ಇನ್ನೇನು ಮಳೆಗಾಲ ಬಂತು
ಇವತ್ತೋ ನಾಳೆಯೋ ಇದ್ದೀತು.
ಕಪ್ಪು ಮೋಡಗಳ ಮೇಲಿಂದ
ಸೂರ್ಯ ಇಣುಕದೆ ದಿನವಾಯಿತು.
ಹರಿವ ಬೆವರಿಗೆ ಕಾಣುವುದೀಗ
ಬರಿಯ ಬಾಯಾರಿಕೆ, ಸೆಕೆ ಮತ್ತು ಸೊಳ್ಳೆ.
ಏನು ಕಾಟ ಅಂತೀರ!
ಸೊಳ್ಳೆ ಕಚ್ಚಿ ದೇಹವೊಂದು
ನೂಲಿನಷ್ಟು ದಪ್ಪವಾಗಿದೆಂದು
ದೂರು ನೀಡಿ ಓಡಿದವರಿದ್ದಾರೆ.
ಒಂದು ರೌಂಡ್ ಫ್ಯಾಟ್ ಕರಗಿಸಿ
ದೇಹವನ್ನು ಸಮ ಮಾಡುವ
ಕನಸು ಕಂಡವರಿದ್ದಾರೆ.
ಓಡಿದ ಸಲುವಾಗಿ ಮೈಯಲಿ ಬೆವರಿಳಿದರೆ,
ಬೆವರಿದ ಸಲುವಾಗಿ ಸೆಕೆ ಆದವರಿದ್ದಾರೆ.
ಫೂ ಫೂ ಮಾಡುತ್ತಾ ಬೆವರ ನೋಡಿ
ಯೇ ಬೆದರಿದವರು ಮತ್ತಷ್ಟು ಬೆವರಿರುತ್ತಾರೆ.
ತಣ್ಣೀರಲಿ ಹಾಯಾಗಿ ಮಿಂದು
ಹೊರಗೆಬಂದು ನಿಂದಾಗ
ಸೆಕೆ ಜಾಸ್ತಿಯಾದದ್ದಿದೆ.
ಚಂಡಿತುಂಡಲಿ ಮೈ ಒರೆಸಿಕೊಳ್ಳೋಕೆ
ದಾಡಿ ಎಂದು ಹೇಳಿಸಿಕೊಂಡದ್ದಿದೆ.
ಮಳೆ ಬಿದ್ದರೆ ಸೆಕೆ ಕಡಿಮೆಯಾದೀತೆಂದು
ಮೋಡವನ್ನೇ ದುರುಗುಟ್ಟಿ ನೋಡಿದ್ದಿದೆ.
ಸೆಕೆಗೆ ಅಂಗಿ ಬಿಚ್ಚಿ, ಸೊಳ್ಳೆ ಕಚ್ಚಿ
ಸಮಯ ಕಾದು ಮೈಕೈಗೆ ಬಡಿದು
ಬೇನೆಗೆ ಪೆಚ್ಚುಮೋರೆ ಹಾಕಿದ್ದಿದೆ.
ಕೆರೆದ ಜಾಗದಲ್ಲೆಲ್ಲಾ ರಕ್ತ ಕೆಂಪೇ
ಇರುತ್ತದೆಂದು ಕಂಡುಕೊಂಡವರಿದ್ದಾರೆ.
ತಲೆಸುತ್ತು ಬಂದು ಬಿದ್ದವರು,
ಚಿಮುಕಿಸಿದ ನೀರು ತುಟಿಗೆ ಬಿದ್ದಾಗ
ನಾಲಿಗೆ ಚಾಚಿ ಬಾಯಿ ತೆರೆದಿದ್ದಾರೆ.
ಹೊರಹೋದಷ್ಟು ಒಳಗೂ
ಹೋಗಬೇಕೆಂಬ ಗಣಿತಜ್ಞರಿಗೆ
ಬೆವರಿನ ಲೆಕ್ಕಾಚಾರ ಸಿಗದೆ
ಬಾಯಾರಿಕೆ ಜಾಸ್ತಿಯಾಗಿದೆ.
ಸೊಳ್ಳೆ ಈ ಪಾಟಿ ರಕ್ತ ಕುಡಿದರೆ
ಪುನಃ ತುಂಬಿಸುವುದು ಹೇಗೆಂದು
ಪೇಚಿಗೆ ಸಿಲುಕಿದ್ದಾರೆ, ಪೇಚಾಡಿದ್ದಾರೆ.
ಹಿಡಿದ ಸೊಳ್ಳೆಯೊಂದನ್ನೂ ಬಿಡದೆ
ತಿಂದು ತೇಗಿ ರಕ್ತ ಹೆಚ್ಚಿಸಿಕೊಂಡಿದ ್ದಾರೆ.
ಸೊಳ್ಳೆಗೆ ರಕ್ತದಾನ ಮಾಡಿದುದರ
ಫೇಸುಬುಕ್ಕಲಿ ಹಂಚಿಕೊಂಡು
ಲೈಕು ಗಿಟ್ಟಿಸಿಕೊಂಡವರಿದ್ದಾರೆ.
ಲೈಕಿನ ದಾಹದಲ್ಲಿ ಮೈಮರೆತು
ಸೊಳ್ಳೆಯಾಗಿ ಬದಲಾದವರಿದ್ದಾರೆ.
ಪ್ರಾಣಿ ರಕ್ಷಣಾ ಇಲಾಖೆಯವರ ಚುಚ್ಚಿ ಕಿಚಾಯಿಸಿದ್ದಾರೆ.
ಸರ್ಕಾರವ, ಅದರಲ್ಲೂ ಕೇಂದ್ರ ಸರ್ಕಾರವ ಪ್ರಶ್ನಿಸಿದ್ದಾರೆ.
ಹವಾಮಾನ ವರದಿಯವರೀಗ ಹವಾಮಾನ ಬದಲಿಸಬೇಕಿದೆ.
ಸೆಕೆ ಬಾಯಾರಿಕೆಯನ್ನು ಸಮರ್ಥಿ ಸಿದ್ದಿದೆ, ನಿಂದಿಸಿದ್ದಿದೆ.
ಪಕ್ಕದ ಓಣಿಯವರಿಗೆ ಬುದ್ಧಿ ಕಲಿಸಲು ಪಂಥಕಟ್ಟಿದ್ದಿದೆ.
ಇದರ ನಡುವೆಯೇ ಸೊಳ್ಳೆ ಪರದೆಗಳ
ಮೈಮೆಲೆ ಹೊದ್ದು ಓಡಾಡಿದವರಿದ್ದಾರೆ.
ಫ್ಯಾನ್ ಹಾಕಿ ಸೊಳ್ಳೆ ಓಡಿಸಿದವರ ಜೊತೆಗೆ
ಫ್ಯಾನ್‌ಗೇ ನೇತಾಡಿದವರೂ ಇದ್ದಾರೆ.
ಮಳೆಯ ಕಾಯುತ್ತಾ 29 May 2020
