ಸೂಳೆಯಾಗಬಯಸುವೆ ನಾ.
ನಿಯತ್ತಿಲ್ಲದ, ಸರಿ-ತಪ್ಪುಗಳ
ಬಗೆಗೆ ಗಮನವೇ ಇರದೆ ಜೀವಿಸುವ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಧರ್ಮವರಿಯದ, ಸತ್ಯ-ಸುಳ್ಳುಗಳನ್ನು
ಕಾಲಕ್ಕೆ ತಕ್ಕಂತೆ ಪೋಣಿಸಲು ಸಾಧ್ಯವಾಗುವ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಗೊಂದಲಗಳಿಲ್ಲದ, ಇಷ್ಟ-ಕಷ್ಟಗಳ
ನೆಪವೊಡ್ಡಿ ತನಗೆ ಬೇಕಾದ ದಾರಿ ಕಂಡುಕೊಳ್ಳುವ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ನಿಸ್ವಾರ್ಥಿಯಲ್ಲದ, ಆಸು-ಪಾಸಿನಲ್ಲೇ
ಇರುವ ಪರರ ಒಳಿತಿನ ಬಗೆಗೆ ಕಿಂಚಿತ್ತೂ ಯೋಚಿಸದ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಧೈರ್ಯವಿಲ್ಲದ, ಹಾಗೋ-ಹೀಗೋ
ಬೀಸುವ ದೊಣ್ಣೆಗಳಿಂದ ತಪ್ಪಿಸಿಕೊಳ್ಳುತ್ತಾ ಮುನ್ನಡೆಯುವ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ನಿಷ್ಠೆಯಿಲ್ಲದ, ಕದ್ದು-ಮುಚ್ಚಿ
ಬೈಯುತ್ತಾ ಎದುರಿನಿಂದ ಸವಿನಯದಿಂದ ವರ್ತಿಸುವ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಕಾಳಜಿಯಿಲ್ಲದ, ಅಕ್ಕ-ಪಕ್ಕದಲ್ಲಿ
ಬಿದ್ದು ನರಳುತ್ತಿದ್ದರೂ ಕನಿಕರವಿಲ್ಲದೆ ನೋಡಿ ಹೋಗುವ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಸದ್ಗುಣಗಳಿಲ್ಲದ, ಆಗು-ಹೋಗುವ
ತಪ್ಪುಗಳಿಗೆ ಸಲೀಸಾಗಿ ಪರರನ್ನು ದೂರುತ್ತಾ ಸಾಗುವ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಕುತೂಹಲಗಳಿಲ್ಲದ, ಆಚೆ-ಈಚೆ
ಕಿವಿಗಳಿಗೆ ಬಿದ್ದ ಮಾತುಗಳಾವುದನ್ನೂ ಲೆಕ್ಕಿಸದ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಸದ್ಬುದ್ಧಿಯಿಲ್ಲದ, ರೀತಿ-ನೀತಿಯಿಂದ
ಕೂಡಿದ ತನ್ನದೆಂಬ ಅಡಿಪಾಯವೇ ಹೊಂದಿರದ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ಮನಸ್ಸಿಲ್ಲದ, ಅವರೋ-ಇವರೋ
ಕೊಡುವ ಕಾಸು ಸಿಕ್ಕರೆ ಸಾಕೆಂಬ ಮನಸ್ಥಿತಿಯುಳ್ಳ
ನಿನ್ನಂತೆಯೇ, ಸೂಳೆಯಾಗಬಯಸುವೆ ನಾ.
ನಿನ್ನಂತೆಯೇ 18 April 2020

