top of page

ನೂರು ಮೀಟರ್ ಓಟವೇ ಇದ್ದೀತು

ಅದಕ್ಕೊಂದು ಕೊನೆಯಿರಲೇಬೇಕಲ್ಲ!

ಅಲ್ಲೊಂದು ಅಡ್ಡದಾರ

ದೂರದಿಂದ ಕಾಣುವಂತೆ

ಹೆಚ್ಚಾಗಿ ಕೆಂಪು ಬಣ್ಣದ್ದು

ಓಟಗಾರರ ದೂರ ಕಾಯುತ್ತಾ.

 

ವೇಗದ ಎದೆಯ ಬಡಿತಕ್ಕೆ ಸಿಕ್ಕಿ

ಮಾರುದ್ದ ಹಾರಿ ನೆಲಕ್ಕೆ ಬಿದ್ದರೆ

ಮತ್ತೆ ಅದ ಮೂಸಿ ನೋಡುವವರಿಲ್ಲ.

 

ದೂರದ ಗುರಿಯೊಂದಿರಬೇಕು

ಮತ್ತದನ್ನು ಸಾಧಿಸುವ ಪಣ ತೊಡಬೇಕು

ಇತ್ಯಾದಿ ಇತ್ಯಾದಿ ಕೇಳಿದ್ದೇನೆ ನಾನು

ನಿಮ್ಮನ್ನೂ ಸೇರಿಸಿಕೊಳ್ಳುವ, ಆಗಬಹುದಲ್ಲ?

 

ಗುರಿಯೆಂದರೇನು?

ನಮಗಾಗದ ಕೆಲಸವ ಮಾಡಿಯೇ

ತೀರುತ್ತೇನೆಂಬ ಹುಂಬತನದ ಹೊರತು!

ಸಾಧ್ಯವೇ ಇಲ್ಲವೇ ಎಂದರೆ

ಅದೃಷ್ಟವಿದ್ದರೆ ಎನ್ನಬೇಕು.

 

ಅಂತಿಮಗುರಿಯನ್ನು ಕಂಡವರುಂಟೇ?

ಅರೆದು ಕುಡಿದು ಬದುಕಿದವರುಂಟೇ?

ತರ್ಕಕ್ಕೆ ಸಿಗುವುದಲ್ಲವೆಂಬುದು ಜಾರಿಕೆಯಷ್ಟೆ?

ಪ್ರಶ್ನೆ ಮಾತ್ರ ಹಾಯಾಗಿ ಉಳಿಯಿತಷ್ಟೆ.

 

ಸಾವೇ ಸತ್ಯವಂತೆ

ಪುನರ್ಜನ್ಮ ನಂಬದವರಿಗೆ.

ಆತ್ಮಕ್ಕೆ ಸಾವಿಲ್ಲವಂತೆ,

ಪುನಃ ಹೊಸ ದೇಹವಂತೆ

ಮತ್ತೊಬ್ಬರಿಗೆ- ಹೊಸ ಮನೆ,

ಹೊಸ ಕಾರು, ಹೊಸ ಹೆಂಡತಿ

ಯ ಜೊತೆಗೆ ಹೊಸ ಗುರಿಯಂತೆ!

 

ನಾವಂತೂ ಕೊನೆ ಕಾಣದೆ ಓಡುವವರು

ಎಲ್ಲಿಗೆ ಮುಗಿಯುತ್ತದೋ ಯಾರಿಗೆ ಗೊತ್ತು!

ಈಗಾಗಲೇ ಮುಗಿದಿರಲೂ ಸಾಕು, ಇನ್ನೆಷ್ಟು ಸಾಲು!

ನಿರ್ಜೀವ ಹೆಣಗಳಂತೆ ಪಂಥಕಟ್ಟಿ ಓಡುತ್ತಿರಬಹುದು

-ಸ್ವರ್ಗಕ್ಕೆಂದು ತಿಳಿದು.

 

ಕೆಂಪು ಪಟ್ಟಿ ಕಾಣುವುದು

ಕಣ್ಣು ಮುಚ್ಚಿದ ಮೇಲೆಯೇ ಏನೋ!

 

 

ಕೆಂಪುಪಟ್ಟಿ            26 May 2021

…………………………………………


bottom of page