ಚೆಸ್ ಆಂಡ್ ಅನಾಲಿಸಿಸ್
- sushrutha d
- Dec 15, 2024
- 3 min read
ಅದೆಂಗೋ ಈ ಫೇಸುಬುಕ್ಕಿಗೆ ಗೊತ್ತಾಗಿಬಿಟ್ಟಿದೆ. ಈ ನನ್ಮಗಂಗೆ ಚೆಸ್ ವಿಡಿಯೋ ತೋರ್ಸಿದ್ರೆ ಮುಚ್ಕಂಡ್ ನೋಡ್ತಾನೆ ಅಂತ. ಆ ಲೆವಿ ರೋಸ್‌ಮ್ಯಾನ್ ಅಂತೂ ಅವಾಗವಾಗ ಬಂದು "ಸ್ಯಾಕ್ ದ ರೂಊಊಊಕ್" ಅಂತಿರ್ತಾನೆ.
ಚೆಸ್ ಅಲ್ಲಿ ಸ್ಯಾಕ್ರಿಫೈಸ್ ಅಂದ್ರೆ ಎಲ್ರಿಗೂ ಅದೇನೋ ಕ್ರೇಜ್. ಯಾವುದೋ ಒಂದು ಪೀಸನ್ನ ಬಿಟ್ಟಿಯಾಗಿ ಕೊಟ್ಟು ಇನ್ನೊಂದು ಕಡೆಯಿಂದ ಧೂಳೀಪಟ ಮಾಡ್ಕೊಂಡು ಬರೋದನ್ನ ನೋಡೋಕೇ ಖುಷಿ. ಆ ಮಿಖಾಯಿಲ್ ತಾಲ್ ತಾತ ಅಂತೂ ಕೂತಕೂತಲ್ಲೇ ಸ್ಯಾಕ್ರಿಫೈಸ್ ಮಾಡೋದಕ್ಕೇ ಫೇಮಸ್ಸು. ನಾವೇನಾದ್ರೂ ಹಂಗೆಲ್ಲ ಆಡಿಬಿಟ್ರೆ ಮುಗೀತು. ಅವತ್ತು ಕಾಲು ನೆಲದ ಮೇಲೇ ನಿತ್ತಿರಲ್ಲ.
ಇನ್ನೊಬ್ಬ ಹಿಂಗೇ ಅದ್ಭುತ ಅನ್ನಿಸೋ ತರ ಶಾಕ್ ಕೋಡೋನು ಅಂದ್ರೆ ಹಿಕಾರು! ಆನ್‌ಲೈನ್ ಆಟ ಅಡೋವಾಗ ಎದುರಿನವ ಮೂವ್ ಮಾಡೋ ಮೊದ್ಲೇ ನಾವು ಇನ್ನೊಂದೈದು-ಹತ್ತು ಮೂವ್ ಮಾಡಿ ಕೂತ್ಕೋಬಹುದು. ಅಂದ್ರೆ, ಇದ್ಕೆ ಇದೇ ಆಟ, ಅದ್ಕೆ ಅದೇ ಆಟ ಎದುರಿರೋನು ಆಡ್ಬೇಕಷ್ಟೇ ಅನ್ನೋ ತರ ಮೊದ್ಲೇ ಲೆಕ್ಕಾಚಾರ ಹಾಕಿ ತಾನು ಆಡ್ತಾ ಹೋಗುದು! ಹಿಕಾರು ಅಂತವ್ನು. ಹೆಂಗೋ ಏನೋ! ಮಜಾ ಅಂದರೆ, ಈಸಲದ ವರ್ಲ್ಡ್ ಚಾಂಪಿಯನ್‌ಶಿಪ್ ಗೇಮ್ ಒಂದು ನಿಜವಾಗಿ ಮುಗ್ಯೋ ಮೊದ್ಲೇ ಅಣ್ಣಾಚಿಗೆ ರಿಕ್ಯಾಪ್ ಮಾಡಿ ಪೋಸ್ಟ್ ಮಾಡಾಗಿತ್ತು! ಬ್ರೋ ಪ್ರೀಮೂವ್‌ಡ್ ರಿಕ್ಯಾಪ್ ಅಂತೇನೋ ಅವ್ನೇ ಹಾಕ್ಕಂಡಿದ್ದ. ಕೂಳೆಯಾಗಿತ್ತು ಮಾತ್ರ. ನೋಡಿದ್ರೆ ಗುಕೇಶ್ ಮತ್ತೆ ಡಿಂಗ್ ಯೋಚ್ನೆ ಮಾಡಿ ಆಡ್ತಾನೆ ಇದ್ದಾರೆ ಇನ್ನೂ!
