top of page

ನಾನೊಬ್ಬ ಕವಿಯಲ್ಲ.

ವಿದ್ಯಾರ್ಥಿ.

ದೃಶ್ಯಕಲಾ ವಿದ್ಯಾರ್ಥಿ

ಮೈಸೂರ ಕಾವಾದಲ್ಲಿ.

 

ಕಾವ್ಯಗಳನ್ನು ಓದಿಕೊಂಡಿಲ್ಲ.

ಬರೆದದ್ದೂ ಕಾವ್ಯವಾಗಿರಲಿಕ್ಕಿಲ್ಲ.

ಪರವಾಗಿಲ್ಲ.

ಏನೋ ಒಂದು ಮಾಡಿ

ಕೈಗೆ ಸಿಕ್ಕಷ್ಟು ಬಾಚಿಕೊಂಡಿದ್ದೇನಲ್ಲ.

 

ಕಣ್ಣುಕಿವಿಗೆ ಬಿದ್ದದ್ದು, ಬುದ್ಧಿಗೆ ದಕ್ಕಿದ್ದು

ತುಂಡುಸಾಲಲ್ಲಿ ಬರೆದು ನೇತುಹಾಕಿದ್ದು

ಬಿಸಿಲಿದ್ದಾಗ ಒಣಗಲಿ,

ಮೋಡ ಕವಿದರೆ ತೆಗೆಯಿರಿ,

ಮರೆಯದಿರಿ, ನಿಮ್ಮ ಜವಾಬ್ದಾರಿ.

 

ಪದಗಳ ಗರಗಸಕ್ಕೆ

ಲಯವೆಂಬ ಅರ ನನ್ನಲ್ಲಿಲ್ಲ.

ತೊಂದರೆಯಿಲ್ಲ.

ಕೆಂಪು ಇಲ್ಲದಿದ್ದರೆ

ನೀಲಿ ಬಳಸುತ್ತೇನೆಂದು

ಪಿಕಾಸೋನೇ ಹೇಳಿದ್ದಾನಂತಲ್ಲ.

 

ಬರಡು ಪದಗಳ ರಾಶಿ, ವ್ಯಾಕರಣದ ಸಿಮೆಂಟು

ಮರೆಯದ ಅನುಭವದ ಮರಳು,

ಅದರಲ್ಲೊಂದು ಮಕ್ಕಳಾಡಿದ ಮಾಟೆ,

ಪುಡಿ ಪುಡಿ ಭಾವದ ಹರಳುಕಲ್ಲು,

ಅಲ್ಲಲ್ಲಿ ಕದ್ದು ಸೇದಿದ ಸಿಗರೇಟು ಬಡ್,

ಒಂದು ನಾಲ್ಕರ ಅನುಪಾತಕ್ಕೆ ಬುದ್ಧಿ, ಮನಸ್ಸು.

ನೀರು ಸುರಿದಂತೆ ಒಟ್ಟಾದ ಜೋಡಣೆಯೇ

ನನ್ನ ಮೇಕಪ್ ಕಿಟ್.

 

ಕನ್ನಡಿ ಮುಂದೆ ಕೂತು ಡಬ್ಬಿ ಮುಚ್ಚಳ ತೆಗದರೆ

ಪೌಡರಿಲ್ಲ. ಸುಗಂಧಗಳಿಲ್ಲ. ಚಿಂತನೆಗೆ ಕೊರತೆಯಿಲ್ಲ.

ಇಲ್ಲದರ ಹುಡುಕದೆ, ಇರುವುದ ಕಂಡರೆ

ಸಹಜವೇ ಸುಂದರ, ಎಲ್ಲವೂ

ಪ್ರಯತ್ನ ಪಟ್ಟರೆ ಮಾತ್ರ.



ಮುನ್ನುಡಿ               12 ಮೇ 2022




bottom of page