top of page

ಮಾಸ್ತರ ನೋಡಿದ್ದ

ಬೆಂಚಿನ ಮೇಲೆ ಬರೆದಿದ್ದ.

ಐದು ಐದು ಮೂರು

ಐದು ಐದು ಮೂರು

 

ಏನೋ ಇದು ನಂಬರ್!

 

ಸರ್ ಸರ್ ಅದೂ..

"ಬೇಗ ಬೊಗಳೋ"

ನಾಯಿ ಸರ್.

 

ಗೊಳ್ಳೆಂದಿತು ಕ್ಲಾಸ್!

 

ಮಾಸ್ತರು ಬೆತ್ತ ಬಡಿದರು

ಬೆಂಚಿಗೆ ||2 ಬಾರಿ||

ಪುಣ್ಯಕ್ಕೆ ನಾಯಿ ಇನ್ನೂ ಹುಟ್ಟಿರಲಿಲ್ಲ.

ಗೀಟೆಳೆದು ಕಣ್ಣು ಬರೆದರಷ್ಟೇ

ಜೀವ ಬಂದೀತು. ಏಟಾದೀತು.

 

ಬಾಲ ಮುದುರಿ ಓಡಲಿಕ್ಕೂ ಸಾಕು. ಪಾಪ!

 

ನಂಗೆ ನೆನಪಿದೆ ಇನ್ನೂ

ಅಂದು ಮಾಸ್ತರು ಹೇಳಿದ್ದು.

ಕನ್ನಡದ ನಾಯಿಗಿಂತ

ಇಂಗ್ಲಿಷ್‌ದಕ್ಕೆ ಬೆಲೆ ಜಾಸ್ತಿ.

ಉಲ್ಟಾ ಮಾಡಿದರೆ ಮತ್ತೂ.

 

ವ್ಹಾ......

 

ಕೊನೆಯ ಬೆಂಚಿನಲ್ಲಾಗಲೇ

ಥ್ರೀ ಫೈವ್ ಫೈವ್

ಥ್ರೀ ಫೈವ್ ಫೈವ್ ಮೂಡಿತ್ತು.

ಪಾಠವೇನೋ ಅರ್ಥವಾಗಿತ್ತು.

ಬಾಲ ಮಾತ್ರ ಅಲ್ಲಾಡುತ್ತಿತ್ತು.

 


ಓಹ್ ಗಾಡ್!           30 May 2021


bottom of page