ಹಾಗೆನೇ ಕಾರ್ಲ್ಸನ್. ಇಡೀ ಉಳಗಕ್ಕೆ ಉಳಗವೇ ಗ್ರೇಟೆಸ್ಟ್ ಎಂದು ಅವನನ್ನು ಒಪ್ಪಿಕೊಂಡಾಗಿದೆ. ಬೇರೆಲ್ಲಾ ಸ್ಪೋರ್ಟ್ಸಲ್ಲೂ ಯಾವನೋ ಇನ್ನೊಬ್ಬ ಇರ್ತಾನೆ ಕಂಪೆನಿಗೆ. ಮೆಸ್ಸಿ ಅಂದ್ರೆ ರೊನಾಲ್ಡೋ ಬಂದಂಗೆ. ಕಾರ್ಲ್ಸನ್ ಅಂದ್ರೆ ಮಾತ್ರ ಯಾವಂದೂ ದೂಸ್ರಾ ಮಾತೇ ಇರಲ್ಲ.
ಅಂತೂ ಗುಕೇಶ ಈಸಲ ಚಾಂಪಿಯನ್ಶಿಪ್ಪಲ್ಲಿ ಅಂತಾದಾಗ ಜೋಶ್ ಬಂತು. ಇದೇ ಮೊದಲನೇ ಸಲ ಚೆಸ್ ಚಾಂಪಿಯನ್‌ಶಿಪ್ಪನ್ನ ಪೂರ್ತಿಯಾಗಿ ಫಾಲೋ ಮಾಡಿದ್ದು. ಮೊದ್ಲೊಮ್ಮೆ ಪಿಯುಲಿ ಇದ್ದಾಗ, ಹಾಸ್ಟೆಲಲ್ಲಿ, ಸರ್ ಒಬ್ರು ಮ್ಯಾಗ್ನಸ್-ವಿಶಿ ಆಡಿದ ಚಾಂಪಿಯನ್‌ಶಿಪ್ ಆಟಗಳನ್ನ ಬೋರ್ಡ್ ಮೇಲಿಟ್ಟು ತೋರ್ಸೋರು! ಹಿಂಗಾಡಿದ್ರೆ ನಾನಿಂಗ್ ಆಡ್ತೀನಿ, ಅದಾದ್ರೆ ಇದು ಅಂತ! ನಾವಿನ್ನೂ ನಮ್ ಟ್ರಿಕ್ಸ್, ನಾವು ಬಿಟ್ಕೊಡ್‌ಬಾರ್ದು ಅಂತೆಲ್ಲ ಇದ್ದಾಗ, ಆ ಚಾಂಪಿಯನ್‌ಶಿಪ್ ಮ್ಯಾಚ್ ಮೂಲಕ ಹಾಗೆಲ್ಲ ಏನಿಲ್ಲ, ಇದ್ದ ಪೊಸಿಶನಲ್ಲಿ ಬೆಸ್ಟ್ ಆಟ ಹುಡ್ಕಿ ಆಡೋದೇ ಚಾಲೆಂಜ್ ಅಂತ ಬಾಲ ಬಿಟ್ಟು ಸ್ವಲ್ಪ ಅರ್ಥ ಆಗಿತ್ತು.
