ನಾಯಿಗೆ ಮೂರು ವರ್ಷ ಮೊನ್ನೆಗೆ.
ಭೀಷ್ಮಪ್ರತಿಜ್ಞೆ ಮಾಡಿಸಬೇಕಷ್ಟೆ.
ಎಲ್ಲೆಲ್ಲೂ ಕಾಣಸಿಗುವುದು ಬೇಡ
ಎರಡೆರಡು ಒಟ್ಟೊಟ್ಟಿಗೇ.
ಕುಲಪುರೋಹಿತರಿಗೇ ಮೊದಲ ಫೊನು.
ಯಾವಾಗ ಬಿಡುವು? ಏನೇನು ಪರಿಕರಗಳು?
ಗೊತ್ತುಮಾಡಿದ ದಿನ ಮನೆಯವರ ಗುಸುಗುಸು
ಗಬ್ಬೆದ್ದಿತ್ತು.
ಪುರೋಹಿತರು ಬಂದಸಂತಿಗೇ
ನಾಯಿ ಬೊಗಳಿತು.
ಚಾ ಉಪಾಹಾರ ಆಯ್ತು-
ಅಕ್ಕಿ ಹಾಕದ್ದು.
ಮೇಜಿನ ಮೇಲೆಯೇ.
ನಾಯಿಗೂಡಿನ ಹತ್ತಿರ
ಮುಹೂರ್ತಕ್ಕೆ ಮೊದಲೇ
ಮರಣಾಂತ ಬ್ರಹ್ಮಚರ್ಯೋಪದೇಶ.
ನಾಯಿಮೂತಿಗೆ ಮುತ್ತೇ ಉಡುಗೊರೆ.
ಬಯಸದೇ ಬಂದ ಪಂಚಾಮೃತ ಮತ್ತೊಂದಷ್ಟು.
ವಾರಕ್ಕೊಮ್ಮೆ ನೀರಲಿ ಮುಳುಗೆದ್ದರೆ
ಮೈತಡತಡತಡವಿಕೊಳ್ಳಲೇಬೇಕು
ಹತ್ತಿರ ಬಂದವರಿಗೆ ಪನ್ ನೀರು ತಳೆಯಬೇಕು.
ಮೂಗು ಮುಟ್ಟಿಸಿ ಮೂಸಿನೋಡಬೇಕು.
ಎಲ್ಲಕ್ಕೂ 'ಬಾಡಂ' ಅಲ್ಲದಿದ್ದರೂ 'ಬೌಬೌ' ಅನ್ನಬೇಕು.
ಕಾಲಸಂದಿಯಲಿ ತೂರಬಾರದು. ಬೌಬೌ
ಮೈಮೇಲೆ ಎಗರಬಾರದು. ಬೌಬೌ
ಎರಡು ಕಾಲಲಿ ನಿಲ್ಲಹೊರಡಬಾರದು. ಬೌಬೌ
ಬೀದಿ ಬೀದಿ ಅಲೆಯಬಾರದು. ಬೌಬೌ
ಎಲ್ಲವು ಹೇಳುವುದಕ್ಕೆ ಮಾತ್ರವೆಂದು ನಾಯಿಗೂ ಗೊತ್ತು.
ನೋವು ಮಾಸಿತು ಮಾಸದಲಿ.
ವರ್ಷದಲಿ, ಜೀವನೋತ್ಸಾಹ ಕಡಿಮೆ.
ಜೊತೆಗಾರರಿಲ್ಲದ ಬೇಸರದ ಒಂಟಿ ಬದುಕು
ಬೆಳಗಿನ ಹೊತ್ತು.
ಬೌಬೌ 30 May 2021

