ಏನನ್ನೋ ಹುಡುಕಹತ್ತಿದ್ದ
ನೆಲದಲ್ಲಿರುವ ವಸ್ತುವನ್ನು
ಆಕಾಶ ನೋಡುತ್ತಾ!
ಏನೆಂದು ತಿಳಿದಿಲ್ಲ
ಹುಡುಕುವ ಪರಿ ಗೊತ್ತಿಲ್ಲ
ಆದರೂ ಹುಡುಕುತ್ತಿದ್ದ
ಏನನ್ನೋ ಹುಡುಕಹತ್ತಿದ್ದ.
ಸಹಾಯಕ್ಕೆಂದು ಬಂದವರಿಗೆ ವಿವರಿಸುವುದೆಂತು?
ತಿಳಿದಷ್ಟನ್ನು ಹೇಳಿದಾಗ ಅರಿತವರೆಷ್ಟು?
ಆದರೂ, ಖುಷಿಯಿಂದ ಹುಡುಕುತ್ತಿದ್ದ
ಏನನ್ನೋ ಹುಡುಕಹತ್ತಿದ್ದ.
ಉದ್ಭವಿಸತೊಡಗಿದ್ದವು ಪ್ರಶ್ನೆಗಳು
ಕೊನೆಯಿಲ್ಲದೆ ಅರ್ಥವಾಗದವು
ಆದರೂ, ಪ್ರಯತ್ನ ಬಿಡದೆ ಹುಡುಕುತ್ತಿದ್ದ
ಏನನ್ನೋ ಹುಡುಕಹತ್ತಿದ್ದ.
ಜನರಿಗೆ ಉತ್ತರ ಸಿಗಲಿಲ್ಲ
ಕೇಳಿದವರಿಗೆ ತೋರಿಸಲು ಆಧಾರವೇನಿಲ್ಲ
ಆದರೂ, ಎಡೆಬಿಡದೆ ಹುಡುಕುತ್ತಿದ್ದ
ಏನನ್ನೋ ಹುಡುಕಹತ್ತಿದ್ದ.
ಸಮಯವು ತಾಳ್ಮೆಯ ಲೆಕ್ಕಾಚಾರ ಮಾಡಿತ್ತು
ಖುಷಿಯ ಕೆಲಸದಿಂದ ನಿರಾಶೆಯಾಗತೊಡಗಿತ್ತು
ಆದರೂ, ತನ್ನ ದಿನಚರಿಯೆಂದು ಹುಡುಕುತ್ತಿದ್ದ
ಏನನ್ನೋ ಹುಡುಕಹತ್ತಿದ್ದ.
ತಾಳ್ಮೆಗೆಟ್ಟ ಜನರ ಸಮಾಜ ಒಂದಾಗಿತ್ತು
ಹುಚ್ಚನೆಂದು ಕರೆದು ಜಾಗ ಖಾಲಿ ಮಾಡಿದ್ದರು
ಆದರೂ, ಕಷ್ಟಪಟ್ಟು ಹುಡುಕುತ್ತಿದ್ದ
ಏನನ್ನೋ ಹುಡುಕಹತ್ತಿದ್ದ.
ದಾರಿ ಕಾಣದಾದಾಗ ಕನಸು ಕಂಡಿದ್ದ
ಬೇ ಸರದಲ್ಲೇ ಖುಷಿಯ ರುಚಿ ನೋಡಿದ್ದ
ಆದರೂ, ಏನನ್ನೋ ಹುಡುಕಹತ್ತಿದ್ದ
ನೆಲದಲ್ಲಿರುವ ವಸ್ತುವನ್ನು
ಆಕಾಶ ನೋಡುತ್ತಾ!
ಪ್ರಯತ್ನ 28 Mar 2020