ಮತ್ತೆ ಮೈಸೂರಲ್ಲಿದ್ದಾಗ ಫಿಲಾಸಫಿ, ಸೈಕಾಲಜಿ, ಆರ್ಟ್, ಹಿಸ್ಟರಿ ಅಂತ ತಲೆಕೆಡ್ಸಿಕೊಂಡು ಗಿರಕಿ ಹೊಡಿತಿರ್ಬೇಕಿದ್ರೆ, ನನ್ ತಲೆಲಿ ಚೆಸ್ ಆಟ ಬೇರೆನೇ ಆಯಾಮ ಪಡ್ಕೊಂಡಿತ್ತು. ಒಬ್ಬ ಮನುಷ್ಯನ ಕ್ವಾಲಿಟಿಗಳು ಹೇಗೆ ಒಂದು ಚೆಸ್ ಆಟದಲ್ಲಿ ವ್ಯಕ್ತ ಆಗ್ತದೆ ಅಂತ ಗುರುತಿಸೋಕೆ ಭಾರೀ ಮಜ. ಆಗೊಂದಷ್ಟು ಜೋಶ್‌ಜೋಶಲ್ಲಿ ದೊಡ್ಡವ್ರ ಮ್ಯಾಚ್ ಎಲ್ಲ ನೋಡಿದ್ದು ಬಿಟ್ರೆ, ಮತ್ತಿವಾಗ್ಲೇ.
ಈಸಲದ ಚಾಂಪಿಯನ್‌ಶಿಪ್ ಬಗ್ಗೆ ಮಾತಾಡೋ ಮೊದ್ಲೇ.. ಕಳೆದ ಬಾರಿ ಚೀನಾದ ಡಿಂಗ್-ನೆಪೋವಿನ ವಿರುದ್ಧ ಆಡಿ ಗೆದ್ದಮೇಲೆ, ಫುಲ್ ಡಿಪ್ರೆಶನ್ನಿಗೆ ಹೋಗಿ, ತನ್ನ ಆಟ-ರೇಟಿಂಗ್ ಎಲ್ಲ ಹಾಳುಮಾಡಿಕೊಂಡು, ಮತ್ತೆ ರಿಕವರಿ ಆಗ್ತಾ ಇರೋ, ಅಥವಾ ಇನ್ನೂ ಆಗೋ ಪ್ರಯತ್ನದಲ್ಲಿರೋ ಚಾಂಪಿಯನ್ ಒಂದುಕಡೆ. ತನಗೆ ಚಾನ್ಸೇ ಇಲ್ಲ ಅಂದುಕೊಂಡಿದ್ದ ಗುಕೇಶ ಚೆನ್ನೈಯಲ್ಲಿ ಗೆದ್ದು, ಕ್ಯಾಡಿಂಡೇಟ್ಸ್ ಆಡಿ-ಗೆದ್ದು, ಒಲಿಂಪಿಯಾಡ್ ಅಲ್ಲಿ ತನ್ನ ಬೆಸ್ಟ್ ಆಟ ಆಡಿ ಟೀಮ್ ಗೋಲ್ಡ್ ಗೆದ್ದು, ರೇಟಿಂಗನ್ನ ಹುಚ್ಚಂಪಟ್ಟೆ ಏರಿಸಿಕೊಂಡವ ಇನ್ನೊಂದು ಕಡೆ. ಇಬ್ಬರ ಟ್ರಾಜೆಕ್ಟರಿಯೂ ಎರಡು ದಿಕ್ಕು!
ಇದ್ದಬದ್ದ ಖಂಡತುಂಡ ಚೆಸ್ ಪಂಡಿತರೆಲ್ಲ ಡಿಂಗ್‌ನ ಅವಸ್ಥೆ ನೋಡಿ, ಗುಕೇಶ ಆರಾಮದಲ್ಲಿ ಗೆದ್ದುಬಿಡುತ್ತಾನೆ ಅಂದುಕೊಂಡಿದ್ದಾಗ, ಡಿಂಗ್ ಮೊದಲ ಮ್ಯಾಚ್ ಕಪ್ಪು ಕಾಯಿಗಳೊಂದಿಗೆ ಗೆದ್ದಿದ್ದು ಎಲ್ಲರ ಅನಾಲಿಸಿಸ್ಸನ್ನೂ ಒಡೆದು ಚೂರು ಮಾಡ್ತು! ಡಿಂಗ್ ಇಸ್ ಬ್ಯಾಕ್, ಡಿಂಗ್ ಚಿಲಿಂಗ್ ಎಂದೆಲ್ಲ ಹರಿದಾಡಿದ ಮಿಮ್ಸ್‌ಗಳಿಗೆ ಲೆಕ್ಕವಿಲ್ಲ!
