top of page
ಕಿವಿ ನೆಟ್ಟಗಾದಾಗ
ಗೇಟಿನ ಸಂದಿಯಲ್ಲಿ
ಮುಖವಷ್ಟೇ ತೂರಿಸಬಹುದು.
ಕಣ್ಣ ಮುಂದೆ ಉದ್ದದ ದಾರಿ.
ಯಾರೋ ತಿಂದೆಸೆದ ತಿಂಡಿ
ಕೊನೆಯಲ್ಲಿ.
ನಮ್ಮ ಪಾಲಿನ ಉದ್ಭವ ಲಿಂಗ
ಕಂಡಾಗೆಲ್ಲ ಜೊಲ್ಲು ನುಂಗಿ
ಬೊಗಳುವುದು ವಾಡಿಕೆ.
ಕಷ್ಟ!
ಕಿವಿ ಮಂದ ಎರಡು ಕಾಲಿಗೆ.
ಬೊಗಳಿದರೂ ಬಾಗಿಲು ತೆಗೆಯುವುದಿಲ್ಲ.
ಸಂಜೆ ಬಾಲ ಅಲ್ಲಾಡಿಸಿದಾಗ
ಚಿಲಕ ಹಾಕಿಲ್ಲವೆಂಬ ಉತ್ತರ.
ಬೀದಿಗಳಿಗೆ ಗೇಟಿಲ್ಲ.
ಬೌ ಬೌ
ಕುಂಯ್ ಕುಂಯ್
ಗುರ್ರ ಗುರ್ರ
ಒಂದೂ ಪ್ರಯೋಜನಕ್ಕಿಲ್ಲ.
ಬಾಲ ಅಲ್ಲಾಡಿಸಿ ಸಂಕೋಲೆ ಬಿಚ್ಚಿಸಲು
ಬಾಗಿಲು ತೆಗೆಯದೆ ಆಗುವುದಿಲ್ಲ.
ಚಿಲಕ ತೆಗೆದಿಟ್ಟ ಮಾತ್ರಕ್ಕೆ
ಹೊರಗಿನದ್ದು ಕಾಣುವುದಿಲ್ಲ.
ಉದ್ಭವಲಿಂಗ 30 ಮಾರ್ಚ್ 2022
bottom of page
