top of page

ಓದಿದ್ದೀಯೇನು ಸಂವಿಧಾನ

ಹೇಳುವುದ ಕೇಳು, ಸ್ವಲ್ಪ ಸಮಾಧಾನ.

ಓದಿದ್ದೀಯೇನು?

 

ಪ್ರಜಾಪ್ರಭುತ್ವ ನಮ್ಮದು

ಪ್ರಜೆಗಳಿಂದ ಪ್ರಜೆಗಳಿಗಾಗಿ

ಪ್ರಜೆಗಳಿಗೋಸ್ಕರವಿರುವ ಸರಕಾರವಿದು.

 

ಅದಾವುದೋ ನಂಬರ ಕಾಯಿದೆ

ಹೇಳುವೆ ಕೇಳು ಕಾಯದೆ

ದೀನ ದಲಿತ ಬಡವ ಬಲ್ಲಿದ

ನೆನಪಿರಲಿ ಈ ನಾಲ್ಕು ಪದ.

 

ಧ್ವನಿಯಿಲ್ಲದವರಿಗೆ ಧ್ವನಿಯೊದಗಿಸುವ

ಧ್ವನಿವರ್ಧಕ ಸೇವಾಕಾರ್ಯ ನಮ್ಮದು.

ಬಡವರ ನೋವಿನ ಸ್ವರ ನಾವು

ಸರಕಾರಕ್ಕೆ ನಮ್ಮಿಂದಲೇ ಬಿಸಿಯ ಕಾವು.

 

ಸಾಕಷ್ಟು ಪ್ರಶ್ನಿಸಲು, ಧ್ವನಿ ಎತ್ತಲು!

ಅನಾಚಾರದ ವಿರುದ್ಧದ ಸರಕಾರದ ನಡೆಗಳನು

ಎಲ್ಲ ನಡೆಗಳನ್ನು, ಎಲ್ಲಾ ನಡೆಗಳನ್ನೂ.

ಇಲ್ಲವೇನು ಹತ್ತಾರು ಜಾಲತಾಣ?

ಮತ್ತಿನ್ನೇನು! ಪ್ರಶ್ನಿಸೋಣ ಸರಕಾರವ

ಕೈಯಲಿ ನೊಣ ಕೂತರೂ.

 

ನೊಣಗಳು ಎಲ್ಲಿ ಹುಟ್ಟುತ್ತವೆಂದು ತಿಳಿದಿದೆಯಾ?

ಹೇಳು ತಿಳಿದಿದೆಯಾ?!

ಗಲೀಜುಗಳು ಸರಕಾರದ ಕಣ್ಣಿಗೆ ಕಂಡಿದೆಯಾ?

ನಿರ್ಮೂಲನೆ ಮಾಡಿದೆಯಾ?

ಸಾಕ್ಷಿ ಇದೆಯಾ? ಇದೆಯಾ?!

 

ಗಾಬರಿಯಾಗದಿರು ನಿನ್ನ ಪ್ರಶ್ನಿಸಿದರೆ

ಬೆರಳು ತೋರುತ್ತಿರು ಸರಕಾರದೆಡೆಗೆ

ಇದು ಸಾವಿರಾರು ಜನರ ತಾಣ

ಪ್ರಶ್ನಿಸಿದವನ ಜನ್ಮ ಜಾಲಾಡೋಣ

 

ಪಾಪ! ಆ ನೊಣಗಳ ಕಷ್ಟ ಸರಕಾರಕ್ಕೆ ಗೊತ್ತಾ?

ಹೇಳು ಗೊತ್ತಾ?!

ಒಂದು ದಿನವಾದರೂ ನೊಣಗಳಾಗಿ ನೊಣಗಳಂತೆ

ನೊಣಗಳ ಜೊತೆ ಬದುಕಿದ್ದಿದೆಯಾ?

ಇದೆಯಾ ಸಾಕ್ಷಿ? ಹ್ಞಾಂ? ಹ್ಞೂಂ?

ಧ್ವನಿಯಾಗು ಧ್ವನಿಯಿರದ ನೊಣದ ಪರವಾಗಿಯೂ.

 

ಹಳೆಯದು ಯಾವುದೋ ಒಂದು,

ಒಂದೇ ಒಂದು ಮಾತು ಸಾಕು

ಹಿಪೋಕ್ರೈಟ್ ಎನ್ನಲು.

ಹ್ಞಾಂ! ಗೊತ್ತಿರಬೇಕು ಕೆಲವು

ಇಂಗ್ಲಿಷ್ ಪದಗಳು

ಕಮೆಂಟ್‌ಗಳಲಿ ಉತ್ತರಿಸಲು.

 

"Hypocrisy at its highest peak"

 

ದೇಶಕಾಲದೊಂದಿಗೆ ಬದಲಾಗುವಂತಿಲ್ಲ ಯಾರೂ.

ದೇಶಕಾಲದ ವಿಷಯವೇ ಬೇಡ

ಪ್ರಶ್ನಿಸುವುದು ಪಕ್ಕದ ಗಲ್ಲಿಯವರ.

ವಿಷಯ ಎಲ್ಲಿಯದಿದ್ದರೇನು? ಕಾಲ ಯಾವುದಾದರೇನು?

ಹಬ್ಬಲಿ ರೋಷ, ಕೋಪ, ಕಿಚ್ಚು ಎಲ್ಲೆಡೆ

ಮತ್ತೆ ಶಾಂತಿಗಾಗಿ ಹೋರಾಟ

ಸಿಟ್ಟಾಗಿ, ಒಟ್ಟಾಗಿ.

 

ಕಾನೂನೇ ನಮ್ಮ ಮಾರ್ಗ, ಸಂವಿಧಾನವೇ ನಮ್ಮ ಧರ್ಮ

ಹೇಳಬೇಕು ಗಟ್ಟಿಯಾಗಿ, ಕೇಳಬೇಕು ಆಗಾಗ ಸಾಕ್ಷಿ.

ಬ್ರಾಹ್ಮಣರ ಹೀಗಳೆಯಬೇಕು ಬ್ರಾಹ್ಮಣ್ಯದ ಹೆಸರಿನಲಿ

ಜಾತಿಯ ಮರೆತವರೂ ಮುಟ್ಟಿ ನೋಡಿಕೊಳ್ಳುವಂತಿರಬೇಕು

ಅವರವರ ಜನಿವಾರವ.

 

ಅತಿಯಾದರೆ ಅಮೃತವೂ ವಿಷ

ಮಿತಿಮೀರಿದ ಪ್ರಶ್ನೆಗಳಿಗುತ್ತರ

ಬರಲಿ ಸರ್ವಾಧಿಕಾರ.

ಆಗಲೂ ಪ್ರಶ್ನಿಸೋಣ

ಪ್ರಶ್ನಿಸಿದ ಹೆಣದ ಪರವಾಗಿ.

ಧ್ವನಿಯಿಲ್ಲದ ಹೆಣದ ಸ್ವರವಾಗಿ.

 


ಧ್ವನಿ                          16 Sept 2020



bottom of page