ಗುಕೇಶನ ಮೇಲಿದ್ದ ಹೈಪ್ ಬುಸಕ್ಕಂತ ಕೆಳಗಿಳೀತು.
ಮತ್ತೆ ಹೇಗೋ ಡ್ರಾ ಎಲ್ಲಾ ಆಗಿ, ಒಂದು ಮ್ಯಾಚ್ ಗೆದ್ದು ಪಾಯಿಂಟ್ ಸಮಸಮ ಮಾಡಿಕೊಂಡ್ರೂ ಇವರುಗಳ ಆಟ ನೋಡಿ ಖುಷಿಪಟ್ಟವರು ಯಾರಿಲ್ಲ. ತುಂಬ ಮುಖ್ಯವಾದ ಆರು-ಏಳು-ಎಂಟನೇ ಆಟವೂ ಹೆಚ್ಚುಕಡಿಮೆ ಸಪ್ಪೆಯಾಗಿಯೇ ಡ್ರಾದಲ್ಲಿ ಮುಗಿದದ್ದನ್ನು ಕಂಡು ಇದು ವರ್ಲ್ಡ್ ಚಾಂಪಿಯನ್‌ಶಿಪ್ ಮ್ಯಾಚಿನ ಹಾಗೆಯೇ ಇಲ್ಲ, ಇಲ್ಲಿಯತನಕ ಒಂದೇ ಒಂದು ಒಳ್ಳೆಯ ಆಟವನ್ನೂ ಇವರುಗಳು ಆಡಿಲ್ಲ ಎಂಬುದು ಹಬ್ಬಿದ ಮತ್ತು ಗ್ರೇಟೆಸ್ಟ್ ಆಫ್ ಆಲ್ ಟೈಮ್- ಮ್ಯಾಗ್ನಸ್ ಕಾರ್ಲ್ಸನ್ನೇ ಹೇಳಿದ ಮೇಲೆ ಹೆಚ್ಚು ಕಡಿಮೆ ಎಲ್ಲರೂ ಒಪ್ಪಿದ ಸುದ್ದಿ. ಡಿಂಗ್ ಅಂತೂ ಆಟ ಶುರುವಾಗುವ ಮೊದಲೇ ಡ್ರಾ ಕೇಳುವ ಅವಕಾಶವಿದ್ದರೆ ತೆಗೆದುಕೊಳ್ಳುತ್ತಿದ್ದನೋ ಏನೋ! ಅಷ್ಟೂ ಆಟದಲ್ಲಿ ಡ್ರಾ ಡ್ರಾ ಡ್ರಾ ನೋಡಿ, ಓಪನಿಂಗ್ ಮುಗಿದ ತಕ್ಷಣ ಗೆಲ್ಲುವ ಪ್ರಯತ್ನವನ್ನೂ ಮಾಡದೆ ಡ್ರಾ ಮಾಡಿಕೊಳ್ಳುವುದು ನೋಡಿ ಬೇಸತ್ತು ಹೋಗಿದ್ದರು ಎಲ್ಲಾ ಗ್ರಾಂಡ್ ಮಾಸ್ಟರ್ಸೂ. ಗುಕೇಶನಿಗೆ ಡ್ರಾ ಮಾಡಿಕೊಳ್ಳುವ ಮನಸ್ಸಿಲ್ಲ. ಡಿಂಗ್‌ಗೆ ಗೆಲ್ಲುವ/ಸೋಲುವ ಮನಸ್ಸಿಲ್ಲ!!?
