲಿಸಬಹುದು? ಹೇಗಾದರೂ ಮಾಡಿ, ಸ್ವಲ್ಪ ಇದರೊಟ್ಟಿಗೆ ತಳಸ್ಪರ್ಶಿ ಕಣ್ಣೀರನ್ನೋ ಮತ್ತೊಂದನ್ನೋ ಸೇರಿಸಲು ಸಾಧ್ಯವಾದರೆ ಹೊಸತಾದ ಸೌಂದರ್ಯದ ವ್ಯಾಖ್ಯೆ ಬರೆಯಲು ಸಾಧ್ಯವಾದೀತೇನೋ. ಹಾಗೇನಾದರೂ ಆದರೆ ಅದು ಒಟ್ಟು ಕ್ಷೇತ್ರವನ್ನು ಮುಂದುವರೆಸುವಲ್ಲಿ ಸಹಕಾರಿಯಾದೀತು.
ಹೀಗೆಯೇ ಯಾವುದು ಈ ಇತಿಹಾಸ ಸಿದ್ಧ ಅಥವಾ ಜನರಲೈಸ್ಡ್ ಪ್ಯಾಟರ್ನ್ ಅನ್ನು ಮೀರಿ ಏನನ್ನೋ ಅಭಿವ್ಯಕ್ತಿಸಲು ಪ್ರಯತ್ನ ಪಡುತ್ತಿರುತ್ತದೆಯೋ ಅದು ಈ ಕಾಲದಲ್ಲಿ ಹೊಸದಾದ ಚಿಂತನಾಶೈಲಿಯೊಂದನ್ನು ರೂಪಿಸುತ್ತಿರುತ್ತದೆ. ಅದು ಯಾವ ಕ್ಷೇತ್ರದಲ್ಲಾದರೂ ಸರಿ. ಅಂತಹ ಪ್ರಯತ್ನಗಳು ಮುನ್ನೆಲೆಗೆ ಬಂದಾಗ, ಆ ಕುರಿತು ಸಮಕಾಲೀನರ ನಡುವೆ ಕೊಡುಕೊಂಡುಕೊಳ್ಳುವಿಕೆಗಳು ನಡೆದಾಗ ಆ ದೇಶಕಾಲಕ್ಕೆ ಸೂಕ್ತವಾದ ಮತ್ತು ಶಕ್ತವಾದ 'ಇಸಂ' ರೂಪುಗೊಳ್ಳುತ್ತದೆ. ಅದು ಇತರ ಕ್ಷೇತ್ರಗಳನ್ನೂ ಪ್ರಭಾವಿಸುತ್ತವೆ, ತೊಂದರೆ ಎನಿಸಿಕೊಳ್ಳುವವರೆಗೆ ಬೆಳೆಯುತ್ತವೆ. ಮತ್ತೆ ಮುಂದಿನ 'ಇಸಂ'ಗೆ ದಾರಿ ಮಾಡಿಕೊಡುತ್ತದೆ.
ಇಲ್ಲದಿದ್ದರೆ, ಬರೀ ಅದದೇ ಎಂದು ಮನುಷ್ಯರಿಗಿಂತ ಚೆನ್ನಾಗಿ ಎಐ ಬರೆಯಹೊರಡುತ್ತದೆ ಅಷ್ಟೇ.