ಅಜ್ಜಿಪುಣ್ಯವೋ ಏನೋ ಎಂಬಂತೆ ಹನ್ನೊಂದನೇ ಗೇಮಲ್ಲಿ ಗುಕೇಶ ಗೆದ್ದುಬಿಟ್ಟ! ಅದೂ ಹೆಂಗೆ? ಕ್ವೀನ್ ಸ್ಯಾಕ್ರಿಫೈಸ್! ಆಹಾ! ಬೇಸತ್ತಿದ್ದವರೆಲ್ಲ ಒಮ್ಮೆ ಎಚ್ಚರ ಆದ್ರು ಅಂತ ಗೊತ್ತಾಗಿ ಡಿಂಗ್ ಕೂಡ ತನ್ನ ಇತ್ತೀಚಿನ ಬೆಸ್ಟ್ ಆಟ ಆಡಿ ಹನ್ನೆರಡನೆಯ ಆಟ ಗೆದ್ದ. ಇಡೀ ಈ ಚಾಂಪಿಯನ್‌ಶಿಪ್ ಮ್ಯಾಚಲ್ಲಿ ಇದೊಂದೇ ಆಟ ನಿಜವಾಗಿಯೂ ಆ ಲೆವೆಲಲ್ಲಿ ಇದ್ದಿದ್ದು ಎನ್ನುವುದು ಹಲವರ ಅಭಿಮತ! ಥೋ ಇವ್ರ, ಮತ್ತೆ ಪಾಯಿಂಟ್ ಸಮ ಸಮ ಮಾಡ್ಕಂಡ್ರು ಅಂತ ನಮ್ದು!
ಕೊನೇ ಎರಡು ಆಟ, ಕ್ಲಾಸಿಕಲ್ ಫಾರ್ಮೇಟಲ್ಲಿ. ಅದೆರಡರಲ್ಲೂ ಡ್ರಾ ಆದರೆ ರಾಪಿಡ್ ಫಾರ್ಮೇಟ್! ತುಂಬಾ ಕ್ಯಾಲಿಕ್ಯುಲೇಟಿವ್ ಆಟಗಾರನಾದ ಗುಕೇಶನಿಗಿಂತ ರ‌್ಯಾಪಿಡ್ ಫಾರ್ಮೇಟಲ್ಲಿ ಇಂಟುವಿಟಿವ್ ಆದ ಡಿಂಗ್ ಗೆಲ್ಲುವ ಚಾನ್ಸ್ ಹೆಚ್ಚಾಗಿದ್ದಿದ್ದಕ್ಕೆ, ಗುಕೇಶನಿಗೆ ಈಗಲೇ ಗೆಲ್ಲುವ ಅಗತ್ಯ. ಡಿಂಗಿಗೆ ಡ್ರಾ ಮಾಡುವ ಉತ್ಸಾಹ.
ಹದಿಮೂರನೇ ಮ್ಯಾಚಲ್ಲಿ ಗುಕೇಶ ಪ್ರಯತ್ನ ಪಟ್ಟರೂ ಗೆಲ್ಲಲಾಗಲಿಲ್ಲ. ಹದಿನಾಲ್ಕನೇ ಮ್ಯಾಚಲ್ಲೂ ಇನ್ನೇನೂ ಮಾಡಲು ಆಗುವುದಿಲ್ಲ ಎಂದುಕೊಂಡಿದ್ದಾಗ... ಹಿಕಾರು ಎಲ್ಲರಿಗಿಂತ ಮೊದಲೇ ಪ್ರೀಮೂವ್ ಮಾಡಿ ಹಿಹ್ಹಿಹ್ಹಿಹ್ಹೀ ಎಂದು ನಗುತ್ತಾ ರೀಕ್ಯಾಪ್ ವೀಡಿಯೋ ಮಾಡುತ್ತಿದ್ದಾಗ...ಡಿಂಗ್ ಬ್ಲಂಡರ್ ಮೂವ್ ಮಾಡಿದ್ದ. ಗುಕೇಶ ಗೆದ್ದು ಹೊಸ/ಯಂಗೆಸ್ಟ್ ವರ್ಲ್ಡ್ ಚೆಸ್ ಚಾಂಪಿಯನ್ ಆದ.
ಇಡೀ ಮ್ಯಾಚ್ ಸಾಗಿದ ದಾರಿ, ಇಂಡಿವಿಜುವಲ್ ಗೇಮ್ ಸ್ಟ್ರಾಟಜಿ, ನೋವೆಲ್ಟಿ ಮೂವ್ಸ್, ವ್ಯಕ್ತಿಯ ಮೈಂಡ್‌ಸೆಟ್, ಸೆಕೆಂಡ್ಸ್ ಟೀಮ್, ಮುಂತಾದ ಎಲ್ಲಾದನ್ನೂ ಬಿಟ್ಟು, ಬರಿಯ ಕೊನೆಯ ಆಟದ ಕೊನೆಯ ನಾಲ್ಕು ಮೂವ್‌ಗಳನ್ನಷ್ಟೇ ನೋಡಿ ತಮತಮಗೆ ಕಂಡಂತೆ ಇಲ್ಲಿ ಯಾರು ಬೇಕಿದ್ದರೂ ಅನಾಲಿಸಿಸ್ ಮಾಡಬಹುದಾದರೂ, ಆ ಲೆವಿಲ್ಲಿನ, ಆ ಪೊಸಿಶನ್ನಿನ, ಒಟ್ಟು ಚಾಂಪಿಯನ್‌ಶಿಪ್ ಮ್ಯಾಚಿನ ಆಬ್ಜೆಕ್ಟಿವ್ ಅನಾಲಿಸಿಸ್‌ಗೆ ಗ್ರಾಂಡ್ ಮಾಸ್ಟರ್ಸ್‌ಗಳು ಹೇಳುವುದನ್ನೇ ನೋಡಬೇಕಷ್ಟೆ. ಬೇಕುಬೇಕೆಂದೇ ಒಳ್ಳೆಯ ಮೂವ್ ಅಲ್ಲದ್ದನ್ನು ಆಡುವುದು, ಆಟದ ಮಧ್ಯದಲ್ಲೆಲ್ಲೋ ರಿಪೀಟೀಶನ್ ಮೂಲಕ ಡ್ರಾ ಮಾಡಿಕೊಳ್ಳುವುದು, ರಿಪೀಟಿಶನ್ ಡ್ರಾ ಮಾಡಹೊರಟು ಎರಡು ಆಟದ ಬಳಿಕ ಡ್ರಾ ಮಾಡಿಕೊಳ್ಳದೆ ಮುಂದುವರಿಯುವುದು, ಆಟದ ಮಧ್ಯದಲ್ಲಿ ಮೂವ್‌ಗಳ ಮೂಲಕ ಕೊಡುವ ಸ್ಟೇಟ್‌ಮೆಂಟ್‌ಗಳು, ತಪ್ಪಿ ಹೋಗಿ ಆಗುವ ಬ್ಲಂಡರ್‌ಗಳು, ಅವುಗಳ ಹಿಂದಿನ ಲಾಜಿಕ್ಕನ್ನು ಅರ್ಥ ಮಾಡಿಕೊಳ್ಳುವುದೂ ನಮಗೆ ಕಷ್ಟವೇ. ಹಿಂದಿನ ಆಟದ ನಿಲುವುಗಳು ಮುಂದಿನ ಆಟವನ್ನು ನಿರ್ಧರಿಸುವ ಬಗೆಯಂತೂ ಇನ್ನೂ ಸೋಜಿಗ!
ಇದನ್ನೆಲ್ಲ ಗಮನಿಸದೆ, ಒಟ್ಟುಹಿಡಿಯದೆ ರೀಚ್‌ಗೋಸ್ಕರ ತಮತಮಗೆ ಕಂಡಂತೆ ಮಾಡುವ ಅನಾಲಿಸಿಸ್ಗಳು ಈ ಫೇಸ್ಬುಕ್ಕಲ್ಲಿ ತುಂಬಿರುವುದೂ, ಅದನ್ನ ಒಂದರ ಮೇಲೊಂದರಂತೆ ಈ ನನ್ಮಗಂಗೆ ಇಷ್ಟವಾಗುತ್ತದೆ ಎಂದು ಜುಕರ್‌ಬರ್ಗ ನನ್ನ ಕಣ್ಣೆದುರು ಕಳಿಸುವುದೂ ಯಾವ ಲೈಕಿನ ಕರ್ಮವೋ ಕಾಣೆ!
